top of page

‘ಬಹು ನೆಲೆಗಳ ಬೆರಗು’ ಕೃತಿಯ ಸೊಬಗು

  • vidyaram2
  • Jul 9, 2025
  • 2 min read

Updated: 10 hours ago

ಸಾಮಾನ್ಯವಾಗಿ ಅಧ್ಯಯನಗ್ರಂಥಗಳಲ್ಲಿ ಪಾಂಡಿತ್ಯ ಪ್ರದರ್ಶನಕ್ಕೆ ಹೆಚ್ಚು ಪ್ರಾಶಸ್ತ್ಯವಿರುವ, ಸಾಮಾನ್ಯ ಓದುಗರಿಗೆ ಸ್ವಲ್ಪ ನೀರಸವೆನಿಸುವ ಸಂಭವವೇ ಹೆಚ್ಚಿರುತ್ತದೆ. ಆದರೆ ಉಮಾ ರಾಮರಾವ್ ಅವರ ‘ಬಹು ನೆಲೆಗಳ ಬೆರಗು’  ಮಹಾಪ್ರಬಂಧ ಕೃತಿಯು ಅದಕ್ಕೆ ಅಪವಾದವೆಂಬಂತಿದೆ. ಕನ್ನಡದ ಮಹಾನ್ ಸಾಹಿತಿಗಳಲ್ಲಿ ಒಬ್ಬರಾದ ಎಸ್. ಎಲ್. ಭೈರಪ್ಪನವರ  ‘ಪರ್ವ’ ಮತ್ತು ‘ಉತ್ತರಕಾಂಡ’ ಕಾದಂಬರಿಗಳನ್ನು ಅವುಗಳ ಮೂಲ ಇತಿಹಾಸಕಾವ್ಯಗಳೊಂದಿಗೆ ಹೋಲಿಸುವ ಹಾಗೂ ಈ ಎರಡು ಕಾದಂಬರಿಗಳಲ್ಲಿ ಪಾತ್ರ ನಿರ್ವಹಣೆ, ಕಥನತಂತ್ರ ಮುಂತಾದ ಆಯಾಮಗಳ ತೌಲನಿಕ ಅಧ್ಯಯನ ನಡೆಸಿರುವ ಸಂಶೋಧನ ಪ್ರಬಂಧವಿದಾದರೂ ಸರಳ ಸುಂದರ ವಾಕ್ಯಗಳಲ್ಲಿ ಅತ್ಯಂತ ವಾಚನೀಯವೂ ಸೃಜನಾತ್ಮಕವೂ ಆಗಿ ಮನಮುಟ್ಟುವಂತೆ ಮೂಡಿಬಂದಿದ್ದು, ತಾನೇ ಒಂದು ಉತ್ತಮ ಕಾದಂಬರಿಯಂತೆ ಓದುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.


ಭೈರಪ್ಪನವರ ಅಭಿಮಾನಿಯಾಗಿ ಸಹೃದಯರಾಗಿ ಅತ್ಯಂತ ಪ್ರೀತಿ ಹಾಗೂ ಸೌಜನ್ಯದಿಂದ ಈ ಕೃತಿಯನ್ನು ರಚಿಸಿರುವುದು ಸ್ಪಷ್ಟವಾಗಿ ಗೋಚರವಾದರೂ ಯಾವುದೇ ಪೂರ್ವಗ್ರಹ, ಹಿಂಜರಿಕೆಗಳಿಲ್ಲದೆ ವಸ್ತುನಿಷ್ಠವಾಗಿ ವಿಶ್ಲೇಷಿಸಿರುವ ಲೇಖಕರ ಪ್ರಾಮಾಣಿಕತೆ, ಪ್ರತಿಭೆಗಳು ಕೃತಿಯುದ್ದಕ್ಕೂ ಎದ್ದು ತೋರುತ್ತವೆ. ಹಿತವಾದ ಭಾಷೆ, ಅಲ್ಲಲ್ಲಿ ತಮ್ಮದೇ ಆದ ರೂಪಕ, ಉಪಮೆಗಳನ್ನು ಔಚಿತ್ಯಪೂರ್ಣವಾಗಿ ಬಳಸಿ ಕಾದಂಬರಿಯಲ್ಲಿರುವ ರಸಸ್ಥಾನಗಳ ಶೋಭೆಯನ್ನು ಇನ್ನೂ ಹೆಚ್ಚಿಸುವ ಕಲೆ ಇವು ಲೇಖಕರಲ್ಲಿರುವ ಸೃಜನಶೀಲ ಸಾಹಿತಿಯೆಡೆಗೆ ಬೊಟ್ಟು ಮಾಡಿದರೆ, ಕಾದಂಬರಿಗಳ ನಿರ್ವಹಣೆ, ಪಾತ್ರ ಪೋಷಣೆ, ಕಥನತಂತ್ರಗಳ ವಿಮರ್ಶೆ, ಆಮೂಲಾಗ್ರ ವಿಶ್ಲೇಷಣೆ ಮತ್ತು ಓದುಗರಾಗಿ ತಮಗೆ ಕಂಡ ಅರಕೆಗಳ ತಾರ್ಕಿಕ ವಿವರಣೆ ಇವು ಅವರಲ್ಲಿರುವ ಸಮರ್ಥ ವಿಮರ್ಶಕಿಯನ್ನು ಪರಿಚಯಿಸುತ್ತವೆ.


