top of page

ಕುಂಚದಂಚಿನ ವಿಸ್ಮಯ - ಕಲಾ ಕನೆಕ್ಟ್

  • vidyaram2
  • May 18
  • 2 min read

ಮೇ 1ರಿಂದ 3ರವರೆಗೆ ಮೂರು ದಿನಗಳ ಕಾಲ ಮುಂಬೈಯ ಪ್ರತಿಷ್ಠಿತ ನೆಹರೂ ಸೆಂಟರಿನಲ್ಲಿ  'ಕಲಾ ಕನೆಕ್ಟ್' ವಾರ್ಷಿಕ ಚಿತ್ರಕಲಾ ಪ್ರದರ್ಶನ ಯಶಸ್ವಿಯಾಗಿ ಜರುಗಿತು.  ಹೊಸ ಕಲಾವಿದರಿಗೆ ವೇದಿಕೆ ನೀಡಿ, ಕಲಾಪ್ರೇಮಿಗಳು ಕಲಾವಿದರೊಂದಿಗೆ ನೇರವಾಗಿ ಸಂವಾದ ನಡೆಸಿ ಅವರ ಕೃತಿಗಳನ್ನು ಇನ್ನಷ್ಟು ಅರಿಯುವ ಅವಕಾಶವನ್ನು ಒದಗಿಸುವುದು ಇಂತಹ ಕಲಾಪ್ರದರ್ಶನಗಳ ಉದ್ದೇಶ. ಈ ಬಾರಿಯ ಪ್ರದರ್ಶನದಲ್ಲಿ ವಿವಿಧ ಕಲಾವಿದರ ಅನನ್ಯವಾದ ಸೃಜನಾತ್ಮಕ ಕಲೆಗಾರಿಕೆ ಮನಸೆಳೆಯುವಂತಿತ್ತು. ಸೌರ, ಪಟಚಿತ್ರ, ಮಧುಬನಿ, ಪಿಚ್ವಾಯಿ ಮುಂತಾದ ಸಾಂಪ್ರದಾಯಿಕ ಚಿತ್ರಕಲೆಗಳು, ನವ್ಯ, ಅಮೂರ್ತ ಚಿತ್ರಕಲೆ ಅಥವಾ ಅಬ್ಸ್ಟ್ರಾಕ್ಟ್ ಪೇಂಟಿಂಗ್, ಕಂಪೋಸಿಟ್ ಪೇಂಟಿಂಗ್, ಗ್ಲಾಸ್ ಪೇಂಟಿಂಗ್ ಹೀಗೆ ಕಲಾವಿದರ ಕಲ್ಪನೆಯು ಕುಂಚದಿಂದ ಹೊರಹೊಮ್ಮಿ ಮೂಡಿಸಿದ ತರಹೇವಾರಿ ಚಿತ್ರಗಳು ಕಲಾರಸಿಕರನ್ನು ಹೊಸ ಲೋಕಕ್ಕೇ ಕೊಂಡೊಯ್ಯುವಂತಿದ್ದವು.  



ಸಾಂಪ್ರದಾಯಿಕ ಚಿತ್ರಕಲೆಗಳಲ್ಲಿ ನಿಗದಿತ ಶೈಲಿ, ನಿಗದಿತವಾಗಿ ಬಳಕೆಯಾಗುವ ಬಣ್ಣಗಳ ಸಂಯೋಜನೆ ಇದ್ದರೂ ಕಲಾವಿದರು ತಮ್ಮದೇ ಆದ ಕೆಲ ಅಂಶಗಳನ್ನೂ ಸೇರಿಸಿ ಚಿತ್ರಗಳಿಗೆ ಅನನ್ಯತೆ ತಂದುಕೊಡುತ್ತಾರೆ. ಮುಂಬೈಯ ಟ್ರಾಫಿಕ್, ಟ್ಯಾಕ್ಸಿ, ಡಬ್ಬಾವಾಲ, ಸೀ ಲಿಂಕ್, ಸಮುದ್ರಗಳೆಲ್ಲವೂ ಸಾಂಪ್ರದಾಯಿಕ ಮಧುಬನಿ ಚಿತ್ರದಲ್ಲಿ ಮೂಡಿಬಂದ ರೀತಿ ಸೊಗಸಾಗಿತ್ತು.


