ಕನ್ನಡ ಕಾದಂಬರಿ ಸಾಹಿತ್ಯದ ಮೈಲಿಗಲ್ಲುಗಳ ದಾಖಲೆ - ಕನ್ನಡ ಕಾದಂಬರಿ ಮಾಲೆ
- vidyaram2
- Aug 11, 2025
- 3 min read

ಕನ್ನಡದ ಖ್ಯಾತ ವಿಮರ್ಶಕರಲ್ಲಿ ಒಬ್ಬರಾದ ಡಾ.ಜನಾರ್ದನ ಭಟ್ಟರು ಹಿಂದಿನ ಸಾಹಿತ್ಯವನ್ನು ಮಾತ್ರವಲ್ಲದೆ ಸಮಕಾಲೀನ ಸಾಹಿತ್ಯವನ್ನೂ ಸತತವಾಗಿ ವಿಮರ್ಶಿಸುತ್ತಲೇ ಬಂದಿದ್ದಾರೆ. ವಿಮರ್ಶೆಯೊಂದಿಗೆ ಸೃಜನಶೀಲ ಸಾಹಿತ್ಯಪ್ರಕಾರಗಳಲ್ಲೂ ಕೈಯಾಡಿಸಿರುವ ಅವರು ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಕೊಂಡಿರುವ ವಿದ್ವಾಂಸರು. ತಮ್ಮ ನೆಚ್ಚಿನ ಸಾಹಿತ್ಯಪ್ರಕಾರವಾದ ಕಾದಂಬರಿಗಳನ್ನು ಕಾಲಕಾಲಕ್ಕೆ ವಿಮರ್ಶಿಸಿ ಕೆಲವನ್ನು ಅಂಕಣರೂಪದಲ್ಲಿ ಪ್ರಕಟಗೊಳಿಸಿದ್ದ ಅವರು, ಕನ್ನಡ ಸಾಹಿತ್ಯ ನಡೆದು ಬಂದ ಹಾದಿಯಲ್ಲಿ ಮೈಲಿಗಲ್ಲುಗಳೆನಿಸಬಹುದಾದ ಅಂತಹ ನೂರು ಕಾದಂಬರಿ ಕೃತಿಗಳ ಪರಿಚಯಾತ್ಮಕ ವಿಮರ್ಶೆಯನ್ನು ಕಾಲಾನುಕ್ರಮದಲ್ಲಿ ‘ಕನ್ನಡ ಕಾದಂಬರಿ ಮಾಲೆ’ ಎಂಬ ಅನ್ವರ್ಥವಾದ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಸುಮಾರು ಆರುನೂರು ಪುಟಗಳಿರುವ ಈ ಗ್ರಂಥವು ಮಂಡ್ಯದ ಶ್ರೀರಾಮ ಪ್ರಕಾಶನದ ಮೂಲಕ 2024ರಲ್ಲಿ ಬೆಳಕು ಕಂಡಿದೆ.
ನವೋದಯ, ಪ್ರಗತಿಶೀಲ, ನವ್ಯ, ನವ್ಯೋತ್ತರ ಕಾಲಘಟ್ಟಗಳಡಿಯಲ್ಲಿ ಬಂದ ಕನ್ನಡ ಸಾಹಿತ್ಯದ ನೂರು ಮುಖ್ಯ ಕಾದಂಬರೀಕಾರರ ಒಂದೊಂದು ಪ್ರಾತಿನಿಧಿಕ ಕಾದಂಬರಿಗಳನ್ನು ಆಯ್ದು, ಅವುಗಳ ಪ್ರಕಾರ (ಐತಿಹಾಸಿಕ, ಚಾರಿತ್ರಿಕ, ನವಚಾರಿತ್ರಿಕ, ವಾಸ್ತವವಾದಿ, ಅಭಿಜಾತ ಇತ್ಯಾದಿ), ಮಹತ್ತ್ವ ಮತ್ತು ಅವುಗಳ ಮೇಲೆ ಬಂದಿರುವ ಇತರ ಪ್ರಮುಖ ವಿಮರ್ಶೆ ಎಲ್ಲವನ್ನೂ ದಾಖಲಿಸುತ್ತ ಪರಿಚಯಿಸಿರುವುದರಿಂದ ಈ ಕೃತಿಯು ಸಾಹಿತ್ಯಾಸಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಂಗ್ರಹಯೋಗ್ಯವಾಗಿದೆ. ಬಹುತೇಕ ಲೇಖಕರ ಪುಟ್ಟ ಪರಿಚಯವನ್ನೂ ಲೇಖನದ ಕೊನೆಯಲ್ಲಿ ಸೇರಿಸಿರುವುದು ಉಪಯುಕ್ತವಾದ ಮಾಹಿತಿಯಾಗಿದೆ. ಇದು ಭಟ್ಟರ ನೂರನೆಯ ಕೃತಿ ಎನ್ನುವುದೂ ಒಂದು ವಿಶೇಷ.
