top of page

ಪ್ರಜಾಪ್ರಭುತ್ವದ ಪ್ರಭಾವೀ ಪರಿಕರ - ಚುನಾವಣೆ

  • vidyaram2
  • Apr 19, 2024
  • 4 min read

Updated: Apr 24, 2024



ಅಬ್ರಹಾಂ ಲಿಂಕನ್ ಅವರು ಹೇಳಿರುವಂತೆ ‘ಡೆಮಾಕ್ರಸಿ ಇಸ್ ದಿ ಗವರ್ನಮೆಂಟ್ ಆಫ್ ದಿ ಪೀಪಲ್, ಬೈ ದಿ ಪೀಪಲ್, ಫಾರ್ ದಿ ಪೀಪಲ್’; ಅಂದರೆ  ಪ್ರಜಾಪ್ರಭುತ್ವ ಎನ್ನುವುದು  ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ ರಚಿಸಿರುವ  ಸರಕಾರ. ಡೆಮಾಕ್ರಸಿ ಎಂಬ ಗ್ರೀಕ್ ಪದದ ವ್ಯುತ್ಪತ್ತಿ ಇಂತಿದೆ: ಡೆಮೋಸ್ ಅಂದರೆ ಜನರು, ಕ್ರೇಟೋಸ್ ಅಂದರೆ ಅಧಿಕಾರ (ಪವರ್). ಹಾಗಾಗಿ ಡೆಮಾಕ್ರಸಿ ಪದದ ಸಂವಾದಿಯಾಗಿರುವ ಪ್ರಜಾಪ್ರಭುತ್ವದ ಅರ್ಥ ‘ಜನಸಾಮಾನ್ಯರ ಆಳ್ವಿಕೆ, ಅಧಿಕಾರ’ ಎಂದಾಗುತ್ತದೆ. ಅಂದರೆ  ಪ್ರಜಾಪ್ರಭುತ್ವದಲ್ಲಿ  ಸರಕಾರದ ಆಡಳಿತವು ಜನರ ಅಭಿಮತದಿಂದ ನಡೆಯುತ್ತದೆ ಎಂದರ್ಥ. ಹಾಗಿರುವಾಗ ಜನರ ಅಭಿಮತವನ್ನು ಸಂಗ್ರಹಿಸುವ ಪ್ರಕ್ರಿಯೆಯಾದ ಚುನಾವಣೆಯು ಪ್ರಜಾಪ್ರಭುತ್ವದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದಾಯಿತು.


ಜನಸಂಖ್ಯೆ ಬಹಳವೇ ಕಡಿಮೆ ಇದ್ದಲ್ಲಿ ‘ಪ್ರತ್ಯಕ್ಷ' ಅಥವಾ ‘ನೇರ ಪ್ರಜಾಪ್ರಭುತ್ವ’ ನಡೆಸುವ ಅವಕಾಶವಿರುತ್ತದೆ. ಇಲ್ಲಿ ಜನ ಪ್ರತಿನಿಧಿಗಳನ್ನು ಆರಿಸದೇ ನೇರವಾಗಿ ಜನರೇ ಆಡಳಿತ ನಡೆಸಬಲ್ಲರು. ಆದರೆ ಇಂದಿನ ಯುಗದಲ್ಲಿ ಇದು ಸಾಧುವಲ್ಲ. ಈಗ ‘ಪರೋಕ್ಷ’ ಅಥವಾ ‘ಪ್ರಾತಿನಿಧಿಕ  ಪ್ರಜಾಪ್ರಭುತ್ವ’ವೊಂದೇ ದಾರಿ. ಇಲ್ಲಿ ಜನಪ್ರತಿನಿಧಿಗಳನ್ನು ಚುನಾವಣೆಯ ಮೂಲಕ ಆರಿಸಿ, ಸಮಾಜದ ಆಡಳಿತ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಒಪ್ಪಿಸಲಾಗುತ್ತದೆ. ದೊಡ್ಡ ರಾಷ್ಟ್ರಗಳ ಆಳ್ವಿಕೆಯಲ್ಲಿ ಅನುಕೂಲವಾಗುವಂತೆ ದೇಶವನ್ನು ಸಣ್ಣ ಸಣ್ಣ ಘಟಕಗಳನ್ನಾಗಿ ವಿಂಗಡಿಸಿ ಆಡಳಿತ ನಡೆಸಲಾಗುತ್ತದೆ. ದೇಶವೆಂಬ ಸಂಕುಲವನ್ನು ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ, ಹೋಬಳಿ ಎಂದು ಸಣ್ಣ ಘಟಕಗಳಾಗಿ ವಿಂಗಡಿಸಿ, ಆ ಘಟಕಗಳ ಆಡಳಿತ ನಿರ್ವಹಣೆಗೆ ಅಂಗಗಳನ್ನು ನೇಮಿಸಲಾಗುತ್ತದೆ. ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ತಾಲೂಕಿನಲ್ಲಿ ತಾಲೂಕು ಪಂಚಾಯಿತಿ, ಜಿಲ್ಲೆಯ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ, ನಂತರ ರಾಜ್ಯದ  ಆಡಳಿತಕ್ಕಾಗಿ ರಾಜ್ಯ ಸರಕಾರ ಮತ್ತು ಇಡೀ ದೇಶದ ಆಡಳಿತಕ್ಕಾಗಿ ಕೇಂದ್ರ ಸರಕಾರ - ಇವು ಭಾರತದ ಸಂವಿಧಾನದಲ್ಲಿ ಮಾಡಿಕೊಂಡ ಆಡಳಿತದ ಅಂಗಗಳಾಗಿವೆ. ಈ ಎಲ್ಲ ಆಡಳಿತದ ಅಂಗಗಳಿಗಾಗಿಯೂ ಚುನಾವಣೆ ನಡೆಸಿ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಸಹಜವಾಗಿದೆ. 


ಪ್ರಜಾಪ್ರಭುತ್ವದಲ್ಲಿ ನಿರಂಕುಶ ಪ್ರಭುತ್ವವಿರುವುದಿಲ್ಲ. ಕಾಲಕಾಲಕ್ಕೆ ಮರು ಚುನಾವಣೆ ಮಾಡಿ ಹೊಸ ಪ್ರತಿನಿಧಿಗಳನ್ನು ಆರಿಸುವ ಅವಕಾಶ ಇರುತ್ತದೆ. ದೇಶದ ಎಲ್ಲ ಜನರೂ ಸಮಾನರು, ಎಲ್ಲರಿಗೂ ಚುನಾವಣೆಗೆ ನಿಲ್ಲಲು ಸಮಾನ ಹಕ್ಕಿರುತ್ತದೆ. ಪ್ರತಿಯೊಬ್ಬ ಪ್ರಜೆಯ ಗೌರವವನ್ನು ಕಾಪಾಡುತ್ತಾ ವ್ಯಕ್ತಿಯ ತನ್ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು ಪ್ರಜೆಗಳಿಂದ ಆರಿಸಿಬಂದ ಸರಕಾರದ ಕರ್ತ್ಯವ್ಯವಾಗಿರುತ್ತದೆ. ಸಮರ್ಥ ಆಡಳಿತ ನೀಡಿ ಜನಮನ ಗೆದ್ದ ಪ್ರತಿನಿಧಿಗಳು ಪುನಃ ಚುನಾಯಿತರಾಗಿ ಬರುವ ಸಾಧ್ಯತೆಗಳಿರುತ್ತವೆ. ಸ್ವತಂತ್ರವಾಗಿ ಚುನಾವಣೆಗೆ ನಿಂತು ಆಡಳಿತ ವರ್ಗಕ್ಕೆ ಸೇರುವ ಪರಿಪಾಠ ಕಡಿಮೆ. ಕೆಲವು ಮೂಲಭೂತ ನೀತಿ, ಸಿದ್ಧಾಂತಗಳನ್ನು ಗೌರವಿಸುವ ಜನರು ಒಂದಾಗಿ ರಾಜಕೀಯ ಪಕ್ಷಗಳನ್ನು ರಚಿಸಿಕೊಂಡು ಆ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಳುಹಿಸುವ ಪರಿಪಾಠ ಎಲ್ಲ ಪ್ರಜಾಪ್ರಭುತ್ವವಿರುವ ದೇಶಗಳಲ್ಲೂ ಸಾಮಾನ್ಯವಾಗಿದೆ. ಸಾಮಾನ್ಯವಾಗಿ ಪಾಶ್ಚಾತ್ಯರಲ್ಲಿ ಡೆಮೋಕ್ರಾಟ್, ರಿಪಬ್ಲಿಕ್ ಎಂಬಂತಹ ಎಡ-ಬಲಪಂಥಿ ವಿಚಾರವಾದದ ಎರಡು ಶಕ್ತಿಯುತ ಪಕ್ಷಗಳಿದ್ದರೆ ಭಾರತದಲ್ಲಿ ಕಾಂಗ್ರೆಸ್, ಬಿ.ಜೆ.ಪಿ, ಜನತಾ ದಳ, ರಾಷ್ಟ್ರೀಯ ಜನತಾ ದಳ, ಆಮ್ ಆದ್ಮಿ ಪಾರ್ಟಿ, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಡಿ.ಎಂ.ಕೆ., ತೃಣಮೂಲ ಕಾಂಗ್ರೆಸ್, ತೆಲುಗು ದೇಶಂ ಪಕ್ಷದಂತಹ ನಾನಾ ವಿಧದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿವೆ. 


