top of page

ಬುದ್ಧಿ ಮನಸ್ಸುಗಳ ಸೀರಿಯಸ್ ಹರಟೆ

  • vidyaram2
  • Aug 30, 2023
  • 4 min read

Updated: May 18, 2024

ಪ್ರತಿ ಕೆಲವು ತಿಂಗಳುಗಳಿಗೊಮ್ಮೆ ಅನ್ನಿಸುವಂತೆ ಯಾಕೋ ಇತ್ತೀಚಿಗೆ ಒಂದು ರೀತಿ ಏಕತಾನತೆ ಬಂದು ಬೇಸರ ಅನ್ನಿಸಲು ಶುರುವಾಗಿತ್ತು. ಇದು ಹೊಸತೇನಲ್ಲ. ನನಗೆ ಬಹಳ ಆತ್ಮೀಯವಾಗಿರುವ ಈ ಬೇಸರವು ಸಾಫ್ಟ್ವೇರ್ ಕೆಲಸ ಮಾಡುವಾಗ ಪ್ರೋಜೆಕ್ಟಿನ ಕೊನೆ ಮುಟ್ಟುತ್ತಾ ಬಂದಿರುವಾಗ ಈ project monotonous ಆಗಿದೆಯಪ್ಪಾ ಎಂಬ ಭಾವದಲ್ಲಿ, ಬೋರ್ ಎಂಬ ಹೆಸರಿನಲ್ಲಿ ಬಂದು ಭೇಟಿ ಕೊಡುತ್ತಿತ್ತು. ಎಂ. ಎ ಮಾಡಲು ಬಂದಮೇಲೆ ಸೆಮಿಸ್ಟರ್ ನ ಕೊನೆಯಲ್ಲಿ ಪರೀಕ್ಷೆ ಮುಗಿದರೆ ಸಾಕಪ್ಪ ಇನ್ನು ಹೊಸತು ಕಲಿಯುವ, ಇದೇನು ಓದಿದ್ದೇ ಓದೋದು ಅನ್ನುವ ಭಾವದೊಂದಿಗೆ ಬಂದು ಬೇಸರವೋ, ಉದಾಸೀನವೋ ಎಂಬ ಹೆಸರಿನಲ್ಲಿ ಲಗ್ಗೆ ಇಡುತ್ತಿತ್ತು. ಆದರೆ ಇದೇ ಮೊದಲ ಬಾರಿ ಅದು ತನ್ನ ಸಮಯಕ್ಕೆ ಮುಂಚೆ ಬಂದು ವಕ್ಕರಿಸಿದೆ! ಸೆಮಿಸ್ಟರ್ನ ಶುರುವಿನಲ್ಲಿ! ಈ ಬಾರಿ ಮನೆಯಲ್ಲಿ ವಾರಗಟ್ಟಲೆಗಳಿಂದ ನಡೆಯುತ್ತಿರುವ ಬಚ್ಚಲ ರಿಪೇರಿ, ತೀವ್ರವಲ್ಲದಿದ್ದರೂ ತುಸು ದೀರ್ಘ ಕಾಲ ಕಿರಿಕಿರಿ ನೀಡುತ್ತಿರುವ ಅನಾರೋಗ್ಯದ ಕಾಟ, ನನ್ನ ಬುದ್ಧಿಗೆ ಸರಿಯಾಗಿ ಹ್ಯಾಂಡಲ್ ಮಾಡಲು ಬಾರದ situationಗಳನ್ನು ನೋಡಿ ಕೋಪಗೊಂಡು ನನ್ನ ಮನಸ್ಸು ಸೃಷ್ಟಿಸುವ ಕಿರಿಕಿರಿ …. ಇವೆಲ್ಲದರ ಕಾರಣವಾಗಿ ಬಂದ ಈ ಬೇಡದ ಅತಿಥಿ ಬೋರಪ್ಪನನ್ನು ಸಂಬೋಧಿಸಲು ಬೇಸರವೋ, ಉದಾಸೀನವೋ, ಸುಸ್ತೋ, ಬಳಲಿಕೆಯೋ, ಸೋಮಾರಿತನವೋ, ಆಲಸ್ಯವೋ ಎಂದು ಪಾಪ ನನ್ನ ಬುದ್ಧಿಗೇ ಗೊಂದಲ ಉಂಟಾಗಿ ಅದು ಮಂಕು ಹಿಡಿದು ಮೂಲೆ ಸೇರಿಬಿಟ್ಟಿದೆ! ನಿನ್ನೆ ತರಗತಿಯಲ್ಲಿ ರಸ ಪ್ರಕರಣದಲ್ಲಿ 33 ಸಂಚಾರಿ ಭಾವಗಳ ಕುರಿತು ಜ್ಞಾನೋದಯ ಆದಮೇಲೆಯಷ್ಟೆ ಇದು ನಿರ್ವೇದ, ಗ್ಲಾನಿ, ಶ್ರಮ, ಆಲಸ್ಯ, ಜಡತ್ವ ಇನ್ನೂ ಮುಂತಾದ ಸಂಚಾರಿ ಭಾವಗಳ ಒಟ್ಟಾರೆ ಧಾಳಿ ಎಂದು ಅರಿತ ನನ್ನ ಬುದ್ಧಿಯ ಮಂಕು ಸ್ವಲ್ಪ ಅಳಿದದ್ದು! ಆಮೇಲೆ ಅದೇ ಬುದ್ಧಿಯೇ ಪಾಪ ನನ್ನ ಮನಸ್ಸನ್ನು ಪ್ರೇರೇಪಿಸಿ ಈ ಹರಟೆ ಹೊಸೆಯಲು kick ಕೊಟ್ಟಿದ್ದು 😀



