ನದಿ ದಾಟಿ ಬಂದವರು
- vidyaram2
- Oct 22, 2025
- 2 min read

ಕಾದಂಬರಿ, ಸಣ್ಣಕತೆ, ಪ್ರವಾಸ ಕಥನ, ಕವನ, ನುಡಿಚಿತ್ರ, ಅಂಕಣಬರಹ ಹಾಗೂ ಸಾವಿರಾರು ಲೇಖನಗಳ ಕರ್ತೃಗಳೂ ಹಿರಿಯ ಪತ್ರಕರ್ತರೂ ಆದ ಶಶಿಧರ ಹಾಲಾಡಿಯವರ ಮೂರನೆಯ ಕಾದಂಬರಿ ‘ನದಿ ದಾಟಿ ಬಂದವರು’. ಅಂಕಿತ ಪುಸ್ತಕದಿಂದ ಇದೀಗ (2025) ಪ್ರಕಟಗೊಂಡಿರುವ ಈ ಕಾದಂಬರಿಯು ಸ್ವಾತಂತ್ರ್ಯ ಪೂರ್ವ ಮತ್ತು ಸ್ವತಂತ್ರ ಭಾರತದ ಸ್ಥಿತ್ಯಂತರ ಕಾಲಘಟ್ಟದ ಕೆಲದಶಕಗಳ ಆರ್ಥಿಕ ಮತ್ತು ಸಾಮಾಜಿಕ ಚಿತ್ರಣವನ್ನು ವಸ್ತುನಿಷ್ಠವಾಗಿ ಸೆರೆಹಿಡಿಯುವ ಕಥಾವಸ್ತುವನ್ನು ಹೊಂದಿದೆ.
ಮಲೆನಾಡಿನ ಸೆರಗಿನಲ್ಲಿ ಕರಾವಳಿಯ ಒಳನಾಡಿನಲ್ಲಿರುವ ಹಳ್ಳಿಗಾಡಿನಲ್ಲಿ ಅನಾವರಣಗೊಳ್ಳುವ ಕಥಾಹಂದರವು ಅಲ್ಲಿಯ ಕೃಷಿಕ ಕುಟುಂಬಗಳ ಜೀವನವಿಧಾನವನ್ನು ತೆರೆದಿಡುತ್ತಲೇ ಆ ಕಾಲದಲ್ಲಿ ಭಾರತದಲ್ಲಾಗುತ್ತಿದ್ದ ಬದಲಾವಣೆಗಳನ್ನು ಚಿತ್ರಿಸುತ್ತದೆ. ಕಥಾವಸ್ತುವಿನ ಜೊತೆಜೊತೆಗೆ ಅಲ್ಲಿಯ ಪ್ರಕೃತಿ, ಪರಿಸರಗಳ ಸುಂದರ ಚಿತ್ರಣವನ್ನು ಕಟ್ಟಿಕೊಡುತ್ತ ಓದುಗರನ್ನು ಆ ಪರಿಸರದೊಳಗೆಲ್ಲ ಸುತ್ತಾಡಿಸುವ ನುಡಿಚಿತ್ರಣದಂತೆ ಮೂಡಿಬಂದಿರುವುದು ಕಾದಂಬರಿಯ ವೈಶಿಷ್ಟ್ಯ. ‘ಹಾಲಾಡಿಯವರು ಕತೆ ಹೇಳುವಾಗ ಅದರೊಡನೆ ಕತೆಯ ಪರಿಸರವನ್ನೂ ಕಥಿಸುವುದಲ್ಲದೆ ದೇಶಕಾಲಗಳ ಒಂದು ಸಮಗ್ರ ಗ್ರಹಿಕೆ ಸಾಧ್ಯವಾಗುವಂತೆ ಮಾಡುತ್ತಾರೆ’ ಎಂದು ಡಾ.ಬಿ.ಜನಾರ್ದನ ಭಟ್ಟರು ಬೆನ್ನುಡಿಯಲ್ಲಿ ಹೇಳಿರುವುದನ್ನು ಇಲ್ಲಿ ಗಮನಿಸಬಹುದು. ಇನ್ನೂರು ಪುಟಗಳ ಈ ಕಾದಂಬರಿಯ ಮುಖಪುಟವು ಹಸಿರು, ಹಳದಿ ಬಣ್ಣಗಳ ಹಿನ್ನೆಲೆಯಲ್ಲಿ ಮಡಕೆ, ಮರ, ಎತ್ತಿನ ಚಿತ್ರಗಳೊಂದಿಗೆ ಕಾದಂಬರಿಯ ಕೇಂದ್ರವಾದ ಭೂಮಿ, ನಿಸರ್ಗ, ಕೃಷಿಕರ ಜೀವನವನ್ನು ಸಾರುವ ಸಂಕೇತದಂತಿದೆ.