ಭಾರತದಂತಹ ಬಹುದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವ ಹಲವಾರು ಕ್ಷೇತ್ರಗಳಿಂದ ಆಯ್ದು ಬರುವ ಪಕ್ಷದ ಅಭ್ಯರ್ಥಿಗಳ ಸಂಖ್ಯಾಬಲದ  ಮೇಲೆ ಪಕ್ಷದ ಬಹುಮತವನ್ನು ನಿರ್ಧರಿಸಲಾಗುತ್ತದೆ. ಸಂಪೂರ್ಣ ಬಹುಮತ ಪಡೆದು ಗೆದ್ದು ಬಂದ ಪಕ್ಷ ಕೇಂದ್ರದಲ್ಲಿ ಸರಕಾರ ರಚಿಸಿ ಐದು ವರ್ಷದವರೆಗೆ ಆಡಳಿತ ನಡೆಸುತ್ತದೆ. ಎರಡನೆಯ ಸ್ಥಾನದಲ್ಲಿ ಬರುವ ಪಕ್ಷ ವಿರೋಧ ಪಕ್ಷವಾಗಿ ಸರಕಾರದ ಆಡಳಿತವನ್ನು ಎಚ್ಚರಿಕೆಯಿಂದ ಗಮನಿಸುತ್ತಾ, ಗೆದ್ದು ಬಂದ  ನಂತರ ಆಡಳಿತ ಪಕ್ಷ ಎಚ್ಚರ ತಪ್ಪದಂತೆ ನೋಡಿಕೊಳ್ಳುವ ಹೊಣೆಯನ್ನು ಹೊರುತ್ತದೆ. ಈ ರೀತಿಯಲ್ಲಿ ಸಮರ್ಥ ಪ್ರತಿನಿಧಿಯನ್ನು ಚುನಾಯಿಸಿದ ಜನಸಾಮಾನ್ಯರು ತಮ್ಮ ದುಡಿಮೆಯ ಸಣ್ಣ ಪಾಲನ್ನು ಸರಕಾರಕ್ಕೆ ತೆರಿಗೆಯಾಗಿ ನೀಡಿ, ಅದಕ್ಕೆ ಪ್ರತಿಯಾಗಿ ಉತ್ತಮ ಆಡಳಿತದ ಸೇವೆ ಪಡೆಯುತ್ತಾ ಮುಂದಿನ ಐದು ವರ್ಷಗಳನ್ನು ನಿರಾಳವಾಗಿ ನೆಮ್ಮದಿಯಿಂದ ಕಳೆಯಬಲ್ಲರೆಂಬುದು ಪ್ರಜಾಪ್ರಭುತ್ವದ ಸೊಗಸಾದ ಕಲ್ಪನೆ.  ಹೌದು, ಕಲ್ಪನೆಯಷ್ಟೇ!! 


