top of page

ವಿಚಾರ ಸಾಹಿತ್ಯದ ಅಗತ್ಯ: ಅರ್ಥ ಮತ್ತು ಮೌಲ್ಯ

  • vidyaram2
  • Mar 9, 2023
  • 2 min read

Updated: Mar 13, 2023



ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರೂ, ಮುಖ್ಯಸ್ಥರೂ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಜಿ.ಎನ್. ಉಪಾಧ್ಯ ಅವರು ಸುಮಾರು 30ಕ್ಕೂ ಹೆಚ್ಚು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿದ್ದುಕೊಂಡು ನಿರಂತರವಾಗಿ ಅಧ್ಯಯನ, ಸಂಶೋಧನೆ, ವಿಮರ್ಶೆಗಳಲ್ಲಿ ಆಸಕ್ತಿಯಿಂದ ತೊಡಗಿಕೊಂಡಿರುವವರು. ಹೊರನಾಡು ಮುಂಬೈಯಲ್ಲಿದ್ದುಕೊಂಡು, ಕನ್ನಡ ಸಾಹಿತ್ಯ ಸಾಗಿ ಬಂದ ಹಾದಿಯ ಕುರಿತು ನಾಡಿನಲ್ಲಿ ನಡೆದ ಅಧ್ಯಯನ, ಸಂಶೋಧನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾ, ಅದರಲ್ಲಿ ಅವರಿಗೆ ಅಲ್ಲಲ್ಲಿ ಗೋಚರಿಸುವ ಕೊರತೆ, ಅಗತ್ಯಗಳನ್ನು (gaps -ರಿಸರ್ಚ್ ಗ್ಯಾಪ್, ಗ್ಯಾಪ್ ಇನ್ ದಿ ಸ್ಟಡಿ) ಆದಷ್ಟು ಕಡಿಮೆಗೊಳಿಸುವ ಪ್ರಯತ್ನವನ್ನು ಸತತವಾಗಿ ಮಾಡಿಕೊಂಡು ಬಂದಿರುವುದು ಅವರ ವಿಶೇಷತೆ. ಇದೇ ನಿಟ್ಟಿನಲ್ಲಿ ವಿಚಾರ ಸಾಹಿತ್ಯದ ಹೆಜ್ಜೆ ಹಾದಿಯನ್ನು ಚಿತ್ರಿಸುವ ಕೃತಿಗಳು ಅಷ್ಟಾಗಿ ಬಂದಿಲ್ಲ ಎಂದು ಅವರಿಗೆ ತೋರಿದಾಗ ಅದಕ್ಕುತ್ತರವಾಗಿ ಬಂದ ಕೃತಿಯೇ ಈ ‘ವಿಚಾರ ಸಾಹಿತ್ಯದ ಅಗತ್ಯ: ಅರ್ಥ ಮತ್ತು ಮೌಲ್ಯ’. ಈ ಕೃತಿಯು 2016ರಲ್ಲಿ ಕನ್ನಡ ವಿಭಾಗದ 59ನೆಯ ಕೃತಿಯಾಗಿ ಪ್ರಕಟಗೊಂಡಿದೆ.


ವಿಚಾರ ಸಾಹಿತ್ಯದ ಕುರಿತು ಸಾಕಷ್ಟು ಚಿಂತನ, ಮಂಥನಗಳು ನಡೆಯುತ್ತಿರುವ ಈ ಕಾಲದಲ್ಲಿ ವಿಚಾರ ಸಾಹಿತ್ಯ ಎಂದರೇನು, ಅದರ ಅಗತ್ಯವೇನು ಎಂಬಂತಹ ವಿವೇಚನೆ, ಅದರ ಕುರಿತು ಇರುವ ಅಭಿಪ್ರಾಯಗಳು, ಪ್ರತಿಪಾದನೆಗಳನ್ನು ಲೇಖಕರು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಕೃತಿಯ ಮೊದಲಿನಲ್ಲಿ ಅವರೇ ಚಿಕ್ಕದಾಗಿ, ಚೊಕ್ಕವಾಗಿ ಹೇಳಿರುವಂತೆ ‘ವಿಚಾರ ಸಾಹಿತ್ಯ ಇಟ್ಟ ಹೆಜ್ಜೆ, ತೊಟ್ಟ ರೂಪದ ಅವಲೋಕನವಿಲ್ಲಿದೆ’. ಮುನ್ನುಡಿಯಲ್ಲಿ ಶ್ರೀಮತಿ ರಮಾ ಉಡುಪ ಅವರು ಹೇಳಿರುವಂತೆ ಜಗತ್ತಿನಾದ್ಯಂತ ಇರುವ ವಿಚಾರವಾದ, ಭಾರತದಲ್ಲಿ ಪ್ರಾಚೀನ ಯುಗದಿಂದ ಇಂದಿನವರೆಗೆ ನಡೆದು ಬಂದ ವಿವಿಧ ವೈಚಾರಿಕ ದೃಷ್ಟಿಕೋನಗಳತ್ತ ಡಾ. ಉಪಾಧ್ಯ ಅವರು ಈ ಕೃತಿಯಲ್ಲಿ ಪಕ್ಷಿನೋಟ ಬೀರಿದ್ದಾರೆ.


ಕನ್ನಡದ ಶ್ರೇಷ್ಠ ವಿಚಾರವಾದಿಗಳಾದ ಕುವೆಂಪು, ಶಿವರಾಮ ಕಾರಂತ, ಎಚ್. ನರಸಿಂಹಯ್ಯ ಮತ್ತು ಗೌರೀಶ ಕಾಯ್ಕಿಣಿ ಅವರ ರೇಖಾಚಿತ್ರಗಳನ್ನು ಹೊತ್ತ, ಜಯ ಸಾಲಿಯಾನ್ ಅವರು ರಚಿಸಿರುವ ಸುಂದರವಾದ ಮುಖಪುಟ ನೋಡಿದ ಕೂಡಲೇ ಓದುಗನ ಮನ ಗೆಲ್ಲುವಂತಿದೆ. ಸುಮಾರು 130 ಪುಟಗಳ ಈ ಕೃತಿಯಲ್ಲಿ ಲೇಖಕರು ತಮ್ಮ ವಿಚಾರಗಳನ್ನು, ನಾಡಿನ ಹಲವು ವೈಚಾರಿಕರ ವಿಚಾರಗಳನ್ನು ಆರು ಮುಖ್ಯ ಅಧ್ಯಾಯಗಳಲ್ಲಿ ಸಮರ್ಪಕವಾಗಿ ಕಟ್ಟಿಕೊಟ್ಟಿದ್ದಾರೆ.


‘ಸಾಹಿತ್ಯದ ಅಗತ್ಯ ಮತ್ತು ಪರಿಣಾಮ’ ಎಂಬ ಮೊದಲನೆಯ ಅಧ್ಯಾಯದಲ್ಲಿ , ಉತ್ತಮ ಸಾಹಿತ್ಯ ಜನಜೀವನವನ್ನು ಹೇಗೆ ಉನ್ನತಿಗೇರಿಸಬಲ್ಲ ಸಾಧನವಾಗಬಹುದು ಎಂಬುದರ ಕುರಿತ ಜಿಜ್ಞಾಸೆಯಿದೆ. ‘ಕುಡಿ ಒಣಗಿದಾಗ ಲತೆಯ ಬುಡಕ್ಕೆ ನೀರು ಹಾಕುವ ತೋಟಗಾರನ ಚಿಕಿತ್ಸೆಯಿಂದ ಆ ಕುಡಿ ಚಿಗುರಿ ನಳನಳಿಸುವಂತೆ, ಕರ್ತೃವಿನ ಬಾಳು ತಿದ್ದಿದರೆ ಅವನ ಕೃತಿಯಲ್ಲಿ ಬಾಳನ್ನು ತಿದ್ದುವ ಶಕ್ತಿ ತಾನಾಗಿ ಮೂಡುತ್ತದೆ’ ಎಂಬ ಮಾಸ್ತಿಯವರ ಸರಳ, ಸುಂದರ, ಅರ್ಥಗರ್ಭಿತ ಅಭಿಪ್ರಾಯ ಮನದಲ್ಲಿ ಬಹುಕಾಲ ರಿಂಗಣಿಸುವಂತಿದೆ. ಹಾಗೆ ಉನ್ನತ ವಿಚಾರಗಳಿಂದ ತನ್ನ ನಡೆ,ನುಡಿಯನ್ನು (ಬದುಕನ್ನು) ತಿದ್ದಿಕೊಂಡವನು ಮಾತ್ರ ವಿಚಾರ ಸಾಹಿತ್ಯದಲ್ಲಿ ತನ್ನ ಅನುಭವವನ್ನು ಧಾರೆಯೆರೆದು ಇತರರ ಬಾಳಿಗೆ ಬೆಳಕಾಗಲ್ಲ. ಈ ಬದುಕನ್ನು, ವಿಶ್ವವನ್ನು, ಸುತ್ತಲಿನ ಪರಿಸರವನ್ನು ಯಥಾವತ್ತಾಗಿ ಅರ್ಥ ಮಾಡಿಕೊಳ್ಳುವುದೇ ವಿಚಾರ ಸಾಹಿತ್ಯದ ಪರಮಗುರಿ ಎಂಬುದನ್ನು ಈ ಅಧ್ಯಾಯದಲ್ಲಿ ಸ್ಪಷ್ಟಪಡಿಸಲಾಗಿದೆ.