ಮೂಲ ಆಕರಗಳಾದ ಕಾದಂಬರಿಗಳನ್ನು ಆಳವಾಗಿ ಅಧ್ಯಯನ ಮಾಡಿ, ಸೂಕ್ಷ್ಮಾತಿಸೂಕ್ಷ್ಮವಾದ ಸೂಚನೆ, ಆಶಯ, ಒಳನೋಟಗಳನ್ನು ಗ್ರಹಿಸಿಕೊಂಡು ಆ ಮಹತ್ಕೃತಿಗಳ ಒಳಹೊರಗು, ಆಶಯ, ಒಳಾರ್ಥ, ಗೂಢಾರ್ಥ, ಸೊಗಸು, ಕುಂದು ಕೊರತೆಗಳನ್ನೆಲ್ಲ ಎಳೆಎಳೆಯಾಗಿ ಲೇಖಕರು ಈ ಕೃತಿಯಲ್ಲಿ ಬಿಡಿಸಿ ಬಿಚ್ಚಿಟ್ಟಿದ್ದಾರೆ. ಅತಿ ಮಹತ್ತ್ವದ್ದು ಎನ್ನಿಸುವಂತಹ ವಿಚಾರ, ಉದ್ದೇಶ, ಆಶಯದಿಂದ ಹಿಡಿದು ಅತಿ ಸಣ್ಣ ಅಂಶವನ್ನೂ ಬಿಡದೆ ತರ್ಕಿಸಿರುವುದು ಈ ಕೃತಿಯ ಹೆಚ್ಚುಗಾರಿಕೆ. ಉದಾಹರಣೆಗೆ, ಪರ್ವದ ಅಂತ್ಯದಲ್ಲಿ ವೇದವ್ಯಾಸರ ಆಶ್ರಮಕ್ಕೆ ಭೀಷ್ಮರು ಭೇಟಿಕೊಡುವ ಸಂದರ್ಭ, ಆಶ್ರಮದ ಮೇಲೆ ಆಗುವ ದಾಳಿ ಇವುಗಳ ಸೃಷ್ಟಿಯ ಹಿಂದಿನ ಭೈರಪ್ಪನವರ ಉದ್ದೇಶವನ್ನು, ಉತ್ತರಕಾಂಡದಲ್ಲಿ ಅಪಹೃತಳಾದ ಸೀತೆಯ ಆಭರಣಗಳನ್ನು ರಾಮನು ತೋರಿಸಿದಾಗ ಅವಳ ಕಾಲಂದುಗೆಯನ್ನು ಬಿಟ್ಟು ಬೇರೇನನ್ನೂ ತಾನು ನೋಡಿಲ್ಲವೆಂದು ಒತ್ತಿ ಹೇಳುವ ಭಾವ ಲಕ್ಷ್ಮಣನಿಗೆ ಬಂದುದರ ಹಿಂದಿನ ಕಾರಣವನ್ನು ಸೂಕ್ಷ್ಮವಾಗಿ ಗ್ರಹಿಸಿ ವಿವೇಚಿಸುವಂತಹ ಲೇಖಕರ ಆಲೋಚನೆಯ ವ್ಯಾಪ್ತಿಯೊಳಗೆ - ಸೀತೆಯ ಪರಿತ್ಯಾಗ ತಪ್ಪೆಂದು ರಾಮನಿಗೆ ವಸಿಷ್ಠರು ಏಕೆ ತಿಳಿಹೇಳಲಿಲ್ಲ ಎಂಬ ವಾಲ್ಮೀಕಿಗಳ ಪ್ರಶ್ನೆಗೆ ಧರ್ಮದ ವಿಷಯದಲ್ಲಿ ಅತಿ ಜಿಗುಟಾದ ರಾಮನಿಗೆ ಬುದ್ಧಿ ಹೇಳಲು ವಸಿಷ್ಠರ ಅಂಜಿಕೆಯೇ ಕಾರಣ ಎಂದಿರುವಲ್ಲಿ ‘ಅಂಜಿಕೆ’ ಬದಲು ‘ಹಿಂಜರಿಕೆ’ ಪದದ ಬಳಕೆ ಸೂಕ್ತವಾಗುತ್ತಿತ್ತು ಎಂಬಂತಹ ಲೋಪವೂ ಅಲಕ್ಷಿತವಾಗದೆ ದಾಖಲಾಗಿರುವುದು ಅವರ ಶಿಸ್ತು, ತೀವ್ರವಾದ ತೊಡಗಿಕೊಳ್ಳುವಿಕೆ ಮತ್ತು ವಿವರಗಳಿಗೆ ಅವರು ನೀಡುವ ಆದ್ಯತೆಗಳನ್ನು (attention to detail) ಎತ್ತಿ ತೋರಿಸುತ್ತದೆ.


