top of page

ಸೂರಿ ಪರ್ವ

  • vidyaram2
  • Feb 22, 2023
  • 4 min read

Updated: Mar 29, 2023


ಸೂರಿ ಪರ್ವ (ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಜೀವನಸಾಧನೆ) - ಶ್ರೀಮತಿ ಶಶಿಕಲಾ ಹೆಗಡೆಯವರು ರಚಿಸಿದ ಈ ಬಹುಮೂಲ್ಯವಾದ ಕೃತಿ, ಮುಂಬೈ ವಿವಿ ಕನ್ನಡ ವಿಭಾಗಕ್ಕೆ ಅವರು ಸಲ್ಲಿಸಿದ ಎಂ. ಎ ಶೋಧ ಸಂಪ್ರಬಂಧವಾಗಿದೆ. ಕಳೆದ ವರ್ಷ 2022ರ ಅಕ್ಟೋಬರ್ ತಿಂಗಳಿನಲ್ಲಿ ಲೋಕಾರ್ಪಣೆಗೊಂಡ ಈ ಕೃತಿ ಮುಂಬೈ ವಿವಿ ಕನ್ನಡ ವಿಭಾಗದ 88ನೆಯ ಹೆಮ್ಮೆಯ ಪ್ರಕಟಣೆಯಾಗಿ ಅಭಿಮಾನಿಗಳ, ವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಿದೆ.


19ನೆಯ ಶತಮಾನದ ಉತ್ತರಾರ್ಧದಲ್ಲಿ ಹೊರನಾಡು ಮುಂಬೈನಲ್ಲಿ ಕನ್ನಡ ವಾಙ್ಮಯಕ್ಕೆ,ಕನ್ನಡ ಪತ್ರಿಕಾ ರಂಗಕ್ಕೆ ಬೆಲೆ ಕಟ್ಟಲಾಗದ ಕಾಣಿಕೆ ನೀಡಿ ಅಲ್ಪಾಯುಷ್ಯರಾಗಿ ಅಸ್ತಂಗತರಾದ ಹಲವು ಪ್ರಥಮಗಳ ಹರಿಕಾರ 'ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ' ಅವರಿಂದು ಹೆಚ್ಚಿನ ಕನ್ನಡಿಗರಿಗೆ ಅಪರಿಚಿತರಾಗಿಯೇ ಉಳಿದಿದ್ದಾರೆ. ಇದಕ್ಕೆ ಒಂದು ಕಾರಣ ತಮ್ಮ ಹರಿತವಾದ ಲೇಖನಿಯ ಮೂಲಕ ವಸಾಹತುಶಾಹಿ ಆಡಳಿತವರ್ಗವನ್ನು ದಿಟ್ಟತನದಿಂದ ವಿರೋಧಿಸಿದ ಶಾಸ್ತ್ರಿ ಸೂರಿಯವರ ಜೀವನ ಸಾಧನೆಯನ್ನೂ, ಅವರ ಕುರಿತ ದಾಖಲೆಗಳನ್ನೂ ಹೇಳ ಹೆಸರಿಲ್ಲದಂತೆ ಮಾಡಿದ ಬ್ರಿಟಿಷರ ಕುತಂತ್ರವೇ ಇರಬಹುದು. ಇಂತಹ ಮಹಾನ್ ಪುರುಷನ ಜೀವನ ಸಾಧನೆಗಳನ್ನು ಅಚ್ಚುಕಟ್ಟಾಗಿ ತಮ್ಮ ಶೋಧನೆಯಲ್ಲಿ ಲಭ್ಯವಾದ ಸಾಕ್ಷ್ಯಾಧಾರಗಳ ಸಮೇತ ಶಶಿಕಲಾ ಅವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ‘ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಭಾಗವಾಗಿಯೇ ನಾವು ಈ ಕೃತಿಯನ್ನು ಓದಿಕೊಳ್ಳಬೇಕಾಗಿದೆ’ ಎಂದು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯರು ಮುನ್ನುಡಿಯಲ್ಲಿ ಹೇಳಿರುವುದು ಈ ಕೃತಿಯ ಪ್ರಾಮುಖ್ಯವನ್ನು ಸಾರುತ್ತದೆ. ಕನ್ನಡ ಸಾರಸ್ವತ ಲೋಕದ ಆದ್ಯರಾದ, ಅಸಾಮಾನ್ಯ ಸಾಧಕರಾದ ಶಾಸ್ತ್ರಿ ಸೂರಿ ಅವರ ನೆನಪನ್ನು ಇಂದಿನ ಮತ್ತು ಮುಂದಿನ ಪೀಳಿಗೆಯ ಜನರ ನಡುವೆ ಉಳಿಸುವ ಮಹತ್ಕಾರ್ಯ ಮಾಡಿರುವ ಶಶಿಕಲಾ ಅವರು ಅಭಿನಂದನಾರ್ಹರು ಎಂದು ಖ್ಯಾತ ಸಾಹಿತಿ ಮತ್ತು ಪತ್ರಕರ್ತರಾದ ಶ್ರೀ ಎಲ್. ಎಸ್. ಶಾಸ್ತ್ರಿ ಅವರು ಬೆನ್ನುಡಿಯಲ್ಲಿ ಅಭಿಪ್ರಾಯ ಪಟ್ಟಿರುವುದು ಸೂಕ್ತವಾಗಿದೆ.


