ಭಾರತೀಯ ಸೌಂದರ್ಯಶಾಸ್ತ್ರಕ್ಕೆ ಹೀಗೊಂದು ಸರಳ ಪ್ರವೇಶ
- vidyaram2
- May 18
- 4 min read

ನಿರಂತರವಾಗಿ ಹೊಸತನ್ನೇನಾದರೂ ಕಲಿಯುತ್ತಲಿರುವುದು ಮೈಮನಗಳನ್ನು ಚುರುಕುಗೊಳಿಸಿ ಲವಲವಿಕೆಯಿಂದಿರಲು ಉತ್ತಮವಾದ ಉಪಾಯ. ಯಾವುದೇ ವಿಷಯವನ್ನು ಸ್ವಯಮಾಚಾರ್ಯರಾಗಿ ಸ್ವಾಧ್ಯಾಯದಿಂದ ಅಥವಾ ಗುರುಮುಖೇನ ಕಲಿಯಲು ಸಾಧ್ಯವಿದೆ. ಇಂದಿನ ಯುಗದಲ್ಲಂತೂ ಅಂತರ್ಜಾಲದ ಮೂಲಕ ಹೊಸ ವಿಷಯಗಳನ್ನು ಅರಿಯುವುದು ಬಹು ಸುಲಭವಾಗಿದೆ. ಆದರೆ ಅವಕಾಶವಿದ್ದಲ್ಲಿ, ನಮ್ಮ ಭಾರತೀಯ ಪರಂಪರೆಯಲ್ಲಿ ಹೇಳುವಂತೆ ಗುರುಮುಖೇನ ಕಲಿಯುವುದೇ ಶ್ರೇಷ್ಠ.
ಮುಂಬೈ ವಿಶ್ವವಿದ್ಯಾಲಯದಲ್ಲಿ ವಯಸ್ಸಿನ ನಿರ್ಬಂಧವಿಲ್ಲದೆ ಅನೇಕ ವಿಷಯಗಳ ಕಲಿಕೆಗೆ ಅವಕಾಶವಿರುವುದು ಹೆಮ್ಮೆಯ ಸಂಗತಿ. ಇಲ್ಲಿಯ ವಿವಿಧ ಭಾಷಾ ವಿಭಾಗಗಳಲ್ಲಿ ಅನೇಕ ಭಾಷೆಗಳ ಕಲಿಕೆಗೆ ಅವಕಾಶವಿದೆ. ಹಿಂದಿ, ಮರಾಠಿ, ಕನ್ನಡ, ಗುಜರಾತಿ, ಸಿಂಧಿ ಮುಂತಾದ ಭಾರತೀಯ ಭಾಷೆಗಳ ಜೊತೆಗೆ ಇಂದು ಬಹುತೇಕ ನಶಿಸಿಹೋಗಿ ಅಪರೂಪದ್ದಾಗಿರುವ ಝೋರಾಷ್ಟ್ರಿಯನ್ ಪಾರ್ಸಿಗಳ ಮಾತೃಭಾಷೆಯಾದ ಅವೆಸ್ತಾ ಪಹಲ್ವಿ, ಅಂತೆಯೇ ಮಾತೃಭಾಷೆಯಾಗಿ ದೈನಂದಿನ ಸಂವಹನೆಯಲ್ಲಿ ಅಷ್ಟಾಗಿ ಉಳಿಯದ ಸಂಸ್ಕೃತ, ಪಾಲಿ, ಪ್ರಾಕೃತ ಇಂತಹ ಶಾಸ್ತ್ರೀಯಭಾಷೆಗಳಲ್ಲದೆ ಇಂಗ್ಲಿಷ್, ಪರ್ಷಿಯನ್, ಜರ್ಮನ್, ಜಪಾನೀಸ್, ಚೈನೀಸ್ ಮುಂತಾದ ವಿದೇಶಿ ಭಾಷೆಗಳನ್ನೂ ಕಲಿಯುವ ಅವಕಾಶವಿಲ್ಲಿದೆ. ಅಷ್ಟೇ ಅಲ್ಲದೆ ತತ್ತ್ವಶಾಸ್ತ್ರ, ಮನಃಶಾಸ್ತ್ರ, ಯೋಗ ಮುಂತಾದ ವಿಭಾಗಗಳಲ್ಲಿ ಅನೇಕ ಹೊಸ ವಿಷಯದ ಕೋರ್ಸುಗಳಿವೆ. ಹೊಸ ವಿಷಯವೊಂದನ್ನು ಕಲಿಯುವಾಗ ಆರಂಭದ ಪ್ರವೇಶಕ್ಕಾಗಿ ಸರ್ಟಿಫಿಕೇಟ್ ಕೋರ್ಸ್, ನಂತರ ಡಿಪ್ಲೊಮಾ, ಎಂ.ಎ., ಪಿಎಚ್.ಡಿ ಹೀಗೆ ಹಂತಹಂತವಾಗಿ ಕ್ರಮಬದ್ಧ ಕಲಿಕೆ ಇಲ್ಲಿ ಸಾಧ್ಯವಿದೆ. ಕ್ರಮಬದ್ಧವಾದ ಪಠ್ಯಗಳಲ್ಲಿ ಅಳವಡಿಸಲಾಗಿರುವ ನಿಗದಿತ ಸಮಯದ ಚೌಕಟ್ಟಿನಲ್ಲಿ ನಡೆಸುವ ಇಂತಹ ಶಿಸ್ತಿನ ಕಲಿಯುವಿಕೆಯಿಂದ ಪ್ರಯೋಜನ ಹೆಚ್ಚು. ಇವುಗಳಲ್ಲಿ ಅನೇಕ ಕೋರ್ಸುಗಳು ಆನ್ಲೈನ್ ಮೂಲಕವೇ ನಡೆಯುವಂಥದ್ದಾಗಿರುವುದರಿಂದ ಕಲಿಯುವವರಿಗೆ ಹೆಚ್ಚಿನ ಅನುಕೂಲ.