ಅಯ್ಯೋ ನನ್ನ ಮರ್ಕಟ ಮನಸ್ಸಿನ ಚಂಚಲತೆಯೇ… ಮೇಲೆ ಹರಟೆ ಎಂದು ಶುರು ಮಾಡಿದ್ದು ಈಗ ಕಥೆ ಹೇಳೋಣ ಎನ್ನುತ್ತಿದೆ! ಒಂದು ಸತ್ಯ ಕಥೆ ಹೇಳೋಣ ಎಂದು ಮನಸ್ಸು ಹೇಳಿದ್ದರಿಂದ ಇದು ಕತೆಯಲ್ಲ, ಸತ್ಯ ಕಥೆ . ಮೊದಲಿಗೆ ಕಥೆ ಹೇಳುವ ಪ್ರಚೋದನೆ ಮನಸ್ಸಿಗಾಗಿದ್ದರ ಹಿನ್ನೆಲೆ ಹೇಳು ಎಂದಿತು ಬುದ್ಧಿ.

ಮೇಲೆ ಹೇಳಿದ ಕಿರಿಕಿರಿಯ ಸಂಕ್ರಮಣ ಕಾಲದಲ್ಲೆಲ್ಲ ಎಂದಿನಂತೆ ‘ಅವಲೋಕನ’ mode ಅಲ್ಲಿ stuck ಆಗಿ ಸಿಕ್ಕಿ ಒದ್ದಾಡುತ್ತಿದ್ದ ಬುದ್ಧಿ, ಮನಸ್ಸುಗಳೆರಡೂ ನನ್ನ ನೆನಪಿನಾಳದಿಂದ ಒಂದು interesting ವಿಷಯ ಹುಡುಕಿ ತಂದವು. ವಿಭಾಗದ ಸದಸ್ಯೆಯಾದ ಮೇಲೆ ನನ್ನ ಬ್ಲಾಗ್ ಲೇಖನಗಳನ್ನು ಓದುವ ನನ್ನ ಸಹೃದಯ ಸ್ನೇಹಿತೆಯರಿಂದ ಸಾಮಾನ್ಯವಾಗಿ ನನಗೆ ಸಿಕ್ಕುವ comment ಅಂದರೆ ಲೇಖನ ಲವಲವಿಕೆಯಿಂದ ಕೂಡಿದೆ, ಅದರಲ್ಲಿರುವ ಪ್ರಾಮಾಣಿಕತೆ ಮನಸೆಳೆಯಿತು, ಆಪ್ತವೆನಿಸಿತು ಇತ್ಯಾದಿ. ಇದರಲ್ಲಿ ಕೊನೆಯದಾದ ಇತ್ಯಾ ದಿ ಏನೂ ಮಹತ್ವದ ವಿಷಯವಲ್ಲ, ಕೇವಲ ಬರಿಯ ಹೊಗಳುವಿಕೆ. ಆದ್ದರಿಂದ ಮುಖ್ಯವಾದವು ಮೊದಲ ಮೂರು (ಲವಲವಿಕೆ, ಪ್ರಾಮಾಣಿಕತೆ, ಆಪ್ತ). ಇದುವರೆಗೆ ಕ್ಲೀಷೆ ಎಂದು ನಾನು ಅದರ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ, ಆದರೆ ಈಗ ನನಗೇ ಗೊತ್ತಿಲ್ಲದೆ ನನ್ನ ಮನಸ್ಸು ಅದರ ಕಾರಣ ಹುಡುಕುವ ಕೆಲಸವನ್ನು ನನ್ನ ಬುದ್ಧಿಗೆ ನೀಡಿತ್ತು. ಬುದ್ಧಿ ಹೇಳಿದ ಕಾರಣವೇನು ಅಂದರೆ -

