ಮನ ಕಲಕುವ ‘ಮೂರು ದಾರಿಗಳು’
- vidyaram2
- May 3, 2024
- 5 min read
Updated: May 13, 2024

ಕನ್ನಡದ ಖ್ಯಾತ ಕತೆಗಾರ ಹಾಗೂ ಕಾದಂಬರಿಕಾರರಲ್ಲಿ ಒಬ್ಬರಾದ ಯಶವಂತ ಚಿತ್ತಾಲರು ಮುಂಬೈಯ ಹೆಮ್ಮೆಯ ಕನ್ನಡ ಲೇಖಕರು. ಉತ್ತರಕನ್ನಡ ಜಿಲ್ಲೆಯವರಾದ ಚಿತ್ತಾಲರು ಅವರ ಅನೇಕ ಕತೆ, ಕಾದಂಬರಿಗಳಲ್ಲಿ ಬಹಳ ನೈಜವಾಗಿ ಉತ್ತರ ಕನ್ನಡದ ಜನಜೀವನವನ್ನು ಚಿತ್ರಿಸಿದ್ದಾರೆ. ‘ಮೂರು ದಾರಿಗಳು’ ಚಿತ್ತಾಲರ ಮೂರನೆಯ ಸಾಹಿತ್ಯ ಕೃತಿ, ಮೊದಲ ಕಾದಂಬರಿ. ೧೯೬೪ರಲ್ಲಿ ಪ್ರಕಟವಾದ ಈ ಕಾದಂಬರಿಯ ಕತೆ ಮನಸ್ಸಿನಲ್ಲಿ ಹೊಳಹು ಹಾಕಿದ್ದು ಅದಕ್ಕಿಂತ ಹತ್ತು ವರ್ಷಗಳ ಹಿಂದೆಯೇ ಆದರೂ, ಬರೆಯಲು ಪ್ರಾರಂಭಿಸಿದ್ದು ಮೂರು ವರ್ಷಗಳ ಹಿಂದೆ ಎಂದು ಮುನ್ನುಡಿಯಲ್ಲಿ ಚಿತ್ತಾಲರು ಸ್ಮರಿಸಿದ್ದಾರೆ. ಮನದಲ್ಲಿ ಮೂಡಿದ ಕತೆಯ ಹೊಳಹೊಂದನ್ನು ಮಥಿಸಿ ಮಥಿಸಿ ಉತ್ತಮವಾದ ಕಾದಂಬರಿಯಾಗಿಸಲು ಅವಸರಿಸದೇ ಅದಕ್ಕೆ ಸಾಕಷ್ಟು ಸಮಯ, ಮನಸ್ಸು, ಶ್ರಮ ಎಲ್ಲವನ್ನೂ ಅವರ ಧಾರೆ ಎರೆದಿದ್ದಾರೆ ಎನ್ನುವುದು ಕಾದಂಬರಿಯನ್ನು ಓದಿದಾಗ ಅರಿವಾಗುತ್ತದೆ.
‘ಹನೇಹಳ್ಳಿ, ಸಾವಿನ ನಿಗೂಢತೆ, ನಮ್ಮೊಳಗಿನ ಮನುಷ್ಯನನ್ನು ಹುಡುಕುವ ಪ್ರಯತ್ನ - ಇದು ನನ್ನ ಸಾಹಿತ್ಯದ ಆರಂಭದ ದಿನಗಳಿಂದಲೂ ನನ್ನ ಆಸ್ಥೆಗೆ ಒಳಪಟ್ಟ ವಿಷಯ’ ಎಂದು ಅವರೇ ಹೇಳಿಕೊಂಡಿರುವಂತೆ ಈ ಕಾದಂಬರಿಯೂ ಆ ವಿಷಯಗಳ ಸುತ್ತಲೇ ಹೆಣೆದದ್ದಾಗಿದೆ. ಡಾರ್ವಿನ್, ಫ್ರಾಯ್ಡ್ , ಕಾರ್ಲ್ ಯುಂಗ್, ಕಾರ್ಲ್ ಮಾರ್ಕ್ಸ್, ಟಾಲ್ಸ್ಟಾಯ್, ಕಾಫ್ಕಾ, ದಾಸ್ತೋವಸ್ಕಿ ಮುಂತಾದ ಧೀಮಂತರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಚಿತ್ತಾಲರು ತಮ್ಮ ಕತೆ, ಕಾದಂಬರಿಗಳಲ್ಲಿ ಮಾನವತಾವಾದ, ಮನೋವಿಜ್ಞಾನಗಳ ಹಿನ್ನೆಲೆಯಲ್ಲಿ ಮನುಷ್ಯನ ಸ್ವಭಾವ ಮತ್ತು ಅವನ ಆಂತರಿಕ ಅನುಭವಗಳ ವಿಶ್ಲೇಷಣೆ ಮಾಡುತ್ತಾ, ಅಂತಹ ಅನುಭವಗಳ ಮೂಲಕ ಸಮಾಜದ ಪ್ರತಿಬಿಂಬವನ್ನು ಕಾಣಲು ಪ್ರಯತ್ನಿಸುತ್ತಾ ಬಂದವರು. ‘ಮೂರು ದಾರಿಗಳು’ ಸಹ ಮಾನವನ ಮನಸ್ಸಿನ ಸಂಕೀರ್ಣತೆಯನ್ನು, ಅಲ್ಲಿ ನಡೆಯುವ ಮಾನಸಿಕ ತುಮುಲಗಳನ್ನು ವಿಶ್ಲೇಷಿಸುವ ನವ್ಯ ಶೈಲಿಯ ಕಾದಂಬರಿಯಾಗಿದೆ.