ಹೆಸರಿಗೆ ಪೂರಕವೆಂಬಂತೆ, ಒಂದು ಕುಟುಂಬವು ನದಿಯನ್ನು ದಾಟಿ ಗುಳೆಹೋಗುವ ಪ್ರಕ್ರಿಯೆಯಿಂದಲೇ ಕಾದಂಬರಿಯು ಆರಂಭವಾಗುವುದು. ಕರ್ಜೆ ಎಂಬ ಹಳ್ಳಿಯ ಸಿರಿವಂತ ಜಮೀನುದಾರನೊಬ್ಬನ ಚಾಲಗೇಣಿ ಒಕ್ಕಲಾಳಾದ ಕುಯಿರ ನಾಯಕ ಎಂಬುವನ ಕುಟುಂಬವು ಗೇಣಿ ನೀಡಲಾಗದೇ ಸಂಕಷ್ಟಕ್ಕೆ ಸಿಕ್ಕಿ ರಾತ್ರೋರಾತ್ರಿ ತಾನಿದ್ದ ಹಳ್ಳಿಯನ್ನು ಬಿಟ್ಟು ಉಡುಪಿ, ಕುಂದಾಪುರಗಳ ನಡುವೆ ಗಡಿಯಂತಿರುವ ಸೀತಾ ನದಿಯನ್ನು ದಾಟಿ ನೆಲ್ಯಾಡಿ ಎಂಬ ಬೇರೊಂದು ಹಳ್ಳಿಗೆ ಹೋಗಿ ನೆಲೆಸುವುದು. ಆ ಕುಟುಂಬವೇ ಅಕ್ಷರಶಃ ‘ನದಿ ದಾಟಿ ಬಂದವರು’. ಆದರೆ ಸ್ವಾತಂತ್ರ್ಯ ಸಿಕ್ಕಕೂಡಲೇ ಸಮಾಜದಲ್ಲಿದ್ದ ನ್ಯೂನತೆ, ಅಸಮಾನತೆಗಳನ್ನು ತೊಡೆದುಹಾಕಿ ಪ್ರಗತಿಯತ್ತ ದಾಪುಗಾಲು ಹಾಕುವ ಹುಮ್ಮಸ್ಸಿನಲ್ಲಿ ದೇಶದಲ್ಲಾದ ಗತಿಶೀಲ ಬದಲಾವಣೆಗಳು, ಈ ಬದಲಾವಣೆಗಳು ತಂದ ಹೊಸ ಅವಕಾಶಗಳು - ಹಿಂದಿನ ಬಡತನ, ಕಾರ್ಪಣ್ಯಗಳ ಗಡಿಯನ್ನು ದಾಟಿ ಹೊರಬಂದು ಹೊಸ ಬದುಕನ್ನು ಕಟ್ಟಿಕೊಳ್ಳುವ ಆಶಾಭಾವವನ್ನು ಜನರಲ್ಲಿ ಮೂಡಿಸುವುದು ಇವೆಲ್ಲವನ್ನೂ ‘ನದಿ ದಾಟಿ ಬಂದವರು’ ಎಂಬ ಶೀರ್ಷಿಕೆಯು ಅರ್ಥಪೂರ್ಣವಾಗಿ ಧ್ವನಿಸುತ್ತದೆ.
