ಮಾದರಿ ಮೈಸೂರಿನ ತಾಯಿಬೇರು - ರಾಜಮಾತೆ ಕೆಂಪನಂಜಮ್ಮಣ್ಣಿ
- vidyaram2
- Nov 9, 2024
- 4 min read
Updated: Nov 10, 2024

ಗಂಭೀರವಾದ ಅಧ್ಯಯನಪೂರ್ಣ ಸಾಹಿತ್ಯ ರಚನೆಗೆ ಹೆಸರಾಗಿರುವ ಡಾ.ಗಜಾನನ ಶರ್ಮರ ಸಂಗ್ರಹಯೋಗ್ಯ ಕೃತಿಗಳು ‘ಬೆಳಕಾಯಿತು ಕರ್ನಾಟಕ’, ‘ಕನ್ನಡದಲ್ಲಿ ಮಕ್ಕಳ ನಾಟಕ ಮತ್ತು ರಂಗಭೂಮಿ’, ‘ಪುನರ್ವಸು’, ‘ಚೆನ್ನಭೈರಾದೇವಿ’, ‘ಪ್ರಮೇಯ’ ಮುಂತಾದವು. ‘ಚೆನ್ನಭೈರಾದೇವಿ’ ಕೃತಿಗೆ ಇತ್ತೀಚಿಗೆ ದೊರೆತ 2021ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿವೆ.
ಇದೀಗ 2024ರ ಸೆಪ್ಟೆಂಬರ್ ತಿಂಗಳಿನಲ್ಲಿ ‘ರಾಜಮಾತೆ ಕೆಂಪನಂಜಮ್ಮಣ್ಣಿ’ ಎಂಬ ಅವರ ಹೊಸ ಐತಿಹಾಸಿಕ ಕಾದಂಬರಿಯನ್ನು ಅಂಕಿತ ಪುಸ್ತಕ ಪ್ರಕಾಶನವು ಹೊರತಂದಿದೆ. ಕನ್ನಡಿಗರ ಹೆಮ್ಮೆಯ ಮೈಸೂರಿನ ಇತಿಹಾಸದಲ್ಲಿ ಆಗಿಹೋದ ಒಬ್ಬ ಮಹಾತಾಯಿಯ ಅಪೂರ್ವ ಕೊಡುಗೆಗಳನ್ನು ಇಂದಿನ ಜನಮನಕ್ಕೆ ಮುಟ್ಟಿಸುವ ಅರ್ಥಪೂರ್ಣವಾದ ಕೆಲಸವನ್ನು ಅವರ ಈ ಕೃತಿಯು ಮಾಡುತ್ತದೆ. ಹತ್ತೊಂಬತ್ತನೆಯ ಶತಮಾನದ ಕೊನೆ ಹಾಗೂ ಇಪ್ಪತ್ತನೆಯ ಶತಮಾನದ ಆರಂಭದ ಸಂಕ್ರಮಣ ಕಾಲದಲ್ಲಿ ಬ್ರಿಟಿಷರ ದಾಸ್ಯದಲ್ಲಿದ್ದರೂ ಪೂರ್ವ ಪಶ್ಚಿಮಗಳೆರಡರ ಒಳಿತುಗಳನ್ನು ಅಳವಡಿಸಿಕೊಂಡು, ಕೆಡುಕುಗಳನ್ನು ನಿರ್ಮೂಲನಗೊಳಿಸಲು ಶ್ರಮಿಸುತ್ತಾ ‘ಸದ್ಯ ಮತ್ತು ಶಾಶ್ವತ’ಗಳ ಸಮನ್ವಯ ಸಾಧಿಸುತ್ತಾ ಪರಂಪರೆಯ ಬೇರನ್ನು ಗಟ್ಟಿಗೊಳಿಸುತ್ತಲೇ ಆಧುನಿಕತೆಗೆ ಮೈಯೊಡ್ಡಿ ಸಶಕ್ತವಾದ ನಾಡನ್ನು ಕಟ್ಟುವ ಕಾಯಕಕ್ಕೆ ತನ್ನನ್ನು ಸಮರ್ಪಿಸಿಕೊಂಡು ಅಹರ್ನಿಶಿ ದುಡಿದ ಈ ತಾಯಿಯ ಹೆಸರನ್ನು ಇದುವರೆಗೆ ಯಾವ ಪಠ್ಯ ಪುಸ್ತಕ ಅಥವಾ ಚರಿತ್ರೆಯ ಪುಸ್ತಕವೂ ಹೇಳಿಲ್ಲ. ಇಪ್ಪತ್ತೆಂಟರ ಎಳೆಯ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡು ತನ್ನ ಐದು ಮಕ್ಕಳು ಮತ್ತು ಮೈಸೂರು ಸಂಸ್ಥಾನವನ್ನು ಸಲಹುವ ಕರ್ತವ್ಯವನ್ನು ರಾಜಮಾತೆಯಾಗಿ (ರೀಜೆಂಟ್) ಏಳೆಂಟು ವರ್ಷಗಳ ಕಾಲ ಸಮರ್ಥವಾಗಿ ನಿಭಾಯಿಸಿ, ಅಧಿಕಾರ, ಕೀರ್ತಿಯ ಲಾಲಸೆ ಇಲ್ಲದೆ, ತಾನು ಜನ್ಮ ನೀಡಿ ತಿದ್ದಿ ತೀಡಿ ರೂಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರಂತಹ ಪುತ್ರನಿಗೆ ಅಧಿಕಾರವನ್ನು ಹಸ್ತಾಂತರಿಸಿ ನಿರ್ಲಿಪ್ತ ಜೀವನ ನಡೆಸಿದ ಈ ಮಹಾಮಾತೆಯ ಕಥೆಯನ್ನು ಶರ್ಮರು ಸಾಕಷ್ಟು ಸಂಶೋಧಿಸಿ, ದಾಖಲೆಗಳನ್ನು ಆಧರಿಸಿ ಭವ್ಯವಾಗಿ ಈ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಸುಮಾರು ನಾಲ್ಕುನೂರು ಪುಟಗಳಿರುವ ಈ ಕಾದಂಬರಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿರುವ ಲೇಖಕರು ಮೈಸೂರು ಸಂಸ್ಥಾನದ ನಾಡಗೀತೆಯಾದ ‘ಕಾಯೌ ಶ್ರೀಗೌರಿ… ’ ಗೀತೆಯ ಮೊದಲ ನಾಲ್ಕು ಪದಗಳಿಂದ ಆ ಭಾಗಗಳನ್ನು ಹೆಸರಿಸಿರುವುದು ಮಾರ್ಮಿಕವಾಗಿರುವಂತೆ ಭಾಸವಾಗುತ್ತದೆ. ಪತಿ ಚಾಮರಾಜ ಅರಸರ ಅಕಾಲಿಕ ಮರಣದಿಂದ ಆಘಾತಗೊಂಡ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ ದುಃಖ, ಗೊಂದಲಗಳನ್ನು ಮನಮಿಡಿಯುವಂತೆ ನಿರೂಪಿಸಿ ಅವರ ಆರ್ತವನ್ನು ಧ್ವನಿಸಿ ಕ್ರಮೇಣ ಮನಸ್ಸನ್ನು ಗಟ್ಟಿಗೊಳಿಸಿಕೊಂಡು ಮಗ ಪ್ರಾಪ್ತವಯಸ್ಕನಾಗುವವರೆಗೆ ತಾವು ರಾಜ್ಯಾಡಳಿತ ನಡೆಸಲು ಒಪ್ಪುವವರೆಗಿನ ಮೊದಲ ಭಾಗದ ಹೆಸರು ‘ಕಾಯೌ ಶ್ರೀಗೌರಿ’; ಅನನುಭವಿಯಾದರೂ ಆಡಳಿತದ ಚುಕ್ಕಾಣಿ ಹಿಡಿದು ಅದರಲ್ಲಿ ನೈಪುಣ್ಯ ಸಾಧಿಸುತ್ತಾ ನಾಡಿನ ಜನರ ಹಿತಕ್ಕಾಗಿ ಕರುಣೆ, ಪ್ರೀತಿಗಳಿಂದ ಅನೇಕ ಯೋಜನೆಗಳನ್ನು ಕೈಗೊಳ್ಳುವ ವಿವರವಿರುವ ಎರಡನೆಯ ಭಾಗದ ಹೆಸರು ‘ಕರುಣಾ ಲಹರೀ’; ಆಡಳಿತದಲ್ಲಿ ಪೂರ್ಣ ದಕ್ಷತೆ ಸಾಧಿಸಿ ಹೆಣ್ಣಾಗಿ ಅವರ ವಿಭಿನ್ನ ದೃಷ್ಟಿಕೋನದಿಂದ ಗಂಡಿಗಿಂತ ಭಿನ್ನವಾಗಿ ಉದಾತ್ತವಾದ ಚಾಣಾಕ್ಷ ನಿರ್ಧಾರಗಳನ್ನು ಕೈಗೊಂಡು ಜಯಿಸಿದ ಕಥನವಿರುವ ಮೂರನೆಯ ಭಾಗದ ಹೆಸರು ‘ತೋಯಜಾಕ್ಷೀ’; ಕೊನೆಗೆ ಮಗ ಪ್ರೌಢನಾಗುತ್ತಿದ್ದಂತೆ ಅಧಿಕಾರವನ್ನು ಅವನಿಗೆ ವಹಿಸಿ ತಮ್ಮ ಅಧಿಕಾರದ ಅವಧಿಯ ಸಾಧನೆ, ಒಳಿತು, ಕೆಡುಕುಗಳನ್ನು ಅವಲೋಕಿಸಿ ತೃಪ್ತಿಯಿಂದ ನಿರ್ಲಿಪ್ತ ಜೀವನ ನಡೆಸುವತ್ತ ಸಾಗುವ ಕೊನೆಯ ಭಾಗದ ಹೆಸರು ‘ಶಂಕರೀಶ್ವರೀ’.
ಆಳುವವರ ವಿಶಾಲ ದೃಷ್ಟಿಕೋನ, ಚಾಣಾಕ್ಷತೆ, ನಿಸ್ವಾರ್ಥ ಸೇವಾ ಮನೋಭಾವ, ಉನ್ನತವಾದ ಮುಂದಾಲೋಚನೆಯ ಜೊತೆಗೆ ದಕ್ಷ ಅಧಿಕಾರಿಗಳ ಸಹಕಾರ ದೊರೆತರೆ ಏಳೆಂಟು ವರ್ಷಗಳಲ್ಲಿ ಏನೇನನ್ನು ಸಾಧಿಸಲು ಸಾಧ್ಯವಿದೆ ಎಂದು ರಾಜಮಾತೆಯ ಆಡಳಿತಾವಧಿಯ ಕೊಡುಗೆಗಳನ್ನು ಗಮನಿಸಿದರೆ ಅರಿಯಬಹುದು. ಶಿವನಸಮುದ್ರ ವಿದ್ಯುತ್ ಸ್ಥಾವರದ ನಿರ್ಮಾಣ, ಮಾರಿಕಣಿವೆ ಅಣೆಕಟ್ಟೆ, ಟಾಟಾ ವಿಜ್ಞಾನ ಮಂದಿರದ ಪೂರ್ವ ತಯಾರಿ, ಮೈಸೂರಿನ ನೂತನ ಅರಮನೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಮಹಿಳಾ ಶಿಕ್ಷಣಕ್ಕೆ ಒತ್ತು, ಬಾಲ್ಯ ವಿವಾಹ ರದ್ದತಿ, ವಿದೇಶಕ್ಕೆ ತೆರಳಲು ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಕೃಷಿ ಬ್ಯಾಂಕ್ ಸ್ಥಾಪನೆ, ಕೆರೆಗಳ ನಿರ್ಮಾಣ, ರೈಲ್ವೆ ವಿಸ್ತರಣೆ, ರಸ್ತೆ, ಸೇತುವೆ, ಹೆರಿಗೆ ಆಸ್ಪತ್ರೆ, ಕಣ್ಣಿನ ಆಸ್ಪತ್ರೆ, ಪ್ಲೇಗ್ ನಿಯಂತ್ರಣ, ನಗರ ಪಟ್ಟಣಗಳ ನೈರ್ಮಲೀಕರಣ, ಬೆಂಗಳೂರು ಮೈಸೂರು ನಗರಗಳ ವಿಸ್ತರಣೆ, ಶಾಶ್ವತ ಕೊಳಾಯಿ ಕುಡಿಯುವ ನೀರು ಯೋಜನೆ, ಗಣಿಗಾರಿಕೆಗೆ ಪ್ರೋತ್ಸಾಹ, ವಿಧವಾ ಪುನರ್ವಸತಿ, ಉನ್ನತ ಶಿಕ್ಷಣದ ವಿಸ್ತರಣೆ, ಅತ್ಯುತ್ತಮ ಆರ್ಥಿಕ ನಿರ್ವಹಣೆ, ಆಡಳಿತ ವ್ಯವಸ್ಥೆಯ ಸುಧಾರಣೆ, ಅದ್ವಿತೀಯ ಬರ ನಿರ್ವಹಣೆ - ಇವೆಲ್ಲವನ್ನೂ ಒಂದೂಕಾಲು ಶತಮಾನದ ಹಿಂದೆಯೇ, ಪೂರ್ಣ ಸ್ವಾತಂತ್ರ್ಯವಿಲ್ಲದೆ ಬ್ರಿಟಿಷ್ ಚಕ್ರಾಧಿಪತ್ಯದ ಅಡಿಯಲ್ಲಿಯೇ ರಾಜಮಾತೆ ಕೆಂಪನಂಜಮ್ಮಣ್ಣಿ ಎಂಬ ಹೆಣ್ಣುಮಗಳು ದಿವಾನ ಶೇಷಾದ್ರಿ ಅಯ್ಯರ್ ಮತ್ತಿತರರ ಸಹಕಾರದಲ್ಲಿ ಸಾಧಿಸಿದ್ದಾರೆ. ಪ್ರಸ್ತುತ ಸ್ವತಂತ್ರ ಭಾರತದ ಆಡಳಿತ ವ್ಯವಸ್ಥೆಯೊಂದಿಗೆ ಇದನ್ನು ತುಲನೆ ಮಾಡುವ ಅಗತ್ಯ ಇಂದು ಎಂದಿಗಿಂತ ಹೆಚ್ಚಾಗಿದೆ. ಅಂದಿಗಿಂತ ಹೆಚ್ಚು ಆರ್ಥಿಕ ಸ್ವಾವಲಂಬನೆ, ವಿಜ್ಞಾನ-ತಂತ್ರಜ್ಞಾನಗಳ ಪ್ರಗತಿ ಎಲ್ಲ ಇದ್ದರೂ ಸ್ವಾರ್ಥ ಮನೋಭಾವ ತುಂಬಿದ ಅಧಿಕಾರಿಗಳು, ರಾಜಕಾರಣಿಗಳಿಂದ ತುಂಬಿ ಹೋದ ಆಡಳಿತದಲ್ಲಿ ಸಣ್ಣ ಮಟ್ಟದ ಸುಧಾರಣೆಗಳನ್ನು ತರುವುದೂ ಎಷ್ಟು ಕಷ್ಟಸಾಧ್ಯವಾಗಿದೆ ಎಂಬುದು ವಿಷಾದನೀಯ ಸತ್ಯ.
ಕಾದಂಬರಿಯ ಓದಿನ ಹೆಜ್ಜೆ ಹೆಜ್ಜೆಗೂ ಮೈಸೂರಿನ ಅರಸು ಮನೆತನದ ಕುರಿತು ಓದುಗರಲ್ಲಿ ಅಭಿಮಾನ ಪುಟಿದೆದ್ದು ಮೈಪುಳಕಗೊಳ್ಳುವ ರೀತಿಯಲ್ಲಿ ಶರ್ಮರು ಚಿತ್ರಿಸಿದ್ದಾರೆ. ‘ಕಾಲಗರ್ಭದಲ್ಲಿ ಅಡಗಿರಬಹುದಾದ ಕೊಹಿನೂರುಗಳನ್ನು ಹುಡುಕಿ ಹೊರತೆಗೆಯಬಲ್ಲ ಶೋಧನಾ ಕುಶಲತೆ ಮತ್ತು ಆ ಅಮೂಲ್ಯ ವಜ್ರಗಳ ಪರಿಚಯವನ್ನು ಓದುಗರ ಕಣ್ಣು ಕೋರೈಸುವಂತೆ ಚಿತ್ರಿಸುವ ಸಾವಧಾನದ ಬರಹಶೈಲಿ ಗಜಾನನ ಶರ್ಮ ಅವರಿಗೆ ದಕ್ಕಿರುವುದು ಕನ್ನಡಿಗರ ಅದೃಷ್ಟ’ ಎಂಬ ಕೆ.