top of page

ಬಲ್ಲಾಳರ 'ಬಂಡಾಯ'

  • vidyaram2
  • Apr 19, 2024
  • 3 min read

    


ವ್ಯಾಸರಾಯ ಬಲ್ಲಾಳರು ಬರೆದ  ‘ಬಂಡಾಯ’ 1986ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಪ್ರಸಿದ್ಧ ಕಾದಂಬರಿ. ದಟ್ಟವಾದ ಮಾರ್ಕ್ಸ್ ವಾದಿ ಚಿಂತನೆಗಳಿಂದ ಕೂಡಿದ ಈ ಕಾದಂಬರಿಯಲ್ಲಿ ಬಲ್ಲಾಳರು ಉದ್ಯಮಿಗಳು ಮತ್ತು ಕಾರ್ಮಿಕರ ನಡುವಿನ ಸಂಘರ್ಷದ ಚಿತ್ರಣವನ್ನು ನೈಜವಾಗಿ ತೆರೆದಿಟ್ಟಿದ್ದಾರೆ.  1980ರ ದಶಕದಲ್ಲಿ ಮುಂಬೈಯಲ್ಲಿ ತೀವ್ರವಾಗಿದ್ದ ಮಿಲ್ ಕಾರ್ಮಿಕರ ಮುಷ್ಕರ, ಚಳುವಳಿಗಳನ್ನು, ವ್ಯವಸ್ಥೆಯ ಒಳಹೊರಗುಗಳನ್ನು ಹತ್ತಿರದಿಂದ ಆಳವಾಗಿ ಅವಲೋಕಿಸಿ, ಅಧ್ಯಯನ, ಚಿಂತನೆ ನಡೆಸಿ ಅದನ್ನು ಆಧರಿಸಿ ಕಾದಂಬರಿಯನ್ನು ರಚಿಸುವುದರಿಂದ ಅವರ ಈ ಕಾದಂಬರಿ ಅಧಿಕೃತವಾಗಿ ವಾಸ್ತವಕ್ಕೆ ಬಹಳ ಹತ್ತಿರವಾಗಿ ಮೂಡಿಬಂದಿದೆ. ಮಾರ್ಕ್ಸನು ಪ್ರತಿಪಾದಿಸಿದಂತೆ ಎರಡು ವರ್ಗಗಳ ನಡುವಿನ ವೈಷಮ್ಯ, ಸಮಸ್ಯೆಗಳಿಗೆ ನಿರಂತರ ಸಂಘರ್ಷವೊಂದೆ ಪರಿಹಾರವೇ,  ಮುಷ್ಕರದಂತಹ ಸಂಘರ್ಷದಿಂದ ಸಮಸ್ಯೆಗಳು ಬಗೆಹರಿಯುವವೇ ಎಂಬ ತರ್ಕ, ಉತ್ತರವಿಲ್ಲದೆ ಕಾಡುವ ಪ್ರಶ್ನೆಗಳನ್ನು ತೆರೆದಿಟ್ಟು ಬಲ್ಲಾಳರು ಓದುಗನನ್ನು ಜಿಜ್ಞಾಸೆಗೆ ಒಳಪಡಿಸಿದ್ದಾರೆ. ಬಂಡವಾಳಶಾಹಿ ಉದ್ಯಮಪತಿಗಳು, ಯಂತ್ರಗಳ ಹಾಗೆ ಅವರ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರು, ಅವರಿಬ್ಬರ ನಡುವೆ ಸಂಪರ್ಕ ಸೇತುವೆಯಂತಿರುವ ಕಾರ್ಖಾನೆಯ ಆಡಳಿತವರ್ಗ ಮತ್ತು ಅವರೆಲ್ಲರನ್ನೂ ಒಳಗೊಂಡ ಸಮಾಜದ ಹಿತಾಸಕ್ತಿಗಾಗಿ ದುಡಿಯುವ ಸಲುವಾಗಿ ಜನರಿಂದ ಆರಿಸಿ ಬಂದ ಸರಕಾರ (ಪೊಲೀಸ್, ರಾಜಕಾರಣಿಗಳು) - ಒಂದು ಆದರ್ಶ ಸಮಾಜದಲ್ಲಿ ಈ ನಾಲ್ಕು ಶ್ರೇಣಿಗಳು ಸಹಯೋಗದಿಂದ ಹೊಂದಿಕೊಂಡು ಪರಸ್ಪರ ಗೌರವ, ಮಾನವೀಯತೆಯಿಂದ ನಡೆದರೆ ಪ್ರಗತಿ ಸಾಧ್ಯ.  ಆದರೆ ವಾಸ್ತವದಲ್ಲಿ ಈ ವ್ಯವಸ್ಥೆ ನಡೆಯುವ ರೀತಿ ಬೇರೆಯೇ ಎಂಬುದನ್ನು ಬಲ್ಲಾಳರು ಇಲ್ಲಿ ತೋರಿಸಿದ್ದಾರೆ. ಕನ್ನಡದಲ್ಲಿ ಇಂತಹ ವಸ್ತುವಿನ ಮೇಲೆ ಬಂದ ಈ ಬಗೆಯ ಕಾದಂಬರಿಗಳು ಬಹಳ ವಿರಳವೆಂದೇ ಹೇಳಬಹುದು. 


