top of page

ಮನ ಸೆಳೆಯುವ ‘ಮಾಯಕದ ಸತ್ಯ’

  • vidyaram2
  • May 12, 2024
  • 4 min read

Updated: May 13, 2024


ಕನ್ನಡದ ಪ್ರಸಿದ್ಧ ಕತೆಗಾರರ ಸಾಲಿನಲ್ಲಿ ನಿಲ್ಲುವ ಮಿತ್ರಾ ವೆಂಕಟ್ರಾಜ ಅವರು ಮುಂಬೈಯ ಹೆಮ್ಮೆಯ ಲೇಖಕರು. ಕನ್ನಡಪ್ರಭ, ಉದಯವಾಣಿ, ಸುಧಾ, ತುಷಾರ, ಮಯೂರ, ದೇಶಕಾಲ ಮುಂತಾದ ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಅವರ ಅನೇಕ ಕತೆಗಳು ಪ್ರಕಟಗೊಂಡಿವೆ, ಪ್ರಕಟಗೊಳ್ಳುತ್ತಲಿವೆ. ಪ್ರಕಟಗೊಂಡ ಅನೇಕ ಕತೆಗಳು ಓದುಗರ ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿ ಅವರಿಗೆ ಪ್ರಶಸ್ತಿ, ಪುರಸ್ಕಾರಗಳನ್ನು ತಂದುಕೊಟ್ಟಿವೆ. ಇದುವರೆಗೆ ಮಿತ್ರಾ ಅವರ ಮೂರು ಕಥಾ ಸಂಕಲನಗಳು ಮತ್ತು ಒಂದು ಕಾದಂಬರಿ ಪ್ರಕಟಗೊಂಡಿವೆ. 


ಪ್ರಬುದ್ಧವಾದ ಚಿಂತನೆ, ತೀಕ್ಷ್ಣ ವೈಚಾರಿಕತೆ, ಮನುಷ್ಯ ಸ್ವಭಾವವನ್ನು ಆಳವಾಗಿ ಅವಲೋಕಿಸಿ ವಿಶ್ಲೇಷಿಸುವ ಜಾಣ್ಮೆ, ಮನುಷ್ಯ ಸಂಬಂಧಗಳನ್ನು ಎಳೆಎಳೆಯಾಗಿ ತೆರೆದಿಡುವ ಮನೋಧರ್ಮ, ಮನುಷ್ಯನ ಸುಪ್ತಪ್ರಜ್ಞೆಯನ್ನು ನವಿರಾಗಿ ಅನಾವರಣಗೊಳಿಸುವ, ಮಹಿಳಾ ಸಂವೇದನೆಗಳನ್ನು ಸೂಕ್ಷ್ಮವಾಗಿ ಹೊರಹಾಕುವ ಕಲೆ, ಅಭಿಪ್ರಾಯಗಳನ್ನು ಅತ್ಯಂತ ಮಿತವಾಗಿ ಸೂಚ್ಯವಾಗಿ ಅಭಿವ್ಯಕ್ತಿಸುವ ತಾಳ್ಮೆ, ವಿವೇಚನೆ, ಅಭಿವ್ಯಕ್ತಿಗೆ ಮೆರಗು ನೀಡುವ ಪ್ರೌಢ ಭಾಷೆ ಮತ್ತು ಕುಂದಗನ್ನಡದಲ್ಲಿ ಆಕರ್ಷಕ ನಿರೂಪಣಾ ಶೈಲಿ ಇವು ಮಿತ್ರಾ ಅವರ ಎಲ್ಲ ಕತೆಗಳಲ್ಲಿ ಗೋಚರಿಸುವ ಅಂಶಗಳು. ಬರವಣಿಗೆಯನ್ನು ಗಂಭೀರ ಕಾರ್ಯವೆಂದು ಪರಿಗಣಿಸುವ ಅವರು ಪ್ರತಿಯೊಂದು ಕತೆಯನ್ನೂ ಸಾಕಷ್ಟು ಚಿಂತನ, ಮಂಥನ ನಡೆಸಿಯೇ ರಚಿಸುತ್ತಾರೆ ಎಂಬುದು ಅವರ ಯಾವುದೇ ಕತೆಯನ್ನು ಓದಿದರೂ ವೇದ್ಯವಾಗುತ್ತದೆ. ತಮ್ಮ ಮನದ ಇಂಗಿತವನ್ನೆಲ್ಲ ಕತೆಯಲ್ಲಿ ಹರಿಯಬಿಡದೆ ಸಮರ್ಥವಾಗಿ ನಿಯಂತ್ರಿಸುವ, ತನ್ಮೂಲಕ ಓದುಗನ ಊಹೆಗೆ, ಚಿಂತನೆಗೆ ಸಾಕಷ್ಟು ವಿಚಾರಗಳನ್ನು ಉಳಿಸುವ ಕಲೆಯೇ ಕತೆಗಾರರಾಗಿ ಅವರ ಗೆಲುವು. 

