ಮೂಕಜ್ಜಿಯ ಕನಸುಗಳು ಮತ್ತು ಸಂಸ್ಕಾರ
- vidyaram2
- Feb 22, 2023
- 2 min read
Updated: Mar 13, 2023

ಶೀರ್ಷಿಕೆ ಓದಿ ಇದೇನಪ್ಪ ಈ ಎರಡು ಕಾದಂಬರಿಗಳಿಗೆ ಏನು ಸಂಬಂಧ ಎಂದು ಆಶ್ಚರ್ಯವಾಯಿತೇ? ಹಾಗೆ ಮೇಲ್ನೋಟಕ್ಕೆ ನೇರವಾದ ಸಂಬಂಧವೇನೂ ಈ ಎರಡು ಜನಪ್ರಿಯ ಕಾದಂಬರಿಗಳಲ್ಲಿ ಇಲ್ಲ. ಇದೊಂದು ರೀತಿಯಲ್ಲಿ ಅಜಗಜದ ಹೋಲಿಕೆಯಾದೀತೆಂಬ ಅರಿವಿದ್ದರೂ ಯಾಕೋ ನಾನು ಇತ್ತೀಚಿಗೆ ಓದಿದ ಈ ಎರಡು ಪುಸ್ತಕಗಳ ಕುರಿತು ಒಟ್ಟಿಗೆ ಅನಿಸಿಕೆ ಹಂಚಿಕೊಳ್ಳೋಣ ಎನ್ನಿಸಿತು.
ಇವೆರಡೂ ಕಾದಂಬರಿಗಳು ರಚಿತವಾಗಿರುವುದು ಹೆಚ್ಚುಕಡಿಮೆ ಒಂದೇ ಸಮಯದಲ್ಲಿ. ೧೯೬೫ರಲ್ಲಿ ಅನಂತಮೂರ್ತಿಯವರ 'ಸಂಸ್ಕಾರ' ಹೊರಬಂದರೆ, ೧೯೬೮ರಲ್ಲಿ ಶಿವರಾಮ ಕಾರಂತರ 'ಮೂಕಜ್ಜಿಯ ಕನಸುಗಳು' ಬೆಳಕು ಕಂಡಿತು. ಈ ಕಾದಂಬರಿಗಳು ಪ್ರತಿನಿಧಿಸುವ ಕಾಲಘಟ್ಟ ಕೂಡ ಹೆಚ್ಚುಕಡಿಮೆ ಒಂದೇ ಎನ್ನಬಹುದು.ಅದು ಸ್ವಾತಂತ್ರ್ಯಪೂರ್ವೋತ್ತರದ ಬದಲಾವಣೆಯ ಸಂಧಿ ಕಾಲ. ಈ ಕಾದಂಬರಿಗಳ ತಿರುಳು ಧರ್ಮ, ಸಂಪ್ರದಾಯದ ಹೆಸರಿನಲ್ಲಿ ಕಾಲಾಂತರದಿಂದ ನಡೆದುಬಂದ ಅನಾಚಾರ, ಅಂಧಶ್ರದ್ಧೆ, ಡಾಂಭಿಕತನದ ವಿರೋಧವಾಗಿ ಎದ್ದ ವೈಚಾರಿಕ ಧ್ವನಿಯೇ ಆಗಿವೆ. ಎರಡರಲ್ಲೂ ಕಾಣುವುದು ಪ್ರಗತಿಶೀಲ ಮನೋಭಾವದ, ಅಪ್ಪ ಹಾಕಿದ ಆಲದ

ಮರಕ್ಕೆ ನೇತುಬೀಳುವ ಪರಂಪರೆಯನ್ನು ಪ್ರಶ್ನಿಸಿ ಸ್ವತಂತ್ರವಾದ ಆಲೋಚನೆ, ಸರಿ-ತಪ್ಪುಗಳ ಪರಾಮರ್ಶೆ ನಡೆಸುವ ವಿಶಾಲವಾಗಿ ತೆರೆದ ಮನಸ್ಸುಗಳ ಜಿಜ್ಞಾಸೆ.
ಈ ಸಮಾನ ವಿಚಾರಗಳು ಎರಡೂ ಕಾದಂಬರಿಗಳ ಕಥಾ ಹಂದರದಲ್ಲಿ ತೆರೆದುಕೊಳ್ಳುತ್ತಾ ಹೋಗುವ ಪರಿ ಮಾತ್ರ ಬಹಳವೇ ಭಿನ್ನ.
ಕಾರಂತರು ನವೋದಯ ಶೈಲಿಯಲ್ಲಿ ತಾಳ್ಮೆ, ಶಾಂತಿಗಳ ತಪಸ್ಸಿನಿಂದ ಬದುಕಿನ ಪೂರ್ಣ ಅನುಭವದಲ್ಲಿ ಬೆಂದು ಪರಿಪಕ್ವಗೊಂಡ ೮೦ರ ಆಸುಪಾಸಿನ ವಯಸ್ಸಿನ ಮೂಕಜ್ಜಿಯ ಬಾಯಿಂದ ಈ ವಿಚಾರಗಳ ಮಂಥನ ನಡೆಸಿದ್ದಾರೆ. ಕಾರಂತರ ಎಲ್ಲಾ ಬರಹಗಳಂತೆ, 'ಮೂಕಜ್ಜಿಯ ಕನಸುಗಳು' ಜೀವನ ಪ್ರೀತಿಯನ್ನು ಕಟ್ಟಿಕೊಡುವ,ಧನಾತ್ಮಕ ಭಾವ ತುಂಬಿರುವ ಕಾದಂಬರಿ.
