ಅಜ್ಞಾನದಿಂದ ‘ಎಐ’ಜ್ಞಾನದವರೆಗೆ …
- vidyaram2
- Oct 22, 2025
- 6 min read
Updated: Oct 23, 2025

ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸಿ ಜ್ಞಾನವೆಂಬ ಜ್ಯೋತಿಯನ್ನು ಮನೆ-ಮನಗಳಲ್ಲಿ ಬೆಳಗುವ ಸಂಕೇತವೇ ದೀಪಾವಳಿ ಹಬ್ಬ. ಮಾನವನ ಔನ್ನತ್ಯದ ಹಾದಿಯು ‘ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ’, ಅಂದರೆ ಮಿಥ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ ಮತ್ತು ನಶ್ವರದಿಂದ ಶಾಶ್ವತದೆಡೆಗೆ ಸಾಗಬೇಕು ಎನ್ನುವುದು ಸನಾತನ ಧರ್ಮದ ನಿಲುವು.
ಕತ್ತಲಿಗೆ ಹೆದರಿದ ಆದಿಮಾನವನು ಸಾವಿರಾರು ವರ್ಷಗಳ ಹಿಂದೆ ಬೆಂಕಿಯನ್ನು ಕಂಡುಹಿಡಿದು ಜ್ಞಾನದ ಮೊದಲ ಕಿಡಿಯನ್ನು ಹೊತ್ತಿಸಿದನು. ಅಲ್ಲಿಂದ ಮೊದಲಾಗಿ ಅವನ ಪ್ರಗತಿಪಥದ ಪ್ರತಿಯೊಂದು ಹೆಜ್ಜೆಯೂ ಒಂದೊಂದು ಹಣತೆಯೇ. ಚಕ್ರ, ಲಿಪಿ, ಮುದ್ರಣಯಂತ್ರ, ವಿದ್ಯುತ್, ಗಣಕಯಂತ್ರ ಇವೆಲ್ಲವೂ ನಮ್ಮ ಬದುಕಿನ ಕತ್ತಲನ್ನು ದೂರ ಮಾಡಲು ಸಹಕರಿಸಿದ ಜ್ಞಾನದ ದೀವಿಗೆಗಳು. ಈ ಜ್ಞಾನದ ಪಯಣದಲ್ಲಿ ಇತ್ತೀಚಿನ ಸೇರ್ಪಡೆಯೇ ‘ಕೃತಕ ಬುದ್ಧಿಮತ್ತೆ’ ಅಥವಾ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ (ಎಐ). ಇದು ಇಂದಿನ ತಂತ್ರಜ್ಞಾನ ಯುಗದಲ್ಲಿ ಮಾನವನ ಅಜ್ಞಾನವನ್ನು ಸಂಪೂರ್ಣವಾಗಿ ತೊಲಗಿಸುವ ಶಕ್ತಿಯುಳ್ಳ ಪರಂಜ್ಯೋತಿಯೇ? ಅಥವಾ ಮಾನವನನ್ನು ಯಂತ್ರದ ಗುಲಾಮನನ್ನಾಗಿಸಿ ಅವನ ಬದುಕನ್ನು ಅಧೋಗತಿಗೆ ಕೊಂಡೊಯ್ಯುವ ಅಂಧಕಾರವೇ? ದೀಪಾವಳಿಯ ಈ ಪರ್ವಕಾಲವು ‘ಎಐ’ಜ್ಞಾನದ ಒಳಿತು-ಕೆಡಕುಗಳ ಕುರಿತು ಹೀಗೊಂದು ಅವಲೋಕನಕ್ಕೆ ಸೂಕ್ತ ಸಮಯವಲ್ಲವೇ?
‘ಎಐ’ಜ್ಞಾನದ ಉದಯ
ಗಣಕಯಂತ್ರಗಳು ಕೇವಲ ನಾವು ನೀಡಿದ ಆಜ್ಞೆಗಳನ್ನು ಪಾಲಿಸುತ್ತಿದ್ದ ಕಾಲವೊಂದಿತ್ತು. ಆದರೆ ಕೃತಕ ಬುದ್ಧಿಮತ್ತೆಯು ಯಂತ್ರಗಳಿಗೆ ಮಾನವನಂತೆ ಯೋಚಿಸುವ, ಕಲಿಯುವ, ಸಮಸ್ಯೆಗಳನ್ನು ಪರಿಹರಿಸುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ನೀಡುವ ತಂತ್ರಜ್ಞಾನ. ಇಂದು ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನಿನಿಂದ ಹಿಡಿದು, ನಾವು ಬಳಸುವ ಗೂಗಲ್ ಮ್ಯಾಪ್ಸ್, ಆನ್‌ಲೈನ್ ಶಾಪಿಂಗ್ ತಾಣಗಳವರೆಗೆ ಎಲ್ಲೆಲ್ಲೂ ಈ ‘ಎಐ’ಜ್ಞಾನದ ಪ್ರಭಾವವಿದೆ.
ಈ ಕೃತಕ ಬುದ್ಧಿಮತ್ತೆ, ‘ಎಐ’ ಎಂಬ ಪದವು ಮೊದಲಿಗೆ 1956ರಲ್ಲಿ ಬಳಕೆಗೆ ಬಂದಿದ್ದರೂ ಅದು ಜನಪ್ರಿಯವಾಗಿರುವುದು ಇತ್ತೀಚಿನ ವರ್ಷಗಳಲ್ಲಿ. ಕಳೆದ ಕೆಲವು ದಶಕಗಳಲ್ಲಿ ತೀವ್ರವಾಗಿ ಹೆಚ್ಚಾಗಿರುವ ಗಣಕಯಂತ್ರಗಳ ಸಂಸ್ಕರಣ ಸಾಮರ್ಥ್ಯವೇ (ಪ್ರೊಸೆಸಿಂಗ್ ಪವರ್) ಈ ಎಐ ತಂತ್ರಜ್ಞಾನವು ಇಂದು ಈ ಮಟ್ಟಕ್ಕೆ ಅಭಿವೃದ್ಧಿ ಹೊಂದಿರುವುದರ ಪ್ರಮುಖ ಕಾರಣ. ಅಂತರ್ಜಾಲದಲ್ಲಿ ಅಗಾಧ ಮಾಹಿತಿ ಲಭ್ಯವಿರುವುದು ಇನ್ನೊಂದು ಮುಖ್ಯ ಕಾರಣ.
