top of page

ಬುದ್ಧಿ ಮನಸ್ಸುಗಳ ಹರಟೆ -ಒಂದು ಲವಲವಿಕೆಯ ಕಥೆ (version 1)

  • vidyaram2
  • Sep 16, 2023
  • 6 min read

Updated: Nov 18, 2023

ಇದು ಸತ್ಯ ಕಥೆ ಆದ್ದರಿಂದ ಕತೆಯಲ್ಲ, ಕಥೆ. ಅದೆಂತೆಂದೊಡೆ …


ಈ ಕಥೆ ಆರಂಭ ಆಗುವುದು 23 ವರ್ಷಗಳ ಹಿಂದಿನ ಸಿಂಹಾವಲೋಕನದಲ್ಲಿ. ಆಗಷ್ಟೆ ನಾನು ಒಂದು ವರ್ಷದ ಹಿಂದೆ ಸೇರಿದ್ದ ಪ್ರೈವೇಟ್ ಕಂಪನಿಯೊಂದನ್ನು ಬಿಟ್ಟು ಬೇರೊಂದು ಹೆಸರಾಂತ MNC ಕಂಪನಿಯನ್ನು ಸೇರಿದ್ದೆ (2000 ಇಸವಿ). ಇದು ಅಮೆರಿಕನ್ ಜನರೊಂದಿಗೆ ಕೆಲಸ ಮಾಡಲು ನನಗೆ ಸಿಕ್ಕ ಮೊದಲ ಅವಕಾಶ, ಎಲ್ಲವೂ ಹೊಸತು. ನಮ್ಮ software ಕ್ಷೇತ್ರದ ಸಾಮಾನ್ಯ ರೂಢಿಯಂತೆ ಹೊಸದಾಗಿ ಸೇರಿದ್ದ ನಾವು ಏಳೆಂಟು ಜನರಿಗೆ bug fix ಮಾಡುವ ಕೆಲಸ ಹಂಚಿದರು ನಮ್ಮ ಮ್ಯಾನೇಜರ್. ಅವರ ಹೆಸರು ಡಿ. ಜಯಕೃಷ್ಣನ್ ಅಂತ, ನಾವು JK ಸರ್ ಅಂತ ಕರೀತಿದ್ವಿ . ಮುಂದೆ ಈ ಸರ್ ಅನ್ನುವ culture ಕಡಿಮೆ ಆಗಿ ಎಲ್ಲರನ್ನೂ ಹೆಸರು ಹಿಡಿದು ಕರೆಯುವ ರೂಢಿ ಆದರೂ ಮೊದಮೊದಲ ಬಾಸುಗಳು (boss) ಎಂದಿಗೂ ಸರ್ ಆಗಿಯೇ ಉಳಿದರು. Bug tracking system ಎಂಬುದು ಹೊಸದಾಗಿ ಬರೆದ ಸಾಫ್ಟ್ವೇರ್ನಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಇರುವ ಸಾಫ್ಟ್ವೇರ್ ಸಾಧನ. ಅಂತಹ ಸಾಧನಗಳು ಹಲವಾರು ಹೆಸರಿನಲ್ಲಿ ಲಭ್ಯವಿರುತ್ತವೆ, ಇದು ನಮ್ಮ ಕಂಪನಿಯಲ್ಲಿ ಆಗ ಇದ್ದ ಬಹಳ ಕಾಮನ್ ಆದ ಸಾಧನದ ಹೆಸರು ಅಷ್ಟೇ. ಸಾಫ್ಟ್ವೇರ್ ಅನ್ನು ಟೆಸ್ಟ್ ಮಾಡುವ ಜನರು, ಬರೆಯುವ (develop ಮಾಡುವ) ಜನರು ಎಲ್ಲರಿಗೂ ಅದರಲ್ಲಿ ಅಕೌಂಟ್ ಇರುತ್ತೆ. ನಾವು ಲಾಗಿನ್ ಆಗಿ ನೋಡಿದಾಗ ನಮಗೆ ಕೊಡಲ್ಪಟ್ಟ ಕೆಲಸ ಅಲ್ಲಿ tasks ಎಂಬ ಹೆಸರಿನಲ್ಲಿ ನಮ್ಮನ್ನು ಕಾಯುತ್ತಿರುತ್ತದೆ. ಒಂದು ಟಾಸ್ಕನ್ನು ಬೇರೆ ಬೇರೆ ಹಂತಗಳಲ್ಲಿ ಮುಗಿಸಿ ನಮ್ಮ ಕೆಲಸ ಅದರಲ್ಲಿ ಎಂಟರ್ ಮಾಡಿದರೆ ಅದರಲ್ಲಿ ಯಾರು ಯಾರು ಭಾಗಿಗಳಾಗಿರುತ್ತಾರೋ ಅವರಿಗೆಲ್ಲ ಇಮೇಲ್ ಆಟೋಮ್ಯಾಟಿಕ್ ಆಗಿ ಹೋಗುವ ವ್ಯವಸ್ಥೆ ಅಲ್ಲಿ ಇರುತ್ತೆ. ಆ ಭಾಗಿಗಳಲ್ಲಿ ನಮ್ಮ ಮ್ಯಾನೇಜರ್, ಅವರ ಮ್ಯಾನೇಜರ್, ಆ ಪ್ರೋಜೆಕ್ಟಿನ ಡೈರೆಕ್ಟರ್, ಬಹಳ ಮಹತ್ವದ ಸಿಸ್ಟಮ್ ಆದರೆ ಆ ಡೆಪಾರ್ಟ್ಮೆಂಟಿನ VP ಎಲ್ಲರೂ ಇರ್ತಾರೆ. ನಾವು ಅದನ್ನು ಡಿಪಾರ್ಟ್ಮೆಂಟ್ ಎನ್ನದೆ ವರ್ಟಿಕಲ್ ಎನ್ನುತ್ತಿದ್ದೆವು. anyway ಹೆಸರಿನಲ್ಲೇನಿದೆ? ನಾವು ಆ ಸಿಸ್ಟಮ್ ನಲ್ಲಿ ಅಪ್ಡೇಟ್ ಮಾಡಿದರೆ ಅದರ ಒಂದು ಇಮೇಲ್ ನೋಟಿಫಿಕೇಶನ್ ಈ ಎಲ್ಲರಿಗೂ ಹೋಗುತ್ತದೆ. ಇದು ಈಗ ಎಲ್ಲರಿಗೂ ಗೊತ್ತಿರುವ ಸಾಮಾನ್ಯ ವಿಷಯ. ಆದರೆ ಅದು ನನಗೆ ಮೊದಲು ಬಗ್ ಫಿಕ್ಸ್ ಮಾಡಿದಾಗ ತಿಳಿದಿರಲಿಲ್ಲ!!