ಅದು ಕ್ಲೀಷೆಯಲ್ಲವೇ ಅಲ್ಲ. ಅದು ನನ್ನ ಮೂರು ಬಹು ಮುಖ್ಯ ಗುಣಗಳು. ಅವು ಮೂರೂ ವಿಭಿನ್ನ ರೀತಿಯ ಗುಣಗಳು.

1. ಲವಲವಿಕೆ - ಇದು ನಾನು ನನ್ನ ಬುದ್ಧಿಯಿಂದ ಗಳಿಸಿರುವ ಗುಣ (acquired skill)

2. ಪ್ರಾಮಾಣಿಕತೆ - ಇದು ನನ್ನ ಹುಟ್ಟು ಗುಣ. ಬುದ್ಧಿ, ಮನಸ್ಸುಗಳು ಹುಟ್ಟುವ ಮುಂಚೆಯೇ ಹುಟ್ಟುವ ಗುಣವೇ ಹುಟ್ಟುಗುಣ (ಇದು ನಿಜಕ್ಕೂ ನನ್ನದೇ ವ್ಯಾಖ್ಯಾನ, ಎಲ್ಲಿಂದಲೂ ನೋಡಿ ಬರೆದದ್ದಲ್ಲ, ಹಾಗಾಗಿ ರೆಫರೆನ್ಸ್ ಕೊಡುವ ಅಗತ್ಯ ಇಲ್ಲ)

3. ಆಪ್ತತೆ - ಇದು ಅಸಲಿಗೆ ನನ್ನ ಗುಣ ಅಲ್ಲವೇ ಅಲ್ಲ. ನನ್ನ ಜೊತೆ ವ್ಯವಹರಿಸುವ ಇತರರ ಗುಣ. ತುಂಬಾ ತಮಾಷೆ ಅಂದರೆ ಅದು ಯಾರು ಓದಿ ಪ್ರತಿಕ್ರಿಯೆ ನೀಡುತ್ತಾರೋ, ಅವರಲ್ಲಿರುವ ಗುಣ. ಕೆಲವೊಮ್ಮೆ ಅವರಿಗೇ ಅದು ಗೊತ್ತಿಲ್ಲದಿದ್ದರೂ ಬಹು ಬಾರಿ ಸುಮ್ಮನೆ ತಮ್ಮ ಸೌಜನ್ಯ ಪ್ರಕಟಿಸಲು ಆ ಗುಣವನ್ನು ನನಗೆ ಆರೋಪಿಸಿರುತ್ತಾರೆ ಅಷ್ಟೇ. It's just a reflection of how they see themselves in me!