ಎನ್.ಗಣೇಶಯ್ಯನವರ ಬೆನ್ನುಡಿಯ ಉದ್ಗಾರ ಇದನ್ನು ಸಮರ್ಥಿಸುವಂತಿದೆ. ಹಾಗೆಂದು ಕೇವಲ ಉತ್ಪ್ರೇಕ್ಷೆ, ಕಲ್ಪನೆ ಮತ್ತು ಐತಿಹ್ಯಗಳನ್ನು ಆಧರಿಸಿ ಐತಿಹಾಸಿಕ ಪಾತ್ರವೊಂದನ್ನು ಸಹಜ ಗಾತ್ರಕ್ಕಿಂತ ಹೆಚ್ಚು ಉಬ್ಬಿಸಿ ಚಿತ್ರಿಸಬಾರದೆಂಬ ಸಂಕಲ್ಪವನ್ನು ಮೀರದಿರುವ ಎಚ್ಚರಿಕೆಯನ್ನೂ ವಹಿಸಿ ಶರ್ಮರು ಸಮತೋಲನ ಸಾಧಿಸಿದ್ದಾರೆ. ಅವರೇ ಹೇಳುವಂತೆ ‘ಜಗತ್ತಿನ ಯಾವ ಅರಸೊತ್ತಿಗೆಯೂ ಕೇವಲ ಒಳಿತನ್ನು ಮಾಡಿಲ್ಲ, ಹಾಗೆಯೇ ಕೆಡುಕನ್ನು ಕೂಡ. ಹಾಗಾಗಿ ಒಳಿತು ಕೆಡಕುಗಳ ಪ್ರಮಾಣವನ್ನು ಹೋಲಿಸಿ, ಹೆಚ್ಚು ಒಳಿತೆಂದು ಕಂಡದ್ದರ ಪರವಾಗಿ ನಿಲ್ಲುವುದು ಜವಾಬ್ದಾರಿಯುಳ್ಳ ವ್ಯಕ್ತಿ ಮತ್ತು ಲೇಖಕನ ಕರ್ತವ್ಯ.’ ಈ ಪ್ರಜ್ಞೆಯನ್ನು ಜಾಗೃತವಾಗಿ ಇರಿಸಿಕೊಂಡೇ ಅವರು ಎಲ್ಲ ಐತಿಹಾಸಿಕ ಪಾತ್ರಗಳನ್ನೂ ಎಚ್ಚರಿಕೆಯಿಂದ ಹೆಣೆದರೂ ಕಾದಂಬರಿಯನ್ನು ಕೇವಲ ಶುಷ್ಕ ದಾಖಲೆಯನ್ನಾಗಿಸದೆ ಅದರಲ್ಲಿ ಜೀವ, ಭಾವ ತುಂಬಿ ತಮ್ಮ ಕಥನ ಶಕ್ತಿಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಯುದ್ಧ, ಕಾದಾಟಗಳಿಲ್ಲದಿದ್ದರೆ ರಾಜರ ಜೀವನ ಎಂದರೆ ಸುಖಮಯ ಸುಪ್ಪತ್ತಿಗೆ ಎಂದು ಭಾವಿಸುವ ಸಾಮಾನ್ಯ ಜನರಿಗೆ ಅರಮನೆ, ಅಂತಃಪುರದ ಬದುಕಿನ ಸವಾಲುಗಳು, ಹೊಣೆಗಾರಿಕೆಗಳು, ತಮ್ಮ ಸಂಕಷ್ಟಗಳನ್ನು ಹೊರಗೆ ತೋರಿಸಿಕೊಳ್ಳದೆ ಸ್ಥಿತಪ್ರಜ್ಞತೆ ಮೆರೆಯುವ ದಿಟ್ಟತೆ ರೂಢಿಸಿಕೊಳ್ಳುವ ಅನಿವಾರ್ಯತೆ ಮುಂತಾದ ಒಳಮುಖಗಳ ಪರಿಚಯವನ್ನು ಈ ಕಾದಂಬರಿ ಮಾಡಿಕೊಡುತ್ತದೆ. ಅಂತೆಯೇ ಶೇಷಾದ್ರಿ ಅಯ್ಯರ್, ಅಂಬಿಲ್ಲರು, ವೆಂಕಟ ಕೃಷ್ಣಯ್ಯ, ಡಾ. ಪದ್ಮನಾಭ ಪಲ್ಪು ಮುಂತಾದ ಶ್ರೇಷ್ಠ ವ್ಯಕ್ತಿತ್ವಗಳ, ಭಾರತದ ಇತರ ಕೆಲವು ರಾಜಮನೆತನಗಳ, ಪ್ರತಿಷ್ಠಿತ ವ್ಯಕ್ತಿ, ಮನೆತನಗಳ (ಬರೋಡಾದ ಅರಸರು, ಮದ್ರಾಸ್ ಪ್ರಾಂತ್ಯದವರು, ರಜಪೂತ ರಾಜರು, ವಿವೇಕಾನಂದ, ಟ್ಯಾಗೋರ್ ಕುಟುಂಬ ಇತ್ಯಾದಿ) ಪರಿಚಯ, ಅವರ ನಡುವಿನ ಸಂಬಂಧ, ಕೆ.ಜಿ.ಎಫ್. ಗಣಿ ಕಾರ್ಮಿಕರ ದಾರುಣ ಬದುಕು, ಅಲ್ಲಿಯ ಬ್ರಿಟಿಷ್ ಅಧಿಕಾರಿಗಳ ಐಷಾರಾಮಿ ಬದುಕು, ಡಾ.ಮೆಗ್ಗಾನ್ ಮತ್ತವರ ಪತ್ನಿ ಮುಂತಾದ ಮಾನವೀಯ ಬ್ರಿಟಿಷ್ ವ್ಯಕ್ತಿಗಳ ಪರಿಚಯವನ್ನೂ ಕಾದಂಬರಿ ಮಾಡಿಕೊಡುತ್ತದೆ. ಅಲ್ಲಲ್ಲಿ ಕೆಲವೇ ಕಡೆ ಸ್ವಲ್ಪ ವಿವರಗಳು ಹೆಚ್ಚಾಯ್ತೆನೋ ಎನ್ನಿಸಿದರೂ ಎಲ್ಲೂ ನೀರಸವೆನಿಸದೆ ಕಾದಂಬರಿ ಓದುವಷ್ಟು ಕಾಲ ಓದುಗರನ್ನು ಆ ಕಾಲಕ್ಕೆ ಕರೆದೊಯ್ದು ಈ ಎಲ್ಲ ಪಾತ್ರಗಳ ಜೊತೆ ಒಡನಾಡಿಸಿ ಅವರನ್ನು ಆಪ್ತರನ್ನಾಗಿಸುತ್ತದೆ.
ನಾಲ್ವಡಿ ಕೃಷ್ಣರಾಜರಿಗೆ ಸಂಸ್ಥಾನವನ್ನು ಹಸ್ತಾಂತರಿಸುವಾಗ ರಾಜಮಾತೆಯವರಿಂದ ಶರ್ಮರು ಆಡಿಸುವ - ‘ಎಂದೂ ಸ್ವಜನಪಕ್ಷಪಾತದ ಅಪವಾದ ಬರದಂತೆ ಎಲ್ಲರನ್ನೂ ಒಳಗೊಂಡು ಯಾರನ್ನೂ ಹೊರಗಿಡದೆ ಬದ್ಧತೆಯಿಂದ ರಾಜ್ಯಭಾರ ನಡೆಸು. ಪರಿಶ್ರಮವಿಲ್ಲದ ಗಳಿಕೆ, ಗುಣವಿಲ್ಲದ ಜ್ಞಾನ, ನೈತಿಕತೆಯಿಲ್ಲದ ವ್ಯವಹಾರ, ಮನುಷ್ಯತ್ವವಿಲ್ಲದ ವಿಜ್ಞಾನ, ತ್ಯಾಗವಿಲ್ಲದ ಆರಾಧನೆ, ಸಿದ್ಧಾಂತವಿಲ್ಲದ ರಾಜಕಾರಣ, ಸಂಯಮವಿಲ್ಲದ ಅಧಿಕಾರ, ಅನುಕಂಪವಿಲ್ಲದ ಆಡಳಿತ, ಕ್ಷಮೆಯಿಲ್ಲದೆ ದಂಡಾಧಿಕಾರ ಎಲ್ಲವೂ ಸದೃಢ ಸಮಾಜ ನಿರ್ಮಾಣಕ್ಕೆ ಶತ್ರುಗಳು ಅನ್ನುವುದು ನೆನಪಿರಲಿ. ಸಮಸಮಾಜ ನಿರ್ಮಾಣ ನಿನ್ನ ಗುರಿಯಾಗಲಿ. ಮಗೂ, ಸುಪ್ಪತ್ತಿಗೆಯಲ್ಲಿ ಮಲಗಿದರೂ ಒಪ್ಪತ್ತಿನೂಟಕ್ಕೂ ಗತಿಯಿಲ್ಲದವನ ಸಂಕಷ್ಟ ನೆನಪಾಗುತ್ತಿರಲಿ’ - ಎಂಬ ಅರ್ಥಪೂರ್ಣವಾದ ಮಾತುಗಳನ್ನು ಇಂದು ಮತ್ತು ಎಂದೆಂದೂ ನಮ್ಮ ಎಲ್ಲ ರಾಜಕಾರಣಿಗಳು, ಆಡಳಿತ ವರ್ಗದವರು, ಅಧಿಕಾರಿಗಳು ಅರ್ಥ ಮಾಡಿಕೊಳ್ಳಲೇಬೇಕಾದ ಅಗತ್ಯವಿದೆ. ಕಾದಂಬರಿಯ ಕೊನೆಕೊನೆಯ ಪುಟಗಳಲ್ಲಿ ಬರುವ ವೆಂಕಟ ಕೃಷ್ಣಯ್ಯ, ಅಂಬಿಲ್ಲರು ಮತ್ತು ರಾಜಮಾತೆಯವರ ಸಂವಾದವಂತೂ ಬಹಳ ತಾರ್ಕಿಕವಾಗಿ ಮಾರ್ಮಿಕವಾಗಿ ವಾಸ್ತವವಾಗಿ ಮೂಡಿಬಂದಿದೆ. ಅಲ್ಲಿ ರಾಜಮಾತೆ ಹೇಳುವಂತೆ ‘ಮಾದರಿ ರಾಜ್ಯ ಇದ್ದಕ್ಕಿದ್ದಂತೆ ಹುಟ್ಟಿ ಬೆಳೆಯುವುದಿಲ್ಲ. ಅದು ತಲೆಮಾರುಗಳ ಸಾಧನೆ, ಸುದೀರ್ಘ ಕಾಲದ ತಪಸ್ಸಿನ ಫಲ’. ಇಂತಹ ತಪಸ್ಸಿನಿಂದ ನಮಗೆ ನಾಡು ಕಟ್ಟಿಕೊಟ್ಟ ನಮ್ಮ ಪೂರ್ವಜರ ಇತಿಹಾಸವನ್ನು ಅರಿತಾದರೂ ನಾವು ಇಂದು ನಮ್ಮ ಹೊಣೆಗಾರಿಕೆ, ಕರ್ತವ್ಯಗಳನ್ನು ಅರಿತು ನಡೆಯಲು ಕಲಿಯಬೇಕು. ಈ ನಿಟ್ಟಿನಲ್ಲಿ ಎಲ್ಲ ಕನ್ನಡಿಗರೂ, ಭಾರತೀಯರೂ ಇಂತಹ ಚರಿತ್ರೆಗಳನ್ನು ಓದಿ, ತಮ್ಮ ಮಕ್ಕಳಿಗೂ ಓದಲು ಹೇಳಿ ಸತ್ಯವನ್ನು ಮನದಟ್ಟು ಮಾಡುವ ಅವಶ್ಯಕತೆ ಇದೆ.
ನಮ್ಮ ಇತಿಹಾಸ, ಪರಂಪರೆಗಳ ಚಿತ್ರಣ ನೀಡುವ ಇಂತಹ ಸಾಂಸ್ಕೃತಿಕ, ಐತಿಹಾಸಿಕ ಕೃತಿಗಳು ಈಗ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ ಎಂಬುದೇ ಕನ್ನಡಿಗರ ಭಾಗ್ಯ. ಈ ಕೃತಿಗಾಗಿ ಗಜಾನನ ಶರ್ಮರಿಗೆ ಮನದಾಳದ ಅಭಿನಂದನೆಗಳು. ಇಂತಹ ಇನ್ನೂ ಅನೇಕ ಉತ್ತಮ ಸಂಗ್ರಹಯೋಗ್ಯ ಕೃತಿಗಳು ಅವರಿಂದ ಕನ್ನಡಿಗರಿಗೆ ಲಭಿಸಲಿ ಎಂಬುದೇ ಸಾಹಿತ್ಯ ಪ್ರೇಮಿಗಳ ಆಶಯ.





Comments