ಕಾದಂಬರಿಯ ಮುಖ್ಯ ಪಾತ್ರ ಕಾರ್ಮಿಕ ಮುಖಂಡನಾದ ರಾಜೀವ ಮತ್ತು ಒಂದು ಕಾರ್ಖಾನೆಯಲ್ಲಿ ಕಾರ್ಮಿಕಳಾಗಿದ್ದು ಮುಂದೆ ಕಾರ್ಮಿಕರ ಹೋರಾಟದಲ್ಲಿ ರಾಜೀವನ ಸಂಗಾತಿಯಾಗುವ ಯಾಮಿನಿಯರದ್ದು. ರಾಜೀವ ವ್ಯವಸ್ಥೆಯ ವಿರುದ್ಧ ಆಕ್ರೋಷಗೊಳ್ಳುವ, ಕೆಳವರ್ಗದವರ ಬಡತನ, ಕಷ್ಟ ಕಾರ್ಪಣ್ಯಗಳನ್ನು ಕಂಡು ಕರಗುವ, ನಿಸ್ವಾರ್ಥದಿಂದ ಸೇವೆ ಮಾಡುವ ಹಂಬಲ ಉಳ್ಳ ಆದರ್ಶವಾದಿ. ಹಿಂದೆ ನಕ್ಸಲೀಯರ ಗುಂಪಿನಲ್ಲಿದ್ದು ಹಿಂಸಾಚಾರದ ಮೂಲಕ ನ್ಯಾಯ ಪಡೆಯಲು ಹೋರಾಡಿ, ನಂತರ ಆ ಮಾರ್ಗ ತ್ಯಜಿಸಿ ಕಾರ್ಮಿಕ ಮುಖಂಡನಾಗಿ ಅವನು ಮುಂಬೈ ಉದ್ಯಮವಲಯದಲ್ಲಿ ಹೆಸರು ಮಾಡಿದವನು.  ಕಾರ್ಮಿಕರ ಸಂಘಟನೆಗಳನ್ನು ರಚಿಸಿಕೊಂಡು, ಅವರ ಹಿತಾಸಕ್ತಿಗಾಗಿ ಮಾಲೀಕರ ವಿರುದ್ಧ ಬಂಡಾಯ ಸಾರಿ, ಮುಷ್ಕರ ಹೂಡಿಸಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಇಂತಹ ಕಾರ್ಮಿಕ ನಾಯಕರನ್ನು ಕಂಡರೆ ಉದ್ಯಮಪತಿಗಳು ಹೆದರುತ್ತಾರೆ. ಮುಷ್ಕರದಿಂದ ತಮಗಾಗುವ ನಷ್ಟಕ್ಕೆ ಹೆದರಿ, ಇಂತಹ ನಾಯಕರಿಗೆ ಆಮಿಷ ಒಡ್ಡಿ ತಮ್ಮ ಕಡೆಗೆಳೆದುಕೊಳ್ಳುವ ಹುನ್ನಾರ ಮಾಡುತ್ತಾರೆ. ಕಾದಂಬರಿಯಲ್ಲಿ ಅಂತಹ ಒಬ್ಬ ಉದ್ಯಮಪತಿ ಕುಟುಂಬ ಸತೀಶನದ್ದು. 


