ಹೀಗೊಂದು ತೀರ್ಥಯಾತ್ರೆ…
- vidyaram2
- May 5, 2025
- 13 min read
Updated: May 11, 2025

ಇಡೀ ಕುಟುಂಬದ ಜೊತೆಗೆ ಒಂದು ಪ್ರವಾಸ ಕೈಗೊಳ್ಳಬೇಕೆಂಬ ನಮ್ಮ ಬಹುದಿನದ ಕನಸು ಅರ್ಧದಷ್ಟು ನನಸಾಗುವ ಕಾಲ ಇತ್ತೀಚಿಗೆ ಕೂಡಿಬಂತು. 20 ಏಪ್ರಿಲ್ 2025ರಂದು ನಮ್ಮವರ ಅಣ್ಣ ಉಮಾಶಂಕರ, ಅತ್ತಿಗೆ ಗೀತಾ, ಅಕ್ಕ ಮಮತಾ, ಅವರ ಮಗ ಸಾತ್ವಿಕ್ ಜೊತೆಗೆ ನಾವಿಬ್ಬರು - ಹೀಗೆ ನಾವಾರು ಜನ ಅಯೋಧ್ಯೆ, ಪ್ರಯಾಗ, ಕಾಶಿ, ಗಯಾ, ಬೋಧಗಯಾ, ದೇವಘರ್ (ಬೈದ್ಯನಾಥ ಧಾಮ) ಹಾಗೂ ಕಲ್ಕತ್ತೆಯ ಪ್ರವಾಸ ಹೊರಟೆವು. ಎಂಟು ದಿನಗಳ ಈ ಪ್ರವಾಸಕ್ಕೆ ನಮ್ಮವರ ಹಿರಿಯಣ್ಣ, ಅತ್ತಿಗೆ, ಇನ್ನೊಬ್ಬ ಅಕ್ಕ, ಭಾವನವರು ನಮ್ಮೊಂದಿಗೆ ಬರಲಾಗದೆ ಹೋದದ್ದರಿಂದ ಕನಸು ಅರ್ಧದಷ್ಟು ನನಸಾಯಿತು ಎಂದದ್ದು. ಆದರೆ ಅದೇ ಸಮಯಕ್ಕೆ ಹೆಚ್ಚುಕಡಿಮೆ ಅದೇ ಸ್ಥಳಗಳಿಗೆ ಬೇರೊಂದು ಗುಂಪಿನೊಂದಿಗೆ ಪ್ರವಾಸಕ್ಕೆ ಬಂದ ಇವರ ಅಕ್ಕ, ಭಾವ ನಮಗೆ ಪ್ರಯಾಗದಲ್ಲಿ ಸಿಕ್ಕಿ ಅಲ್ಲಿ ನಮ್ಮ ಸಂಗಮವಾದದ್ದು ಒಂದು ಆಶ್ಚರ್ಯಕರ ಖುಷಿಯೇ ಸರಿ.
ಏಪ್ರಿಲ್ 20ರಿಂದ 27ರವರೆಗಿನ ಈ ಪ್ರವಾಸವನ್ನು (ತೀರ್ಥಯಾತ್ರೆ ಅಂದರೂ ಸರಿಯೇ) ಮುಂಬೈನಿಂದ ಆರಂಭಿಸೋಣ ಎಂದು ತೀರ್ಮಾನಿಸಿದ್ದರಿಂದ ಬೆಂಗಳೂರಿನ ಅಣ್ಣ, ಅಕ್ಕನ ಕುಟುಂಬದವರು ಮೂರು ದಿನ ಮುಂಚಿತವಾಗಿ ನಮ್ಮ ಮನೆಗೆ ಬಂದರು. ಹಾಗಾಗಿ ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ, ಝಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಹೀಗೆ ಪಂಚ ರಾಜ್ಯಗಳಲ್ಲಿ ಹತ್ತು ದಿನಗಳ ಅವರ ಪ್ರವಾಸ ಏಪ್ರಿಲ್ 17ರಿಂದಲೇ ಮೊದಲ್ಗೊಂಡಿತೆನ್ನಬಹುದು.
ಮುಂಬೈನಿಂದ ಆರಂಭವಾಗುವ ತೀರ್ಥಯಾತ್ರೆ ಅಂದ ಮೇಲೆ ಸಿದ್ಧಿವಿನಾಯಕನ ದರ್ಶನದಿಂದಲ್ಲದೆ ಮತ್ತೆ ಹೇಗೆ ಆರಂಭವಾದೀತು? ಆರೇ ಕಾಲನಿಯಿಂದ ದಕ್ಷಿಣ ಮುಂಬೈವರೆಗೆ ಹಂತಹಂತಗಳಲ್ಲಿ ಹೊಸತಾಗಿ ಸಂಚಾಲನೆಗೊಳ್ಳುತ್ತಿರುವ ಭೂಗತವಾಗಿ ಸಾಗುವ ಅಕ್ವಾ ಲೈನ್ ಮೆಟ್ರೋರೈಲು ಸಂಚಾರವು ಏಪ್ರಿಲ್ 18ರಂದೇ ಸಿದ್ಧಿವಿನಾಯಕದವರೆಗೆ ಪ್ರಯಾಣಿಕರಿಗಾಗಿ ತೆರೆಯುವುದೆಂಬ ಸುದ್ದಿಯನ್ನು ತಿಳಿದು, ಅದರಲ್ಲಿ ಪಯಣಿಸಿ ಸುಲಭವಾಗಿ ಸಿದ್ಧಿವಿನಾಯಕನ ಬಳಿ ಸಾಗುವ ಹಂಬಲದಿಂದ ಅಂದೇ ಮಧ್ಯಾಹ್ನದ ಊಟದ ನಂತರ ಮರೋಲ್ ಮೆಟ್ರೋ ಸ್ಟೇಷನ್ನಿಗೆ ತೆರಳಿದೆವು. ಆದರೆ ಆ ಸುದ್ದಿ ನಿಜವಾಗಿರದೆ ನಾವು ಬಿ.ಕೆ.ಸಿ. ಸ್ಟೇಷನ್ನಿನವರೆಗೆ ಮಾತ್ರ ಆ ಭೂಗತ ಮೆಟ್ರೋದಲ್ಲಿ ಸಾಗುವ ಅವಕಾಶವಾಯ್ತು. ಅಲ್ಲಿಂದ ಟ್ಯಾಕ್ಸಿಯಲ್ಲಿ ಪ್ರಭಾವತಿಗೆ ಹೋಗಿ ಸಿದ್ಧಿವಿನಾಯಕನ ದರ್ಶನ ಪಡೆದು, ನಂತರ ನಾರಿಮನ್ ಪಾಯಿಂಟಿಗೆ ಹೋಗಿ ಸ್ವಲ್ಪ ಕಾಲ ಕಳೆದು ಕೋಸ್ಟಲ್ ರೋಡ್ ಮತ್ತು ಬಾಂದ್ರಾ ವರ್ಲಿ ಸೀ ಲಿಂಕುಗಳ ಮೂಲಕ ಹಿಂತಿರುಗಿದೆವು.
ಶ್ರೀರಾಮನಗರಿ ಅಯೋಧ್ಯೆ (ಏಪ್ರಿಲ್ 20)
ಅಂದು ಬೆಳಿಗ್ಗೆ ಆರು ಗಂಟೆಗೆ ಮನೆಯಿಂದ ಹೊರಟು, ವಿಮಾನ ನಿಲ್ದಾಣವನ್ನು ತಲುಪಿ, ಚೆಕ್ ಇನ್ ಮಾಡಿದ ನಂತರ ಲೌಂಜಿನಲ್ಲಿ ಬೆಳಗಿನ ಲಘು ಉಪಹಾರ ಮುಗಿಸಿ ಆಕಾಸ ಏರ್ಲೈನ್ಸ್ ವಿಮಾನವನ್ನೇರಿದೆವು. ಅಯೋಧ್ಯೆಯ ‘ಋಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ವನ್ನು ತಲುಪಿ, ಆ ಹೊಸ ಏರ್ಪೋರ್ಟಿನ ವಿನ್ಯಾಸ, ಸಣ್ಣದಾದ ಅರೈವಲ್ ಹಾಲಿನ ಗೋಡೆಗಳ ಮೇಲೆ ಮಧುಬನಿ ಶೈಲಿಯಲ್ಲಿ ರಚಿಸಲಾಗಿರುವ ರಾಮಾಯಣದ ಕಥೆಯನ್ನು ಸಾರುವ ಚಿತ್ರಗಳು, ಪ್ರವೇಶ ದ್ವಾರದ ಬಳಿಯಲ್ಲಿ ವಾಲ್ಮೀಕಿ ಋಷಿಯ ಸಣ್ಣ ಪ್ರತಿಮೆಗಳನ್ನೆಲ್ಲ ವೀಕ್ಷಿಸುತ್ತ ಹೊರಬಂದು ನಮ್ಮನ್ನು ಕಾಯುತ್ತಿದ್ದ ದೇವೇಶ್ ಮಿಶ್ರರನ್ನು ಭೇಟಿ ಮಾಡಿದೆವು. ಒಂಬತ್ತು ವರ್ಷಗಳ ಕೆಳಗೆ 2016ರ ಕಾಶಿ ಯಾತ್ರೆಯ ಸಮಯದಲ್ಲಿ ನಮಗೆ ಪರಿಚಿತರಾದ ಡ್ರೈವರ್ ಮಿಶ್ರರು ನಮ್ಮ ಈ ಪ್ರವಾಸದ ಬಹುಭಾಗದವರೆಗೆ ನಮ್ಮ ಸಾರಥಿಯಾಗಲಿದ್ದರು. ಅವರ ಇನ್ನೋವಾ ಕಾರನ್ನೇರಿ ನಾವು ತಂಗಲು ಕಾದಿರಿಸಿದ ಹೋಟೆಲನ್ನು ತಲುಪಿ, ಚೆಕಿನ್ ಮಾಡಿ ಲಗುಬಗೆಯಿಂದ ತಯಾರಾಗಿ ಶ್ರೀರಾಮನ ದರ್ಶನ ಪಡೆಯಲು ಆತುರರಾಗಿ ಹೊರಟೆವು.
ರಾಮ ಜನ್ಮಭೂಮಿ ನ್ಯಾಸವನ್ನು ತಲುಪಲು ಇರುವ ಮುಖ್ಯ ಮಾರ್ಗವಾದ ರಾಮಪಥದ ಪ್ರವೇಶವನ್ನು ಸಾರ್ವಜನಿಕರಿಗೆ ಬಂದ್ ಮಾಡಿದ್ದರು. ಕೇವಲ ವಿಶೇಷ ಪಾಸ್ ಇರುವ ಗಾಡಿಗಳನ್ನು ಮಾತ್ರ ಒಳಬಿಡುವ ವ್ಯವಸ್ಥೆ ಇದ್ದುದರಿಂದ ಅಲ್ಲಿಯ ಪೊಲೀಸರು ಪ್ರವಾಸಿಗರನ್ನೆಲ್ಲ ಸ್ವಲ್ಪ ದೂರದ ಒಂದು ಪಾರ್ಕಿಂಗ್ ಸ್ಥಳಕ್ಕೆ ಕಳುಹಿಸುತ್ತಿದ್ದರು. ಇಂತಹ ಪ್ರವಾಸಿ ಕಾರುಗಳನ್ನು ಹಿಡಿದು, ತಮಗಿದ್ದ ಪಾಸಿನ ಸಹಾಯದಿಂದ ಊರಿನ ಒಳರಸ್ತೆಗಳಲ್ಲಿ ಕರೆದೊಯ್ದು ಕೆಲವು ಮುಖ್ಯ ಸ್ಥಳಗಳನ್ನು ತೋರಿಸುವ ಲೋಕಲ್ ಗೈಡುಗಳ ದೊಡ್ಡ ದಂಡೇ ಆ ಪಾರ್ಕಿಂಗ್ ಸ್ಥಳದಲ್ಲಿ ನೆರೆದಿತ್ತು. ಅಂತಹ ಒಬ್ಬ ಗೈಡಿನ ಜೊತೆಗೂಡಿ ನಾವು ರಾಮಮಂದಿರ ನಿರ್ಮಾಣವಾಗುವ ಕಾರ್ಯಾಗಾರ, 1990ರಲ್ಲಿ ಸಾವಿರಾರು ಕರಸೇವಕರ ಹತ್ಯೆಯಾದ ಶಹೀದ್ ಮಾರ್ಗ್, ಸೀತೆ ಅಡುಗೆ ಮಾಡಿದ ಸ್ಥಳ (ಸೀತಾ ರಸೋಯಿ) ಮುಂತಾದವುಗಳನ್ನು ನೋಡಿದೆವು. ಅಲ್ಲಿಯ ಕಾರ್ಯಾಗಾರದಲ್ಲಿಯೇ ಮಂದಿರದ ಕಂಭ, ಕೆತ್ತನೆಗಳು ನಡೆಯುವುದೆಂದು ತಿಳಿಸಿದ ಗೈಡು, ಅಲ್ಲಿದ್ದ ಅರ್ಧಂಬರ್ಧ ತಯಾರಾಗಿದ್ದ ಶಿಲೆಯ ವಿನ್ಯಾಸಗಳನ್ನು, ದೇಶದ ಮೂಲೆ ಮೂಲೆಗಳಿಂದ ರಾಮಮಂದಿರದ ನಿರ್ಮಾಣಕ್ಕಾಗಿ ಭಕ್ತರು ಕಳುಹಿಸಿದ ಇಟ್ಟಿಗೆಗಳ ಕೆಲವು ಮಾದರಿಗಳನ್ನು, ಮಂದಿರದಲ್ಲಿ ಸ್ಥಾಪಿತಗೊಳ್ಳಲಿರುವ ಬೃಹದಾಕಾರದ ಒಂದು ಗಂಟೆಯನ್ನು, ನಮ್ಮ ದೇಶದ ಇತಿಹಾಸದಲ್ಲಿ ಮರೆಯಲಾಗದ ಸುದೀರ್ಘವಾದ ರಾಮಜನ್ಮಭೂಮಿ ವಿವಾದ, ಹೋರಾಟಗಳಲ್ಲಿ ಬಲಿಯಾದ ವೀರಭಕ್ತರ ಕಥೆಯನ್ನರಹುವ ಚಿತ್ರಗಳನ್ನೂ ತೋರಿಸಿದನು. ನಂತರ ಅವನು ನಮ್ಮನ್ನು ರಾಮಮಂದಿರದ ರಸ್ತೆಯಲ್ಲಿರುವ ಹನುಮಾನ್ ಘಡಿಯ ಪ್ರವೇಶದ್ವಾರದ ಬಳಿಯಲ್ಲಿ ಬಿಟ್ಟುಹೋದನು. ಅಷ್ಟರಲ್ಲಾಗಲೇ ನಡುಮಧ್ಯಾಹ್ನವಾದ್ದರಿಂದ ಆ ರಸ್ತೆಯಲ್ಲಿ ಸಾಲುಸಾಲಾಗಿದ್ದ ಊಟದ ಹೊಟೇಲುಗಳಲ್ಲಿ ಒಂದಾದ ಉಡುಪಿ ಎಕ್ಸ್ಪ್ರೆಸ್ಸಿನಲ್ಲಿ ನಮ್ಮ ಭೋಜನವನ್ನು ಪೂರೈಸಿದೆವು.