ಆಗೆಲ್ಲ ಈಗಿನಂತೆ ಕೆಲಸಕ್ಕೆ ಸೇರಿದ ಕೂಡಲೇ ಒಂದೋ ಮೂರೋ ಆರೋ ತಿಂಗಳುಗಳು ಟ್ರೇನಿಂಗ್ ಕೊಟ್ಟು ಎಲ್ಲ ವಿಷಯಗಳನ್ನ ತಿಳಿಸಿಕೊಡುವ ಪದ್ಧತಿ ಇರಲಿಲ್ಲ. ಒಂದು ಸಿಸ್ಟಮ್ ಹೇಗೆ ಕೆಲಸ ಮಾಡುತ್ತೆ ಅನ್ನುವ ವಿಷಯವೊಂದೇ ಅಲ್ಲದೆ ಇಮೇಲ್ ಹೇಗೆ ಬರೆಯಬೇಕು, ಕ್ಲೈಂಟ್ ಹತ್ತಿರ ಹೇಗೆ ಮಾತನಾಡಬೇಕು (ಭಾಷೆ ಚೆನ್ನಾಗಿ ಬಂದರೂ ಹೇಗೆ ಮಾತನಾಡಬೇಕೆಂಬ ವಿವೇಕ ಆ ವಯಸ್ಸಿನಲ್ಲಿ ಇರುವುದಿಲ್ಲ ಮತ್ತು ಪಾಶ್ಚತ್ಯ ಸಂಸ್ಕೃತಿಯ ಗಂಧ ಗೊತ್ತಿಲ್ಲದಿದ್ದರೆ ತಿಳಿಯದೆ ಆಗುವ ಅಚಾತುರ್ಯಗಳು ಹೆಚ್ಚಿರುವುದರಿಂದ) ಮುಂತಾದ ವಿಷಯಗಳನ್ನೂ ವಿವಿಧ ಟ್ರೈನಿಂಗುಗಳ ಮುಖಾಂತರ ತಿಂಗಳುಗಟ್ಟಲೆ ತಿಳಿಸಿಕೊಡುವುದು ಆಮೇಲಿನ ಕಾಲದಲ್ಲಿ ಅಳವಡಿಸಿಕೊಳ್ಳಲಾದ ಪದ್ಧತಿ. ನಮ್ಮಂತವರನ್ನು ನೋಡಿಯೇ ಪಾಠ ಕಲಿತು ತಂದ ಪದ್ಧತಿ. ಬದಲಾವಣೆಗೆ ಮುಖ್ಯ ಪ್ರೇರಣೆ ಇಂತಹ trial and error ಅಲ್ಲವೇ?