ಒಂದು ಸಮಸ್ಯೆಯನ್ನು ಬಿಡಿಸಲು ಮೂರು ಭಿನ್ನ ಪ್ರಕೃತಿಯ ವ್ಯಕ್ತಿಗಳು ಕಂಡುಕೊಂಡ ದಾರಿಗಳು, ಅವರು ಸಮಸ್ಯೆಯನ್ನು, ತನ್ಮೂಲಕ ಬದುಕನ್ನು ಎದುರಿಸುವ ರೀತಿ ಮತ್ತು ಈ ಮೂರು ವ್ಯಕ್ತಿತ್ವಗಳ, ದಾರಿಗಳ ಸಂಘರ್ಷದಿಂದ ಉಂಟಾದ ಪರಿಣಾಮ - ಈ ಕಥಾವಸ್ತುವನ್ನು ಕಾದಂಬರಿಯು ತನ್ನ ಸಮಕಾಲೀನ (೧೯೬೦-೭೦ರ ದಶಕದ) ಉತ್ತರ ಕನ್ನಡದ ಸಾಮಾಜಿಕ, ಕೌಟುಂಬಿಕ ಜೀವನದ ಸೂಕ್ಷ್ಮಗಳ ಚಿತ್ರಣ, ಆ ಸಮಾಜವು ಒಳಗೊಂಡ ವಿವಿಧ ಜನರ ಮನೋಧರ್ಮ, ಅಂತರಂಗಗಳ ವಿಶ್ಲೇಷಣೆಯ ಮೂಲಕ ಆಡುಭಾಷೆಯ ಸೊಗಡಿನಲ್ಲಿ ಕುತೂಹಲಕರವಾಗಿ ಕಟ್ಟಿಕೊಡುತ್ತದೆ.
ಕಾದಂಬರಿಯ ಪಾತ್ರಚಿತ್ರಣ ಅತ್ಯಂತ ನೈಜವಾಗಿ ಗಟ್ಟಿಯಾಗಿ ಮೂಡಿಬಂದಿದೆ. ಇಲ್ಲಿ ಬರುವ ಪ್ರತೀ ಪಾತ್ರದ ಗುಣ ಸ್ವಭಾವಗಳನ್ನು ಚಿತ್ತಾಲರು ಬಹಳ ವಾಸ್ತವಿಕವಾಗಿ ಚಿತ್ರಿಸಿರುವ, ಆಯಾ ವ್ಯಕ್ತಿತ್ವಗಳನ್ನು ಕಾದಂಬರಿಯಲ್ಲಿ ಬೆಳೆಸಿರುವ ಪರಿಯು, ಮನುಷ್ಯ ಸ್ವಭಾವವನ್ನು ಆಳವಾಗಿ ಅವಲೋಕಿಸುವ ಅವರ ಸೂಕ್ಷ್ಮ ದೃಷ್ಟಿಯನ್ನು ತೋರಿಸುತ್ತದೆ. ಗೋಕರ್ಣದ ಸಮೀಪದ ಹನೇಹಳ್ಳಿಯ ವಿಶ್ವನಾಥ ಶಾನುಭಾಗರೆಂಬ ಪ್ರತಿಷ್ಠಿತ ಮನೆತನದ ಯಜಮಾನರು, ಅವರ ಏಕೈಕ ಸಂತಾನವಾದ ಹದಿಹರೆಯದ ಯುವತಿ ನಿರ್ಮಲಾ ಮತ್ತು ಅವಳ ಜೀವನ ಸಂಗಾತಿಯಾಗಲೆಂದು ಹಿರಿಯರು ಸೂಚಿಸುವ ಕುಮುಟೆಯ ಶಾಲಾ ಮಾಸ್ತರನಾದ ವಾಸುದೇವ - ಈ ಮೂವರು ಕಾದಂಬರಿಯ ಮುಖ್ಯ ಪಾತ್ರಗಳು. ಇನ್ನುಳಿದಂತೆ ಅವರ ಕುಟುಂಬದವರು, ಬಂಧು-ಮಿತ್ರರು, ಹಿತೈಷಿಗಳೋ ಅಥವಾ ಹಿತ ಶತ್ರುಗಳೋ ಆದ ಸುತ್ತಮುತ್ತಲ ಕೇರಿಯ ಜನರು, ಕಾರವಾರ, ಸಿರ್ಸಿಗಳಲ್ಲಿ ಇರುವ ಪರಿಚಯಸ್ಥರು, ಸಂಬಂಧಿಗಳು - ಈ ಎಲ್ಲ ಪಾತ್ರಗಳೂ ಮೂರು ಮುಖ್ಯ ಪಾತ್ರಗಳ ನಡೆವಳಿಕೆಯನ್ನು ನಿರ್ದೇಶಿಸುತ್ತಾ ಒಂದಲ್ಲ ಒಂದು ರೀತಿಯಲ್ಲಿ ಪ್ರಾಮುಖ್ಯ ಪಡೆಯುತ್ತವೆ. ಕೈತಾನ, ಬಸ್ತ್ಯಾಂವ, ಬುಡಣಸಾಬ್ ಇಂತಹ ನಗಣ್ಯವಾದ, ಒಮ್ಮೆಯಷ್ಟೇ ಬಂದು ಹೋಗುವ ಪಾತ್ರಗಳ ಅಂತರಂಗವನ್ನೂ ಒಂದೆರಡು ಸಾಲುಗಳಲ್ಲಿ ತೆರೆದಿಡುವ ಚಿತ್ತಾಲರ ಸೂಕ್ಷ್ಮತೆ ಮೆಚ್ಚುತ್ತದೆ. ಆದರೆ ವಿಶ್ವನಾಥರ ಪತ್ನಿ ಅನಸೂಯಾ ಮತ್ತು ತಮ್ಮ ಶ್ರೀನಿವಾಸರ ಪಾತ್ರಗಳನ್ನು