ಕೃತಿಯ ಪ್ರಸ್ತಾವನೆಯಲ್ಲಿ ಭಟ್ಟರು ಕನ್ನಡ ಕಾದಂಬರಿ ಪ್ರಕಾರದ ಚರಿತ್ರೆಯನ್ನು, ಅದರ ವಿವಿಧ ಹಂತಗಳನ್ನು ಕುರಿತು ವಿವರವಾದ ಪೀಠಿಕೆಯನ್ನು ಒದಗಿಸಿದ್ದಾರೆ. ‘ಒಂದು ಅಸಾಧಾರಣ ಕೃತಿ’ ಎನ್ನುವ ಸೂಕ್ತವಾದ ಉಪಶೀರ್ಷಿಕೆಯುಳ್ಳ ಸುದೀರ್ಘ ಮುನ್ನುಡಿಯಲ್ಲಿ ಪ್ರೊ.ಜಿ.ಎನ್.ಉಪಾಧ್ಯರು ನೀಡಿರುವ ಅನೇಕ ಒಳನೋಟಗಳು ಈ ಮೌಲಿಕ ಕೃತಿಗೆ ಹೆಚ್ಚಿನ ಮೆರುಗನ್ನು ನೀಡಿವೆ. ಇಲ್ಲಿರುವ ಮೂರು ವಿಶಿಷ್ಟವಾದ ಅನುಬಂಧಗಳು ಕೃತಿಗೆ ಸಮಗ್ರತೆಯನ್ನು ತಂದುಕೊಟ್ಟಿವೆ. ಮೊದಲನೆಯ ಅನುಬಂಧವು ಕಾದಂಬರೀಕಾರರೂ ಆಗಿರುವ ಭಟ್ಟರ ‘ಬೂಬರಾಜ ಸಾಮ್ರಾಜ್ಯ’ ಕಾದಂಬರಿಗೆ ಡಾ.ಜಿ.ಕೆ.ರವಿಶಂಕರ್ ಅವರು ಬರೆದ ಒಂದು ವಿಶ್ಲೇಷಣೆ. ಎರಡನೆಯದು ಇಂಗ್ಲಿಷ್ ನಾವೆಲ್ಲುಗಳ ಪ್ರಭಾವವಾಗುವ ಮೊದಲೇ ರಚಿತವಾದ ಮೂರು ಕಾದಂಬರಿಗಳಲ್ಲಿ ಎರಡು (ಒಂದು ಕೃತಿಯ ಮುಖ್ಯ ಭಾಗದಲ್ಲಿದೆ). ಮೂರನೆಯದು ಮುದ್ದಣನ ‘ರಾಮಾಶ್ವಮೇಧ’ ಕೃತಿ. ರಾಮಾಯಣದ ಪುರಾಣ ಕಥೆಯನ್ನು ಗದ್ಯರೂಪದಲ್ಲಿ ಬರೆದ ಈ ಕೃತಿಯ ಒಳಗೇ ಅದರ ಲೇಖಕ ಮತ್ತು ವಿಮರ್ಶಕಿಯನ್ನು ತಂದು ಅದನ್ನು ‘ಸ್ವಾಭಿಮುಖ ಸಾಹಿತ್ಯ’ ಕೃತಿಯಾಗುವಂತೆ ಪ್ರಯೋಗಿಸಿರುವ ಕಾರಣದಿಂದ ಅದನ್ನು ಇಲ್ಲಿ ಚರ್ಚಿಸಿರುವುದು ಸಂಗತವಾಗಿದೆ.