ಇಷ್ಟು ಖಡಾ ಖಂಡಿತವಾಗಿ ತಿಳಿಸಿದ ನನ್ನ ಬುದ್ಧಿ ಅಲ್ಲಿಗೆ ನಿಲ್ಲದೆ ಹಲವು ಗತ ನೆನಪುಗಳನ್ನು ಉದಾಹರಿಸಿ ಕಣ್ಣು ಮುಂದೆ ನಿಲ್ಲಿಸಿತು. ಇದು ಖಂಡಿತ ಕುವೆಂಪು ಅವರ ನೆನಪಿನ ದೋಣಿಯ ಪ್ರಭಾವ ಎಂದು ಮನಸ್ಸು ಮಧ್ಯದಲ್ಲಿ ನೆನಪಿಸಿತು. ಚಿಕ್ಕಂದಿನಿಂದ ನನ್ನದೇ ರೀತಿಯಲ್ಲಿ ಡೈರಿ ಬರೆಯುವ ಹವ್ಯಾಸ ಕುವೆಂಪು ಅವರಂತೆ ನನಗೂ ಇತ್ತು. ಅದು ಮಾತ್ರ ಅವರ ಪ್ರಭಾವ ಅಲ್ಲ, ನಮ್ಮ ಶಾಲೆಯ ಟೀಚರ್ ದಿನಕ್ಕೊಂದು ಒಳ್ಳೆಯ ಕೆಲಸ ಬರೆಯಿರಿ ಎಂದು ಹೋಮ್ ವರ್ಕ್ ಕೊಟ್ಟದ್ದನ್ನು ನಾನು ಸೀರಿಯಸ್ ಆಗಿ ತಗೊಂಡು ಬಹಳ ಕಾಲ ಬರೆದ ಪರಿಣಾಮ ಮುಂದೆ ಆಗಾಗ ಡೈರಿ ಬರೆದಿಡುವಲ್ಲಿಗೆ ಮುಟ್ಟಿತ್ತು. ಈಗ ಬುದ್ಧಿ ನೆನಪಿಸಿದ ಕಥೆಗಳು (ಒಂದು ಕಥೆ ಅಂದುಕೊಂಡಿದ್ದು ಹಲವು ಕಥೆಗಳು ಆಗುವ ಸಂಭವ ತೋರುತ್ತಿದೆಯಲ್ಲವೇ? ಇದು ಮರ್ಕಟ ಮನಸ್ಸಲ್ಲ, ಬುದ್ಧಿಯ ಕಿತಾಪತಿ) ಡೈರಿಯಲ್ಲೂ ದಾಖಲಾಗದೆ ಇದ್ದ ಸ್ವಾರಸ್ಯಕರ ಸಂಗತಿಗಳು. ಡೈರಿಯಲ್ಲಿ ಯಾಕೆ ದಾಖಲಾಗಿಲ್ಲ ಅಂದರೆ ಅವು ನನ್ನ ಅರಿವಿನಲ್ಲಿ ಮೊದಲಿನಿಂದಲೂ ಸ್ಪಷ್ಟವಾಗಿ ಇದ್ದರೂ, ಹೇಗೆ ದಾಖಲಿಸಬೇಕೆಂದು ತಿಳಿಯದಿದ್ದುದು (ಸ್ಪಷ್ಟವಾಗಿ ದಾಖಲಿಸುವುದು ಎಷ್ಟು ಮುಖ್ಯ ಎಂದು ನನಗೆ ಉಪಾಧ್ಯ ಸರ್ ಗಿಂತ ಹೆಚ್ಚು ಒತ್ತಿ ಒತ್ತಿ ಹೇಳಿದವರಿಲ್ಲ). ಅಂದರೆ ಅವು ನನಗೆ ಮೊದಲೇ ಗೊತ್ತಿದ್ದ ವಿಚಾರಗಳು, ಆದರೆ ಹೊಳೆದದ್ದು ಈಗ (ಜೀವಿ ಸರ್ ಅವರ ಸಾಲು), ಜೀವಿ ಸರ್ ಹೇಳಿದ ಹೊಳೆಯುವ ವಿಚಾರ ನನ್ನ ಬುದ್ಧಿಗೆ ಚೆನ್ನಾಗಿ ಅರ್ಥ ಆಗಿತ್ತು, ಅವರು ಹೇಳುವ ಮೊದಲು ಅನುಭವಕ್ಕೂ ಬಂದಿತ್ತು. ಈಗ ಎರಡು ಚುಕ್ಕೆಗಳು ಕೂಡಿದವು (joining the dots ;). ಅನುಭವ ಎಂದರೆ ಹೇಳಲಾಗದ್ದು, ಅದನ್ನು ಅನುಭವಿಸಿಯೇ ನೋಡಬೇಕು. ಸಕ್ಕರೆಯ ಸಿಹಿ ಹೇಗಿದೆ ಎಂದು ಹೇಳಲು ಬರುವುದಿಲ್ಲ ಎಂಬ ಸಾಮಾನ್ಯ ಉದಾಹರಣೆಯಂತೆ. ಈಗ ನನಗೆ ಹೊಳೆದಿದ್ದು, ನನ್ನ ವ್ಯಾಖ್ಯಾನ ಅಂತಿಟ್ಟುಕೊಳ್ಳಿ - ಅನುಭವ ಅಂದರೆ ನನಗೆ ಒಳಒಳಗೆ ಸರಿಯಾಗಿ ಅರ್ಥ ಆಗಿರುವ ವಿಚಾರವೇ, ಆದರೆ ಹೇಗೆ ಹೇಳುವುದು ಎಂದು ಗೊತ್ತಾಗದ್ದು. ಆದರೆ ಹೊಳೆಯುವುದು ಅಂದರೆ ಅದರ ಕುರಿತು ನನ್ನ ಬುದ್ಧಿ, ಮನಗಳ ಜೊತೆಗೆ ಸ್ಪಷ್ಟವಾಗಿ ನಾನು ತರ್ಕ ಮಾಡಲು ಸಾಮರ್ಥ್ಯ ಬರುವುದು. ಈ ಸ್ಪಷ್ಟತೆ ನನಗೆ ಬಂದದ್ದು ಈಗಷ್ಟೇ, ಈ ಲೇಖನ ಬರೆಯಲು ಪ್ರಾರಂಭಿಸಿದ ಮೇಲೆಯೇ. ಹಾಗಾದರೆ, joining the dots again, ಹೊಳೆಯುವುದೇ ಅನುಭಾವವೇ? ಅದುವೇ ದರ್ಶನವೇ? ಅದುವೇ ಕಾಣ್ಕೆಯೇ? ಏನಿದು ನನ್ನ ಒಳಗಣ್ಣು ತೆರೆಯಿತೇ ಹೇಗೆ 🙂??). ನಿಮಗೇನಾದರೂ ಅರ್ಥ ಆಯ್ತಾ? ಆದವರು ದಯವಿಟ್ಟು ತಿಳಿಸಿ.