‘ಮನದ ಮಾತು’ ಅಧ್ಯಾಯದಲ್ಲಿ ಶಶಿಕಲಾ ಅವರು ಹೇಳಿಕೊಂಡಂತೆ 2006ರಲ್ಲಿ ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬೈ ಇವರಿಂದ ಸೂರಿ ಸ್ಮರಣಾರ್ಥ ಕೊಡಮಾಡುವ ಪ್ರಥಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಾಗಿನಿಂದ ಶಾಸ್ತ್ರಿಯವರ ಕುರಿತಾಗಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವ ಸದಾವಕಾಶ ಅವರಿಗೆ ಒದಗಿತ್ತು. ಇಂತಹ ಮಹಾನ್ ಸಾಧಕನೊಬ್ಬ ಹತ್ತೊಂಬತ್ತನೆಯ ಶತಮಾನದಲ್ಲಿಯೇ ಆಗಿಹೋಗಿದ್ದರಲ್ಲ ಎಂಬ ಹೆಮ್ಮೆ, ಅವರ ಸಾಧನೆ ಬಗೆಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲ ಅವರಿಗೆ ಮೂಡಿತ್ತು. ಹೀಗೆ ಹೆಚ್ಚುಕಡಿಮೆ ಎರಡು ದಶಕಗಳಿಂದ ಅವರಲ್ಲಿ ಹೆಪ್ಪುಗಟ್ಟಿದ್ದ ಅಭಿಮಾನ, ಪ್ರೀತಿಗಳನ್ನು ಈ ಕೃತಿಯ ರೂಪದಲ್ಲಿ ತೋರಿಸಿಕೊಳ್ಳುವ ಅವಕಾಶ ಸಿಕ್ಕಿದಾಗ ಶಶಿಕಲಾ ಅವರು ಈ ಕಾರ್ಯದಲ್ಲಿ ತೋರಿಸಿದ ತನ್ಮಯತೆ, ಶ್ರದ್ಧೆ , ಪ್ರೀತಿ ಕೃತಿಯ ಓದುಗನ ಹೃದಯಕ್ಕೆ ಮುಟ್ಟುತ್ತದೆ. ಅವರ ಬರಹಕ್ಕೆ ಅದು ಸಾರ್ಥಕ್ಯವನ್ನು ತಂದುಕೊಡುತ್ತದೆ.