ಅಧ್ಯಯನಕ್ಕೆ ಪೂರಕವಾಗಿ ಹಲವಾರು ಆಕರಗಳನ್ನು ಅಭ್ಯಸಿಸಿ, ಕಾದಂಬರಿಗಳನ್ನು ಕುರಿತು ಸಮರ್ಥ ವಿಮರ್ಶಕರಿಂದ ಬಂದ ಹಲವಾರು ವಿಮರ್ಶೆ, ವಿಶ್ಲೇಷಣೆ, ಅನಿಸಿಕೆಗಳನ್ನು ಗಮನಿಸಿ ಸೂಕ್ತವೆನಿಸಿದ ಯೋಗ್ಯ ಚಿಂತನೆಗಳನ್ನೂ ಈ ಕೃತಿಯಲ್ಲಿ ಚರ್ಚಿಸಿರುವುದು ಮತ್ತು ಪೂರಕ ಮಾಹಿತಿ, ಆಧಾರಗಳನ್ನು ಅನುಬಂಧಗಳಲ್ಲಿ ನೀಡಿರುವುದು ಜ್ಞಾನಾಕಾಂಕ್ಷಿಯಾದ ಸಾಮಾನ್ಯ ಓದುಗನಿಗೆ, ಸಾಹಿತ್ಯದ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವೆನಿಸುತ್ತವೆ. ಸುಮಾರು 450 ಪುಟಗಳಲ್ಲಿ ಹರಡಿಕೊಂಡಿರುವ ಕೃತಿಯ ಒಟ್ಟು ಏಳು ಅಧ್ಯಾಯಗಳಲ್ಲಿ ಕಾದಂಬರಿಗಳ ಧನಾತ್ಮಕ ಅಂಶಗಳನ್ನು, ರಸಘಟ್ಟಗಳನ್ನು, ಆಶಯವನ್ನು, ಸಾಹಿತಿಯಾಗಿ ಭೈರಪ್ಪನವರ ಪ್ರತಿಭಾನವನ್ನು, ಅವರ ತತ್ತ್ವಜ್ಞಾನವನ್ನು, ವಿಶಾಲ ದೃಷ್ಟಿಕೋನವನ್ನು, ಅಧ್ಯಯನದ ಆಳವನ್ನು ವಿವರವಾಗಿ ತಿಳಿಸುವುದರ ಜೊತೆಗೆ ಒಪ್ಪಲು ಕಷ್ಟವೆನಿಸುವ ಕೆಲವು ಋಣಾತ್ಮಕ ಅಂಶಗಳನ್ನು, ಅನುಚಿತವೆನಿಸುವ ಘಟನೆಗಳನ್ನು, ಅನವಶ್ಯಕವೆನಿಸುವ ಕಲ್ಪನೆಗಳನ್ನು ಬಹಳ ತರ್ಕಬದ್ಧವಾಗಿ ವಿವರಿಸಿ ಓದುಗನ ಚಿಂತನಾಶಕ್ತಿಯನ್ನು ಲೇಖಕರು ಉದ್ದೀಪಿಸುತ್ತಾರೆ.  ಹೀಗೆ ಸಾಮಾನ್ಯ ಓದುಗನ ಗ್ರಹಿಕೆಯನ್ನು ಮೀರುವ ಅನೇಕ ವಿಷಯಗಳು ಇಲ್ಲಿ ಬೆಳಕಿಗೆ ಬಂದು ಕಾದಂಬರಿಗಳ ಮರುಓದಿಗೆ ಪ್ರೇರಣೆಯಾಗುತ್ತವೆ. ಮೂಲ ಕಾದಂಬರಿಗಳ ಓದಿನಿಂದ ದಕ್ಕದೇ ಹೋಗಬಹುದಾದ ಒಂದು ಸಮಗ್ರ ದೃಷ್ಟಿಕೋನವು ಈ ಓದಿನಿಂದ ದಕ್ಕುತ್ತದೆ.