ವಿಶ್ವವಿದ್ಯಾಲಯವು ಕಲ್ಪಿಸಿರುವ ಇಂತಹ ಸದವಕಾಶವನ್ನು ಉಪಯೋಗಿಸಿಕೊಂಡು ಕನ್ನಡ ವಿಭಾಗದಲ್ಲಿ ಎಂ.ಎ. ಮಾಡಿದ ನಂತರ ನಾನು ಇಲ್ಲಿಯ ತತ್ತ್ವಶಾಸ್ತ್ರ ವಿಭಾಗದಲ್ಲಿ ಭಾರತೀಯ ಸೌಂದರ್ಯಶಾಸ್ತ್ರ (Diploma in Indian Aesthetics) ವಿಷಯದಲ್ಲಿ ಡಿಪ್ಲೋಮಾ ಕೋರ್ಸನ್ನು ಈಗಷ್ಟೇ ಮುಗಿಸಿದೆ. ಈ ವಿಷಯದ ಕುರಿತು ಸಮಾನಮನಸ್ಕರೊಂದಿಗೆ ಹಂಚಿಕೊಳ್ಳುವುದಕ್ಕಾಗಿ ಈ ಲೇಖನ.
ಸೌಂದರ್ಯ ಎಂದರೇನು, ಅದು ನೋಡುವ ವಸ್ತುವಿನಲ್ಲಿದೆಯೋ, ನೋಡುಗರ ಕಣ್ಣಿನಲ್ಲಿದೆಯೋ ಅಥವಾ ಇನ್ನೆಲ್ಲಿಯೋ ಎನ್ನುವ ಮೂಲಭೂತ ಪ್ರಶ್ನೆಯೊಂದು ಎಲ್ಲರ ಮನದಲ್ಲೂ ಒಮ್ಮೆಯಾದರೂ ಮೂಡಿರುತ್ತದೆ. ಆ ಪ್ರಶ್ನೆಯ ಹಿಂದೆಯೇ ಸೌಂದರ್ಯ ವಸ್ತುವಿನಲ್ಲಿದೆ ಎಂದಾದರೆ ಸುಂದರವಾಗಿರುವುದು ಅದರ ಆಕಾರವೇ, ಗಾತ್ರವೇ, ಪ್ರಯೋಜನವೇ ಎಂಬ ಇನ್ನೊಂದು ಪ್ರಶ್ನೆ, ನೋಡುಗರ ಕಣ್ಣಲ್ಲೋ ಮನದಲ್ಲೋ ಇರುವುದಾದರೆ ನನಗೆ ಸುಂದರವೆನಿಸಿದ್ದು ಇನ್ನೊಬ್ಬರಿಗೂ ಸುಂದರವಾಗಿಯೇ ಕಾಣುವುದೇ ಎಂಬ ಮತ್ತೊಂದು ಪ್ರಶ್ನೆ, ಸುಂದರವಾದದ್ದನ್ನು ನೋಡಿದಾಗ ಮನಸ್ಸೇಕೆ ಪ್ರಫುಲ್ಲಗೊಳ್ಳುತ್ತದೆ ಎಂಬ ಮಗದೊಂದು ಪ್ರಶ್ನೆ ಹೀಗೆ ಜಿಜ್ಞಾಸೆ ಮುಂದುವರೆಯುತ್ತದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಅರಿತು ಅನುಭವಕ್ಕೆ ತಂದುಕೊಳ್ಳುವ ಅಥವಾ ಈಗಾಗಲೇ ಅನುಭವಿಸಿರುವುದಕ್ಕೆ ಅರ್ಥವನ್ನು ಕಂಡುಕೊಳ್ಳುವ ಸಾಧ್ಯತೆಯು ಈ ಅಧ್ಯಯನದಿಂದ ದೊರೆಯುತ್ತದೆ. ಸೌಂದರ್ಯ ಎನ್ನುವುದು ಅನುಭವವೇ, ಅನುಭೂತಿಯೇ, ಅದು ವಸ್ತುನಿಷ್ಠವೇ ವ್ಯಕ್ತಿನಿಷ್ಠವೇ ಎಂಬೆಲ್ಲ ತರ್ಕಗಳನ್ನು ಅದಾಗಲೇ ಸಾವಿರಾರು ವರ್ಷಗಳ ಹಿಂದೆಯೇ ನಡೆಸಿ ನಮ್ಮ ಪೂರ್ವಿಕರು ವಿವರವಾಗಿ ಅರುಹಿದ ಉತ್ತರಗಳು, ಸಿದ್ಧಾಂತಗಳು ಇಲ್ಲಿ ನಮ್ಮ ತಿಳಿವಿಗೆ ಬರುತ್ತವೆ. ಭಾರತೀಯ ಪರಂಪರೆಯಲ್ಲಿರುವ ‘ಸತ್ಯಂ ಶಿವಂ ಸುಂದರಂ’ ಎನ್ನುವ ಪರಿಕಲ್ಪನೆಗೆ ಅರ್ಥವಿಲ್ಲಿ ಹೊಳೆಯುತ್ತದೆ. ಸೌಂದರ್ಯಾನುಭವ, ಕಲಾನುಭವಗಳಿಂದ ಸಿಗುವ ಆನಂದವು ಹೇಗೆ ಬ್ರಹ್ಮಾನಂದಕ್ಕೆ ಸಮೀಪವಾದದ್ದೆಂಬುದು ಪೂರ್ಣವಾಗಿ ಅನುಭವಕ್ಕಲ್ಲದಿದ್ದರೂ ಕಲ್ಪನೆಗೆ ದಕ್ಕುತ್ತದೆ. ಕಲೆಯಲ್ಲಿ ಅಭಿರುಚಿಯನ್ನು ಉತ್ತಮಗೊಳಿಸಿಕೊಂಡು ಕಲಾಸ್ವಾದನೆಯಲ್ಲಿ ಸಂಸ್ಕಾರ ಪಡೆದು ಪಕ್ವವಾದರೆ ಆ ಕಲಾನಂದದ ಅನುಭವವೂ ದಕ್ಕುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ ಇಲ್ಲಿ ಸಿಗುವ ವಿಷಯಜ್ಞಾನದಿಂದ ನಮ್ಮ ಅನುಭವವನ್ನು ಶೋಧಿಸಿಕೊಂಡು ವಿಸ್ತಾರಗೊಳಿಸಿಕೊಳ್ಳುವ ಸಾಧ್ಯತೆಯಿದೆ.
ಭಾರತೀಯ ಸೌಂದರ್ಯಶಾಸ್ತ್ರದ ಡಿಪ್ಲೊಮಾ ಪಠ್ಯದ ವಿಷಯಗಳನ್ನು ಎರಡು ಭಾಗಗಳಲ್ಲಿ ಬೋಧಿಸಲಾಗುತ್ತದೆ. ಮೊದಲನೆಯ ಭಾಗದಲ್ಲಿ ಸೌಂರ್ದರ್ಯಶಾಸ್ತ್ರಕ್ಕೆ ಸಂಬಂಧಿಸಿದ ಭಾರತೀಯ ಸಿದ್ಧಾಂತಗಳ ವಿವರ ಮತ್ತು ಪಾಶ್ಚಾತ್ಯ ಸಿದ್ಧಾಂತಗಳೊಡನೆ ತೌಲನಿಕ ಅಧ್ಯಯನವಿದ್ದರೆ ಎರಡನೆಯ ಭಾಗದಲ್ಲಿ ಕಲಾಪ್ರಪಂಚಕ್ಕೆ ಭಾರತದ ಕೊಡುಗೆ ಮತ್ತು ವಿವಿಧ ಕಲಾ ಪ್ರಕಾರಗಳ ಚರ್ಚೆಯಿರುತ್ತದೆ.
ವಿವರವಾಗಿ ನೋಡುವುದಾದರೆ ಮೊದಲನೆಯ ಭಾಗದಲ್ಲಿ ಭಾರತೀಯ ಮತ್ತು ಪಾಶ್ಚಿಮಾತ್ಯ ಸೌಂದರ್ಯಮೀಮಾಂಸೆಯ ಸ್ವರೂಪ ಮತ್ತು ಸಿದ್ಧಾಂತಗಳು, ಪಾಶ್ಚಿಮಾತ್ಯ ಸೌಂದರ್ಯಮೀಮಾಂಸೆಗೆ ಪ್ರಾಚೀನ ಗ್ರೀಕರ (ಪ್ರಮುಖವಾಗಿ ಪ್ಲೇಟೋ ಮತ್ತು ಅರಿಸ್ಟಾಟಲ್) ಮತ್ತು ಆಧುನಿಕ ಪಾಶ್ಚಾತ್ಯರ (ಪ್ರಮುಖವಾಗಿ ಡೇವಿಡ್ ಹ್ಯೂಮ್ ಮತ್ತು ಇಮ್ಯಾನುಯೆಲ್ ಕಾಂಟ್) ಕೊಡುಗೆಗಳ ಜೊತೆಗೆ ಆಧುನಿಕ ಭಾರತೀಯ ಮೀಮಾಂಸಕರಾದ ರವೀಂದ್ರನಾಥ ಟ್ಯಾಗೋರ್, ಅರಬಿಂದೋ ಘೋಷ್, ಆರ್.ಡಿ.ರಾನಡೆ ಹಾಗೂ ಆನಂದ ಕುಮಾರಸ್ವಾಮಿ ಇವರ ಕೊಡುಗೆಗಳ ಚರ್ಚೆಯಿರುತ್ತದೆ.