ನದಿ ದಾಟಿ ಬಂದ ಕುಯಿರ ನಾಯಕನ ಕುಟುಂಬಕ್ಕೆ ವೆಂಕಣ್ಣಯ್ಯ-ಸಾಕಮ್ಮ ಎಂಬ ಭೂಮಾಲೀಕ ದಂಪತಿಗಳು ಆಶ್ರಯ ನೀಡುತ್ತಾರೆ. ಈ ಎರಡು ಕುಟುಂಬದವರು ಪರಸ್ಪರ ಸಹಕಾರ, ಸಹಾನುಭೂತಿಗಳೊಂದಿಗೆ ಕೆಲಕಾಲ ಬಾಳುತ್ತಾರೆ. ಮುಂದೆ ವೆಂಕಣ್ಣಯ್ಯ ಮತ್ತು ಕುಯಿರನಾಯಕನ ಕಾಲ ಮುಗಿದು ಮಕ್ಕಳು ಸಂಸಾರದ ಜವಾಬ್ದಾರಿ ಹೊರುವ ಕಾಲ ಬರುತ್ತದೆ. ವೆಂಕಣ್ಣಯ್ಯನ ಹಿರಿಯ ಮಗ ಸತ್ಯನಾರಾಯಣ ಇನ್ನೂ ಚಿಕ್ಕವನಾದ್ದರಿಂದ ಕುಯಿರ ನಾಯಕನ ಹಿರಿಯ ಮಗ ಸಿದ್ಧ ನಾಯಕನಿಗೆ ಇವರ ಜಮೀನನ್ನು ಚಾಲಗೇಣಿಗೆ ಬಿಡುತ್ತಾರೆ. ಅಷ್ಟರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು ಅಧಿಕಾರದ ಬದಲಾವಣೆಯಾಗುತ್ತದೆ. ಅಧಿಕಾರದೊಂದಿಗೆ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳು ಒಂದೊಂದಾಗಿ ಆರಂಭಗೊಳ್ಳುತ್ತವೆ. ಮುಂದೆ ಸತ್ಯನಾರಾಯಣ ಬೆಂಗಳೂರು ಸೇರಿ ಹೋಟೆಲ್ ಮಾಲೀಕನಾಗುತ್ತಾನೆ. ಎರಡನೆಯ ಮಗನೂ ದೊಡ್ಡವನಾಗಿದ್ದರಿಂದ ಸಾಕಮ್ಮ ತನ್ನ ಜಮೀನಿನಲ್ಲಿ ತಾವೇ ಉಳುಮೆ ಮಾಡುವ ನಿರ್ಧಾರ ತಳೆಯುತ್ತಾಳೆ. ಅಷ್ಟರಲ್ಲಿ ಉಳುವವನೇ ಭೂಮಿಯ ಒಡೆಯನಾಗುವ ಭೂಮಸೂದೆ ಚಾಲನೆಗೆ ಬರುವ ಸೂಚನೆಯಿರುತ್ತದೆ. ಇದನ್ನು ಅವರಿವರಿಂದ ತಿಳಿದ ಸಿದ್ಧನಾಯಕ, ಸಾಕಮ್ಮನ ವಿರೋಧದ ನಡುವೆಯೇ ತಾನೇ ಹೂಟೆ ಮಾಡಲು ಆರಂಭಿಸುತ್ತಾನೆ. ಕೊನೆಗೆ ರಾಜಕೀಯವಾಗಿಯೂ ಬಲಿಷ್ಠರಾಗಿದ್ದ ಊರಿನ ಸಾಹುಕಾರರು ಜಗಳವನ್ನು ಇತ್ಯರ್ಥ ಮಾಡಿ ಅವರ ಅರ್ಧ ಜಮೀನನ್ನು ನಾಯಕನಿಗೆ ಉಳಲು ಬಿಡುವಂತೆ ನಿರ್ದೇಶಿಸುತ್ತಾರೆ. ಅಷ್ಟರಲ್ಲಿ ಭೂಮಿಯಲ್ಲಿ ಉಳುವವರು ಡಿಕ್ಲೆರೇಷನ್ ಕೊಟ್ಟು ಭೂಮಿಯನ್ನು ತಮ್ಮದಾಗಿಸಿಕೊಳ್ಳುವ ಪ್ರಕ್ರಿಯೆ ಆರಂಭಗೊಂಡು ಸಿದ್ಧನಾಯಕನು ಪೂರ್ತಿ ಭೂಮಿಯ ಒಡೆತನವನ್ನು ಸಂಪಾದಿಸುತ್ತಾನೆ. ಭೂಮಿ ಹೋದ ದುಃಖವಿದ್ದರೂ ಸತ್ಯನಾರಾಯಣನ ಹೋಟೆಲು ದುಡಿಮೆಯಿಂದ ಆರ್ಥಿಕವಾಗಿ ಸಬಲವಾಗಿಯೇ ಇದ್ದ ಸಾಕಮ್ಮನ ಕುಟುಂಬ ಬೆಂಗಳೂರಿಗೆ ಹೋಗಿ ನೆಲೆಸುತ್ತದೆ. ಇತ್ತ ಹಳ್ಳಿಗಳಲ್ಲೆಲ್ಲ ಬ್ಯಾಂಕುಗಳು ಆರಂಭವಾಗಿ ಜನಸಾಮಾನ್ಯರಿಗೂ ಬ್ಯಾಂಕಿನಲ್ಲಿ ಖಾತೆ ತೆರೆಯುವ ಅವಕಾಶವಾಗುತ್ತದೆ. ಸಿದ್ಧನಾಯಕನ ಭೂಮಿಯ ಆಧಾರದ ಮೇಲೆ ಬ್ಯಾಂಕು ಅವನಿಗೆ ಮನೆ ಕಟ್ಟಲು ಸಾಲ ನೀಡುತ್ತದೆ. ಅವನ ಮಕ್ಕಳಿಗೆ ಒಳ್ಳೆಯ ಶಿಕ್ಷಣವೂ ದೊರೆಯುತ್ತದೆ. ಅವನಿಗೆ ಹುಟ್ಟಲಿರುವ ಇನ್ನೊಂದು ಮಗು ಹೆಣ್ಣಾದರೆ ‘ಭೂಮಿ’ ಎಂದು ಹೆಸರಿಡಬೇಕೆಂದೂ ತನಗೆ ಸೀರೆ, ರೇಡಿಯೋಗಳು ಬೇಕೆಂದೂ ಅವನ ಹೆಂಡತಿ ತನ್ನ ಹಂಬಲಗಳನ್ನು ತೋಡಿಕೊಳ್ಳುವುದರೊಂದಿಗೆ ಒಕ್ಕಲಾಳುಗಳು ಭೂಮಿಯ ಒಡೆಯರಾಗಿ ಸಮಾಜದಲ್ಲಿ ಗಣ್ಯರಾಗುವ ಕಾಲ ಬಂದಿದ್ದನ್ನು ಸಾರುತ್ತ ಕಾದಂಬರಿ ಸಕಾರಾತ್ಮಕವಾಗಿ ಕೊನೆಗೊಳ್ಳುತ್ತದೆ.
ಹಿಂದೆ ಹೇಳಿದಂತೆ ಇಲ್ಲಿ ಬರುವ ಹಳ್ಳಿಗಳ ಜೀವನಶೈಲಿ, ಆಚರಣೆಗಳು, ಅಲ್ಲಿ ಕಾಣಸಿಗುವ ಪ್ರಾಣಿಪಕ್ಷಿಗಳ ವಿವರಗಳೂ ಕಾದಂಬರಿಯಲ್ಲಿ ದೊರಕಿ ಆ ಕಾಲದ ಆ ಪ್ರದೇಶದ ನೈಜಸ್ವರೂಪವನ್ನು ಚಿತ್ರಿಸುತ್ತವೆ. ಉದಾಹರಣೆಗೆ - ಗುಳೆ ಹೋಗುವಾಗ ಮಣ್ಣಿನ ಮಡಕೆಯನ್ನು ಗುಡಿಸಲಿನ ಅಂಗಳದಲ್ಲಿ ಕವುಚಿಹಾಕಿ ಹೋಗುವುದು, ಗ್ರಹಣ ಕಾಲದಲ್ಲಿ ತೆಂಗಿನ ಮರಗಳಿಗೆ ಮುಷ್ಟ ಮಾಡುವುದು ಮುಂತಾದ ವಿಶಿಷ್ಟ ಸಂಪ್ರದಾಯಗಳು, ಎರಡನೆಯ ಮಹಾಯುದ್ಧ ಕಾಲದಲ್ಲಿ ಕರಾವಳಿಯ ಒಳನಾಡಿನಲ್ಲಿ ಬೆಲ್ಲಕ್ಕೆ ಕೊರತೆಯಾದಂತಹ ಸಂಗತಿ, ಹಣವಿದ್ದವರು ಕಾಫಿಪುಡಿಯನ್ನು ಕೊಂಡುತಂದು ಅಪರೂಪಕ್ಕೆ ಕಷಾಯದ ಬದಲಿಗೆ ಕಾಫಿ ಮಾಡಿ ಕುಡಿದು ಆನಂದಿಸುವುದು ಇತ್ಯಾದಿ. ಸಣ್ಣಸಣ್ಣ 24 ಅಧ್ಯಾಯಗಳಲ್ಲಿ ವಿಂಗಡಣೆಯಾಗಿರುವ ಕಾದಂಬರಿಯಲ್ಲಿ ಇಂತಹ ವಿವರಗಳನ್ನು ನೀಡುವ ಸಲುವಾಗಿಯೇ ರೂಪಿತವಾದ ಕೆಲವು ಅಧ್ಯಾಯಗಳಲ್ಲಿ ಕಥಾನಕದ ಬಂಧ ಸ್ವಲ್ಪ ಸಡಿಲವಾದರೂ ಓದಿನ ಓಘಕ್ಕೇನೂ ಧಕ್ಕೆಯಾಗುವುದಿಲ್ಲ.
ಭೂತ ಹಕ್ಕಿ, ‘ಹೋರಿ ಸತ್ತು ಹೋಯಿತೋ ಹಕ್ಕಿ’ಗಳ ಕುರಿತು ಟಿಪ್ಪಣಿ ಹಾಗೂ ಕೆಲವು ಪ್ರಾದೇಶಿಕ ಪದಗಳ ಅರ್ಥಗಳನ್ನು ಅನುಬಂಧದಲ್ಲಿ ನೀಡಿರುವುದು ಉಪಯುಕ್ತವಾಗಿದೆ. ಕುಂದಾಪುರದ ಆಡುಮಾತಿನ ಶೈಲಿಯಲ್ಲಿರುವ ಸಂಭಾಷಣೆಗಳು ಕಾದಂಬರಿಗೆ ನೈಜತೆಯನ್ನು ನೀಡಿ ಓದನ್ನು ಆಪ್ತವಾಗಿಸುವುವಾದರೂ ಸಂಭಾಷಣೆಯಲ್ಲಿ ಹಲವೆಡೆ ವಾಕ್ಯಗಳು ಅರ್ಧ ಕುಂದಗನ್ನಡದಲ್ಲಿ, ಉಳಿದರ್ಧ ಅತಿಶಿಷ್ಟ ಕನ್ನಡದಲ್ಲಿ ಮೂಡಿಬಂದಿರುವುದು ಆ ಪ್ರಾದೇಶಿಕ ಭಾಷೆಯನ್ನು ಚೆನ್ನಾಗಿ ಬಲ್ಲ ಓದುಗರಿಗೆ ಸ್ವಲ್ಪ ಅಸಹಜವೆನಿಸಬಹುದು.
ಒಟ್ಟಿನಲ್ಲಿ ಡಾ. ಜನಾರ್ದನ ಭಟ್ಟರು ಅಡಕವಾಗಿ ಹೇಳಿರುವಂತೆ, ‘ಈ ಕಾದಂಬರಿ ಸಾತಂತ್ರ್ಯಪೂರ್ವದ ಆರ್ಥಿಕ ಕಾರ್ಪಣ್ಯ ಮತ್ತು ಸ್ವಾತಂತ್ರ್ಯಹರಣದ ಪರಿಪ್ರೇಕ್ಷ್ಯೆಯಲ್ಲಿ ಪ್ರಾರಂಭವಾಗಿ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಸಂಬಂಧಗಳು ಪಡೆದ ಹೊಸ ವಿನ್ಯಾಸಗಳನ್ನು, ಹೊಸ ಅವಕಾಶಗಳನ್ನು ಅದ್ಭುತವಾಗಿ ತೋರಿಸುತ್ತದೆ’. ಈ ಹೊಸ ಕಾದಂಬರಿಗಾಗಿ ಶಶಿಧರ ಹಾಲಾಡಿಯವರಿಗೆ ಅಭಿನಂದನೆಗಳು.





Comments