ಅನಂತಮೂರ್ತಿಯವರು ನವ್ಯ ಶೈಲಿಯಲ್ಲಿ ಅರೆ ಹಸಿ,ಅರೆ ಬೆಂದ ವಿಚಾರಗಳನ್ನು ತುಂಬಿಕೊಂಡ ಅಪಕ್ವರಾದ ನಡು ವಯಸ್ಸಿನ ಪ್ರಾಣೇಶಾಚಾರ್ಯ, ನಾರಾಣಪ್ಪನಂತಹವರ ಬಾಯಿಂದ ಈ ವಿಚಾರಗಳ ಕುರಿತು ಗೊಂದಲ, ಬಂಡಾಯ, ಉತ್ತರವಿಲ್ಲದ ಪ್ರಶ್ನೆಗಳಾಗಿ ಕಥೆ ಹೊಸೆದಿದ್ದಾರೆ.'ಸಂಸ್ಕಾರ' ಜೀವನದ, ಸಾವಿನ ಕುರಿತು ವಿಷಾದ ಭಾವ ಮೂಡಿಸುವಂತ ಕಾದಂಬರಿ,ಅದರ ಮುಕ್ತಾಯವೂ ಆ ವಿಷಣ್ಣ ಭಾವದಲ್ಲೇ ಆಗುವುದು.
ಮೂಕಜ್ಜಿಯು ನಾಲ್ಕು ಗೋಡೆಗಳ ಮಧ್ಯೆ ಬಂದದ್ದನ್ನೆಲ್ಲ ಬಂದಂತೆ ಸ್ವೀಕರಿಸಿ ನಡೆಸಿದ ತುಂಬು ಜೀವನದಿಂದ, ಅಂತರ್ಮುಖತೆಯಿಂದ ಅವಳಿಗೆ ದೊರಕಿದ ಜ್ಞಾನ, ತಿಳುವಳಿಕೆಗಳನ್ನು ಮೊಮ್ಮಗನೊಂದಿಗೆ ಹಂಚಿಕೊಳ್ಳುವಾಗ ಅವಳಲ್ಲಿ ಕಿಂಚಿತ್ತೂ ಗೊಂದಲವಿಲ್ಲ, ಆದರೆ ತನ್ನ ವಿಚಾರವೇ ಸರಿ ಎನ್ನುವ ಧಾರ್ಷ್ಟ್ಯವೂ ಇಲ್ಲ. ಅವಳ ವಿಚಾರಗಳು ನೇರ, ಸರಳ ಮತ್ತು ಸ್ಪಷ್ಟ. ಪ್ರಾಣೇಶಾಚಾರ್ಯರು ತಮ್ಮನ್ನು ತಾವು ಮೇಧಾವಿ, ಘನ ಪಂಡಿತನೆಂದು ತಿಳಿದು, 'ಪರದ ಹಿತಕ್ಕಾಗಿ' ಎಂಬ ಕಲ್ಪನೆಯಲ್ಲಿ ತಮ್ಮನ್ನು ಬಂಧನದಲ್ಲಿ ಸಿಲುಕಿಸಿಕೊಂಡವರು. ಎಲ್ಲಾ ರೀತಿಯ ಸುಖದಿಂದ ವಂಚಿತರಾಗುವುದೇ ಪರಕ್ಕೆ ದಾರಿ ಎಂದು ಬಗೆದ ಆಚಾರ್ಯರು ನಡು ವಯಸ್ಸಿನಲ್ಲೇ (ಅವರ ವಯಸ್ಸು ೪೦ರ ಆಸುಪಾಸು) ನಾರಣಪ್ಪನ ಬಂಡಾಯ, ಅವನು ಜೀವನದಲ್ಲಿ ಅನುಭವಿಸಿದ ಐಷಾರಾಮ, ಕೊನೆಯಲ್ಲಿ ತಟ್ಟನೆ ಮರಣ - ಇವುಗಳನ್ನೆಲ್ಲಾ ನೋಡಿ ಸರಿ ತಪ್ಪುಗಳ ಗೊಂದಲದಲ್ಲಿ ಬಿದ್ದು, ಆಗ ಆಕಸ್ಮಿಕವೆಂಬಂತೆ ನಾರಣಪ್ಪನ ಸಂಗಾತಿಯಾಗಿದ್ದ ವೇಶ್ಯೆ ಯ ಸಂಗ ಮಾಡಿ, ತಾವೇ ಸೃಷ್ಟಿಸಿಕೊಂಡ ಬಂಧನಗಳಿಂದ ಮುಕ್ತರಾಗುವ ಕಡೆ ತೊಳಲುತ್ತಾ ಸಾಗುತ್ತಾರೆ. ನಾರಣಪ್ಪ ಮೊದಲು ಧರ್ಮದ ವಿರುದ್ಧ ಬಂಡಾಯವೆದ್ದು, ಮುಕ್ತ ಜೀವನ ನಡೆಸಿದವನು, ಸಾಯುವಾಗ ದೇವರ ನಾಮಸ್ಮರಣೆ ಮಾಡುವನು! ಈ ವಿಷಯವನ್ನು ಚಂದ್ರಿ ಮನದಲ್ಲಿ ತರ್ಕಿಸುವ ಪ್ರಸಂಗ ನಾರಾಣಪ್ಪನಿಗೂ ತನ್ನ ನಿಲುವಿನ ಕುರಿತು ಇದ್ದ ಗೊಂದಲವನ್ನು ಸೂಚಿಸುತ್ತದೆ.