ಆಧುನಿಕ ಕನ್ನಡದ ಮೊದಲನೆಯ ಐತಿಹಾಸಿಕ ಕಾದಂಬರಿ ಎಂದು ಗುರುತಿಸಲಾಗುವ ಕೆಂಪುನಾರಾಯಣರ ‘ಮುದ್ರಾಮಂಜೂಷ’, ಕನ್ನಡದ ಮೊದಲ ಸೃಜನಶೀಲ ಕೃತಿ - ಸಾಮಾಜಿಕ ಕಾದಂಬರಿ ಎಂದು ಗುರುತಿಸಬಹುದಾದ ಹರ್ಮನ್ ಮೊಗ್ಲಿಂಗನ ‘ಈರಾರು ಪತ್ರಿಕೆ’, ಆರ್.ನರಸಿಂಹಾಚಾರ್ಯರು ರೂಪಾಂತರಿಸಿರುವ ‘ನಗೆಗಡಲು’ ಕಾದಂಬರಿ, ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ ‘ಇಂದಿರಾಬಾಯಿ’ - ಹೀಗೆ ಅನೇಕ ‘ಮೊದಲು’ಗಳಿಂದ ತೊಡಗಿ ಕನ್ನಡ ಕಾದಂಬರೀಲೋಕದ ಉದ್ದಗಲಗಳನ್ನು ಪರಿಚಯಿಸುವ ಈ ಕೃತಿಯಲ್ಲಿ ಮಂಗಳೂರು, ಧಾರವಾಡ, ಮೈಸೂರು ಮುಂತಾದ ಕರ್ನಾಟಕದ ವಿವಿಧ ಪ್ರಾಂತಗಳ ಕಾದಂಬರೀಕಾರರು, ದಲಿತ, ಹಿಂದೂ, ಮುಸ್ಲಿಂ, ಕ್ರೈಸ್ತ ಕಾದಂಬರೀಕಾರರು, ಸ್ತ್ರೀ ಮತ್ತು ಪುರುಷ ಕಾದಂಬರೀಕಾರರು ಎಲ್ಲರೂ ಸಮಸ್ಥಾನವನ್ನು ಪಡೆದಿದ್ದಾರೆ. ಪೌರಾಣಿಕ ಕಾದಂಬರಿ, ಐತಿಹಾಸಿಕ ಕಾದಂಬರಿ, ಕಾಲ್ಪನಿಕ ಕಾದಂಬರಿ, ಜೀವನಚರಿತ್ರೆಯಂತಿರುವ ಕಾದಂಬರಿ, ಅನುಭವ ಕಥನವೇ ಆಗಿರುವ ಕಾದಂಬರಿ, ಆಧುನಿಕ ಮಹಾಕಾವ್ಯ ಸ್ವರೂಪದಲ್ಲಿರುವ ಕಾದಂಬರಿ, ತಮ್ಮದೇ ಪೂರ್ವಜರ ಕಥೆಯನ್ನು ಲೇಖಕ ಅರುಹುತ್ತಿರುವ ಕಾದಂಬರಿ, ಮೃಗಯಾ ಸಾಹಿತ್ಯವಿರುವ ಕಾದಂಬರಿ, ಪತ್ತೇದಾರಿ ಕಾದಂಬರಿ - ಹೀಗೆ ವಿವಿಧ ರೀತಿಯ ಕಾದಂಬರಿಗಳನ್ನು ವಸ್ತುನಿಷ್ಠವಾಗಿ ಚರ್ಚಿಸಿದರೂ ಕಟುವಿಮರ್ಶೆಗೆ ಮುಂದಾಗದೆ ಅವುಗಳ ಮಿತಿಯನ್ನು ಸೂಕ್ಷ್ಮವಾಗಿ ಹೇಳಿ, ಹೆಚ್ಚುಗಾರಿಕೆಯನ್ನು ಎತ್ತಿ ತೋರಿಸಿರುವುದು ಭಟ್ಟರ ಹೆಗ್ಗಳಿಕೆ.