 

‘ಮಾಯಕದ ಸತ್ಯ’ವು  ೨೦೧೨ರಲ್ಲಿ ಬೆಳಕು ಕಂಡ ಮಿತ್ರಾ ಅವರ ಮೂರನೆಯ ಕಥಾ ಸಂಕಲನವಾಗಿದೆ. ಇದು ಎಂಟು ಕತೆಗಳ ಗುಚ್ಛ. ಎಲ್ಲವೂ ಸ್ತ್ರೀ ಕೇಂದ್ರಿತ ಕತೆಗಳೇ ಆದರೂ ಸ್ತ್ರೀವಾದದ ವಿಜೃಂಭಣೆ ಅಥವಾ ಅಬ್ಬರ ಯಾವ ಕತೆಯಲ್ಲಿಯೂ ಕಾಣಿಸುವುದಿಲ್ಲ. ಅತ್ಯಂತ ನೈಜವಾಗಿ ನವಿರಾಗಿ ಹೆಣ್ಣಿನ ಭಾವನೆಗಳಿಗೆ, ಅವಳ ಕೋಮಲ ಅಂತರಂಗದ ತುಮುಲಗಳಿಗೆ ಮಿತ್ರಾ ಅವರು ಧ್ವನಿ ನೀಡಿದ್ದಾರೆ. ವಾಸ್ತವವಾಗಿ ನೋಡಿದರೆ, ಮಿತ್ರಾ ಅವರ ಉನ್ನತ ಮಟ್ಟದ ಮಾನವೀಯ ಪ್ರಜ್ಞೆಯೇ ಕತೆಗಳಲ್ಲಿ ಸ್ತ್ರೀಪರ ಕಾಳಜಿ, ನೊಂದವರ ಪರ ಸಹಾನುಭೂತಿ, ಸಾಮಾಜಿಕ-ಧಾರ್ಮಿಕ ಭಾವೈಕ್ಯದ ಹಂಬಲ...ಹೀಗೆ ವಿವಿಧ ರೂಪಗಳಲ್ಲಿ ಗೋಚರವಾಗುತ್ತದೆ.   

 

ಸಂಕಲನದ ಎಲ್ಲ ಕತೆಗಳೂ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪರಿಸರ ಅಥವಾ ಮುಂಬೈ ನಗರದ ಹಿನ್ನೆಲೆಯಲ್ಲಿ (backdrop) ಅರಳಿರುವವು. ದಕ್ಷಿಣ ಕನ್ನಡ ಮಿತ್ರಾ ಅವರ ಹುಟ್ಟೂರಾದರೆ ಮುಂಬೈ ಅವರ ಕರ್ಮಭೂಮಿ. ಹೀಗೆ ತಮಗೆ ಚಿರಪರಿಚಿತವಾದ ಪರಿಸರದ ಹಿನ್ನೆಲೆಯುಳ್ಳ ಕತೆಗಳನ್ನು, ಅವರು ಕಂಡುಂಡ ಅನುಭವಗಳಿಗೆ ತೆಳುವಾದ ಕಲ್ಪನೆಯ ರೆಕ್ಕೆ ಕೊಟ್ಟು  ರೂಪಿಸುವುದರಿಂದಲೇ ಅವರ ಕತೆಗಳು ವಾಸ್ತವವೆನ್ನಿಸುವ ಹಾಗೆ ಮೂಡಿಬರುತ್ತವೆ; ಇದರಿಂದಲೇ ಅವರ ಕತೆ ಮತ್ತು ಪಾತ್ರಗಳಿಗೆ ಗಟ್ಟಿತನ ಬರುತ್ತದೆ. 