ಎರಡನೆಯ ಭಾಗದಲ್ಲಿ ವೇದಗಳು, ಉಪನಿಷತ್ತುಗಳು, ಪುರಾಣಗಳು, ತಂತ್ರವಾದ, ಕಾಶ್ಮೀರ ಶೈವ, ಬೌದ್ಧ, ಜೈನ ಮತ್ತು ಇಸ್ಲಾಂ ಪರಂಪರೆಗಳಲ್ಲಿ, ಭಕ್ತಿ ಮತ್ತು ಸೂಫಿ ಪಂಥಗಳಲ್ಲಿ ಹರಿದುಬಂದ ಸೌಂದರ್ಯಾನುಭವ/ ಆನಂದಾನುಭವದ ದೃಷ್ಟಿಕೋನ, ಕಲಾಸಂಸ್ಕೃತಿ ಹಾಗೂ ಆಯಾ ಕಾಲದ ಕಲೆ, ಸಂಗೀತ, ನೃತ್ಯ, ಶಿಲ್ಪ, ದೇವಾಲಯ-ಮಸೀದಿ ಮುಂತಾದ ಧಾರ್ಮಿಕ ಕಟ್ಟಡಗಳ ವಾಸ್ತುವಿನ್ಯಾಸದಲ್ಲಿರುವ ಸೌಂದರ್ಯದ ದೃಷ್ಟಿಕೋನದ ಕುರಿತು ಅಧ್ಯಯನವಿರುತ್ತದೆ. ಅದಲ್ಲದೆ ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು ಮತ್ತು ಜಾನಪದರಲ್ಲಿ ಪರಂಪರಾಗತವಾಗಿ ಹರಿದುಬಂದ ಚಿತ್ರಕಲೆಯ ಮೂಲಕ ಅವರ ಜೀವನ ಶೈಲಿ ಮತ್ತು ಆಚರಣೆಗಳ ಕುರಿತು ಬೆಳಕು ಚೆಲ್ಲಲಾಗುತ್ತದೆ. ವಾರ್ಲಿ, ಮೀನಾ, ಕುರುಂಬ, ಗೊಂಡ, ರಾಥ್ವಾ, ಸೌರಾ ಮೊದಲಾದ ಬುಡಕಟ್ಟು ಜನಾಂಗಗಳ ಕಲೆ ಹಾಗೂ ಮಧುಬನಿ, ಪಟಚಿತ್ರ, ಕಲಂಕಾರಿ, ಫಡ್ ಮೊದಲಾದ ಜಾನಪದ ಚಿತ್ರಕಲೆ ಮತ್ತು ಚಿಕಣಿ ಚಿತ್ರಕಲೆಗಳನ್ನು ವಿವರಿಸಲಾಗುತ್ತದೆ.
ಹೀಗೆ ಮೊದಲನೆಯ ಭಾಗದಲ್ಲಿ ಸೈದ್ಧಾಂತಿಕ ವಿವರಣೆಯಿದ್ದರೆ ಎರಡನೆಯ ಭಾಗದಲ್ಲಿ ಅದರ ಪ್ರಾಯೋಗಿಕ ಅಭಿವ್ಯಕ್ತಿಗಳ ವಿವರಣೆಯಿದ್ದು ಪಠ್ಯವು ಪರಿಪೂರ್ಣವೆನಿಸುತ್ತದೆ. ಈ ಕೋರ್ಸಿನ ಬೋಧನಾ ಮಾಧ್ಯಮ ಇಂಗ್ಲಿಷ್ ಆಗಿರುತ್ತದೆ. ಪಠ್ಯ ವಿಷಯಗಳನ್ನು ಬೋಧಿಸುವ ಎಲ್ಲ ಪ್ರಾಚಾರ್ಯರು ಅನುಭವಸ್ಥರೂ ಆಳವಾದ ವಿಷಯಜ್ಞಾನವುಳ್ಳವರೂ ಆಗಿದ್ದು ಲವಲವಿಕೆಯಿಂದ ಬೋಧಿಸುವುದರ ಜೊತೆಗೆ ಪ್ರತಿ ತರಗತಿಯಲ್ಲೂ ವಿದ್ಯಾರ್ಥಿಗಳು ಮುಕ್ತವಾಗಿ ಸಂವಾದಿಸುವ ಅವಕಾಶವನ್ನು ಕಲ್ಪಿಸುತ್ತಾರೆ. ಕೋರ್ಸಿನ ಕೊನೆಯಲ್ಲಿರುವ ಎರಡು ಪರೀಕ್ಷೆಗಳು, ಒಂದು ಅಸೈನ್ಮೆಂಟ್ ಮತ್ತು ಅದನ್ನು ಎಲ್ಲ ವಿದ್ಯಾರ್ಥಿಗಳೆದುರು ಸಾದರಪಡಿಸುವ ಅವಕಾಶಗಳು ಕಲಿತದ್ದನ್ನು ಮನನ ಮಾಡಿಕೊಳ್ಳುವಲ್ಲಿ ಸಹಾಯಕವಾಗುತ್ತವೆ. ಒಟ್ಟಿನಲ್ಲಿ ಮೇಲಿನ ಯಾವುದೇ ವಿಷಯವನ್ನು ಆಳವಾಗಿ ಅಭ್ಯಸಿಸುವ ಹಂಬಲ ಹೊಂದಿರುವವರಿಗೆ ಈ ಕೋರ್ಸ್ ಸೂಕ್ತವಾದ ಪ್ರವೇಶವನ್ನು ಒದಗಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ.