ಸರಿ, ನನಗೆ ಮೊದಲ ಬಗ್ assign ಆಯಿತು. ಅತ್ಯುತ್ಸಾಹದಿಂದ ಅದನ್ನು ಓದಿ, ಅರ್ಥ ಮಾಡಿಕೊಂಡು ಆರೇಳು ದಿನಗಳಲ್ಲಿ ಸಮಸ್ಯೆ ಬಗೆಹರಿಸಿದೆ. ಇಲ್ಲಿ ಸ್ವಲ್ಪ ಹಿನ್ನೆಲೆ ಹೇಳಿದರೆ ಸೂಕ್ತ ಎನ್ನಿಸುತ್ತೆ. ಹಾಗಾಗಿ a small detour… ನಮ್ಮದು ಟೆಲಿಕಾಂ ಕಂಪನಿ. Alcatel ಎನ್ನುವ ಅಂದಿನ ಪ್ರತಿಷ್ಠಿತ ಅಮೆರಿಕನ್ ಟೆಲಿಕಾಂ giant ನನ್ನ ಮೊದಲ ಕ್ಲೈಂಟ್. ಅವರ ಒಂದು ಬಹು ಮುಖ್ಯವಾದ AHDSL ಎಂಬ ದೊಡ್ಡ್ಡ ಸಿಸ್ಟಮ್ ನ ಒಂದು ಲೈನ್ ಕಾರ್ಡ್ ಎನ್ನುವ ಸಣ್ಣ ಪಾರ್ಟಿನ ಒಂದು ಸಣ್ಣ ಸಮಸ್ಯೆ ನನಗೆ ಸಿಕ್ಕ ಮೊದಲ ಬಗ್. ಸಿಸ್ಟಮಿನ ಕಾರ್ಯನಿರ್ವಹಣೆಗೆ ಏನೂ ತೊಂದರೆ ಆಗದ ಒಂದು ಪಾಪದ ನಿರುದ್ರಪವಿ LED ದೀಪ ಯಾವಾಗ ಹತ್ತಬೇಕೋ ಆಗ ಹತ್ತುತ್ತಿರಲಿಲ್ಲ ಅಷ್ಟೇ. ಹೊಸದಾಗಿ ಬಂದವರಿಗೆ ಸಿಸ್ಟಮ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಅರ್ಥ ಮಾಡಿಕೊಳ್ಳಲು ಮತ್ತು ಅವರ ಸಾಫ್ಟ್ವೇರ್ ಸ್ಕಿಲ್ ಪರೀಕ್ಷಿಸಲು ಪ್ರಾರಂಭದಲ್ಲಿ ಎಲ್ಲರಿಗೂ ಇಂತಹದೇ ಬಗ್ಸ್ ಕೊಡುತ್ತಾರೆ ಚಾಣಾಕ್ಷರಾದ ಮ್ಯಾನೇಜರ್ಗಳು. ಅವರ ಉದ್ದೇಶ ಪರೋಕ್ಷವಾಗಿ ಟ್ರೇನಿಂಗ್ ನೀಡುವುದು. ಆ ಬಗ್ solve ಮಾಡುವಾಗ ನಾವು ನಡು ನಡುವೆ ಹೋಗಿ ಅವರನ್ನು ನಮಗೆ ಅರ್ಥ ಆಗದ್ದನ್ನು ಕೇಳಿದರೆ ಆಗ ಆ ಕುರಿತು ವಿವರಿಸಿ ಹೇಳುವುದು ಅವರ ಜಾಣತನ. ಈಗಿನಂತೆ ಸುಮ್ಮನೆ ಎಲ್ಲರಿಗೂ ಎಲ್ಲ ವಿಷಯ ppt ಪ್ರದರ್ಶಿಸಿ ಹೇಳಿಕೊಟ್ಟರೆ ಎಲ್ಲರ ಸಮಯ ವ್ಯರ್ಥ, ಶ್ರದ್ಧೆಯಿಂದ ಕೇಳಿ ಅರ್ಥ ಮಾಡಿಕೊಳ್ಳುವವರು ಕಡಿಮೆ, ಕೆಲಸ ಬಂದಾಗ ನೋಡಿಕೊಳ್ಳೋಣ, ಈಗ ಟ್ರೈನಿಂಗ್ ಪಿರಿಯಡ್ (ಅದನ್ನು honeymoon ಪಿರಿಯಡ್ ಅಂತಾರೆ ನಮ್ ಸಾಫ್ಟ್ವೇರ್ ಜನ), ಯಾಕೆ ಸುಮ್ನೆ ತಲೆ ಕೆಡಿಸಿಕೊಳ್ಳುವುದು ಅನ್ನೋರೆ ಹೆಚ್ಚು ಇರುವುದು. ಹಾಗಾಗಿ ನಮ್ಮ ಪುಣ್ಯದಿಂದಲೇ ಆ ಕಾಲದಲ್ಲಿ ನಮಗೆ ಸಿಕ್ಕ ಉತ್ತಮ ಕಂಪನಿಯಲ್ಲಿ ಉತ್ತಮ ಕೆಲಸ, ಉತ್ತಮ ಬಾಸ್ ( JK ಸರ್ ಅಂತವರು) ಇವರೆಲ್ಲ ನಮ್ಮ ಪ್ರೊಫೆಷನಲ್ ಜೀವನ ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳುವುದರಲ್ಲಿ ಗುರುಗಳಾಗಿ ದೊಡ್ಡ ಸಹಾಯ ಮಾಡಿದ್ದಾರೆ.


