ಮೈ ಮನಗಳ ಸುಳಿಯಲ್ಲಿ
- vidyaram2
- Jun 1, 2023
- 2 min read
Updated: Sep 16, 2023

ಕಾರಂತರ ಕುರಿತು ನನ್ನ ಪ್ರೀತಿ, ಗೌರವ, ಅಭಿಮಾನ ಸಾವಿರ ಪಟ್ಟು ಹೆಚ್ಚಾಗಲು ಅವರ ಕಾದಂಬರಿಗಳಲ್ಲಿ ಬರುವ ಸ್ತ್ರೀ ಪಾತ್ರಗಳೇ ಕಾರಣ. ಅವರು ಕಟ್ಟಿಕೊಟ್ಟಿರುವ ಮೂಕಜ್ಜಿ, ಪಾರ್ವತಮ್ಮ, ಸರಸೋತಿ, ಪಾರೋತಿ, ನಾಗವೇಣಿ, ಮಂಜುಳಾ, ಕಾವೇರಮ್ಮ, ಲಕ್ಷ್ಮಮ್ಮರಂತಹ ಗಟ್ಟಿಗಿತ್ತಿಯರು ತಮ್ಮ ಸೋಗಿಲ್ಲದ, ಸಹಜವಾಗಿ ಉನ್ನತವಾದ ಬಾಳ್ವೆಯ ಮೂಲಕ ಓದುಗರ ಮನ ಗೆಲ್ಲುತ್ತಾರೆ; ಸ್ತ್ರೀಯರ ಕುರಿತು ಕಾರಂತರ ಅರಿವು, ಅನುಭವ, ದೃಷ್ಟಿಕೋನಗಳನ್ನು ಸಾರುತ್ತಾರೆ; ಅವರನ್ನು ಓದಿದ ಸ್ತ್ರೀಯರ ಹೃದಯ ಅಭಿಮಾನದಿಂದ ಉಬ್ಬುವಂತೆ ಮಾಡುತ್ತಾರೆ.
ವೇಶ್ಯಾವೃತ್ತಿಯ ಉದ್ದಗಲಗಳನ್ನು ಒಬ್ಬ ವೇಶ್ಯೆಯ ಆತ್ಮವೃತ್ತಾಂತದ ಮೂಲಕವೇ ಹೇಳಿ ತೋರಿಸುವ ಕಾರಂತರ ಒಂದು ಅನನ್ಯವಾದ ಪ್ರಯತ್ನವೇ 1970 ರಲ್ಲಿ ಮೊದಲು ಪ್ರಕಟಗೊಂಡು ಜನಪ್ರಿಯತೆ ಗಳಿಸಿದ 'ಮೈ ಮನಗಳ ಸುಳಿಯಲ್ಲಿ' ಕಾದಂಬರಿ. ಆ ವೃತ್ತಿಯಲ್ಲಿರುವವರ ಕುರಿತು ಕಾರಂತರ ಕಾಳಜಿ, ಅವರನ್ನು ಆ ಸುಳಿಯಿಂದ ಹೊರತಂದು ವೈವಾಹಿಕ ಜೀವನ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ಸೇರಿಸುವ ಸಲುವಾಗಿ ತಮ್ಮ ಇಪ್ಪತ್ತನೆಯ ಹರಯದಲ್ಲಿ (ಯೌವನದಲ್ಲಿ) ಕಾರಂತರು ಮಾಡಿದ ಪ್ರಯತ್ನಗಳೆಲ್ಲ ಎಲ್ಲರಿಗೂ ತಿಳಿದಿರುವ ವಿಷಯವೇ. ಆ ಕೆಲಸದಲ್ಲಿ ತೊಡಗಿದಾಗ ಅಂತಹವರ ಜೀವನವನ್ನು ನಿಕಟವಾಗಿ ನೋಡಿ ಅದರ ಅನೇಕ ಮಗ್ಗುಲುಗಳು ವಿಶ್ಲೇಷಿಸಿದವರು ಅವರು. ಮುಂದೆ ತಮ್ಮ ಎಪ್ಪತ್ತನೆಯ ಮಾಗಿದ ಹರಯದಲ್ಲಿ ಆ ವಸ್ತುವಿನ ಕುರಿತು ಬರೆದ ಕಾದಂಬರಿಯಲ್ಲಿ ಆ ಕುಲವೃತ್ತಿಯಲ್ಲಿ ಇರುವ ಮಂಜುಳೆ ತನ್ನ ವೃತ್ತಿಯನ್ನು ಶಾಪವೆಂದು ಪರಿತಪಿಸದೆ, ಕೊನೆಯವರೆಗೆ ತನ್ನ ಆತ್ಮಾಭಿಮಾನ ಕಾಯ್ದುಕೊಂಡು ಬದುಕುವ ಚಿತ್ರಣ ಕಟ್ಟಿಕೊಟ್ಟಿರುವ ಕಾರಂತರು ಆ ವೃತ್ತಿಗಿದ್ದ ಘನತೆಯನ್ನು ಎತ್ತಿ ತೋರಿಸಿದ್ದಾರೆ. ಅಷ್ಟೇ ಅಲ್ಲದೆ ಪರಂಪರಾಗತವಾಗಿ ಬಂದ ವೇಶ್ಯಾ ಕುಲಧರ್ಮಕ್ಕೆ ಹಿಂದೆ ನಮ್ಮಲ್ಲಿದ್ದ ಗೌರವಯುತ ಸ್ಥಾನಮಾನಗಳು, ಅವರಿಗಿದ್ದ ಸಂಗೀತ, ನೃತ್ಯ, ನಾಟಕ, ಶೃಂಗಾರಗಳಂತಹ ಕಲೆಯ ಉತ್ತಮ ಸಿದ್ಧಿ, ಅವರನ್ನು ಸಮಾಜದಲ್ಲಿ ನಡೆಸಿಕೊಳ್ಳುತ್ತಿದ್ದ ರೀತಿ, ಅದು ಕ್ರಮೇಣ ತನ್ನ ನಿಜಸತ್ವವನ್ನು ಕಳೆದುಕೊಂಡು ನೀಚಸ್ಥಾನ ಪಡೆದದ್ದನ್ನು, ಗೋಮುಖವ್ಯಾಘ್ರರ ಕಪಟಕ್ಕೆ ಬಲಿಯಾಗಿ ಅಮಾಯಕ ಹೆಂಗಳೆಯರ ಶೋಷಣೆಯ ಮಾರ್ಗವಾದದ್ದನ್ನು ಕಾರಂತರು ಕಾದಂಬರಿಯ ಪ್ರಾರಂಭದಲ್ಲಿ ವಿವರಿಸಿದ್ದಾರೆ. ದಕ್ಷಿಣ ಕನ್ನಡದ ಬಸರೂರು (ವಸುಪುರ) ಎಂಬಲ್ಲಿ ಪರಂಪರೆಯಿಂದ ನಡೆದುಬಂದ ವಾರಾಂಗನೆಯ ವೃತ್ತಿಯನ್ನು ಕುರಿತು ಹೇಳುತ್ತಾ ಅಂತಹ ಒಬ್ಬ ವಾರಂಗನೆಯ ಮೂರು ಪೀಳಿಗೆಗಳ ಜೀವನವನ್ನು ಕಾರಂತರು ನಿಷ್ಪಕ್ಷಪಾತವಾಗಿ ಸೆರೆ ಹಿಡಿದಿದ್ದಾರೆ. ಮಂಜುಳಾ, ಅವಳ ಸಾಕು ಮಗಳು ಶಾರಿಕೆ, ಶಾರಿಕೆಯ ಸ್ವಂತ ಮಗಳು ಚಂದ್ರಿ - ಈ ಮೂವರು ತಮ್ಮ ಬದುಕನ್ನು ಕಂಡ ಬಗೆ, ಕಟ್ಟಿಕೊಂಡ ಬಗೆಯೇ ಕಾದಂಬರಿಯ ಕಥಾಹಂದರ.