‘ವಿಚಾರದ ಉಗಮ, ವಿಚಾರವಾದ’ ಎಂಬ ಅಧ್ಯಾಯದಲ್ಲಿ ಪ್ರಶ್ನೆ ಕೇಳಿ ಉತ್ತರ ಪಡೆಯುವ, ಆ ಮೂಲಕ ವಿಚಾರಗಳನ್ನು ಸೃಷ್ಟಿಸುವ ಪರಂಪರೆ ಬೆಳೆದು ಬಂದ ಹಿನ್ನೆಲೆಯನ್ನು ವಿವರಿಸಲಾಗಿದೆ. ಮಾನವನ ಸ್ವಭಾವದ ಮುಖ್ಯ ಲಕ್ಷಣವಾಗಿರುವ ವಿಚಾರ ಶಕ್ತಿಯ ಉದ್ದೀಪನೆಗೆ ಸಾಹಿತ್ಯ ಹೇಗೆ ಒಂದು ವೇಗವರ್ಧಕವಾಗಿ (catalyst) ವರ್ತಿಸಬಲ್ಲದು ಎಂಬುದನ್ನು ಚರ್ಚಿಸಲಾಗಿದೆ.


‘ವಿಚಾರ ಸಾಹಿತ್ಯ: ವ್ಯಾಖ್ಯೆ, ಅಭಿಪ್ರಾಯ’ ಎಂಬ ಅಧ್ಯಾಯದಲ್ಲಿ ವಿಚಾರ ಸಾಹಿತ್ಯದ ಕುರಿತು ಪ್ರೊ. ಎ.ಎನ್. ಮೂರ್ತಿರಾವ್, ಡಾ. ಗೌರೀಶ ಕಾಯ್ಕಿಣಿ, ಡಿ.ವಿ.ಗುಂಡಪ್ಪ, ಪ್ರೊ.ಎಂ.ಎಚ್.ಕೃಷ್ಣಯ್ಯ, ಡಾ.ಶಿವರಾಮ ಕಾರಂತ, ಪ್ರೊ. ಕೆ.ಎಸ.ನಿಸಾರ್ ಅಹಮದ್ ಇನ್ನೂ ಮುಂತಾದ ವೈಚಾರಿಕ ಬರಹಗಾರರ ವ್ಯಾಖ್ಯೆ ಮತ್ತು ಅಭಿಪ್ರಾಯಗಳನ್ನು ವಿವೇಚಿಸಲಾಗಿದೆ. ಕನ್ನಡದಲ್ಲಿ ವಿಚಾರ ಸಾಹಿತ್ಯದ ಕೊರತೆ ಇರುವುದರ ಕುರಿತಾಗಿ ಕೂಡ ಇಲ್ಲಿ ಚಿಂತನೆಯಿದೆ.


‘ವಿಚಾರ ಸಾಹಿತ್ಯದ ಪ್ರತಿಪಾದನೆ’ಯ ಕುರಿತು ಇರುವ ಅಧ್ಯಾಯದಲ್ಲಿ ಗೌತಮ ಬುದ್ಧನಿಂದ ಹಿಡಿದು, ಕೆಲವು ಪಾಶ್ಚಾತ್ಯ ಮತ್ತು ಇತರ ಭಾರತೀಯ ಭಾಷೆಗಳನ್ನೂ ಸೇರಿದಂತೆ ಸಿಗುವ ವಿಚಾರ ಸಾಹಿತ್ಯದ ಕುರಿತ ಸ್ಥೂಲ ವಿವೇಚನೆಯನ್ನು ನೀಡಲಾಗಿದೆ.


