top of page

ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

  • vidyaram2
  • Jul 17, 2025
  • 2 min read

‘ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ’ ಎಂಬ ಬಸವಣ್ಣನವರ ವಚನದ ಒಂದು ಮಾರ್ಮಿಕ ಸಾಲನ್ನು ನೆನಪಿಸುವ ಆಕರ್ಷಕ ಶೀರ್ಷಿಕೆಯನ್ನು ಹೊತ್ತ ಕಾದಂಬರಿ ಡಾ.ಬಿ.ಜನಾರ್ದನ ಭಟ್ಟರ ‘ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ’. ಅಂಕಿತ ಪ್ರಕಾಶನದಿಂದ 2025ರಲ್ಲಿ ಪ್ರಕಟಗೊಂಡ ಈ ಕೃತಿಯು ಭಟ್ಟರ ಎಂಟನೆಯ ಕಾದಂಬರಿಯಾಗಿದೆ. ವೃತ್ತಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿರುವ ಭಟ್ಟರು ಬಹುಭಾಷಾ ಕೋವಿದರು. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಆಳವಾದ ಪಾಂಡಿತ್ಯ ಹೊಂದಿರುವ ಅವರು ವಿಮರ್ಶಕ ಮತ್ತು ಅನುವಾದಕರಾಗಿ ಖ್ಯಾತನಾಮರಾಗಿರುವರಾದರೂ ಸೃಜನಶೀಲ ಸಾಹಿತ್ಯಪ್ರಕಾರಗಳಲ್ಲಿ, ಅದರಲ್ಲೂ ಕಾದಂಬರಿ ಪ್ರಕಾರದಲ್ಲಿ ಒಲವುಳ್ಳವರು. ತಮ್ಮ ಅನಿಸಿಕೆ, ಅನುಭವಗಳನ್ನು ಅಭಿವ್ಯಕ್ತಿಸಲು ಕಾದಂಬರಿ ಸಾಹಿತ್ಯವೇ ಸೂಕ್ತವಾದ ಆಯ್ಕೆಯೆಂದು ಪರಿಗಣಿಸುವ ಅವರು ಇ

ದುವರೆಗೆ ರಚಿಸಿರುವ ಕಾದಂಬರಿಗಳೆಲ್ಲ ವಿಷಯ ವೈವಿಧ್ಯದಿಂದ ಓದುಗರ ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿವೆ. 


ಒಮ್ಮೆ ಹಿಡಿದರೆ ಮುಗಿಸುವ ತನಕವೂ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುವ ಈ ಕಾದಂಬರಿಯು ಗಾತ್ರದಲ್ಲಿ ಸಣ್ಣದಾದರೂ ನಮ್ಮ ಪರಂಪರೆ, ಸಂಸ್ಕೃತಿಗಳ ಜೊತೆಗೆ ಭಾರತದ ಇತಿಹಾಸ, ಜಾಗತಿಕ ಇತಿಹಾಸದ ಕೆಲವು ಮುಖ್ಯ ವಿದ್ಯಮಾನಗಳನ್ನು ತನ್ನೊಳಗೆ ತುಂಬಿಕೊಂಡು ವಿಶಾಲವಾದ ವ್ಯಾಪ್ತಿಯನ್ನು ಗಳಿಸಿದೆ. ಭಟ್ಟರ ವಿಶೇಷ ಆಸಕ್ತಿಯ ಧಾರೆಯಾದ ಸಾಂಸ್ಕೃತಿಕ-ಐತಿಹಾಸಿಕ ಕಥನದ ಮಾದರಿಯಲ್ಲಿ ಮೂಡಿಬಂದಿರುವ ಈ ಕಾದಂಬರಿಯಲ್ಲಿ ಸ್ವಾತಂತ್ರ್ಯ ಪೂರ್ವದ ಮತ್ತು ನಂತರದಲ್ಲಾದ ಸ್ಥಿತ್ಯಂತರದ ಚಿತ್ರಣ, ಅಂದಿನ ಸಮಾಜವು ಎದುರಿಸಿದ ಸವಾಲುಗಳು (ಮತಾಂತರ, ಪ್ರತಿಭಾ ಪಲಾಯನ, ಪಲ್ಲಟಗೊಂಡ ಶಿಕ್ಷಣ ವ್ಯವಸ್ಥೆ, ಮಹಿಳೆಯರ ಅಭಿಪ್ರಾಯಕ್ಕೆ ಬೆಲೆಯಿಲ್ಲದಿರುವುದು ಇತ್ಯಾದಿ) ಭಾರತದ ಅಧ್ಯಾತ್ಮ ಸಾಧಕರ ಪರಂಪರೆ,  ವೇದಾಧ್ಯಯನ, ಜ್ಯೋತಿಷ್ಯ, ಕವಡೆ ಶಾಸ್ತ್ರ ಇಂತಹ ವೈವಿಧ್ಯಮಯ ವಿಷಯಗಳನ್ನು ಸರಿತಪ್ಪೆಂಬ ಕೆಂಗಾಜಿನ ಮೂಲಕ ನೋಡದೇ ನಿರ್ಲಿಪ್ತಿಯಿಂದ ವಸ್ತುನಿಷ್ಠವಾಗಿ ವಿದ್ಯಮಾನಗಳ ದಾಖಲೆಗೆಂಬಂತೆ ಚಿತ್ರಿಸಿರುವುದು ಒಂದು ವೈಶಿಷ್ಟ್ಯ. ಹಾಗೆಂದು ಇದು ಕೇವಲ ವಿದ್ಯಮಾನಗಳ ಶುಷ್ಕ ದಾಖಲೀಕರಣದಂತಿರದೆ ಕೊನೆಯವರೆಗೂ ಆಸಕ್ತಿಯನ್ನು ಕೆರಳಿಸುತ್ತ ಸಾಗುವ ಲವಲವಿಕೆಯ ಕಥಾವಸ್ತುವನ್ನು ಹೊಂದಿರುವ ಕಾದಂಬರಿಯಾಗಿದೆ.  