ಗೌಣವಾಗಿಸಿರುವುದು ಯಾಕೆಂದು ಯೋಚಿಸುವಂತಾಗುತ್ತದೆ. ಕೂಡು ಕುಟುಂಬದ ಮನೆಗಳಲ್ಲಿ ಕೆಲವು ದುರ್ಬಲ ವ್ಯಕ್ತಿತ್ವಗಳು ಪ್ರಭಾವಶಾಲಿ ವ್ಯಕ್ತಿತ್ವಗಳ ಮುಂದೆ ಮಂಕಾಗುವುದು ಸಹಜವೇ. ನಿರ್ಮಲೆಯ ತಾಯಿ ಅನಸೂಯಾಳ ವ್ಯಕ್ತಿತ್ವವನ್ನು ನಾದಿನಿ ಚಂದ್ರಭಾಗಿಯ ದೃಷ್ಟಿಕೋನದಲ್ಲಿ ಚಿತ್ರಿಸಿರುವುದು, ನಿರ್ಮಲೆಯು ಅತ್ತೆ ಹಾಗೂ ದೊಡ್ಡಮ್ಮರನ್ನೇ ಹೆಚ್ಚು ಅವಲಂಬಿಸುವುದು ಇವುಗಳಿಂದ ಪರೋಕ್ಷವಾಗಿ ಅವಳ ದುರ್ಬಲ ವ್ಯಕ್ತಿತ್ವದ ಅರಿವಾದರೂ, ಎರಡು ಮುಖ್ಯ ಪಾತ್ರಗಳ ಹೆಂಡತಿ, ತಾಯಿಯಾಗಿ ಅವಳಿಗೆ ತನ್ನ ಮನದ ತುಮುಲಗಳನ್ನು ನೇರವಾಗಿ ತೆರೆದುಕೊಳ್ಳುವ ಒಂದು ಅವಕಾಶವಾದರೂ ಬೇಕಿತ್ತೆನಿಸುತ್ತದೆ.
ಕಾದಂಬರಿಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಭಾಗವೂ ಪ್ರಥಮ ಪುರುಷ ನಿರೂಪಣೆಯಲ್ಲೇ ಸಾಗಿದರೂ ಒಂದೊಂದು ಭಾಗವನ್ನು ಒಬ್ಬೊಬ್ಬ ಮುಖ್ಯ ಪಾತ್ರದ ದೃಷ್ಟಿಯಿಂದ ಕಟ್ಟಿಕೊಡಲಾಗಿದೆ. ಒಂದು ಸಮಸ್ಯೆಗೆ ಕಾರಣವಾಗುವ ಪ್ರಕರಣವನ್ನು ಮೂರು ಪಾತ್ರಗಳ ದೃಷಿಕೋನದಲ್ಲಿ ಪ್ರತಿ ಭಾಗದಲ್ಲೂ ಮೊದಲಿನಿಂದ ನಿರೂಪಿಸುತ್ತಾ ಬರುವ ತಂತ್ರವನ್ನು ಚಿತ್ತಾಲರು ಪ್ರಯೋಗಿಸಿದ್ದಾರೆ. ಎರಡು ಮೂರು ಪಾತ್ರಗಳು ಬೇರೆ ಬೇರೆ ಸ್ಥಳಗಳಲ್ಲಿದ್ದುಕೊಂಡು ಒಂದು ಘಟನೆಗೆ ಕೊಡುವ ಪ್ರತಿಕ್ರಿಯೆಗಳನ್ನು ಜತೆ ಜತೆಯಲ್ಲಿಯೇ ಹೆಣೆಯದೆ, ಹೀಗೆ ಪ್ರತ್ಯೇಕವಾಗಿ ಮೂರು ಬಾರಿ ನಿರೂಪಿಸಿದಾಗ ವಿಷಯವು ಪುನರಾವರ್ತನೆಯಾಗಿ ಬೇಸರ ಮೂಡಿಸುವ ಅಪಾಯವಿರುತ್ತದೆ. ಆದರೆ ಹಾಗಾಗದೆ ಕಾದಂಬರಿ ಕುತೂಹಲಕರವಾಗಿಯೇ ಓದಿಸಿಕೊಂಡು ಹೋಗುವುದು ಚಿತ್ತಾಲರ ಕಥೆ ಹೇಳುವ ಪ್ರತಿಭೆಯನ್ನು ತೋರಿಸುತ್ತದೆ. ಮೂರೂ ದೃಷಿಕೋನಗಳಲ್ಲಿ ಚಿತ್ತಾಲರು ಮನುಷ್ಯ ಸ್ವಭಾವಗಳನ್ನು, ಅವನ ಚಿತ್ತಚಾಂಚಲ್ಯ, ಚಿತ್ತ ವಿಕಾರಗಳನ್ನು, ಆಂತರ್ಯದ ತುಮುಲಗಳನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ. ಕಥಾ ಹಂದರಕ್ಕೆ ಪೂರಕವಾಗಿ ಚಿತ್ತಾಲರು ಚಿತ್ರಿಸಿರುವ ಉತ್ತರ ಕನ್ನಡದ ಪರಿಸರ, ಅಲ್ಲಿಯ ಬೇರೆ ಬೇರೆ ವರ್ಗದ ಜನರ ದೈನಂದಿನ ಜೀವನದ ನೋಟಗಳು ಆಪ್ತವಾಗುತ್ತವೆ.
