ಮಾಸ್ತಿಯವರ ಸಣ್ಣ ಕತೆಗಳು...
- vidyaram2
- Aug 25, 2022
- 2 min read
Updated: Mar 9, 2023

ಸಣ್ಣ ಕತೆಗಳು, ಸಂಪುಟ-೪ - ಇದು ಎಂ.ವಿ.ಜೆ.ಕೆ.ಟ್ರಸ್ಟ್ ವತಿಯಿಂದ 2014ರಲ್ಲಿ ಮುದ್ರಣಗೊಂಡ ಪುಸ್ತಕ. 1950-60ರ ದಶಕಗಳಲ್ಲಿ ಮಾಸ್ತಿಯವರ 'ಜೀವನ' ಮಾಸ ಪತ್ರಿಕೆಯಲ್ಲಿ ಪ್ರಕಟಗೊಂಡ, ಆಕಾಶವಾಣಿಯಲ್ಲಿ ಬಿತ್ತರಿಸಲಾದ ವಿವಿಧ ಕತೆಗಳಲ್ಲಿ 100 ಸಣ್ಣ ಕತೆಗಳನ್ನು ಆಯ್ದು ಒಟ್ಟು ಐದು ಸಂಪುಟಗಳಲ್ಲಿ ಪ್ರಕಟ ಮಾಡಿದ್ದಾರೆ. ಅದರಲ್ಲಿ ನಾಲ್ಕನೇ ಸಂಪುಟವನ್ನು ನಾನು ಇತ್ತೀಚೆಗೆ ಓದಿದೆ.
24 ಕತೆಗಳನ್ನು ಒಳಗೊಂಡ ಈ ಸಂಪುಟದ ಕತೆಗಳ ವೈವಿಧ್ಯಕ್ಕೆ ಬೆರಗಾದೆ. ಅವರ ಕತೆ ಹೇಳುವ ಅನನ್ಯ ಸರಳ ಶೈಲಿ ಮೆಚ್ಚುಗೆಯಾಯಿತು. ಸರಳ ವಾಕ್ಯಗಳ, ಪದಭಾರದಿಂದ ಜಗ್ಗದ ರಚನೆ ಸುಲಭವಾಗಿ ಓದಿಸಿಕೊಂಡು ಹೋಯಿತು. ಸಣ್ಣ ಕತೆಗಳಲ್ಲಿ ಜಗತ್ತನ್ನೇ ತೋರಿಸುವ ಇವರ ಪಾಂಡಿತ್ಯ, ಜೀವನಾನುಭವ ಎಷ್ಟು ಆಳ, ವಿಶಾಲ ಎಂದು ಸ್ಪಷ್ಟವಾಯಿತು.
ಕೇವಲ ನಿರೂಪಕರಾಗಿ ಕತೆ ಹೇಳುವುದು ಇವರ ವಿಶೇಷತೆ. ಎಲ್ಲವೂ ನೈತಿಕ ಮೌಲ್ಯವಿರುವ ಕತೆಗಳೇ. ಆದರೆ ಪಾತ್ರಗಳ ಸ್ವರೂಪ ಹೇಗಿದೆಯೋ ಹಾಗೆ ತೆರೆದಿಟ್ಟು, ಅಲ್ಲಿ ಒಳಿತು-ಕೆಡುಕು, ನ್ಯಾಯ - ಅನ್ಯಾಯ ಮುಂತಾದ ತರ್ಕವನ್ನು ಓದುಗರ ಕಲ್ಪನೆಗೆ ಬಿಡುತ್ತಾರೆ. ಅವರು ಲೇಖಕರಾಗಿ ತಮ್ಮ ಧೋರಣೆಯನ್ನು