ಇದೇನು, ಈ ಲೇಖನ ನಾವು ಶಾಲೆಯಲ್ಲಿ ಕಲಿತು ಬಂದ ಪೌರನೀತಿ ಪಠ್ಯದ ವಿಷಯವನ್ನು ಹೇಳುತ್ತಿದೆಯಲ್ಲ ಎಂದು ಓದುಗರಿಗೆ ಬೇಸರ ಆಗಿರಬಹುದು. ಆದರೆ ಇಂದು ಇಲ್ಲಿ ಚರ್ಚಿಸಲಾಗುವ ವಿಷಯ ‘ಪ್ರಜಾಪ್ರಭುತ್ವದ ಪ್ರಭಾವೀ ಪರಿಕರವಾದ ಚುನಾವಣೆ’ ಎಂಬ ಪ್ರಕ್ರಿಯೆ ಇಂದು ತನ್ನ ನಿಜವಾದ ಅರ್ಥ, ಮೌಲ್ಯಗಳನ್ನು ಕಳೆದುಕೊಂಡು ಯಾವ ಸ್ಥಿತಿಯನ್ನು ತಲುಪಿದೆ ಎಂಬುದು. ಅದಕ್ಕೆ ಪೂರ್ವಭಾವಿಯಾಗಿ ಕೊಟ್ಟ ಪೀಠಿಕೆ ಈ ವ್ಯವಸ್ಥೆಯ ಸರಳ, ಸತ್ವಯುತ ಸಾಮರ್ಥ್ಯವನ್ನು ಓದುಗನಿಗೆ ನೆನಪಿಸುವುದೇ ಆಗಿತ್ತು. ಇಂದು ಚುನಾವಣೆ ಎಂದರೆ ಅದೊಂದು ಹಗರಣ, ಈ ಚುನಾವಣಾ ಕಾಲದಲ್ಲಿ ಗೆದ್ದು ಬರುವ ಗುರಿಯೊಂದನ್ನೇ ಹಿಂಬಾಲಿಸುತ್ತ ಪಕ್ಷವೊಂದು ನಿರಂತರವಾಗಿ  ಮಾಡುವ ಸರ್ಕಸ್ಸು, ದೊಂಬರಾಟ ಎನ್ನಿಸಿದೆ. ಭ್ರಷ್ಟಾಚಾರ ಮಿತಿಮೀರಿದೆ. ಪ್ರಜಾಪ್ರಭುತ್ವದ ಶಕ್ತಿಯುತ ಪರಿಕರ ದುರ್ಜನರ, ಸ್ವಾರ್ಥಿಗಳ ಕೈಯಡಿಯಲ್ಲಿ ಸಿಲುಕಿ ನಿಶಕ್ತವಾಗಿದೆ. ಪ್ರಜಾಪ್ರಭುತ್ವದಲ್ಲಿ ತನ್ನ ಮೂಲಭೂತ ಹಕ್ಕಾಗಿದ್ದ ಮತ ಚಲಾವಣೆ ಇಂದು ಅಣಕದ ಆಟವಾಗಿ ಪರಿಣಮಿಸಿ ಜನಸಾಮಾನ್ಯನಲ್ಲಿ ವಿಷಾದ ಮೂಡಿಸಿದೆ. 


ಚುನಾವಣೆಯಲ್ಲಿ ಆರಿಸಿ ಬಂದವರಲ್ಲಿ ಹೆಚ್ಚಿನವರು ತಮ್ಮ ಸ್ವಾರ್ಥಕ್ಕಾಗಿಯೇ ದುಡಿಯುವವರು. ಎಷ್ಟು ಆಸ್ತಿ ಮಾಡಿದರೂ ಸಾಲದೆಂಬ, ಇನ್ನಷ್ಟು, ಮತ್ತಷ್ಟು, ಮಗದಷ್ಟು ಮಾಡುವ ದುರಾಸೆ ಹೊತ್ತವರು. ಹಿರಿಯ ರಾಜಕೀಯ ಮುತ್ಸದ್ದಿಗಳೂ ತಮ್ಮ ನೀತಿ, ನಿಷ್ಠೆಯನ್ನೆಲ್ಲ ಗಾಳಿಗೆ ತೂರಿ ಕುರ್ಚಿಯಾಸೆಯಲ್ಲಿ ಪಕ್ಷದಿಂದ ಪಕ್ಷಕ್ಕೆ ಮರ್ಯಾದೆ ಬಿಟ್ಟು ಹಾರುತ್ತಾರೆ. ನಾಳೆಯೇ ಚಟ್ಟಕ್ಕೆ ಏರಲಿರುವವನಿಗೂ ಇಂದು ಪಟ್ಟಕ್ಕೇರುವ ಆಸೆ! ಭೂಮಿಯಿಂದ ಹೊರಡುವಾಗ ಬರಿಗೈಯಲ್ಲಿ ಹೋಗುವೆವೆಂಬ ಮಿತಿಯ ಅರಿವಿದ್ದಾಗಲೇ ಹೀಗೆ ನಡೆಯುವ ಜನರು, ಹೋಗುವಾಗ ಹೊತ್ತುಕೊಂಡು ಹೋಗುವ ಭಾಗ್ಯವಿದ್ದರೆ ಇನ್ನೇನು ಮಾಡುತ್ತಿದ್ದರೋ! ಜನಸಾಮಾನ್ಯರು ಗೊಂದಲಕ್ಕೊಳಗಾಗಿ ಬಹುಮತದಿಂದ ಒಂದು ಪಕ್ಷವನ್ನು ಚುನಾಯಿಸದೆ ತ್ರಿಶಂಕು ಸ್ಥಿತಿಯನ್ನುಂಟುಮಾಡಿದರೆ, ಎರಡು ಮೂರು ಪಕ್ಷಗಳು ಮಿಲನ ಸಾಧಿಸಿ ಕಚ್ಚಾಟ, ಕಿತ್ತಾಟಗಳಲ್ಲಿ ಕಾಲ ನೂಕುತ್ತಾರೆ. ಕೇಂದ್ರದಲ್ಲಿ ಸಮರ್ಥ ನಾಯಕನೊಬ್ಬನ ಕ್ಷಮತೆಯನ್ನು ನೋಡಿ ಮತ ನೀಡಲು ಹೋಗುವ ನಾಗರಿಕನಿಗೆ ತನ್ನ ಕ್ಷೇತ್ರದಲ್ಲಿ ನಿಂತ ಅವರ ಪಕ್ಷದ ಅಭ್ಯರ್ಥಿಯನ್ನು ಕಂಡು ನಾಚಿಕೆಯೆನ್ನಿಸುವ ಸ್ಥಿತಿ ಇದೆ. ಇದನ್ನೆಲ್ಲ ನೋಡಿ ಮತದಾನ ಮಾಡದೆ ಇರುವವರಂತೆಯೇ, ಯಾವುದಕ್ಕೂ ತಲೆ ಹಾಕದೆ ವ್ಯವಸ್ಥೆಯನ್ನು ಶಪಿಸುತ್ತ ವೋಟ್ ಹಾಕದೆ ಜಾಲಿಯಾಗಿರುವ ವಿದ್ಯಾವಂತರೂ ಅದೆಷ್ಟೋ ಜನ. ಅಂತಹವರ ಪಾಲಿನ ವೋಟುಗಳ ಗತಿ ಏನಾಯಿತೆಂದು ಊಹಿಸುವುದು ಕಷ್ಟವೇನಲ್ಲ. ಇನ್ನು ಮತದಾನ ಪ್ರಕ್ರಿಯೆಯ ಮಹತ್ತ್ವವನ್ನೇ ತಿಳಿಯದವರು,  ಯಂತ್ರ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಅರಿವಿಲ್ಲದ ಅಮಾಯಕರು, ಯಾವ ಗುಂಡಿ (ಬಟನ್) ಒತ್ತಿದರೆ ಯಾರಿಗೆ ಮತ ಹೋಗುತ್ತದೆ ಎಂದು ಅರಿಯದೆ ಒತ್ತುವವರು, ಯಾರಿಗೂ ಮತ ನೀಡದೆ ಇರುವ ಸಾಧ್ಯತೆಯೂ ಇದೆ ‘NOTA’ (ನನ್ ಆಫ್ ದಿ ಅಬೊವ್,  ಮೇಲಿನ ಯಾರಿಗೂ ಅಲ್ಲ)  ಎಂದು ಅರಿಯದವರು ಎಷ್ಟು ಜನರೋ. ಟಿ.ವಿ, ಮಿಕ್ಸರ್, ಗ್ರೈಂಡರ್, ಸೀರೆಗಳ ಆಸೆಗೆ ಒಳಗಾಗಿ,  ಬಿಟ್ಟಿ ಭಾಗ್ಯಗಳ ಆಮಿಷಕ್ಕೊಳಗಾಗಿ ವೋಟನ್ನು ಮಾರಿಕೊಳ್ಳುವವರು ಎಷ್ಟು ಜನರೋ!