ಈ ಕೃತಿಯಲ್ಲಿ ಬಹಳ ಅರ್ಥಪೂರ್ಣ ಮತ್ತು ಆಕರ್ಷಕ ಶೀರ್ಷಿಕೆ ಹೊಂದಿರುವ ಆರು ಮುಖ್ಯ ಅಧ್ಯಾಯಗಳಿವೆ. ಮೊದಲಿನ ‘ಅಧ್ಯಯನದ ಉದ್ದೇಶ, ವ್ಯಾಪ್ತಿ, ಆಕರಗಳ ಚರ್ಚೆ’ ಅಧ್ಯಾಯದಲ್ಲಿ ಶಾಸ್ತ್ರಿ ಸೂರಿ ಅವರನ್ನು, ಅವರ ಸಾಧನೆಗಳನ್ನು ಸಂಕ್ಷಿಪ್ತದಲ್ಲಿ ಪರಿಚಯಿಸಲಾಗಿದೆ. ಸೂರಿ ಅವರ ಕುರಿತು ಈ ಮೊದಲು ನಡೆದಿರುವ ಅಧ್ಯಯನಗಳು, ದಾಖಲಾಗಿರುವ ಮಾಹಿತಿಯನ್ನು ಪ್ರಸ್ತಾಪಿಸಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಇಂತಹ ಮಹಾನ್ ಸಾಧಕರ ಸಾಧನೆ ದಾಖಲಾಗದೆ ಅಲಕ್ಷಿತವಾಗಿರುವುದರ ಕುರಿತು ಲೇಖಕಿ ಖೇದ ವ್ಯಕ್ತಪಡಿಸಿದ್ದಾರೆ. ಈ ಪ್ರಮಾದವನ್ನು ತಿದ್ದಿಕೊಳ್ಳುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರಕಾರ ಮಾಡಬೇಕಾದ ಕರ್ತವ್ಯವಾಗಿದೆ ಎಂದು ಒತ್ತಿ ಹೇಳಿದ್ದಾರೆ.


‘ಶಕಪುರುಷ ನಡೆದ ದಾರಿ’ ಅಧ್ಯಾಯದಲ್ಲಿ ಶಾಸ್ತ್ರಿ ಸೂರಿ ಅವರ ಜನನ, ಬಾಲ್ಯದ ಕುರಿತು ದೊರೆಯುವ ವಿಷಯಗಳನ್ನು ದಾಖಲಿಸಿದ ಲೇಖಕಿ ಅವರ ವಿದ್ಯಾಭ್ಯಾಸ, ಮುಂದಿನ ಜೀವನ, ಅವರು ಕೈಗೊಂಡ ಪರ್ಯಟನೆ, ಅವರ ನಿಲುವು, ಆಕಾಂಕ್ಷೆ, ಸಾಹಸಗಳನ್ನು ಬಹಳ ಆಪ್ತವಾಗಿ ಪರಿಚಯಿಸುತ್ತ ಅವರ ಸಂಪೂರ್ಣ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ. ಶಾಸ್ತ್ರಿ ಅವರ ಹಾಸ್ಯ ಪ್ರಜ್ಞೆ ಮತ್ತಿತರ ಗುಣಗಳ ಅವಲೋಕನ ಮಾಡುವ ಲೇಖಕಿಯ ಪರಿ ಮೆಚ್ಚುತ್ತದೆ. “ಬಹುಶಃ ಇಂತಹ ಗುಣ ಅವರಿಗೆ ವಂಶಪಾರಂಪರ್ಯವಾಗಿ ಬಂದಿರಬಹುದೇನೋ? ಯಾಕೆಂದರೆ ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಕೊಂಡಿರುವ ಇವರ ಮನೆತನಕ್ಕೆ ‘ಕೋಳಿ ಮನೆತನ’ ಎನ್ನುವ ಹೆಸರೂ ಇತ್ತೆಂಬುದು ಗಮನಾರ್ಹ “ - ಅವರು ಮಾಡುವ ಈ ರೀತಿಯ ಅನೇಕ ಸೂಕ್ಷ್ಮವಾದ ವಿಶ್ಲೇಷಣೆಯಿಂದ ಓದುಗರಿಗೂ ಶಾಸ್ತ್ರಿಯವರನ್ನು ಆಪ್ತರಾಗಿಸುತ್ತಾರೆ. ಶಾಸ್ತ್ರಿ ಅವರ ವೈಯಕ್ತಿಕ ಬದುಕಿನ ಕೆಲವು ವಿವರಗಳು, ಅವರ ಸಾಹಿತ್ಯ ಸೇವೆ, ಅವರು ಪ್ರಾರಂಭಿಸಿದ ಛಾಪಖಾನೆ, ಅವರು ಸಂಪಾದಿಸಿದ ಗ್ರಂಥ, ಪ್ರಕಟಿಸಿದ ಪತ್ರಿಕೆಗಳನ್ನು ಕುರಿತು ಸಹ ಈ ಅಧ್ಯಾಯದಲ್ಲಿ ಲೇಖಕಿ ಪ್ರಸ್ತಾಪಿಸಿದ್ದಾರೆ.