ಓದುಗರ ಮೇಲೆ ಹೇರಿದ್ದು ನನಗೆ ಕಾಣಲಿಲ್ಲ. ಹೀಗಾಗಿ ಏಳೆಂಟು ದಶಕಗಳ ಅಥವಾ ಇನ್ನೂ ಹೆಚ್ಚು ಹಳೆಯ ಕಾಲಘಟ್ಟದ ಕತೆಯಾದರೂ ನಾವು ಈಗಲೂ ನಮ್ಮ ತರ್ಕಕ್ಕನುಗುಣವಾಗಿ ಒಪ್ಪಲು ಸಾಧ್ಯವಾಗುತ್ತದೆ. ಮಾನವನ ಹಲವು ಮೂಲ ಗುಣ ಸ್ವಭಾವಗಳು, ಧೋರಣೆಗಳು ಎಷ್ಟೇ ಕಾಲ ಸಂದಿದರೂ ಹೆಚ್ಚು ಬದಲಾವಣೆ ಹೊಂದದೇ ಉಳಿಯುತ್ತವೆ, ಹಾಗಾಗಿ ಇಂತಹ ಕತೆಗಳು ಸಾರ್ವಕಾಲಿಕವಾಗಿ ನಿಲ್ಲುತ್ತವೆ ಎಂಬ ಅಂಶವನ್ನೂ ನಾನು ಇಂದು ಇವರ ಕತೆಗಳನ್ನು ಓದುವಾಗ ಕಂಡೆ.
ಮಾಸ್ತಿ ಅವರ ವಿಶಾಲ ಮನೋಭಾವ, ಉದಾತ್ತ ಸೂಕ್ಷ್ಮ ಸಂವೇದನೆ, ಹಾಸ್ಯ ಪ್ರಜ್ಞೆ ಹಾಗೂ ತಾತ್ವಿಕ ಗುಣದ ಪರಿಚಯ ಈ ಒಂದು ಸಂಪುಟದಲ್ಲಿ ಸ್ಪಷ್ಟವಾಗಿ ದೊರೆಯಿತು.
ಅವರ ಸ್ತ್ರೀಪರ ಕಾಳಜಿ, ಗೌರವವನ್ನು ಎತ್ತಿ ತೋರಿಸುವ ಕತೆಗಳು -
ಚೆನ್ನಮ್ಮ, ಚಿಕ್ಕವ್ವ, ಆಂಗ್ಲ ನೌಕಾ ಕ್ಯಾಪ್ಟನ್, ರಾಣಿ ಹಾಟ್ ಶೇಪ್ ಸಿಟೂ, ಚಟ್ಟೆಕಾರರ ತಾಯಿ, ಆನ್ ಷೇಕ್ಸ್ಪಿಯರ್ ಮುಂತಾದವು. ಈ ಕತೆಗಳಲ್ಲಿ ಕುಟುಂಬ, ದೇಶದ ಹಿತಕ್ಕಾಗಿ ದಿಟ್ಟ ಮಹಿಳೆ ತೋರುವ ಧೈರ್ಯ - ಸ್ಥೈರ್ಯ, ಅದಕ್ಕಾಗಿ ಅವಳ ಗೌರವ ಪಣಕ್ಕಿಡದೆ ಸಮಾಜದೊಂದಿಗೆ ಅವಳ ಸಂಘರ್ಷವನ್ನೆಲ್ಲ ಅಧ್ಬುತವಾಗಿ ಚಿತ್ರಿಸಿದ್ದಾರೆ.
ಸೃಷ್ಟಿಯ ಜೀವಿಗಳೂ ನಮ್ಮಂತೆಯೇ ಎನ್ನುವ ಅವರ ಮಮತೆಯ ಮನೋಭೂಮಿಕೆ ತೋರುವ ಕತೆಗಳು - ಕಾಕ ಲೋಕ, ಇರುವೆಗಳ ಲೋಕ.
