top of page

ಭಾಷೆಯ ಅ(ನ)ವಶ್ಯಕತೆ!!

  • vidyaram2
  • Dec 22, 2022
  • 2 min read

Updated: Mar 13, 2023


ಇದು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸವಾಗಿದ್ದ ನನ್ನ ಪತಿರಾಯರೊಂದಿಗೆ ಮದುವೆಯಾಗಿ ನಾನು ಅಲ್ಲಿಗೆ ಹೋಗಿ ಆರೆಂಟು ತಿಂಗಳು ಕಳೆದಿತ್ತು. ಎಲ್ಲಾ ಅಮೆರಿಕಾವಾಸಿ ಮಕ್ಕಳಂತೆ, ನಮ್ಮತ್ತೆ, ಮಾವನವರಿಗೆ ಅಮೆರಿಕ ದರ್ಶನ ಮಾಡಿಸುವುದು ನಮ್ಮ ಕರ್ತವ್ಯವೆಂದು ತಿಳಿದು ಅವರನ್ನು ಕರೆಸಲು ಏರ್ಪಾಟು ಮಾಡಿದ್ದೆವು. ಎಪ್ಪತ್ತರ ಹೊಸ್ತಿಲಲ್ಲಿದ್ದ ಅವರಿಬ್ಬರನ್ನೂ ಮೂರು ತಿಂಗಳೊಳಗೆ ಸಾಧ್ಯವಾದಷ್ಟು ತಾಣಗಳನ್ನು ತೋರಿಸಿ ಹಿಂದಕ್ಕೆ ಕಳುಹಿಸುವ ಯೋಜನೆ ನಮ್ಮದಾಗಿತ್ತು. ನಾವು ಯೋಜಿಸಿದಂತೆ ನ್ಯೂಯಾರ್ಕ್, ವಾಷಿಂಗ್ಟನ್ ಡಿಸಿ, ನಯಾಗರ ಫಾಲ್ಸ್, ಅಟ್ಲಾಂಟಿಕ್ ಸಿಟಿ ಇನ್ನೂ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತಿದೆವು. ಬಹಳ ಆಸಕ್ತರಾದ ನಮ್ಮಾವನವರು ಎಲ್ಲಾ ಸ್ಥಳಗಳ ಮಾಹಿತಿ, ಅಲ್ಲಿ ಹರಿಯುವ ನದಿ, ಸೇತುವೆ, ರಸ್ತೆ, ಪಾರ್ಕುಗಳ ಹೆಸರುಗಳನ್ನೂ ತಮ್ಮ ಡೈರಿಯಲ್ಲಿ ದಾಖಲಿಸಿಕೊಳ್ಳುತ್ತಾ, ಅವನ್ನು ಮತ್ತೆ ಮೆಲಕು ಹಾಕುತ್ತಾ ಖುಷಿ ಪಡುತ್ತಿದ್ದರು. ಹೆಚ್ಚಿನ ಆಯಸ್ಸೆಲ್ಲಾ ಕೇವಲ ಅಡುಗೆ ಮನೆ ಜವಾಬ್ದಾರಿಯಲ್ಲಿ ಕಳೆದ, ಅದೇ ಸರ್ವಸ್ವವೂ ಆಗಿದ್ದ ಮುಗ್ಧೆ ನಮ್ಮತ್ತೆಗೆ ಇದ್ಯಾವುದೂ ರುಚಿಸಲಿಲ್ಲ. ಪಾಪ, ಅವರು ಯಾವ ಸ್ಥಳಕ್ಕೆ ಹೋದರೂ "ಇಷ್ಟೆಲ್ಲಾ ಸುತ್ತಿಕೊಂಡು ನಾವು ಮತ್ತೆ ಮೊನ್ನೆ ಬಂದ ಕಡೆಗೇ ಬಂದ್ವಲ್ಲ, ಇದೇ ರೋಡಲ್ಲಿ ಹೋಗಿದ್ವಿ, ಇದೇ ಬಿಲ್ಡಿಂಗ್ ನೋಡಿದ್ದೆ" ಎನ್ನುತ್ತಿದ್ದರು! "ನಿನಗೆ ವಾಷಿಂಗ್ಟನ್ ಡಿಸಿಯೂ ಒಂದೇ, ಮೇವುಡ್ ಕೌಂಟಿಯೂ ಒಂದೇ" ಎಂದು ಗಂಡ, ಮಗನ ನಗೆಪಾಟಲಿಗೆ ಗುರಿಯಾಗುತ್ತಿದ್ದರು. ಮಾನವ ನಿರ್ಮಿತ ಸುವ್ಯವಸ್ಥಿತ ಕಾಂಕ್ರೀಟ್ ಕಾಡಿನಲ್ಲಿ ಎಲ್ಲಾ ರೋಡುಗಳು, ಕಟ್ಟಡಗಳು ಒಂದೇ ರೀತಿ ತೋರಿದರೆ ಪಾಪ ಅವರದ್ದೇನು ತಪ್ಪು;)


