ಯುಗಾದಿಯ ಸವಿ ನೆನಪು….
- vidyaram2
- Apr 24, 2024
- 2 min read
Updated: Oct 23, 2025

ಬ್ರಹ್ಮಾಂಡದ ಆದಿ, ಅಂತ್ಯವನ್ನು ಅರಿಯಲು ಸಾಧ್ಯವಿಲ್ಲ. ಅದು ಅನಂತ. ಈ ಅನಂತ ಬ್ರಹ್ಮಾಂಡದ ವಯಸ್ಸನ್ನು ಅಳೆಯುವುದು ಕಾಲವೆಂಬ ಆಯಾಮದಿಂದ. ಕಾಲಕ್ಕೂ ಕೊನೆಮೊದಲಿಲ್ಲ. ಕೊನೆಮೊದಲಿಲ್ಲದ್ದನ್ನು ಸೂಚಿಸುವುದು ವೃತ್ತ. ವೃತ್ತದ ಮೇಲೆ ನಡೆಯಲಾರಂಭಿಸಿದರೆ ಹೊರಟು ಸುತ್ತಿ ಬಂದಲ್ಲಿಗೆ ಸೇರುತ್ತೇವೆ. ಕಾಲವೂ ಹೀಗೇ. ಕೊನೆಮೊದಲಿಲ್ಲದೆ ಮುಂದೆ ಉರುಳುವ ಕಾಲವು ಉರುಳಿ, ಉರುಳಿ ಮತ್ತೆ ಬಂದಲ್ಲೆ ಸೇರುತ್ತದೆ ಎಂಬ ತತ್ವದಂತೆ ಅದನ್ನು ‘ಕಾಲಚಕ್ರ’ ಎಂದು ಪರಿಗಣಿಸಲಾಗುತ್ತದೆ. ಭಾರತೀಯ ಪರಂಪರೆಯಲ್ಲಿರುವ (ಹಿಂದೂ ತತ್ತ್ವಶಾಸ್ತ್ರದಲ್ಲಿ) ಯುಗದ ಪರಿಕಲ್ಪನೆಯು ಕಾಲಚಕ್ರವನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸುತ್ತದೆ. ಸತ್ಯಯುಗ, ತ್ರೇತಾ ಯುಗ, ದ್ವಾಪರ ಯುಗ, ಕಲಿಯುಗ - ಹೀಗೆ ನಾಲ್ಕು ಯುಗಗಳಿಗೆ ಒಂದು ಬಾರಿಗೆ ಕಾಲಚಕ್ರದ ಒಂದು ಭ್ರಮಣೆ ಪೂರ್ಣಗೊಳ್ಳುತ್ತದೆ. ಮತ್ತೆ ಸತ್ಯಯುಗದಿಂದ ಆರಂಭವಾಗುತ್ತದೆ. ಈ ಯುಗಗಳ ಅವಧಿಯು ಬ್ರಹ್ಮಾಂಡದ ಕಾಲಚಕ್ರಕ್ಕೆ ಅನ್ವಯಿಸುವಂತದ್ದು. ಒಬ್ಬ ಮನುಷ್ಯನ ಸರಾಸರಿ ಜೀವಿತದ ಅವಧಿ ಬ್ರಹ್ಮಾಂಡದ ಅವಧಿಯಲ್ಲಿ ಒಂದು ಯಕಶ್ಚಿತ್ ಅಂಶವಷ್ಟೇ. ಹಾಗಾಗಿ ಈಗ ನಾವಿರುವ ಕಲಿಯುಗ ಒಂದನ್ನೇ ನಾವು ನೋಡಲು ಸಾಧ್ಯ. ಉಳಿದುದೆಲ್ಲವನ್ನು ಊಹಿಸಬಲ್ಲೆವಷ್ಟೇ. ಇದು ಬ್ರಹ್ಮಾಂಡದ ಯುಗದ ಕಥೆಯಾದರೆ ಮನುಷ್ಯನ ಜೀವಿತದ ಕಾಲಮಾನವನ್ನು