ಕೆಲದಶಕಗಳ ಹಿಂದಿನವರೆಗೆ ವೈಜ್ಞಾನಿಕ ಸಂಶೋಧನೆ, ಹವಾಮಾನ ಮುನ್ಸೂಚನೆ, ಪರಮಾಣು ಶಕ್ತಿ ಸಿಮ್ಯುಲೇಶನ್ ಮತ್ತು ಜೀನ್ ಮ್ಯಾಪಿಂಗ್‌ನಂತಹ ಅತಿ ದೊಡ್ಡ ಸಮಸ್ಯೆಗಳನ್ನು ಪರಿಹರಿಸಲು, ಒಂದು ಕೋಣೆಯಲ್ಲಿದ್ದು ನಿರ್ದಿಷ್ಟ ಉದ್ದೇಶಕ್ಕಾಗಿ ಬಳಸಲಾಗುತ್ತಿದ್ದ ಬೃಹತ್ ಗಾತ್ರದ ‘ಸೂಪರ್ ಕಂಪ್ಯೂಟರ್’ ಎಂಬ ಅತಿ ವೇಗದ ಗಣಕಯಂತ್ರಗಳನ್ನು ಮಾತ್ರ ಬಳಸಲಾಗುತ್ತಿತ್ತು. ಇವುಗಳ ನಿರ್ಮಾಣ ಮತ್ತು ನಿರ್ವಹಣೆ ತುಂಬಾ ದುಬಾರಿ ಹಾಗೂ ಕಷ್ಟಕರವಾಗಿರುತ್ತಿತ್ತು. ತಂತ್ರಜ್ಞಾನ ಬದಲಾಗುತ್ತ ಬಂದಂತೆ, ಅಂತರ್ಜಾಲದ ಮೂಲಕ ಲಭ್ಯವಿರುವ ಸಾವಿರಾರು ಶಕ್ತಿಶಾಲಿ ಕಂಪ್ಯೂಟಿಂಗ್ ಯಂತ್ರಗಳ ಒಂದು ಜಾಲದ (ಕ್ಲೌಡ್ ಕಂಪ್ಯೂಟಿಂಗ್) ಬಳಕೆಯಿಂದ ಉನ್ನತ ಮಟ್ಟದ, ಅತಿ ವೇಗದ ಪ್ರೊಸೆಸಿಂಗ್ ಸುಲಭಸಾಧ್ಯವಾಯಿತು. ಅಂತರ್ಜಾಲದ ಮೂಲಕ ಬೇಕೆಂದಾಗ ಬೇಕೆಂದಷ್ಟೇ ಜಾಗ, ವೇಗವನ್ನು ಬಾಡಿಗೆಗೆ ಪಡೆದು ಅದಕ್ಕೆ ತಕ್ಕಷ್ಟೇ ಹಣವನ್ನು ವ್ಯಯಿಸಿ ತಮ್ಮ ಕೆಲಸಗಳಿಗೆ ಬಳಸಿಕೊಳ್ಳಬಹುದಾದ ಸೌಲಭ್ಯ ದೊರೆಯಿತು. ಇದು ಎಐ ತಂತ್ರಜ್ಞಾನದ ವಿವಿಧ ಆಯಾಮಗಳನ್ನು ಬಳಕೆಗೆ ತರುವಲ್ಲಿ ಮಹತ್ತ್ವದ ಪಾತ್ರವಹಿಸಿತು.
ಎಐ ಎಂಬುದು ಒಂದು ಬಹು ಉನ್ನತ ಮಟ್ಟದ ಪ್ರೋಗ್ರಾಮಿಂಗ್ ಆಗಿದೆ. ಅಂದರೆ ಇದೂ ಯಂತ್ರದೊಳಗಿರುವ ತಂತ್ರಾಂಶವೇ (ಸಾಫ್ಟ್ವೇರ್). ಕಲಿಕೆ (ಲರ್ನಿಂಗ್), ತಾರ್ಕಿಕ ಸಾಮರ್ಥ್ಯ(ರೀಸನಿಂಗ್) ಮತ್ತು ಸ್ವಯಂ-ತಿದ್ದುಪಡಿ (ಸೆಲ್ಫ್ ಕರೆಕ್ಷನ್) ಎಂಬ ಮೂರು ಮುಖ್ಯ ತತ್ತ್ವಗಳ ಮೇಲೆ ಈ ಎಐ ಎನ್ನುವ ತಂತ್ರಾಂಶವು ತನ್ನ ಕಾರ್ಯವನ್ನು ನಿರ್ವಹಿಸುತ್ತದೆ. ಸರಳವಾಗಿ ಹೇಳುವುದಾದರೆ, ‘ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ನಿಂದ ಹೆಜ್ಜೆಯನರಿಯಬಾರದು’ ಎಂಬ ಅಲ್ಲಮ ಪ್ರಭುಗಳ ಮಾತಿನಂತೆ ಈ ಎಐ ಕೆಲಸ ಮಾಡುತ್ತದೆ ಎಂದರೆ ನಂಬುವಿರಾ! ಹೌದು, ಇದುವರೆಗೆ ಲಭ್ಯವಿರುವ ಹಿಂದಿನ ಮಾಹಿತಿಯನ್ನು ಆಧರಿಸಿ ಅದು ಇಂದು ಜಾಣತನವನ್ನು ಮೈಗೂಡಿಸಿಕೊಳ್ಳುತ್ತದೆ.
ಮೊದಲನೆಯ ಹಂತದಲ್ಲಿ ಎಐ ತಂತ್ರಾಂಶವು ಈಗಾಗಲೇ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು (ಡೇಟಾ) ಬಳಸಿಕೊಂಡು ಕಲಿಯುವಂತೆ ಪ್ರೋಗ್ರಾಮ್ ಮಾಡಲಾಗುತ್ತದೆ. ಈ ಮಾಹಿತಿಯು ಅಂಕೆಗಳು, ಚಿತ್ರಗಳು, ವಿಡಿಯೋ, ಆಡಿಯೋ ಹೀಗೆ ಯಾವುದೇ ರೂಪದಲ್ಲಿರಬಹುದು. ಈ ಕಲಿಕೆಗೆ ‘ಮಷೀನ್ ಲರ್ನಿಂಗ್’ ಎನ್ನುತ್ತಾರೆ. ಹೆಚ್ಚು ಮಾಹಿತಿ ಸಿಕ್ಕಷ್ಟೂ ಅದರ ಕಲಿಕೆ ಉತ್ತಮವಾಗುತ್ತ ಹೋಗುತ್ತದೆ. ಸಂಗ್ರಹಿಸಿದ ಮಾಹಿತಿಯನ್ನು ಬಳಸಿ ಅದಕ್ಕೆ ‘ಮಾದರಿ’ (ಮಾಡೆಲ್) ತರಬೇತಿ ನೀಡಲಾಗುತ್ತದೆ. ಎರಡನೆಯ ಹಂತದಲ್ಲಿ ಕಲಿತ ಜ್ಞಾನವನ್ನು ಬಳಸಿಕೊಂಡು, ಈ ತಂತ್ರಾಂಶವು ತಾರ್ಕಿಕವಾಗಿ ಯೋಚಿಸುತ್ತದೆ. ಉದಾಹರಣೆಗೆ ಅದಕ್ಕೆ ಒಂದು ಚಿತ್ರವನ್ನು ಕೊಟ್ಟು ಇದೇನೆಂದು ಕೇಳಿದರೆ ಹಿಂದೆ ಕಲಿತ ಮಾಹಿತಿಯೊಂದಿಗೆ ಹೋಲಿಸಿ ನೋಡಿ ಆ ಚಿತ್ರವು ಬೆಕ್ಕೋ ನಾಯಿಯೋ ಮನೆಯೋ ಹೂವೋ ಏನೆಂದು ಅದು ನಿರ್ಧರಿಸುತ್ತದೆ. ಮೂರನೆಯ ಹಾಗೂ ಸಂಕೀರ್ಣವಾದ ಹಂತದಲ್ಲಿ ಈ ತಂತ್ರಾಂಶವು ತಾನು ಮಾಡಿದ ತಪ್ಪನ್ನು ತಾನೇ ಸರಿಪಡಿಸಿಕೊಳ್ಳುತ್ತದೆ. ಒಂದು ನಿರ್ಧಾರ ತಪ್ಪಾಗಿದ್ದಾಗ, ಅದು ತನ್ನ ಕ್ರಮಾವಳಿಗಳನ್ನು (ಅಲ್ಗೊರಿದಮ್) ತಿದ್ದುಪಡಿ ಮಾಡಿಕೊಂಡು ಮುಂದಿನ ಬಾರಿ ಸರಿಯಾದ ಉತ್ತರವನ್ನು ನೀಡಲು ಪ್ರಯತ್ನಿಸುತ್ತದೆ.
ಯಾವ ವಿಧದ ಕಾರ್ಯಕ್ಕೆ ಅದನ್ನು ಬಳಸಲಾಗುವುದೋ ಅಂತಹ ಮಾದರಿಯ ಮಾಹಿತಿಯನ್ನು ನೀಡಿ, ಅದನ್ನು ಮತ್ತೆ ಮತ್ತೆ ಪರೀಕ್ಷಿಸಿ ಅದರ ಜ್ಞಾನವು ಒಂದು ಮಟ್ಟಕ್ಕೆ ವೃದ್ಧಿಯಾದ ನಂತರ ಅದನ್ನು ತನ್ನ ಕೆಲಸದಲ್ಲಿ ತೊಡಗಿಸಲಾಗುತ್ತದೆ. ಕೆಲಸ ಮಾಡುತ್ತಲೂ ಅದು ತನ್ನನ್ನು ತಾನು ನಿರಂತರವಾಗಿ ತಿದ್ದುಪಡಿ ಮಾಡಿಕೊಳ್ಳುತ್ತ ಉತ್ತಮಗೊಳಿಸಿಕೊಳ್ಳುತ್ತಲಿರುತ್ತದೆ. ಅರೆ! ಒಬ್ಬ ಮನುಷ್ಯನು ತನ್ನ ಕಾರ್ಯ ದಕ್ಷತೆಯನ್ನು ನಿರಂತರ ಅನುಭವದಿಂದ ಹೆಚ್ಚಿಸಿಕೊಳ್ಳುವುದಕ್ಕಿಂತ ಇದು ಅಷ್ಟೇನೂ ಭಿನ್ನವಲ್ಲ, ಅಲ್ಲವೇ? ಹೌದು, ಎಐನ ನರಮಂಡಲವು (ನ್ಯೂರಲ್ ನೆಟ್ವರ್ಕ್) ಮಾನವನ ನರಮಂಡಲದ ರಚನೆಯಿಂದ ಪ್ರೇರಿತವಾಗಿ ವಿನ್ಯಾಸಗೊಂಡಿದೆ. ಆದರೆ ಮನುಷ್ಯನ ನರಮಂಡಲಕ್ಕಿರುವ ಭಾವನೆ, ಅಂತಃಪ್ರಜ್ಞೆ, ಸೃಜನಶೀಲತೆಯಂತಹ ಸಂಕೀರ್ಣ ಮಾನಸಿಕ ಅಂಶಗಳು ಎಐನ ನರಮಂಡಲಕ್ಕಿರುವುದಿಲ್ಲ.
‘ಎಐ’ ಎಂಬ ಬೆಳಕು: ಅವಕಾಶಗಳು ಮತ್ತು ವಿಸ್ಮಯಗಳು
ಇಂದು ಎಐ ನಮ್ಮ ಬದುಕಿನಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿದೆ. ವೈದ್ಯಕೀಯ, ಶಿಕ್ಷಣ, ಕೃಷಿ, ಹವಾಮಾನ, ಆಟೋಮೊಬೈಲ್, ಅನುವಾದ, ಮಾಹಿತಿ ತಂತ್ರಜ್ಞಾನ, ಮನೋರಂಜನೆ ಮುಂತಾದ ಕ್ಷೇತ್ರಗಳಲ್ಲಿ ಇದರ ಕೊಡುಗೆಗಳು ಈಗಾಗಲೇ ಗಣನೀಯವಾಗಿವೆ. ಇವಿಷ್ಟೇ ಏಕೆ, ಮನುಷ್ಯ ಹೊರಪ್ರಪಂಚದಲ್ಲಿ ಮಾಡಬಹುದಾದ ಯಾವುದೇ ಕೆಲಸದಲ್ಲೂ ಎಐ ಸಹಾಯ ಮಾಡಬಲ್ಲದು ಎಂಬುದೇ ಇದರ ಹೆಗ್ಗಳಿಕೆ!
ವೈದ್ಯಕೀಯ ಕ್ಷೇತ್ರದಲ್ಲಿ ಕ್ಯಾನ್ಸರ್‌ನಂತಹ ಅನೇಕ ಮಾರಕ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ವೈದ್ಯರಿಗೆ ಎಐ ಸಹಾಯ ಮಾಡಬಲ್ಲದು; ಎಕ್ಸ್-ರೇ ಅಥವಾ ಎಂಆರ್‌ಐ ಸ್ಕ್ಯಾನ್‌ಗಳನ್ನು ವಿಶ್ಲೇಷಿಸಿ ಮಾನವನ ಕಣ್ಣಿಗೆ ಕಾಣದ ಸೂಕ್ಷ್ಮ ಬದಲಾವಣೆಗಳನ್ನು, ತನ್ಮೂಲಕ ಸಂಕೀರ್ಣ ರೋಗಗಳನ್ನು ಪತ್ತೆಹಚ್ಚಲು ನೆರವಾಗಬಲ್ಲದು; ರೋಗ ಚಿಕಿತ್ಸೆ ಮತ್ತು ಹೊಸ ವೈದ್ಯಕೀಯ ಸಂಶೋಧನೆಯಲ್ಲೂ ಇಂದು ಎಐ ಪ್ರಮುಖ ಪಾತ್ರವಹಿಸುತ್ತಿದೆ.
