top of page

ಬಿಟ್ಟೆನೆಂದರೂ ಬಿಡದೀ….

  • vidyaram2
  • Jul 9, 2025
  • 3 min read

ಕರ್ಮ ಸಿದ್ಧಾಂತದಲ್ಲಿ ‘ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ’ ಎಂಬ ಮಾತಿದೆ. ಪತ್ನಿ (ಪತಿ) ಸುತ ಆಲಯಗಳು ಋಣದಿಂದಲೇ ದೊರೆತಿರುವುದು ಈಗಾಗಲೇ ಸ್ಪಷ್ಟವಾಗಿ ನನ್ನರಿವಿಗೆ ಬಂದಿದ್ದರೂ ಭೂಮಿಯ ಮೇಲೆ ಹೆಚ್ಚುಕಡಿಮೆ ಅರ್ಧ ಶತಮಾನವನ್ನು ಕಳೆದ ನನಗೆ ಪಶುವಿನೊಡನೆ ಯಾವ ವಿಧದ ಗಾಢವಾದ ಅಂಟುನಂಟುಗಳೂ ಇದುವರೆಗೆ ಇಲ್ಲವಾಗಿದ್ದು, ಋಣದಿಂದ ಅಂತಹ ಸಂಬಂಧ ದೊರೆಯಬಹುದೆಂಬ ದೂರದ ಕಲ್ಪನೆಯೂ ಇರಲಿಲ್ಲ. ಮಗ ಚಿಕ್ಕವನಾಗಿದ್ದಾಗ ಯಾವಾಗಲೂ ಬೆಕ್ಕು ಸಾಕೋಣ ಎಂದು ಕೇಳುತ್ತಿದ್ದರೂ ಅದು ಸಾಧ್ಯವೇ ಇಲ್ಲವೆಂದು ಕಟ್ಟಳೆ ವಿಧಿಸಿದ್ದೆ. ಹಾಗೆಂದು ನಾನು ಪ್ರಾಣಿಗಳ ದ್ವೇಷಿಯೇನಲ್ಲ…


ಹಳ್ಳಿಯ ಮನೆಗಳಲ್ಲಿ ಮನೆಯ ಒಳಗೂ ಹೊರಗೂ ಸಾಕಷ್ಟು ಜಾಗ, ಸ್ವತಂತ್ರವಾಗಿ ಓಡಾಡಿಕೊಂಡು ತನ್ನ ಆಹಾರದ ಬೇಟೆಯನ್ನು ಸಾಧ್ಯವಿದ್ದಷ್ಟು ಮಾಡಿಕೊಂಡು, ಬಹಿರ್ದೆಸೆ, ಜೊತೆಗಾರರ ಒಡನಾಟ ಮುಂತಾದ ಮೂಲಭೂತ ಅಗತ್ಯಗಳನ್ನು ತಮಗೆ ಬೇಕಾದಂತೆ ಪೂರೈಸಿಕೊಂಡು, ಮನೆಯವರು ಹಾಕುವ ಅನ್ನ ಹಾಲುಗಳಲ್ಲಿ ತೃಪ್ತಿಹೊಂದಿ ಬೆಚ್ಚನೆಯ ಒಲೆಯ ಬುಡದಲ್ಲಿ ಚಳಿಯ ರಾತ್ರಿಯನ್ನು ಕಳೆಯುವ ಬೆಕ್ಕುಗಳು, ಇದೇ ರೀತಿ ಬಾಳುತ್ತ ಪ್ರೀತಿಯಿಂದ ಕೊಟ್ಟದ್ದು ತಿಂದು, ಹೊರಮನೆಯ ಮೂಲೆಯಲ್ಲಿ ಹಗಲೆಲ್ಲ ಮಲಗಿ, ಹೊರಗಿನ ಗೋಣಿಚೀಲದ ಮೇಲೆ ರಾತ್ರಿಯೆಲ್ಲ ಎಚ್ಚರವಾಗಿ ಕಳೆಯುವ ನಾಯಿಗಳು, ಕೊಟ್ಟಿಗೆಯ ಹಸುಗಳು ಇವೆಲ್ಲ ಪರಸ್ಪರ ಸಹಕಾರದೊಂದಿಗೆ ಮಾನವರೊಡನೆ ಬಾಳುವುದು ನನಗೂ ಪ್ರಿಯವೇ. ಆದರೆ…


