top of page

ನಾನು ಕಂಡ ಮುಂಬೈ...

  • vidyaram2
  • Aug 8, 2022
  • 4 min read

Updated: Sep 16, 2023


ನನ್ನದಲ್ಲದ ಮುಂಬೈ ನನ್ನದಾಗಿ ಈಗ್ಗೆ 16 ವರ್ಷಗಳೇ ಸಂದಿವೆ. ಮಾಯಾನಗರಿ, ಮಹಾನಗರಿ ಎಂದೆಲ್ಲಾ ಹೆಗ್ಗಳಿಕೆ ಹೊತ್ತ ಈ ನಗರವನ್ನು ನಾನು ಮೊದಲ ಬಾರಿ ಕಂಡದ್ದು ಕೆಲ ವರ್ಷಗಳ ಕಾಲ ಇಲ್ಲೇ ವಾಸ ಮಾಡುವ ಸಲುವಾಗಿ ಬಂದಾಗಲೇ. ಒಂದು ವರ್ಷದ ನನ್ನ ಮಗನನ್ನು ಕಟ್ಟಿಕೊಂಡು ಇಲ್ಲಿ ಬಂದಿಳಿದು ಮನೆ ತಲುಪುವಷ್ಟರಲ್ಲಿ ಮೊದಲು ಕಣ್ಣಿಗೆ ಬಿದ್ದಿದ್ದು ರಿಪೇರಿಗೆಂದು ಗುಂಡಿ ತೋಡಿಕೊಂಡಿದ್ದ ರಸ್ತೆಗಳು, ಎರಡೂ ಬದಿಯಲ್ಲೂ ಸಣ್ಣ ವ್ಯಾಪಾರಿಗಳ ತಳ್ಳಂಗಡಿಗಳು, ಬದಿಯಲ್ಲಿ ಕಸ, ಕೊಳೆ ರಾಶಿ, ಸುಣ್ಣ ಬಣ್ಣ ಕಾಣದ ಕಟ್ಟಡಗಳು, ಸ್ವಲ್ಪ ಸ್ವಲ್ಪ ದೂರದಲ್ಲೇ ಕೊಳಗೇರಿ ಪ್ರದೇಶಗಳು, ಎಲ್ಲಿ ನೋಡಿದರೂ ಜನ ಸಂದಣಿ, ವಾಹನಗಳ ಭರಾಟೆ. ಮನೆ ತಲುಪಿದರೆ, ಮನೆಯೋ ಧಾರಾಳವಾಗಿ ಗಾಳಿ, ಬೆಳಕುಗಳ ಜೊತೆ ಧೂಳನ್ನೂ, ಪುಟ್ಟ ಪುಟ್ಟ ಕೊಠಡಿಗಳನ್ನೂ ಹೊಂದಿದ, ಅಪಾರ್ಟ್ಮೆಂಟು. ಸಾಲದ್ದಕ್ಕೆ ತಂಪಾದ ಬೆಂಗಳೂರಿನಿಂದ ಬಂದವರಿಗೆ ಸಾಕಪ್ಪಾ ಎನಿಸುವ ಕರಾವಳಿಯ ಹವೆ…ಮೈಯೆಲ್ಲಾ ಬೆವರಿ ಅಂಟು, ಅಂಟು…ಸ್ನಾನ ಮಾಡಿ ಹೊರಬಂದರೆ ತಕ್ಷಣವೇ ಬೆವರಿನಿಂದ ಇನ್ನೊಮ್ಮೆ ಪೂರ್ಣ ಸ್ನಾನ! ಈ ಬಗ್ಗೆ ಕೇಳಿ ಗೊತ್ತಿದ್ದರೂ ಅನುಭವ ಆದಾಗ ಇನ್ನೂ ಇಲ್ಲೇ ಎರಡು ಮೂರು ವರ್ಷವಾದರೂ ಇರಬೇಕಲ್ಲಪ್ಪಾ ಎಂದು ಮನಸ್ಸಿಗೆ ಕಿರಿ ಕಿರಿಯಾಗಿದ್ದು ನಿಜ. ಯಜಮಾನರು ಬಂದು ಆಗಲೇ ಆರೇಳು ತಿಂಗಳು ಕಳೆದಿದ್ದು, ಅವರಿಗೆ ಮುಂಬೈ ಹಿಡಿಸಿಯಾಗಿತ್ತು.