ಮನದಲ್ಲಿ ಆಳವಾಗಿ ಬೇರೂರಿರುವ ಆಸೆ ಆಕಾಂಕ್ಷೆಗಳು ಈಡೇರದೆ ಹೋದಾಗ, ಅವುಗಳನ್ನು ಸೂಕ್ತವಾಗಿ ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಾಗದೆ ಹೋದಾಗ, ಹತಾಶೆಯಲ್ಲಿ ನೊಂದ ಸುಪ್ತ ಮನಸ್ಸು ನೋವಿನ ಅಭಿವ್ಯಕ್ತಿಗೆ ಯಾವ್ಯಾವ ಮಾರ್ಗವನ್ನು ಹುಡುಕಿಕೊಳ್ಳಬಹುದು ಎಂಬ ಮನೋವೈಜ್ಞಾನಿಕ ನೋಟವಿರುವ ಕತೆ ‘ಹಾಡೊಂದರ ಗುಂಗು’. ಇಲ್ಲಿಯ ಮುಖ್ಯ ಪಾತ್ರವಾದ ಹರ್ಷಿತಾ ರಾಜೆ ಮುಂಬೈಯ ಮೇಲ್ವರ್ಗದ ಆಧುನಿಕ ಕುಟುಂಬದಲ್ಲಿ ಜನಿಸಿದ ಸುಂದರ ಯುವತಿ. ತನ್ನ ಸೌಂದರ್ಯ, ಅದಕ್ಕೊಪ್ಪುವ ವೇಷ ಭೂಷಣಗಳಿಂದ ಸದಾ ಇತರರ ಗಮನ ಸೆಳೆಯುತ್ತಿದ್ದ ಅವಳಿಗೆ ಮದುವೆಯಾದ ಮೇಲೆ ಗಂಡನೂ ಸದಾ ತನಗೆ ಗಮನ ನೀಡಲಿ ಎಂಬ ಹಂಬಲವಿರುವುದು ಸಹಜವೇ. ಆದರೆ ಸದಾ ಕೆಲಸದ ಭಾರದಲ್ಲಿ ಮಗ್ನನಾಗಿ ಅವಳಿಗೆ ಸಮಯ ನೀಡಲಾರದ ಗಂಡ ಮತ್ತು ಅವಳು ಹುಟ್ಟಿ ಬೆಳೆದ ಪರಿಸರಕ್ಕಿಂತ ಕೆಳ ದರ್ಜೆ ಎನ್ನಿಸುತ್ತಿದ್ದ ಗಂಡನ ಮನೆಯ ಪರಿಸರ ಎರಡೂ ಅವಳಿಗೆ ನುಂಗಲಾರದ ತುತ್ತುಗಳಾಗುತ್ತಾವೆ. ಆದರೂ ಹೊಂದಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಸೊರಗುವ ಹರ್ಷಿತಾಳ ಸುಪ್ತಪ್ರಜ್ಞೆ ಭ್ರಮಾ ಲೋಕವನ್ನು ಸೃಷ್ಟಿಸಿ, ಅಲ್ಲೊಬ್ಬ ಪ್ರೇಮಿಯನ್ನು ಹುಟ್ಟುಹಾಕಿ ಅದರಲ್ಲಿ ಸಂತೋಷ ಪಡುವ ಮಾರ್ಗ ಹಿಡಿಯುತ್ತದೆ. ಆದರೆ ಅದು ತಾನು ಪತಿಗೆ ಮಾಡುವ ವಂಚನೆ ಎಂಬ ಅಪರಾಧಿ ಭಾವ ಅವಳ ಜಾಗೃತಪ್ರಜ್ಞೆಯಲ್ಲಿ ಮೂಡುತ್ತದೆ. ಹೀಗೆ ವಾಸ್ತವ ಮತ್ತು ಭ್ರಮೆಯ ನಡುವಿನ ದ್ವಂದ್ವಕ್ಕೆ ಸಿಲುಕಿ ಜರ್ಜರಿತಳಾಗಿ ಕೊನೆಗವಳು ಮನೋರೋಗಕ್ಕೆ ಬಲಿಯಾಗುತ್ತಾಳೆ. ಅವಳ ಜೊತೆ ತನ್ನ ಜೀವನವನ್ನು ಹಂಚಿಕೊಳ್ಳಬೇಕಾದ ಗಂಡನಿಗೆ ಅವಳ ಮನದ ಸರಳ, ಸಹಜ ಬಯಕೆಗಳು ಕೊನೆಗೂ ಅರಿವಾಗದೇ ಹೋಗುವುದು ದುರಂತ. ಕತೆ ಓದಿ ಮುಗಿದ ಮೇಲೆ ಓದುಗನನ್ನು ಅದೇ ಗುಂಗಿನಲ್ಲಿ ಖಿನ್ನನಾಗಿಸಿ, ಸುಖ ಜೀವನವೆಂದರೆ ಏನೆಂದು ಚಿಂತಿಸಿ ವಿಷಣ್ಣನಾಗಿಸುವುದು ಮಿತ್ರಾ ಅವರ ವೈಶಿಷ್ಟ್ಯ