ಮೂರು ತಿಂಗಳು ಕಳೆದು ಅವರು ಹೊರಡುವ ದಿನ ಹತ್ತಿರ ಬಂದಾಗ ದುರಾದೃಷ್ಟವಶಾತ್ ನಮ್ಮತ್ತೆ ಮೆಟ್ಟಿಲಿನಿಂದ ಬಿದ್ದು ಕಾಲು ಮುರಿದುಕೊಂಡು, ಐದು ದಿನ ಆಸ್ಪತ್ರೆವಾಸ, ಮತ್ತೆ ಮೂರು ತಿಂಗಳು ಅಮೆರಿಕಾವಾಸದಲ್ಲೆ ಕಳೆಯುವಂತಾಯಿತು. ಸಾಮಾನ್ಯವಾಗಿ ರೋಗಿಯಲ್ಲದೆ ಇನ್ಯಾರು ಆಸ್ಪತ್ರೆಯಲ್ಲಿ ಉಳಿಯುವ ಪದ್ಧತಿ ಅಲ್ಲಿಲ್ಲ. ನಮ್ಮತ್ತೆಗೆ ಇಂಗ್ಲಿಷ್ ಬಾರದ ಕಾರಣ, ನನಗೆ ಅವರೊಂದಿಗೆ ಅವರ ಬೆಡ್ ಕೆಳಗೆ ಮಲಗುವ ವ್ಯವಸ್ಥೆ ದೊರೆಯಿತು. ನಮಗೆ ದೊರೆತದ್ದು ಇಬ್ಬರು ರೋಗಿಗಳಿಗೆ ಸೇರಿ ಇರುವ ಒಂದು ಕೊಠಡಿ. ನಾವಿದ್ದ ಕೊಠಡಿಯಲ್ಲಿ ಇನ್ನೊಬ್ಬ ರೋಗಿ ಬಹಳ ವಯಸ್ಸಾದ ಬುದ್ಧಿ ಸೂಕ್ಷ್ಮ ಅಳಿದ ಅಮೆರಿಕನ್ ಮಹಿಳೆ. ಜೊತೆಯಲ್ಲಿ ತಮ್ಮವರ್ಯಾರೂ ಇರದ ಅವರು, ಹಗಲೂ, ರಾತ್ರಿ ತಮ್ಮ ನೋವಿನ ಬಗ್ಗೆ ಜೋರಾಗಿ ಮಾತನಾಡುತ್ತಾ ನರ್ಸ್ ನನ್ನ ಮಗನ್ನ ಕರೆಯಿರಿ ಎಂದು ಬೇಡುತ್ತಿದ್ದರು. ಪಾಪ ಯಾರ ಹತ್ತಿರ ಆದರೂ ತಮ್ಮ ನೋವು ತೋಡಿಕೊಳ್ಳಲು ಹಂಬಲಿಸಿ, ನಮ್ಮ ಹತ್ತಿರವೂ ಹೇಳುತ್ತಿದ್ದರು. ನಮ್ಮತ್ತೆಗೆ ಅವರ ಭಾಷೆ ಬರಲ್ಲ ಎಂಬ ಕಲ್ಪನೆಯೇ ಇಲ್ಲದೆ ಅವರು ಇವರ ಹತ್ತಿರ ದುಃಖ ಹೇಳಿಕೊಳ್ಳುತ್ತಿದ್ದರು, ನಮ್ಮತ್ತೆ ಅವರಿಗೆ ಕನ್ನಡ ಬರಲ್ಲ ಎಂಬ ಕಲ್ಪನೆಯೇ ಇಲ್ಲದಂತೆ, ಅವರ ಹತ್ತಿರ ಕನ್ನಡದಲ್ಲಿ ಮಾತನಾಡುತ್ತಿದ್ದರು!