ಮುಂದಿನ ಕೆಲವು ವಾರಗಳಲ್ಲಿ ನಾವು ಮುಂಬೈ ದರ್ಶನ ಮಾಡಿ ಎಲ್ಲಾ ಪ್ರಸಿದ್ದ ಜಾಗಗಳನ್ನು, ಜನರಷ್ಟೇ ಕೊಳೆ, ಕಸಗಳನ್ನೂ ತುಂಬಿಕೊಂಡಿದ್ದ ಬೀಚುಗಳನ್ನು, ಲೋಕಲ್ ಟ್ರೈನ್ನಲ್ಲಿ ಓಡಾಡುವ ಅನುಭವ ಎಲ್ಲಾ ಪಡೆದದ್ದಾಯ್ತು. ಅಷ್ಟೊಂದು ಜನ ಹೇಗೆ ಯಾಂತ್ರಿಕವಾಗಿ ಎಲ್ಲಾ ಸಮಯದಲ್ಲೂ ತಮ್ಮ ಪಾಡಿಗೆ ಓಡುತ್ತಾ, ನುಗ್ಗುತ್ತಾ, ನಡೀತಾ ಇರ್ತಾರಪ್ಪ, ಎಲ್ಲಿ ಹೋಗ್ತಾರೆ, ಏನು ಮಾಡ್ತಾರೆ ಇವರೆಲ್ಲಾ ಅನ್ನಿಸದಿರಲಿಲ್ಲ…ಚಿನ್ನಾರಿ ಮುತ್ತನ 'ಎಷ್ಟೊಂದು ಜನ ಇಲ್ಲಿ ಯಾರು ನಮ್ಮೋರು…ಎಷ್ಟೊಂದು ಮನೆ ಇಲ್ಲಿ ಎಲ್ಲಿ ನಮ್ಮನೆ…' ಹಾಡು ನೆನಪಾಗುತ್ತಿತ್ತು. ಸಂಜೆ ಹೊತ್ತು ಮಗನನ್ನು ಅಪಾರ್ಟ್ಮೆಂಟ್ ಅಲ್ಲಿರುವ ಸಣ್ಣ ಆಟದ ಜಾಗಕ್ಕೆ ಕರೆದುಕೊಂಡು ಹೋಗಿ, ಅವನ ವಯಸ್ಸಿನ ಮಕ್ಕಳಿರುವ ಕೆಲವು ತಾಯಂದಿರನ್ನು ಪರಿಚಯ ಮಾಡಿಕೊಂಡೆ. ಅಂತೂ ದಿನಗಳು ಉರುಳಿ ಮಳೆಗಾಲ ಬಂತು. ಬಿಡದೇ ಸುರಿಯುವ ಜಡಿ ಮಳೆ, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ, ಟ್ರಾಫಿಕ್, ಟ್ರೈನ್ ಸ್ಥಗಿತಗೊಂಡು ಜನರ ನಿರಂತರ ಓಡಾಟಕ್ಕೆ ಬ್ರೇಕ್, ಟಿವಿ ಚಾನೆಲ್ಗಳಲ್ಲಿ 24 ಗಂಟೆಯೂ ಅದೇ ವಿಷಯಗಳನ್ನೊಳಗೊಂಡ ದೃಶ್ಯಗಳ ಪುನರಾವರ್ತನೆ, ಅಧಿಕಾರದಲ್ಲಿರುವವರು ಸೂಕ್ತ ವ್ಯವಸ್ಥೆ ಮಾಡಿಲ್ಲವೆಂದು ಆರೋಪ…ಮಾನವ ಉತ್ಪತ್ತಿ ಮಾಡಿದ ಟನ್ಗಟ್ಟಲೆ ತ್ಯಾಜ್ಯವನ್ನು ಉಬ್ಬರದ ಸಮಯದಲ್ಲಿ ಮುಲಾಜಿಲ್ಲದೇ ಹೊರಗೆಸೆಯುವ ಸಮುದ್ರ…ಒಟ್ಟಿನಲ್ಲಿ ಕಾಂಕ್ರೀಟ್ ಕಾಡು ನಿರ್ಮಿಸಿ ಪರಿಸರ ನೈರ್ಮಲ್ಯತೆ ಬಗ್ಗೆ ಕಾಳಜಿ ಇಲ್ಲದೆ ಮೆರೆಯುವ ನಾಗರಿಕತೆಯ ಪರಿಣಾಮವಾಗಿ ಪ್ರತಿ ವರ್ಷವೂ ತೆರಬೇಕಾದ ದಂಡ, ಜೊತೆಯಲ್ಲಿ ಪಿರಿ ಪಿರಿ ಮಳೆಯಲ್ಲಿ ಕೆಳಗೆ ಆಡಲು ಹೋಗಲಾಗದೆ ರಗಳೆ ಮಾಡುವ ನನ್ನ ಮಗು, ಅಂತೂ ಮೊದಲ ಮಳೆಗಾಲ ಕಳೆಯುವ ತನಕವೂ ನನಗೆ ಮುಂಬೈ ಹಿಡಿಸಲೆ ಇಲ್ಲ.