ಕೃಷಿ ಕ್ಷೇತ್ರದಲ್ಲಿ ಹವಾಮಾನ ವೈಪರೀತ್ಯ, ಮಳೆಬೆಳೆಯ ಬಗ್ಗೆ ನಿಖರವಾದ ಮಾಹಿತಿ ನೀಡಬಲ್ಲ ಎಐ, ಮಣ್ಣಿನ ಗುಣಮಟ್ಟವನ್ನು ವಿಶ್ಲೇಷಿಸಿ, ಯಾವ ಬೆಳೆ ಬೆಳೆಯಬೇಕು, ಯಾವಾಗ ಕೀಟನಾಶಕ ಬಳಸಬೇಕು ಎಂದು ರೈತರಿಗೆ ಸಲಹೆಯನ್ನೂ ನೀಡಬಲ್ಲದು.
ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಯೊಂದು ಮಗುವಿನ ಕಲಿಕೆಯ ಸಾಮರ್ಥ್ಯಕ್ಕೆ ತಕ್ಕಂತೆ ವೈಯಕ್ತಿಕ ಪಾಠಗಳನ್ನು ಸಿದ್ಧಪಡಿಸಿ, ಜ್ಞಾನಾರ್ಜನೆಯನ್ನು ಸುಲಭಗೊಳಿಸಬಲ್ಲದು. ಸಂಗೀತ ಸಂಯೋಜನೆ, ಚಿತ್ರಕಲೆ, ಕತೆ-ಕವನ ಬರೆಯುವುದಕ್ಕೂ ಇಂದು ಎಐ ಬಳಕೆಯಾಗುತ್ತಿದೆ. ಯಾವುದೇ ಭಾಷೆಯಿಂದ ಇನ್ಯಾವುದೇ ಭಾಷೆಗೆ ಸುಲಭವಾಗಿ ಅನುವಾದಿಸುವ ತಂತ್ರಾಂಶಗಳು, ಯಾವುದೇ ಪ್ರಶ್ನಾರ್ಥಕ ಸಮಸ್ಯೆಗೆ ಕ್ಷಣಾರ್ಧದಲ್ಲಿ ಎಲ್ಲ ಕೋನಗಳಿಂದ ಆಲೋಚಿಸಿ ತಯಾರಿಸಿದ ಅತ್ಯಂತ ಸಮಂಜಸವಾಗಿರುವ ಪರಿಹಾರ, ಇತರ ತಂತ್ರಾಂಶಗಳ ಅಭಿವೃದ್ಧಿಯಲ್ಲಿ (ಸಾಫ್ಟ್ವೇರ್ ಕೋಡ್ ಡೆವಲಪ್ಮೆಂಟ್) ನೆರವನ್ನೂ ಸಹ ಇದು ನೀಡಬಲ್ಲದು. ಹೀಗಾಗಿ ಬಡತನ, ಅನಾರೋಗ್ಯ, ನಿರಕ್ಷರತೆಯಂತಹ ಅನೇಕ ಸಾಮಾಜಿಕ ಅಜ್ಞಾನದ ಕತ್ತಲೆಗಳನ್ನು ಓಡಿಸುವ ಪ್ರಖರವಾದ ಬೆಳಕಾಗುವ ಶಕ್ತಿ ಎಐಗಿದೆ ಎಂದು ಒಪ್ಪಿಕೊಳ್ಳಲೇಬೇಕು.
ಅಂತೆಯೇ ಆಟೋಮೊಬೈಲ್ ಕ್ಷೇತ್ರದಲ್ಲಿ ಸ್ವಯಂ ಚಾಲಿತ ಕಾರುಗಳಲ್ಲಿ ಎಐ ಬಳಕೆಯಾಗುತ್ತಿದೆ. ರಸ್ತೆ, ಪಾದಚಾರಿಗಳು ಮತ್ತು ಇತರ ವಾಹನಗಳನ್ನು ಗುರುತಿಸಿ ಕಾರು ಸುರಕ್ಷಿತವಾಗಿ ಚಲಿಸಲು ಇದು ಸಹಾಯ ಮಾಡುತ್ತದೆ. ಮನೋರಂಜನೆಯ ಕ್ಷೇತ್ರದಲ್ಲಿ ಎಐ ವೈಯಕ್ತಿಕವಾಗಿ ನಮ್ಮ ಆಸಕ್ತಿಯ ವಿಷಯವನ್ನು, ವಿಡಿಯೋವನ್ನು ಸಿನೆಮಾವನ್ನು ಶಿಫಾರಸು ಮಾಡಬಲ್ಲದು. ನಮ್ಮ ವ್ಯಕ್ತಿತ್ವವನ್ನು ಅರಿತು ನಮಗೆ ತಕ್ಕ ಬಟ್ಟೆಬರೆ, ಆಭರಣ ಅಲಂಕಾರಗಳನ್ನು ಶಾಪಿಂಗ್ ಮಾಡಲು ನೆರವಾಗಬಲ್ಲದು. ಇಷ್ಟೇ ಅಲ್ಲದೆ ಚಾಟ್ ಜಿಪಿಟಿ, ಗೂಗಲ್ ಜೆಮಿನಿ ಮುಂತಾದ ಸಹಾಯಕ ಎಐ ತಂತ್ರಾಂಶಗಳು (ಎಐ ಚಾಟ್ ಬಾಟ್ಸ್), ರೋಡ್ ಟ್ರಾಫಿಕ್ ಸಿಗ್ನಲ್, ಫೋನ್ ಕ್ಯಾಮೆರಾ, ಗೂಗಲ್ ಫೋಟೋಸ್, ಹೆಲ್ತ್ ಮತ್ತು ಫಿಟ್ನೆಸ್ ಆ್ಯಪ್ ಮುಂತಾದ ಅನೇಕ ದಿನನಿತ್ಯದ ವ್ಯವಹಾರಗಳಲ್ಲಿ ಸಹ ಎಐ ಬಳಕೆಯಾಗುತ್ತದೆ.
ಹೀಗೆ ‘ಎಐ’ಜ್ಞಾನವು ಕೊನೆಯಿಲ್ಲದ ತನ್ನ ಅದ್ಭುತ ಕೊಡುಗೆಗಳಿಂದ ಭವಿಷ್ಯದಲ್ಲಿ ನಮ್ಮ ಜೀವನದ ಪ್ರತಿಯೊಂದು ಅಂಶದಲ್ಲೂ ಮಹತ್ತರವಾದ ಪಾತ್ರವಹಿಸಲಿದೆ. ಆದ್ದರಿಂದ ಇದರ ಬಗ್ಗೆ ತಿಳಿವಳಿಕೆಯನ್ನು ಹೊಂದಬೇಕಾಗಿರುವುದು ಆಧುನಿಕ ಜಗತ್ತಿನ ಅನಿವಾರ್ಯವಾಗಿ ಪರಿಣಮಿಸಿದೆ.