ಸೌಂದರ್ಯಶಾಸ್ತ್ರದ ಕುರಿತು ಇನ್ನೊಂದಿಷ್ಟು …
ಭಾರತೀಯ ಸೌಂದರ್ಯಶಾಸ್ತ್ರ
ಭಾರತೀಯ ಸೌಂದರ್ಯಮೀಮಾಂಸೆ ಅಥವಾ ಸೌಂದರ್ಯಶಾಸ್ತ್ರವು ಸೌಂದರ್ಯಾನುಭವ (Aesthetic Experience) ಮತ್ತು ಅದರ ನಿಕಟಸಂಬಂಧಿಯಾದ ಕಲಾನುಭವವನ್ನು (Art Experience) ವಿಶದವಾಗಿ ವಿವರಿಸುವ ಶಾಸ್ತ್ರವಾಗಿದೆ. ಭಾರತದಾದ್ಯಂತ ಅನೇಕ ಶ್ರೇಷ್ಠ ವಿದ್ವಾಂಸರು, ಮೀಮಾಂಸಕರು ಮೂಲತಃ ಸಂಸ್ಕೃತದಲ್ಲಿ ರಚಿಸಿರುವ ಗ್ರಂಥಗಳಲ್ಲಿ ಕಲಾಸ್ವಾದನೆಯ ವಿಜ್ಞಾನವನ್ನು (the science of Art appreciation) ಆಳವಾಗಿ ವಿವೇಚಿಸಲಾಗಿದೆ. ಸೌಂದರ್ಯಾನುಭವದ ಮೂಲತತ್ತ್ವವನ್ನು ಅನುಭವದಿಂದ ಗ್ರಹಿಸಿ, ಪರಿಶೀಲಿಸಿ, ಅದಕ್ಕೆ ಯೋಗ್ಯವಾದ ಪರಿಕಲ್ಪನೆ ಮತ್ತು ಪರಿಭಾಷೆಗಳನ್ನು ರೂಢಿಸಿ, ಚರ್ಚಿಸಿ ಸಿದ್ಧಾಂತಗಳನ್ನು ರೂಪಿಸಲಾಗಿದೆ. ನಮಗೆ ತಿಳಿದಿರುವಂತೆ ಭರತ, ಭಾಮಹ, ದಂಡಿ, ವಾಮನ, ರುದ್ರಟ, ಉದ್ಭಟ, ಲೊಲ್ಲಟ, ಶಂಕುಕ, ಭಟ್ಟ ನಾಯಕ, ರಾಜಶೇಖರ, ಕುಂತಕ, ಆನಂದವರ್ಧನ, ಅಭಿನವ ಗುಪ್ತ, ಕ್ಷೇಮೆಂದ್ರ, ಧನಂಜಯ, ಮಮ್ಮಟ, ಹೇಮಚಂದ್ರ, ವಿದ್ಯಾನಾಥ, ವಿಶ್ವನಾಥ, ಅಪ್ಪಯ್ಯ ದೀಕ್ಷಿತ, ಜಗನ್ನಾಥ ಮುಂತಾಗಿ ಅನೇಕ ಲಾಕ್ಷಣಿಕರು ಈ ನಿಟ್ಟಿನಲ್ಲಿ ಉನ್ನತ ಕೊಡುಗೆಗಳನ್ನು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಸೌಂದರ್ಯಾನುಭವ ಎಂದರೆ ಯಾವುದೇ ಸುಂದರವಾದ ವಸ್ತು, ಪ್ರಕೃತಿ, ಕಲೆ ಅಥವಾ ಸಾಹಿತ್ಯವನ್ನು ನೋಡಿದಾಗ, ಕೇಳಿದಾಗ ಅಥವಾ ಓದಿದಾಗ ನಮ್ಮ ಮನಸ್ಸಿನಲ್ಲಿ ಉಂಟಾಗುವ ಅನಿರ್ವಚನೀಯವಾದ ಅನುಭೂತಿ ಮತ್ತು ಅದರಿಂದ ದೊರೆಯುವ ಆನಂದ. ಇದು ಕೇವಲ ಪಂಚೇದ್ರಿಯಗಳಿಗೆ ಸಂಬಂಧಿಸಿದ ಮೇಲ್ನೋಟದ ಅನುಭವವಲ್ಲ. ಬದಲಾಗಿ ಅದು ನಮ್ಮ ಅಂತರಂಗವನ್ನು ತಟ್ಟಿ, ಆಸ್ವಾದಿಸುತ್ತಿರುವ ವಿಷಯದೊಂದಿಗೆ ತಾದಾತ್ಮ್ಯತೆ ಮೂಡಿಸಿ ಅದರೊಂದಿಗಿರುವಷ್ಟು ಹೊತ್ತು ನಮ್ಮ ಅಸ್ತಿತ್ವವನ್ನೇ ಮರೆಸುವ ಆಳವಾದ ಭಾವನೆ. ವೇದಾಂತದಲ್ಲಿ ಹೇಳಿರುವ ಬ್ರಹ್ಮಾನಂದಕ್ಕೆ ಹತ್ತಿರವಾದ ಆನಂದವಿದು. ಇದು ಕೇವಲ ಮಾನವನಿರ್ಮಿತ ಕಲೆಗೆ ಮಾತ್ರ ಸೀಮಿತವಲ್ಲ. ಸುಂದರವಾದ ಕಾಮನಬಿಲ್ಲು, ಹರಿಯುವ ನದಿ, ಅರಳಿದ ಹೂವು ಅಥವಾ ಎಲ್ಲೆಯಿಲ್ಲದ ಸಾಗರ, ಎತ್ತರದ ಗಿರಿಶಿಖರ, ಸೂರ್ಯೋದಯ, ಸೂರ್ಯಾಸ್ತಗಳನ್ನು ವೀಕ್ಷಿಸಿದಾಗಲೂ ನಮಗೆ ಆನಂದವಾಗುತ್ತದೆ. ಅದು ಕೂಡ ಸೌಂದರ್ಯಾನುಭವವೇ. ಇಲ್ಲಿ ಮನುಷ್ಯನ ಹಸ್ತಕ್ಷೇಪವಿಲ್ಲದ ಪ್ರಕೃತಿಯೇ ಸೌಂದರ್ಯದ ಮೂಲ.
ಕಲಾನುಭವ ಎಂದರೆ ಮಾನವನು ಸೃಷ್ಟಿಸಿದ ಸಂಗೀತ, ಕಾವ್ಯ (ಸಾಹಿತ್ಯ), ನೃತ್ಯ, ಶಿಲ್ಪಕಲೆ, ರಂಗಭೂಮಿ ಮತ್ತು ಚಿತ್ರಕಲೆಯಂತಹ ಕಲಾಪ್ರಕಾರಗಳನ್ನು ಆಸ್ವಾದಿಸುವಾಗ ದೊರಕುವ ಆನಂದದ ಅನುಭವ. ಕಲಾವಿದನು ತನ್ನ ಕಲ್ಪನೆ, ಕೌಶಲ್ಯ ಮತ್ತು ಪ್ರಯತ್ನದಿಂದ ಸೃಷ್ಟಿಸಿದ ಕೃತಿಯೊಡನೆ ನಮ್ಮ ಮನಸ್ಸು ಬೆರೆಯುವುದೇ ಕಲಾನುಭವ. ಕಲಾಕೃತಿಯಲ್ಲಿರುವ ಸೌಂದರ್ಯವನ್ನು ಆಸ್ವಾದಿಸುವುದೇ ಕಲಾನುಭವದ ಮುಖ್ಯ ಉದ್ದೇಶ. ಆದರೆ ಕಲಾನುಭವದ ವೈಶಿಷ್ಟ್ಯವೇನೆಂದರೆ ಕೇವಲ ಮನಸ್ಸಿಗೆ ಆಹ್ಲಾದ ತರುವ ಸುಂದರವಾದದ್ದಷ್ಟೇ ಅಲ್ಲದೆ ದುಃಖ, ಭಯ, ಕ್ರೌರ್ಯ ಅಥವಾ ಅಸಹ್ಯಕರವಾದ ವಿಷಯಗಳೂ ಕಲಾಕೃತಿಯಲ್ಲಿ ಇರಬಹುದು. ಉದಾಹರಣೆಗೆ ಒಂದು ಕಾವ್ಯ, ನಾಟಕ ಅಥವಾ ಸಿನಿಮಾದಲ್ಲಿ ಹೊಡೆದಾಟ, ಕೊಲೆ, ಯುದ್ಧ, ಸಾವುನೋವು, ನಾಯಕನಿಗೊದಗುವ ಕಷ್ಟಕೋಟಲೆಗಳು ಮುಂತಾದ ಚಿತ್ರಣವಿರಬಹುದು. ಇವೆಲ್ಲ ಸಾಮಾನ್ಯ ಅರ್ಥದಲ್ಲಿ 'ಸುಂದರ'ವಲ್ಲದ್ದು. ಆದರೆ ಈ ಚಿತ್ರಣಗಳ ಔಚಿತ್ಯ ಮತ್ತು ಅಭಿವ್ಯಕ್ತಿಗಳು ಆ ಕೃತಿಯನ್ನು ಆಸ್ವಾದಿಸುವಂತೆ ಮಾಡುತ್ತವೆ. ಇದನ್ನೇ ಭಾರತೀಯ ಕಾವ್ಯಮೀಮಾಂಸೆಯಲ್ಲಿ 'ರಸಾನುಭವ' ಎನ್ನುತ್ತಾರೆ. ಕಲೆಯನ್ನು