ಕ್ರಮೇಣ ನನ್ನ ವೃತ್ತಿಗೆ ಹಿಂದಿರುಗಿ ಆಫೀಸ್ಗೆ ಹೋಗಲು ಶುರುಮಾಡಿದ ಮೇಲೆ ಹೊಸ ಪರಿಸರದಲ್ಲಿ ಕೆಲಸ, ಹೊಸ ಸ್ನೇಹಿತರು, ಮಗನ ಬೇಬಿ ಸಿಟ್ಟಿಂಗ್ನಲ್ಲಿ ಹೊಸ ಪರಿಚಯಗಳು ಆಗಿ ಮುಂಬೈ ಜೀವನ ಏರುಪೇರಿಲ್ಲದೇ ಶಿಸ್ತುಬದ್ದಾಗಿ ನಡೆಯತೊಡಗಿತು. ಮುಂದಿನ 10-12 ವರ್ಷಗಳು ಯೋಚಿಸಲು ಸಮಯವಿಲ್ಲದಂತೆ - ಆಫೀಸ್, ಮನೆ, ಮಗನ ಶಾಲೆ, ಮನೆಗೆಲಸ, ಸ್ನೇಹಿತರು, ಮುಂಬೈ ನೋಡಲೆಂದು ಬಂದು ಹೋಗುವ ನೆಂಟರಿಷ್ಟರು, ಬಿಡುವು ದಿನಗಳಲ್ಲಿ ಸುತ್ತಮುತ್ತಲ ಸುತ್ತಾಟ, ಪ್ರವಾಸ ಹೀಗೇ - ಸಂದುಹೋದವು. ಆ ನಡುವೆಯೂ ಮತ್ತು ಆಮೇಲೆ ಸ್ವಯಂ ನಿವೃತ್ತಿ ಘೋಷಿಸಿ ಬಿಡುವು ಸಿಕ್ಕಾಗಲೆಲ್ಲಾ ನಾವು ಹಿಂತಿರುಗಿ ನೋಡಿಕೊಂಡಾಗ ನಮಗರಿವಿಲ್ಲದೇ ಮುಂಬೈ ನಮಗೆ ಬಹಳಷ್ಟು ಕಲಿಸಿದೆ, ನಮ್ಮನ್ನು ಹೊಸ ಮನುಷ್ಯರಾಗಿ ಮಾಡಿದೆ, ನಮ್ಮ ಅನೇಕ ಧೋರಣೆಗಳನ್ನು ಬದಲಾಯಿಸಿದೆ ಎಂದು ನನಗೂ, ನನ್ನವರಿಗೂ ಖಚಿತವಾಗಿ ಅನ್ನಿಸಿದೆ.