‘ಎಐ’ ಬೆಳಕಿನ ಬುಡದ ನೆರಳು: ಸವಾಲುಗಳು ಮತ್ತು ಜವಾಬ್ದಾರಿಗಳು
ದೀಪದ ಬುಡದಲ್ಲಿ ಕತ್ತಲೆ ಇದ್ದೇ ಇರುವಂತೆ ‘ಎಐ’ಜ್ಞಾನಕ್ಕೂ ಹಲವು ಕಠಿಣ ಸವಾಲುಗಳಿವೆ. ಅದು ಮನುಷ್ಯನಿಗಿಂತ ಬಹುಸುಲಭದಲ್ಲಿ ಬಹುವೇಗವಾಗಿ ತನ್ನಷ್ಟಕ್ಕೆ ತಾನೇ ಹಲವು ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೊಂದಿರುವುದರಿಂದ ಸಾಂಪ್ರದಾಯಿಕ ಉದ್ಯೋಗಗಳು ಮುಂದೆ ಇಲ್ಲವಾಗಬಹುದೆಂಬುದು ಸದ್ಯಕ್ಕಿರುವ ದೊಡ್ಡ ಆತಂಕ. ಆದರೆ ಇಂತಹ ಆತಂಕ ಮನುಕುಲಕ್ಕೇನೂ ಹೊಸತಲ್ಲ. ವಿದ್ಯುತ್ತನ್ನು ಕಂಡುಹಿಡಿದು ಯಾಂತ್ರಿಕ ಕೈಗಾರಿಕೆಯಲ್ಲಿ ಬಳಸಲಾರಂಭಿಸಿದಾಗ ಕ್ರಾಂತಿಕಾರಿ ಬದಲಾವಣೆಗಳಾಗಿ ಅನೇಕ ಕೈಕಸುಬುಗಳು ಮಾಯವಾದವು. ಕಂಪ್ಯೂಟರನ್ನು ಕಂಡುಹಿಡಿದು ಬ್ಯಾಂಕಿಂಗ್, ಆಡಳಿತ ಇನ್ನಿತರ ಸ್ಥಳಗಳಲ್ಲಿ ಬಳಸಲಾರಂಭಿಸಿದಾಗ ಈ ಕ್ಷೇತ್ರಗಳ ಕಾರ್ಯವಿಧಾನದಲ್ಲಿ ಅಗಾಧ ಬದಲಾವಣೆಗಳಾಗಿ ಸಾಂಪ್ರದಾಯಿಕ ಕೆಲಸಗಳು ಬದಲಾದವು. ಆಗೆಲ್ಲ ಎದ್ದ ಆರಂಭದ ಆತಂಕದ ಅಲೆಗಳ ಉಬ್ಬರವು ಕ್ರಮೇಣ ಇಳಿದು ಹೊಸ ವಿಧಾನಗಳಿಗೆ ಹೊಂದಿಕೊಂಡು ಸಮಾಜ ಮುಂದುವರೆಯಿತು ಎಂಬುದು ಈಗ ಇತಿಹಾಸ. ಇಲ್ಲಿಯೂ ಅಲ್ಲಮ ಪ್ರಭುವಿನ ಮಾತಿನಂತೆ ನಾವು ಸಾಗಿಬಂದ ಹಾದಿಯ ಅವಲೋಕನವೇ ನಮ್ಮ ವರ್ತಮಾನ ಮತ್ತು ಭವಿಷ್ಯಕ್ಕೆ ಉತ್ತರವಾಗಬಲ್ಲದು. ಬದಲಾವಣೆ ಜಗದ ನಿಯಮ. ಆದರೆ ಆರಾಮ ವಲಯದಿಂದ (ಕಂಫರ್ಟ್ ಝೋನ್) ಹೊರಬರಲು ಬುದ್ಧಿ ಮನಸ್ಸುಗಳನ್ನು ಒಪ್ಪಿಸುವುದು ಮಾನವನಿಗೆ ಕಷ್ಟದ ಕೆಲಸವೇ. ಆದ್ದರಿಂದ ಆರಂಭದ ವಿರೋಧಗಳು ಸಹಜವಾದರೂ ಅನಿವಾರ್ಯವಾದಾಗ ಹೊಂದಾಣಿಕೆ ಮಾಡಿಕೊಂಡು ಮುಂದೆ ಸಾಗುವುದು ನಾಗರಿಕತೆಯ ಲಕ್ಷಣಗಳಲ್ಲಿ ಒಂದು. ಹೊಸ ಆವಿಷ್ಕಾರದ ಜೊತೆಗೆ ಹೊಸ ರೀತಿಯ ಕೆಲಸಗಳು, ಸವಾಲುಗಳು ಹುಟ್ಟಿ ಮನುಷ್ಯನನ್ನು ಅವುಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತವೆ ಎಂಬುದು ನಮ್ಮ ಹಿಂದಣ ಹೆಜ್ಜೆಗಳಿಂದಲೇ ತಿಳಿದುಬರುತ್ತದೆ.
ಎಐ ನಮ್ಮ ವೈಯಕ್ತಿಕ ಮಾಹಿತಿಯನ್ನು ದುರುಪಯೋಗ ಮಾಡಿಕೊಳ್ಳುವ ಅಪಾಯವಿದೆ ಎನ್ನುವುದು ಮತ್ತೊಂದು ಆತಂಕ. ಈ ಶಕ್ತಿಶಾಲಿ ತಂತ್ರಜ್ಞಾನವನ್ನು ತಪ್ಪು ಕೈಗಳು ವಿನಾಶಕಾರಿ ಉದ್ದೇಶಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಇದ್ದೇ ಇದೆ ಎಂಬುದು ಸುಳ್ಳಲ್ಲ. ಆದರೆ ಯಾವುದೇ ಆವಿಷ್ಕಾರದ ಸದುಪಯೋಗದಿಂದ ಸೌಲಭ್ಯವಿರುವಂತೆ ದುರುಪಯೋಗದಿಂದ ಆಪತ್ತು ಒದಗುವುದು ಸಹ ಹೊಸ ವಿಷಯವಲ್ಲ. ದೀಪವಾಗಿ ದಾರಿ ತೋರಬಲ್ಲ, ಅಕ್ಕಿಯನ್ನು ಅನ್ನವಾಗಿಸಬಲ್ಲ ಬೆಂಕಿಯನ್ನು ನಿಯಂತ್ರಿಸದೆ ಬಿಟ್ಟರೆ ಅದು ಧಗಧಗಿಸಿ ಸರ್ವನಾಶ ಮಾಡಬಲ್ಲದು; ವಿದ್ಯುತ್ತನ್ನು ಹಿತಕ್ಕಾಗಿ ಬಳಸಿದಂತೆ ನಾಶಕ್ಕಾಗಿಯೂ ಬಳಸಬಹುದು. ಹಾಗಾಗಿ ಈ ಎಐ ದುರುಪಯೋಗದಿಂದ ಆಗಬಹುದಾದ ನಷ್ಟದ ಕುರಿತು ಜನರು ಅತ್ಯಂತ ಜಾಗೃತರಾಗುವ ಅಗತ್ಯವಿದೆ.
ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವಾಗ ಅದು ಎಲ್ಲೆಲ್ಲಿ ಹೋಗಿ ಹೇಗೆ ಬಳಕೆಯಾಗುವುದು ಎಂಬ ಅರಿವು ಸಾಮಾನ್ಯ ಜನರಿಗಿರುವುದಿಲ್ಲ. ಅಂತರ್ಜಾಲದಲ್ಲಿಯೋ ಅಥವಾ ಬ್ಯಾಂಕು, ಶಾಲೆ, ಕಾಲೇಜು ಅಥವಾ ಇನ್ಯಾವುದೋ ಸಂಸ್ಥೆಯೊಂದಿಗೆ ಹಂಚಿಕೊಂಡ ಮಾಹಿತಿಯನ್ನು ಕದ್ದು ಅದನ್ನು ಮೋಸ, ವಂಚನೆಗೆ ಬಳಸಿಕೊಳ್ಳುವ ಪ್ರವೃತ್ತಿ ಎಐ ವ್ಯಾಪಕವಾಗುವುದಕ್ಕೂ ಮೊದಲಿಂದಲೇ ಇತ್ತು. ಆದರೆ ಎಐಯನ್ನು ಉಪಯೋಗಿಸಿ ಮಾಹಿತಿಯನ್ನು ಪಡೆಯುವುದು/ಕದಿಯುವುದು (ಡೇಟಾ ಥೆಫ್ಟ್) ಮತ್ತು ಮಾಹಿತಿಯನ್ನು ಮಾರ್ಪಾಟು ಮಾಡುವುದು ಈಗ ಇನ್ನೂ ಸುಲಭವಾಗಿದೆ. ಆದ್ದರಿಂದ ಅದರ ಸುತ್ತಲ ವಂಚನೆಯ ಜಾಲವೂ ವ್ಯಾಪಕವಾಗುತ್ತಿದೆ. ದಿನದಿನವೂ ಹೊಸ ರೀತಿಯಲ್ಲಿ ಜನರನ್ನು ವಂಚಿಸುವ ಕುರಿತೇ ಯೋಚಿಸುತ್ತ ಯೋಜನೆ ಹಾಕುವ ದುರ್ಜನರ ಸಂಖ್ಯೆಯೂ ಹೆಚ್ಚುತ್ತಿದೆ.
ಹೆಚ್ಚುತ್ತಿರುವ ವಂಚನೆಯ ಜಾಲಕ್ಕೆ ಸಿಕ್ಕದಂತೆ ನಾವು ರೂಢಿಸಿಕೊಳ್ಳಬಹುದಾದ ಅಭ್ಯಾಸಗಳು ಇಂತಿವೆ - ಸಣ್ಣಕ್ಷರಗಳಲ್ಲಿ ಕಾಣಿಸದಂತಿರುವ ಘೋಷಣೆಗಳನ್ನು ಓದಿ ಅರಿತುಕೊಂಡು ಅಗತ್ಯಕ್ಕಿಂತ ಹೆಚ್ಚು ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಪ್ಪಿಸುವುದು, ಯಾವುದೇ QR ಕೋಡ್, ಒಟಿಪಿ ಬಳಕೆ ಮಾಡುವಾಗ ಮೈಯೆಲ್ಲಾ ಕಣ್ಣಾಗಿ ಜಾಗೃತರಾಗಿರುವುದು, ಅಪರಿಚಿತ ಫೋನ್ ನಂಬರಿನಿಂದ ಬರುವ ಕರೆಗಳು, ಪರಿಚಿತ ನಂಬರಿನಿಂದ ಸಹಾಯ ಯಾಚಿಸುತ್ತ ಬರುವ ಎಸ್.ಎಂ.ಎಸ್, ವ್ಹಾಟ್ಸಪ್ಪ್ ಮೆಸೇಜುಗಳು, ಫೇಸ್ಬುಕ್, ಇನ್ಸ್ಟಾಗ್ರಾಮಿನಂತಹ ಸಾಮಾಜಿಕ ತಾಣಗಳ ಡೈರೆಕ್ಟ್ ಮೆಸೇಜುಗಳು ಎಲ್ಲವನ್ನೂ ಸಂಶಯಾಸ್ಪದವಾಗಿಯೇ ನೋಡುವುದು ಉತ್ತಮ ಅಭ್ಯಾಸ. ಮುಗ್ಧ ಜನರ ಫೋನನ್ನು ದೂರದಿಂದಲೇ ಹ್ಯಾಕ್ ಮಾಡಿ ಅವರ ಫೋನಿನಿಂದಲೇ ಸಂದೇಶಗಳು ಹೋಗುವಂತೆ ಮಾಡುವ ಸಾಧ್ಯತೆಗಳಿವೆ. ಇತ್ತೀಚಿಗೆ ಅಂತಹ ಅನೇಕ ಘಟನೆಗಳು ನಡೆಯುತ್ತಿರುವುನ್ನು ನಿತ್ಯವೂ ನಮ್ಮ ಸುತ್ತಮುತ್ತ ನೋಡುತ್ತ, ಕೇಳುತ್ತಲಿದ್ದೇವೆ. ಅಂತಹ ಮೆಸೇಜುಗಳನ್ನು ಅತಿ ಸೂಕ್ಷ್ಮವಾಗಿ ಪರೀಕ್ಷಿಸಿ, ಅದರಲ್ಲಿರುವ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಉದಾಹರಣೆಗೆ, ನಮಗೆ ಗೊತ್ತಿಲ್ಲದ ಯಾವುದೇ ಹೊಸ ಮೂಲದಿಂದ ನಮ್ಮ ಅಕೌಂಟಿಗೆ ಹಣ ಬಂದಿದೆ ಎಂದು ತಿಳಿಸುವ ಎಸ್.ಎಂ.ಎಸ್ ಬಂದರೆ, ನಮ್ಮ ಬ್ಯಾಂಕ್ ಅಕೌಂಟಿನಿಂದ ಯಾವಾಗಲೂ ಬರುವ ಅಧಿಕೃತ ಎಸ್.ಎಂ.ಎಸ್ಸಿನೊಂದಿಗೆ ಈ ಮೆಸೇಜನ್ನು ಹೋಲಿಸಿ ಅವುಗಳಲ್ಲಿರುವ ಸಣ್ಣ ಸಣ್ಣ ವ್ಯತ್ಯಾಸಗಳನ್ನು ಕಂಡುಕೊಳ್ಳುವುದು, ನಮ್ಮ ಪರಿಚಿತರಿಂದಲೇ ಬಂದ ಸಹಾಯ ಯಾಚನೆಯ ಅಥವಾ ಯಾವುದೋ ವೈಯಕ್ತಿಕ ಮಾಹಿತಿಯನ್ನು ಬೇಡುವ ಎಸ್.ಎಂ.ಎಸ್ ಅಥವಾ ವಾಟ್ಸಪ್ಪ್ ಮೆಸೇಜುಗಳನ್ನೂ ಕಣ್ಣುಮುಚ್ಚಿ ನಂಬದೆ, ಆ ನಮ್ಮ ಪರಿಚಿತರನ್ನು ಹೇಗಾದರೂ ಸಂಪರ್ಕಿಸಿ ಅವರು ಕಳುಹಿಸಿದ ಮೆಸೇಜು ನಿಜವೇ ಎಂದು ದೃಢಪಡಿಸಿಕೊಂಡು ಮುಂದುವರೆಯುವುದು ಇಂತಹ ಜಾಗರೂಕತೆಗಳು ಅತಿ ಆವಶ್ಯಕ.