"ನಾವಿರುವುದು ಮೈಯನ್ನು ಮಾತ್ರ ಮಾರಿಕೊಳ್ಳುವುದಕ್ಕೆ, ಮನಸ್ಸನ್ನಲ್ಲ" ಎಂಬುದನ್ನು ತನ್ನ ತಾಯಿಯಿಂದ ಕೇಳಿ ಬೆಳೆದ ಮಂಜುಳೆಗೆ ಮಾತ್ರ ಅದನ್ನು ಒಪ್ಪಿಕೊಂಡು ಬದುಕುವುದು ಸಾಧ್ಯವಾಗುವುದಿಲ್ಲ. ಗರತಿಯಂತೆ ಗೌರವದಿಂದ ಬಾಳಿದ ತನ್ನಮ್ಮ ಅವಳನ್ನು ಇಟ್ಟುಕೊಂಡವನಿಗೆ ಬೇಕಾದಂತೆ ಬಾಳಿ, ತನ್ನಾಸೆ, ಇಂಗಿತಗಳನ್ನೆಲ್ಲ ಮೌನವಾಗಿ ನುಂಗಿ ಬದುಕಿದ್ದು ಅವಳಿಗೆ ಒಂದು ಪ್ರಶ್ನೆಯಾಗಿ ಕಾಣುತ್ತದೆ. ಮೈ, ಮನಗಳ ಸಾಮರಸ್ಯದಿಂದ ಮಾತ್ರವೇ ಬಾಳು ಸೊಗಯಿಸುವುದೆಂದು ತರ್ಕಿಸಿ, ಕಲ್ಪಿಸಿಕೊಂಡು ಬೆಳೆಯುತ್ತಾಳೆ. ತನ್ನ ತಾಯಿ ಪಾಲಿಸಿಕೊಂಡು ಬಂದ ಘನತೆಯನ್ನು ಬಿಡದೆ, ತನ್ನ ವೃತ್ತಿಧರ್ಮಕ್ಕೆ ನ್ಯಾಯ ಸಲ್ಲಿಸುತ್ತಲೇ, ತನ್ನನ್ನು ಕೂಡಿದವರಲ್ಲಿ ದೇಹ, ಮನಸ್ಸುಗಳ ಸಾಮರಸ್ಯಕ್ಕಾಗಿ ಹಂಬಲಿಸಿ ನಿರಾಸೆಗೊಳ್ಳುತ್ತಾಳೆ. ಕೂಸಾಳುಗಳಾದ ವೃದ್ಧ ದಂಪತಿ ಪಮ್ಮ, ದುಗ್ಗಿಯರ ದಾಂಪತ್ಯದ ಸಾಮರಸ್ಯ ನೋಡಿ ದೇಹದ ಸೌಂದರ್ಯ, ಶೃಂಗಾರವನ್ನು ದಾಟಿ ನಿಲ್ಲುವ ಆ ಪವಿತ್ರ ಅನುಬಂಧವನ್ನು ಪಡೆಯುವ ಆಕಾಂಕ್ಷೆ ಹೊಂದುತ್ತಾಳೆ. ಮುಂದೊಂದು ದಿನ ಸುಬ್ರಾಯ ಉಳ್ಳೂರರಿಂದ ಮಾನಸಿಕವಾಗಿ ವಿಕಸನ ಹೊಂದಿ, ಆನಂದಮೂರ್ತಿಗಳಲ್ಲಿ (ಲಕ್ಷ್ಮಣ ತೀರ್ಥ) ಸಾಮರಸ್ಯ ಸಾಧಿಸಿ ತೃಪ್ತಿ ಕಾಣುತ್ತಾಳೆ.
ಕಾಮ, ದೇಹತೃಷೆಗಳ ವಿವರಗಳನ್ನು ನಿರ್ಮಲವಾಗಿ ಸುಂದರ ಪ್ರತಿಮೆಗಳ ಮೂಲಕ, ಕೊಂಚವೂ ಅಶ್ಲೀಲ ಅನ್ನಿಸದಂತೆ ಹೆಣೆದಿರುವ ಕಾರಂತರ ಸ್ವಚ್ಚ ಮನೋಭಾವದಿಂದ, ಆ ವೃತ್ತಿಯ ಘನತೆ, ಗೌರವಗಳನ್ನು ಮುಜುಗರವಿಲ್ಲದೆ ಓದುಗ ಅರಿತುಕೊಳ್ಳುಬಹುದಾದಂತೆ ಕಾದಂಬರಿ ಮೂಡಿ ಬಂದಿದೆ.