ನಗರಗಳ ಸಣ್ಣ ಫ್ಲಾಟುಗಳಲ್ಲಿ ಬಂಧಿಯಾಗಿ ಹೊರಗೆ ಹೋಗಲು ಸಿಗದೆ, ಬಲವಂತವಾಗಿ ಸಂತಾನಹರಣ ಚಿಕಿತ್ಸೆಗೊಳಗಾಗಿ, ಸಂತಾನೋತ್ಪತ್ತಿಯ ಹಂಬಲವನ್ನು ಹತ್ತಿಕ್ಕಿಕೊಂಡು ತನ್ನನ್ನು ಸಾಕಿದ ‘ಪೆಟ್ ಪೇರೆಂಟ್’ಗಳು ಕೊಡುವ ಸಿದ್ಧ ಆಹಾರವನ್ನು ತಿಂದುಕೊಂಡು, ಆಹಾರ ಬೇಟೆಯಾಡುವ ತನ್ನ ನೈಸರ್ಗಿಕ ಸಾಮರ್ಥ್ಯವನ್ನೇ ಮರೆತು ಹಲ್ಲಿ, ಇಲಿಗಳ ಕಂಡರೆ ಹೆದರಿ ಓಡುತ್ತ, ಬೇರೆ ಪ್ರಪಂಚ ತಿಳಿಯದೆ ಸಾಕಿದವರನ್ನು ಮುದ್ದುಗರೆಯುತ್ತ ಅವರ ಒಂಟಿತನವನ್ನು ಕಳೆದು ಜೀವ ಸವೆಸುವ ಬೆಕ್ಕು, ನಾಯಿಗಳೆಂದರೆ ನನಗೆ ಸ್ವಲ್ಪ ಅಲರ್ಜಿ. ಮದುವೆ, ಮಕ್ಕಳ ಬಂಧನಕ್ಕೆ ಸಿಲುಕಲು ಇಚ್ಛಿಸದೆ, ತಮ್ಮ ಒಂಟಿತನದಿಂದ ಮುಕ್ತರಾಗಲು, ಸಂತಾನವನ್ನು ಪೋಷಿಸುವ ಮುದ್ದಿಸುವ ತಮ್ಮ ನೈಸರ್ಗಿಕ ಸುಖದ ಹಂಬಲವನ್ನು ತಣಿಸಲು ಇಂತಹ ಮುದ್ದಾದ ‘ಪೆಟ್ಟು’ಗಳನ್ನು ಆಯ್ದುಕೊಂಡು, ಅವುಗಳಿಗಾಗಿ ಸಾಕಷ್ಟು ಹಣ ಖರ್ಚುಮಾಡಿ ತಮ್ಮಂತೆಯೇ ಮೆಟೀರಿಯಲ್ ಕಂಫರ್ಟ್ ನೀಡಿ ಮನೆಯೆಂಬ ಜೈಲಿನಲ್ಲಿ ಬಂಧಿಸಿ, ಅವುಗಳನ್ನೂ ತಮ್ಮಂತೆಯೇ ಸಂಸಾರ ಸುಖದಿಂದ ದೂರವಿಟ್ಟು ಈ ಪ್ರಾಣಿಗಳ ಮೇಲೆ ತಾವು ತೋರುವ ದಯೆ, ಪ್ರೀತಿ, ಅವುಗಳಿಗೆ ಕೊಡುವ ಸೌಕರ್ಯ ಸವಲತ್ತುಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಇಂದಿನ ಯುವ ಜನರೇಷನ್ ರೀತಿಯಲ್ಲಿ ಪೆಟ್ ಸಾಕಾಣಿಕೆ ನನಗೆ ಒಗ್ಗದ ವಿಷಯ. ಇದೇ ಎಲ್ಲ ಕಾರಣಗಳನ್ನು ನೀಡಿ ಮಗನನ್ನು ಇಷ್ಟು ವರ್ಷಗಳ ಕಾಲ ಸುಮ್ಮನಾಗಿಸಿದ್ದೆ. ಇರಲಿ ….ಈಗ … 