ಅಮ್ಮನ ಆಟ’ ಕತೆಯೂ ಮನೋವೈಜ್ಞಾನಿಕ ಆಯಾಮವಿರುವ ‘ಅಮ್ಮ ಅಥವಾ ದೈವ ಮೈ ಮೇಲೆ ಬರುವ’ ಸ್ಥಿತಿಯೆಡೆಗೆ ಮಾರ್ಮಿಕ ನೋಟ ಬೀರುವ ವಿಶಿಷ್ಟವಾದ ಕತೆ. ಮೇಲೆ ಹೇಳಿದಂತೆ ಮನದಾಳದ ಒತ್ತಡಗಳನ್ನು, ತೀವ್ರವಾದ ಹಂಬಲ, ನೋವುಗಳಂತಹ ಭಾವಗಳನ್ನು ಹೊರಹಾಕಲು ಕೆಲವು ಜನರಲ್ಲಿ ಕೆಲವೊಮ್ಮೆ ಅವರ ಸುಪ್ತಪ್ರಜ್ಞೆಯು ಹೂಡುವ ಒಂದು ತಂತ್ರವೇ ಈ ‘ಮೈ ಮೇಲೆ ಬರುವ’ ವಿಶಿಷ್ಟ ಪ್ರಜ್ಞಾಸ್ಥಿತಿ ಅಥವಾ ಮನಸ್ಥಿತಿ. ಈ ಪ್ರಜ್ಞಾಸ್ಥಿತಿಯ ಸುತ್ತ ಹರಡಿರುವ ನಂಬಿಕೆ, ಆಚರಣೆಗಳನ್ನು ಸಮಾಜದ ಒಳಿತಿಗಾಗಿ ಉಪಯೋಗಿಸುವ ಆಧುನಿಕ ಮನೋಭಾವದ ಧರ್ಮದರ್ಶಿಯೊಬ್ಬರ ಮೂಲಕ ಒಂದು ಕುಟುಂಬದಲ್ಲಿ ತಲೆದೋರಿದ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿ ಸುಖಾಂತ್ಯಗೊಳಿಸುವುದು ಈ ಕತೆಯ ಆಶಯ. ಹತ್ತಾರು ವರ್ಷಗಳ ಕಾಲ ಮಕ್ಕಳಿಲ್ಲದ ಒಂದು ಹೆಣ್ಣು ತಾಯಿಯಾಗುವ ಭಾಗ್ಯಕ್ಕಾಗಿ ಪರಿತಪಿಸುವುದು, ಆಗ ಆಕಸ್ಮಿಕವಾಗಿ ಸಿಕ್ಕ ಒಂದು ಅನಾಥ ಮಗುವಿನ ಆರೈಕೆಯಲ್ಲಿ ಸಿಕ್ಕ ಶಾಂತಿ ನೆಮ್ಮದಿಗಳಿಂದ ದಂಪತಿಗೆ ಮಕ್ಕಳಾಗುವುದು, ನಂತರ ಮೊದಲು ಸಿಕ್ಕ ಅನಾಥ ಹೆಣ್ಣುಮಗು ಅವರಿಗೆ ಭಾರವೆನ್ನಿಸುವುದು, ಸಮಾಜವೂ ಅದಕ್ಕೆ ಕುಮ್ಮಕ್ಕು ಕೊಡುವುದು ಇಂತಹ ಹೆಣ್ಣಿನ ಹೃದಯ ತಂತಿಯನ್ನು ಮೀಟುವ ವಿಷಯಗಳನ್ನುಳ್ಳ ಕಥಾವಸ್ತು ಇಲ್ಲಿದೆ.