ಇರುವೆಗಳ ಲೋಕ ಕತೆಯಂತೂ ಬಹಳ ವಿಶಿಷ್ಟವಾಗಿದೆ. ಇದು ರಾಮಾಯಣದ ಒಂದು ಪ್ರಸಂಗವಾದ ಕತೆಯಾಗಿ ರಚಿಸಿದ್ದಾರೆ. ದಶರಥ ಚಕ್ರವರ್ತಿಯು ಕೇಕಯ ರಾಜ ಅಶ್ವಪತಿಯ ಬಳಿ ಕೈಕೇಯಿಯನ್ನು ವರಿಸುವ ಕೋರಿಕೆಯೊಂದಿಗೆ ಬಂದ ಸಂದರ್ಭ. ಅಲ್ಲಿ ಅವರ ವಿವಾಹ ನಡೆದು, ಸಂಜೆ ವೇಳೆ ಕೇಕಯ, ದಶರಥರು ಸಲ್ಲಾಪದಲ್ಲಿ ತೊಡಗಿದ್ದ ಸಮಯದಲ್ಲಿ ಕೇಕಯನಿಗಿದ್ದ ವಿಶೇಷ ವರವಾದ ಎಲ್ಲಾ ಜೀವಿಗಳ ಭಾಷೆ ತಿಳಿಯುವ ಸಾಮರ್ಥ್ಯದ ಕುರಿತ ಚರ್ಚೆಯನ್ನು ದೀರ್ಘವಾಗಿ ತಂದು, ಇರುವೆಗಳ ಜೀವನ ಚಕ್ರ ವಿಶ್ಲೇಷಣೆ ಮಾಡುವರು ಮಾಸ್ತಿಯವರು. ಅಲ್ಲಿ ಅವರು ಒಂದು ಬಗೆ ಇರುವೆಗಳ ಕತೆ ಹೆಣೆದು, ಅದರ ಕಿರಿಯ ರಾಣಿ ಇರುವೆ ಬೇರೆ ಕುಟುಂಬದ ಹಿರಿಯ ರಾಣಿಯನ್ನು ಹೇಗೆ ಸೋಲಿಸಿ ತಾನು ಆ ಹೊಸ ಕುಟುಂಬದ ರಾಣಿಯಾಗುತ್ತದೆ ಎಂದು ಕೇಕಯನ ಬಾಯಿಂದ ಮಾರ್ಮಿಕವಾಗಿ ವರ್ಣಿಸಿ, ದಶರಥನನ್ನು ಕಸಿವಿಸಿಗೊಳಿಸುತ್ತಾರೆ. ಈ ವಿಷಯವಾಗಿ ಸುಮಂತ್ರ ವಸಿಷ್ಠರ ಬಳಿ ಕೇಳಿದಾಗ ಅವರು ಕೊಟ್ಟ ಉತ್ತರ "ವಿಧಿಯ ಕೈಯಲ್ಲಿ ಮನುಷ್ಯ ಒಂದು ಇರುವೆಗಿಂತ ಹೆಚ್ಚಲ್ಲ, ಮಾನವಲೋಕ ಇರುವೆಯ ಲೋಕ ಬೇರೆ ಅಲ್ಲ". ಇದು ಮಾಸ್ತಿಯವರ ತಾತ್ವಿಕ ದೃಷ್ಟಿಯನ್ನೂ ದೃಢೀಕರಿಸುತ್ತದೆ.
ದಾಂಪತ್ಯದ ನವಿರಾದ ಸಂಬಂಧಗಳ ಕೊಂಡಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ ಕತೆಗಳು - ನಾಲ್ಕನೇ ಅಧ್ಯಾಯ, ದಾಂಪತ್ಯದ ಹೊಸ ಪರಿ, ಚಿಕ್ಕವ್ವ ಇತ್ಯಾದಿ.