ಎಐನ ಸಹಾಯದಿಂದ ಯಾವುದೇ ಮಾಹಿತಿಯನ್ನು ತಿರುಚಿ ಅದನ್ನು ನಿಜವೇ ಎಂಬಂತೆ ಕಾಣುವ ಸುಳ್ಳಾದ ಹೊಸ ಮಾಹಿತಿಯನ್ನಾಗಿಸಿ ಎಲ್ಲೆಡೆ ಹರಡಿ ಮೋಸ ಮಾಡುವ ವಿಧಾನ ಕೂಡ ಈಗ ಪ್ರಚಲಿತವಾಗಿದೆ. ಯಾರದ್ದೋ ವಿಡಿಯೋದಲ್ಲಿ ಇನ್ಯಾರದ್ದೋ ಮುಖ, ಯಾರೋ ಆಡಿರುವ ಮಾತುಗಳನ್ನು ಸಂಪೂರ್ಣವಾಗಿ ಬದಲಿಸಿ ಅವರದೇ ಧ್ವನಿಯಲ್ಲಿ ಬೇರೆಯೇ ಮಾತುಗಳ ಜೋಡಣೆ, ಪೂರ್ತಿ ಕೃತಕವಾಗಿಯೇ ತಯಾರಾಗಿ ನೈಜವೆಂದೇ ತೋರುವ ವಿಡಿಯೋಗಳು ಇಂತಹವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕಾಣಬಹುದಾಗಿದೆ. ‘ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು’ ಎನ್ನುವ ಗಾದೆಮಾತು ಎಐ ಪ್ರಪಂಚಕ್ಕೆ ಸೂಕ್ತವಾಗಿ ಅನ್ವಯವಾಗುತ್ತದೆ. ಪ್ರಮಾಣಿಸಿ ನೋಡಿ ಮಾಹಿತಿಯನ್ನು ಒರೆಗೆ ಹಚ್ಚಿ ಸುಳ್ಳನ್ನು ಸತ್ಯದಿಂದ ಬೇರ್ಪಡಿಸಿ ಸ್ವೀಕರಿಸುವ ವಿವೇಕ ನಮಗಿರಬೇಕಷ್ಟೆ.
ಸೃಜನಾತ್ಮಕ ಕಾರ್ಯಗಳಲ್ಲಿ ಎಐ ಬಳಕೆಯನ್ನು ಕುರಿತೂ ಆತಂಕವಿದೆ. ಸೃಜನಶೀಲ ಕಲೆಗಳ ಮೂಲ ಉದ್ದೇಶವು ಮನುಷ್ಯನಿಗೆ ಮನೋಲ್ಲಾಸವನ್ನು ತಂದುಕೊಡುವುದೇ ಆಗಿರುತ್ತದೆ. ಕಲೆಯು ಕಲಾವಿದನಿಗೆ ಆತ್ಮ ಸಂತೋಷಕ್ಕಿಂತ ಹೆಚ್ಚಿನ ಯಾವುದೇ ಲಾಭವನ್ನು ನೀಡಲಾರದೆಂದು ಉತ್ತಮ ಕಲಾವಿದರೆಲ್ಲ ಒಪ್ಪುವರು. ಹಾಗಾಗಿ ಆತ್ಮಸಂತೋಷಕ್ಕಾಗಿ ಹೊಸತನ್ನು ಸೃಷ್ಟಿ ಮಾಡುವ ಕಲಾವಿದರು ಎಐ ಬಳಕೆಯ ಕುರಿತು ಆತಂಕ ಪಡಬೇಕಿಲ್ಲ, ಅವರು ಅದನ್ನು ಬಳಸಲೂ ಬೇಕಿಲ್ಲ. ಇನ್ನು ಚಿತ್ರಕಲೆ, ಸಾಹಿತ್ಯಗಳಿಂದ ಆರ್ಥಿಕ ಲಾಭಗಳಿಸುವ ಉದ್ದೇಶವಿರುವವರು, ಜೀವನಕ್ಕಾಗಿ ಕಲೆಯನ್ನು ಆಶ್ರಯಿಸಿರುವವರು ತಮ್ಮ ಸೃಜನಶೀಲತೆ, ಸಮಯ ಮತ್ತಿತರ ಮೌಲ್ಯಗಳ ಒಂದು ಚೌಕಟ್ಟನ್ನು ದೃಢಪಡಿಸಿಕೊಂಡು ಎಐ ತಂತ್ರಜ್ಞಾನದ ಬಳಕೆ ಮಾಡಿ ತಮ್ಮ ಕೆಲಸವನ್ನು ಸುಲಭಗೊಳಿಸಿಕೊಳ್ಳುವುದನ್ನು ತಪ್ಪೆನ್ನಲಾಗದು. ಆದರೆ ಎಐ ಎಂದಿಗೂ ಇದುವರೆಗೆ ಇಲ್ಲದ ಹೊಸತನ್ನು ಸೃಷ್ಟಿಸಲಾರದು ಎಂಬುದನ್ನು ಮರೆಯುವಂತಿಲ್ಲ. ‘ಅಪಾರೇ ಕಾವ್ಯ ಸಂಸಾರೇ ಕವಿರೇವ ಪ್ರಜಾಪತಿಃ’ ಎಂಬ ಆನಂದವರ್ಧನನ ಮಾತಿನಂತೆ ಪ್ರತಿಭೆಯುಳ್ಳ ಉತ್ತಮ ಕವಿಯು(ಕಲಾವಿದನು) ಬ್ರಹ್ಮನಂತೆ; ಅವನು ಜಗತ್ತಿನಲ್ಲಿರದ ಹೊಸತನ್ನು ಸೃಷ್ಟಿಸುವ ಶಕ್ತಿಯುಳ್ಳವನು. ಈ ಶಕ್ತಿಯು ಎಐಗೆ ಇರಲು ಸಾಧ್ಯವಿಲ್ಲ.