ನಾವು (ಭಾರತೀಯರು) ಅಳೆಯುವುದೂ ಯುಗದ ಪರಿಕಲ್ಪನೆಯಲ್ಲಿಯೇ. ಈ ನಮ್ಮ ಯುಗವು ೬೦ ಸಂವತ್ಸರಗಳಿಂದ ಕೂಡಿದ್ದಾಗಿದೆ. ಇಲ್ಲಿ ಕಾಲವನ್ನು ಸೂರ್ಯ ಅಥವಾ ಚಂದ್ರನ ಚಲನೆಯ ಆಧಾರದ ಮೇಲೆ ‘ಚಾಂದ್ರಮಾನ’ ಅಥವಾ ‘ಸೌರಮಾನ’ ಪದ್ಧತಿಯಲ್ಲಿ ಅಳೆಯಲಾಗುತ್ತದೆ. ಯುಗವೆಂದರೆ ೬೦ ಸಂವತ್ಸರಗಳು, ಸಂವತ್ಸರ ಎಂದರೆ ೧೨ ಮಾಸಗಳ ಅವಧಿ. ಮಾಸವೆಂದರೆ ೨ ಪಕ್ಷಗಳು, ಪಕ್ಷವೆಂದರೆ ೧೫ ದಿನಗಳು, ದಿನವೆಂದರೆ ೨೪ ಗಂಟೆಗಳು, ಗಂಟೆಯೆಂದರೆ ೬೦ ನಿಮಿಷಗಳು, ನಿಮಿಷವೆಂದರೆ ೬೦ ಕ್ಷಣಗಳು ಎಂದು ವಿಂಗಡಿಸಲಾಗುತ್ತದೆ. ಅರವತ್ತು ಸಂವತ್ಸರಗಳು ಕಳೆದರೆ ಮತ್ತೊಂದು ಯುಗದ ಆರಂಭ. ಪ್ರತಿ ಸಂವತ್ಸರದ ಆರಂಭದ ದಿನವೇ ಯುಗಾದಿ, ಹಾಗೆ ನೋಡಿದರೆ ಇದಕ್ಕೆ ‘ಸಂವತ್ಸರಾದಿ’ ಎನ್ನಬೇಕಲ್ಲವೇ? ಅಥವಾ 'ಯುಗ' ಎಂದರೆ ಒಂದು ದೀರ್ಘ ಅವಧಿ ಎಂಬರ್ಥದಲ್ಲಿ ಯುಗಾದಿ ಎಂದರೆ ಈ ದೀರ್ಘ ಅವಧಿಯ ಶುಭಾರಂಭ ಎಂದೂ ಆಗಬಹುದು.
ಅದೇನೇ ಇದ್ದರೂ, ಯುಗಾದಿ ಎಂಬುದು ಭಾರತೀಯ ಕಾಲಗಣನೆ ಪದ್ಧತಿಯ ಪ್ರಕಾರ ವರ್ಷದ ಮೊದಲ ದಿನ. ವರ್ಷದಲ್ಲಿ ಮೊದಲ ಮಾಸ ಚೈತ್ರ, ಈ ಚೈತ್ರದ ಮೊದಲ ದಿನ ಯುಗಾದಿ. ಈ ದಿನವನ್ನು ಹಬ್ಬವೆಂದು, ವಿಶೇಷ ದಿನವೆಂದು ಆಚರಿಸುವ ರೂಢಿ ಭಾರತದ ಹಲವು ಪ್ರದೇಶಗಳಲ್ಲಿ ಕಂಡುಬರುತ್ತದೆ. ಕೆಲವೆಡೆ ಚಾಂದ್ರಮಾನ ಯುಗಾದಿಯ ಆಚರಣೆಯಿದ್ದರೆ ಕೆಲವೆಡೆ ಸೌರಮಾನ ಯುಗಾದಿಯ ಆಚರಣೆಯಿದೆ. ಈ ದಿನವನ್ನು ಯುಗಾದಿ, ಉಗಾದಿ, ಬಿಸು, ವಿಶು, ಗುಡಿಪಾಡ್ವ, ಬೈಸಾಖಿ, ಬಿಹು, ಛೇಟಿ ಚಾಂದ್ ಮೊದಲಾದ ಹೆಸರುಗಳಿಂದ ಭಾರತದಾದ್ಯಂತ ಆಚರಿಸಲಾಗುತ್ತದೆ.