ಆಸ್ವಾದಿಸುವ ಸಂಸ್ಕಾರಗೊಂಡ ಮನಸ್ಸುಗಳಲ್ಲಿ ಈ ರಸದ ನಿಷ್ಪತ್ತಿ ಹೇಗೆ ಆಗುತ್ತದೆ, ಅದರಿಂದ ಅಂತರಂಗಕ್ಕೆ ಸಿಗುವ ಹಿತವೆಂತದ್ದು ಮುಂತಾದ ಆಂತರಿಕ ವಿಚಾರಗಳನ್ನು ಭಾರತೀಯ ಸೌಂದರ್ಯಶಾಸ್ತ್ರವು ವಿಶದೀಕರಿಸುತ್ತದೆ. ಜೊತೆಗೆ ನೋಡುಗರಿಗೆ ಮೈಮರೆಸುವಂತಹ ರಸದೌತಣ ನೀಡಲು ಕಲೆ, ಕಲಾವಿದರ ಅಭಿವ್ಯಕ್ತಿ ಹೇಗಿರಬೇಕು, ಅದನ್ನು ಉದ್ದೀಪಿಸುವ ವಾತಾವರಣವನ್ನು ಹೇಗೆ ನಿರ್ಮಿಸಬೇಕು ಎಂಬೆಲ್ಲ ವಿವರಗಳೂ ಈ ಗ್ರಂಥಗಳಲ್ಲಿ ದಾಖಲಾಗಿವೆ.
ರಸ ಸಿದ್ಧಾಂತವು ಜಗತ್ತಿಗೆ ಭಾರತೀಯ ಸೌಂದರ್ಯಶಾಸ್ತ್ರದ ಒಂದು ಉನ್ನತವಾದ ಕೊಡುಗೆ. 'ರಸ'ದ ನಿಯಮವು ಎಲ್ಲಾ ಕಲಾಪ್ರಕಾರಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಅದರಂತೆಯೇ ಗುಣ-ರೀತಿ, ಅಲಂಕಾರ, ಧ್ವನಿ, ಔಚಿತ್ಯ ಮತ್ತು ವಕ್ರೋಕ್ತಿಯಂತಹ ಸಿದ್ಧಾಂತಗಳು ಸಹ ನಮ್ಮ ಸೌಂದರ್ಯಶಾಸ್ತ್ರಕ್ಕೆ ಸಮಗ್ರತೆ ಅಥವಾ ಪೂರ್ಣತೆಯನ್ನು ತಂದುಕೊಟ್ಟಿವೆ. ಇವೆಲ್ಲವೂ ವೈಶ್ವಿಕವಾಗಿ ಅನ್ವಯವಾಗುವ ವಸ್ತುತಂತ್ರಗಳು. ಇವಕ್ಕೆ ದೇಶ, ಕಾಲ, ವಸ್ತು, ರೂಪಗಳ ಹಂಗಿಲ್ಲ.
ಭಾರತೀಯ ಸೌಂದರ್ಯಶಾಸ್ತ್ರದಲ್ಲಿರುವ ಇಂತಹ ಹಲವಾರು ತತ್ತ್ವಗಳನ್ನು ಸ್ಥೂಲವಾಗಿ ಈ ಡಿಪ್ಲೊಮಾ ಅಧ್ಯಯನದಲ್ಲಿ ತಿಳಿದುಕೊಳ್ಳಬಹುದು. ಭರತನ ರಸಸೂತ್ರ, ಪ್ರಮುಖ ಲಾಕ್ಷಣಿಕರ ಮತಗಳು, ನವರಸಗಳು, ಧ್ವನಿ, ಅದರ ಪ್ರಮುಖ ಪ್ರಕಾರಗಳು (ವಸ್ತು, ರಸ, ಅಲಂಕಾರ ಧ್ವನಿ), ವಿಧಗಳು (ಅಭಿಧಾಮೂಲ ಧ್ವನಿ - ಅಲಕ್ಷ್ಯಕ್ರಮವ್ಯಂಗ್ಯ (ಭಾವ, ಭಾವಾಭಾಸ, ಭಾವಶಬಲತಾ, ಭಾವಸಂಧಿ, ರಸ, ರಸಾಭಾಸ), ಸಂಲಕ್ಷ್ಯಕ್ರಮವ್ಯಂಗ್ಯ, ಲಕ್ಷಣಾಮೂಲ ಧ್ವನಿ - ಅತ್ಯಂತತಿರಸ್ಕೃತ, ಅರ್ಥಾಂತರಸಂಕ್ರಮಿತ ಇತ್ಯಾದಿ), ರಸವಿಘ್ನಗಳು ಮುಂತಾದ ಪರಿಭಾಷೆಗಳನ್ನು ಸೋದಾಹರಣವಾಗಿ ತಿಳಿದುಕೊಳ್ಳಬಹುದು.