ಸತೀಶನ ತಂದೆ ನಾಗೇಶರು ಬಡತನದಿಂದ ಮೇಲೆ ಬಂದವರು. ತಾವು ಕೆಲಸ ಮಾಡುತ್ತಿದ್ದ ಔಷಧಿ ಅಂಗಡಿಯ ಮುಸಲ್ಮಾನ ಮಾಲೀಕನಿಂದ ದೇಶ ವಿಭಜನೆಯಾದ ಕಾಲದಲ್ಲಿ ಅಂಗಡಿ ಪಡೆದ ಅವರು, ಅದನ್ನು ಮುನ್ನಡೆಸಿ ವ್ಯವಹಾರದಲ್ಲಿ ಪ್ರಗತಿ ಸಾಧಿಸಿ ಉದ್ಯಮಪತಿಯಾದವರು.  ಶ್ರೀಮಂತಿಕೆಯಲ್ಲಿ ಬೆಳೆದ ಮಗ ಸತೀಶ MBA ಪದವೀಧರ. ಅವನು ವ್ಯವಹಾರವನ್ನು ವಹಿಸಿಕೊಂಡು, ತನ್ನ ಜಾಣ್ಮೆಯಿಂದ ಅದನ್ನು ಇನ್ನೂ ವಿಸ್ತರಿಸಿ ಹಲವಾರು ಕಾರ್ಖಾನೆಗಳನ್ನು ಸ್ಥಾಪಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲಿಷ್ಠ ಉದ್ಯಮಿ ಎನ್ನಿಸಿಕೊಳುತ್ತಾನೆ. ಬಂಡವಾಳಶಾಹಿ ಧೋರಣೆ, ಕೇವಲ ಸ್ವಂತದ ಲಾಭ, ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಹಣಬಲದಿಂದ ವ್ಯವಸ್ಥೆಯನ್ನೇ ಕೊಂಡುಕೊಳ್ಳುವ ದರ್ಪ, ದಾರ್ಷ್ಟ್ಯ ಅವನದ್ದು. 