ಅಮೂರ್ತ ಚಿತ್ರಕಲೆಯಂತೂ ನೋಡುಗರ ಕಲ್ಪನೆಯಲ್ಲಿ ಹಲವಾರು ರೂಪಗಳನ್ನು ಪಡೆದು ಹೊಸ ಹೊಸ ಅರ್ಥಗಳನ್ನು ಹೊಳೆಯಿಸುವ ಹೆಚ್ಚುಗಾರಿಕೆಯನ್ನು ಪಡೆದಿರುತ್ತದೆ. ಹೆಚ್ಚಾಗಿ ಮಾನವನ ಮನಸ್ಸಿನ ಗೊಂದಲ, ಸಂಕೀರ್ಣತೆ, ಶಕ್ತಿಯ ಪ್ರವಾಹ, ಸೃಷ್ಟಿ ಕ್ರಿಯೆ, ಜೀವನ ಚಕ್ರ, ದೇಶಕಾಲಾತೀತತೆ ಇಂತಹ ಜಿಡುಕಾದ ವಿಷಯಗಳನ್ನು ನವ್ಯ, ಅಮೂರ್ತ ಚಿತ್ರಕಲೆಯಲ್ಲಿ ಬಿಂಬಿಸಲಾಗಿತ್ತು. ಮಾನವ ಶರೀರದ ವಿವಿಧ ಅಂಗಗಳು, ನರಮಂಡಲ ಮತ್ತು ಬ್ರಹ್ಮಾಂಡದ ಅನಂತ ಶಕ್ತಿಯನ್ನು ಬೆಸೆದು ಬಿಂಬಿಸಿದ,  ಡಿಸೈನ್ ಆಫ್ ನ್ಯೂರಲ್ (DON) ಆರ್ಟ್ ಎಂಬ ಹೊಸರೀತಿಯ ಪರಿಕಲ್ಪನೆಯಲ್ಲಿ ಮೂಡಿದ ಚಿತ್ರಗಳು ಗಮನಸೆಳೆದವು.


ಪ್ರದರ್ಶನದಲ್ಲಿ ಕನ್ನಡಿಗರಾದ ಕರ್ನಲ್ ಡಾ.ಪರಶುರಾಮ ನಾಯಕ್ ಅವರು ಪಾಲ್ಗೊಂಡದ್ದು ಹೆಮ್ಮೆಯ ಸಂಗತಿ. ಅವರದು ಬಹುಮುಖ ಪ್ರತಿಭೆ.  ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಉತ್ತಮ ಚಿತ್ರಕಲಾವಿದರೂ ಆಧ್ಯಾತ್ಮಿಕ ಮಾರ್ಗದರ್ಶಕರೂ ಮನಶಾಸ್ತ್ರಜ್ಞರೂ ಹಾಗೂ ಲೇಖಕರೂ ಆಗಿದ್ದಾರೆ. ತಮ್ಮ ಸೃಜನಶೀಲತೆ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಬಳಸಿಕೊಂಡು ಅವರು ಸಮಸ್ಯೆಗಳನ್ನು ಅರ್ಥೈಸಿಕೊಂಡು ಸ್ಪಷ್ಟತೆ ಪಡೆಯಲು, ಅದನ್ನು ಎದುರಿಸಲು ಮತ್ತು ಪರಿಹರಿಸಿಕೊಳ್ಳಲು ಜನರಿಗೆ ಮಾರ್ಗದರ್ಶನ ನೀಡುತ್ತಾರೆ.