ಹದಿಹರೆಯದ ನಿರ್ಮಲೆ ಕಾರವಾರದಲ್ಲಿ ಸೋದರತ್ತೆಯ ಮನೆಯಲ್ಲಿದ್ದು ಮೆಟ್ರಿಕ್ ಕಲಿಯುತ್ತಿರುತ್ತಾಳೆ. ಒಮ್ಮೆ ಅವಳ ಗೆಳತಿಯ ಅಣ್ಣನಾದ ರಂಗಣ್ಣನೆಂಬ ಯುವಕನ ಫೋಟೋ ಸ್ಟುಡಿಯೋಗೆ ಹೋಗುವ ಸಂದರ್ಭ ಬಂದಾಗ, ಏಕಾಂತದಲ್ಲಿ ರಂಗಣ್ಣನೊಂದಿಗೆ ಅವಳು ಇದ್ದಿದ್ದನ್ನು ನೋಡಿದ ಇನ್ನೊಬ್ಬ ಹುಡುಗ ಆ ವಿಷಯಕ್ಕೆ ರೆಕ್ಕೆ ಪುಕ್ಕ ಕಟ್ಟಿ ಹಬ್ಬಿಸಿದ ಗಾಳಿ ಸುದ್ದಿಯೇ ಕಾದಂಬರಿಯ ಮುಖ್ಯ ಪ್ರಕರಣವೆನಿಸುತ್ತದೆ. ರಂಗಣ್ಣನ ತಂದೆ, ವಿಧವೆ ಅಕ್ಕ ಎಲ್ಲರೂ ವ್ಯಭಿಚಾರಕ್ಕೆ ಹೆಸರಾಗಿರುವರಾಗಿ, ಆ ಮನೆತನಕ್ಕೆ ಕೆಟ್ಟ ಹೆಸರಿರುವುದು ಸಮಸ್ಯೆಗೆ ಗಂಭೀರತೆಯನ್ನು ಒದಗಿಸಿರುತ್ತದೆ. ಗಾಳಿಸುದ್ದಿ ಹರಡಿದ ಹುಡುಗ ನೋಡಿಲ್ಲದೆ ಹೋದರೂ ರಂಗಣ್ಣನು ಅಲ್ಲಿ ನಿರ್ಮಲೆಯನ್ನು ಅಚಾನಕ್ಕಾಗಿ ಒಮ್ಮೆ ಮುದ್ದಿಸಿರುವುದು ಸತ್ಯವಾಗಿರುತ್ತದೆ. ಯಾವುದೇ ಹೆಣ್ಣು ತನ್ನ ತಪ್ಪಿಲ್ಲದೆ, ತನಗರಿವಿಲ್ಲದಂತೆ ಆದ ಇಂತಹ ಆಕಸ್ಮಿಕ ಘಟನೆಯನ್ನು ಮರೆತು ಬಾಳುವುದು ಸಹಜವಾಗಿದ್ದರೂ, ನಿರ್ಮಲೆಯ ವಿಷಯದಲ್ಲಿ ಹಾಗಾಗುವುದಿಲ್ಲ. ಸಂಕುಚಿತ ಮನೋಭಾವದ ಜನರ ಮಾತಿನ ಪ್ರಹಾರಕ್ಕೆ ಸಿಕ್ಕಿದ ಆ ಗಾಳಿಸುದ್ದಿ ಬೇರೆ ಬೇರೆ ರೂಪ ಅವತಾರಗಳನ್ನು ತಾಳಿ ಎರಡು ಕುಟುಂಬಗಳ ಶಾಂತಿ ನೆಮ್ಮದಿಯನ್ನು ಕಿತ್ತುಕೊಳ್ಳುತ್ತದೆ. ಎಂಥಹುದೇ ರೂಪ ತಾಳಿದ್ದರೂ ಧೈರ್ಯದಿಂದ, ತಾಳ್ಮೆಯಿಂದ ವಿವೇಚಿಸಿ ಒಗ್ಗಟ್ಟಿನಿಂದ ಮುಂದುವರೆದಿದ್ದರೆ ಕೆಲಕಾಲದಲ್ಲಿ ಸದ್ದಡಗಿ ಹೋಗಿ, ಶಾಂತಿ ನೆಮ್ಮದಿಯನ್ನು ಹಿಂದಿರುಗಿಸಬಲ್ಲದ್ದಾಗಿದ್ದ ಆ ಸಣ್ಣ ಗಾಳಿಸುದ್ದಿಯು, ಕಾದಂಬರಿಯ ಮೂರು ಪಾತ್ರಗಳ ಮನಸ್ಥಿತಿಯ ಪರಿಣಾಮವಾಗಿ ಬೇರೆಯೇ ಭೀಕರ ಸ್ವರೂಪವನ್ನು ಪಡೆದುಕೊಂಡು ನಿರ್ಮಲೆಯ ಸಾವಿನಲ್ಲಿ, ವಾಸುದೇವನ ಕುಟುಂಬ ಊರು ಬಿಟ್ಟುಹೋಗುವಲ್ಲಿಗೆ ಬಂದು ಅತ್ಯಂತ ವಿಷಾದನೀಯವಾಗಿ ಕೊನೆಗೊಳ್ಳುತ್ತದೆ.