ಕಾದಂಬರಿಯಲ್ಲಿ ಯಾಮಿನಿಯ ಪಾತ್ರದ ಗಟ್ಟಿತನ ಬೆರಗುಗೊಳಿಸುವಂತದ್ದು. ಪ್ರಾರಂಭದಲ್ಲಿ ರಾಜೀವನ ನೆನಪಿನಲ್ಲಿ ಆಗಾಗ ಸುಳಿಯುತ್ತಾ ತನ್ನ ಹಿನ್ನಲೆಯ ಪರಿಚಯ ಮಾಡಿಕೊಡುವ ಯಾಮಿನಿ, ಮುಂದೆ ನೇರವಾಗಿ ಪ್ರವೇಶ ಮಾಡುವಷ್ಟರಲ್ಲಿ ಓದುಗನಿಗೆ ಆಪ್ತವಾಗಿ ಪರಿಚಿತಳಾಗಿರುತ್ತಾಳೆ.  ಒಂದು ಮಧ್ಯಮ ವರ್ಗದ ಕುಟುಂಬದ ಸಾಧಾರಣ ಹೆಣ್ಣಾಗಿ, ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದ ಅವಳು ಗಂಡ ಶ್ರೀಕಾಂತ ಪೋಲಿಯೋಗೆ ತುತ್ತಾಗಿ ಕೆಲಸ ಕಳೆದುಕೊಂಡ ಮೇಲೆ ಒಂಟಿಯಾಗಿ ಕುಟುಂಬವನ್ನು ಮುನ್ನಡೆಸುತ್ತಾಳೆ.  ಅವಳ ಫ್ಯಾಕ್ಟರಿಯ ಮುಷ್ಕರದ ವೇಳೆಯಲ್ಲಿ ಪರಿಚಿತನಾದ ರಾಜೀವನಿಂದ ಕಾರ್ಮಿಕರ ಹೋರಾಟದಲ್ಲಿ ಅಸಕ್ತಳಾಗಿ ಅವನ ಜೊತೆ ಕೈಜೋಡಿಸುತ್ತಾಳೆ. ಬೌದ್ಧಿಕವಾಗಿ ರಾಜೀವನ ಸಮಸಮಕ್ಕೆ ಚಿಂತನೆ ನಡೆಸುತ್ತಾ, ಕಾರ್ಯ ನಿರ್ವಹಿಸುತ್ತಾ ಅವನ ಸಂಘದ ನಾಯಕತ್ವವನ್ನು ವಹಿಸಿಕೊಂಡು ಅದರಲ್ಲಿ ಯಶಸ್ವಿಯಾಗುತ್ತಾಳೆ, ಜನಪ್ರಿಯತೆಯನ್ನೂ ಗಳಿಸುತ್ತಾಳೆ. ಮನೆಯಲ್ಲಿದ್ದ ಗಂಡನ ಅನುಮಾನ ಪ್ರವೃತ್ತಿ, ಕಿರುಕುಳ ಸಹಿಸಿಯೂ ಅವನಿಗೆ ಹೆದರಿ ಮುದುಡದೆ, ದಿಟ್ಟತನದಿಂದ ಅವನನ್ನು ಸಂಭಾಳಿಸುತ್ತಾ ತನ್ನ ಕರ್ತವ್ಯ ನಿಭಾಯಿಸುವ, ಅವನು ಕಟ್ಟಡದ ದುರಂತದಲ್ಲಿ ಮಡಿದಾಗ ಧೈರ್ಯವಾಗಿ ಪರಿಸ್ಥಿತಿಯನ್ನು ಎದುರಿಸುವ, ರಾಜೀವನೊಂದಿಗೆ ಮಾನಸಿಕವಾಗಿ ಅನ್ಯೋನ್ಯತೆ ಸಾಧಿಸುವ, ಕೊನೆಗೆ ರಾಜೀವ ತೆರವು ಮಾಡಿ ಹೋದ ಕಾರ್ಮಿಕರ ಮುಖಂಡ ಸ್ಥಾನವನ್ನು ವಹಿಸಿಕೊಳ್ಳುವ ಯಾಮಿನಿಯನ್ನು ಒಬ್ಬ ಉತ್ತಮ ಸುಸಂಸ್ಕೃತ ಸಶಕ್ತ ಮಹಿಳೆಯಾಗಿ ಚಿತ್ರಿಸುವಲ್ಲಿ ಬಲ್ಲಾಳರು ಯಶಸ್ವಿಯಾಗಿದ್ದಾರೆ. ಅವಳ ಸುಸಂಸ್ಕೃತ ಹಿನ್ನೆಲೆ, ಅವಳ ಗಂಡನ ಅಸಹಾಯಕತೆ, ಅವಳ ದಿಟ್ಟತನ, ರಾಜೀವನೊಂದಿಗೆ ಅವಳ ಮಾನಸಿಕ ತಾದಾತ್ಮ್ಯ ಎಲ್ಲವನ್ನೂ ಅತ್ಯಂತ ಸಹಜವಾಗಿ ಕಟ್ಟಿಕೊಟ್ಟ ಬಲ್ಲಾಳರು ಜಡಿಮಳೆಯ ಒಂದು ರಾತ್ರಿಯ ಉತ್ಕಟ ಸನ್ನಿವೇಶದಲ್ಲಿ ರಾಜೀವ, ಯಾಮಿನಿಯರು ದೈಹಿಕವಾಗಿ ಒಂದಾಗುವ ಘಟನೆಯನ್ನು ತಂದದ್ದು ಮಾತ್ರ ಸ್ವಲ್ಪ ಸಿನಿಮೀಯವಾಯಿತು ಎನ್ನಿಸುತ್ತದೆ. ಹೆಣ್ಣು ಗಂಡಿನ ಮಿಲನ, ಪ್ರೀತಿ ಪ್ರೇಮಗಳು ಇಲ್ಲದೆ ಕಾದಂಬರಿಯೊಂದು ಪೂರ್ಣವಾಗಲಾರದು ಎಂಬ ಅಪನಂಬಿಕೆ ಬಲ್ಲಾಳರಿಗಿತ್ತೇನೋ ಎನ್ನಿಸುತ್ತದೆ.