ಊಟದ ನಂತರ ಭವ್ಯವಾದ ರಾಮ ಮಂದಿರಕ್ಕೆ ಹೋಗಿ, ಹೆಚ್ಚೇನೂ ಉದ್ದವಿರದ ಸರದಿಯಲ್ಲಿ ನಿಂತು ರಾಮಲಲ್ಲನ ದರ್ಶನ ಪಡೆದೆವು. ಮಂದಿರದ ಕಟ್ಟಡದ ಕೆಲಸವಿನ್ನೂ ರಭಸದಲ್ಲಿ ಸಾಗುತ್ತಿದೆ. ಈಗ ಬಾಲರಾಮನಿರುವ ಮಂದಿರದ ಮೇಲಿನ ಅಂತಸ್ತಿನಲ್ಲಿ ಶ್ರೀ ರಾಜಾರಾಮ ದರಬಾರು (ರಾಮ ಪರಿವಾರ), ಅದರ ಮೇಲಿನ ಎರಡನೆಯ ಮಹಡಿಯಲ್ಲಿ ಉಜ್ಜಯಿನಿಯ ರಾಜ ವಿಕ್ರಮಾದಿತ್ಯನಿಗೆ ಗಂಗೆಯಲ್ಲಿ ದೊರಕಿದ ಅಯೋಧ್ಯೆಯ ಮೂಲರಾಮನ ವಿಗ್ರಹಗಳು ಸ್ಥಾಪಿತಗೊಳ್ಳಲಿವೆ. ನೂರಾರು ಕಾರ್ಮಿಕರ ಕುಟ್ಟುವ, ಬಡಿಯುವ ಸದ್ದು, ಯಂತ್ರಗಳ ಡ್ರಿಲ್ಲಿಂಗ್ ಮುಂತಾದ ಶಬ್ದಗಳ ನಡುವೆಯೂ ಶಾಂತನಾಗಿ ಮಂದಹಾಸ ಬೀರುತ್ತ ನಿಂತಿರುವ ಚಿನ್ಮಯನಾದ ಬಾಲರಾಮನು ಭಕ್ತರ ಮನಸೂರೆಗೊಂಡು ಧನ್ಯರನ್ನಾಗಿಸುತ್ತಾನೆ. ಅವನನ್ನೇ ನೋಡುತ್ತಾ ಕಣ್ಣುತುಂಬಿಸಿಕೊಳ್ಳುತ್ತ ನಿಂತಾಗ ನಿನಗಾಗಿ ಎಷ್ಟೆಷ್ಟೋ ಮಾನವರು ಕಾದಾಡಿ, ಬಡಿದಾಡಿ ಸತ್ತರೂ ಏನೂ ಅರಿಯದ ಮುಗ್ಧನಂತೆ ಹೇಗೆ ಮುಗುಳ್ನಗುತ್ತ ನಿಂತಿದೀಯ ರಾಮ ಎಂದು ಹೃದಯ ಮಿಡಿದು ಕಣ್ಣಲ್ಲಿ ನೀರಾಡಿದ್ದು ಸುಳ್ಳಲ್ಲ.
ರಾಮನ ದರ್ಶನವಾದ ಬಳಿಕ ಪಕ್ಕದಲ್ಲಿಯೇ ಇರುವ ಹನುಮಾನ್ ಘಡಿಗೆ ಹೋಗಿ ಸದಾ ರಾಮನ ಬಳಿಯಲ್ಲೇ ನೆಲೆಸಿ ರಾಮಕಾರ್ಯಕ್ಕೆ (ರಾಮ್ ಕಾಜ್) ಸಿದ್ಧನಾಗಿರುವ ಹನುಮಂತನ ದರ್ಶನ ಪಡೆದೆವು. ನಂತರ ದಶರಥ ಮಹಲ್, ಕನಕ ಭವನಗಳನ್ನೆಲ್ಲ ನೋಡಿಕೊಂಡು ಸಂಜೆಯ ಹೊತ್ತಿಗೆ ಸರಯೂ ತಟದಲ್ಲಿರುವ ಶ್ರೀ ನಾಗೇಶ್ವರ ಮಂದಿರಕ್ಕೆ ಹೋದೆವು. ದರ್ಶನದ ನಂತರ ಸರಯೂ ಆರತಿಗೆ ಇನ್ನೂ ಸ್ವಲ್ಪ ಸಮಯವಿದ್ದುದರಿಂದ ಅಲ್ಲಿಯೇ ತಣ್ಣಗೆ ಹರಿಯುವ ಸರಯೂವಿನಲ್ಲಿ ಕಾಲುಗಳನ್ನು ಇಳಿಬಿಟ್ಟು ದಣಿವಾರಿಸಿಕೊಂಡು ಹೊಸ ಚೈತನ್ಯವನ್ನು ಪಡೆದೆವು. ನಂತರ ಐದು ಜನ ಪುರೋಹಿತರು ನಡೆಸಿದ ಸರಯೂ ಆರತಿಯನ್ನು ಘಟ್ಟದಲ್ಲಿ ನಿಂತು ನೋಡಿದೆವು. ಕೊನೆಗೆ ದೊಡ್ಡ ವೀಣೆಯ ಪ್ರತಿಮೆಯಿರುವ ಲತಾ ಮಂಗೇಶ್ಕರ್ ಚೌಕ್ ಮೂಲಕ ಹಾಯ್ದು ‘ಕರ್ರಿ ಲೀಫ್’ ಎಂಬ ರೆಸ್ಟೋರೆಂಟಿನಲ್ಲಿ ರಾತ್ರಿಯ ಊಟ ಮುಗಿಸಿ ನಮ್ಮ ಹೋಟೆಲಿಗೆ ವಿಶ್ರಾಂತಿಗಾಗಿ ತೆರಳಿದೆವು.
ಸಂಗಮನಗರಿ ಪ್ರಯಾಗರಾಜ (ಏಪ್ರಿಲ್ 21)
ಮರುದಿನ ಬೆಳಿಗ್ಗೆ ಬೇಗ ಹೊರಟು, ಶ್ರೀರಾಮನು ವನವಾಸಕ್ಕೆ ತೆರಳಿದಾಗ ಅವನ ಪಾದುಕೆಯನ್ನು ತಂದಿಟ್ಟುಕೊಂಡು ಆ ಹದಿನಾಲ್ಕು ವರ್ಷಗಳ ಕಾಲ ಭರತನು ರಾಜ್ಯಭಾರ ಮಾಡಿದ ಸ್ಥಳವಾದ ನಂದಿಗ್ರಾಮಕ್ಕೆ ಹೋದೆವು. ಅಲ್ಲಿ ರಾಮಪಾದುಕಾ ಮಂದಿರ ಮತ್ತು ಭರತನ ಗುಹೆಗಳನ್ನು ನೋಡಿಕೊಂಡು ಹೊರಟೆವು. ಮಾರ್ಗಮಧ್ಯದಲ್ಲಿಯೇ ಉಪಹಾರ, ಚಹಾ ಸೇವನೆಗಳನ್ನು ಪೂರೈಸಿ ಪ್ರಯಾಗರಾಜದವರೆಗಿನ ಸುಮಾರು 160ಕಿ.ಮೀ. ದೂರವನ್ನು ಕ್ರಮಿಸಿ, ಹನ್ನೆರಡರ ವೇಳೆಗೆ ಹೋಟೆಲ್ ತಲುಪಿ ಚೆಕ್ ಇನ್ ಆದೆವು. ನಂತರ ಪ್ರಯಾಗರಾಜದ ಯಮುನಾ ಘಾಟ್ ತಲುಪಿ ಸಂಗಮ ಸ್ಥಳಕ್ಕೆ ಕರೆದೊಯ್ಯುವ ಬೋಟನ್ನು ಹಿಡಿದು ಗಂಗಾ, ಯಮುನಾ, ಸರಸ್ವತಿಗಳ ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದು ತೃಪ್ತಿಯಾಗುವವರೆಗೆ ಮಿಂದೆವು. ಆಳವು ಹೆಚ್ಚಿದ್ದು ಶಾಂತವಾಗಿ ಹರಿಯುವ ಯಮುನೆ, ಹೆಚ್ಚು ಆಳವಿಲ್ಲದೆ ರಭಸದಿಂದ ಪ್ರವಹಿಸುವ ಗಂಗೆ ಮತ್ತು ತನ್ನ ಅಸ್ತಿತ್ವದ ಗುಟ್ಟನ್ನು ಬಿಟ್ಟುಕೊಡದೆ ಗುಪ್ತಗಾಮಿನಿಯಾಗಿ ಸಾಗುವ ಸರಸ್ವತಿಯರ ಸಂಗಮವಾಗುವ ಪವಿತ್ರ ಸ್ಥಳದಲ್ಲಿ ಅರಿಸಿನ, ಕುಂಕುಮ, ಹೂವುಗಳ ಬಾಗಿನ ಅರ್ಪಿಸಿ ಅಲ್ಲಿಯ ವಾಡಿಕೆಯಂತೆ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಿ ತೇಲಿಬಿಟ್ಟು ಭೂಮಿಯ ಮೇಲೆ ಜೀವಿಗಳ ಅಸ್ತಿತ್ವಕ್ಕೆ ಕಾರಣವಾಗುವ ಜಲರಾಶಿಗೆ ಕೃತಜ್ಞತೆ ಸಲ್ಲಿಸಿದೆವು.
ಸಂಗಮದ ಸ್ನಾನದ ನಂತರ ಮಲಗಿರುವ ಹನುಮಂತನ (ಲೇಟೆ ಹುಯೆ ಹನುಮಾನ್) ಮಂದಿರಕ್ಕೆ ಹೋಗಿ ದರ್ಶನ ಪಡೆದು ಅಲೂಪಿ ಮಾತೆಯ ಮಂದಿರಕ್ಕೆ ತೆರಳಿದೆವು. ಮಾತೆಯ ಮಂದಿರದ ಬಾಗಿಲಲ್ಲೇ ನಮಗೆ ಅನಿರೀಕ್ಷಿತವಾಗಿ ದೊರೆತದ್ದು (ಹಿಂದೆ ಹೇಳಿದಂತೆ) ಸವಿತತ್ತಿಗೆ, ಭಾವ ಮತ್ತು ಕಮಲಾಕ್ಷಿ ಅತ್ತಿಗೆಯರ ದರ್ಶನ! ಅಂತೂ ಬೆಂಗಳೂರಿನ ಸವಿತಾ, ಶಿವಮೊಗ್ಗದ ಕಮಲಾಕ್ಷಿ ಹಾಗೂ ಮುಂಬೈನ ನಮ್ಮ ತ್ರಿವೇಣಿ ಸಂಗಮ ಅಲ್ಲಿ ಆಗುವುದು ಜಗನ್ಮಾತೆಯ ಸಂಕಲ್ಪವಾಗಿತ್ತೇನೋ. ಅವರೊಂದಿಗೆ ಕೆಲಕಾಲ ಮಾತುಕತೆಯಾಡಿ ಈ ಮಧುರ ನೆನಪಿಗಾಗಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು, ಅವರು ಅಲ್ಲಿಂದ ತೆರಳಿದ ನಂತರ ನಾವು ಅಲೂಪಿ ಮಾತೆಯ ದರ್ಶನ ಪಡೆದೆವು. ನಂತರ ತಡವಾಗಿ ಊಟ ಮುಗಿಸಿ ನಮ್ಮ ಹೋಟೆಲಿಗೆ ತೆರಳಿ ಕೆಲಕಾಲ ವಿಶ್ರಾಂತಿ ಪಡೆದೆವು.
ಸಂಜೆಯ ವೇಳೆಗೆ ಅಲ್ಲಿಯ ಪ್ರಾಚೀನ ನಾಗವಾಸುಕಿ ಮಂದಿರಕ್ಕೆ ಹೋದೆವು. ಸಮುದ್ರ ಮಂಥನದ ನಂತರ ಸುಸ್ತಾದ ವಾಸುಕಿಯು ಗಂಗಾ ನದಿಯ ದಡದಲ್ಲಿರುವ ಈ ಸ್ಥಳದಲ್ಲಿ ವಿರಮಿಸಿದ್ದನೆಂಬ ಪ್ರತೀತಿಯಿರುವ ಮಂದಿರವದು. ಅಲ್ಲಿಂದ ವೇಣಿ ಮಾಧವ ಮಂದಿರ, ಜಗನ್ನಾಥ ಮಂದಿರಗಳಲ್ಲಿ ದರ್ಶನ ಪಡೆದು ನಂತರ ಚಂದ್ರಶೇಖರ್ ಆಜಾದ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಗುಂಡೇಟಿಗೆ ಬಲಿಯಾದ ಸ್ಥಳದಲ್ಲಿರುವ ಶಹೀದ್ ಚಂದ್ರಶೇಖರ್ ಆಜಾದ್ ಉದ್ಯಾನವನ್ನು ತಲುಪಿದೆವು. ಅಲ್ಲಿ ಸ್ವಲ್ಪ ಸಮಯ ಕಳೆದು ಹಿಂದಿನ ದಿನ ಅಯೋಧ್ಯೆಯಲ್ಲಿ ರುಚಿ ನೋಡಿದ ಕರ್ರಿ ಲೀಫ್ ರೆಸ್ಟೋರೆಂಟಿನ ಇಲ್ಲಿನ ಬ್ರಾಂಚಿನಲ್ಲಿ ಊಟ ಪೂರೈಸಿ, ಪಕ್ಕದಲ್ಲಿದ್ದ ಬಾಸ್ಕಿನ್ ರಾಬಿನ್ಸ್ ಐಸ್ಕ್ರೀಂ ಪಾರ್ಲರಿನಲ್ಲಿ ಐಸ್ಕ್ರೀಮ್ ಸವಿದೆವು. ಅಲ್ಲಿ ಅವರು ತಾಜಾವಾಗಿ ಐಸ್ಕ್ರೀಂ ಕೋನುಗಳನ್ನು ತಯಾರಿಸುತ್ತಿದ್ದುದನ್ನು ಕಂಡೆವು. ದೋಸೆ ಹಿಟ್ಟಿನಂತಹ ಹಿಟ್ಟಿನಲ್ಲಿ ದಪ್ಪ ದೋಸೆಯಂತೆ ಅದಕ್ಕಾಗಿಯೇ ಇದ್ದ ವಿಶೇಷವಾದ ಕಾವಲಿಯ ಮೇಲೆ ಹೊಯ್ದು, ಬೆಂದ ನಂತರ ಒಂದು ಕೋನಿನ ಆಕೃತಿಯ ಅಚ್ಚಿನ ಮೇಲೆ ಅದನ್ನು ತಿರುಗಿಸಿ ಒಣಗಲು ಬಿಟ್ಟರೆ ‘ಬಿಸಿಬಿಸಿ’ ಐಸ್ಕ್ರೀಮ್ ಕೋನು ಕ್ಷಣಗಳಲ್ಲಿಯೇ ತಯಾರು! ಹಿಟ್ಟನ್ನು ಹೇಗೆ ತಯಾರಿಸುತ್ತೀರಿ ಎಂಬ ನಮ್ಮ ಪ್ರಶ್ನೆಗೆ, ಅದು ಮುಂಬೈಯಿಂದ ಎಲ್ಲ ಫ್ರಾಂಚೈಸಿಗಳಿಗೂ ಸರಬರಾಜಾಗುವುದರಿಂದ ಅದರ ingredients ಕುರಿತು ತಮಗೆ ತಿಳಿದಿಲ್ಲವೆಂದು ಅಲ್ಲಿಯ ಸಿಬ್ಬಂದಿ ನುಡಿದರು. ಈ ಹೊಸ ವಿಷಯವನ್ನು ಅರಿತು ಅಂದಿನ ದಿನವನ್ನು ಕೊನೆಯಾಗಿಸಿ ವಿಶ್ರಾಂತಿಗಾಗಿ ಹೋಟೆಲಿಗೆ ತೆರಳಿದೆವು.
ಸನಾತನನಗರಿ ಕಾಶಿ (ಏಪ್ರಿಲ್ 22, 23)
ಮರುದಿನ ಬೆಳಗ್ಗೆ ನಾವು ತಂಗಿದ್ದ ಹೋಟೆಲಿನಲ್ಲಿಯೇ ಬೆಳಗಿನ ಉಪಹಾರ ಮುಗಿಸಿ ವಾರಣಾಸಿಯತ್ತ ಪಯಣ ಬೆಳೆಸಿದೆವು. ಸುಮಾರು 125ಕಿ.ಮೀ. ದೂರದ ಈ ಪ್ರಯಾಣದ ನಡುವೆ ನಾವು ಇನ್ನೂ ಕೆಲವು ಸ್ಥಳಗಳಿಗೆ ಭೇಟಿಕೊಟ್ಟೆವು. ಮೊದಲು ಸಿಗುವುದು ಸೀತೆಯು ಭೂಮಿಗಿಳಿದ ಸ್ಥಳವಾದ ಸೀತಾಮಡಿ (ಸೀತಾ ಸಮಾಹಿತ ಸ್ಥಳ). ಅದನ್ನು ನೋಡಿಕೊಂಡು ಮುಂದೆ ಸಾಗಿ ವಿಂಧ್ಯಾಚಲ ಪರ್ವತದಲ್ಲಿರುವ ಶಕ್ತಿಪೀಠವಾದ ವಿಂಧ್ಯವಾಸಿನಿ ದೇವಸ್ಥಾನಕ್ಕೆ ಹೋದೆವು. ಸತಿಯ ಎಡಗೈ ಹೆಬ್ಬೆರಳು ಬಿದ್ದ ಸ್ಥಳವೆಂಬ ಪ್ರತೀತಿಯಿರುವ ಈ ದೇವಸ್ಥಾನವು ಮಧ್ಯಾಹ್ನ ಹನ್ನೆರಡು ಗಂಟೆಗೆ ಮುಚ್ಚುವ ಹೊತ್ತು, ಆದ್ದರಿಂದ ನಮಗಿದ್ದ ಸ್ವಲ್ಪ ಸಮಯದಲ್ಲಿ ದರ್ಶನ ಪಡೆಯುವ ಸಲುವಾಗಿ ದುಡ್ಡು ಕೊಟ್ಟು ಒಬ್ಬ ‘ಪಂಡ’ರ (ಪುರೋಹಿತರ) ಮೂಲಕ ಹೋಗಿ ಅಮ್ಮನವರ ವಿಶೇಷ ದರ್ಶನ ಪಡೆದೆವು.
ಮಧ್ಯಾಹ್ನ ಎರಡು ಗಂಟೆಗೆ ಕಾಶಿಯನ್ನು ತಲುಪಿ ಅಲ್ಲಿ ನಾವು ಎರಡು ದಿನಗಳು ತಂಗಬೇಕಿದ್ದ ಹೋಟೆಲಿನಲ್ಲಿ ಚೆಕ್ ಇನ್ ಮಾಡಿ ಊಟಕ್ಕೆ ಹೊರಟೆವು. ನಂತರ ಸ್ವಲ್ಪ ವಿಶ್ರಾಂತಿ ಪಡೆದು, ಕಾಶಿ ವಿಶ್ವನಾಥ ಮಂದಿರದಲ್ಲಿ ರುದ್ರಾಭಿಷೇಕ ಮಾಡಲು ಬೇಕಾದ ಟಿಕೆಟ್ಟನ್ನು ಆನ್ಲೈನ್ ಮೂಲಕ ಮೊದಲೇ ಕಾದಿರಿಸಿದ್ದರಿಂದ ನಿಗದಿಯಾಗಿದ್ದ ಸಮಯ ನಾಲ್ಕು ಗಂಟೆಗೆ ಸರಿಯಾಗಿ ವಿಶ್ವನಾಥ ಧಾಮವನ್ನು ತಲುಪಿದೆವು. ಅಲ್ಲಿಯ ಕಾರ್ಯಾಲಯದಲ್ಲಿ ಟಿಕೆಟ್ ತೋರಿಸಿ ನಮ್ಮ ಕ್ಯಾಮೆರಾ ಮತ್ತಿತರ ವಸ್ತುಗಳನ್ನು ಇರಿಸಿ, ನಮಗೆಂದು ಅಲಾಟ್ ಆದ ಪಂಡರ ಜೊತೆಗೆ ಸಾಗಿ ರುದ್ರಾಭಿಷೇಕ ಮತ್ತು ದರ್ಶನ ಪಡೆಯಬೇಕಾಗುತ್ತದೆ. ದೇವಾಲಯದ ಹೊರ ಸುತ್ತಿನಲ್ಲಿ ಸ್ಥಾಪಿಸಲಾಗಿರುವ ಅನೇಕ ಶಿವಲಿಂಗಗಳಲ್ಲೊಂದಕ್ಕೆ ಹಾಲು, ಪಂಚಾಮೃತ ಮುಂತಾದ ಸಾಮಗ್ರಿಗಳಿಂದ ರುದ್ರಾಭಿಷೇಕ ಮಾಡಿ, ಅದರಲ್ಲಿನ ಸ್ವಲ್ಪ ಸಾಮಗ್ರಿಗಳನ್ನು ಕೊಂಡೊಯ್ದು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥನ ಲಿಂಗಕ್ಕೆ ಅಭಿಷೇಕ ಮಾಡುವ ವ್ಯವಸ್ಥೆಯಿದೆ.
ರುದ್ರಾಭಿಷೇಕ ಪೂಜೆ, ವಿಶ್ವನಾಥನ ದರ್ಶನದ ನಂತರ ಅಲ್ಲಿಯೇ ಪಕ್ಕದಲ್ಲಿರುವ ಅನ್ನಪೂರ್ಣೆಯ ದರ್ಶನ ಪಡೆದು ಹೊರಬಂದೆವು. ಅಲ್ಲಿಂದ ಮುಂದಿನ ನಮ್ಮ ಭೇಟಿಯ ಸ್ಥಳ 51 ಶಕ್ತಿಪೀಠಗಳಲ್ಲಿ ಒಂದಾದ ಕಾಶೀ ವಿಶಾಲಾಕ್ಷಿ ದೇವಸ್ಥಾನ. ಸತಿಯ ಕರ್ಣಾಭರಣವು ಬಿದ್ದ ಸ್ಥಳವಿದೆಂಬ ಪ್ರತೀತಿಯಿದೆ. ಸಣ್ಣ ಗಲ್ಲಿಗಳಲ್ಲಿ ಸಾಗಿ ಕಾಶೀ ವಿಶಾಲಾಕ್ಷಿ ತಾಯಿಯ ದರ್ಶನ ಪಡೆದೆವು. ಅಷ್ಟರಲ್ಲಿ ಪೆಹಲ್ಗಾಮಿನಲ್ಲಿ ನಡೆದ ದುರಂತದ ವರದಿಗಳು ನಮಗೆ ತಿಳಿದು ಮನವು ತಲ್ಲಣಿಸಿಹೋಯಿತು. ರಾಕ್ಷಸ ಕೃತ್ಯವನ್ನೆಸಗಿದ ಹಂತಕರನ್ನು ನೆನೆದು ರೋಷವುಕ್ಕಿತು, ದಾಳಿಗೆ ಬಲಿಯಾದ ಅಮಾಯಕರನ್ನು ನೆನೆದು ಸಂಕಟವಾಯಿತು. ಆ ತನಕ ನಾವು ಹೋದ ತೀರ್ಥಕ್ಷೇತ್ರ, ಶಕ್ತಿ ಸ್ಥಳಗಳನ್ನೆಲ್ಲ ನೆನೆದು ನೊಂದ ಜೀವಗಳಿಗೆ ಸಾಂತ್ವನ, ಶಕ್ತಿಯನ್ನು ನೀಡುವಂತೆ ಮೌನವಾಗಿ ಮೊರೆಯಿಟ್ಟೆವು. ಮುಂದಿನ ದಿನಗಳಲ್ಲಿ ನಾವು ಹೋದ ಶಕ್ತಿ ಸ್ಥಳಗಳಲ್ಲೆಲ್ಲ ‘ಇಂತಹ ಹೀನ ಕೃತ್ಯವೆಸಗಿದ ನೀಚ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಮ್ಮ, ತಮ್ಮದೇನೂ ತಪ್ಪಿಲ್ಲದೆಯೂ ಘೋರ ಶಿಕ್ಷೆಗೆ ತುತ್ತಾಗಿ ಪ್ರಾಣ ಕಳೆದುಕೊಂಡ ಇಪ್ಪತ್ತಾರು ಅಮಾಯಕರ ಆತ್ಮಕ್ಕೆ ಸದ್ಗತಿಯನ್ನು ನೀಡಿ, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ, ಸ್ಥೈರ್ಯಗಳನ್ನು ಕೊಡು ತಾಯೀ’ ಎಂದು ಜಗನ್ಮಾತೆಯಲ್ಲಿ ಬೇಡಿಕೊಳ್ಳುವುದನ್ನುಳಿದು ಇನ್ನೇನು ತಾನೇ ಮಾಡಲು ನಮಗೆ ಸಾಧ್ಯವಿತ್ತು.
ವಿಶಾಲಾಕ್ಷಿ ಮಂದಿರದಿಂದ ಹೊರಟು ಹೊಸತಾಗಿ ನಿರ್ಮಿಸಲಾದ ಕಾಶಿ ವಿಶ್ವನಾಥ ಕಾರಿಡಾರಿನ ಪ್ರವೇಶದ ಭಾಗಕ್ಕೆ ಹೋದೆವು. ಅಲ್ಲಿ ಸುತ್ತಾಡಿ ಗಂಗಾ ಘಾಟಿನಲ್ಲಿ ಕೆಲಕಾಲ ಕುಳಿತು ಪಕ್ಕದ ಮಣಿಕರ್ಣಿಕಾ ಘಾಟಿನಲ್ಲಿ ನಡೆಯುತ್ತಿದ್ದ ಶವಸಂಸ್ಕಾರಗಳನ್ನು ವೀಕ್ಷಿಸಿದೆವು. ಹಾಗೆಯೇ ಅನತಿ ದೂರದ ದಶಾಶ್ವಮೇಧ ಘಾಟಿನಲ್ಲಿ ನಡೆಯುತ್ತಿದ್ದ ಗಂಗಾರತಿಯೂ ಕಾಣಿಸುತ್ತಿತ್ತು. ಜೀವದ ಅಂತಿಮ ಕ್ರಿಯೆಯೂ ಪವಿತ್ರವಾದ ಆಚರಣೆಯಂತೆ ಪೂಜೆಯಂತೆ ಸಾಗುವ ಈ ನೋಟವು ವರ್ಣಿಸಲಾಗದ ಒಂದು ‘ವಿಚಿತ್ರ ಶಾಂತಿ’ಯನ್ನು ಮನಸ್ಸಿಗೆ ತಂದುಕೊಟ್ಟಿತು. ಒಂಬತ್ತು ವರ್ಷಗಳ ಕೆಳಗಿನ ನಮ್ಮ ಕಾಶೀಯಾತ್ರೆಯ ಸಮಯದಲ್ಲಿಯೂ ನಾನು ನೋಡಿದ ಇಂಥದೇ ದೃಶ್ಯಗಳು ಇಂಥದೇ ರೀತಿಯ ವಿಚಿತ್ರ ಶಾಂತಿಯನ್ನು ತಂದುಕೊಟ್ಟ ನೆನಪು ಉಕ್ಕಿ ಬಂತು. ಆ ನಮ್ಮ ಮೊದಲ ಕಾಶೀ ಯಾತ್ರೆಯ ಪ್ರವಾಸದಲ್ಲಿ ಲವಲವಿಕೆಯಿಂದಿದ್ದು, ಬಳಿಕ ಆರು ತಿಂಗಳೊಳಗೆ ಹಠಾತ್ತಾಗಿ ಇಹಜೀವನ ಮುಗಿಸಿ ತೆರಳಿದ ನನ್ನಪ್ಪನ ಮರಣದ ನಂತರವೇ ನಾನು ಜೀವನವನ್ನು ಬೇರೆ ದೃಷ್ಟಿಕೋನದಿಂದ ನೋಡತೊಡಗಿದೆ ಎನಿಸುತ್ತದೆ. ಆದ್ದರಿಂದಲೇ ಬಹುಶಃ ಕಾಶಿಯು ನನ್ನ ಮನಸ್ಸಿನಲ್ಲಿ ಬೇರಾವ ಸ್ಥಳವೂ ಪಡೆಯದಂತಹ ಅನನ್ಯವಾದ ಸ್ಥಾನವನ್ನು ಪಡೆದಿದೆ.