‘ಹೂವಿನ ಪೂಜೆ’ ಸ್ತ್ರೀಯರ ಸಲಿಂಗ ಕಾಮದ (ಲೆಸ್ಬಿಯನ್) ಸುತ್ತ ಹೆಣೆದ, ಅಂದಿನ ಕಾಲಕ್ಕೆ ‘ಬೋಲ್ಡ್’ ಎನ್ನಿಸಿದ್ದ ಅಪರೂಪದ ಕತೆ. ಇಪ್ಪತ್ತನೆಯ ಶತಮಾನದ ೬೦,೭೦ರ ದಶಕದಲ್ಲಿ ದಕ್ಷಿಣ ಕನ್ನಡದ ಗ್ರಾಮೀಣ ಪರಿಸರದ ಇಬ್ಬರು ಹೆಣ್ಣುಮಕ್ಕಳ ನಡುವೆ ಮೂಡಿದ ಇಂತಹ ಕಲ್ಪಿಸಲಸಾಧ್ಯವಾದ ಸಂಬಂಧವನ್ನು ಅವರಿಬ್ಬರೂ ಅಳಿದಮೇಲೆ ವಿಶ್ಲೇಷಿಸಿ ಅರಿಯುವುದು ಇಲ್ಲಿಯ ಕಥಾವಸ್ತು. ಕಥಾವಸ್ತುವಿನಷ್ಟೇ ಇಲ್ಲಿಯ ಕಥಾತಂತ್ರವೂ ಹೊಸತಾಗಿದೆ. ಸಮಾಜ ಒಪ್ಪದ ಅಂತಹ ಒಂದು ಸಂಬಂಧವನ್ನು ಕಡಿದುಹಾಕಿ ಅವರಿಬ್ಬರನ್ನು ಬೇರ್ಪಡಿಸುವ ಕುಟುಂಬದವರ ಪ್ರಯತ್ನಕ್ಕೆ ಸೋತು ಆ ಇಬ್ಬರು ಯುವತಿಯರು ಆತ್ಮಹತ್ಯೆಗೆ ಶರಣಾಗಿರುತ್ತಾರೆ. ಕತೆಯ ನಿರೂಪಕಿ ಇಂತಹ ಸೂಕ್ಷ್ಮಗಳನ್ನು ಅರಿಯದ ವಯಸ್ಸಿನ ಬಾಲಕಿಯಾಗಿದ್ದಾಗ, ಅವಳ ಕುಟುಂಬದಲ್ಲಿಯೇ ನಡೆದ ಆ ದುರಂತದ ಘಟನೆಯ ಪೂರ್ಣ ವಿವರಗಳನ್ನು ಅವಳು ಎಷ್ಟೋ ವರ್ಷಗಳ ನಂತರ ಅಮೇರಿಕಾದಲ್ಲಿ ನೆಲೆಸಿ, ಅಲ್ಲಿ ಅವಳ ವೃತ್ತಿ ಜೀವನದ ಸಹೋದ್ಯೋಗಿ ಗೆಳತಿಯರಿಬ್ಬರ ಅಂತಹುದೇ ಸಲಿಂಗ ಸಂಬಂಧವನ್ನು ನೋಡಿದ ಮೇಲೆ ಸ್ಪಷ್ಟವಾಗಿ ಅರಿಯುತ್ತಾಳೆ. ಒಂದು ದೇಶದಲ್ಲಿ ಒಂದು ಕಾಲದ ಸಮಾಜದಲ್ಲಿ ಅಮಾನ್ಯವಾಗಿದ್ದ ಮನುಷ್ಯ ಸಂಬಂಧವೊಂದು, ಬೇರೊಂದು ದೇಶ ಬೇರೊಂದು ಕಾಲದಲ್ಲಿ ಸಹಜವಾಗಿ ಸುಂದರವಾಗಿ ಅರಳಿರುವುದನ್ನು ಸಾಕ್ಷೀಕರಿಸುತ್ತಾ, ಹಿನ್ನೋಟದಲ್ಲಿ ಅಂದು ಇಬ್ಬರು ಯುವತಿಯರ ಬಾಳು ಅರಳುವ ಮುನ್ನವೇ ಮುರುಟಿಹೋದ ಕತೆಯನ್ನು ನಿರೂಪಿಸಿ ಓದುಗನ ಮನ ಮಿಡಿಯುವಂತೆ ಮಾಡುವ ಮಿತ್ರಾ ಅವರ ಕಥಾತಂತ್ರ ಅದ್ಭುತವಾಗಿದೆ. ಸಲಿಂಗ ಸಂಬಂಧವನ್ನು ತುಚ್ಛವೆಂದು ಆಡಿಕೊಳ್ಳುವ ಜನರಿದ್ದಂತೆಯೇ ಸಹಾನುಭೂತಿ ತೋರುವ ಜನರೂ ಸಮಾಜದಲ್ಲಿ ಕೆಲವರಾದರೂ ಸಹಜವಾಗಿಯೇ ಇರುತ್ತಾರೆ. ಇಂತಹ ಪಾತ್ರಗಳೆಲ್ಲವನ್ನೂ ಕಥಾಹಂದರದಲ್ಲಿ ನೈಜವಾಗಿ ತಂದು,  ಅಂದಿನ ಇಡೀ ಸಮಾಜದ ಚಿತ್ರಣವನ್ನು ಕಟ್ಟಿಕೊಟ್ಟಿರುವುದು ಕತೆಗೆ ಪೂರ್ಣತೆಯನ್ನು ಒದಗಿಸಿದೆ.