ಅತೀ ಭೀತಿಯ ಸ್ವಭಾವದವರಾದ ವಿಶ್ವನಾಥರು ಸುತ್ತಲ ಜನರು ಆಡಿಕೊಳ್ಳುವ ಮಾತುಗಳಿಗೆ ಹೆದರಿ, ತಮ್ಮ ಸಮರ್ಥನೆಗಾಗಿ ಅವಶ್ಯಕತೆಗಿಂತ ಹೆಚ್ಚಿಗೆ ವಿಷಯಗಳನ್ನು ಆಡಿಕೊಳ್ಳುವವರ ಬಾಯಿಗೆ ತಾವೇ ಒದಗಿಸಿ ನಂತರ ಪರಿತಪಿಸಿ ಸಂಕಟ ಪಡುವ ಚಂಚಲ ಬುದ್ಧಿಯವರು. ಈ ಸ್ವಭಾವವನ್ನು ದ್ವೇಷಿಸುವ ನಿರ್ಮಲೆ ಅತೀ ಕೋಪಿಷ್ಠೆ. ಯಾರದೋ ತಪ್ಪಿಗೆ ಇನ್ಯಾರನ್ನೋ ದ್ವೇಷಿಸುತ್ತಾ, ಆ ದ್ವೇಷ, ಕೋಪಗಳಿಗೆ ಸಿಕ್ಕು ಬಂಡಾಯದ ರೂಪದಲ್ಲಿ ತನಗೇ ಹಾನಿಯುಂಟುಮಾಡಿಕೊಳ್ಳುವ ಪ್ರಕೃತಿಯವಳು. ಗಾಳಿಸುದ್ದಿ ಕಿವಿಗೆ ಬೀಳುತ್ತಿದಂತೆ ಮಗಳಿಗೆ ಮದುವೆ ಮಾಡಿ, ಅವಳ ಬಾಳನ್ನು ಸರಿದಾರಿಗೆ ಕೊಂಡೊಯ್ದು ತನ್ನ ಜವಾಬ್ದಾರಿಯನ್ನು ನಿಭಾಯಿಸುವ ಹವಣಿಕೆಯಲ್ಲಿ ವಿಶ್ವನಾಥರು ಆರಿಸುವ ಪರಿಚಯಸ್ಥ ಸಂಭಾವಿತ ತರುಣ ವಾಸುದೇವನದ್ದು ಅತೀ ಆದರ್ಶದ ಸ್ವಭಾವ. ತನ್ನ ಸುಖಕ್ಕಿಂತ ಪರರ ಸುಖ ಮುಖ್ಯವೆಂದೂ, ತುಳಿತಕ್ಕೊಳಗಾದವರನ್ನು, ನಿರ್ಬಲರನ್ನು ರಕ್ಷಿಸುವುದು ತನ್ನ ಕರ್ತವ್ಯವೆಂದು ತಿಳಿದಿರುವ ವಾಸುದೇವ ಉತ್ಕಟ ಭಾವನಾಜೀವಿ; ಸಾಹಿತಿಯೂ ಹೌದು. ನಿರ್ಮಲೆಯ ಜಾತಕ ಬಂದಾಗ ಅವಳ ಕುರಿತು ಆಕರ್ಷಣೆ ಉಂಟಾಗದೇ ಹೋದರೂ, ಸಂಕುಚಿತ ಬುದ್ಧಿಯ ಜನ ಗಾಳಿಸುದ್ದಿಯನ್ನು ಅವನ ಕಿವಿಗೆ ತಲುಪಿಸಿದಾಗ ಅದನ್ನು ತಾನು ನಂಬುವುದಿಲ್ಲವೆಂದೂ, ಒಂದು ವೇಳೆ ಆ ವಿಷಯ ನಿಜವಾಗಿದ್ದರೂ ನಿರ್ಮಲೆಯನ್ನು ಕ್ಷಮಿಸಿ ಕೈ ಹಿಡಿದು ಅವಳ ಬಾಳು ಬೆಳಗುವೆನೆಂದೂ ಯೋಚಿಸಿ ಮದುವೆಗೆ ಸಮ್ಮತಿಸುತ್ತಾನೆ. ತಂದೆಯ ಭೀತಿಯನ್ನೂ ವಾಸುದೇವನ ಅತೀ ಒಳ್ಳೆಯತನದ (ಆದರ್ಶದ) ಪ್ರದರ್ಶನವನ್ನೂ ಸಹಿಸದ ನಿರ್ಮಲಾ ಅವರಿಬ್ಬರಿಗೆ ಪಾಠ ಕಲಿಸುವ ಸಲುವಾಗೆಂದೇ ರಂಗಣ್ಣನನ್ನೇ ಪ್ರೀತಿಸುವ, ಮದುವೆಯಾಗುವ ಯೋಜನೆ ಹಾಕಿಕೊಳ್ಳುತ್ತಾಳೆ. ವಾಸುದೇವನೊಂದಿಗೆ ಏಕಾಂತದಲ್ಲಿ ಭೇಟಿಯಾದಾಗ ಚುಚ್ಚುಮಾತುಗಳಿಂದ ಅವನನ್ನು ನೋಯಿಸಿ, ಮದುವೆಗೆ ಅಸಮ್ಮತಿ ಸೂಚಿಸುತ್ತಾಳೆ. ಇನ್ನೊಬ್ಬರ ಮೇಲಿನ ದ್ವೇಷಕ್ಕೆ ಸಿಕ್ಕು ಉನ್ಮತ್ತ ಮನಸ್ಸಿನಿಂದ, ವಿವೇಕವನ್ನು ಕೋಪದ ಕೈವಶಮಾಡಿ, ರಂಗಣ್ಣನ ಜೊತೆ ಬಾಳುವುದೆಂಬ ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ದಿಟ್ಟತನವೂ ಇಲ್ಲದೆ ಬಾವಿಗೆ ಹಾರಿ ಪ್ರಾಣ ಬಿಡುತ್ತಾಳೆ. ಅದೇ ಸಮಯಕ್ಕೆ ಸರಿಯಾಗಿ ಇತ್ತ ನಿರ್ಮಲೆಯೇ ತನ್ನನ್ನು ಅವಮಾನಿಸಿ ನಿರಾಕರಿಸಿದ್ದರೂ, ಅತೀ ಒಳ್ಳೆಯತನ ಬಿಡದ ವಾಸುದೇವ, ತಾನೇ ಅವಳನ್ನು ಮದುವೆಯಾಗಲು ನಿರಾಕರಿಸುವುದಾಗಿ ವಿಶ್ವನಾಥರಿಗೆ ಪತ್ರ ಬರೆದಿರುತ್ತಾನೆ. ಮನೆತನದ ಗೌರವ ಕಾಯುವ ಭೀತಿ, ಮುದ್ದಿನ ಮಗಳ ಮೇಲಿನ ವಾತ್ಸಲ್ಯದಿಂದ ವಿಶ್ವನಾಥರು ಅವಳ ಸಾವಿಗೆ ನಿಜವಾದ ಕಾರಣ ತಮ್ಮ ಕಣ್ಣಿನ ಮುಂದೆ ಕಂಡರೂ, ಸಾಕ್ಷಿಯಾಗಿ ಅವಳು ಬರೆದಿಟ್ಟ ಕಾಗದವನ್ನೂ ಓದದೇ ಹರಿದುಹಾಕಿ, ವಾಸುದೇವ ಮದುವೆಗೆ ತಿರಸ್ಕರಿಸಿದ್ದೇ ತಮ್ಮ ಮಗಳ ಸಾವಿಗೆ ಕಾರಣವೆಂಬ ಸುದ್ದಿ ಹರಡಿ ಅದನ್ನೇ ತಾವೂ ನಂಬಬಯಸುತ್ತಾರೆ. ಅವರು ಹಬ್ಬಿದ ಈ ಸುದ್ದಿಗೆ ಕೈಕಾಲು ರೆಕ್ಕೆಪುಕ್ಕ ಬೆಳೆದು ವಾಸುದೇವನನ್ನು ಕುಮುಟೆಯಲ್ಲಿ ಇರಗೊಡದೆ ತಾಯಿಯೊಂದಿಗೆ ಊರು ತೊರೆಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸಹಜವಾಗಿ ಮಿತಿಯಲ್ಲಿದ್ದರೆ ಎಲ್ಲರಲ್ಲೂ ಹಿತವೆನಿಸಬಹುದಾದ ಗುಣಗಳ ಅತಿಯಿಂದಾಗಿ, ಅತಿಯಾದರೆ ಅಮೃತವೂ ವಿಷ ಎನ್ನುವಂತೆ, ಈ ಮೂರು ಜನರೂ ತಾವೇ ನಿರ್ಮಿಸಿಕೊಂಡ ಕೂಪದೊಳಕ್ಕೆ ಎಳೆಯಲ್ಪಡುತ್ತಾರೆ. ವಿಶ್ವನಾಥರ ಅತ್ತಿಗೆ ರಾಧಮ್ಮ, ತಂಗಿ ಚಂದ್ರಭಾಗಿ, ವಾಸುದೇವನ ಗೆಳೆಯ ಶಿನ್ನ, ಶಿನ್ನನ ಹೆಂಡತಿ ಶಾಂತಾ, ಅವರ ಕೇರಿಯ ತುಂಗಕ್ಕನ ಮಗ ಪುರುಷೋತ್ತಮರಂತಹ ಅತಿರೇಕಗಳಿಲ್ಲದ ಸಂತುಲಿತ ಪಾತ್ರಗಳು ಆಪ್ತವೆನಿಸುತ್ತವೆ.