“ಒಟ್ಟು ಕಾದಂಬರಿಯ ಸಮಸ್ಯೆ ವ್ಯಕ್ತಿ ಚೈತನ್ಯ ಮತ್ತು ಸಮಾಜದ ಕೌಟುಂಬಿಕ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಪೇಕ್ಷೆಗಳ ನಡುವಿನ ತಾಕಲಾಟದಲ್ಲಿದೆ. ಹಾಗಾಗಿ ಈ ಆಧ್ಯಾತ್ಮಿಕತೆ ಮತ್ತು ನಂಬಿಕೆಗಳನ್ನು ಉದ್ದಕ್ಕೂ ಬಳಸಿಕೊಂಡಿದ್ದೇನೆ” ಎಂದು ಲೇಖಕರೇ ಕೃತಿಯ ಆರಂಭದಲ್ಲಿ (‘ಲೇಖಕನ ಮಾತು’ ಅಧ್ಯಾಯ) ಹೇಳಿರುವಂತೆ, ಉನ್ನತ ಬೌದ್ಧಿಕ ಮಟ್ಟವನ್ನು ಹೊಂದಿ, ಅಪರೂಪದ ಸಾಧಕರಾಗಿದ್ದ ಡಾ.ಅನಂತರಾಮ ಉಡುಪರೆಂಬ ವ್ಯಕ್ತಿಯೊಬ್ಬರ ಜೀವನದ ಜಾಡನ್ನು  ಅವರ ದೇಹತ್ಯಾಗವಾದ ಸುಮಾರು ಎರಡು ದಶಕಗಳ ನಂತರದಲ್ಲಿ ಚಿತ್ರಿಸುವ ಈ ಕಾದಂಬರಿಯ ಕಥಾಹಂದರವು ಅವರ ವೈವಿಧ್ಯಮಯವಾದ ಬದುಕಿನ ಸುತ್ತ ಸುತ್ತುತ್ತಲೇ ಓದುಗರಿಗೆ ಮೇಲೆ ಹೇಳಿದ ಅನೇಕ ಪಾರಂಪರಿಕ, ಐತಿಹಾಸಿಕ ವಿದ್ಯಮಾನಗಳನ್ನು ಅರಹುತ್ತದೆ. “ವಸಾಹತುಶಾಹಿ ಸಂದರ್ಭದಲ್ಲಿನ ನಮ್ಮ ಸ್ಥಿತಿಗತಿ, ಶಿಕ್ಷಣ ವ್ಯವಸ್ಥೆ, ಮತಾಂತರ, ಅದರಿಂದ ಸಮಾಜದಲ್ಲಿ ಹೊಸ ವಿನ್ಯಾಸ ರೂಪುಗೊಂಡ ರೀತಿ, ವ್ಯಕ್ತಿ ವಿಕಾಸದ ಹಾದಿ, ಅಲ್ಲಿನ ಅಡೆತಡೆ, ಮಹತ್ವಾಕಾಂಕ್ಷೆ, ಪ್ರತಿಭಾ ಪಲಾಯನ, ಅನಾಥ ಪ್ರಜ್ಞೆ, ಜಾಗತಿಕ ರಾಜಕಾರಣ, ಮಹಾಯುದ್ಧ, ದೇಶದ ಸ್ವಾತಂತ್ರ್ಯ ಹೋರಾಟದ ವಿವಿಧ ಘಟ್ಟಗಳು, ವರ್ತಮಾನದ ತವಕ ತಲ್ಲಣಗಳ ಚಿತ್ರಣಗಳೆಲ್ಲ ಈ ಕಾದಂಬರಿಯಲ್ಲಿ ಹಾಸುಹೊಕ್ಕಾಗಿರುವುದರಿಂದ ಇದು ಒಂದು ರೀತಿಯಲ್ಲಿ ಸಂಕೀರ್ಣವಾದ ಕಲಾಕೃತಿಯೂ ಆಗಿದೆ. ವಾಸ್ತವ- ಆದರ್ಶ, ವ್ಯಕ್ತಿ- ಸಮಾಜ, ಪರಂಪರೆ- ಆಧುನಿಕತೆ, ದೇಹ -ಮನಸ್ಸು ಅಂತರಂಗ ಬಹಿರಂಗ ಹೀಗೆ ಹಲವು ದ್ವಂದ್ವ ಸಂಘರ್ಷಗಳ ಮುಖಾಮುಖಿ ಇಲ್ಲಿ ಕಾಣುತ್ತದೆ.  ಒಂದು ಕಾಲದ ಸಾಧಕರ ಬದುಕಿನ ಕ್ರಮ, ಅವರ ಉದಾತ್ತತೆ, ದೌರ್ಬಲ್ಯ,  ಸಾಮಾಜಿಕ ನಡಾವಳಿ ಮೊದಲಾದ ಅಂಶಗಳ ವಿಶ್ಲೇಷಣೆಯೂ ಇಲ್ಲಿದೆ” ಎಂದು ಪ್ರೊ.ಜಿ.ಎನ್.ಉಪಾಧ್ಯರು ಮುನ್ನುಡಿಯಲ್ಲಿ ಸೂಕ್ತವಾಗಿ ಗುರುತಿಸಿದ್ದಾರೆ. 