ಆಳವಾದ ಆಧ್ಯಾತ್ಮಿಕ ಚಿಂತನೆ, ಹಿಮಾಲಯದ ಸನ್ನಿಧಿಯಲ್ಲಿ ಹನ್ನೆರಡು ವರ್ಷಗಳನ್ನು ಕಳೆದ ಅನುಭವ, ಮನಃಶಾಸ್ತ್ರದ ಹಿನ್ನೆಲೆಯುಳ್ಳ ‘ಮಿಸ್ಟಿಕ್ ಆರ್ಟಿಸ್ಟ್’ ಎನಿಸಿರುವ ಡಾ. ನಾಯಕ್ ಅವರ ಚಿತ್ರಗಳು ಆಳವೂ ಅರ್ಥಪೂರ್ಣವೂ ಆಗಿವೆ. ಪ್ರದರ್ಶನಗೊಂಡ ಅವರ ಕೆಲವು ಚಿತ್ರಗಳಲ್ಲಿ ಶಿವಶಕ್ತಿಯ ಐಕ್ಯತೆ, ಶಿವತತ್ತ್ವದ ವಿವಿಧ ಸ್ವರೂಪಗಳು ಅಭಿವ್ಯಕ್ತಿಗೊಂಡ ರೀತಿ ಬಹಳ ಕುತೂಹಲಕಾರಿ ಎನಿಸುವಂತಿತ್ತು. ಶಿವತತ್ತ್ವವೇ ಬೃಹತ್ತಾದುದು, ಅದು ಅನಂತ; ಅದರ ಸ್ವರೂಪವನ್ನು, ಸತ್ತ್ವವನ್ನು ಒಂದು ಕಡೆ ಪೂರ್ಣವಾಗಿ ಸೆರೆಹಿಡಿಯುವುದು ಅಸಾಧ್ಯ. ಹಾಗಾಗಿ ಆ ತತ್ತ್ವದ ಒಂದೊಂದೇ ಅಂಶವನ್ನು ಒಂದೊಂದು ಚಿತ್ರದಲ್ಲಿ ಅವರು ಸೆರೆಹಿಡಿದಿರುವ ಪರಿ ಮನೋಜ್ಞವಾಗಿದೆ. ಒಂದು ಚಿತ್ರದಲ್ಲಿ ಕೇವಲ ಕಣ್ಣುಗಳು, ಇನ್ನೊಂದರಲ್ಲಿ ನೊಸಲು, ಅದರ ಮೇಲಿನ ಚಂದ್ರ, ಮತ್ತೊಂದರಲ್ಲಿ ಕೊರಳಿನ ಸರ್ಪ,  ಹಣೆಗಣ್ಣು ಹೀಗೆ ಶಿವತತ್ತ್ವದ ಪ್ರತ್ಯೇಕ ಅಂಶಗಳನ್ನು ಚಿತ್ರದೊಳಗೆ ಹಿಡಿದಿಡುವಾಗ ನಿರ್ದಿಷ್ಟವಾದ ರೇಖೆಗಳಿಂದ ಸೀಮಿತ ಅಂಚುಗಳ ಚೌಕಟ್ಟಿನೊಳಗೆ ಅವುಗಳನ್ನು ಬಂಧಿಸದೆ, ಸ್ವಚ್ಛಂದವಾಗಿ ಅವರು ಬಿಂಬಿಸಿರುವ ರೀತಿ ಮಾರ್ಮಿಕವಾಗಿದೆ. ತದೇಕಚಿತ್ತದಿಂದ ವೀಕ್ಷಿಸುತ್ತಾ ನಿಂತರೆ ಮನಸ್ಸು ಶಾಂತಗೊಂಡು ಧ್ಯಾನಸ್ಥವಾಗಬಹುದೇನೋ ಎನ್ನಿಸುವಂತಿವೆ ಅವರ ಚಿತ್ರಗಳು. ಇವಲ್ಲದೆ ಯೋಗಿಯೊಬ್ಬನಿಗೆ ಕಾಣಬಹುದಾದಂತೆ ವಿವಿಧ ಕೋನಗಳಿಂದ ಚಿತ್ರಿತವಾಗಿರುವ ಹಿಮಾಲಯ ಪರ್ವತಗಳು, ಮೇರು ಪರ್ವತ ಮುಂತಾದ ಚಿತ್ರಗಳೂ ಕಣ್ಸೆಳೆಯುವಂತಿದ್ದವು.


ಒಟ್ಟಿನಲ್ಲಿ ಕಲಾವಿದರನ್ನೂ ಕಲಾರಸಿಕರನ್ನೂ ಬೆಸೆಯುವ ಕೊಂಡಿಯಾಗಿರುವ ಇಂತಹ ಕಲಾಪ್ರದರ್ಶನಗಳು ಕಲಾಭಿಮಾನಿಗಳ ಕಣ್ಮನ ತಣಿಸುವ ಸಡಗರದ ಬಣ್ಣಗಳ ಹಬ್ಬವೇ ಸರಿ.


  • ವಿದ್ಯಾ ರಾಮಕೃಷ್ಣ

Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page