ಸಮಾಜವೆಂದಮೇಲೆ ಎಲ್ಲ ರೀತಿಯ ಜನಗಳಿರುತ್ತಾರೆ. ಇಲ್ಲಿ ಚಿತ್ರಿಸಲಾಗಿರುವಂತಹ ಜನಗಳು, ಆ ಮನೋಧರ್ಮಗಳು ಎಲ್ಲ ಕಾಲದಲ್ಲೂ ಕಾಣಸಿಗುತ್ತವೆ. ಹೆಣ್ಣುಗಂಡುಗಳನ್ನು ಆಕಸ್ಮಿಕವಾಗಿ ಜೊತೆಯಲ್ಲಿ ನೋಡಿದರೆ ಅವರಲ್ಲಿ ಇಲ್ಲಸಲ್ಲದ ಸಂಬಂಧ ಕಟ್ಟಿ ಆ ಕುರಿತು ಊಹಾಪೋಹಗಳನ್ನು ಹಬ್ಬಿಸಿ ಹಗರಣವೆಬ್ಬಿಸುವ ಪರಿಪಾಠ ಇಂದಿನ ಸಮಾಜದಲ್ಲಿ ಅಷ್ಟು ಪ್ರಸ್ತುತವೆನಿಸದೆ ಹೋದರೂ ಮನುಷ್ಯನ ಗುಣಸ್ವಭಾವದ ಚಿತ್ರಣ, ಅತಿರೇಕಗಳಿಗೆ ಬಲಿಯಾಗದೆ ವಿವೇಚನೆಯಿಂದ ಕುಟುಂಬದ ಒಗ್ಗಟ್ಟಿನಿಂದ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ತಾಳ್ಮೆ, ಮನೋಬಲಗಳು ಮನುಷ್ಯನಿಗೆ ಬೇಕು ಎನ್ನುವ ನೀತಿಯು ಇಂದಿಗೂ ಪ್ರಸ್ತುತವಾಗಿದೆ. ಒಂದು ಸಂದರ್ಭದಲ್ಲಿ ದೂರದ ಊರಿಗೆ ಹೋಗಿ ಬದುಕುವುದು ಚಂದ ಎಂಬ ಗೆಳೆಯ ಶಿನ್ನನ ಮಾತಿಗೆ “ಇದು ಇನ್ನೊಂದು ಭ್ರಮೆ. ದೂರದ್ದು, ನಾವು ನೋಡದೇ ಇದ್ದದ್ದು ಎನ್ನುವುದೇ ಅದರಲ್ಲಿಯ ಆಕರ್ಷಕತೆ. ಊರು, ಜನ ಇಂತಹ ಸಮಷ್ಟಿ ಪದಗಳು ಬರಿಯೆ ಕಲ್ಪನೆಗಳಾಗಿರುವುದರಿಂದಲೇ ಎಂತಹದೋ ಆಕರ್ಷಣೆ ಅವುಗಳಲ್ಲಿದೆ. ಆದರೆ ಜೀವಂತ, ಪ್ರತ್ಯಕ್ಷ ವ್ಯಕ್ತಿಗಳಿಂದಲ್ಲದೇ ಅವಕ್ಕೆ ತಮ್ಮ ಅರ್ಥವಿದೆಯೇ? ಜೀವಂತ ಮಾಂಸ, ಎಲುಬುಗಳ ಜನ ಎಲ್ಲಿಯಾದರೇನು ಒಂದೇ ತಾನೇ?” ಎನ್ನುವ ಸಾರ್ವಕಾಲಿಕ ಸತ್ಯವನ್ನು ಚಿತ್ತಾಲರು ವಾಸುದೇವನ ಬಾಯಲ್ಲಿ ಹೇಳಿಸುವುದು ಮನೋಜ್ಞವಾಗಿದೆ.
ವಾಸುದೇವನ ಸೂಕ್ಷ್ಮ ಸಂವೇದನೆ, ಉದಾರ ಮನೋಭಾವಗಳು ಅವನನ್ನು ಒಳ್ಳೆಯ ಲೇಖಕನನ್ನಾಗಿಸುತ್ತವೆ ಎಂಬ ಸೂಚನೆಯೂ ಕಾದಂಬರಿಯಲ್ಲಿ ಸಿಗುತ್ತದೆ. ಅವನಿಂದ ಹೇಳಿಸಿರುವ, ಅವನ ಯೋಚನಾಲಹರಿಯಲ್ಲಿ ಹರಿಯುವ ಅನೇಕ ವಿಚಾರಗಳು ಚಿತ್ತಾಲರ ಸೂಕ್ಷ್ಮ ಸಂವೇದನೆಯನ್ನೂ, ವೈಚಾರಿಕ ಪ್ರಜ್ಞೆಯನ್ನೂ ಎತ್ತಿತೋರಿಸುತ್ತವೆ. ವಿಶ್ವನಾಥರ ಮಾನಸಿಕ ತೊಳಲಾಟದ, ಕುಗ್ಗುವ ಆತ್ಮವಿಶ್ವಾಸದ ಪ್ರತೀಕವಾಗಿ ಅವರಿಗೆ ಆಗಾಗ ಕಾಣಿಸಿಕೊಳ್ಳುವ ಬೆನ್ನು ಹುರಿಯ ನೋವು, ನಿರ್ಮಲೆಯ ಹಿಸ್ಟೀರಿಕ್ ಸ್ವಭಾವ, ಯಾರದೋ ಮೇಲಿನ ಸಿಟ್ಟನ್ನು ತನ್ನ ಮೇಲೆ ತೆಗೆದುಕೊಳ್ಳುವ ನೆಮೆಸಿಸ್ಟಿಕ್ ಆಂಗರ್ (nemesistic anger), ರಂಗಣ್ಣನ ತಂದೆ ಕಾಮುಕ ವಲ್ಲೀಗದ್ದೆ ಸುಬ್ಬನಿಗೆ ಬಂದ ಲೈಂಗಿಕ ರೋಗ, ಅದರಿಂದ ಅವನ ಉದ್ರೇಕಗೊಂಡ ಮನಸ್ಥಿತಿ - ಇಂತಹ ಸನ್ನಿವೇಶಗಳನ್ನು ಚಿತ್ತಾಲರು ಮನೋವೈಜ್ಞಾನಿಕ ದೃಷ್ಟಿಕೋನದಿಂದ ಪ್ರಬುದ್ಧವಾಗಿ ಚಿತ್ರಿಸಿದ್ದಾರೆ.