ಆಂಗ್ಲ ಮತ್ತು ಕನ್ನಡ ಸಾಹಿತ್ಯವನ್ನು ಆಳವಾಗಿ ಓದಿಕೊಂಡಿರುವ ಭಟ್ಟರ ವಿಶಾಲವಾದ ದೃಷ್ಟಿಕೋನದಿಂದ ಈ ನೂರು ಕಾದಂಬರಿಗಳನ್ನು ಓದಿದಷ್ಟು ಜ್ಞಾನವನ್ನು ಈ ಒಂದು ಕೃತಿಯು ನೀಡುವುದಲ್ಲದೆ ಆ ಕಾದಂಬರಿಗಳನ್ನು ಓದುವ ಹಂಬಲವನ್ನೂ ಹುಟ್ಟಿಸುವಂತಿದೆ. ಕಾದಂಬರಿಗಳ ವಿಮರ್ಶೆಯನ್ನು ಹೇಗೆ ಮಾಡಬೇಕೆಂಬ ಪಾಠವೂ ವಿಮರ್ಶಕನಾಗಬಯಸುವವನು ಎಂತೆಂತಹ ಸೂಕ್ಷ್ಮ ವಿಷಯಗಳನ್ನು ಗಮನಿಸಬೇಕೆಂಬ ಗುಟ್ಟೂ ಸಾಹಿತ್ಯದ ವಿದ್ಯಾರ್ಥಿಗಳಿಗೆ ಈ ಕೃತಿಯ ಕೂಲಂಕಷ ಅಧ್ಯಯನದಿಂದ ತಿಳಿಯುತ್ತದೆ. ಇಲ್ಲಿರುವ ಒಳನೋಟಗಳಿಗೆ ಕೆಲವೇ ಕೆಲವು ಉದಾಹರಣೆಗಳು ಕೆಳಕಂಡಂತಿವೆ -
ಕೆಲವು ಕಾದಂಬರಿಗಳನ್ನು ಅರಿಯುವಾಗ ಅದೇ ಲೇಖಕರ ಇತರ ಕಾದಂಬರಿ/ಕೃತಿಗಳ ಓದೂ ಒಂದು ಹಿನ್ನೆಲೆಯನ್ನು ಒದಗಿಸಬಲ್ಲದು, ಅದರಿಂದ ಪ್ರಸ್ತುತ ಓದುತ್ತಿರುವ ಕಾದಂಬರಿಯ ಸರಿಯಾದ ಆಶಯ ಎಟುಕಬಹುದು (ತಿರುಮಲೇಶ ಅವರ ‘ಆರೋಪ’ ಕಾದಂಬರಿ).
ಸಾಹಿತ್ಯವು ಒಂದು ಸಮುದಾಯದ ಬದುಕನ್ನು ಅನಾವರಣಗೊಳಿಸಬಲ್ಲದು. ಒಂದು ಭಾಷೆಯ ಸಾಹಿತ್ಯದಲ್ಲಿ ಒಂದು ಸಮುದಾಯದವರು ತಮ್ಮ ಬದುಕನ್ನು ತೆರೆದಿಟ್ಟು ವಿಮರ್ಶೆ, ವಿಶ್ಲೇಷಣೆ, ಅವಲೋಕನಗಳಿಗೆ ಒಡ್ಡಿಕೊಂಡರೆ ಆ ಸಮುದಾಯದ ಕುರಿತು ಚರ್ಚೆಗಳು (ಪರ, ವಿರೋಧ ಏನೇ ಆಗಲಿ) ನಡೆದು ಉಳಿದ ಸಮುದಾಯಗಳು ಅವರನ್ನು ಹತ್ತಿರದವರನ್ನಾಗಿಸಿಕೊಳ್ಳುವ ಅವಕಾಶಗಳಾಗುತ್ತವೆ. ಹಾಗಾಗದೆ ಹೋದಲ್ಲಿ ಅಂತಹ ಸಮುದಾಯವನ್ನು ಕುರಿತು ಅಜ್ಞಾನ, ತಪ್ಪು ಕಲ್ಪನೆಗಳು ಉಳಿದುಹೋಗುತ್ತವೆ. (ನಾ.ಡಿಸೋಜ ಅವರ ‘ಬಾಮಣ್’).
ಒಂದು ಪ್ರಾಂತ್ಯದ ಗ್ರಾಮ್ಯ ಭಾಷೆಯನ್ನು ನಿರೂಪಣೆಗೆ ಬಳಸಿದರೆ ಕಾದಂಬರಿಗೆ ನೈಜತೆಯ ಆಯಾಮ ಒದಗಿದರೂ ಉಳಿದ ಪ್ರಾಂತ್ಯದ ಜನರಿಗೆ ಅದು ದಕ್ಕದೇ ಅನೇಕ ಓದುಗರನ್ನು ಲೇಖಕ ಕಳೆದುಕೊಳ್ಳುತ್ತಾನೆ (ಚದುರಂಗರ ‘ವೈಶಾಖ’ ಕಾದಂಬರಿ).
ಕಾದಂಬರಿಯ ದೊಡ್ಡಸ್ತಿಕೆಯಿರುವುದು ಅದು ಜೋರಾಗಿ ಹೇಳುವ ಮಾತುಗಳಲ್ಲಿ ಅಲ್ಲ, ಬದಲಿಗೆ ಅದು ಹೇಳದೆಯೂ ಕೇಳಿಸುವ ಪಿಸುದನಿಗಳಲ್ಲಿ (ವಿವೇಕ ರೈ ಅವರು ‘ನದಿ ತಿರುಗಿಸಿದ ನಾಣಜ್ಜ’ ಕಾದಂಬರಿಯ ಮುನ್ನುಡಿಯಲ್ಲಿ).