ಮೊನ್ನೆ ಹದಿನೈದು ದಿನಗಳ ಕೆಳಗೆ ಕತ್ತಲಾದ ಮೇಲೆ ಅವನ ಕಾಲೇಜಿನ ಮೂರನೆಯ ಮಹಡಿಯಿಂದ ಬಿದ್ದು ಕಾಲು ಪೆಟ್ಟು ಮಾಡಿಕೊಂಡಿದ್ದ ಒಂದು ಪುಟ್ಟ ಬೆಕ್ಕಿನ ಮರಿಯನ್ನು ಹೊರಗೆ ರೋಡಿನಲ್ಲಿ ಬಿಡಲು ಮನಸ್ಸು ಬಾರದೆ ಅದು ಹುಷಾರಾಗುವವರೆಗೆ ಮನೆಯಲ್ಲಿ ನೋಡಿಕೊಂಡು ಆಮೇಲೆ ಯಾವುದಾದರೂ NGOಗೆ ಕೊಡಬಹುದೆಂಬ ಯೋಚನೆಯಿಂದ ನನಗೆ ಮೊದಲೇ ತಿಳಿಸದೆ ಮನೆಗೆ ಹೊತ್ತು ತಂದ ನನ್ನ ಸುಪುತ್ರ ! ತುಂಬ ಹೆದರಿ ಹೈರಾಣಾಗಿದ್ದ ಆ ಮರಿಯನ್ನು ಮರುದಿನ ಅಪ್ಪ, ಮಗ ಪಶುವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಮಾಡಿಸಿದರು. ವೈದ್ಯರು ಹೇಳಿದಂತೆ ಕೇವಲ 45 ದಿನಗಳ ಮರಿ ಅದು. ಇನ್ನೂ ಆಗಷ್ಟೇ ತಾಯಿಯಿಂದ ಸ್ವಲ್ಪ ಸ್ವಲ್ಪ ದೂರ ಹೋಗುವ ಅಭ್ಯಾಸ ಮಾಡಿಕೊಳ್ಳುತ್ತಿದ್ದ ಈ ಪಾಪದ ಮರಿಯು ಯಾವುದೋ ಜನ್ಮದ ಋಣದಿಂದೆಂಬಂತೆ ನಮ್ಮ ಕುಟುಂಬದ  ತಾತ್ಕಾಲಿಕ ಸದಸ್ಯನಾಯಿತು. 