ಚಿತ್ರದುರ್ಗ ಎಂಬ ಸಾಮಾನ್ಯ ಸಣ್ಣ ಊರಿನಲ್ಲಿದ್ದ SJMIT ಎಂಬ ಬಹು ಸಾಮಾನ್ಯ ಕಾಲೇಜಿನಲ್ಲಿ ಓದಿ ಒಂದು ವರ್ಷದ ಹಿಂದಷ್ಟೇ ಕೆಲಸಕ್ಕೆಂದು ಬಂದಿದ್ದ ನಾನು ನನ್ನ ಬಗ್ ಅನ್ನು ಬಹು ಸೀರಿಯಸ್ ಆಗಿ ತೆಗೆದುಕೊಂಡೆ. ಇಲ್ಲಿ ಇನ್ನೊಂದು ಬೇಡವಾದ ಒಳ ಪುರಾಣ: ಬೆಂಗಳೂರಿನ ಕೆಲವು ಪ್ರತಿಷ್ಠಿತ ಕಾಲೇಜುಗಳಲ್ಲಿ, ಆಗ ನಂಬರ್ ಗೇಮ್ ನಲ್ಲಿ ಮೊದಲ ಸ್ಥಾನದಲ್ಲಿದ್ದ E&C ಅಲ್ಲದಿದ್ದರೂ ಎರಡನೆಯ ಸ್ಥಾನದಲ್ಲಿದ್ದ CS ಸಿಗುವಷ್ಟು ಉತ್ತಮ CET rank ಪಡೆದಿದ್ದರೂ, ಅಲ್ಲಿ ಬಿಟ್ಟು ಓದಿಸುವ ಅನುಕೂಲ ಇಲ್ಲದ್ದರಿಂದ ನಮ್ಮೂರಲ್ಲೇ ಓದಿದ್ದೆ. ಮತ್ತೆ ನೋಡಿ, topper ಕೂಡ ಆಗಿದ್ದೆ ಅಂತ ಹೇಳೋದಂತೂ ಬೇಡವೇ ಬೇಡ ಅನ್ನಿಸುತ್ತೆ ಬುದ್ಧಿಗೆ, ಆದರೆ ಮನಸ್ಸು ಬರಿ ಎಂದು ಪ್ರಚೋದಿಸುತ್ತೆ , ನನ್ನ ಕಂಟ್ರೋಲ್ ಇಲ್ಲದೆ ಕೈ ಬರೆದೇ ಬಿಟ್ಟಿತು. ಯಾಕೋ ಡಿಲೀಟ್ ಬಟನ್ ಕೆಲಸವೇ ಮಾಡ್ತಿಲ್ಲ ;) ಸರಿ ಬಗ್ಗನ್ನು ಸೀರಿಯಸ್ ಆಗಿ ತಗೊಂಡಾಯ್ತು. ಪ್ರಾಮಾಣಿಕತೆ ನನ್ನ ಹುಟ್ಟು ಗುಣ (ಸುಟ್ಟರೂ ಹೋಗಲ್ವೇನೋ ಗೊತ್ತಿಲ್ಲ). ಜೊತೆಗೆ ಯಾರನ್ನೂ ಏನೂ ಕೇಳಲು ಹಿಂಜರಿಕೆ, ಸಂಕೋಚ (ನಾನು ಸಣ್ಣ ಊರಿಂದ ಲೋಯರ್ ಮಿಡ್ಲ್ ಕ್ಲಾಸ್ ಬ್ಯಾಕ್ಗ್ರೌಂಡ್ ಇಂದ ಬಂದಿದ್ದು ಅಂತ ಅದಕ್ಕೆ ಮೇಲೆ ಹೇಳಿದ್ದು, ಕೊಚ್ಚಿಕೊಳ್ಳೋಕೆ ಖಂಡಿತಾ ಅಲ್ಲಪ್ಪ) ಅದರ ಮೇಲೆ ದೇವರು ಕೊಟ್ಟ ಸ್ವಲ್ಪ ಬುದ್ಧಿವಂತಿಕೆ (ನೋಡಿ ನನ್ನ ಬುದ್ಧಿ ಖುಷಿ ಪಡುತ್ತಿದೆ ಈ ಮಾತು ಬರೆದಾಗ, ಅದಕ್ಕಾಗಿ ಬೇಡ ಅಂತ ಹೇಳ್ತಾನೆ ಇಲ್ಲ 😀). ಅದಕ್ಕಾಗಿ JK ಸರ್ ಅವರನ್ನು ಏನೂ ಪ್ರಶ್ನೆ ಕೇಳದೆ ನಾನೇ ಹಗಲೂ ರಾತ್ರಿ code ಎಲ್ಲ ನೋಡಿ ಕಲಿತು (C ಮತ್ತು assembly language ಗಳಲ್ಲಿ ಕೆಲಸ ಮಾಡಿ ಮೊದಲು ಒಂದು ವರ್ಷದ ಅನುಭವ ಇತ್ತಲ್ಲ), ಸರ್ ನನ್ನ ಕ್ಯಾಬಿನ್ ಗೆ ಬಂದು ಹೇಗೆ ನಡೀತಿದೆ ಎಂದು ಕೇಳಿದಾಗ ಮಾತ್ರ ಏನೂ ಅರ್ಥ ಆಗದೆ ಇರುತ್ತಿದ್ದ ಕೆಲವು ಡೌಟ್ಸ್ ಪರಿಹರಿಸಿಕೊಂಡು, ಅಂತೂ ಇಂತೂ ಆ LED ನನ್ನ ಸಿಸ್ಟಮ್ ಪ್ರಕಾರ on, off ಆಗುವ ಹಾಗೆ ಮಾಡಿಸಿದೆ! ಈ ವಿಷಯವನ್ನು ಬಹಳ ಖುಷಿಯಿಂದ JK ಸರ್ಗೆ ಹೇಳಿದಾಗ ಅವರು ಪರಿಶೀಲಿಸಿ ಸರಿ ಇದೆ, ವೆರಿ ಗುಡ್, ಏನಾಗಿತ್ತು ಅಂತ ಕಾರಣ (root cause) ಬರೆದು ಬಗ್ ಸ್ಟೇಟಸ್ ಅಪ್ಡೇಟ್ ಮಾಡಿ ಅಂದರು. ಭಾಷೆ ಬರೆಯಲು ಚೆನ್ನಾಗಿ ಬರುತ್ತಿದ್ದ ನಾನು ಮಾಡಿದೆ. ಅವರಿಗೆ ಒಮ್ಮೆ ತೋರಿಸಿದೆ. ಏನೇನು ಮಾಡಿದೆ ಎಂದು ಎಲ್ಲಾ ಡೀಟೇಲ್ ಆಗಿ ಬರೆದಿದ್ದರಿಂದ ಸ್ವಲ್ಪ ಉದ್ದವೇ ಆಗಿತ್ತು, ನನ್ನ root cause analysis. ಅವರೂ ಕಣ್ಣಾಡಿಸಿ ಮಿನುಗುವ ಕಣ್ಣಿಂದ ನಕ್ಕು ಸರಿ ಇದೆ, submit ಮಾಡಿ ಅಂದ್ರು. ನಾನು ಮಾಡಿದೆ. ನಾವು ಸಂಜೆ ಕೆಲಸ ಮುಗಿಸಿ ಮನೆಗೆ ಹೋದಮೇಲೆ ಬೆಳಗಾಗುತ್ತಿದ್ದ ನಮ್ಮ ಅಮೆರಿಕನ್ counterparts ಮರುದಿನ ಬೆಳಿಗ್ಗೆ ನಾವು ಬರುವುದರ ಒಳಗೆ ನೋಡಿ, feedback ಕೊಡುತ್ತಿದುದು ರೂಢಿ. ಮರುದಿನ ಬೆಳಿಗ್ಗೆ ಉತ್ಸುಕಳಾಗಿ ಏನು ಫೀಡ್ಬ್ಯಾಕ್ ಸಿಕ್ಕಿರುತ್ತೆ ಅಂತ ಚೆಕ್ ಮಾಡಿದೆ. ನೋಡಿದರೆ ಯಾರೋ ಒಬ್ಬರ ( Steve ಅಂತೇನೋ ಹೆಸರು ಎಂದು ನೆನಪು) ಒಂದು ಸಾಲು feedback ಇತ್ತು. ನನಗೆ ಇಂದಿಗೂ ಮರೆಯದ ಆ ಸಾಲು ಇಂತಿತ್ತು.