ಆಧುನಿಕ ಕಾಶಿ ವಿಶ್ವನಾಥ ಕಾರಿಡಾರಿನ ವಿನ್ಯಾಸ, ಸೌಕರ್ಯಗಳು ಎಷ್ಟೇ ಸುಂದರವಾಗಿದ್ದರೂ ಪ್ರಾಪಂಚಿಕ ಜೀವನವನ್ನು ನೆನಪಿಗೆ ತರುವ ಅದು ನನ್ನ ಮನಸ್ಸಿಗೆ ಅಪ್ಯಾಯವೆನಿಸಲಿಲ್ಲ. ಸನಾತನ ಕಾಶಿಯ ಬಣ್ಣಿಸಲಾಗದ ವಿಚಿತ್ರ ವೈಬ್ರೆಷನ್ ಅಲ್ಲಿ ಮಸುಕಾದಂತೆ ತೋರಿತು. ಅದಕ್ಕೆ ಅಂದಿನ ನಮ್ಮ ಮನಸ್ಥಿತಿಯೂ ಕಾರಣವಿರಬಹುದು. ಕೊನೆಗೆ ಅಲ್ಲಿದ್ದ ಸಾಲು ಸಾಲು ರೆಸ್ಟುರಾಂಟ್, ಕೂಲ್ ಡ್ರಿಂಕ್ಸ್ ಕಾರ್ನರ್, ಕೆಫೆಗಳಲ್ಲಿ ರಾತ್ರಿಯ ಉಪಹಾರ ಪೂರೈಸಿ ಮರಳಿ ರೂಮು ಸೇರಿದೆವು.
ಮರುದಿನ ಬೆಳಿಗ್ಗೆ ಸೂರ್ಯ ಪ್ರಖರನಾಗುವ ಮೊದಲೇ ನಾವು ವಾರಣಾಸಿಯ ಹತ್ತಿರವೇ ಇರುವ (ಸುಮಾರು 15ಕಿಮೀ) ಸಾರನಾಥ್ ಅನ್ನು ತಲುಪುವ ಯೋಜನೆಯಿಂದ ಹೊರಟೆವು. ವಾರಣಾಸಿಯು ನಮ್ಮ ಸಾರಥಿ ದೇವೇಶ್ ಅವರ ಊರಾದದ್ದರಿಂದ, ಅವರು ಕರೆದುಕೊಂಡು ಹೋದ ಒಂದು ಸಣ್ಣ ರೆಸ್ಟೋರೆಂಟಿನಲ್ಲಿ ಬೆಳಗ್ಗಿನ ತಿಂಡಿ ಮುಗಿಸಿದೆವು. ಅಲ್ಲಿಯ ಪ್ರಾದೇಶಿಕ ನಾಶ್ತಾವಾದ ಕಚೋಡಿ ಸಬ್ಝಿಯ (ಪೂರಿ, ಭಾಜಿ) ರುಚಿ ನೋಡಿ ಮುಂದೆ ಪಯಣಿಸಿ ಸಾರನಾಥ್ ತಲುಪಿದೆವು. ಅಲ್ಲಿರುವ ಪ್ರಾಚೀನ ಅವಶೇಷಗಳ ಉತ್ಖತನ ಸ್ಥಳದ ಪ್ರವೇಶವು ಒಂಬತ್ತೂವರೆಯ ನಂತರವೇ ಆರಂಭವಾಗಲಿದ್ದರಿಂದ ಅಲ್ಲಿ ಹೊರಗೆ ಸ್ವಲ್ಪ ಶಾಪಿಂಗ್ ಮಾಡಿ, ಹತ್ತಿರದಲ್ಲಿಯೇ ಇದ್ದ ಜೈನ ದೇವಾಲಯಕ್ಕೆ ಹೋಗಿ ಬಂದೆವು. ನಂತರ ವಿಶಾಲವಾದ ಎಸ್ಕವೇಷನ್ ಸೆಂಟರಿಗೆ ಹೋಗಿ ಅಶೋಕನ ಕಾಲದ ಧಮೇಕ್ ಸ್ತೂಪ, ಇತರ ಸ್ತಂಭಗಳು, ಅಶೋಕ ಪಿಲ್ಲರ್ ಸ್ತಂಭ ಮುಂತಾದವುಗಳನ್ನು ನೋಡಿ ಹಿಂತಿರುಗಿದೆವು.
ಸಾರನಾಥದಿಂದ ಕಾಶಿಗೆ ಮರಳಿ, ಮೊದಲು ಕಾಶಿಯ ಕೊತ್ವಾಲನಾದ ಕಾಳಭೈರವ ಮಂದಿರಕ್ಕೆ ಹೋದೆವು. ಅಲ್ಲಿಯ ವಾಡಿಕೆಯಂತೆ ಅರ್ಚಕರಿಂದ ಬೆನ್ನಿನ ಮೇಲೆ ಗುದ್ದಿಸಿಕೊಂಡು ಭೈರವನ ದರ್ಶನ ಪಡೆದು ಬಂದೆವು. ನಂತರ ಪ್ರಾಚೀನವಾದ ಮಹಾಮೃತ್ಯುಂಜಯ ದೇವಾಲಯದಲ್ಲಿ ದರ್ಶನ ಪಡೆದು, ಅಲ್ಲಿಯೇ ಇದ್ದ ಧನ್ವಂತರಿ ಬಾವಿಯ ನೀರು ಕುಡಿದೆವು. ಧನ್ವಂತರಿಯು ತನ್ನ ಆಯುರ್ವೇದದ ಔಷಧಗಳನ್ನೆಲ್ಲ ಇಲ್ಲಿ ಸುರಿದಿದ್ದಾನೆಂಬ ಪ್ರತೀತಿ ಇರುವ ಈ ಬಾವಿಯ ನೀರು ಎಲ್ಲ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂಬ ನಂಬಿಕೆಯಿದೆಯಂತೆ. ಇತ್ತೀಚಿಗೆ ಹಿಮಾಲಯದಿಂದ ಬಂದ ವೃದ್ಧ ಸನ್ಯಾಸಿಯೊಬ್ಬರು ತಮ್ಮ ಬಳಿಯಿದ್ದ ಜಡೀಬೂಟಿಗಳನ್ನು ಈ ಬಾವಿಯೊಳಗೆ ಹಾಕಿ ಹಿಮಾಲಯಕ್ಕೆ ತೆರಳಿದರು ಎಂಬ ಕತೆಯನ್ನು ದೇವೇಶ್ ಅವರ ಸ್ನೇಹಿತರೊಬ್ಬರು ಹೇಳಿದ್ದಾಗಿ ಹೇಳಿದರು. ಅದೆಷ್ಟು ನಿಜವೋ ನಂಬಲು ಸಾಧ್ಯವಿಲ್ಲದಿದ್ದರೂ ಶುಚಿಯಿಲ್ಲದ ಪರಿಸರದಲ್ಲಿದ್ದ ಆ ಬಾವಿಯ ನೀರು ಮಾತ್ರ ತುಂಬಾ ಶುದ್ಧವಾಗಿಯೂ ರುಚಿಯಾಗಿಯೂ ಇದ್ದದ್ದು ಮಾತ್ರ ಸತ್ಯ.
ಅಲ್ಲಿಂದ ನಾವು ಹೊಸತಾಗಿ ನಿರ್ಮಾಣವಾದ ನಮೋ ಘಾಟಿಗೆ ಹೋದೆವು. ಸುಡು ಬಿಸಿಲಲ್ಲಿ ಛಾವಣಿಯಿಲ್ಲದ ತೆರೆದ ಜಾಗದಲ್ಲಿರುವ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿರುವ ನಮೋ ಕೈಗಳ ಪ್ರತಿಮೆಗಳನ್ನು ನೋಡಿಕೊಂಡು ಅಲ್ಲಿಂದ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿರುವ ಹೊಸ ಕಾಶಿ ವಿಶ್ವನಾಥ ದೇವಾಲಯಕ್ಕೆ ಹೋಗಿ ದರ್ಶನ ಪಡೆದು ಬಂದ ನಂತರ ಊಟ ಮುಗಿಸಿದೆವು. ಈ ‘ಹೊಸ’ ಕಾಶಿ ವಿಶ್ವನಾಥ ದೇವಾಲಯವನ್ನು ಪಂಡಿತ್ ಮದನ ಮೋಹನ ಮಾಳವೀಯರ ನೇತೃತ್ವದಲ್ಲಿ ಬಿರ್ಲಾ ಕುಟುಂಬದವರು 1931ರಲ್ಲಿ ಕಟ್ಟಿಸಲು ಆರಂಭಿಸಿದರು. ಇದರ ನಿರ್ಮಾಣಕ್ಕೆ ಸುಮಾರು ಮೂವತ್ತೈದು ವರ್ಷಗಳ ಕಾಲ ತಗುಲಿ, ಮಾಳವೀಯರ ಮರಣದ ಬಹುಕಾಲದ ನಂತರ 1966ರಲ್ಲಿ ಅದು ಪೂರ್ಣಗೊಂಡಿತು. ಅಮೃತಶಿಲೆಯಿಂದ ನಿರ್ಮಾಣಗೊಂಡಿರುವ ಇದು ಮೂಲ ವಿಶ್ವನಾಥ ಮಂದಿರದ ಪ್ರತಿಕೃತಿಯಂತಿದ್ದು ಭಾರತದಲ್ಲಿಯೇ ಎತ್ತರವಾಗಿರುವ ದೇವಾಲಯಗಳಲ್ಲಿ ಒಂದಾಗಿದೆ ಎನ್ನಲಾಗಿದೆ.
ಅಲ್ಲಿಂದ ಮುಂದೆ ನಾವು ಸಂಕಟಮೋಚನ ಹನುಮಾನ್ ಮಂದಿರಕ್ಕೆ ಹೋದೆವು. ಅಲ್ಲಿ ದೇವಾಲಯವು ಮಧ್ಯಾಹ್ನದ ಅವಧಿಗಾಗಿ ಮುಚ್ಚಿದ್ದು, ಅರ್ಧ ಗಂಟೆಯ ನಂತರ ತೆರೆಯುವುದೆಂದು ತಿಳಿಯಿತು. ಅಲ್ಲಿ ನಡೆಯುತ್ತಿದ್ದ ರಾಮ ಭಜನೆ, ಹನುಮಾನ್ ಚಾಳೀಸದ ಪಠಣ ಕೇಳುತ್ತ ಅರ್ಧ ಗಂಟೆ ಕಳೆದು ದೇವಾಲಯದ ಬಾಗಿಲು (ಪರದೆ) ತೆರೆಯುವ ಸಂಪ್ರದಾಯವನ್ನು ವೀಕ್ಷಿಸಿದೆವು. ಹನುಮಂತನ ಎದುರಿನಲ್ಲಿ ನೇರಕ್ಕೆ ಸ್ವಲ್ಪ ದೂರದಲ್ಲಿ ಇನ್ನೊಂದು ಬದಿಯಲ್ಲಿ ರಾಮನ ದೇವಾಲಯವಿದೆ. ಮೊದಲು ಹನುಮಂತನ ಬಾಗಿಲು ತೆರೆದು ಅವನಿಗೆ ಪೂಜೆ ಮಾಡಿ ನಂತರ ರಾಮನ ಬಾಗಿಲು ತೆರೆಯುತ್ತಾರೆ. ಹನುಮನ ಎದುರಿಗೆ ಅಡ್ಡ ನಿಂತ ಜನರು ಹನುಮನಿಗೆ ರಾಮನ ದರ್ಶನ ಪಡೆಯಲು ಅಡ್ಡಿಯಾಗುತ್ತಾರೆಂದು ಅಲ್ಲಿಂದ ಜನರನ್ನು ಸರಿಸಲಾಗುತ್ತದೆ. ರಾಮನ ಬಾಗಿಲು ತೆರೆದಾಗ ಹನುಮನಿಗೆ ನೇರವಾಗಿ ಆ ದರ್ಶನವಾಗಬೇಕು, ಅವನು ರಾಮನ ಆರತಿಯನ್ನು ನೋಡಬೇಕು ಎನ್ನಲು ಆ ವ್ಯವಸ್ಥೆ.