ಯಾಮಿನಿ ಕೆಲಸ ಮಾಡುವ ಕಾರ್ಖಾನೆಯಲ್ಲಿ ನಡೆದ ಮುಷ್ಕರ, ಸತೀಶನ ಕಾರ್ಖಾನೆಯೊಂದರಲ್ಲಿ ಆರಂಭವಾದ ಮುಷ್ಕರ, ದೇಶಪಾಂಡೆ ಎಂಬ ಒಬ್ಬ ಸ್ವಾರ್ಥ ಕಾರ್ಮಿಕ ಮುಖಂಡನಿಂದ ಆರಂಭವಾಗಿ, ನಿಸ್ವಾರ್ಥ ಮನೋಭಾವದ ರಾಜೀವನ ಹಸ್ತಕ್ಷೇಪದಿಂದ ಕೊನೆಗೊಳ್ಳುವ ಚಿತ್ರಣದ ಮೂಲಕ  ವಾಸ್ತವವಾಗಿ ಈ ಕಾರ್ಮಿಕ ಸಂಘಟನೆಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಬಲ್ಲಾಳರು ತೋರಿಸಿದ್ದಾರೆ.  ಅನೇಕ ಕಾರ್ಮಿಕ ಕುಟುಂಬಗಳ, ಕಾರ್ಖಾನೆಯ ಆಡಳಿತವರ್ಗದ ಜನರ ಪರಿಚಯವನ್ನೂ ಅವಶ್ಯಕತೆಗೆ ತಕ್ಕಂತೆ ನೀಡಿ ಕಾದಂಬರಿಗೆ ಗಟ್ಟಿತನ ಒದಗಿಸಿದ್ದಾರೆ. 


     ವಾಸ್ತವದಲ್ಲಿ ಕಾರ್ಮಿಕ ಸಂಘಗಳು ಸಮಾಜದ ಒಂದು ಬಲಶಾಲಿ ಶಕ್ತಿಯಾಗಿರುತ್ತವೆ. ವಿವಿಧ ಕಾರ್ಮಿಕ ಸಂಘಗಳ ನಡುವೆ ಪೈಪೋಟಿ, ಆ ಸಂಘಗಳ ಮುಖಂಡರು ತಾವು ಎಲ್ಲ ಸಂಘಗಳ ನಾಯಕರಾಗಿ ಮೆರೆಯಬೇಕೆಂಬ ದುರಾಸೆಯಿಂದ ನಡೆಸುವ ಕುತಂತ್ರ, ಅವರ ಹಿಂದೆ ನಿಂತು ಕೆಲಸ ಮಾಡಿಸುವ ಬಲವಾದ ಶಕ್ತಿಗಳು, ರಾಜಕೀಯ ಕೈವಾಡಗಳನ್ನೆಲ್ಲ ಬಲ್ಲಾಳರು ಮೇಲೆ ಹೇಳಿದ ಕಥಾಹಂದರದಲ್ಲಿ ಬಹಳ ನೈಜವಾಗಿ ಈ ಕಾದಂಬರಿಯಲ್ಲಿ ರೂಪಿಸಿದ್ದಾರೆ. ಯಾವುದೇ ಕಾನೂನು,ರೀತಿ, ನೀತಿಗಳು ಬಹುಜನರ ಒಳಿತಿಗಾಗಿ ಜಾರಿಯಾದರೂ ಕ್ರಮೇಣ ಎಲ್ಲ ಸ್ತರಗಳ ಜನರ ಸ್ವಹಿತಾಸಕ್ತಿಯೊಂದೆ ಮುಖ್ಯವಾಗಿ, ಸ್ವಾರ್ಥಪರ ಜನರು ಎಂತೆಂತಹ ಜಾಲ ರಚಿಸಿ ದುರ್ಬಲರ ಶೋಷಣೆ ಮಾಡುತ್ತಾರೆ ಎಂಬುದನ್ನು ಬಹು ಆಳವಾಗಿ ಅಭ್ಯಸಿಸಿ, ಚಿಂತಿಸಿ ಬಲ್ಲಾಳರು ಅಂತಹ ಸೂಕ್ಷ್ಮಗಳನ್ನು ಎಳೆ ಎಳೆಯಾಗಿ ಬಿಡಿಸಿ ಇಲ್ಲಿ ತೋರಿಸಿದ್ದಾರೆ.


     ಮುಷ್ಕರಗಳಿಂದಲೆ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು ಸಾಧ್ಯವೇ ಎಂಬ ಪ್ರಶ್ನೆ ರಾಜೀವನನ್ನು ನಿರಂತರವಾಗಿ ಕಾಡುತ್ತಿದ್ದು, ಕೊನೆಗೆ “ಶಕ್ತಿ ಪ್ರವಹಿಸುವುದು ಬಂದೂಕಿನ ನಳಿಕೆಯ ಮೂಲಕ” ಎಂಬ ನಿರ್ಧಾರವನ್ನು ಗಟ್ಟಿಗೊಳಿಸಿ ತನ್ನ ಹಿಂದಿನ ವೃತ್ತಿಗೆ ಅವನು ಹಿಂದಿರುಗುತ್ತಾನೆ ಎಂಬಲ್ಲಿಗೆ ಕಾದಂಬರಿ ಮುಕ್ತಾಯ ಕಾಣುತ್ತದೆ. ಅವನು ಹಿಂದೆ ನಕ್ಸಲೀಯನಾಗಿದ್ದುದರ ಕುರುಹನ್ನು ಅನೇಕ ಸಂದರ್ಭಗಳಲ್ಲಿ ಉಲ್ಲೇಖಿಸಿರುವುದರಿಂದ ಅವನು ಆ ಜಾಡಿಗೆ ಮರಳುತ್ತಾನೆ ಎಂದು ಓದುಗ ಊಹಿಸಬಹುದು.


    ಕಾರ್ಮಿಕ, ಮಾಲೀಕ ಸಂಘರ್ಷದಂತಹ ಶುಷ್ಕ ವ್ಯವಹಾರಿಕ ವಸ್ತುವಿನ ಸುತ್ತ ಹೆಣೆದ ಕಥೆಯಾದರೂ ಬಲ್ಲಾಳರು ಅನೇಕ ಸಣ್ಣ ಪುಟ್ಟ ಮಾನವೀಯ, ಕೌಟುಂಬಿಕ ಪ್ರಸಂಗಗಳನ್ನು ಸಮಂಜಸವಾಗಿ ಸೇರಿಸಿ ಕಾದಂಬರಿಗೆ ಆರ್ದ್ರತೆ ತಂದುಕೊಟ್ಟು ಸರಿದೂಗಿಸಿದ್ದಾರೆ. ಉತ್ತಮ ಗೃಹಿಣಿಯಾಗಿ ಶ್ರೀಮಂತ ಕುಟುಂಬವನ್ನು ಒಟ್ಟಾಗಿ ಹಿಡಿದಿಡುವ ಪ್ರಯತ್ನದಲ್ಲಿರುವ ಸತೀಶನ ಪತ್ನಿ ಲಕ್ಷ್ಮಿಯ ಪಾತ್ರ, ಬಾಲ್ಯದಿಂದ ನಡೆದ ಕೆಲವು ಘಟನೆಗಳ ಪರಿಣಾಮವಾಗಿ ವಿಪರೀತ ಮನಸ್ಥಿತಿ ಹೊಂದಿ ಬಂಡಾಯ ತೋರುವ ಸತೀಶನ ತಂಗಿಯ ಪಾತ್ರ, ಅವರ ತಂದೆ ನಾಗೇಶರ ಮನಸ್ಸಿನ ತುಮುಲಗಳು, ಅವರ ಹೆಂಡತಿಯ ಮೇಲೆ ಆಗಿರಬಹುದಾದ ದೌರ್ಜನ್ಯದ ಪರಿಣಾಮವಾಗಿ ಬಾಲ್ಯದಿಂದ ಸತೀಶ ಮತ್ತು ಅವನ ತಂಗಿಯ ಮನಸ್ಸಿನಲ್ಲಿದ್ದ ಅಭದ್ರತೆ, ಭಯ, ನೋವು,  ಸತೀಶನನ್ನು ಸದಾ ಕಾಡುವ ‘ಅವಳ ಸಾವು ಹೇಗಾಗಿರಬಹುದು‘ ಎಂಬ ಪ್ರಶ್ನೆ, ದಾಂಪತ್ಯದ ಹೊರಗಿನ ಅವನ ದೈಹಿಕ ಸಂಬಂಧ ಇವೆಲ್ಲವುದರ ಮೂಲಕ ಮೇಲ್ದರ್ಜೆಯ (ಹೈ ಕ್ಲಾಸ್ ಸೊಸೈಟಿ) ಕುಟುಂಬಗಳಲ್ಲಿ ಇರಬಹುದಾದ ಸಮಸ್ಯೆಗಳನ್ನು ಬಲ್ಲಾಳರು ಚಿತ್ರಿಸಿದ್ದಾರೆ. ಅಂತೆಯೇ ಪಾವಸ್ಕರ್ ಎಂಬ ದುರ್ದೈವಿ ಕಾರ್ಮಿಕನ ಕುಟುಂಬದ ಚಿತ್ರಣ, ಹೆಂಡತಿ,  ಮಕ್ಕಳು, ತಂದೆ ತಾಯಿಯರೊಂದಿಗೆ ಅವನ ಸುಖೀ ಸಂಸಾರ, ಅವರ ನಡುವಿನ ಪ್ರೀತಿ, ಕಾಳಜಿಗಳನ್ನು ಕಟ್ಟಿಕೊಟ್ಟು ಮುಷ್ಕರದ ವೇಳೆಯಲ್ಲಿ ಮುಖಂಡರ ಷಡ್ಯಂತ್ರದಿಂದ ಅವನ ಕೊಲೆಯಾದಾಗ ಓದುಗನ ಕಣ್ಣಂಚು ಒದ್ದೆಯಾಗುವ ಹಾಗೆ ಮಾಡಿದ್ದಾರೆ.