ಸರಿ ಆಮೇಲೆ ಈ ‘ಪೆಟ್’ ಮರಿಗೆ ‘ವೆಟ್’ ಹೇಳಿದ ಮಲ್ಟಿವಿಟಮಿನ್ ಸಿರಪ್, ವೆಟ್ ಫುಡ್, ಡ್ರೈ ಫುಡ್ ಎಲ್ಲ ಮನೆಗೆ ಬಂದವು. ಅಪ್ಪಟ ಬ್ರಾಹ್ಮಣರ ಮನೆಯಲ್ಲಿ ಈಗ ಅದಕ್ಕೆ ನಿತ್ಯವೂ ಮೀನಿನ ಸಮಾರಾಧನೆ! ಇನ್ನು ಅದರ ಬಹಿರ್ದೆಸೆಯ ಸೌಲಭ್ಯಕ್ಕಾಗಿ ಅಮೆಜಾನಿಂದ ಆರ್ಡರ್ ಮಾಡಿದ ವಿಶೇಷ ಮರಳು ಬಂತು (ಮಲಮೂತ್ರಗಳ ವಾಸನೆಯನ್ನು ಹೀರಿ, ತ್ಯಾಜ್ಯಗಳ ಜತೆಯಲ್ಲಿ ಉಂಡೆಯಾಗಿ ತೆಗೆದು ಬಿಸಾಡಲು ಸುಲಭವಾಗುವ ವಿಶೇಷತೆ ಅದರದ್ದು). ಅದರ ಮನರಂಜನೆಗಾಗಿ ಒಂದೆರಡು ವಿಶೇಷ ಆಟದ ಸಾಮಾನುಗಳೂ ಬಂದವು. ನಮ್ಮನ್ನೇ ಅದರ ಕುಟುಂಬ ಎಂದು ತಿಳಿದು ರಾತ್ರಿ ಮಲಗಿದಾಗ ನಿದ್ದೆಗಣ್ಣಲ್ಲಿ ಕಿವಿ, ಕುತ್ತಿಗೆಗಳನ್ನೆಲ್ಲ ನೆಕ್ಕುತ್ತಾ ತಾಯಿ ಪ್ರೀತಿಯಪ್ಪುಗೆಯನ್ನು ಅರಸುವ ಈ ಮುಗ್ಧ ಮರಿ, ಹಗಲು ಹೊತ್ತಲ್ಲಿ ಕುಣಿದು ಕುಪ್ಪಳಿಸಿ ನಮ್ಮ ಹಿಂದೆ ಮುಂದೆ ತಿರುಗುತ್ತಾ ನಮ್ಮನ್ನೆಲ್ಲ ಅದರ ಮೂಕ ಪ್ರೀತಿಯಿಂದ ವಶ ಮಾಡಿಕೊಂಡುಬಿಟ್ಟಿದೆ.  ಸಂಪೂರ್ಣವಾಗಿ ಚೇತರಿಸಿಕೊಂಡ ಮೇಲೂ ಈಗ ಅದನ್ನು ಬೇರೆಲ್ಲೂ ಕಳುಹಿಸಲು ಮನಸ್ಸೇ ಬಾರದಂತೆ ನಮ್ಮೊಂದಿಗೆ ಹೊಂದಿಕೊಂಡು ನಮಗೆಲ್ಲ ಮೋಡಿ ಮಾಡಿದ ಈ ಮುದ್ದಿನ ಮುದ್ದೆ, ನಾವು ಬಿಡಬೇಕೆಂದರೂ ಬಿಡಲಾಗದ ಮೋಹದ ಪಾಶಕ್ಕೆ ನಮ್ಮನ್ನು ಸಿಲುಕಿಸಿಬಿಟ್ಟಿದೆ. 