ಅಂದು ಸಂಜೆ ಕಾಶಿಯ ಘಾಟುಗಳನ್ನು ವೀಕ್ಷಿಸಲು ದಶಾಶ್ವಮೇಧ ಘಾಟಿನಿಂದ ಬೋಟನ್ನು ಹಿಡಿದೆವು. ಅಲ್ಲಿಂದ ಬೋಟಿನಲ್ಲಿ ಕುಳಿತು ಸಾಲಾಗಿ ಹರಿಶ್ಚಂದ್ರ ಘಾಟ್, ನಿರ್ಮೋಹಿ ಘಾಟ್, ಶಿವಾಜಿ ಘಾಟ್, ಕರ್ನಾಟಕ ಘಾಟ್ (ಶೃಂಗೇರಿ ಮಠ) ಮುಂತಾದವುಗಳನ್ನು ನೋಡುತ್ತಾ ತುದಿಯ ಅಸ್ಸಿ ಘಾಟಿನವರೆಗೆ ಸಾಗಿದೆವು. ಅಲ್ಲಿಂದ ಹಿಂದಿರುಗಿ ಮತ್ತೆ ದಶಾಶ್ವಮೇಧ ಘಾಟ್ ತಲುಪಿ ಆಗ ಶುರುವಾದ ಗಂಗಾರತಿಯನ್ನು ಇತರ ನೂರಾರು ಬೋಟುಗಳಲ್ಲಿ ಕುಳಿತು ವೀಕ್ಷಿಸುತ್ತಿದ್ದ ಸಾವಿರಾರು ಜನರ ಮಧ್ಯ ನಮ್ಮ ಬೋಟಿನಲ್ಲಿ ಕುಳಿತು, ನಿಂತು ನೋಡಿದೆವು. ಸುಮಾರು ಒಂದು ಗಂಟೆಯ ಕಾಲ ಜರುಗಿದ ಆರತಿಯ ನಂತರ ಹಾಗೆಯೇ ಮುಂದಕ್ಕೆ ಸಾಗಿ ಬೋಟಿನಿಂದಲೇ ಮಣಿಕರ್ಣಿಕಾ ಘಾಟ್, ವಿಶ್ವನಾಥ್ ಕಾರಿಡಾರುಗಳನ್ನು ಮತ್ತೊಮ್ಮೆ ಹೊರಗಿನಿಂದ ನೋಡಿಕೊಂಡು ಮರಳಿ ದಶಾಶ್ವಮೇಧ ಘಾಟಿಗೆ ಬಂದಿಳಿದೆವು. ಕಾಶಿಯಲ್ಲಿರುವ ಎಂಬತ್ತಕ್ಕೂ ಹೆಚ್ಚು ಘಾಟುಗಳಲ್ಲಿ ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಾಟ್ ಶವಸಂಸ್ಕಾರಕ್ಕೆ ಮೀಸಲಾಗಿದ್ದರೆ ದಶಾಶ್ವಮೇಧ ಮತ್ತು ಅಸ್ಸಿ ಘಾಟ್ ಗಂಗಾ ಆರತಿಗಾಗಿ ಮೀಸಲಾಗಿವೆ. ಎರಡೂ ಕಡೆಗಳಲ್ಲೂ ಗಂಗಾ ಆರತಿ ಮತ್ತು ಶವಸಂಸ್ಕಾರಗಳು ಒಟ್ಟೊಟಿಗೆ ಕಾಣುವುದು.
ಗಂಗಾ ತೀರದಿಂದ ಹೊರಬಂದ ನಂತರ ಕಾಶಿಯ ಇಕ್ಕಟ್ಟಿನ ರಸ್ತೆಯಲ್ಲಿದ್ದ ಒಂದು ಪ್ರಸಿದ್ಧ ಚಾಟ್ ಭಂಡಾರಕ್ಕೆ ಹೋಗಿ ಅಲ್ಲಿಯ ತಿನಿಸುಗಳ ರುಚಿಯನ್ನು ಸವಿದು ರೂಮಿಗೆ ತೆರಳಿದೆವು.
ಮೋಕ್ಷನಗರಿ ಗಯಾ (ಏಪ್ರಿಲ್ 24)
ನಮ್ಮ ಈ ಪ್ರವಾಸದ ಮುಖ್ಯ ಉದ್ದೇಶವೇ ಗಯಾದಲ್ಲಿ ಪಿತೃಶ್ರಾದ್ಧವನ್ನು ಮಾಡುವುದಾಗಿತ್ತು. ಅಲ್ಲಿಯ ಕರ್ನಾಟಕ ಭವನದಲ್ಲಿರುವ ಪುರೋಹಿತರಾದ ಶ್ರೀ ರಾಮಕೃಷ್ಣ ಮಯ್ಯರೊಂದಿಗೆ ಮೊದಲೇ ಫೋನಿನ ಮುಖಾಂತರ ಮಾತನಾಡಿಕೊಂಡು, ಬರುವ ದಿನ ಮತ್ತು ವೇಳೆಯನ್ನು ಗೊತ್ತುಪಡಿಸಿಕೊಂಡಿದ್ದೆವು. ಹಾಗಾಗಿ ಬೆಳಿಗ್ಗೆ ಹನ್ನೊಂದು ಘಂಟೆಯ ಸುಮಾರಿಗೆ ಅಲ್ಲಿಗೆ ತಲುಪುವ ಉದ್ದೇಶದಿಂದ ಮುಂಜಾನೆ ಐದು ಗಂಟೆಗೆ ಕಾಶಿಯಿಂದ ಹೊರಟೆವು. ಸುಮಾರು 250ಕಿ.ಮೀ. ದೂರ ಕ್ರಮಿಸಿ ನಿಗದಿತ ಸಮಯಕ್ಕೆ ಗಯಾದ ಕರ್ನಾಟಕ ಭವನವನ್ನು ತಲುಪಿದೆವು. ಅಲ್ಲಿ ಕೇರಳದ ಪಾಲಕ್ಕಾಡಿನಿಂದ ಬಂದ ಕೆಲವು ಯಾತ್ರಿಗಳು ಪಿತೃಶ್ರಾದ್ಧವನ್ನು ಆರಂಭಿಸಿದ್ದರಿಂದ ಅವರದ್ದು ಮುಗಿಯುವವರೆಗೆ ನಮಗೆ ಸ್ವಲ್ಪ ಸಮಯ ಸಿಕ್ಕಿತು.
ಕಾರ್ಯ ಮಾಡುವ ಕರ್ತೃಗಳು ಸ್ನಾನಾದಿಗಳನ್ನು ಮುಗಿಸಿದರೆ ನಾವೂ ಸೀರೆಯುಟ್ಟು ತಯಾರಾದೆವು. ನಮ್ಮ ಈ ಬದುಕಿಗೆ ಪ್ರತ್ಯಕ್ಷವಾಗಿ ಪರೋಕ್ಷರಾಗಿ ಕಾರಣರಾದ, ನಮ್ಮ ಬದುಕನ್ನು ಒಂದಲ್ಲೊಂದು ರೀತಿಯಲ್ಲಿ ಪ್ರಭಾವಿಸಿದ, ಈಗ ನಮ್ಮೊಂದಿಗಿಲ್ಲದ ಎಲ್ಲ ಪಿತೃಗಳು, ಬಂಧು ಬಳಗದವರು, ಹಿತೈಷಿಗಳು, ಸ್ನೇಹಿತರು, ಗುರುಗಳು, ಆಚಾರ್ಯರು ಎಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸಿ, ಅವರ ಮೇಲಿನ ನಮ್ಮ ಪ್ರೀತಿ, ಗೌರವ, ಈ ಸಂಸ್ಕಾರದಲ್ಲಿ ನಮ್ಮ ಶ್ರದ್ಧೆಯ ಸಂಕೇತವಾಗಿ ಅವರಿಗೆಲ್ಲ ತರ್ಪಣ ನೀಡಿ ಧನ್ಯತಾ ಭಾವವನ್ನು ಹೊಂದಿದ ಸಾರ್ಥಕ ಕ್ಷಣಗಳವು. ಭಗವಂತನೆಂಬ ಅಗಾಧವಾದ ಚೈತನ್ಯಕ್ಕೆ, ಆ ಚೈತನ್ಯದ ಅಂಶಗಳೇ ಆದ ಪಂಚಭೂತಗಳಿಗೆ, ಸಕಲ ಚರಾಚರಗಳಿಗೆ, ನಮ್ಮ ಇರುವಿಕೆಗೆ ಸಹಕಾರಿಯಾಗುವ ನಿಸರ್ಗ, ಪರ್ವತ, ನದಿ, ಹಿರಿಯರು, ಪ್ರಾಣಿಗಳು ಎಲ್ಲರನ್ನೂ ಎಲ್ಲವನ್ನೂ ಶ್ರದ್ಧೆಯಿಂದ ಸ್ಮರಿಸಿ ಅವುಗಳಿಗೆ ತಲೆಬಾಗಿ, ‘ನಾನು’ ಎನ್ನುವ ಜೀವ ಎಷ್ಟು ಸಣ್ಣದು, ಲೋಕದ ಇತರ ಚರಾಚರಗಳಿಲ್ಲದೆ ನನ್ನ ಬದುಕೇ ಸಾಧ್ಯವಿಲ್ಲವೆಂಬುದನ್ನು ನೆನಪಿಸಿಕೊಂಡು ವಿನೀತರಾಗುವ ಸಂಸ್ಕಾರವನ್ನು ಆಚರಣೆಗೆ ತಂದ ನಮ್ಮ ಸನಾತನ ಪರಂಪರೆಗೆ ಮನದಲ್ಲೇ ನಮಿಸುತ್ತ, ಇಂತಹ ಉನ್ನತವಾದ ಪರಂಪರೆಯಲ್ಲಿ ಹುಟ್ಟಿದ ನಮ್ಮ ಭಾಗ್ಯಕ್ಕೆ ಹರ್ಷಿಸುತ್ತ ಕೃತಾರ್ಥರಾದ ಕ್ಷಣಗಳವು. ಪಿತೃಶ್ರಾದ್ಧ ಸಂಪನ್ನಗೊಳಿಸಿದ ಸಂದರ್ಭದಲ್ಲಿ ನಮ್ಮ ಇಂದ್ರಿಯ ಮತ್ತು ಮನೋನಿಗ್ರಹಗಳಿಗೆ ಸಹಾಯಕವಾಗಲು ರೂಢಿಯಲ್ಲಿರುವ ಒಂದು ಆಚರಣೆಯಂತೆ ನಮಗೆ ಪ್ರಿಯವಾದ ಒಂದು ಸಿಹಿ ಪದಾರ್ಥ, ಒಂದು ತರಕಾರಿ ಮತ್ತು ಒಂದು ಹಣ್ಣು ಇವುಗಳನ್ನು ಇನ್ನುಳಿದ ಜೀವನದಲ್ಲಿ ತಿನ್ನುವುದಿಲ್ಲ ಎಂಬ ಸಂಕಲ್ಪವನ್ನು ಮಾಡಿದೆವು.
ತರ್ಪಣ ನೀಡಿದ ಬಳಿಕ, ದಶರಥ ಮಹಾರಾಜನು ಸೀತೆಯು ಮಣ್ಣಿನಿಂದ ಮಾಡಿದ ಪಿಂಡವನ್ನು ಸ್ವೀಕರಿಸಿ ಸಂತೃಪ್ತನಾದ ಸ್ಥಳವೆಂಬ ಪ್ರತೀತಿ ಇರುವ ಗಯಾ ಕ್ಷೇತ್ರದ ಮೂರು ಪುಣ್ಯ ಸ್ಥಳಗಳಲ್ಲಿ ಪಿಂಡದಾನ ಮಾಡುವ ಸಂಸ್ಕಾರವನ್ನು ನೆರವೇರಿಸಿದೆವು. ಬೇರೆ ಯಾವ ತೀರ್ಥ ಕ್ಷೇತ್ರಗಳಲ್ಲಿ ಪಿಂಡದಾನ ಮಾಡಿದರೂ ತೃಪ್ತರಾಗುವ ಪಿತೃಗಳು ಗಯಾದಲ್ಲಿ ಮಾಡುವ ಪಿಂಡದಾನದಿಂದ ಮೋಕ್ಷ ಹೊಂದುತ್ತಾರೆ ಎಂಬ ನಂಬಿಕೆಯಿದೆಯಂತೆ. ಅಲ್ಲದೆ ಕಾಶಿಯಲ್ಲಿ ದಂಡ, ಪ್ರಯಾಗದಲ್ಲಿ ಮುಂಡ (ವೇಣಿ ದಾನ), ಗಯಾದಲ್ಲಿ ಪಿಂಡ ಈ ಮೂರು ಶ್ರೇಷ್ಠ ಎಂಬ ಪ್ರತೀತಿಯೂ ಇದೆಯಂತೆ. ಮೊದಲಿಗೆ ವಿಷ್ಣುಪಾದ ದೇವಾಲಯದ ವಿಷ್ಣು ಪಾದಕ್ಕೆ (ಗಯಾಸುರನನ್ನು ತುಳಿದು ಸಂಹರಿಸಿಟ್ಟುಕೊಂಡ ವಿಷ್ಣುವಿನ ಪಾದ), ನಂತರ ನೀರಿಲ್ಲದೆ ಒಣಗಿದ (ಸೀತೆಯ ಶಾಪಕ್ಕೆ) ಫಲ್ಗುಣಿ ನದಿಗೆ ಮತ್ತು ಅಲ್ಲಿರುವ ಪ್ರಾಚೀನವಾದ ವಟವೃಕ್ಷಕ್ಕೆ ಪಿಂಡಗಳನ್ನು ಅರ್ಪಿಸಿ ಹಿಂತಿರುಗಿ ಬಂದು ಕರ್ನಾಟಕ ಭವನದಲ್ಲಿ ಊಟ ಪೂರೈಸಿದಾಗ ಮಧ್ಯಾಹ್ನ ಮೂರೂವರೆಯಾಗಿತ್ತು.
ಆ ಬಳಿಕ ಅಲ್ಲಿಂದ ಹೊರಟು ಶಕ್ತಿಪೀಠಗಳಲ್ಲಿ ಒಂದಾದ ಮಂಗಳ ಗೌರಿ ದೇವಸ್ಥಾನಕ್ಕೆ ಹೋದೆವು. ಪುಟ್ಟ ಗುಹೆಯೊಂದರೊಳಗೆ ಅಖಂಡ ದೀಪವೊಂದು ಅಮ್ಮನವರ ವಿಗ್ರಹದ ಮೇಲ್ಭಾಗದಲ್ಲಿ ಉರಿಯುತ್ತಿರುವ ಸ್ಥಳವಿದು. ಸತಿಯ ಎದೆಯ ಭಾಗ ಬಿದ್ದ ಸ್ಥಳವೆಂದು ಇದು ಹೆಸರುವಾಸಿಯಾಗಿದೆ. ನಂತರ ಸುಮಾರು 15ಕಿ.ಮೀ. ದೂರದಲ್ಲಿರುವ ಬೋಧಗಯಾಕ್ಕೆ ಹೋಗಿ ಅಲ್ಲಿ ನಾವು ತಂಗುವ ಹೋಟೆಲಿನಲ್ಲಿ ಚೆಕ್ ಇನ್ ಮಾಡಿದೆವು.