‘ಲೇಖನಿಯ ಸಾಧಕ’ ಅಧ್ಯಾಯದಲ್ಲಿ ಶಾಸ್ತ್ರಿ ಅವರು ನಡೆಸಿದ ಸಾಹಿತ್ಯ ಕೃಷಿಯ ಕುರಿತ ಸಂಪೂರ್ಣ ಮಾಹಿತಿ ಇದೆ. 1881ಲ್ಲಿ ಅವರು ರಚಿಸಿದ ಕನ್ನಡದ ಪ್ರಥಮ ಪ್ರವಾಸ ಕಥನ ‘ದಕ್ಷಿಣ ಯಾತ್ರಾ ಚರಿತ್ರೆ’ , 1887ಲ್ಲಿ ರಚಿಸಿದ ಕನ್ನಡದ ಮೊದಲ ಸಾಮಾಜಿಕ ನಾಟಕ ‘ಇಗ್ಗಪ್ಪ ಹೆಗ್ಗಡೆ ವಿವಾಹ ಪ್ರಹಸನ’, ಅವರು ಸಂಸ್ಕೃತದಿಂದ ಅನುವಾದಿಸಿದ ‘ಪ್ರಾಚೀನ ನಾಟ್ಯ ಕಥಾರ್ಣವ’ , ಅವರ ಇನ್ನೊಂದು ಕೃತಿ ‘ಅನಾರ್ಯರ ವಿವರ’ ಈ ಎಲ್ಲಾ ಕೃತಿಗಳ ಪರಿಚಯದ ಜೊತೆಗೆ ಅವುಗಳ ಅವಲೋಕನವನ್ನು ಲೇಖಕಿ ಇಲ್ಲಿ ಸೊಗಸಾಗಿ ಮಾಡಿದ್ದಾರೆ. ಶಾಸ್ತ್ರಿ ಅವರು ನಾಟಕ ರಚನೆಯನ್ನೇ ಏಕೆ ಆಯ್ದುಕೊಂಡಿರಬಹುದು ಎಂಬ ಕುತೂಹಲಕ್ಕೆ ವಿವರಣೆ ಕೊಡುತ್ತಾ , ಶಾಸ್ತ್ರಿ ಅವರ ಸ್ತ್ರೀ ಪರ ಕಾಳಜಿ, ನಾಟಕದಲ್ಲಿ ಸ್ತ್ರೀ ಶೋಷಣೆಯನ್ನು ವಿರೋಧಿಸುವ ಧ್ವನಿ, ನಾಟಕದಲ್ಲಿರುವ ಆಡುಭಾಷೆಯ ಸೊಗಡು, ಅವರು ಹೇಗೆ ತಾವು ಒಡನಾಡಿದ ವ್ಯಕ್ತಿಗಳೊಂದಿಗಿನ ತಮ್ಮ ಅನುಭವವನ್ನು ಸಾಹಿತ್ಯದಲ್ಲಿ ತರುತ್ತಾರೆ, ಅವರ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಪ್ರಭಾವ ಅವರ ಮೇಲೆ ಹೇಗೆ ಗಾಢವಾಗಿ ಆಗಿದೆ ಎನ್ನುವ ಸೂಕ್ಷ್ಮಗಳನ್ನೆಲ್ಲ ಲೇಖಕಿ ಇಲ್ಲಿ ಸಮಂಜಸವಾಗಿ ತೆರೆದಿಟ್ಟಿದ್ದಾರೆ. ‘ಅನಾರ್ಯರ ವಿವರ’ ಕೃತಿಯ ಕುರಿತು ಅವರು ಬರೆದಿರುವ ಸಾಲುಗಳು ಹೀಗಿವೆ: “ತಮ್ಮೊಳಗೆ ಇರುವ ಮೇಲು-ಕೀಳು, ಭೇದ-ಭಾವ ಹಾಗೂ ವಾದ-ವಿವಾದಗಳನ್ನು ಶೂದ್ರರು ಅರಿತುಕೊಂಡರೆ ಅವರೊಳಗಿರುವ ಸಂಘರ್ಷಗಳಿಗೆ ಸುಲಭವಾಗಿ ಪರಿಹಾರ ದೊರೆಯುವುದು ಎನ್ನುವ ಸರಳ ಮಾರ್ಗದರ್ಶನವನ್ನು ಶಾಸ್ತ್ರಿ ಸೂರಿಯವರು ಇಲ್ಲಿ ನೀಡಿದ್ದಾರೆ. ಪೂರಕ ವಾತಾವರಣದ ನಿರ್ಮಾಣ ಅನಾರ್ಯರ ಬೆಳವಣಿಗೆಗೆ ಸಹಕಾರಿಯಾಗಬಲ್ಲದು ಎನ್ನುವ ಹಿತೋಪದೇಶ ಈ ಕೃತಿ ರಚನೆಯ ಉದ್ದೇಶ”. ಈ ವಿಚಾರವು ಬಹಳ ಕುತೂಹಲಕಾರಿಯಾಗಿ, ಅಷ್ಟು ಸುಲಭದ ಪರಿಹಾರ ಹೊಂದಿರುವ ಮಾರ್ಗದರ್ಶನವನ್ನು ಅರಿಯುವ ಸಲುವಾಗಿ ಆ ಕೃತಿಯನ್ನು ಓದಬೇಕೆನ್ನಿಸುವಂತಿದೆ.