ಮುಂದೇನಾಗುವುದೋ ಎಂದು ಹೆಚ್ಚು ಯೋಚಿಸದೆ, ಸದ್ಯಕ್ಕಂತೂ ಈ ಗಂಡು ಬೆಕ್ಕಿನ ಮರಿಯನ್ನು ನಾವೇ ಸಾಕುವ ಎಂಬ ನಿರ್ಧಾರವನ್ನು ಇಷ್ಟು ಸುಲಭವಾಗಿ ಮಾಡುವಾಗಲೇ ಅನ್ನಿಸಿದ್ದು ಇದು ಯಾವುದೋ ಜನ್ಮದ ಋಣವಿರಬೇಕೆಂದು. ಈಗ ನಮ್ಮೀ ಮರಿಯ ಸುತ್ತಮುತ್ತಲೇ ನಮ್ಮ ಪ್ರಪಂಚ ಸುತ್ತುತ್ತಿದೆ. ಹಗಲಲ್ಲಿ ಓದಲು ಕುಳಿತರೆ ಪುಸ್ತಕದ ತುದಿಗೆ ಬಾಯಿ ಹಾಕಿ ಹಾಳೆ ಹರಿಯುವುದು, ಕಂಪ್ಯೂಟರ್ ಮುಂದೆ ಕುಳಿತರೆ ಕೀ ಬೋರ್ಡಿನ ಮೇಲೆ ತಕಪಕ ಕುಣಿಯುವುದು, ನನ್ನ ಕೈಯಲ್ಲಿ ಹಿಡಿದ ಮೌಸನ್ನು ಕಚ್ಚುವುದು, ಕೇಬಲ್ ಅನ್ನು ಕಚ್ಚಿ ಕತ್ತರಿಸಲು ಯತ್ನಿಸುವುದು, ಫೋನ್ ಹಿಡಿದು ಕುಳಿತರೆ ತೊಡೆಯ ಮೇಲೆ ಹತ್ತಿ ಕೈಗೆ ಕಚ್ಚುವುದು, ಸುಮ್ಮನೆ ಕುಳಿತರೆ ಕಾಲನ್ನು ಹಿಡಿಯುತ್ತ ಕಚ್ಚುತ್ತ, ಬಚ್ಚಿಟ್ಟುಕೊಂಡು ಮೈಮೇಲೆ ಹಾರಿ ಹೆದರಿಸುವ ಆಟ ಆಡುವುದಕ್ಕೆ ಬರುವಂತೆ ಪುಸಲಾಯಿಸುವುದು… ಹೀಗೆ ನಡು ರಾತ್ರಿಯವರೆಗೆ ಕಾಡುವ ಈ ಗುಂಡಣ್ಣ ರಾತ್ರಿ ನಮ್ಮ ಮಂಚ ಹತ್ತಿ ಅಲ್ಲಿ ಇಲ್ಲಿ ಮಲಗಿ ತನ್ನ ಸಣ್ಣ ಕ್ಯಾಟ್ ನ್ಯಾಪ್ ತೀರಿಸಿಕೊಂಡ ಕೂಡಲೇ ನಮ್ಮ ಕಿವಿ, ಕುತ್ತಿಗೆ ಕೈಗಳನ್ನು ನೆಕ್ಕುತ್ತಾ ಎಂಜಿನ್ನಿನಂತೆ ಒಂದೇ ಸಮನೆ ಪರ್ರ್ ಎಂದು ಶಬ್ದ ಮಾಡುತ್ತಾ ಆಗಷ್ಟೇ ನಿದ್ದೆ ಹತ್ತಿದವರನ್ನು ಯಾವುದೇ ಮುಜುಗರವಿಲ್ಲದೆ ಎಬ್ಬಿಸುತ್ತಾನೆ!! ಕಣ್ಣುಗಳಲ್ಲೇ ತನ್ನ ಭಾವವನ್ನು ಪ್ರಕಟಿಸುತ್ತಾ ನಾವು ಶಿಸ್ತು ಕಲಿಯಲು ಗದರಿದರೆ  ಅರ್ಥವಾಗದ ಹಾಗೆ ನಟಿಸುತ್ತಾ ಮೌನದಲ್ಲೇ ಮುದ್ದು ಸುರಿಸುವ ಈ ಸೊಕ್ಕಿನ ಬೆಕ್ಕಿಗೇನು ಗೊತ್ತು - ಒಮ್ಮೆ ನಿದ್ದೆಯಿಂದ ಎಚ್ಚರವಾದರೆ ರಾತ್ರಿ ಇಡೀ ಮತ್ತೆ ನಿದ್ದೆ ಹತ್ತದೆ ಮಗ್ಗುಲು ಬದಲಾಯಿಸಿ ಮೈಕೈ ನೋಯಿಸಿಕೊಳ್ಳುವ ನಮ್ಮ ಕಷ್ಟ… ಅಂಥದ್ದೊಂದು ನಿದ್ದೆ ಇಲ್ಲದ ರಾತ್ರಿಯಲ್ಲಿ ನನ್ನ ಮನದಲ್ಲಿ ಜನ್ಮ ತಳೆದ ಲೇಖನವಿದು….ಈಗ ಗುಂಡಣ್ಣ ಸಣ್ಣ ನಿದ್ರೆಯಲ್ಲಿದ್ದಾಗ ಅವಸರದಲ್ಲಿ ಟೈಪಿಸಿ ಮುಗಿಸಿದೆ. 