ಭಾರತವು ವಸಾಹತುಶಾಹಿ ಆಳ್ವಿಕೆಯಲ್ಲಿದ್ದ ಕಾಲದಲ್ಲಿ ಉಡುಪಿಯ ಸಮೀಪದ ಹಳ್ಳಿಯಲ್ಲಿ ಜನಿಸಿದ ಉಡುಪರು ಯೌವನದಲ್ಲಿ ಮನೆಯನ್ನು ತೊರೆದು ಉನ್ನತ ಜ್ಞಾನ, ಅದಕ್ಕೆ ತಕ್ಕ ಮನ್ನಣೆ, ಉತ್ತಮ ಬದುಕುಗಳನ್ನು ಅರಸಿ  ಸಿಲೋನ್, ಜರ್ಮನಿ ಮುಂತಾದ ಕಡೆಗಳಲ್ಲಿ ವಿದ್ಯಾರ್ಜನೆ ಮಾಡಿ, ಜರ್ಮನಿಯಲ್ಲಿಯೇ ನೆಲೆಸಿ, ಕೀರ್ತಿ ಗಳಿಸಿ, ಮುಂದೆ ಸುಭಾಸ್ ಚಂದ್ರ ಬೋಸ್ ಅವರೊಂದಿಗೆ ಸಂಪರ್ಕ ಹೊಂದಿ, ಹೊರದೇಶದಲ್ಲಿದ್ದುಕೊಂಡೇ ಪತ್ರಿಕಾ ಮಾಧ್ಯಮದ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟದ ಪರವಾಗಿ ಕೆಲಸ ಮಾಡುತ್ತ, ಎರಡನೆಯ ಮಹಾಯುದ್ಧದಲ್ಲಿ ಜರ್ಮನಿಯು ಸೋಲನ್ನನುಭವಿಸಿದ ನಂತರ ಅಲ್ಲಿ ಸಂಕಷ್ಟಕ್ಕೆ ಸಿಲುಕಿ, ಸ್ವತಂತ್ರ ಭಾರತಕ್ಕೆ ಹಿಂತಿರುಗಿ, ಇಲ್ಲಿಯೂ ಅವರ ಪ್ರತಿಭೆಗೆ ಮನ್ನಣೆ ಸಿಗದೇ, ಹಿಮಾಲಯದ ಸಾಧುವಿನ ಸಂಗದಲ್ಲಿ ಅವರ ಬದುಕಿನ ಕೊನೆಗಾಲವನ್ನು ಕಳೆಯುತ್ತಾರೆ. ಅವರು ತುಳಿದ ಜಾಡನ್ನು ಶೋಧಿಸುವಲ್ಲಿ ದೇಹವಿಲ್ಲದ ಉಡುಪರ ಪ್ರಜ್ಞೆಯು ಅಲ್ಲಲ್ಲಿ ಒದಗಿಬರುವಂತೆ ಬಳಸಿರುವ ತಂತ್ರವು ಬಹಳವೇ ಆಕರ್ಷಕವಾಗಿದೆ. ಪಾತ್ರ ಚಿತ್ರಣವೂ ನೈಜವಾಗಿ ಮೂಡಿಬಂದಿದೆ. ಅದೃಶ್ಯರೂಪೀ ಉಡುಪರ ಸಾಕ್ಷೀಭಾವದಿಂದಲೇ ಕುತೂಹಲ ಕೆರಳಿಸುವಂತೆ ಆರಂಭವಾಗುವ ಕಾದಂಬರಿಯು ಕೊನೆಯಲ್ಲಿ ಅವರ ಸ್ಮಾರಕವಾಗಿ ಅವರ ಮನೆಯಲ್ಲಿ ಫ್ರೇಮ್ ಹಾಕಿಸಿ ತೂಗುಹಾಕುವ ಪಟವು ಹಿಟ್ಲರನ ಆತ್ಮಕಥೆಯ ಜಪಾನೀ ಅನುವಾದದ ಪುಸ್ತಕದ ತಲೆಕೆಳಗಾದ ಮುಖಪುಟ ಎಂಬ ಸ್ವಾರಸ್ಯಕರ ಅಂಶದಿಂದ ಸೊಗಸಾಗಿ ಮುಕ್ತಾಯವಾಗಿದೆ. ಆ ಜಪಾನೀ ಪುಸ್ತಕದ ಬರಹವನ್ನೇ ಕಾದಂಬರಿಯ ಮುಖಪುಟದಲ್ಲೂ ಹಾಕಿರುವುದು ವಿಶೇಷ. 