        ಒಟ್ಟಿನಲ್ಲಿ  ಆರಂಭದಲ್ಲಿ ಸುಲಭವಾಗಿ ಓದಿಸಿಕೊಂಡು ಹೋಗುವುದಿಲ್ಲ ಎಂಬಂತೆ ಅನ್ನಿಸಿದರೂ ಕೆಲವು ಪುಟಗಳ ನಂತರ ಕಥನ ತಂತ್ರದ ಹಿಡಿತ ಸಿಕ್ಕು, ಕೊನೆಯವರೆಗೆ ಕುತೂಹಲಕಾರಿಯಾಗಿ ಮುಂದುವರೆಯುತ್ತದೆ. ಇದು ಕೌಟುಂಬಿಕ ಕಾದಂಬರಿ ಅಲ್ಲದಿದ್ದರೂ, ಬಲ್ಲಾಳರ ಹೆಚ್ಚಿನ ಕಾದಂಬರಿಗಳಲ್ಲಿ ಇರುವಂತಹ ಸ್ತ್ರೀಪರ ನಿಲುವು ಇಲ್ಲೂ ಕಾಣುತ್ತದೆ. ಮಹಿಳೆಯರಲ್ಲಿ ಬಲ್ಲಾಳರಿಗಿದ್ದ ಗೌರವ, ಭರವಸೆಗಳು, ಮಹಿಳಾಶಕ್ತಿಯಲ್ಲಿ ಅವರಿಗಿದ್ದ ನಂಬಿಕೆ ಇಲ್ಲಿ  ಇನ್ನೊಮ್ಮೆ ಸ್ಪಷ್ಟವಾಗಿ ತೋರುತ್ತವೆ. ಮಾನವೀಯತೆ ಇಲ್ಲದ ಸಂವೇದನಾರಹಿತ  ಆರ್ಥಿಕ ಜಗತ್ತಿನಲ್ಲಿ  ನಡೆಯುವ ಅನ್ಯಾಯಕ್ಕೆ ನಿರಂತರ ಸಂಘರ್ಷ, ಬಂಡಾಯಗಳೇ ಪರಿಹಾರ ಮಾರ್ಗ ಎಂಬ ಮಾರ್ಕ್ಸ್ ವಾದವನ್ನು ಅಳೆದು ತರ್ಕಿಸಿ, ವಾಸ್ತವದಲ್ಲಿ ಅಂತಹ ಆದರ್ಶವಾದಿ ವ್ಯವಸ್ಥೆಯಲ್ಲಿಯೂ ಕಾಣಬಹುದಾದ ಲೋಪದೋಷಗಳನ್ನು ತೆಗೆದು ತೋರಿಸಿ ಉತ್ತರವಿಲ್ಲದ ಅನೇಕ ಪ್ರಶ್ನೆಗಳನ್ನು ತೆರೆದಿಡುವ ಬಲ್ಲಾಳರ ‘ಬಂಡಾಯ’ ಕನ್ನಡದಲ್ಲಿ ಬಂದ ಒಂದು ಅಪರೂಪದ ವಿಶಿಷ್ಟವಾದ ಕಾದಂಬರಿ ಎಂಬುದು ನಿರ್ವಿವಾದವಾಗಿದೆ.


Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page