‘ವಿಚಾರ ಸಾಹಿತ್ಯದ ಹೆಜ್ಜೆ, ಹಾದಿ’ ಅಧ್ಯಾಯದಲ್ಲಿ ಪ್ರಾಚೀನ ಕಾಲದಿಂದ ನಮ್ಮ ನಾಡಿನಲ್ಲಿ ನೆಲೆಸಿದ್ದ ವಿಚಾರಪರತೆಯ ಮೇಲೆ ಬೆಳಕು ಬೀರಲಾಗಿದೆ. ಪ್ರಾಚೀನ ಭಾರತದ ವಿಜ್ಞಾನ ಪರಂಪರೆ, ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಅಲ್ಲಲ್ಲಿ ಕಂಡುಬರುವ ವೈಚಾರಿಕ ದೃಷ್ಟಿಕೋನಗಳನ್ನು ಇಲ್ಲಿ ತರ್ಕಿಸಲಾಗಿದೆ. 'ಕಸವರವೆಂಬುದು ನೆರೆಸೈರಿಸಲಾರ್ಪೊಡೆ ಪರವಿಚಾರಮುಮಂ ಪರಧರ್ಮಮುಮಂ‘ (ನಿಜವಾದ ಸಂಪತ್ತು ಎಂದರೆ ಪರವಿಚಾರಗಳನ್ನು ಪರಧರ್ಮಗಳನ್ನು ಸಹಿಸುವ ಮನಸ್ಸಿನ ಗುಣ) ಎಂದು ಕವಿರಾಜಮಾರ್ಗದಲ್ಲಿ , ‘ಕೊಲ್ಲುದುದೇ ಧರ್ಮ’ ಎಂದು ವಡ್ಡಾರಾಧನೆಯಲ್ಲಿ, ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಪಂಪನ ನುಡಿಯಲ್ಲಿ ವೈಚಾರಿಕತೆಯ ಹೊಳಹಿರುವುದನ್ನು ಲೇಖಕರು ಗುರುತಿಸುತ್ತಾರೆ. ಮುಂದೆ ವಚನ ಸಾಹಿತ್ಯದಲ್ಲಿ ಭದ್ರ ತಳಪಾಯ ಪಡೆದ ವೈಚಾರಿಕತೆ , ದಾಸ ಸಾಹಿತ್ಯದಲ್ಲಿ, ನಂತರ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಅವಿಭಾಜ್ಯವಾಗಿ ಸಾಗಿ ಬಂದು, ಇಪ್ಪತ್ತನೆಯ ಶತಮಾನದ ಅರವತ್ತು ಎಪ್ಪತ್ತರ ದಶಕದಲ್ಲಿ ‘ವಿಚಾರ ಸಾಹಿತ್ಯ’ ಎಂದು ಪ್ರತ್ಯೇಕ ಪ್ರಕಾರವಾಗಿ ಗುರುತಿಸಿಕೊಂಡಿರುವುದನ್ನು ಇಲ್ಲಿ ಚರ್ಚಿಸಲಾಗಿದೆ.


‘ಕನ್ನಡ ವಿಚಾರ ಸಾಹಿತ್ಯ ನಿರ್ಮಾಪಕರು’ ಅಧ್ಯಾಯದಲ್ಲಿ ಕಳೆದ ಐದಾರು ದಶಕಗಳಲ್ಲಿ ಕನ್ನಡದಲ್ಲಿ ಬಂದ ಪ್ರಮುಖ ವೈಚಾರಿಕ ಸಾಹಿತಿಗಳ ಜೀವನ ಸಾಧನೆ ಹಾಗೂ ಅವರ ವಿಚಾರಧಾರೆಯನ್ನು ಸಂಕ್ಷಿಪ್ತದಲ್ಲಿ ದಾಖಲಿಸಲಾಗಿದೆ.

ಹೀಗೆ ಈ ಕೃತಿ ಕನ್ನಡದಲ್ಲಿ ಇದುವರೆಗೆ ಬಂದ ವಿಚಾರ ಸಾಹಿತ್ಯದ ಮುಖ್ಯ ತಿರುಳನ್ನು ಅಚ್ಚುಕಟ್ಟಾಗಿ ಒಂದೆಡೆ ಸೇರಿಸಿ, ವಿವೇಚಿಸಿ ‘ವಿಚಾರದ ಔತಣ’ಕ್ಕೆ ಸಿದ್ದ ಪಡಿಸಿದ ಸತ್ವಯುತವಾದ ವ್ಯಂಜನವಾಗಿದೆ. ಓದುಗರ ಬುದ್ದಿಗೆ ಸಾಕಷ್ಟು ಮೇವು ಕೊಡುವ ಸಂಗ್ರಹ ಯೋಗ್ಯವಾದ ಕೃತಿ ಇದಾಗಿದೆ. ಈ ರೀತಿಯ ಇನ್ನೂ ಅನೇಕ ಮೌಲ್ಯಯುತ ಕೃತಿಗಳನ್ನು ರಚಿಸಿರುವ ಡಾ. ಉಪಾಧ್ಯರು, ಒಂದು ವಿಶ್ವವಿದ್ಯಾನಿಲಯದಲ್ಲಿ 'ಕನ್ನಡ ವಿಭಾಗದ ಮುಖ್ಯಸ್ಥ' ಎಂಬ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬೇಕೆಂಬುದಕ್ಕೆ ಮಾದರಿಯಾಗಿದ್ದಾರೆ. ಅವರ ಕನ್ನಡ ಕಟ್ಟುವ ಕೈಂಕರ್ಯ ಹೀಗೇ ನಿರ್ವಿಘ್ನವಾಗಿ ನಿರಂತರವಾಗಿ ಸಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ.


Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page