ಸ್ವಲ್ಪ ಸಮಯದ ನಂತರ ಬೋಧಗಯಾದಲ್ಲಿರುವ ಸ್ಥಳಗಳ ವೀಕ್ಷಣೆಗೆ ಹೊರಟೆವು. ಮೊದಲು 80 ಅಡಿ ಎತ್ತರದ ಬುದ್ಧನ ವಿಗ್ರಹವನ್ನು ನೋಡಿದೆವು. ಅದರ ನಂತರ ಕೆಲವು ಬೌದ್ಧ ವಿಹಾರಗಳನ್ನು ನೋಡುವ ಯೋಚನೆಯಿತ್ತು. ಆದರೆ ಆರು ಗಂಟೆಯ ನಂತರ ಎಲ್ಲ ವಿಹಾರಗಳನ್ನು ಪ್ರವಾಸಿಗರಿಗೆ ಮುಚ್ಚಿಬಿಡುವ ಕಾರಣದಿಂದ ಸುಂದರವಾದ ವಿನ್ಯಾಸವುಳ್ಳ ರಂಗುರಂಗಾದ ಕೆಲವು ವಿಹಾರಗಳನ್ನು ಹೊರಗಿನಿಂದಲೇ ನೋಡಿಕೊಂಡು ಬರಬೇಕಾಯಿತು. ಅಲ್ಲಿಂದ ನಾವು ಬುದ್ಧನಿಗೆ ಜ್ಞಾನೋದಯವಾದ ಬೋಧಿವೃಕ್ಷವಿರುವ ಮುಖ್ಯ ಬೌದ್ಧ ಮಂದಿರಕ್ಕೆ ಹೋದೆವು. ಆ ಸುಂದರವಾದ ಮಂದಿರದಲ್ಲಿ ಬೋಧಿ ವೃಕ್ಷ ಮತ್ತು ಬುದ್ಧನ ಮೂರ್ತಿಗಳ ದರ್ಶನ ಪಡೆದು ಕೆಲಕಾಲ ಅಲ್ಲೆಲ್ಲ ಸುತ್ತಾಡಿ ಹೊರಬಂದೆವು. ರಾತ್ರಿಯೂಟ ಮುಗಿಸಿ ರೂಮಿಗೆ ತೆರಳಿ ಮಲಗಿದೆವು.
ದೇವನಗರಿ ದೇವಘರ್ (ಏಪ್ರಿಲ್ 25)
ಮರುದಿನ ಬೆಳಗ್ಗೆ ಪ್ರಯಾಣವನ್ನು ಮುಂದುವರೆಸಿ ಸುಮಾರು 230ಕಿ.ಮೀ. ದೂರದಲ್ಲಿರುವ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಬಾಬಾ ಬೈದ್ಯನಾಥನ (ಬೈಜನಾಥ್, ವೈದ್ಯನಾಥ್) ಧಾಮವಾಗಿರುವ ಝಾರ್ಕಂಡಿನ ದೇವಘರ್ ಎಂಬ ಊರನ್ನು ತಲುಪಿದಾಗ ಆಗಲೇ ಮಧ್ಯಾಹ್ನ ಎರಡು ಗಂಟೆಯ ಮೇಲಾಗಿತ್ತು. ಅಲ್ಲಿ ನಾವು ಉಳಿದುಕೊಳ್ಳುವ ಹೋಟೆಲಿನಲ್ಲಿ ಚೆಕ್ ಇನ್ ಮಾಡಿದ ನಂತರ ತಡಮಾಡದೆ ಹೊರಟು ಬೈದ್ಯನಾಥನ ದರ್ಶನಕ್ಕೆ ತೆರಳಿದೆವು. ನಾಲ್ಕು ಗಂಟೆಗೆ ಸಾರ್ವಜನಿಕ ಪೂಜೆಗೆ ಮುಕ್ತಾಯವಾಗುತ್ತದೆಂದು ಅವಸರಿಸಿ ಒಬ್ಬರು ಪಂಡರ ಜೊತೆ ಹೋಗಿ ರುದ್ರಾಭಿಷೇಕ ಮಾಡಿದ್ದಾಯಿತು. ಯಾವುದೇ ಶಿಸ್ತಿಲ್ಲದೆ ನೂಕುನುಗ್ಗಲಿನಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡಿ ಚಲ್ಲುವ ನೀರಿನಿಂದ ತೊಯ್ದು, ಭಕ್ತರರ್ಪಿಸಿದ ಪಂಚಾಮೃತ, ಕುಂಕುಮ, ಭಸ್ಮ, ಹೂವು ಇತ್ಯಾದಿಗಳಿಂದ ಅಂಟುಅಂಟಾದ ಪರಿಸರದಲ್ಲಿರುವ ಬೈದ್ಯನಾಥನು ರಾವಣನು ಕೈಲಾಸದಿಂದ ತಂದ ಆತ್ಮಲಿಂಗದ ಅಂಶವಂತೆ (ಗೋಕರ್ಣದ ಕಥೆಯಂತೆಯೇ). ವಿಷ್ಣುವು ಅವನನ್ನು ಅಲ್ಲಿ ಹಿಡಿದಿರಿಸಿ ಲಿಂಗವನ್ನು ಭೂಮಿಯ ಮೇಲಿರಿಸಿದಾಗ ರಾವಣನು ಒತ್ತಿದ್ದರಿಂದ ಅದು ಸಣ್ಣ ಲಿಂಗವಾಗಿದೆ ಎಂಬ ಪ್ರತೀತಿಯಿದೆ. ಅಲ್ಲಿಂದ ಹೊರಟು ದಾರಿಯಲ್ಲಿ ಸಿಗುವ ಶಿವಗಂಗಾ ಸರೋವರವನ್ನು ನೋಡಿಕೊಂಡು ರೂಮಿನೆಡೆಗೆ ಹೊರಟೆವು.
ಬಾಬಾ ಬೈದ್ಯನಾಥ ಧಾಮದಿಂದ ಹಿಂತಿರುಗಿದ ಮೇಲೆ ನಮ್ಮ ಹೋಟೆಲಿನಲ್ಲಿ ಬಿಸಿ ಬಿಸಿ ಪಕೋಡ, ಸ್ಯಾಂಡ್ವಿಚ್ ಮತ್ತು ಚಹಾಗಳೊಂದಿಗೆ ಮಧ್ಯಾಹ್ನದ ಭೋಜನ, ಸಂಜೆಯ ಉಪಹಾರಗಳೆರಡನ್ನೂ ಮುಗಿಸಿದೆವು. ತುಸು ವಿಶ್ರಾಂತಿಯ ನಂತರ ಸಂಜೆ ನೌಲಕ್ಕ ರಾಧಾಕೃಷ್ಣ ದೇವಾಲಯಕ್ಕೆ ಹೋಗಿ ಸಂಜೆಯ ಆರತಿಯಲ್ಲಿ ಭಾಗವಹಿಸಿ ಬಂದೆವು. 1940ರಲ್ಲಿ ಚಾರುಶೀಲ ಎಂಬ ಬಂಗಾಳದ ರಾಣಿ ಒಂಬತ್ತು ಲಕ್ಷದಷ್ಟು ಹಣವನ್ನು ಖರ್ಚು ಮಾಡಿ ಕಟ್ಟಿಸಿದ್ದರಿಂದ ಅದಕ್ಕೆ ನವ್ ಲಕ್ಖ ಮಂದಿರ್ ಎಂದು ಹೆಸರು ಬಂದಿದೆಯಂತೆ.
ಸಂಜೆಯ ನಂತರ ದೇವಘರದಲ್ಲಿ ನೋಡಲು ಹೆಚ್ಚೇನೂ ಸ್ಥಳಗಳಿರದ ಕಾರಣ ನಂದನ್ ಪಹಾಡ್ ಪಾರ್ಕ್ ಎಂಬ ಒಂದು ಗುಡ್ಡದ ಮೇಲಿರುವ ಪಾರ್ಕಿಗೆ ಹೋಗಿ ಕೆಲಸಮಯ ಕಳೆದೆವು. ಮಕ್ಕಳಂತೆ ಜಾರುವ ಬಂಡಿ, ಭೂತದ ಮನೆ, ನಗಿಸುವ ಗುಹೆಗಳೊಳಗೆ ಹೊಕ್ಕು ಸಿಲ್ಲಿಯಾಗಿ ಎಂಜಾಯಿಸಿ ಬಂದು ಉಂಡು ಮಲಗಿದೆವು.
ಕಾಳಿಯಕ್ಷೇತ್ರ ಕೋಲ್ಕತಾ (ಏಪ್ರಿಲ್ 26, 27)
ಮರುದಿನ ಮುಂಜಾನೆ ಐದೂವರೆಗೆ ಕೋಲ್ಕತಾದೆಡೆಗೆ ಪಯಣ ಬೆಳೆಸಿದೆವು. ಮೊದಲೇ ನಿಗದಿತವಾಗಿದ್ದಂತೆ ಇಲ್ಲಿಯವರೆಗೆ ನಮ್ಮ ಜೊತೆ ಬಂದ ದೇವೇಶ್ ಮಿಶ್ರರು ಮುಂದೆ ರಾಜು ಮಿಶ್ರ ಎಂಬ ಸಾರಥಿಯನ್ನು ನಮಗೊದಗಿಸಿ ಹಿಂತಿರುಗಿದರು. ಮೊದಲು ದೇವಘರದಲ್ಲಿರುವ ತ್ರಿಕೂಟ ಪರ್ವತದ ನಡುವೆ ಉದಯಿಸುತ್ತಿದ್ದ ಸೂರ್ಯನ ದರ್ಶನ ಪಡೆದು ಮುಂದೆ ಕೋಲ್ಕತಾದ ರಸ್ತೆಯಲ್ಲಿಯೇ ದೇವಘರದಿಂದ ಸುಮಾರು 42ಕಿ.ಮೀ. ದೂರದಲ್ಲಿದ್ದ ಬಾಬಾ ಬಾಸುಕಿನಾಥ ಧಾಮಕ್ಕೆ ಹೋದೆವು. ಅಲ್ಲಿಯ ನೂಕುನುಗ್ಗಲಿನ ನಡುವೆ ಬಾಸುಕಿನಾಥ ನಾಗೇಶ್ವರ ಲಿಂಗದ ದರ್ಶನ ಪಡೆದು, ನಡುವೆ ತಿಂಡಿ, ಚಹಾಕ್ಕಲ್ಲದೆ ಮತ್ತೆಲ್ಲೂ ಸಮಯ ವ್ಯಯ ಮಾಡದೆ ಮುಂದೆ ಸಾಗಿದೆವು. ಸುಮಾರು 325ಕಿ.ಮೀ. ದೂರದ ಕೋಲ್ಕತಾವನ್ನು ತಲುಪಿದಾಗ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಹೋಟೆಲಿನಲ್ಲಿ ಚೆಕ್ ಇನ್ ಮಾಡಿದ ನಂತರ ಮಧ್ಯಾಹ್ನದ ಊಟ ಮುಗಿಸಿ ತುಸು ವಿಶ್ರಾಂತಿ ಪಡೆದು ಕೋಲ್ಕತಾ ದರ್ಶನವನ್ನು ಆರಂಭಿಸಿದೆವು.
ಮೂಲದಲ್ಲಿ ಕಾಲೀಕ್ಷೇತ್ರ ಎಂದಿದ್ದದ್ದು ಕಲ್ಕತ್ತಾ, ಕ್ಯಾಲ್ಕಟ್ಟ ಆಗಿ ಕೊನೆಗೆ ಈಗ ಕೋಲ್ಕತಾ ಎಂದು ಹೆಸರು ಪಡೆದಿರುವ ಭಾರತದ ಅತ್ಯಂತ ಹಳೆಯ ಮೆಟ್ರೋಪಾಲಿಟನ್ ಸಿಟಿಯಾಗಿರುವ ಕೋಲ್ಕತೆಯು ಈಸ್ಟ್ ಇಂಡಿಯಾ ಕಂಪನಿಯ ರಾಜಧಾನಿಯಾಗಿತ್ತು. ಭಾರತದಲ್ಲಿ ಮೊದಲು ಆಧುನಿಕತೆಯನ್ನು ಸ್ವಾಗತಿಸಿ, ಪಾಶ್ಚಾತ್ಯ ದೇಶಗಳ ವಿಚಾರಗಳಿಗೆ, ದೃಷ್ಟಿಕೋನಕ್ಕೆ ತೆರೆದುಕೊಂಡು ಹೊಸಹೊಸ ಪ್ರಯೋಗಗಳನ್ನು ಮಾಡಿದ ಬೆಂಗಾಲಿಗಳ ಐಡಿಯೋಲೋಜಿಯಿಂದ ಉಳಿದ ಭಾರತೀಯರು ಪ್ರಭಾವಿತರಾಗಿದ್ದರೆನ್ನಬಹುದು. ರಾಮಕೃಷ್ಣ ಪರಮಹಂಸರು, ಶಾರದಾದೇವಿಯವರು, ವಿವೇಕಾನಂದರ ಜನ್ಮಕ್ಷೇತ್ರವಾದ ಕೋಲ್ಕತಾವನ್ನು ನೋಡುವ ಬಹುದಿನಗಳ ಬಯಕೆ ಈಗ ಈಡೇರಿತು.
ಮೊದಲು ದಕ್ಷಿಣೇಶ್ವರ ಕಾಳೀ ದೇವಸ್ಥಾನಕ್ಕೆ ಹೋದೆವು. ಭವ್ಯವಾದ ಆ ದೇವಾಲಯದಲ್ಲಿ ಜನಸಂದಣಿ ದಟ್ಟವಾಗಿದ್ದರೂ ಶಿಸ್ತಿನಿಂದ ಸಾಲಿನಲ್ಲಿ ಹೋಗಿ, ತೃಪ್ತಿಯಾಗುವಷ್ಟು ಹೊತ್ತು ಕಾಳಿಯ ದರ್ಶನ ಪಡೆಯುವ ವ್ಯವಸ್ಥೆಯಿದೆ. ರಾಮಕೃಷ್ಣರು ಪೂಜಿಸಿದ ಭವತಾರಿಣಿ ರೂಪದ ಕಾಳೀಮಾತೆಯನ್ನು ಮನದಣಿಯೆ ನೋಡಿ ಹೊರಬಂದು ಆ ಸಂಕೀರ್ಣದಲ್ಲಿ ಸುತ್ತಮುತ್ತಲೂ ಇರುವ ಅನೇಕ ಸಣ್ಣ ಸಣ್ಣ ಮಂದಿರಗಳನ್ನು, ಮಂದಿರದ ಹಿಂದೆ ಹರಿಯುವ ಹೂಗ್ಲಿ ನದಿಯನ್ನು, ಅಲ್ಲಿಂದ ಕಾಣುವ ಹೌರಾ ಸೇತುವೆಯನ್ನು ನೋಡಿದೆವು.