ಸಮಾಜದ ಮೇಲು ಮತ್ತು ಕೆಳ ವರ್ಗದ ಜನ ಪರಸ್ಪರ ಸಹಕಾರದಿಂದ ಇಲ್ಲಿ ಬಾಳುವಂತೆ ಇನ್ನೆಲ್ಲೂ ನಾನು ಕಂಡಿಲ್ಲ. ಹೊಂದಾಣಿಕೆ ಇಲ್ಲಿಯ ಜೀವನದ ಒಂದು ಸಹಜ ಪ್ರಕ್ರಿಯೆ.ಮನೆಗೆಲಸದ ಕಾಂವಾಲಿ ಬಾಯಿ, ಇಸ್ತ್ರಿ ಮಾಡುವ, ಕಾರು ತೊಳೆಯುವ, ಮನೆ ಬಾಗಿಲಿಗೆ ಹಾಲು, ಮೊಟ್ಟೆ, ಬ್ರೆಡ್ಗಳನ್ನು ಒದಗಿಸುವ ಭೈಯ್ಯಾಗಳು(ಭೈಯ್ಯಂದಿರು?) ಒಂದು ದಿನ ಬರುವುದು ತಪ್ಪಿಸಿದರೆ ಇಲ್ಲಿ ಅಪಾರ್ಟ್ಮೆಂಟ್ ಜೀವಿಗಳ ದಿನ ಸಾಗುವುದೇ ಇಲ್ಲ ;) ಅವರೊಂದಿಗೆ ತಮ್ಮ ಕುಟುಂಬದ ಸದಸ್ಯರಂತೆ ಅನ್ಯೋನ್ಯತೆ, ಕೋಪ, ಮುನಿಸು, ಪ್ರೀತಿ ಬೆಳೆಸಿಕೊಂಡು ಬದುಕುತ್ತಾರೆ. ಬಸ್ಸಿನಲ್ಲಿ, ಟ್ರೈನ್ನಲ್ಲಿ ಆದಷ್ಟು ಕಡಿಮೆ ಜಾಗ ಬಳಸಿ ಹೆಚ್ಚು ಜನರನ್ನು ಒಳಗೆಳೆದುಕೊಂಡು ಸಾಗುವ ರೂಢಿ ಇಲ್ಲಿ ಕಂಡೆ. ಬಸ್ಸಿನಲ್ಲಿ ಒಬ್ಬ ವ್ಯಕ್ತಿ ನಿಂತ ರೀತಿಯಿಂದ ಅವನು ಯಾವ ಕಡೆಯವನು ಎಂದು ತಿಳಿಯುತ್ತದೆ ಎಂದು ನನ್ನ ಮುಂಬೈ ಸ್ನೇಹಿತರೊಬ್ಬರು ಹೇಳುವುದು ನೆನಪಾಗುತ್ತದೆ - "ದೊಡ್ಡದಾಗಿ ಹರಡಿ ನಿಲ್ಲುವವರು ದೆಹಲಿಯವರು, ದೇಹ ಚಿಕ್ಕದು ಮಾಡಿ ಅಡ್ಡಡ್ಡ ನಿಲ್ಲೋರು ಮುಂಬೈನವರು" ಎಂದು. ಕರೋನ ಮಹಾಮಾರಿ ಪೀಡಿತರಾಗಿ isolation ನಲ್ಲಿ ಇರಲು ಪ್ರತ್ಯೇಕ ಕೊಠಡಿ ಇರದಾಗ ಮನೆ ಖಾಲಿ ಇರುವವರು ತಮ್ಮ ಕೋಣೆಯನ್ನ ಅಂಥವರಿಗೆ ಬಿಟ್ಟುಕೊಟ್ಟ ಉದಾಹರಣೆಗಳನ್ನು ನಾನು ನೋಡಿದ್ದೇನೆ. ಹೌಸಿಂಗ್ ಸೊಸೈಟಿಯಲ್ಲಿ ಒಂದು ಸುಸಜ್ಜಿತ ಹಾಸಿಗೆ, ವೀಲ್ ಛೇರ್, ಆಮ್ಲಜನಕ ಸಿಲಿಂಡರ್ ವ್ಯವಸ್ಥೆ ಮಾಡಿಕೊಂಡು ಊಟ ಕೊಟ್ಟು ಸಹಾಯಕ್ಕೆ ಒದಗಿಸಿದವರನ್ನು ನೋಡಿದ್ದೇನೆ.


ಗಡಿಯಾರದ ಮುಳ್ಳಿನೊಂದಿಗೆ ಪೈಪೋಟಿ ಮಾಡುತ್ತಾ ಒಂದೇ ಲಯದಲ್ಲಿ ಸಾಗುವ ಇಲ್ಲಿಯ ಅವಸರದ ಬದುಕಿನಲ್ಲಿ ಋಣಾತ್ಮಕತೆಗೆ ಸಮಯವಿಲ್ಲ. ಒಬ್ಬರ ವೈಯಕ್ತಿಕ ವಿಚಾರಗಳಿಗೆ ಇನ್ನೊಬ್ಬರು ಮೂಗು ತೂರಿಸುವುದು ಇಲ್ಲಿ ಇಲ್ಲ. ನಿಮ್ಮ ಅಂತಸ್ತೇನು, ಯಾವ ಗಾಡಿ, ಎಷ್ಟು ಆಸ್ತಿ ಎಂದು ಯಾರೂ ಮಾತಾಡುವುದಿಲ್ಲ. ಇವೆಲ್ಲ ಇನ್ನೂ ಯಾವುದೇ ಮೆಟ್ರೋಪಾಲಿಟನ್ ನಗರದಲ್ಲಿ ಇದ್ದಿರಬಹುದಾದ ಸಂಗತಿಗಳಾಗಿರಬಹುದು…ಆದರೆ ಇಲ್ಲಿಯ ಜನರ ಹೌಸಿಂಗ್ ಸೊಸೈಟಿಗಳಲ್ಲಿ, ಆಫೀಸುಗಳಲ್ಲಿ ಸಣ್ಣ ಸಣ್ಣ ಸಂಭ್ರಮಗಳನ್ನು ವೈಭವದಿಂದ ಆಚರಿಸುವ, ಹಬ್ಬ ಹರಿದಿನ ಮತ್ತಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಾತಿ, ಮತ ಭೇದವಿಲ್ಲದೆ ಒಟ್ಟಾಗಿ ಆಚರಿಸುವ, ಕಷ್ಟ ಎಂದರೆ ಇನ್ನೊಬ್ಬರಿಗೆ ಸದಾ ಸಹಾಯಕ್ಕೆ ಒದಗುವ, ಜೀವನೋತ್ಸಾಹದಿಂದ ತುಂಬಿರುವ ಮನಸ್ಥಿತಿ ನಾನು ಬೆಂಗಳೂರಿನಂಥ ನಗರದಲ್ಲಿ ಕಂಡಿಲ್ಲ.