ಉಪಸಂಹಾರದಲ್ಲಿ ಕೆಲವು ವರ್ಷಗಳ ನಂತರದ ಬದುಕನ್ನು ಚಿತ್ರಿಸಿದ ಚಿತ್ತಾಲರು ವಾಸುದೇವ ಹನೇಹಳ್ಳಿಯ ಸುದ್ದಿ ಕೇಳಿ ತಾನು ಬರೆದ ಕಾದಂಬರಿಗೆ ‘ಕತೆಯಾದಳು ಹುಡುಗಿ’ ಎಂಬ ಶೀರ್ಷಿಕೆಯನ್ನು ಕೊಟ್ಟ ಎಂದು ಈ ಕಾದಂಬರಿಯನ್ನು ಮುಗಿಸುವುದು ವಿಶೇಷವಾಗಿದೆ. ಮುಂದೆ ಅದೇ ಹೆಸರಿನ ಕತೆಯನ್ನೋ, ಕಾದಂಬರಿಯನ್ನೋ ಬರೆಯುವ ಅಂದಾಜು ಅವರಿಗಾಗಲೇ ಇತ್ತೆಂದು ಗೋಚರವಾಗುತ್ತದೆ (೧೯೮೦ರಲ್ಲಿ ಆ ಹೆಸರಿನ ಕಥಾ ಸಂಕಲನವನ್ನು ಅವರು ಪ್ರಕಟಿಸಿದ್ದಾರೆ). ಹಾಗೆಯೇ ಆಬೊಲಿನಾ ಎಂಬ ಅವರದೇ ಕತೆಯ ಕೊಂಡಿಯನ್ನೂ ತಂದು, ಅಲ್ಲಿಯ ಪಾತ್ರವಾದ ಆಬೊಲಿನಾಳ ತಂದೆ ಕೈತಾನನನ್ನು ಇಲ್ಲಿ ಸೇರಿಸಿಕೊಂಡದ್ದೂ ವಿಶಿಷ್ಟವಾಗಿದೆ.
ಒಟ್ಟಿನಲ್ಲಿ ಸಾಮಾನ್ಯವೆನ್ನಿಸುವ ಕಥಾವಸ್ತುವನ್ನು ತಮ್ಮ ಸೂಕ್ಷ್ಮಸಂವೇದನೆಯಿಂದ, ಮನೋವೈಜ್ಞಾನಿಕ ಹಿನ್ನೆಲೆಯಿಂದ, ಹಲವಾರು ಮನುಷ್ಯರ ಮನಸ್ಸಿನ ಆಳಕ್ಕಿಳಿದು ಅವರ ಅಂತರಂಗವನ್ನು ಬಗೆದು, ಅವರೆಲ್ಲರಿಂದ ದೂರ ನಿಂತು ಚಿತ್ತಾಲರು ವಿಶಿಷ್ಟವೆನ್ನಿಸುವ ತಂತ್ರ, ಪಾತ್ರ ಸಂಯೋಜನೆಗಳಿಂದ ವಿಭಿನ್ನವಾಗಿ ರಚಿಸಿದ್ದಾರೆ. ಓದಿ ಮುಗಿಸಿದಾಗ ಒಂದು ರೀತಿಯ ವಿಷಣ್ಣತೆಯ ಭಾವ ಓದುಗನನ್ನು ಬಹುಕಾಲ ಆವರಿಸುತ್ತದೆ; ಮನುಷ್ಯನ ಮನಸ್ಸು-ಬುದ್ಧಿಗಳ ಸಂಕೀರ್ಣತೆ, ಸಂಕುಚಿತತೆಗಳು ತರ್ಕಕ್ಕೆ ನಿಲುಕದೆ ಕೆಲಕಾಲ ಕಾಡುತ್ತವೆ. ಅಸೂಯೆ, ದ್ವೇಷ, ಹೊಟ್ಟೆಕಿಚ್ಚಿನ ಸಣ್ಣಬುದ್ಧಿಗಳನ್ನು ಬಿಟ್ಟು ಒಬ್ಬ ಮನುಷ್ಯನನ್ನು ಕುರಿತು ಸಮಾಜವು ನಿರ್ಮಲವಾದ, ಮಾನವೀಯವಾದ ಭಾವವನ್ನಷ್ಟೇ ತಳೆಯುವಂತೆ ಮಾಡುವ ಶಕ್ತಿ ಕೇವಲ ಸಾವಿಗೆ ಮಾತ್ರ ಇದೆಯೇನೋ ಎಂದು ವಿಷಾದವಾಗುತ್ತದೆ. ಕೀರ್ತಿನಾಥ ಕುರ್ತುಕೋಟಿಯವರು ಈ ಕಾದಂಬರಿಯನ್ನು ಕುರಿತು ಸೂಕ್ತವಾಗಿ ವಿಮರ್ಶಿಸಿರುವಂತೆ ‘ಪಾತ್ರಗಳ ಅಂತರಂಗದ ಸೂಕ್ಷ್ಮ ಚಿತ್ರಣ, ಚಿತ್ರಕೃತಿಯಂತೆ ಕೃತಿ ಪಡೆದಿರುವ ಆಕಾರ, ಇಡೀ ಊರಿನ ಉಸಿರಾಟವನ್ನು ಕೂಡ ಕಿವಿಗೆ ಕೇಳಿಸುವಂತೆ ಮಾಡಬಲ್ಲ ವಾಸ್ತವಿಕತೆ, ಜೀವನದ ಗಂಭೀರ ನಿಲುವು - ಇವೆಲ್ಲ ಒಂದು ಮೇಲುಮಟ್ಟದ ಕಲಾಪ್ರಜ್ಞೆಗೆ ಸಾಕ್ಷಿಯಾಗಿವೆ’.





Comments