ಅಲ್ಲಿಂದ ಹೊರಟು ವಿವೇಕಾನಂದ ಸೇತುವೆಯ (Bally Bridge) ಮೇಲಿನಿಂದ ಪಯಣಿಸಿ ರಾಮಕೃಷ್ಣ ಮಿಷನ್ನಿನ ಬೇಲೂರು ಮಠಕ್ಕೆ ಹೋದಾಗ ರಾಮಕೃಷ್ಣರ ಮಂದಿರದಲ್ಲಿ ಸಂಜೆಯ ಆರತಿ ನಡೆಯುತ್ತಿತ್ತು. ಅರ್ಧ ಗಂಟೆಗೂ ಮಿಕ್ಕಿ ನಡೆಯುವ ಆರತಿಯನ್ನು ನೋಡುತ್ತ ಅಲ್ಲಿಯ ವಿಶಿಷ್ಟವಾದ ಭಜನೆಯನ್ನು ಕೇಳುತ್ತ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಬಂದೆವು. ಮಠದಲ್ಲಿದ್ದ ಶಾರದಾ ಮಾತೆ ಮತ್ತು ವಿವೇಕಾನಂದರ ಮಂದಿರಗಳು ಮುಚ್ಚಿದ್ದರಿಂದ ಹೊರಗಿನಿಂದಲೇ ನೋಡಿ ಬಂದೆವು.
ನಂತರ ಶಕ್ತಿಪೀಠವಾದ ಕಾಳೀ ಘಾಟ್ ಕಾಳೀ ಮಂದಿರವು ರಾತ್ರಿ ಹತ್ತು ಗಂಟೆಯವರೆಗೆ ತೆರೆದಿರುತ್ತದೆ ಎಂದು ಅರಿತು ಅಲ್ಲಿಗೆ ಹೋಗಲು ನಿರ್ಧರಿಸಿದೆವು. ಬೇಲೂರು ಮಠದ ಬದಿಯಲ್ಲಿರುವ ಹೂಗ್ಲಿ ದಂಡೆಯಿಂದ ಕಾಳೀ ಘಾಟ್ ದಂಡೆಗೆ ಅರ್ಧ ಗಂಟೆಯಲ್ಲಿ ತಲುಪಿಸುವ ಫೆರ್ರಿ ಸೇವೆಯಿದೆ. ಆದರೆ ಕಾರಣಾಂತರಗಳಿಂದ ನಮಗೆ ಅದರಲ್ಲಿ ಹೋಗುವುದು ಸಾಧ್ಯವಾಗದೆ ಟ್ರಾಫಿಕ್ಕಿನ ನಡುವೆ ಕಾರಿನಲ್ಲಿಯೇ ಸಂಚರಿಸಿ ಹೌರಾ ಸೇತುವೆಯ ಮೂಲಕ ಹಾದು ಕಾಳೀ ಘಾಟ್ ಮಂದಿರವನ್ನು ತಲುಪಿದೆವು. ಸತಿಯ ಬಲಗಾಲಿನ ಬೆರಳುಗಳು ಬಿದ್ದಿದ್ದವೆಂಬ ಪ್ರತೀತಿಯಿರುವ ಈ ಶಕ್ತಿಪೀಠದಲ್ಲಿ ರಾತ್ರಿಯ ಸಮಯದಲ್ಲೂ ದಟ್ಟವಾದ ಜನಸಂದಣಿಯಿತ್ತು. ಆದ್ದರಿಂದ ದೇವಾಲಯದಲ್ಲಿ ಪಂಡರೊಬ್ಬರ ಸಹಕಾರದಿಂದ ದುಡ್ಡು ಕೊಟ್ಟು ಶೀಘ್ರ ದರ್ಶನಕ್ಕೆ ನಿಂತೆವು. ಬಹಳ ನೂಕು ನುಗ್ಗಲಿದ್ದು ಅತಿ ಪ್ರಯಾಸದಿಂದ ಕಾಳಿಯ ದರ್ಶನ ಮಾಡಿ ಹೊರಬಿದ್ದೆವು. ಅಲ್ಲಿಂದ ಊಟಕ್ಕೆಂದು ರೆಸ್ಟುರೆಂಟೊಂದಕ್ಕೆ ತೆರಳಿದೆವು. ಊಟ ಮುಗಿಸಿ ಹೊರಬಂದಾಗ ಜೋರಾದ ಮಳೆಬಿದ್ದು ಸ್ವಲ್ಪ ತಂಪನ್ನುಂಟುಮಾಡಿತ್ತು. ಅಲ್ಲಿಯ ಈಡನ್ ಗಾರ್ಡನ್ನಿನಲ್ಲಿ ನಡೆಯುತ್ತಿದ್ದ ಐ.ಪಿ.ಎಲ್. ಕ್ರಿಕೆಟ್ ಮ್ಯಾಚ್ ಮಾತ್ರ ಮಳೆಯಿಂದಾಗಿ ನಡುವಲ್ಲೇ ಸ್ಥಗಿತಗೊಂಡಿತ್ತು.
ಹಿಂದಿನ ದಿನವೇ ಮೂರು ಮುಖ್ಯ ಸ್ಥಳಗಳಲ್ಲಿ ದರ್ಶನ ಮುಗಿಸಿದ್ದರಿಂದ ಮರುದಿನ ಬೆಳಗ್ಗೆ ಆರಾಮಾಗಿ ಎದ್ದು ನಾವಿದ್ದ ಹೋಟೆಲಿನಲ್ಲಿ ಉಪಹಾರ ಮುಗಿಸಿದೆವು. ಅಂದು ನಮ್ಮ ಪ್ರವಾಸದ ಕೊನೆಯ ದಿನವಾದ್ದರಿಂದ, ಅಂದಿನ ತಡರಾತ್ರಿಯಲ್ಲಿ ಮರಳುವ ವಿಮಾನವನ್ನು ಹಿಡಿಯಬೇಕಿದ್ದರಿಂದ ನಮ್ಮ ಬಟ್ಟೆಬರೆಗಳನ್ನು ಸರಿಯಾಗಿ ಪ್ಯಾಕ್ ಮಾಡಿಕೊಂಡು ಹೋಟೆಲಿನಿಂದ ಚೆಕ್-ಔಟ್ ಮಾಡಿ ಲಗ್ಗೇಜನ್ನು ಅಲ್ಲಿಯೇ ಇರಿಸಿ ಮೊದಲು ವಿವೇಕಾನಂದರು ಹುಟ್ಟಿಬೆಳೆದ ಮನೆ ಮತ್ತು ಮ್ಯೂಸಿಯಂಗೆ ಭೇಟಿ ಕೊಟ್ಟೆವು. ಅಲ್ಲಿ ವಿವೇಕಾನಂದರ ಜೀವನವನ್ನು ಚಿತ್ರಿಸಿರುವ ಮತ್ತು ಅವರ ಶಿಕಾಗೋ ಭಾಷಣದ 3D ಶೋ ನೋಡಿಕೊಂಡು, ಅವರ ಮನೆ, ಅವರು ಹುಟ್ಟಿದ ಸ್ಥಳ, ಅಲ್ಲಿಯ ವಸ್ತುಗಳನ್ನೆಲ್ಲ ನೋಡಿಕೊಂಡು ಹೊರಗೆ ಬರುವಾಗ ಕೊಟ್ಟ ಬೆಲ್ಲದುಂಡೆ ಮತ್ತು ನೀರನ್ನು ಸೇವಿಸಿ, ಕೆಲವು ಪುಸ್ತಕಗಳನ್ನು ಖರೀದಿಸಿಕೊಂಡು ಬಂದೆವು.
ಅಲ್ಲಿಂದ ಹೊರಟು ರವೀಂದ್ರನಾಥ ಟ್ಯಾಗೋರರ ಪೂರ್ವಜರ ಮನೆಯಾದ ಜೋರಾಸಂಕೊ ಠಾಕುರ್ಬಾರಿಗೆ ಹೋದೆವು. ಮೂರಂತಸ್ತಿನ ವಿಶಾಲವಾದ ಮಹಲಿನಲ್ಲಿದ್ದ ವಸ್ತುಗಳು, ಅನೇಕ ಭವ್ಯವಾದ ತೈಲಚಿತ್ರಗಳು, ರವೀಂದ್ರನಾಥರು ಹಾಗೂ ಅವರ ಶಿಷ್ಯರು ಚಿತ್ರಿಸಿರುವ ಕಲಾಕೃತಿಗಳು, ಅವರಿಗೆ ದೊರೆತ ನೊಬೆಲ್ ಪಾರಿತೋಷಕದ ಪ್ರತಿಕೃತಿ (ಮೂಲ ಪಾರಿತೋಷಕವು ಇಪ್ಪತ್ತೈದು ವರ್ಷಗಳ ಕೆಳಗೆ ಕಳ್ಳತನವಾಯಿತಂತೆ!), ರವೀಂದ್ರರು ಆಕರ್ಷಿತರಾಗಿ ಕೊಂಡು ತಂಡ ಜಪಾನೀಸ್ ಕಲಾಕೃತಿಗಳು, ಜಪಾನಿನ ತಜ್ಞರೊಂದಿಗೆ ಅವರ ಒಡನಾಟದಿಂದ ಆ ಪ್ರಭಾವದಿಂದ ಶಾಂತಿನಿಕೇತನದ ಸ್ಥಾಪನೆಯಾದ ಕುರಿತು ವಿವರಗಳು ಎಲ್ಲವನ್ನೂ ನೋಡಿಕೊಂಡು ಬಂದೆವು.
ಮಧ್ಯಾಹ್ನ ಊಟದ ನಂತರ ಹಳದಿ ಬಣ್ಣದ ಅಂಬಾಸೆಡರ್ ಲೋಕಲ್ ಟ್ಯಾಕ್ಸಿಯೊಂದನ್ನು ಗೊತ್ತುಮಾಡಿಕೊಂಡು ಅಲ್ಲಿಯ ನ್ಯೂ ಮಾರ್ಕೆಟ್, ಭಾರತದ ಕ್ರಿಕೆಟ್ ಕಾಶಿ ಎನ್ನಿಸಿದ ಈಡನ್ ಗಾರ್ಡನ್ ಕ್ರೀಡಾಂಗಣ (ಹೊರಗಿನಿಂದ), ಅದರ ಎದುರೇ ಇರುವ ಮೋಹನ್ ಬಗಾನ್ ಫುಟ್ಬಾಲ್ ಸ್ಟೇಡಿಯಂ ಮುಂತಾದವನ್ನು ನೋಡಿಕೊಂಡು ವಿಕ್ಟೋರಿಯಾ ಮೆಮೋರಿಯಲ್ ಹಾಲನ್ನು ತಲುಪಿದೆವು. ವಿಕ್ಟೊರಿಯಾ ರಾಣಿಯ ಮರಣದ ನಂತರ ಅವಳ ಸ್ಮರಣೆಯಲ್ಲಿ ಕಟ್ಟಿಸಿದ ಈ ಭವ್ಯ ಕಟ್ಟಡದಲ್ಲಿ ಟಿಕೆಟ್ ಪಡೆದು ಒಳಹೋದೆವು. ಅಲ್ಲಿರುವ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಘಟನೆಗಳನ್ನು, ವಿಷಯಗಳನ್ನು, ವಿವರಗಳನ್ನು ಅರುಹುವ ಚಿತ್ರಗಳು, ಆಡಿಯೋ ವಿಶುಯಲ್ಲುಗಳ ಪ್ರದರ್ಶನವನ್ನು ನೋಡಿಕೊಂಡು ಹೊರಬಂದೆವು. ಅಲ್ಲಿಯ ಎರಡೂ ಬದಿಯಲ್ಲಿ ಕೊಳವಿರುವ ಸುಂದರವಾದ ಉದ್ಯಾನವನ್ನು ನೋಡಿಕೊಂಡು ಇನ್ನೊಂದು ಲೋಕಲ್ ಟ್ಯಾಕ್ಸಿ ಹಿಡಿದು ಮತ್ತೆ ಈಡನ್ ಗಾರ್ಡನ್, ಮಾರ್ಕೆಟ್ಟುಗಳ ಮಾರ್ಗವಾಗಿ ಬಂದು ಬಂಗಾಳದ ಸಿಹಿ ತಿನಿಸುಗಳ ರುಚಿ ನೋಡಲೆಂದು ಪ್ರಸಿದ್ಧವಾದ ಕೆ.ಸಿ.ದಾಸ್ ಸ್ವೀಟ್ಸ್ ಅಂಗಡಿಯನ್ನು ಹೊಕ್ಕೆವು. ಅಲ್ಲಿ ಅವರ ರೊಸಮಲೈ, ರೊಸಗೊಲ್ಲಗಳನ್ನು ಸವಿದು, ಸಿಹಿ ಹೆಚ್ಚೆನಿಸಿದ್ದರಿಂದ ದಹಿ ವಡಾವನ್ನೂ ಸೇವಿಸಿ (ಅದೂ ಸ್ವಲ್ಪ ಸಿಹಿಯಾಗಿಯೇ ಇತ್ತು!) ಅಲ್ಲೇ ಹತ್ತಿರದಲ್ಲಿದ್ದ ಎಲೆಕ್ಟ್ರಾನಿಕ್ಸ್ ಮಾಲ್ ಒಂದನ್ನು ನೋಡಿಕೊಂಡು ಮರಳಿ ಹೋಟೆಲಿಗೆ ಹೋದೆವು. ದಾರಿಯಲ್ಲಿ ಚಲಿಸುತ್ತಿರುವ ಟ್ರಾಮಿನ ದರ್ಶನವೂ ನಮಗಾಯಿತು. ಟ್ರಾಮ್ ಟ್ರ್ಯಾಕ್ ಎಲ್ಲ ಕಡೆಗಳಲ್ಲಿದ್ದರೂ ಪರಂಪರೆಯನ್ನು ಉಳಿಸಿಕೊಳ್ಳುವ ಸಲುವಾಗಿ ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಅಪರೂಪಕ್ಕೆ ಅವುಗಳ ಸಂಚಾರವನ್ನು ಸೀಮಿತಗೊಳಿಸಿದ್ದಾರೆ.