ಲೇಖನವನ್ನು ಓದುತ್ತಿರುವ ನನ್ನ ಸ್ನೇಹಿತರೇ, ಬಿಟ್ಟೆನೆಂದರೂ ಬಿಡದ ಈ ಮಾಯೆಯ ಬಲೆಯಿಂದ ತಪ್ಪಿಸಿಕೊಳ್ಳುವ ಬಗೆ ಹೇಗೆ…ನೀವು ಬಲ್ಲಿರಾ ನೀವು ಬಲ್ಲಿರಾ?


ಮುಗಿಸುವ ಮುನ್ನ… 

ವಿವಿಧ ಕಾರಣಗಳಿಂದ ‘ಪೆಟ್’ ಸಾಕುವ ಎಲ್ಲ ರೀತಿಯ ಪೆಟ್ ಪೋಷಕರಿಗೂ ಹೀಗೆಯೇ ಅವುಗಳೊಂದಿಗೆ ಯಾವುದೊ ಜನ್ಮದ ಋಣವಿರಬೇಕೆಂದು ನನಗೀಗ ಜ್ಞಾನೋದಯವಾಗಿದೆ ಎಂದು ಬಿಡಿಸಿ ಹೇಳಬೇಕಿಲ್ಲವಷ್ಟೆ?! ಆ ಬಗ್ಗೆ ನನಗಿರುವ ಅಸಮಾಧಾನ ಈಗ ತಕ್ಕಮಟ್ಟಿಗೆ ತಗ್ಗಿದೆ. ಆ ಪ್ರಾಣಿಗಳಿಗೆ ನಮ್ಮಿಂದ ಸುಖವೇ ಸಿಗುವುದೋ ಅಥವಾ ಅವುಗಳಿಗೆ ಸ್ವಚ್ಛಂದವಾಗಿ ಬಾಳುವ ಅವಕಾಶ ದೊರೆಯದೇ ಇರುವುದಕ್ಕೆ ಮನುಷ್ಯನ ಸ್ವಾರ್ಥ ಕಾರಣವೋ ಒಟ್ಟಿನಲ್ಲಿ ನಗರಗಳಲ್ಲಿರುವ ಪ್ರಾಣಿಗಳು ಅಂತಹ ಬಾಳನ್ನು ಪಡೆಯದೇ ಹೋದುದೂ ಅವುಗಳ ಸಂಚಿತ ಕರ್ಮವೇ ಏನೋ… ಅಥವಾ ಎಲ್ಲ ನಮ್ಮ ಭ್ರಮೆಯೋ :) ಸಧ್ಯಕ್ಕೆ ಈ ಕುರಿತು ಹೆಚ್ಚು ಯೋಚಿಸಲೂ ನಮ್ಮ ಗುಂಡಣ್ಣ ಅವಕಾಶವನ್ನೇ ನೀಡುತ್ತಿಲ್ಲ… ಇದೋ ಈಗ ಬಂದ...ಮಿಯಾವ್… ಮಿಯಾವ್…

ಸೋಫಾ ಹಾಳು ಮಾಡ್ತಾನೆ ಅಂತ ಕವರ್ ಹಾಕಿದ್ರೆ . ..ಈಗ ಸೋಫಾದ ಜೊತೆ ಕವರೂ ಹಾಳು!
ಸೋಫಾ ಹಾಳು ಮಾಡ್ತಾನೆ ಅಂತ ಕವರ್ ಹಾಕಿದ್ರೆ . ..ಈಗ ಸೋಫಾದ ಜೊತೆ ಕವರೂ ಹಾಳು!
ಮುದ್ದು ಸುರಿಸುವ ಮುಗ್ಧ ಮುಖ
ಮುದ್ದು ಸುರಿಸುವ ಮುಗ್ಧ ಮುಖ

Recent Posts

See All

Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page