ನನ್ನ ವೃತ್ತಿ ಜೀವನದ ವೈಯಕ್ತಿಕ ಅನುಭವದಲ್ಲಿ ನಾನು ಗಮನಿಸಿದ್ದನ್ನು ಹೇಳುವುದಾದರೆ (Disclaimer: ಇದು ಸಾಮಾನ್ಯವಾಗಿ ನಾನು ಕಂಡ ಅನುಭವ ಮಾತ್ರ, there are exceptions everywhere): ಬೆಂಗಳೂರಿನಲ್ಲಿ ಆಫೀಸ್ ವಾತಾವರಣ ತುಂಬಾ ಸೀರಿಯಸ್ ಆಗಿರುತ್ತದೆ, ಏನೋ ದೊಡ್ಡ ಘನಂಧಾರಿ ಕೆಲಸ ಮಾಡ್ತಾ ಇದೀವಿ ಅನ್ನೋ ರೀತಿ ಮುಖಚರ್ಯೆ ಹೊತ್ತು, ಜೋರಾಗಿ ನಕ್ಕರೂ ಮುಜುಗರ ಆಗೋ ರೀತಿಯ ಪರಿಸರ:) ಹೊರದೇಶದಲ್ಲಿ ಎಲ್ಲರೂ ನಗು ಮುಖದಿಂದ, ಜೋರಾಗಿ ಮಾತಾಡುತ್ತಾ ಕೆಲಸ ಮಾಡುತ್ತಿದ್ದರೂ ಅನ್ಯೋನ್ಯತೆಗೆ ಅಲ್ಲಿ ಅವಕಾಶವಿಲ್ಲ, ಸಹೋದ್ಯೋಗಿಗಳು ಗೆಳೆತನ ಬೆಳೆಸೋ ಸಂಸ್ಕೃತಿ ಅಲ್ಲಿಲ್ಲ…ಮುಂಬೈಗೆ ಬಂದಾಗ ನನಗೆ ಆಫೀಸಿನಲ್ಲಿ ತುಂಬಾ ಅಪ್ಯಾಯಮಾನವಾಗಿ ಕಂಡದ್ದು professonalism ಮತ್ತು friendship ಎರಡನ್ನೂ ನಾಜೂಕಾಗಿ ನಿಭಾಯಿಸುವ ವಾತಾವರಣ. ಇಲ್ಲಿ ಆಫೀಸುಗಳಲ್ಲಿ ಕೆಲಸದ ಜೊತೆಗೇ ಹಾಸ್ಯ ಚಟಾಕಿ ಹಾರಿಸುವವರು, ಬೇರೆ ವಿಷಯ ಮಾತನಾಡಿ ಮನರಂಜಿಸುವರು ಎಲ್ಲಾ ಸ್ವಭಾವದ ಜನ ಮುಜುಗರವಿಲ್ಲದೆ free ಆಗಿ ತಮ್ಮ ಸಹಜ ವ್ಯಕ್ತಿತ್ವದಂತೇ ತೆರೆದುಕೊಳ್ಳಲು ಪೂರಕ ವಾತಾವರಣವಿದೆ. ಹಾಗಂತ ಕೆಲಸವೂ ಅಸಡ್ಡೆಗೆ ಒಳಗಾಗದೇ ನಡೆಯುತ್ತದೆ. ಸಹೋದ್ಯೋಗಿಗಳಲ್ಲಿ ಒಂದು ಬಗೆಯ ಅನ್ಯೋನ್ಯತೆ, ಆತ್ಮೀಯತೆ ಬೆಳೆಯಲು, ಅದು ಗೆಳೆತನಕ್ಕೂ ತಿರುಗಲೂ ಅವಕಾಶವಿದೆ, ನನ್ನ ಹೆಚ್ಚಿನ ಮೆಚ್ಚಿನ ಗೆಳೆಯ, ಗೆಳತಿಯರೆಲ್ಲ ನನ್ನ ಸಹೋದ್ಯೋಗಿಗಳಾದವರೇ :)


ಸಣ್ಣ ಊರಿನಲ್ಲಿ ಬೆಳೆದು ಬಂದ ನನಗೆ ಮೇಲೆ ಹೇಳಿದ ಎಲ್ಲಾ ವಾತಾವರಣ ಬಹಳ ಹೊಂದಿಕೆ ಆಗಿ, ಮುಂಬೈ ನನ್ನೂರೆಂಬ ಅಭಿಮಾನ ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸಿತು.


ಹಾಗೆಯೇ ಇಲ್ಲಿ ಕಂಡಷ್ಟು ವೈಪರೀತ್ಯಗಳನ್ನು ಸಹ ಬೇರೆಲ್ಲೂ ನಾನು ಕಂಡಿಲ್ಲ.

  • ಒಂದೆಡೆ ಈ ಮಾಯಾನಗರಿಯ ಮಾಯೆಯಲ್ಲಿ ಸಿಲುಕಿ ತಮ್ಮತನವನ್ನು ಕಳೆದುಕೊಂಡು ತಾವೇ ಕಳೆದುಹೋಗುವ ಜನ. ಇನ್ನೊಂದೆಡೆ ಕಳೆದುಹೋದ ತಮ್ಮನ್ನು ಮತ್ತೆ ಹುಡುಕಿಕೊಳ್ಳಲೆಂದೇ ಈ ನಗರಿ ಸೇರಿ ಹೊಸಬರಾಗುವ ಜನ…