ಅವರು "ನನ್ನ ಮಗ ಜಾನ್ ಒಂದು ದಿನವೂ ಬರಲಿಲ್ಲ, ನನಗೆ ಅವನನ್ನು ನೋಡಬೇಕು" ಎಂದು ಇಂಗ್ಲಿಷಿನಲ್ಲಿ ಹೇಳಿದರೆ, ನಮ್ಮತ್ತೆ "ಪಾಪ ತುಂಬಾ ನೋವುತ್ತ….ಹೌದು ಇವಳು ನನ್ನ ಸೊಸೆ, ಅಮೆರಿಕ ನೋಡಕ್ಕೆ ಬಂದಿದ್ವಿ, ಹೊರಡುವಾಗ ಕಾಲು ಮುರಿದುಕೊಂಡೆ, ಪಾಪ ಇವಳು ಇಷ್ಟು ಬೇಗ ನನ್ನ ಚಾಕರಿ ಮಾಡೋ ಹಾಗಾಯ್ತು" ಅನ್ನುತ್ತಿದ್ದರು. ರಾತ್ರಿ ಎಲ್ಲಾ ಅವರು ಜಾನ್, ಜಾನ್ ಎಂದು ಕನವರಿಸುತ್ತಿದ್ದರೆ ನಮ್ಮತ್ತೆ "ಸುಮ್ನೆ ಮಲಗಿಕೊಳ್ಳಿ ಪ್ಲೀಸ್, ನನಗೂ ನಿದ್ದೆ ಹಾಳಾಗುತ್ತೆ ನಿಮ್ಮಿಂದ" ಎಂದು ಗದರುತ್ತಿದ್ದರು. ಅವರು ಸುಮ್ಮನಾಗದೆ ಇದ್ರೆ ನನ್ನ ಬಳಿ ಎಷ್ಟು ಹೇಳಿದ್ರೂ ಅರ್ಥ ಆಗಲ್ಲ ಈ ಮುದುಕಿಗೆ ಅಂತ ಹೇಳ್ತಿದ್ರು!


ಕರ್ತವ್ಯದ ಮೇಲೆ ಬರುತ್ತಿದ್ದ ದಾದಿಯರು ಮತ್ತು ನಾನು ಮೊದಮೊದಲು ಒಬ್ಬರ ಭಾಷೆ ಇನ್ನೊಬ್ಬರಿಗೆ ತಿಳಿಯದೆಂದು ಮತ್ತೆ ಮತ್ತೆ ಅವರಿಬ್ಬರಿಗೂ ಹೇಳಲೆತ್ನಿಸುತ್ತಿದ್ದರೂ, ಇಬ್ಬರೂ ನಮ್ಮ ಮಾತನ್ನು ಗಮನಕ್ಕೆ ತೆಗೆದುಕೊಳ್ಳದೆ ಪರಸ್ಪರ ಸಂಭಾಷಣೆ ಮುಂದುವರಿಸುತ್ತಿದ್ದರು. ಕೇಳಲು ಬಹಳ ನಗು ತರಿಸುವ ಸಂಭಾಷಣೆಗಳನ್ನು ಪೂರ್ತಿಯಾಗಿ ರಸಾಸ್ವಾದ ಮಾಡಿದವಳು ಎರಡೂ ಭಾಷೆಗಳನ್ನು ಬಲ್ಲ ನಾನೊಬ್ಬಳೇ! ಆಸ್ಪತ್ರೆಯ ಗಂಭೀರ ವಾತಾವರಣದಲ್ಲಿ ನಾವಲ್ಲಿದ್ದ ಐದು ದಿನಗಳಲ್ಲಿ, ಇದೊಂದು ಸಣ್ಣ ಮನರಂಜನೆಯಾಗಿ ನನಗೆ ಕಂಡಿತ್ತು. ದಿನವೂ ಭೇಟಿಯ ಅವಧಿಯಲ್ಲಿ ಬರುತ್ತಿದ್ದ ನಮ್ಮನೆಯವರಿಗೆ ಹೇಳಲು ಸಿಗುವ ಮುದದ ವಿಷಯವಾಗಿತ್ತು.


ಅಂತೂ ಭಾಷೆಯ ಅವಶ್ಯಕತೆ ಇಲ್ಲದೇ ಎರಡು ಜೀವಗಳು ತಮ್ಮ ನೋವು, ನಲಿವನ್ನ ಹೇಗೆ ಹಂಚಿಕೊಳ್ಳಬಹುದು ಎಂದು ಇವರನ್ನು ನೋಡುತ್ತಾ ನಾವು ವಿಸ್ಮಿತರಾಗುತ್ತಿದ್ದೆವು. ಹಾಗೆಯೇ ಅಲ್ಲಿ ಯಾರನ್ನೂ ಹಚ್ಚಿಕೊಳ್ಳದ ಕುಟುಂಬ ಸಂಸ್ಕೃತಿ (ಒಂದು ದಿನವೂ ನೋಡಲು ಬಾರದ ಮುದುಕಿಯ ಮಕ್ಕಳು) ಮತ್ತು ನಮ್ಮ ಭಾರತೀಯ ಸಂಸ್ಕೃತಿಯ(ದಿನವೂ ಜೊತೆಗಿದ್ದ ನಾನು, ದಿನಾ ನೋಡಲು ಬರುತ್ತಿದ್ದ ನಮ್ಮವರು) ತುಲನೆಯನ್ನು ಮನಸ್ಸು ಬಹು ಕಾಲದವರೆಗೆ ಮಾಡುತ್ತಿತ್ತು.






Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page