ಅಂತೂ ಜಾಣರಾದ ಓದುಗರು ಈಗ ಅರ್ಥ ಮಾಡಿಕೊಂಡಂತೆ ಕಥೆಗಳು ಎಂದು ಒಪ್ಪಿದ್ದರಿಂದ ಈ ನಾನು ಬುದ್ಧಿ ಭಾವಗಳ ಸಂಗಮದಿಂದ ನನಗೆ ದೊರೆತ ಉದಾಹರಣೆಗಳಲ್ಲಿ ಎರಡು, ಮೂರಾದರೂ (ಬಹುವಚನ ಸಾಧಿಸಲು, ಮತ್ತೇನಲ್ಲ) ಕಥೆಗಳನ್ನು ಬರೆಯುವ ಯೋಜನೆ ಹಾಕಿಕೊಂಡಿದ್ದೇನೆ. ಇನ್ನು ಕಾವ್ಯ ಪ್ರಯೋಜನ ಎನ್ನುವಂತೆ, ಈ ಕಥೆಗಳ ಪ್ರಯೋಜನ ಏನು ಎಂದು ನೀವು ಕೇಳಿದರೆ ಪ್ರಯೋಜನ ಓದುಗನಿಗೆ ಇನಿತೂ ಇಲ್ಲ. ಅದಕ್ಕೆ ಹೆಚ್ಚು ಜನರಿಗೆ ನಾನು ನನ್ನ ಯಾವ ಲೇಖನವನ್ನೂ ತೋರಿಸಲ್ಲ. ಯಾಕೆಂದರೆ ನನ್ನ ಲೇಖನಗಳ ಪ್ರಯೋಜನ ನನಗೆ ಮಾತ್ರ. ಅದು ನಾನು ಚಿಕ್ಕಂದಿನಿಂದ ನನಗೆ ತಿಳಿಯದೆ ಉಪಯೋಗಿಸುತ್ತಿದ್ದ ಒಂದು hidden equipment, ಅದು ನನ್ನನ್ನು ನಾನು ಅರಿಯುವ ನನ್ನ ಸ್ವಂತದ ಸಾಧನ. ಅದಕ್ಕೇ ಇರಬೇಕು ನನಗೆ ಪ್ರಕಟಣೆ, ಸಮಾರಂಭ, ಹೊಗಳಿಕೆಗಳಿಂದ ನಿಜಕ್ಕೂ ಜಿಗುಪ್ಸೆ. ಈಗ ಎಲ್ಲವೂ ತೆರೆದ ಪುಸ್ತಕದಂತೆ ಸ್ಪಷ್ಟ. ಇಂಗ್ಲಿಷಿನಲ್ಲಿ ಹೇಳುವಂತೆ ‘Seek and ye shall find‘ ಎಂಬುದು ನನ್ನನ್ನು ತುಂಬಾ ಕಾಡುತ್ತಿತ್ತು. ಈಗ ಅದನ್ನು ಮಾತೃಭಾಷೆಯಲ್ಲಿ ಕಲಿತ ಮೇಲೆ ಅರಿವೇ ಗುರು ಅಂದರೆ ಅದೇ ಎಂದು ಮೊದಲೇ ಗೊತ್ತಿದ್ದ ಫ್ಯಾಕ್ಟ್ ಈಗ ಅರಿವಿಗೆ ಬಂತು. ಕುವೆಂಪು ಅವರಿಗೆ ಕಣ್ಣು ತೆರೆಸಿದ ಕಸಿನ್ಸ್ ಪರೋಕ್ಷವಾಗಿ ನನ್ನ ಕಣ್ಣು ಕೂಡ ತೆರೆಸಿದನೇ? ಮಾತೃ ಭಾಷೆಯಲ್ಲಿ ಬರೆಯುವುದರ ಮಹತ್ವ ಅವನು ಚೆನ್ನಾಗಿ ತಿಳಿಸಿದ್ದು ನನಗೆ ನೆನಪಿನ ದೋಣಿಯಲ್ಲಿ ತುಂಬಾ ಮೆಚ್ಚಿಗೆ ಆಗಿತ್ತು, ಅಂದ ಹಾಗೆ ಅದು ಇನ್ನೂ ಅರ್ಧವೂ ಓದಿ ಮುಗಿದಿಲ್ಲ. ಆದರೆ ತಮಾಷೆ ಅಂದರೆ ಅವನು ಯಾವ ಕವಿ ಎಂದು ಹೆಸರು ನನ್ನ ನೆನಪಿಗೆ ಬರಲಿಲ್ಲ, ಐದಾರು ದಿನಗಳ ಕೆಳಗೂ ಓದಿದ್ದೆ, ಪಾಠ ಮಾಡುವ ಉಪಾಧ್ಯ ಸರ್, ಪೂರ್ಣಿಮಾ ಮೇಡಮ್ ಇಬ್ಬರ ಬಾಯಲ್ಲೂ ಅವನ ಹೆಸರು ಸಾವಿರ ಬಾರಿ ಕೇಳಿದ್ದೆ, ಆದರೂ ಅವನ ಹೆಸರು ನನಗೆ ಮರೆತಿತ್ತು. ಈಗ ಪುಸ್ತಕ ನೋಡಿ ಬರೆದೆ. So ಇದೀಗ ಇನ್ನೊಂದು self realization - ಕಾದಂಬರಿ ಹೆಸರು, ಲೇಖಕ ಎಲ್ಲ ನನಗೆ ಎಂದಿಗೂ ಅಷ್ಟು ಮುಖ್ಯ ಅನ್ನಿಸದೆ ಇರುವುದೇ ನಾನು ಯಾವಾಗಲೂ ಇತರರ ಜೊತೆ ನಾನು ಓದಿದ ವಿಷಯ ಚರ್ಚಿಸಲು ಹಿಂದೇಟು ಹಾಕುವಂತೆ ಮಾಡುವುದಕ್ಕೆ ಮುಖ್ಯ ಕಾರಣ. ಈಗ ಇದುವೂ ನನಗೆ ಸುಸ್ಪಷ್ಟ, ನಾನು ಹುಡುಕುವುದು ನನಗೆ ನಿಜವಾಗಿ ಏನು ಸಿಗುತ್ತದೆ ಅಂತ, ಯಾರು ಎಲ್ಲಿ ಹೇಳಿದರು ಎಂಬುವುದು ನನಗೆ ಸೆಕೆಂಡರಿ. ಈ ಸೆಕೆಂಡರಿ ವಿಚಾರಗಳನ್ನು ನಾನು ಗೌರವಿಸಲು ಶುರು ಮಾಡಿದ್ದು ಉಪಾಧ್ಯ ಸರ್ ಅವರ ವಿದ್ಯಾರ್ಥಿಯಾಗಿ ಬಹಳ ಗೌರವದಿಂದ ಅವರು ಹೇಳುವ ಮಾತು ಕೇಳುವ ಸಲುವಾಗಿ ಮಾತ್ರ!!