ಒಟ್ಟಿನಲ್ಲಿ ಎಐ ವ್ಯವಸ್ಥೆಗಳನ್ನು ರೂಪಿಸುವವರು ಮಾನವರಾದ್ದರಿಂದ, ಅವರ ಯೋಚನೆಗಳಲ್ಲಿರುವ ತಾರತಮ್ಯಗಳು ಈ ತಂತ್ರಾಂಶಗಳಲ್ಲೂ ಸೇರಿಕೊಳ್ಳಬಹುದು. ಮಾನವನ ಮನಸ್ಸು, ಬುದ್ಧಿಗಳು ಮಾಡಬಹುದಾದ ಎಲ್ಲ ರೀತಿಯ ಕೆಡಕುಗಳನ್ನು ಎಐ ಕೂಡ ಮಾಡಲು ಸಾಧ್ಯವಿದೆ. ಇದರಲ್ಲಿ ಆಶ್ಚರ್ಯವೇನಿದೆ?
ಮೇಲಿನ ಎಲ್ಲ ಸವಾಲುಗಳು ಈಗ ನರಕಾಸುರನಂತೆ ನಮ್ಮ ಮುಂದಿವೆ. ಅದನ್ನು ಮಣಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕೆ ಬೇಕಾಗಿರುವುದು ವಿವೇಕವೆಂಬ ಹಣತೆ. ಇದು ಸಹ ನಮಗೆ ಹೊಸತಲ್ಲ. ನಮ್ಮ ಭಗವದ್ಗೀತೆಯಲ್ಲಿ ಅರ್ಜುನನಿಗೆ ಎಲ್ಲ ರೀತಿಯ ಜ್ಞಾನವನ್ನು ಬೋಧಿಸಿದ ಕೃಷ್ಣ ಪರಮಾತ್ಮನು ಕೊನೆಯಲ್ಲಿ ‘ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು’ ಎಂದಿದ್ದಾನಲ್ಲವೇ? ಗುರುವೇ ನೀಡಿದ ಜ್ಞಾನವನ್ನಾದರೂ ಸುಮ್ಮನೆ ಒಪ್ಪದೆ, ಆಳವಾಗಿ ವಿಮರ್ಶಿಸಿ ವಿವೇಚಿಸಿ ಸರಿ ಎನಿಸಿದ್ದನ್ನು ಮಾಡು ಎನ್ನುವುದು ನಮ್ಮ ಸಂಸ್ಕೃತಿ. ಆದ್ದರಿಂದ ನಮ್ಮ ಪರಂಪರೆ, ಸಂಸ್ಕೃತಿಗಳ ಮೂಲದಿಂದ ನಮಗೆ ದೊರೆಯುವ ವಿವೇಕವೆಂಬ ಅಸ್ತ್ರವನ್ನು ಸದುಪಯೋಗ ಮಾಡಿಕೊಂಡು ನಮ್ಮಲ್ಲಿರುವ ‘ಕೃಷ್ಣಪ್ರಜ್ಞೆ’ಯನ್ನು ಜಾಗೃತಗೊಳಿಸಿಕೊಂಡರೆ ಇಂತಹ ಹೊಸಹೊಸ ನರಕಾಸುರರನ್ನು ಅಂತ್ಯಗೊಳಿಸುವ ಅಂತಃಸತ್ತ್ವವು ನಮಗೆ ಖಂಡಿತ ಲಭಿಸುವುದು ಎನ್ನುವುದರಲ್ಲಿ ಸಂಶಯವಿಲ್ಲ.
ಹಾಗಾಗಿ ಎಐ ಎಂಬ ಈ ಹೊಸ ಬೆಳಕನ್ನು ಕಂಡು ನಾವು ಹೆದರಬೇಕೇ? ಖಂಡಿತ ಬೇಡ. ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಬೆಂಕಿಯನ್ನು ಕಂಡು ಹೆದರದೇ ಅದನ್ನು ನಿಯಂತ್ರಿಸಿ ಬಳಸಲು ಕಲಿತಂತೆ ಎಐ ಎಂಬ ಈ ಜ್ಞಾನಶಕ್ತಿಯನ್ನು ನಾವು ವಿವೇಕದಿಂದ ಮಣಿಸಿ, ಮಾನವೀಯ ಮೌಲ್ಯಗಳ ಚೌಕಟ್ಟಿನಲ್ಲಿ ಬಳಸಲು ಕಲಿಯಬೇಕು. ಈ ದೀಪಾವಳಿಯಂದು ನಾವು ಮನೆಯಲ್ಲಿ ದೀಪ ಹಚ್ಚುವಾಗ ನಮ್ಮ ಸಂಸ್ಕೃತಿಯ ಮೂಲದಲ್ಲಿರುವ ವಿಮರ್ಶೆ, ವಿವೇಕಗಳನ್ನು ಬಳಸುವ ಸಂಕಲ್ಪವನ್ನು ಮಾಡೋಣ. ವಿವೇಚನೆಯಿಲ್ಲದೆ ಅನ್ಯರನ್ನು ಅಂಧಾನುಕರಣೆ ಮಾಡುತ್ತ ನಮ್ಮತನವನ್ನು ಬಿಟ್ಟು ಬಾಳದೇ ಆತ್ಮನಿರ್ಭರರಾಗಿ ನಮ್ಮ ಸಂಸ್ಕೃತಿಯು ತೋರುವ ಹಾದಿಯಲ್ಲಿ ಮುನ್ನಡೆಯೋಣ. ಅಜ್ಞಾನದಿಂದ ಜ್ಞಾನದೆಡೆಗಿನ ನಮ್ಮ ಪಯಣದಲ್ಲಿ, ಈ ಹೊಸ ‘ಎಐ’ಜ್ಞಾನವನ್ನು ಜವಾಬ್ದಾರಿಯಿಂದ ಬಳಸೋಣ. ಅದು ಕೇವಲ ಕೆಲವರ ಸ್ವತ್ತಾಗದೆ, ಸರ್ವರಿಗೂ ಒಳಿತನ್ನು ಮಾಡುವ ಜ್ಯೋತಿಯಾಗಲಿ. ತಂತ್ರಜ್ಞಾನ ನಮ್ಮನ್ನು ಆಳುವ ಬದಲು, ಮಾನವ ಕಲ್ಯಾಣಕ್ಕಾಗಿ ಅದನ್ನು ನಾವು ಆಳುವ ವಿವೇಕವು ನಮ್ಮದಾಗಲಿ.
ಈ ದೀಪಾವಳಿಯು ಹಣತೆಯ ಬೆಳಕನ್ನೊಂದೇ ಅಲ್ಲದೆ ನಮ್ಮೆಲ್ಲರಲ್ಲಿ ವಿವೇಕದ ಬೆಳಕನ್ನೂ ಪಸರಿಸಲಿ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.




Comments