ಹೋಟೆಲಿನಲ್ಲಿ ಫ್ರೆಶ್ ಅಪ್ ಆಗಲು ಟೆಂಪೊರರಿ ರೂಮೊಂದನ್ನು ಪಡೆದು, ಮುಖ ತೊಳೆದು ತಯಾರಾಗಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದೆವು. ಅಲ್ಲಿ ನಮ್ಮ ಸಾರಥಿ ರಾಜು ಮಿಶ್ರಾರಿಂದ ಬೀಳ್ಕೊಂಡು ಲಗ್ಗೇಜನ್ನು ಚೆಕ್ ಇನ್ ಮಾಡಿ ಲೌಂಜಿನಲ್ಲಿ ರಾತ್ರಿಯೂಟವನ್ನು ಆರು ಜನರೂ ಒಟ್ಟಿಗೆ ಮುಗಿಸಿದೆವು. ನಂತರ ಬೆಂಗಳೂರಿನವರನ್ನೆಲ್ಲ ಬೀಳ್ಕೊಂಡು ನಾವಿಬ್ಬರು ಏರ್ ಇಂಡಿಯಾ ವಿಮಾನದಲ್ಲಿ ಏಪ್ರಿಲ್ 28ರ ಬೆಳಗ್ಗಿನ ಜಾವ ಎರಡೂವರೆಗೆ ಮುಂಬೈ ತಲುಪಿದರೆ, ಇಂಡಿಗೋ ವಿಮಾನದಲ್ಲಿ ಅವರೆಲ್ಲ ಬೆಂಗಳೂರನ್ನು ತಲುಪಿದರು.
ಎಲ್ಲೆಡೆಯಲ್ಲಿ ನಲವತ್ತು ಡಿಗ್ರಿಗಳಿಗೂ ಮೇಲ್ಪಟ್ಟ ಉಷ್ಣತೆಯಿದ್ದರೂ ಲೆಕ್ಕವಿಲ್ಲದಷ್ಟು ತಣ್ಣೀರು, ತಂಪು ಪಾನೀಯಗಳು, ಸೌತೆಕಾಯಿ, ಕಬ್ಬಿನಹಾಲು ಮುಂತಾದವುಗಳನ್ನು ಸೇವಿಸುತ್ತ ಸಾಗಿದರೂ ನಮ್ಮ ಉತ್ಸಾಹವೇನೂ ಕುಂದಿರಲಿಲ್ಲ. ಕುಟುಂಬದವರ ಜೊತೆ ಸಂತೋಷದಿಂದ ಕಳೆದ ಈ ಸುಂದರ ಕ್ಷಣಗಳು, ಧನಾತ್ಮಕ ಅನುಭೂತಿಯು ಚಿರಸ್ಮರಣೀಯವಾಗಿ ಉಳಿಯುವುದರಲ್ಲಿ ಸಂಶಯವಿಲ್ಲ.
ಈ ತೀರ್ಥಯಾತ್ರೆಯಿಂದ ನನ್ನ ಕಲಿಕೆ/ಕಾಣ್ಕೆ
ಒಟ್ಟಾರೆಯಾಗಿ ಗಮನಿಸಿದರೆ, ಕಳೆದ ಎಂಟೊಂಬತ್ತು ವರ್ಷಗಳಲ್ಲಿ ಪ್ರಯಾಗ, ವಿಂಧ್ಯಾವಾಸಿನಿ, ಕಾಶಿ, ಗಯಾಗಳಲ್ಲಿ ಸಾಕಷ್ಟು ಉತ್ತಮ ಬದಲಾವಣೆಗಳಾಗಿರುವುದನ್ನು ಕಂಡು ಸಂತೋಷವಾಯಿತು. ಎಲ್ಲೆಲ್ಲಿ ಸಾಧ್ಯವೂ ಅಲ್ಲೆಲ್ಲ ರಸ್ತೆಗಳನ್ನು ಅಗಲಗೊಳಿಸಿ ಕ್ಷೇತ್ರಕ್ಕೆ ಸಾಗುವ ಹಾದಿಯನ್ನು ಸುಗಮಗೊಳಿಸಲಾಗಿದೆ. ನದಿಯನ್ನು ಸ್ವಚ್ಚಗೊಳಿಸಲಾಗಿದೆ. ಪಂಡರೆಂದು ಹೇಳಿಕೊಂಡು ಬಂದು ಭಕ್ತರನ್ನು ಮುತ್ತಿ ಹಿಂಸಿಸುತ್ತಿದ್ದವರ ಸಂಖ್ಯೆ ಕಡಿಮೆಯಾಗಿದೆ. ಆದರೂ ದೇಶ ವಿದೇಶಗಳಿಂದ ಎಲ್ಲ ರೀತಿಯ ಭಕ್ತಜನರು ಲಕ್ಷಾಂತರ ಸಂಖ್ಯೆಯಲ್ಲಿ ದಿನವೂ ಬಂದು ಸೇರುವ ಇಂತಹ ಸ್ಥಳಗಳಲ್ಲಿ ಕೆಲವು ಅವ್ಯವಸ್ಥೆಗಳಿರುವುದು ಸಹಜವೇ.
ಕಾಶಿಯಲ್ಲಿ ಪೂಜೆ, ದರ್ಶನಗಳೆಲ್ಲ ಸಾಂಗವಾಗಿ ಸಾಗಿದರೂ, ಸರ್ಕಾರದ ವ್ಯವಸ್ಥೆಯಂತೆ ನಿಗದಿಪಡಿಸಿದ ಹಣವು ಸಾಲದೆಂಬಂತೆ ವರ್ತಿಸುತ್ತಾ ಹೆಚ್ಚಿನ ಹಣಕ್ಕಾಗಿ ಕಿರಿಕಿರಿ ಮಾಡುವ ಪಂಡರು ನಮಗೆ ದೊರೆತದ್ದು ನನಗೆ ವೈಯಕ್ತಿಕವಾಗಿ ಸ್ವಲ್ಪ ಕಸಿವಿಸಿಯನ್ನುಂಟುಮಾಡಿತು. ಎಲ್ಲರೂ ವಿದ್ಯಾವಂತರಾಗಿ ಉತ್ತಮ ಹಣಗಳಿಸುವ ಉದ್ಯೋಗಗಳನ್ನರಸಿ ವಲಸೆ ಹೋಗುತ್ತಿರುವ ಈ ಕಾಲದಲ್ಲಿ, ಇಂತಹ ಯಾತ್ರಾಸ್ಥಳಗಳಿಗೆ ಬಂದ ಭಕ್ತರು ಕೊಡುವ ಹಣದಿಂದಲೇ ಜೀವನವನ್ನು ಸಾಗಿಸಬೇಕಾದ ಅನಿವಾರ್ಯವಿರುವ, ನಮ್ಮ ಸಂಸ್ಕೃತಿ ಪರಂಪರೆಗಳನ್ನು ಇಷ್ಟರ ಮಟ್ಟಿಗೆ ಉಳಿಸಿಕೊಂಡು ತಮ್ಮ ಸ್ವಧರ್ಮವನ್ನು ಪಾಲಿಸುತ್ತಿರುವ ಇಂತಹ ಬ್ರಾಹ್ಮಣರಿಗೆ ಹಣ ಕೊಡುವುದು ಖಂಡಿತಾ ತಪ್ಪಲ್ಲ. ಆದರೆ ಕೊಟ್ಟಷ್ಟು ಸಾಲದೆನಿಸಿ ಮತ್ತೆ ಬೇಡಿ ಪಡೆಯುವ ದೈನ್ಯಸ್ಥಿತಿಯನ್ನು ಅವರು ನಿಷ್ಠುರದ ಮಾತುಗಳಾಡಿ ಬೈದು ಬೆದರಿಸಿ ಪಡೆಯುವ ಮೂಲಕ ನಿಭಾಯಿಸುತ್ತಿರುವುದನ್ನು ಕಂಡಾಗ ಅವರ ಬಗ್ಗೆ ಕನಿಕರಿಸಬೇಕೋ ಬೇಸರಿಸಬೇಕೋ ತಿಳಿಯದಂತಾಗುತ್ತದೆ. ಅವರವರ ಕರ್ಮಕ್ಕನುಸಾರವಾಗಿ ಅವರವರ ಜೀವನ. ಅವರ ಸಂಘರ್ಷಗಳೇನೆಂದು ಅರಿಯದೆ ಅವರ ವರ್ತನೆಯನ್ನು ಹೀಗೆ ಕಟುವಾಗಿ ವಿಮರ್ಶಿಸಿಸುವ ಸಂಕುಚಿತ ಬುದ್ಧಿ ತೋರಿದ್ದು ತಪ್ಪೆಂದು ಆಮೇಲೆ ಅನ್ನಿಸಿತು. ಇಂತಹ ಸಂದರ್ಭಗಳಲ್ಲಿ ನನ್ನ ಪತಿಯಂತೆ ಮನಸಾ ವಾಚಾ ಕರ್ಮಣಾ ನಿರ್ಲಿಪ್ತಿಯಿಂದ ಇರುವುದೇ ಯೋಗ್ಯವೆನ್ನಿಸುತ್ತದೆ. ಆದರೆ ಅಂತಹ ಆಲೋಚನೆಗಳನ್ನು ಮೈಗೂಡಿಸಿಕೊಂಡು ಸದಾ ಅಂತಹ ಮನಸ್ಥಿತಿಯನ್ನೇ ಹೊಂದಿರಲು ನನ್ನ ಕೆಟ್ಟ ಕರ್ಮವಿನ್ನೂ ಸವೆಯಬೇಕೇನೋ!
ಈ ತೀರ್ಥಕ್ಷೇತ್ರಗಳ ಸ್ಥಳ ಮಹಿಮೆಯೋ ಅಥವಾ ನಮ್ಮ ಭಾವದ ಪರಿಣಾಮವೋ ಇಂತಹ ಸ್ಥಳಗಳಲ್ಲಿ ಎಷ್ಟೇ ಅವ್ಯವಸ್ಥೆಗಳಿದ್ದರೂ ಪರಿಸರ ಶುಚಿಯೆನಿಸದಿದ್ದರೂ ಆ ಪರಿಸರದಲ್ಲಿರುವವರೆಗೆ ಒಂದು ರೀತಿಯ ಧನಾತ್ಮಕ ಭಾವವೇ ಮನಸ್ಸನ್ನು ಆವರಿಸಿರುವುದು ಮತ್ತು ಅಲ್ಲೆಲ್ಲ ಸಾಕಾರರೂಪದ ಭಗವಂತನ ದರ್ಶನವನ್ನು ಪಡೆದಾಗ ಧನ್ಯತೆಯ ಭಾವ ನೆಲೆಸುವುದು ನಮಗಾಗುವ (ನನ್ನವರಿಗೆ, ಅವರ ಜೊತೆ ಸೇರಿ ಮಾಗಿದ ಮೇಲೆ ನನಗೂ) ಅನುಭವ. ಇದಕ್ಕೆ ತದ್ವಿರುದ್ಧವಾದ ಅನುಭವವನ್ನು ಪಡೆಯುವವರೂ ಹಲವರಿರುತ್ತಾರೆ. ಇದರಲ್ಲಿ ಸರಿ ತಪ್ಪು ಎಂದೇನಿಲ್ಲ. ಎಲ್ಲವೂ ಅವರವರ ಭಾವಕ್ಕೆ…ನಮ್ಮ ಜಗತ್ತಿರುವುದು ನಮ್ಮ ಮನಸ್ಸಿನಲ್ಲಿ, ನಮ್ಮ ದೃಷ್ಟಿಕೋನದಲ್ಲಿ...ಹೊರಗೆಲ್ಲೋ ಅಲ್ಲ. ನಾವು ಹೇಗೆ ಭಾವಿಸುವೆವೋ ಪ್ರಪಂಚವು ನಮಗೆ ಹಾಗೆಯೇ ಕಾಣಿಸುತ್ತದಷ್ಟೇ.
ಒಟ್ಟಿನಲ್ಲಿ ‘ಸೊ ಕಾಲ್ಡ್ ಸೊಫೆಸ್ಟಿಕೇಟೆಡ್’ ಜೀವನವನ್ನು ನಡೆಸುತ್ತ, ‘ನಮ್ಮಂತೆಯೇ ಇರುವ’ ಜನರ ನಡುವೆಯಷ್ಟೇ ಬದುಕುವ ನಮಗೆ ಇಂತಹ ತೀರ್ಥಯಾತ್ರೆಗಳು ಎಲ್ಲ ರೀತಿಯ ಜನರೊಂದಿಗೆ ಬೆರೆತು ಹದವಾಗಲು ಕಲಿಸುತ್ತವೆ. ಆ ಪ್ರದೇಶಗಳ ಜನಜೀವನದ ವಾಸ್ತವ ಪರಿಚಯ ಮಾಡಿಸುವುದರ ಜೊತೆಗೆ ಪ್ರಕೃತಿಯ ಮುಂದೆ, ಭಗವಂತನೆಂಬ ಶಕ್ತಿಯ ಮುಂದೆ ನಾವೆಷ್ಟು ತೃಣರು ಎಂಬುದನ್ನು ಸಾಕ್ಷಾತ್ಕಾರ ಮಾಡಿಸಿ ನಮ್ಮ ಅಹಂಕಾರವನ್ನು ತಗ್ಗಿಸುತ್ತವೆ. ತೀರ್ಥಕ್ಷೇತ್ರಗಳನ್ನು ಪ್ರಕೃತಿಯ ಭವ್ಯತೆಯ ನಡುವೆ, ಎತ್ತರ ಪ್ರದೇಶಗಳಲ್ಲಿ ಸ್ಥಾಪಿಸುವ ಉದ್ದೇಶವೂ ಕ್ಷೇತ್ರದರ್ಶನ ಮಾಡಲು ಅತ್ಯಂತ ಪ್ರಯಾಸದಿಂದ ಹಾದಿಯನ್ನು ಕ್ರಮಿಸಿ ಅಹಂಕಾರವನ್ನು ನಾಶಗೊಳಿಸಿಕೊಳ್ಳುವುದೇ ಆಗಿದೆ ಅಲ್ಲವೇ? ಒಂದು ರೀತಿಯಲ್ಲಿ ನೋಡಿದರೆ, ಇಂದು ಎಲ್ಲೆಡೆಗೆ ತಲುಪಲು ಅನುಕೂಲಕರವಾಗುವಂತೆ ವಾಹನ, ವಸತಿಗಳ ವ್ಯವಸ್ಥೆಗಳನ್ನು ಮಾಡಿಕೊಂಡು ಆ ಪ್ರಯಾಸವನ್ನು ತಪ್ಪಿಸಿ ಅಂತಹ ಅವಕಾಶಗಳಿಂದ ವಂಚಿತವಾಗುತ್ತಿದ್ದೇವೆ.




Comments