ಯುಗಾದಿ ಎಂದರೆ ನೆನಪಿಗೆ ಬರುವುದು ಮುಂಜಾನೆಯ ಕೋಗಿಲೆಯ ಕೂಗು, ಮನೆಯ ಮುಂದೆ ಮಾವು-ಬೇವಿನ ತೋರಣ, ಬಣ್ಣ ಬಣ್ಣದ ರಂಗೋಲಿ, ಎಣ್ಣೆಯ ಅಭ್ಯಂಜನ, ರೇಡಿಯೋದಲ್ಲಿ ಬೇಂದ್ರೆಯವರ ಯುಗಾದಿ ಗೀತೆಯ ಸುಮಧುರ ಉಲಿತ, ಬಹುಕಾಲ ಬಾಯಿಂದ ಮಾಸದ ಬೇವು-ಬೆಲ್ಲದ ಸ್ವಾದ, ಮಾವಿನ ಕಾಯಿ ಚಿತ್ರಾನ್ನ, ಹೂರಣದ ಹೋಳಿಗೆ, ಪಾಯಸಗಳ ಭಾರಿ ಭೋಜನ, ಹೊಸ ಬಟ್ಟೆಯ ಸಡಗರ, ಹಿರಿಯರಿಂದ ಪಂಚಾಗ ಶ್ರವಣ ಮತ್ತು ಕೊನೆಯಲ್ಲಿ ಚಂದ್ರನ ದರ್ಶನ. ಬಾಲ್ಯದಲ್ಲಿ ಶಾಲೆಯ ಪರೀಕ್ಷೆಯ ದಿನಗಳ ಹತ್ತಿರದಲ್ಲಿಯೇ ಬರುತ್ತಿದ್ದ ಯುಗಾದಿಗಾಗಿ ಕಾತುರದಿಂದ ಕಾದು, ಹೊಸ ವರ್ಷದ ಆರಂಭವನ್ನು ಸಡಗರದಿಂದ ಸ್ವಾಗತಿಸಿ, ಹೊಸ ಬಟ್ಟೆ ತೊಟ್ಟು, ಬೇವುಬೆಲ್ಲ ತಿಂದು, ಜೀವನದಲ್ಲಿ ಬರುವ ಸುಖದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಪಣ ತೊಟ್ಟು, ವಠಾರ, ಬೀದಿಯ ಎಲ್ಲ ಮನೆಗಳ ಹಿರಿಯರ ಆಶೀರ್ವಾದ ಪಡೆದು ನಲಿದು, ಮುಂಬರುವ ಪರೀಕ್ಷೆಯ ಬಳಿಕ ಸಿಗುವ ಬೇಸಿಗೆ ರಜಾ ದಿನಗಳ ದಾರಿ ಕಾಯುತ್ತಾ ಸಂಭ್ರಮಿಸುತ್ತಿದ್ದ ನೆನಪು ಇಂದಿಗೂ ಮಾಸದು. ಅಂತಹ ಸಹಜ ಸರಳ ಸಂಭ್ರಮ ಇಂದಿಲ್ಲವಾದರೂ ಆ ಸವಿ ನೆನಪುಗಳ ಬುತ್ತಿ ಹೊತ್ತು ಬರುವ ಯುಗಾದಿ ಎಂದರೆ ಈಗಲೂ ಅಷ್ಟೇ ಅಕ್ಕರೆ.





Comments