ಪ್ರಭು ಸಂಮಿತೆಯ ಮಾದರಿಯಲ್ಲಿರುವ ಶಾಸ್ತ್ರಗ್ರಂಥಗಳಿಗಿಂತ ಕಾಂತಾ ಸಂಮಿತೆಯಂತಿರುವ ಪುರಾಣ ಕಾವ್ಯಗಳು ಜನಮಾನಸವನ್ನು ಸುಲಭವಾಗಿ ತಲುಪುತ್ತವೆ ಎಂಬ ವಿಷಯವನ್ನು ಪ್ರವಾದಿ ಮುಹಮ್ಮದರ ಜೀವನವನ್ನು ಕಾದಂಬರಿ ರೂಪದಲ್ಲಿ ಕಟ್ಟಿಕೊಟ್ಟ ಬೊಳುವಾರು ಮಹಮದ್ ಕುಂಇ ಅವರು ಪ್ರಯೋಗಿಸಿರುವುದು (‘ಓದಿರಿ’ ಕಾದಂಬರಿ).
ವೈಯಕ್ತಿಕ ಜೀವನದಲ್ಲಿ ಸಂಭವಿಸುವ ಕಷ್ಟಕಾರ್ಪಣ್ಯ, ಸುಖದುಃಖ, ಹುಟ್ಟುಸಾವುಗಳ ಜೊತೆಜೊತೆಗೆ ದೂರದ ಹೊರಜಗತ್ತಿನ ವಿದ್ಯಮಾನಗಳಿಗೆ ಸ್ಪಂದಿಸುವ ವಿಶಿಷ್ಟವಾದ ಪರಿಯು ಒಂದು ಕಾದಂಬರಿಯನ್ನು ಅಭಿಜಾತ ಕಾದಂಬರಿಯನ್ನಾಗಿಸುತ್ತದೆ (‘ಪಾಚಿ ಕಟ್ಟಿದ ಪಾಗಾರ’ ಕುರಿತು).
ಒಟ್ಟಿನಲ್ಲಿ ‘ಕನ್ನಡ ಕಾದಂಬರಿ ಮಾಲೆ’ಯು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ವಿಶಿಷ್ಟವಾದ ಕೃತಿಯಾಗಿ ನಿಲ್ಲುವುದು ಎಂಬುದರಲ್ಲಿ ಸಂಶಯವಿಲ್ಲ. ಸಾಹಿತ್ಯದ ವಿದ್ಯಾರ್ಥಿಗಳೆಲ್ಲರ ಸಂಗ್ರಹದಲ್ಲಿರಬೇಕಾದ ಗ್ರಂಥವಿದು. ‘ಅಪಾರವಾದ ಶ್ರಮ, ಅಗಾಧವಾದ ವಿದ್ವತ್ತು ಹಾಗೂ ಸೂಕ್ಷ್ಮ ಚಿಂತನೆಗಳಿಂದ ಕೂಡಿರುವ ಈ ಉದ್ಗ್ರಂಥವು ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಭಾಗವಾಗಿಯೇ ಓದುಗರಿಗೆ ದಕ್ಕಿರುವುದು ಕನ್ನಡದ ಭಾಗ್ಯ’ ಎಂದು ಪ್ರೊ.ಜಿ.ಎನ್.ಉಪಾಧ್ಯರು ಮುನ್ನುಡಿಯಲ್ಲಿ ಸೂಕ್ತವಾಗಿ ಗುರುತಿಸಿದ್ದಾರೆ. ಈ ಅಮೂಲ್ಯವಾದ ಕೊಡುಗೆಗಾಗಿ ಜನಾರ್ದನ ಭಟ್ಟರಿಗೆ ಹಾರ್ದಿಕ ಅಭಿನಂದನೆಗಳು.
ವಿದ್ಯಾ ರಾಮಕೃಷ್ಣ.





ಧನ್ಯವಾದಗಳು ಮೇಡಮ್.
ತುಂಬಾ ಚೆನ್ನಾಗಿ ವಿಶ್ಲೇಷಿಸಿದ್ದೀರಿ.
ಡಾ. ಬಿ. ಜನಾರ್ದನ ಭಟ್