ತತ್ವ/ಅಧ್ಯಾತ್ಮ ಚಿಂತನೆಗೆ ಒಳಪಡಿಸುವ ಕತೆಗಳು - ಮಂತ್ರೋದಯ (ಕರ್ಮ ಯೋಗದ ಕೊನೆ ದಿನ), ಶಾಲೆಯ ಆಚಾರ್ಯರು, ಧರ್ಮಕಿಂಕರ ಫಿಟ್ಸ್ ಸ್ಟೀಫನ್, ಟಾಲ್ ಸ್ಟಾಯ್ ಮಹರ್ಷಿಯ ಭೂರ್ಜ ವೃಕ್ಷಗಳು. 'ಮಂತ್ರೋದಯ' ಮತ್ತು 'ಶಾಲೆಯ ಆಚಾರ್ಯರು' ಕತೆಗಳು ನನಗೆ ಬಹುಕಾಲ ಮನಸ್ಸಿನಲ್ಲಿ ನಿಲ್ಲುವಂತವು. ಮತ್ತೆ ಮತ್ತೆ ಓದಿ ಮೆಲಕು ಹಾಕಬೇಕು ಎನ್ನಿಸುವವು. ಸರಳ ಜೀವನ, ಉದಾತ್ತ ದೃಷ್ಟಿಕೋನ, ಕರ್ತವ್ಯನಿಷ್ಠೆ ಹೊಂದಿದ ನಮ್ಮ ಋಷಿಮುನಿಗಳ, ಗುರುಹಿರಿಯರ ಜೀವನ ಅನುಕರಣೀಯ. ಅದರ ಪಾಲನೆ ಮಾಡದೇ ನಾವು ಇಂದು ಎಲ್ಲಾ ರೀತಿಯ ಸಂಕಷ್ಟಕ್ಕೆ ಸಿಲುಕಿ ಬಳಲುತ್ತೇವೆ ಎನ್ನುವುದನ್ನು ಮತ್ತೆ ಮತ್ತೆ ಮನನ ಯೋಗ್ಯ.
ಲಲಿತ ಪ್ರಬಂಧದಂತಿರುವ 'ಸಂಜೀವನ ಸ್ವಪ್ನ' ಕತೆಯಲ್ಲಿ ಕ್ಷೌರದ ಕುರಿತೇ ಒಂದು ಹಾಸ್ಯಭರಿತ ಕತೆ ಹೆಣೆದಿದ್ದಾರೆ. ಇದರಲ್ಲಿ ಅಂದಿನ ಸಮಾಜದ ವಿವಿಧ ಕುಲ, ವರ್ಗದ ಜನರು ಪರಸ್ಪರ ಅವಲಂಬಿತವಾಗಿ ಸೌಹಾರ್ದತೆಯಿಂದ ನಡೆಸುತ್ತಿದ್ದ ಬಾಳ್ವೆಯ ನೋಟ ನಮಗೆ ಸಿಗುತ್ತದೆ. 'ಕೆಟ್ಟ ಕಾಲ' ಕತೆಯು ಯುದ್ಧದಿಂದ ನಾಗರೀಕತೆಗೆ ಆಗುವ ನಷ್ಟ, ಮಾನವೀಯತೆಯ ಮೇಲೆ ಆಗುವ ಪ್ರಹಾರ, ಒಂದು ಪ್ರಜಾಪ್ರಭುತ್ವದ ಅಳಿವು ಹೇಗೆ ಉಂಟಾಗುತ್ತದೆ ಎನ್ನುವ ಕುರಿತ ಉಪನ್ಯಾಸದಂತಿದೆ.ಆ ಜೀವನವನ್ನು ಚಿತ್ರಿಸುವುದರಿಂದ ಕತೆಯಾಗಿದೆ ಎಂದು ಮಾಸ್ತಿ ಅವರೇ ಹೇಳಿದ್ದಾರೆ.
ಮಾಸ್ತಿಯವರು ಕನ್ನಡದ ಆಸ್ತಿ, ಸಣ್ಣ ಕತೆಗಳ ಜನಕ ಎಂದು ಏಕೆ ಗುರುತಿಸಲ್ಪಡುತ್ತಾರೆ ಅನ್ನುವುದರ ಒಂದು ಕಿರುಪರಿಚಯ ನನಗೆ ಈ ಪುಸ್ತಕದಿಂದ ದೊರೆಯಿತು.





Comments