‘ಗ್ರಂಥ ಸಂಪಾದನೆಯ ಸಾಹಸ’ ಅಧ್ಯಾಯದಲ್ಲಿ ಗ್ರಂಥ ಸಂಪಾದಕನ ಅರ್ಹತೆ, ಪರಿಶ್ರಮಗಳನ್ನು ಕುರಿತು ಮೊದಲು ಹೇಳಿದ ಲೇಖಕಿ ನಂತರ ಶಾಸ್ತ್ರಿ ಸೂರಿಯವರು ಸಂಪಾದಿಸಿ ಪ್ರಕಟಿಸಿದ ಗ್ರಂಥಗಳ ಕುರಿತು ಪೂರ್ಣ ವಿವರಣೆ ನೀಡಿದ್ದಾರೆ. 1886ಲ್ಲಿ ಸ್ತ್ರೀ ಸಾಹಿತ್ಯ ನಿಷೇಧ ಎನ್ನುವಂತಹ ಕಾಲದಲ್ಲಿ ಮಹಿಳಾ ಸಾಹಿತಿಯೊಬ್ಬಳು ರಚಿಸಿದ ‘ಕಿಬ್ಬಚ್ಚಲು ಮಂಜಮ್ಮನ ವೇದಾಂತ ತತ್ವಸಾರ’ ಎಂಬ ಕೃತಿಯನ್ನು ಸಂಪಾದಿಸಿ ಪ್ರಕಟಿಸಿದ ಸೂರಿ ಅವರ ಸುಧಾರಣಾವಾದಿ, ಸಾಹಸೀ ಪ್ರವೃತ್ತಿಯನ್ನು ಲೇಖಕಿ ತೆರೆದು ತೋರಿಸಿದ್ದಾರೆ. ಕನ್ನಡ ಸಾಹಿತ್ಯದ ಪ್ರಥಮ ಮಹಿಳಾ ಕೃತಿ ಎನ್ನುವ ಹಿರಿಮೆಗೆ ಈ ಕೃತಿ ಪಾತ್ರವಾಗಿದೆ ಎಂಬುದು ಗಮನಾರ್ಹ ಸಂಗತಿ. ಅಂತೆಯೇ ಸೂರಿ ಅವರು ಸಂಪಾದಿಸಿ ಪ್ರಕಟಿಸಿದ ಪರಮದೇವ ಕವಿಯ ತುರಂಗ ಭಾರತ (ಕನ್ನಡದಲ್ಲಿ ಸಮಗ್ರ ಮಹಾಭಾರತದ ಕಾವ್ಯ) ಮತ್ತು ಶಂಕರ ಸಂಹಿತೆಗಳ ವಿವರಣೆ ನೀಡಿದ್ದಾರೆ. ಎರಡೂ ಕೃತಿಗಳ ಕೆಲವು ಪದ್ಯಗಳನ್ನು ಉಲ್ಲೇಖಿಸಿ ಅರ್ಥೈಸಿರುವುದರಿಂದ ಕಾವ್ಯಾಸಕ್ತ ಓದುಗರಿಗೆ ಈ ಕೃತಿಗಳನ್ನೋದುವ ಪ್ರೇರಣೆಯಾಗುವುದರಲ್ಲಿ ಸಂಶಯವಿಲ್ಲ.