ಸಂಕ್ಷಿಪ್ತವಾಗಿ ಹೇಳುವುದಾದರೆ, ಭೈರಪ್ಪನವರ ಪರ್ವ, ಉತ್ತರಕಾಂಡಗಳು ಎಲ್ಲ ಸ್ತರದ ವಾಚಕರಿಗೂ ‘ಸುಲಿದ ಬಾಳೆಯ ಹಣ್ಣಿನಂದದಿ’ ಸುರಳೀತವಾಗಿ ತಮ್ಮ ರುಚಿಯನ್ನು, ಒಳಾರ್ಥವನ್ನು ಬಿಟ್ಟುಕೊಡತ್ತವೆಂದು ಹೇಳಲಾಗದು. ಆದರೆ ಉಮಾ ರಾಮರಾವ್ ಅವರು ತಮ್ಮ ‘ಬಹು ನೆಲೆಗಳ ಬೆರಗು’ ಕೃತಿಯಲ್ಲಿ ಭೈರಪ್ಪನವರ ಈ ಮೇರುಕೃತಿಗಳೆಂಬ ಹಲಸಿನ ಹಣ್ಣನ್ನು ಒಪ್ಪವಾಗಿ ಬಗೆದು ಮೇಣವನ್ನು ತೆಗೆದು ತೊಳೆಗಳನ್ನು ಬಿಡಿಸಿ ಸಿದ್ಧಗೊಳಿಸಿ ಓದುಗನಿಗೆ ಸವಿಯಲು ನೀಡಿದ್ದಾರೆ.

------—-----

ಕೃತಿಯಲ್ಲಿರುವ ಸುಂದರ ರೂಪಕಗಳಿಗೆ ಒಂದೆರಡು ಉದಾಹರಣೆಗಳು ಇಂತಿವೆ - 


“ಲಕ್ಷ್ಮಣನ ಕ್ಷಮಾಜಲವು ಸೀತೆಯ ಮನಸ್ಸಿನ ಉರಿಯನ್ನು ಶಮನಗೊಳಿಸುತ್ತದಾದರೂ ಒಣಗುತ್ತಿದ್ದ ರಾಮನ ಜೀವಲತೆಯನ್ನು ಪುನರುಜ್ಜೀವಿಸುವಲ್ಲಿ ಸೋತುಹೋಗುತ್ತದೆ.”


“ಯಾವುದೋ ಕಲ್ಲಿನ ತಡೆಯಿಂದ ಮುಂದೆ ಹೋಗದೆ ನಿಂತ ಕಥಾಚಕ್ರವನ್ನು ಭರತನು ಮುಂದೋಡಿಸುತ್ತಾನಾದರೂ ಆ ಪ್ರಕ್ರಿಯೆಯಲ್ಲಿ ಸ್ವಂತದ ವ್ಯಕ್ತಿತ್ವವನ್ನು ಬಲಿಕೊಡುತ್ತಾನೆ.”


“ನೆನಪುಗಳು ಕಾಲದ ಸರೋವರದಲ್ಲಿ ಮುಳುಗಿ ತಳಸೇರುವ ಕಲ್ಲುಗಳಾಗದೇ ಮೇಲೆ ತೇಲುವ ಕಮಲಗಳಾಗಲು ಇಂತಹ  ಪ್ರೀತಿ ತುಂಬಿದ ಘಟನೆಗಳಿಂದ ಮಾತ್ರ ಸಾಧ್ಯ. ಆದರೆ ಮೇಲೆ ತೇಲುವುದು ಬರೀ ಕಮಲವಲ್ಲ, ಅಲ್ಲಿ ಹಾವಸೆಯೋ ಇದೆ…” 


“… ಕಥಾಕಾಶದಲ್ಲಿ ಒಮ್ಮೊಮ್ಮೆ ಮೂಡುವ ಕಣ್ಣು ಕೋರೈಸುವ ಬೆಳಕಿನ ಮಿಂಚುಗಳು”


Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page