top of page

ಬುದ್ಧಿ - ಮನಸ್ಸುಗಳ ಗುದ್ದಾಟ…ಹಾಗೇ ಸುಮ್ಮನೊಂದು ಹರಟೆ :)

  • vidyaram2
  • Aug 9, 2022
  • 1 min read

Updated: Aug 10, 2022


ಕನ್ನಡದಲ್ಲಿ ಎಂ. ಎ ಮಾಡುವ ನಿರ್ಧಾರ ಮಾಡಿದಾಗಲಿಂದ ನನ್ನ ಹೆಮ್ಮೆಯ ಬುದ್ಧಿಗೂ, ಅಕ್ಕರೆಯ ಮನಸ್ಸಿಗೂ ಆಗಾಗ್ಗೆ ತಿಕ್ಕಾಟ ಶುರು ಆಗಿದೆ:)

ಸಾಫ್ಟ್ವೇರ್ ಪ್ರೊಫೆಷನಲ್ ಬುದ್ಧಿಗೆ ಕಂಪ್ಯೂಟರಿನ ಭಾಷೆಗಳಾದ Java, Python, C, C++ ಅಂದ್ರೆ ಇಷ್ಟ, ಮನಸ್ಸಿಗೆ 2000 ವರ್ಷಗಳಿಗೂ ಹಿಂದಿನಿಂದ ಇದ್ದ ಕನ್ನಡ ಭಾಷೆಯ ಅಧ್ಯಯನ ಆರಂಭಿಸಿರುವುದು ಖುಷಿ!


Computer ಭಾಷೆಗಳು ಬಹಳ ಕಡಿಮೆ ಕಾಲದಲ್ಲಿ ಬದಲಾಗುತ್ತಾ ಇರುತ್ತವೆ, ಇರೋ ಭಾಷೆಯ ಹೊಸ ಹೊಸ versionಗಳ (Java 1.0, 1.2, 1.4 ದಿಂದ ಈಗ Java 11 ನಡೀತಿದೆ) ಜೊತೆ ಒಂದು ಭಾಷೆ ಪೂರ್ಣ ನಿಂತು ಹೋಗಿ (obsolete) ಹೊಸ ಭಾಷೆ ಬರುವುದಕ್ಕೆ ಸಹ ಹೆಚ್ಚು ಸಮಯ ಬೇಡ. ಹೀಗೆ ನಿರಂತರ ಕಂಪ್ಯೂಟರಿನಂತೆ ನಾವೂ ಕೂಡ skills update ಮಾಡ್ತಾ ಹೋಗೋದು ಅನಿವಾರ್ಯ…ಅದು ಮನಸ್ಸಿಗೆ ಕಿರಿಕಿರಿ ಆದ್ರೂ ಬುದ್ಧಿಗೆ ಖುಷಿ.

ಈಗ ಕನ್ನಡದ ಅವಸ್ಥಾಂತರಗಳು - ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡವಾಗಿ ಹೇಗೆ ಪರಿವರ್ತನೆಗೊಂಡವು …ಅದಕ್ಕೆ ಎಷ್ಟು ಶತಮಾನಗಳು ಹಿಡಿದವು, ಕ್ರಮೇಣ ಹೇಗೆ ಜನರ ಬಾಯಲ್ಲಿ ಭಾಷೆ ಬದಲಾಗುತ್ತಾ ಜೀವಂತಿಕೆ ಪಡೆಯುತ್ತದೆ ಎಂದು ಓದಿ, ಭಾಷೆ, ಸಾಹಿತ್ಯದ ಕಾಲ ಘಟ್ಟ, ಕೃತಿಕಾರರ ಕಾಲ ಎಲ್ಲಾ ನೆನಪಿಟ್ಟುಕೊಳ್ಳಬೇಕಲ್ಲಪ್ಪಾ ಎಂದು ಬುದ್ಧಿಗೆ ಆಲಸ್ಯ ಆದ್ರೂ ಮನಸ್ಸಿಗೆ ಹಿಗ್ಗು.


ಮೊದಲೆಲ್ಲಾ ಬುದ್ಧಿಗೆ ಕಸರತ್ತು ಮಾಡಿ ಆಯಾಸವಾದಾಗ ಅದಕ್ಕೆ ವಿಶ್ರಾಂತಿ ಕೊಡಲು ಆಸಕ್ತ ವಿಷಯ, ಪುಸ್ತಕಗಳ ಓದುವಿಕೆಯಿಂದ ಮನಸ್ಸು ಬುದ್ಧಿಗೆ ನೆರವಾಗುತ್ತಿತ್ತು…ಮನ ಅರಳಿದ ಕೂಡಲೇ ಬುದ್ಧಿಯೂ ಚುರುಕಾಗಿ ಪುನಃ ತನ್ನ ಕೆಲಸದಲ್ಲಿ ಉತ್ಸಾಹ ತೋರುತ್ತಿತ್ತು. ಈಗ ಮನಸ್ಸಿನ ಕೆಲಸವೇ ಹೆಚ್ಚಿರುವ ಹಿನ್ನೆಲೆಯಲ್ಲಿ ಬುದ್ಧಿ ಅಭದ್ರತೆ ಕಾಡುತ್ತಿರುವಂತೆ ಆಡುತ್ತಿದೆ;) ಮುಂಬೈ ವಿವಿಯ ಕನ್ನಡ ವಿಭಾಗದ ಗ್ರಂಥಾಲಯದಲ್ಲಿ ಯಾವ ಪುಸ್ತಕ ತೆಗೆದುಕೊಳ್ಳಲಿ ಅಂತ ಮನಸ್ಸು ಯೋಚಿಸಿದರೆ, ಅಲ್ಲಿರುವ ರಿಜಿಸ್ಟ್ರಿಯಲ್ಲಿ ನಮೂದಿಸುವಾಗ ಬುದ್ಧಿ, ಗ್ರಂಥಾಲಯದ ನಿರ್ವಹಣೆಗೆ ಯಾವುದಾದರೂ Library Management Software ಅಥವಾ Excel based system ಬಳಕೆ ಮಾಡಿದರೆ ಕಾರ್ಯ ಸುಲಲಿತವಾಗುತ್ತದೆ ಎಂದು ಪ್ರಚೋದಿಸಿ ನನ್ನ ತಲೆ ತಿನ್ನುತ್ತದೆ. ಸಾಫ್ಟ್ವೇರ್ ಬುದ್ಧಿಗೊಂದು ಗುದ್ದು ಕೊಟ್ಟು, ನಾನು ಕಲಿಯಲು ಬಂದಿರುವ ವಿಷಯದ ಕಡೆ ಜಾಗ್ರತೆ ವಹಿಸುವಂತೆ ನಾನು 'ಬುದ್ಧಿ' ಹೇಳುವಂತಾಗಿದೆ! ತನ್ನ ಮಹತ್ವ ಕಡಿಮೆಯಾಯಿತು ಎಂದು ಮಂಕಾಗುವ ಬುದ್ಧಿಯ ವಿಷಯ ಅಷ್ಟು 'ಮನಸ್ಸಿ'ಗೆ ಹಚ್ಚಿಕೊಳ್ಳಬೇಡ ಎಂದು ಮನಸ್ಸಿಗೆ ಪುಸಲಾಯಿಸುವಂತಾಗಿದೆ!!


ಅಂತೂ ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯುವಂತೆ … ಈ ಬುದ್ಧಿ, ಮನಸ್ಸುಗಳ ತಿಕ್ಕಾಟದಲ್ಲಿ, ಅವೆರಡೂ ಅಲ್ಲದ 'ನಾನು' ಹೈರಾಣು! ;)



Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page