ಕೊನೆಯಲ್ಲಿ "ನನ್ನ ತಂಬೂರಿಯ ದಂಡ, ಬುರುಡೆ ಉಳ್ಳೂರರು, ತಂತಿ ಅನಂದರು. ಅವರಿಬ್ಬರೂ ನನ್ನ ಜತೆಯಲ್ಲಿ ಅನುದಿನ ಇರುವುದರಿಂದ ನಾನು ಸುಮಂಗಲೆ, ನಿತ್ಯ ಸುಮಂಗಲೆ. ನನ್ನನ್ನು ಪಮ್ಮ, ದುಗ್ಗಿಯರು ಹರಸಿದ್ದರೆ ಈ ತೃಪ್ತಜೀವಿಗೆ ಯಾರ ಹಂಗೂ ಇಲ್ಲ, ಯಾವ ಹೊರಗಣ ಉಡುಗೊರೆಯೂ ಬೇಕಿಲ್ಲ" ಎಂದು ಮಂಜುಳಾ ಮುಗಿಸಿದ ಆತ್ಮವೃತ್ತ ಓದಿದ ವಿದ್ಯಾವಂತ ಮೊಮ್ಮಗಳು ಚಂದ್ರಿಗೆ ತನ್ನ ಬದುಕಿನ ಗುರಿ ನಿಚ್ಚಳವಾಗುತ್ತದೆ. ಮರ್ಯಾದೆಯಿಂದ ಬದುಕು ನಡೆಸಬೇಕು ಎಂಬ ಅವಳ ಆಸೆ ದೃಢವಾಗಿ, ಅದಕ್ಕಾಗಿ ಮಾಸ್ತರಿಕೆಯ ವೃತ್ತಿ ಹಿಡಿಯುವೆ ಎಂಬ ಯೋಜನೆಯೂ ಗಟ್ಟಿಗೊಳ್ಳುವಲ್ಲಿ ಕಾದಂಬರಿ ಧನಾತ್ಮಕ ಅಂತ್ಯ ಕಾಣುತ್ತದೆ.
ಅಡಿಗಳು, ಅವರ ಪತ್ನಿ ಕಾವೇರಮ್ಮ, ಕಂಡಲೂರು ಪೈಗಳು, ಉಳ್ಳೂರರು, ಅವರ ಪತ್ನಿ ಲಕ್ಷ್ಮಮ್ಮ, ಪದ್ಮನಾಭ, ಲಕ್ಷ್ಮಣ ತೀರ್ಥರು, ಗಂಗಕ್ಕ, ನಂಜಪ್ಪ, ಮೆಕ್ಕೆಮನೆಯವರು, ಮಂಜುಳೆಯ ಸ್ವಭಾವಕ್ಕೆ ವಿರುದ್ಧವಾದ ಚಂಚಲ ಸ್ವಭಾವದ ಶಾರಿಕೆ - ಹೀಗೆ ಎಲ್ಲಾ ಪಾತ್ರಗಳನ್ನೂ ಯಾವುದೇ ತಪ್ಪು - ಒಪ್ಪುಗಳೆಂಬ ಕನ್ನಡಕ ಧರಿಸಿ ನೋಡದೆ ನಿಷ್ಪಕ್ಷಪಾತವಾಗಿ, ಮೂಲಭೂತವಾದ ಮನುಷ್ಯ ಸಹಜ ಧರ್ಮ ಎಲ್ಲಾ ಕಟ್ಟುಪಾಡು, ಬಂಧನಗಳಿಗಿಂತ ಮೇಲಿನದು ಎಂದು ಕಾರಂತರು ತೋರಿಸಿದ್ದಾರೆ. 'ದೇಹ ಧರ್ಮ ಭಂಡಾದರೆ ಈ ಜಗತ್ತಿನಲ್ಲಿ ತುಂಬಿದ್ದೆಲ್ಲವೂ ಭಂಡಿನ ಫಲವೇ' ಎನ್ನುವ ಉಳ್ಳೂರರ ಮಾತು ಅದಕ್ಕೆ ಪೂರಕವೆನಿಸುವಂತಿದೆ.





Comments