‘ಪತ್ರಿಕೋದ್ಯಮದಲ್ಲಿ ದಿಟ್ಟ ಹೆಜ್ಜೆ’ ಅಧ್ಯಾಯದಲ್ಲಿ ಲೇಖಕಿ ಭಾರತದಲ್ಲಿ ಪತ್ರಿಕೋದ್ಯಮ ಬೆಳೆದು ಬಂದ ಬಗೆಯನ್ನು ವಿವರಿಸಿ ನಂತರ ಶಾಸ್ತ್ರಿ ಸೂರಿಯವರು ಪ್ರಾರಂಭಿಸಿದ ಪತ್ರಿಕೆ ‘ಹವ್ಯಕ ಸುಬೋಧ - ಕಾರವಾರ ಚಂದ್ರಿಕೆ’ , ಕನ್ನಡದ ಮೊದಲ ಮಕ್ಕಳ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾದ, ಮಕ್ಕಳಿಗಾಗಿ ಅವರು ಅರಂಭಿಸಿದ ‘ಹಿತೋಪದೇಶ’ ಮಾಸ ಪತ್ರಿಕೆಗಳ ಕುರಿತು ವಿವರಣೆ ನೀಡಿದ್ದಾರೆ. ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡು ದಿಟ್ಟತನದಿಂದ ವಸಾಹತುಶಾಹಿಗಳ ವಿರೋಧದ ದನಿಯನ್ನೂ, ಜನ ಜಾಗ್ರತೆ ಮೂಡಿಸುವ ಕಾರ್ಯವನ್ನೂ ಸಮರ್ಪಕವಾಗಿ ಮಾಡಿಕೊಂಡು ಹೋಗಲು ಅವರು ಪಟ್ಟ ಬವಣೆಗಳನ್ನೂ ಚಿತ್ರಿಸಿದ್ದಾರೆ. ಪತ್ರಿಕೆಯಲ್ಲಿ ವ್ಯಂಗ್ಯಚಿತ್ರವನ್ನು ಬರೆದು ಪ್ರಕಟಿಸುವಲ್ಲಿ ಮೊದಲಿಗರಾದ ಶಾಸ್ತ್ರಿಯವರು ಆಡಳಿತದ ದೌರ್ಜನ್ಯವನ್ನು ಎತ್ತಿ ತೋರುವ ತಮ್ಮ ಹರಿತ ಲೇಖನಿಯಿಂದ ಆಡಳಿತವರ್ಗದ ಕೋಪಕ್ಕೆ ಗುರಿಯಾಗಿ ಪತ್ರಿಕೆ ನಿಲ್ಲಿಸಿ ಜೈಲಿಗೆ ಹೋಗಬೇಕಾದ ಪ್ರಸಂಗ ಎದುರಾದದ್ದು ಒಂದು ದುರಂತವೇ ಸರಿ. ಶಾಸ್ತ್ರಿಯವರು ಸಂಪಾದಕೀಯದಲ್ಲಿ ಬರೆದ ಅನೇಕ ಉತ್ತಮ ಬರಹಗಳನ್ನು ಸಂಗ್ರಹಿಸಿ ಈ ಅಧ್ಯಾಯದಲ್ಲಿ ನೀಡಿದ್ದಾರೆ.


ಈ ಎಲ್ಲ ಅಧ್ಯಾಯಗಳಲ್ಲಿ ಕೆಲವೆಡೆ ಮಾಹಿತಿ ಪುನರಾವರ್ತನೆಗೊಂಡಿವೆ. ಅಧ್ಯಾಯಗಳ ಪೂರ್ಣತೆಯ ದೃಷ್ಟಿಯಿಂದ ಇದು ಅನಿವಾರ್ಯವೇ ಆಗಿರಬಹದು.