He has done a commendable job!!! Approved!!


ನಾನು ಹುಡುಗನೋ ಹುಡುಗಿಯೋ ಅವನಿಗೆ ಗೊತ್ತಿರಲಿಲ್ಲ, ಆದ್ದರಿಂದ He ಎಂದಿದ್ದ ಅಂತ ನನಗೆ ಬಹಳ ನಗು ಬಂದರೂ ನನ್ನ ಕೆಲಸಕ್ಕೆ ಶಭಾಷ್ ಅಂದಿದ್ದಕ್ಕೆ ತುಂಬಾ ಖುಷಿ ಆಯಿತು. ತಕ್ಷಣವೇ JK ಸರ್ ಹತ್ತಿರ ನನ್ನ ಮೊದಲ ಬಗ್ ಫಿಕ್ಸ್ ಆಯಿತು, ಮುಂದಿನ ಕೆಲಸ ಕೊಡಿ ಎಂದು ಕೇಳಲು ಹೋದೆ (ಹಳೆಯ ಕಂಪನಿಗೆ ಹೋಲಿಸಿದರೆ ನನಗೆ ಇಲ್ಲಿ ಸಂಬಳ ತುಂಬಾ ಜಾಸ್ತಿ ಇತ್ತು, ತಿಂಗಳಿಗೆ 8000. ಹಾಗಾಗಿ ನನಗೆ ಕೆಲಸ ಇಲ್ಲದೆ ಕೂತರೆ ದುಡ್ಡಿಗೆ ದ್ರೋಹ ಬಗೆಯುತ್ತಿರುವೆ ಎನ್ನುವ ಭಾವನೆ ಹಳೆಯ ಕಂಪನಿಗಿಂತ ಹೆಚ್ಚಾಗಿ ಕಾಡುತ್ತಿತ್ತು). ಅವರು ಎಲ್ಲರಿಗಿಂತ ಬೇಗ ಮುಗಿಸಿ ಮತ್ತೆ ಕೆಲಸ ಕೇಳುತ್ತಿದ್ದಾಳೆ ಎಂದು ಖುಷಿ ಪಡಲಿ ಎಂಬ ಆಸೆಯೂ ಇಲ್ಲದಿರಲಿಲ್ಲ ಅಂತ ಹೇಳೋದೇ ಬೇಡ, ಈಗಾಗಲೇ ನಿಮಗೆ ನನ್ನ ಬುದ್ಧಿ, ಮನಸ್ಸುಗಳ ಪರಿಚಯ ಸಾಕಷ್ಟು ಆಗಿದೆ. ಅವರು ಮತ್ತೆ ಮಿನುಗುವ ಕಣ್ಣುಗಳಿಂದ ನಕ್ಕು ನಾನೆ ನಿನ್ನ ಹತ್ತಿರ ಮಾತಾಡಬೇಕು ಅಂತ ಇದ್ದೆ, ನೋಡಿದೆಯಾ Steve ನ ರಿಪ್ಲೈ ಅಂದ್ರು. ನಾನು ಹೂ ಸರ್ ಅಂದೆ. ಅವರು ನಕ್ಕು ಅವನು ಏನು ಬರೆದದ್ದು ಅರ್ಥ ಆಯ್ತಾ ಅಂದ್ರು. ನಮ್ಮ ಸಂಭಾಷಣೆಯೂ ಇಂಗ್ಲಿಷ್ ನಲ್ಲಿ ಇದ್ದದ್ದರಿಂದ (ಅವರು ಮಲಯಾಳಿ, ಒಂದು ವೇಳೆ ಕನ್ನಡಿಗ ಆಗಿದ್ರೂ ಆಫೀಸ್ ಅಲ್ಲಿ ಆಗ ನಾವು ಕನ್ನಡ ಮಾತಾಡುತ್ತಿದ್ದುದು ಕಡಿಮೆಯೇ ಇತ್ತು ಅನ್ನಿಸುತ್ತೆ) ನಾನು “Yes Sir, he said the fix looks good, you have done a good job” ಅಂತ ಇಂಗ್ಲೀಷಿನಲ್ಲಿದ್ದ ಸಾಲುಗಳನ್ನು ಇಂಗ್ಲಿಷಿಗೆ translate ಮಾಡಿ ಹೇಳಿದೆ. ಆಗ ಅವರು ಜೋರಾಗಿ ನಕ್ಕು, ಅವನು ಯಾರು ಗೊತ್ತಾ, ನಮ್ಮ ವರ್ಟಿಕಲ್ VP. ಅವನು ಎಷ್ಟು busy ಇರ್ತಾನೆ. ಈ ಪ್ರಾಜೆಕ್ಟ್ ಇಂಪಾರ್ಟೆಂಟ್ ಇರೋದ್ರಿಂದ ಅವನೂ ಇಮೇಲ್ ಚೈನ್ ಅಲ್ಲಿ ಇದ್ದಾನೆ ಅಷ್ಟೇ. ಈ silly bug fix ಅವನ್ಯಾಕೆ ನೋಡಿ ರಿಪ್ಲೈ ಮಾಡಿದ ಅಂದರೆ ನೀನು ಅಷ್ಟು ಚಿಕ್ಕ ಬಗ್ ಕುರಿತು ರೂಟ್ ಕಾಸ್ ಬರೆದ ರೀತಿಗಾಗಿ. ಏನೋ ಘನಂದಾರಿ ಬಗ್ ಫಿಕ್ಸ್ ಮಾಡಿ, ಅದು ತಪ್ಪಾಗಿದ್ದ ಕಾರಣ ವಿವರಿಸಿ ದೊಡ್ಡ ಸಹಾಯ ಮಾಡಿದ್ದೀಯಾ ಅನ್ನೋ ಹಾಗೆ ಕೊಚ್ಚಿ ಬರೆದಿರೋದು ನೋಡಿ ನಗು ಬಂದು taunt ಕೊಟ್ಟಿದ್ದು ಅವನು, ಇಲ್ಲದಿದ್ದರೆ ಅವನು ನನ್ನ (JK ಅವರ) ಇಮೇಲ್ ಅಲ್ಲದೆ ಇನ್ಯಾರಿಗೂ ಉತ್ತರಿಸುವುದೇ ಇಲ್ಲ ಎಂದರು!!! ನನಗೆ ಬಹಳ ಅವಮಾನ ಆಗೋಯ್ತು. ನಾನೇನೂ ಸತ್ಯಕ್ಕೂ ಕೊಚ್ಚಿಕೊಳ್ಳೋಹಾಗೆ ಬರೆದಿಲ್ಲ ಸರ್ ಎಂದೆ, ಅವರು I know, its ok, be careful from now onwards ಅಂದ್ರು. ನನಗೆ ಸರ್ ಮೇಲೂ ಮನಸ್ಸಲ್ಲಿ ಕೋಪ ಬಂತು, ನಿನ್ನೆ ತೋರಿಸಿದ್ದೆ ಅವರಿಗೆ, ಅವರೇ ಕಳುಹಿಸು ಅಂದಿದ್ದು ಅಂತ. ಆದರೆ ಆಗ ಹಾಗೆಲ್ಲ ಹೇಳುವ ಧೈರ್ಯ ಇಲ್ಲದ್ದರಿಂದ ಮನದಲ್ಲಿ ಮುದುಡಿ ನಾಲ್ಕಾರು ದಿನ ಅವಮಾನದ ಸಂಚಾರಿ ಭಾವದಲ್ಲಿ ಇದ್ದೆ ಅಷ್ಟೇ.