‘ಮಾಯಕದ ಸತ್ಯ’ ಕತೆಯು ದಕ್ಷಿಣ ಕನ್ನಡ ಗ್ರಾಮೀಣ ಪರಿಸರದ ಗುತ್ತಿನ ಮನೆಯೊಂದರಲ್ಲಿ ಪತಿ, ಪತ್ನಿ, ಸೋದರಮಾವ ಹಾಗೂ ಗೆಳೆಯನಂತಹ ಸಂಬಂಧಗಳ ನಡುವೆ ನಡೆಯುವ ಮೋಹ, ಮತ್ಸರ, ಸೇಡಿನ ಸಂಘರ್ಷದ ಕತೆ. ಪತ್ನಿಯ ರೂಪ ಲಾವಣ್ಯಗಳನ್ನು ಮೋಹಿಸಿ ಅವಳನ್ನು ಪಡೆಯುವ ಕಾಮನೆ ಹೊಂದಿದ ಸ್ನೇಹಿತ ಮತ್ತು ಮಾವ, ಅವಳನ್ನು ರಕ್ಷಿಸುವ ಸಲುವಾಗಿ ಹೋರಾಡಿದ ಪತಿ…ಈ ನಾಲ್ಕೂ ಜನರ ಸಾವಿನಲ್ಲಿ ಅಂತ್ಯ ಕಾಣುವ ಕರಾಳವಾದ ಕತೆಯನ್ನು ಹೊರಗಿನ ಮೂರು ಜನ ತಮ್ಮ ತಮ್ಮ ದೃಷ್ಟಿಯಿಂದ ಮೂರು ರೀತಿಯಲ್ಲಿ ನಿರೂಪಿಸುವ ಕುತೂಹಲಕಾರಿ ತಂತ್ರವಿರುವ ಕತೆಯಿದು. ಪತ್ನಿಯ ಸಾವಿನ ಕುರುಹು ಸಿಗದೇ ಹೋದದ್ದು ಜನರ ಬಾಯಲ್ಲಿ ಹುಟ್ಟುವ ರೋಚಕ ಕತೆಗಳಿಗೆ ಇನ್ನಷ್ಟು ಕಲ್ಪನೆಯ ರೆಕ್ಕೆಪುಕ್ಕಗಳು ಬೆಳೆಯಲು ಪೋಷಣೆ ಒದಗಿಸುತ್ತದೆ. ಅವಳು ದುಷ್ಟನ ಸಂಹಾರ ಮಾಡಿ ಮಾಯಕವಾಗಿ ದೈವವಾದಳೆಂಬ ಕತೆಯೂ ಹುಟ್ಟುವುದು ದಕ್ಷಿಣ ಕನ್ನಡದ ದೈವ, ಭೂತಗಳ ವಿಶಿಷ್ಟ ಪರಂಪರೆಯ ಮಿಂಚು ನೋಟವನ್ನು  ನೀಡಿದಂತೆನಿಸುತ್ತದೆ.  ಮಾಯಕದ ಸತ್ಯವು ಏನೆಂದು ಕೊನೆಯಲ್ಲಿ ಅನಾವರಣವಾಗಿ ಕುತೂಹಲಕ್ಕೆ ತೆರೆ ಬೀಳುತ್ತದಾದರೂ ಯಾರು ಯಾರ ಕೊಲೆ ಮಾಡಿರಬಹುದು ಎಂಬ ತರ್ಕವು ಓದುಗನ ಕಲ್ಪನೆಯನ್ನು ಅವಲಂಬಿಸುತ್ತದೆ. 