‘ಪ್ರಾತಃಸ್ಮರಣೀಯರ ಸ್ಮರಣೆ’ ಅಧ್ಯಾಯದಲ್ಲಿ ಅನೇಕ ವಿದ್ವಾಂಸರು ಶಾಸ್ತ್ರಿಯವರ ಕುರಿತು ಬರೆದ ಲೇಖನಗಳ ಆಯ್ದ ಭಾಗವನ್ನು ನೀಡಿರುವುದಲ್ಲದೆ ‘The Footprints Of Nobility’ ಎನ್ನುವ ಒಂದು ಆಂಗ್ಲ ಲೇಖನವನ್ನೂ ಇಲ್ಲಿ ಸೇರ್ಪಡೆ ಮಾಡಿರುವುದರಿಂದ ಕನ್ನಡ ಓದಲು ಬಾರದ ಹೊಸ ಪೀಳಿಗೆಯ ಕನ್ನಡಿಗರಿಗೂ, ಕನ್ನಡೇತರರಿಗೂ ಶಾಸ್ತ್ರಿಯವರ ಕುರಿತು ತಿಳಿದುಕೊಳ್ಳಲು, ಆಸಕ್ತರಿಗೆ ಅವರ ಕುರಿತು ಹೆಚ್ಚಿನ ಸಂಶೋಧನೆ ಮಾಡಲು ಸಹಾಯಕವಾಗುತ್ತದೆ.


ಹಿರಿಯ ಪತ್ರಿಕೋದ್ಯಮಿ ಶ್ರೀನಿವಾಸ ಜೋಕಟ್ಟೆಯವರು ಶಶಿಕಲಾ ಅವರ ಕಾರ್ಯವನ್ನು ಶ್ಲಾಘಿಸಿ ನುಡಿಸೇಸೆ ಬರೆದಿದ್ದಾರೆ. ಕೃತಿಯ ಮುಂದಿನ ಭಾಗದಲ್ಲಿ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿಯವರ ಕುರಿತು ಲಭ್ಯವಿರುವ ಎಲ್ಲಾ ಮಾಹಿತಿಯನ್ನೂ ಸಂಗ್ರಹಿಸಿ ಪ್ರಕಟಿಸಿರುವುದಲ್ಲದೆ, ಹಿತೋಪದೇಶದ ಕೆಲವು ಹಿತವಚನಗಳನ್ನೂ, ಇಗ್ಗಪ್ಪ ಹೆಗ್ಗಡೆ ವಿವಾಹ ಪ್ರಹಸನ ನಾಟಕವನ್ನೂ ಪೂರ್ಣವಾಗಿ ಪ್ರಕಟಿಸಿರುವುದು ಆಸಕ್ತರಿಗೆ ಬಹಳ ಅನುಕೂಲವಾಗಿದೆ. ಹಾಗೆಯೇ ಲಭ್ಯವಿರುವ ಸೂರಿ ಅವರ ಏಕೈಕ ಭಾವಚಿತ್ರ ಮತ್ತು ಅವರ ಪತ್ರಿಕೆಗಳ ಕೆಲವು ತುಣುಕುಗಳು ಮತ್ತು ವ್ಯಂಗ್ಯ ಚಿತ್ರವನ್ನು ಪ್ರಕಟಿಸಲಾಗಿದೆ.


ಒಟ್ಟಿನಲ್ಲಿ ಈ ಕೃತಿ, ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿಯವರ ಕುರಿತು ಲಭ್ಯವಿರುವ ಮಾಹಿತಿಯ ಉತ್ತಮ ಸಂಗ್ರಹದೊಂದಿಗೆ ಅವರ ವ್ಯಕ್ತಿತ್ವ, ಹಿರಿಮೆಗಳನ್ನು ಕನ್ನಡಿಗರಿಗೆ ಪರಿಚಯಿಸುವ ಅನನ್ಯವಾದ ಕೊಡುಗೆಯಾಗಿದೆ. ಶಶಿಕಲಾ ಅವರು ಬಹಳ ಆಪ್ತವಾಗಿ, ಸರಳವಾಗಿ, ಎಲ್ಲಿಯೂ ತಮ್ಮ ಸಾಹಿತ್ಯಿಕ ಪಾಂಡಿತ್ಯದ ಭಾರ ಹೆಚ್ಚಾಗದಂತೆ ಶ್ರದ್ದೆವಹಿಸಿ, ಅಭಿಮಾನ, ಪ್ರೀತಿಗಳಿಂದ ರಚಿಸಿದ ಈ ಕೃತಿ ಮೌಲ್ಯಯುತವೂ, ಸಂಗ್ರಹಯೋಗ್ಯವೂ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಶಶಿಕಲಾ ಅವರಿಂದ ಇಂತಹ ಇನ್ನೂ ಅನೇಕ ಮೌಲ್ಯಯುತ ಬರಹಗಳ ನಿರೀಕ್ಷೆ ಓದುಗರಿಗೆ ಇದೆ.


Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page