  • ಒಂದೆಡೆ ಕೆಲಸ ಮಾಡಿದ ಮನೆಯಲ್ಲೇ ಯಾರೂ ಇಲ್ಲದ ಸಮಯ ನೋಡಿ, ನಂಬಿಕಸ್ಥರೆಂದು ನಂಬಿ ಮನೆಯೊಡೆಯರು ಕೊಟ್ಟ ಮನೆ ಕೀಲಿ ಕೈ ನಕಲು ಮಾಡಿ ಯಾರೂ ಇಲ್ಲದಾಗ ಕಳ್ಳತನ ಮಾಡುವ, ಮಕ್ಕಳನ್ನು ನೋಡಿಕೊಳ್ಳುವ ಕೆಲಸಕ್ಕೆ ಒಳ್ಳೇ ಪಗಾರ ಇದ್ದರೂ, ತೊಟ್ಟಿಲ ಮಕ್ಕಳ ಹಾಲೂ ತಾವೇ ಕುಡಿದು ಮಗುವಿಗೆ ನಿದ್ದೆ ಔಷಧ ಕೊಟ್ಟು ತಾವು ವಿರಮಿಸುವ ಹೃದಯಹೀನ ಜನ. ಇನ್ನೊಂದೆಡೆ ಕರೋನ ಕಾಲದಲ್ಲಿ ಕಷ್ಟ ಎಂದು ನಾವೇ ಒತ್ತಾಯದಿಂದ ಸ್ವಲ್ಪ ಹಣ ಕೊಟ್ಟು ಊರಿಗೆ ಕಳುಹಿಸಿದ ಮೂರ್ನಾಲ್ಕು ತಿಂಗಳ ನಂತರವೂ ಅವನ ಸ್ನೇಹಿತರಿಗೆ ಹೇಳಿ ಆ ಹಣ ಚುಕ್ತಾ ಆಗುವವರೆಗೆ ದುಡ್ಡು ತೆಗೆದುಕೊಳ್ಳದೆ ಕಾರು ತೊಳೆಯಲು ವ್ಯವಸ್ಥೆ ಮಾಡಿದ ನಮ್ಮ ಕಾರು ಸ್ವಚ್ಛಗೊಳಿಸುವ ಹುಡುಗನಂತಹ ಸ್ವಚ್ಚ ಮನಸ್ಸಿನ ಜನ…

  • ಒಂದೆಡೆ ಕೊಳ್ಳುಬಾಕ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು, ದುಡ್ಡಿದ್ದವರಿಗೆ ಸ್ವರ್ಗ ತೋರಿಸಿ ಲೂಟಿ ಮಾಡುವ ವಿಜೃಂಭಣೆಯ ಮಾಲ್, 'ಪಬ್'ಗಳಲ್ಲಿ ತಮ್ಮನ್ನು ಕಳೆದುಕೊಂಡು ಖುಷಿಯ ಹುಡುಕಾಟದಲ್ಲಿ ಖಿನ್ನತೆಯ ಸುಳಿಗೆ ಬೀಳುವ ಜನ. ಇನ್ನೊಂದೆಡೆ ಹೊತ್ತು ಹೊತ್ತಿನ ಊಟ ಸಂಪಾದಿಸಿ ರೈಲ್ವೇ ನಿಲ್ದಾಣಗಳಲ್ಲಿ ನಿರಾಳವಾಗಿ ಮಲಗಿ ನಿದ್ರಿಸುವ ಜನ….

  • ಒಂದೆಡೆ ದಿನವೂ ಟ್ರೈನ್ ಅಡಿಗೆ ಬಿದ್ದು ಕೈ ಕಾಲು, ಜೀವ ಕಳೆದುಕೊಳ್ಳುವವರ ಕಂಡೂ ಕಾಣದಂತೆ ತಮ್ಮ ಧಾವಂತದಲ್ಲಿ ಓಡುವ ಜನ. ಇನ್ನೊಂದೆಡೆ ಅನ್ಯರ ಕಷ್ಟಕ್ಕೆ ಮರುಗಿ ಕೈಲಾದ ಸಹಾಯ ನೀಡಿ, ಕೆಲವು ಬಾರಿ ಸಹಾಯ ನೀಡಹೋಗಿ ತಾವು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವ ಜನ…

  • ಒಂದೆಡೆ ಮಕ್ಕಳನ್ನು ಕದ್ದು,ಮಾರಿ ಬೇರೆ ದೇಶಗಳಿಗೆ ಸಾಗಿಸುವ (trafficking) ದೊಡ್ಡ ಜಾಲ. ಇನ್ನೊಂದೆಡೆ ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳಲು, ಬಡ ಮಕ್ಕಳಿಗೆ ಆಶ್ರಯ, ಭವಿಷ್ಯ ರೂಪಿಸುವ ಸಂಘ ಸಂಸ್ಥೆಗಳು…