ಬಿಳಿ ನೈಲಾನು ಸೀರೆ’ ಕತೆಯು ಗ್ರಾಮೀಣ ಪರಿಸರದ ಕ್ರೈಸ್ತ ಕುಟುಂಬದ ಹೆಣ್ಣುಮಕ್ಕಳ ಕತೆ. ತಂದೆಯ ಬೇಜವಾಬ್ದಾರತನದಿಂದಾಗಿ ಕುಟುಂಬದ ಜವಾಬ್ದಾರಿ ಹೊರುವ ಹಿರಿಯ ಮಗಳು, ತಾನು ದುಡಿಯುತ್ತಾ, ಮದುವೆಯಾಗದೇ ಉಳಿದು, ಕುಟುಂಬಕ್ಕಾಗಿ ತನ್ನ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿ, ತಂಗಿ-ತಮ್ಮಂದಿರು ಸಂಸಾರಭಾಗ್ಯ ಕಾಣುವಂತೆ ಮಾಡುವಂತಾಗುತ್ತಿದ್ದುದು ಕೆಲವು ಕುಟುಂಬಗಳಲ್ಲಿ ಸಾಮಾನ್ಯವಾಗಿದ್ದ ೬೦,೭೦ರ ದಶಕದಲ್ಲಿ ನಡೆಯುವ ಕತೆಯಿದು. ಇಲ್ಲಿಯೂ ಸುಪ್ತ ಮನಸ್ಸಿನ ಪ್ರೀತಿ, ಅಸೂಯೆ, ಮತ್ಸರ ಮುಂತಾದ ಸೂಕ್ಷ್ಮ ಭಾವಗಳ ನೈಜ ಅನಾವರಣವಾಗುತ್ತದೆ. ವಿಭಿನ್ನ ಧರ್ಮದ, ವಿಭಿನ್ನ ಅರ್ಥಿಕ ಸ್ತರದ ಜನರು ನೆರೆಹೊರೆಯಾಗಿ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಅನ್ಯೋನ್ಯವಾಗಿ ಬದುಕುವ ಸಂತುಲಿತ ಸಮಾಜದ ಚಿತ್ರಣವೂ ಇಲ್ಲಿ ದೊರೆಯುತ್ತದೆ.