ಇನ್ನು ತಡ ಮಾಡದೆ ಒಂದೊಂದೇ ಸಣ್ಣ ಸಣ್ಣ ಸಂಗತಿಯನ್ನು ಕಥೆಯಂತೆ ದಾಖಲಿಸುವ ಪ್ರಯತ್ನ ಮಾಡುವೆ. ಒಂದು ಬ್ಲಾಗ್ ಲೇಖನಕ್ಕೆ ಒಂದು ಕಥೆ. ಹೇಗಿದೆ ನನ್ನ ಬುದ್ಧಿಯ ಈ ಐಡಿಯಾ?


ಮೊದಲ ಕಥೆ ಲವಲವಿಕೆಯ ಕಥೆ. ಅದನ್ನು ಮುಂದಿನ ಭಾಗದಲ್ಲಿ ನಿರೀಕ್ಷಿಸಿ. See you soon. Bye , Take Care .


P.S: ಇಷ್ಟು ಹೊತ್ತು ನನ್ನ ಮನದಲ್ಲಿದ್ದ ಅತಿಥಿ ಬೋರಪ್ಪನನ್ನು ನಿಮ್ಮ ಮನಕ್ಕೆ ಕಳುಹಿಸಲು ಪ್ರಯತ್ನಿಸಿದ್ದಕ್ಕೆ, ಅವನು ಒಂದು ವೇಳೆ ನಿಮ್ಮಲ್ಲಿಗೆ ಬಂದಿದ್ದರೆ, ನಿಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡಿದ್ದಕ್ಕೆ ಕ್ಷಮೆ ಕೇಳು ಎಂದು ಮನಸ್ಸು ನೆನಪಿಸಿತು. ಹೌದು ಶಿಷ್ಟಾಚಾರ ಅಂತ ಆ ಮಾತು ಸೇರಿಸಿಬಿಡು, ಯಾಕೆ ಸುಮ್ನೆ risk ಅಂದಿತು ಬುದ್ಧಿ!


ಹೀಗೆ ಈ ಬುದ್ಧಿ ಮನಸ್ಸುಗಳ ಸೀರಿಯಸ್ ಉಪದ್ರವದಲ್ಲಿ ಅವೆರಡೂ ಅಲ್ಲದ ‘ನಾನು’ ಹೈರಾಣು!



Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page