ಒಟ್ಟಾರೆ ಹೇಳುವುದಾದರೆ, ಮುಂಬೈ ಸಂಸ್ಕೃತಿಯಲ್ಲಿ ಒಂದು ತುಂಬಾ ಸಕಾರಾತ್ಮಕ ಮನೋಭಾವವಿದೆ, ಉಲ್ಲಾಸವಿದೆ, ಬದುಕನ್ನು ಬಂದ ಹಾಗೆ ಸ್ವೀಕರಿಸುವ ಛಲವಿದೆ. ಋಣಾತ್ಮಕ ಸಂಗತಿಗಳಿಗೆ ಇಲ್ಲಿ ಹೆಚ್ಚು ಜಾಗವಿಲ್ಲ, ಸಮಯವಿಲ್ಲ. ಬೇಕೆಂದರೆ ಎಲ್ಲವೂ ಇದೆ, ಬೇಡ ಎಂದು ನಮ್ಮಷ್ಟಕ್ಕೆ ಇದ್ದರೆ ಯಾರಿಗೂ ಚಿಂತೆಯಿಲ್ಲ. ಎರಡು, ಮೂರು ವರ್ಷಗಳಲ್ಲಿ ವಾಪಸ್ ತೆರಳುವ ಯೋಚನೆಯಲ್ಲಿದ್ದ ನಮಗೆ ಈಗ ಮುಂಬೈ ಸದ್ಯದ್ದಲ್ಲಿ ತೊರೆಯುವ ಯೋಚನೆ ಇಲ್ಲ! ನನಗೀಗ ಆಮ್ಚಿ ಮುಂಬೈನ ಎಲ್ಲವೂ ಇಷ್ಟ. ಇಲ್ಲಿಯ ಭವ್ಯ ಚಾರಿತ್ರಿಕ ಕಟ್ಟಡಗಳು, ಬೀಚುಗಳು, ಹೋಟೆಲುಗಳು, ಬಾಂದ್ರಾ ಮತ್ತು ವರ್ಲಿಗಳನ್ನು ಬೆಸೆಯುವ ಸೀ ಲಿಂಕ್, ನಾರಿಮನ್ ಪಾಯಿಂಟ್, ಸುಂದರ ಆರ್ಟ್ ಗ್ಯಾಲರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಗಣಪತಿ, ನವರಾತ್ರಿ, ಹೋಳಿ ಹಬ್ಬಗಳ ಸಡಗರ, ಶಾಪಿಂಗ್ ಸ್ಥಳಗಳು, ಮಳೆಗಾಲ, ನನ್ನ ಪುಟ್ಟ ಮನೆ, ಸಣ್ಣ ಬಾಲ್ಕನಿ, ಅಲ್ಲಿ ನನ್ನ ಪುಟ್ಟ ತೋಟ, ಅದರಲ್ಲಿ ಗೂಡು ಮಾಡಿ ಕುಟುಂಬ ಬೆಳೆಸುತ್ತಿರುವ ಪುಟ್ಟ ಹಕ್ಕಿಗಳು, ಗುಬ್ಬಿಗಳು, ಇಲ್ಲಿಯ ಜನಜಂಗುಳಿ, ಸ್ನೇಹಿತರು, ಆಗಾಗ ಬಂದುಹೋಗುವ ನೆಂಟರಿಷ್ಟರು, ಅರಸನ ಅಂಕೆ ಇಲ್ಲದ ದೆವ್ವದ ಕಾಟವಿಲ್ಲದ ಅನಾಮಿಕ ಬದುಕು…ಎಲ್ಲವೂ. ಈ ಪಟ್ಟಿಗೆ ಹೊಸದಾಗಿ ಸೇರ್ಪಡೆ 166 ವರ್ಷಗಳ ಇತಿಹಾಸವಿರುವ ನಮ್ಮ ಹೆಮ್ಮೆಯ ಮುಂಬೈ ವಿಶ್ವವಿದ್ಯಾಲಯ ಮತ್ತದರ ಕನ್ನಡ ವಿಭಾಗ :)













Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page