ಪಾಶ್ಚಾತ್ಯ ಸೌಂದರ್ಯ ಶಾಸ್ತ್ರ
ಪಾಶ್ಚಾತ್ಯ ಸೌಂದರ್ಯಶಾಸ್ತ್ರದಲ್ಲಿ ಮೊದಮೊದಲು ಸೌಂದರ್ಯವನ್ನು ವಸ್ತುವಿನಲ್ಲಿ ಗುರುತಿಸಲಾಗುತ್ತಿತ್ತು. ಕ್ರಮೇಣ ಅದು ಸಂಸ್ಕಾರಗೊಂಡ ನೋಡುಗರ ಮನದಲ್ಲಿದೆ ಎಂದು ಪ್ರತಿಪಾದಿಸಲಾಯಿತು. ಅಂತೆಯೇ ಕಲೆಯಲ್ಲಿ ಸೌಂದರ್ಯವಿದೆಯೇ ಎಂಬ ಚರ್ಚೆಯೂ ಅಲ್ಲಿತ್ತು. ಪ್ರಾಚೀನ ಗ್ರೀಕ್ ತತ್ತ್ವಜ್ಞಾನಿ ಪ್ಲೇಟೋ ಕಲೆಯು ಪ್ರಯೋಜನವಿಲ್ಲದ ಅನುಕರಣೆ ಎಂದು ಅಲ್ಲಗಳೆದು ಅದು ಜನರನ್ನು ವಂಚಿಸುವ ಕೆಲಸ ಮಾಡುತ್ತದೆ ಎಂದಿದ್ದನು. ನಂತರ ಬಂದ ಅವನ ಶಿಷ್ಯ ಅರಿಸ್ಟಾಟಲನು ಕಲೆಯು ಸೃಜನಾತ್ಮಕ ಅನುಕರಣೆ, ಅದರಿಂದ ನೋಡುಗರು ಉತ್ತಮ ಸಂಸ್ಕಾರ ಹೊಂದುತ್ತಾರೆ ಎಂದು ಪ್ರತಿಪಾದಿಸಿದನು. ಕಲೆಗಾಗಿ ಕಲೆಯೇ ಅಥವಾ ಕಲೆಯು ಯಾವುದೋ ಪ್ರಯೋಜನಕ್ಕಾಗಿಯೇ ಅಥವಾ ಜನರಿಗೆ ಪಾಠವನ್ನು ಕಲಿಸುವುದಕ್ಕಾಗಿಯೇ ಎಂಬ ಚರ್ಚೆಯೂ ಅಲ್ಲಿತ್ತು. ಕಲೆಯಿಂದ ದೊರೆಯುವ ಆನಂದದ ಅನುಭೂತಿಯೇ ಅದರ ಪ್ರಯೋಜನ ಎಂದು ಆಧುನಿಕ ಪಾಶ್ಚಾತ್ಯರು ಪ್ರತಿಪಾದಿಸಿದರೂ ಹೆಚ್ಚಾಗಿ ಅವರು ಉತ್ತಮ ಕಲೆಯ ವಿಮರ್ಶೆ ಮಾಡುವುದು ಹೇಗೆ, ಉತ್ತಮವೆಂದು ಹೇಳುವ ಮಾನದಂಡಗಳಾವುವು ಮುಂತಾದ ಬಾಹ್ಯದ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಿರುವುದು ಕಂಡುಬರುತ್ತದೆ.
ಪಾಶ್ಚಾತ್ಯ ಸೌಂದರ್ಯಮೀಮಾಂಸೆಗೆ ಪ್ರವೇಶಿಕೆಯಾಗಿ ಅವರ ವಿಚಾರಗಳು ಹರಿದುಬಂದ ರೀತಿ, ಅವರ ಪ್ರಮುಖ ಸಿದ್ಧಾಂತಗಳು - ಪ್ಲೇಟೋವಿನ 'ರೂಪಗಳ ಸಿದ್ಧಾಂತ' (ವರ್ಲ್ಡ್ ಆಫ್ ಫಾರ್ಮ್ಸ್), ಅರಿಸ್ಟಾಟಲನ ಕೆಥಾರ್ಸಿಸ್, ಸೃಜನಾತ್ಮಕ ಅನುಕರಣೆ (ಕ್ರಿಯೇಟಿವ್ ಇಮಿಟೇಷನ್), ಹ್ಯೂಮನ ‘ಅಭಿರುಚಿಯ ಮಾನದಂಡ’ (ಸ್ಟ್ಯಾಂಡರ್ಡ್ ಆಫ್ ಟೇಸ್ಟ್), ಕಾಂಟನ ‘ಭವ್ಯತೆ’ (ಸಬ್ಲೈಮ್) ಮುಂತಾದ ವಿಷಯಗಳನ್ನು ಸ್ಥೂಲವಾಗಿ ಈ ಡಿಪ್ಲೊಮಾ ಅಧ್ಯಯನದಲ್ಲಿ ತಿಳಿದುಕೊಳ್ಳಬಹುದು.
ವಿದ್ಯಾ ರಾಮಕೃಷ್ಣ



Comments