ವಸ್ತುಗಳನ್ನು ಸ್ಪರ್ಶಸಿ ಅದರ ಪೂರ್ವ-ಪರಗಳನ್ನು ಹೇಳುವ ವಿಶಿಷ್ಟ,ಅತಿಮಾನುಷ ಎನ್ನಿಸುವ ಶಕ್ತಿಯಿರುವ ಮೂಕಜ್ಜಿ, ತನ್ಮೂಲಕ ಮನಶಾಸ್ತ್ರ, ಸಮಾಜಶಾಸ್ತ್ರ, ತತ್ವಶಾಸ್ತ್ರಗಳ ದರ್ಶನ ಮಾಡಿಸುವುದು ವಾಸ್ತವಿಕ ಎನ್ನಿಸದೇ ಇರಬಹುದು. ಆದರೆ ಕಾರಂತರ ಕಲ್ಪನೆಯ ಕೂಸಾದ ಅವಳ ವಿಚಾರಗಳು,ತರ್ಕ ಸರಣಿ ಸರ್ವಕಾಲಕ್ಕೂ ಸಲ್ಲುವ ಕಾರಂತರ ಪುಷ್ಟಿಭರಿತ ವಿಚಾರಧಾರೆಯಾಗಿದೆ. ಅನಂತರಾಯನ ಸಲಿಂಗಕಾಮಿ ವ್ಯಕ್ತಿತ್ವವನ್ನೂ ಮೂಕಜ್ಜಿ ಅರಿಯುವುವಂತಹ ಉದಾಹರಣೆ ನೋಡಿದಾಗ, ಕಾರಂತರು ಆಲೋಚನೆಯಲ್ಲಿ ತಮ್ಮ ಕಾಲಕ್ಕಿಂತ ಬಹಳ ಮುಂದೆ ಇದ್ದವರೆನಿಸದೆ ಇರದು.
'ಸಂಸ್ಕಾರ'ಪ್ಲೇಗ್ ಮಹಾಮಾರಿ ಹಬ್ಬಿದಾಗ ಉಂಟಾಗುವ ನಾರಣಪ್ಪನ ಸಾವಿನ, ಅವನ ಶವ ಸಂಸ್ಕಾರ ಮಾಡುವುದರ ಕುರಿತು ಇರುವ ಗೊಂದಲಗಳ ಸುತ್ತ ಹೆಣೆದ, ಆ ಕಾಲಕ್ಕೆ ಬಹಳ ವಾಸ್ತವಿಕ ಎನ್ನಿಸುವ ಕಥಾ ಹಂದರ. ಇಲ್ಲಿ ಬರುವ ಪಾತ್ರಗಳೆಲ್ಲವೂ ನಿಜ ಜೀವನಕ್ಕೆ ಹತ್ತಿರವಾಗಿರಬಹುದಾದ ಪಾತ್ರಗಳಂತೆ ತೋರುವುವು. ಆದರೆ ಅಲ್ಲಿ ಅನಂತಮೂರ್ತಿಯವರು ಎತ್ತಿರುವ ಹಲವು ವಿಚಾರಗಳು ಆ ಕಾಲಕ್ಕಷ್ಟೇ ಪ್ರಸ್ತುತವಾಗಿದ್ದವು ಎನ್ನಿಸುತ್ತದೆ.
ಒಟ್ಟಿನಲ್ಲಿ ತನ್ನ ನಂಬಿಕೆಗಳಿಂದ, ಆಚರಣೆಗಳಿಂದ ಯಾವ ಜೀವಿಗೂ ತೊಂದರೆಯಾಗದಂತೆ ಜೀವನ ನಡೆಸುವ ಹಕ್ಕು ಎಲ್ಲರಿಗೂ ಇದೆ. ಪ್ರಕೃತಿಯೊಂದಿಗೆ ಸಾಮರಸ್ಯದಲ್ಲಿ ಇತರ ಜೀವಿಗಳಿಗೆ ಹಾನಿಯಾಗದಂತೆ ಸರಳವಾಗಿ , ಸಹಜವಾಗಿ ಬದುಕುವುದೇ ಸರ್ವ ಶ್ರೇಷ್ಠ ಬಾಳು ಎಂಬುದೇ ಮೂಲ ಸಿದ್ಧಾಂತ.





Comments