ನಮಗೆ ಗೊತ್ತಿಲ್ಲದ ವಿಷಯವನ್ನು ಸತ್ಯವೆಂದು ನಂಬುವುದು ಮೌಢ್ಯವಾದರೆ, ಅದನ್ನು ಸುಳ್ಳೆಂದು ನಂಬುವುದೂ ಮೌಢ್ಯವೇ ಆಗುತ್ತದೆ. ದೇಹಾತೀತ ಪ್ರಯಾಣ (ಆಸ್ಟ್ರಲ್ ಟ್ರಾವೆಲ್)ದಂತಹ ನಮ್ಮ ಅರಿವಿಗೂ ಅನುಭವಕ್ಕೂ ಬಾರದ ಅತೀಂದ್ರಿಯ ಸಾಧನೆಗಳ  ವಿಷಯವನ್ನು ವಾಸ್ತವವೇ ಅಲ್ಲವೆಂದು ಸಾರಾಸಗಟಾಗಿ ನಿರಾಕರಿಸದೆ, ಪರಂಪರೆಯಿಂದ ಬಂದ ನಂಬಿಕೆಗಳನ್ನು ಸುಳ್ಳೆಂದು ಸಾಧಿಸದೆ, ಅಂತಹ ನಂಬಿಕೆಗಳನ್ನು ದುರುಪಯೋಗಪಪಡಿಸಿಕೊಳ್ಳುವ ಚಿತ್ರಣವನ್ನು ಸಿದ್ಧು ಸೆಟ್ಟಿಯ ಸಾವಿನ ಪ್ರಕರಣದ ಮೂಲಕ ತೋರಿಸಿರುವ ಲೇಖಕರು ಜ್ಯೋತಿಷ್ಯ, ಕವಡೆ ಶಾಸ್ತ್ರ ಮುಂತಾದ ವಿದ್ಯೆಗಳ ಶಕ್ತಿಯನ್ನೂ ಅಲ್ಲಗಳೆಯದೆ, ಇಂತಹ ವಿಷಯಗಳ ಕುರಿತು ತಮ್ಮ ಅಭಿಪ್ರಾಯ, ನಂಬಿಕೆಯನ್ನು ಓದುಗರ ಮೇಲೆ ಒಂದಿಷ್ಟೂ ಹೇರದಂತೆ ನಾಜೂಕಾಗಿ ಸಮತೋಲನ ಸಾಧಿಸಿದ್ದಾರೆ. ಭಿನ್ನ ಪರಿಯ ಈ ಕಾದಂಬರಿಗಾಗಿ ಜನಾರ್ದನ ಭಟ್ಟರಿಗೆ ಅಭಿನಂದನೆಗಳು.

Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page