ಮುಂದೆ ನನಗೆ ಅಲ್ಲಿಯ ಒಬ್ಬ ಬಾಸ್ ಆಗಿ Rebeca Marthinsen (ಹೌದು, ಇದೆ ಅವರ ಹೆಸರಿನ ಕರೆಕ್ಟ್ ಸ್ಪೆಲ್ಲಿಂಗ್, ಹೆಸರು ಬರೆಯುವಾಗ ಎಂದೂ ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಬಾರದೆಂಬ ಕಾಳಜಿಯನ್ನೂ ಅವರ ಮಾತಿನಲ್ಲೇ ಕೇಳಿ ತಿಳಿದಿದ್ದು ನಾನು, ಅಂದಿನಿಂದ ನನಗೆ ತಿಳಿದಷ್ಟು ಅದನ್ನು ಪಾಲಿಸಿಕೊಂಡು ಬಂದಿದ್ದೇನೆ ) ಎನ್ನುವ ಮಧ್ಯ ವಯಸ್ಸಿನ technical manager ಜೊತೆ ಕೆಲಸ ಮಾಡುವಂತೆ ಸೂಚಿಸಿದರು. ಅವರು ಆ ಕೆಲಸದಲ್ಲಿ 15-20 ವರ್ಷಗಳ ಅನುಭವವಿದ್ದ ನುರಿತ ಮಹಿಳೆ. ಅವರು ಕೊಟ್ಟ ಕೆಲಸ ಶ್ರದ್ಧೆಯಿಂದ ಮಾಡ್ತಾ ಖುಷಿಯಾಗಿದ್ದೆ. ಮೂರು ತಿಂಗಳಲ್ಲಿ ನನ್ನ ಜೊತೆ ಸೇರಿದವರಲ್ಲಿ ಮೊದಲಿಗೆ ನನಗೆ onsite ಹೋಗುವ ಅವಕಾಶ ಸಿಕ್ಕಿತು. ಕ್ಯಾಲಿಫೋರ್ನಿಯಾದ ಪೆಟಲುಮ (Petaluma) ಎಂಬ ಸ್ಥಳದಲ್ಲಿದ್ದ Alcatel ಕಂಪನಿಯಲ್ಲಿ ಅವರ ಹತ್ತಿರವೇ ಕುಳಿತು 6 ತಿಂಗಳು ಕಲಿಯುವ ಕೆಲಸ cum ಟ್ರೈನಿಂಗ್ ದೊರಕಿತು. ಆರು ತಿಂಗಳು ಕಳೆದು ನಾನು ಹೊರಡುವಾಗ ಅಲ್ಲಿ ಎಲ್ಲರಿಗೂ ಮಾಡುವ ಸಣ್ಣ ಬೀಳ್ಕೊಡುಗೆ ಸಮಾರಂಭದಲ್ಲಿ ರೆಬೆಕಾ ನನ್ನನ್ನು ಇಲ್ಲಿ ಬಂದು ನೀನೇನು ಕಲಿತೆ ಎಂದು ಕೇಳಿದರು. ನೀವು ಬರೆಯುವ ಇಮೇಲ್ಗಳನ್ನು ನೋಡಿ ನಿಮ್ಮಿಂದ ಇಮೇಲ್ ಹೇಗೆ ಬರೆಯಬೇಕು ಎಂಬ ಸರಿಯಾದ ಟೆಕ್ನಿಕ್ ಕಲಿತೆ ಎಂದೆ ಪ್ರಾಮಾಣಿಕವಾಗಿ. ಯಾಕೆಂದರೆ ಉಳಿದ ಎಲ್ಲಾ skills ಕಲಿಯಲು ನನ್ನ ಬುದ್ಧಿ ನನಗೆ ಏನೂ ತ್ರಾಸ ಕೊಡೋದಿಲ್ಲ ಪಾಪ, ಆದರೆ ನಮ್ಮ ಭಾವನೆ ಯಾರ ಬಳಿ ಹೇಗೆ ವ್ಯಕ್ತ ಮಾಡಿದರೆ ಹೆಚ್ಚು ಸೂಕ್ತ ಎನ್ನುವ ಈ soft skill ಬುದ್ಧಿಗೆ ಹೊಳೆದಿದ್ದು ರೆಬೆಕಾ ಬರೆಯುವ ಇಮೇಲ್ಗಳನ್ನ ಗಮನಿಸಿದಾಗಲೇ! ನನಗೆ ಬಹಳ ಮುದ ಕೊಡುತ್ತಿದ್ದ ಅವರ ಟೆಕ್ನಿಕಲ್ ಬರಹಗಳೂ ಕೂಡ ಎಷ್ಟು ಸೂಕ್ತವಾಗಿ, ಮುದವಾಗಿ ಇರುತ್ತಿದ್ದವು ಅಂದರೆ ನಾನು ಅದನ್ನು 3-4 ಬಾರಿ ಓದಿ ಖುಷಿ ಅನುಭವಿಸುತ್ತಿದ್ದೆ! ಸಾಹಿತ್ಯಿಕ ಪರಿಭಾಷೆಯಲ್ಲಿ ಹೇಳುವುದಾದರೆ ಶುಷ್ಕವಾದ ಟೆಕ್ನಿಕಲ್ ಬರವಣಿಗೆಗಳಲ್ಲಿಯೂ ಮನಸ್ಸಿಗೆ ಹಾಯೆನಿಸುವ ಯಾವುದೋ ರಸ ನಿಷ್ಪತ್ತಿ ಆಗುತ್ತಿತೇನೋ! (ಕ್ಷಮಿಸಿ, ರಸಗಳ ಹೆಸರುಗಳೆಲ್ಲ ಸರಿಯಾಗಿ ಗೊತ್ತಿಲ್ಲ, ಯಾಕೆಂದರೆ ಇದುವರೆಗೆ ನಾನು ಭಾವಕ್ಕಷ್ಟೇ ಗಮನ ಕೊಡ್ತಾ ಬಂದಿದ್ದೆ, ಅದರ ಪರಿಭಾಷೆ ಏನಿರಬಹುದು ಅಂತ ಯೋಚಿಸಿಯೇ ಇರಲಿಲ್ಲ. Somehow that had never caught my attention! ಸರಿ, ರೆಬೆಕಾ ಅವರಿಗೆ (ಉಹೂಂ.. ಯಾಕೋ ರೆಬೆಕಾ ಅವರು ಅನ್ನಲು ಸರಿ ಹೋಗಲ್ಲ, ಯಾಕೆಂದರೆ ಅಲ್ಲಿಯ ಸಂಸ್ಕೃತಿಯಂತೆ ನಾವು ಅವರನ್ನು ಹೇ ರೆಬೆಕಾ ಎಂದೇ ಸಂಭೋದಿಸುತ್ತಿದ್ದದ್ದು)... ಆಶ್ಚರ್ಯ ಆಯಿತು, ಇದುವರೆಗೆ ಯಾರೂ ನನ್ನ ಇಮೇಲ್ ರೈಟಿಂಗ್ ಸ್ಟೈಲ್ ಚೆನ್ನಾಗಿದೆ ಅಂತ ಹೇಳೇ ಇರಲಿಲ್ಲ ಎಂದು ನಕ್ಕು ಹೇಳಿ ನನ್ನನ್ನು hug ಮಾಡಿ ಬೀಳ್ಕೊಟ್ಟರು.


ಇಲ್ಲಿಯವರೆಗೆ ಫ್ಲಾಶ್ ಬ್ಯಾಕ್ ತಂತ್ರದಲ್ಲಿ ನಿರೂಪಣೆಯ ಮುಗಿಯಿತು. ಇನ್ನು ಈಗ ಲೇಖನದ ಚರ್ಚೆ ಇರುವ ವಿಷಯಕ್ಕೆ ಬರೋಣ.


ಇಂದಿನವರೆಗೂ ನಾನು ಸುಮಾರು ಇಂಗ್ಲಿಷ್ ಮತ್ತು ಕನ್ನ್ನಡ ಬ್ಲಾಗ್ಗಳನ್ನ ಬರೆದಿದ್ದೇನೆ, ಎಲ್ಲಾ ಪರ್ಸನಲ್ ಅನುಭವಗಳು, ಪುರಾಣಗಳು ಅಷ್ಟೇ. ಯಾರಿಗೂ ಹಂಚಿಯೂ ಇಲ್ಲ, ಹಂಚಿದ್ರೆ ಓದಲೂ ಬೋರ್ ಆಗಬಹುದು. ಆದರೆ ಬರೆಯುವಾಗ ನಾನು ಅಲ್ಲಿ ವ್ಯಕ್ತ ಪಡಿಸುವ ರೀತಿ, ಶೈಲಿ, ಬರೆಯುವಾಗಲೇ ನಾನು ಅನುಭವಿಸುವ ಮುದ ಎಲ್ಲ ರೆಬೆಕಾ ಅವರನ್ನು ನೋಡಿ ಕಲಿತದ್ದೇ (ರೆಬೆಕಾ ಕೂಡ ಬರೆಯುವಾಗ ಮುದ ಅನುಭವಿಸಿದ್ದರೋ ಎಂಬುದು ಹೇಳಲಾರೆ, ಅಲ್ಲಿ ಎಲ್ಲರ ಶೈಲಿ ಸಾಮಾನ್ಯ ಹೀಗೆಯೇ ಇರುವುದು)! ಬಹು ಹಗುರವಾಗಿ ಪಂಚ್, pun, ವ್ಯಂಗ್ಯ, ಖುಷಿ, ಸ್ವಾರಸ್ಯ ಎಲ್ಲವನ್ನೂ subtle ಆಗಿ ಬರೆಯುವುದು, ಸಂಧರ್ಭಕ್ಕೆ ಸೂಕ್ತವಾದಷ್ಟೇ ಬರೆಯುವುದು - ಇವೇ ನನ್ನ ಲೇಖನಗಳ ಸ್ಥಾಯೀ ಗುಣವಿರಬೇಕು ಎಂದು ನನ್ನ ಊಹೆ. ಕೆಲವೊಮ್ಮೆ ಈಗ ಗುರುಗಳು ‘ಚೆನ್ನಾಗಿದೆ, ಇನ್ನೂ ಹಿಗ್ಗಿಸಿ’ ಎಂದು ಪ್ರತಿಕ್ರಿಯಿಸಿದರೆ ನನಗೆ ಬಲು ಪೇಚಾಟಕ್ಕಿಟ್ಟುಕೊಳ್ಳುವುದೂ ಇದೇ ಕಾರಣಕ್ಕೇನೋ! ಈ ಬ್ಲಾಗಿನ ಮೂಲಕ ಅದನ್ನೂ ಈಗ ಕಲಿಯುತ್ತಿರುವೆ! ಇಲ್ಲ ಅಂದರೆ ನಾನು ಸಾಮಾನ್ಯವಾಗಿ ಇಷ್ಟು ಉದ್ದದ ಬ್ಲಾಗ್ ಬರೆದೇ ಇರಲಿಲ್ಲ ;)

ನನ್ನ ಬರಹಗಳು ಲವಲವಿಕೆಯುಳ್ಳವು ಎಂದು ಹೇಳುವ ನನ್ನ ಸಾಹಿತ್ಯ ಗೆಳೆತಿಯರಿಗೆಲ್ಲ ಈಗ ಅದರ ಟ್ರೇನಿಂಗ್ ಯಾರು ಕೊಟ್ಟದ್ದೆಂದು ಹೇಳಿದಂತಾಯ್ತು. All thanks to Rebeca Marthinsen, my first onsite technical manager!


ಇತಿ ನನ್ನ ಬುದ್ಧಿ ಮನಸ್ಸುಗಳ ಕಾಡು ಹರಟೆ ಪುರಾಣಂ ಸಂಪೂರ್ಣಮ್. ಸರ್ವಂ ಶ್ರೀ ಜಗದಂಬಾರ್ಪಣ ಮಸ್ತು. ಸರ್ವಂ ಶ್ರೀ ಗುರು ಚರಣಾರ್ಪಣ ಮಸ್ತು.


ಇಲ್ಲಿಯವರೆಗೆ ಓದಿಕೊಂಡು ಬಂದಿದ್ದವರಿಗೆ ಮಾತ್ರ ಈ disclaimer: ಓದುವಾಗ ನಿಮಗೆ ಆತ್ಮ ರತಿಯ ಛಾಯೆ ಲೈಟಾಗೋ ಸ್ಟ್ರಾಂಗ್ ಆಗೋ ಕಾಣಿಸಿದರೆ ಅದು unintentional ಅಂದುಕೊಳ್ಳಬೇಡಿ. ಆಗಾಗ ಆತ್ಮರತಿಯ ಸಂಚಾರಿ ಭಾವ ಬರುವುದೂ ಮನುಷ್ಯ ಮಾತ್ರನ ಸಹಜ ಗುಣ ಅಲ್ಲವೇ? ಅಲ್ಲದೆ ನಾನೇನು ಆತ್ಮ ರತಿ ಬಿಟ್ಟು, ದೂರ ಕಾಪಾಡಿಕೊಂಡು ಬರೆಯುವ ಆತ್ಮ ಕಥೆ ಅಲ್ಲವಲ್ಲ ಇದು. ನನ್ನ ಯಕಶ್ಚಿತ್ ಬ್ಲಾಗಿನಲ್ಲಿ ಒಂದು ಯಕಶ್ಚಿತ್ ಲೇಖನವಷ್ಟೇ. ಓದುಗರೂ ಕೂಡ ನನ್ನ ಆತ್ಮೀಯರು. ಆತ್ಮೀಯರ ಮುಂದೆ ಮನದ ನಿಜ ಭಾವ ತೋಡಿಕೊಳ್ಳದೆ ಇನ್ನೆಲ್ಲಿ ತೋಡಿಕೊಳ್ಳಲಿ ಹೇಳಿ? ಅದೂ ನನ್ನಂತಹ ಅತೀ ಪ್ರಾಮಾಣಿಕ ರೋಗಿಗೆ… itna to banta hei yar ;)


Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page