ಇನ್ನುಳಿದ 'ಸೋಫಿ ಕಟ್ಟಿದ ಮನೆ', 'ಹದ್ದಿನ ನೆರಳಲ್ಲಿ' ಹಾಗೂ'ಬಾಬಿಯಕ್ಕ' ಕತೆಗಳೂ ವಿಭಿನ್ನ ಕಥಾವಸ್ತುಗಳನ್ನು ಹೊಂದಿದ್ದು, ವಿಶಿಷ್ಟವಾದ ರೀತಿಯಲ್ಲಿ ವ್ಯಾಮೋಹ, ಸ್ವಾರ್ಥ, ಭೀತಿ, ದಿಟ್ಟತನ ಮುಂತಾದ ಮನುಷ್ಯನ ವಿವಿಧ ಸ್ವಭಾವಗಳು ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುವ, ಕೆಲವೊಮ್ಮೆ ವ್ಯಾವಹಾರಿಕವಾಗಿ ಮಾರ್ಪಡುವ ಸಂಬಂಧಗಳನ್ನು ಪದರು ಪದರಾಗಿ ತೆರೆದಿಡುತ್ತಾ ಮಿತ್ರಾ ಅವರ ಅನನ್ಯವಾದ  ಛಾಪನ್ನು ತೋರುತ್ತವೆ. 


ಹೀಗೆ ಎಂಟು ವಿಭಿನ್ನ ಕಥಾವಸ್ತುಗಳನ್ನು ತಾಳ್ಮೆಯಿಂದ ವಿಭಿನ್ನ ಕಥಾತಂತ್ರಗಳ ಸಹಾಯದಿಂದ ಅಚ್ಚುಕಟ್ಟಾಗಿ ಹೆಣೆದಿರುವ ಮಿತ್ರಾ ವೆಂಕಟ್ರಾಜ ಅವರು, ಸಾಮಾನ್ಯವಾಗಿ ಎಲ್ಲ ಕತೆಗಳ ಅಂತ್ಯದಲ್ಲಿ ಓದುಗನನ್ನು ಒಂದು ವಿಷಾದಾಂಚಿತ ಭಾವದಲ್ಲಿ ಮುಳುಗಿಸುತ್ತಾರೆ. ಬೆನ್ನುಡಿಯಲ್ಲಿ ತುಳಸಿ ವೇಣುಗೋಪಾಲ ಅವರು ಹೇಳಿರುವಂತೆ ‘ಛಕ್ಕೆಂದು ಹೊಳೆದು ಓದಿನ ತಪಸ್ಸನ್ನು ಕೃತಾರ್ಥಗೊಳಿಸುವ ಕತೆಗಾರಿಕೆ’ ಅವರದ್ದು. ಕತೆ ಹೇಳುವ ಕಲೆಯ ಮೇಲೆ ವಿಶಿಷ್ಟವಾದ ಹಿಡಿತ ಸಾಧಿಸಿರುವ ಅವರಿಂದ ಇನ್ನಷ್ಟು ಮತ್ತಷ್ಟು ಒಳ್ಳೆಯ ಕತೆ, ಕಾದಂಬರಿಗಳು ಕನ್ನಡ ಸಾರಸ್ವತ ಲೋಕಕ್ಕೆ ದೊರಕುವಂತಾಗಲಿ ಎಂಬುದೇ ಕನ್ನಡ ಕಥಾಪ್ರೇಮಿಗಳ ಹಾರೈಕೆ.

Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page