ಚುನಾವಣೆಯನ್ನು ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ನಡೆಸುವ ಹೊಣೆಗಾರಿಕೆ, ಯಾವುದೇ ಪಕ್ಷ ಅಥವಾ ಸರಕಾರಕ್ಕೆ ಸೇರದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಅಧಿಕಾರ ಉಳ್ಳ  ‘ಚುನಾವಣಾ ಆಯೋಗ’ದ್ದಾಗಿರುತ್ತದೆ. ಪ್ರಸ್ತುತ ೨೦೨೪ರ ಚುನಾವಣೆಯ ಸಮಯದಲ್ಲಿ ಇದುವರೆಗೆ ಚುನಾವಣಾ ಆಯೋಗವು ನಗದು ಸೇರಿದಂತೆ ೪೬೫೦ಕೋಟಿ ರೂಪಾಯಿ ಮೊತ್ತದ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂಬ ಸಂಗತಿ ಇಂದು ಪತ್ರಿಕೆಗಳಲ್ಲಿ ಸುದ್ದಿ ಮಾಡಿದೆ. ಈ ವಸ್ತುಗಳಲ್ಲಿ ಮದ್ಯ, ಮಾದಕ ವಸ್ತುಗಳೂ ದೊಡ್ಡ ಪ್ರಮಾಣದಲ್ಲಿವೆ ಎಂಬುದು ಜನಸಾಮಾನ್ಯರ ಧೈರ್ಯಗೆಡಿಸುವ ಸಂಗತಿ. ಇನ್ನೂ ಚುನಾವಣಾ ಪ್ರಚಾರ ಪೂರ್ಣವಾಗಿ ಮುಗಿಯದ ಕಾರಣ ಈ ಮೊತ್ತ ಇನ್ನೂ ಹೆಚ್ಚಲಿದೆ ಎಂಬುದರಲ್ಲಿ ಏನೂ ಸಂಶಯವಿಲ್ಲ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ವಶಪಡಿಸಿಕೊಳ್ಳಲಾದ ನಗದು ಹಣ ಸಹಿತ ಇತರ ವಸ್ತುಗಳ ಮೌಲ್ಯದ ಒಟ್ಟು ಮೊತ್ತ ೩೪೭೬ ಕೋಟಿ ಆಗಿತ್ತು ಎಂಬ ಅಂಕಿಅಂಶದ ಆಧಾರದ ಮೇಲೆ ಕಾಲದಿಂದ ಕಾಲಕ್ಕೆ ಭ್ರಷ್ಟಾಚಾರವೂ ಏರುಗತಿಯಲ್ಲಿಯೇ ಸಾಗಿರುವುದು ಸ್ಪಷ್ಟವಾಗುತ್ತದೆ. ಮತದಾರರನ್ನು ಓಲೈಸಲು ಎಲ್ಲ ಪಕ್ಷಗಳೂ ವಾಮಮಾರ್ಗ ಹಿಡಿಯುತ್ತಿರುವುದು ಸತ್ಯವಾದರೂ ಚುನಾವಣಾ ಆಯೋಗ ಕೇವಲ ವಿರೋಧ ಪಕ್ಷಗಳ ಮೇಲೆ ಮಾತ್ರ ನಿಗಾ ಇಟ್ಟಿದೆ ಎಂಬ ಆರೋಪವೂ ಇದೆ. ಚುನಾವಣೆಯಲ್ಲಿ ಹೊಳೆಯಾಗಿ ಹರಿಯುತ್ತಿರುವ ಕಪ್ಪು ಹಣ ಯಾರಿಗೆ ಸೇರಿದ್ದು ಎಂದು ಪತ್ತೆ ಹಚ್ಚಲು ಸಾಧ್ಯವಿಲ್ಲದಾಗಿದೆ. ‘ಯಾರದೋ ದುಡ್ದು, ಎಲ್ಲಮ್ಮನ ಜಾತ್ರೆ’ ಎಂಬಂತೆ ಹಣ ಪಡೆದವರು ಅದನ್ನು ಭೋಗಿಸುವುದರಲ್ಲಿ, ಜೋಪಾನವಾಗಿ ಬಚ್ಚಿಡುವಲ್ಲಿ ಮಗ್ನರಾಗುತ್ತಾರೆ. ಚುನಾವಣಾ ಬಾಂಡ್ (ಎಲೆಕ್ಟೋರಲ್ ಬಾಂಡ್) ಎಂಬಂತಹ ಯೋಜನೆಯಲ್ಲೂ ಪರಿಹಾರವಿಲ್ಲದೆ ಅದನ್ನು ತಳ್ಳಿಹಾಕಲಾಗಿದೆ. ಚುನಾವಣಾ ಸಮಯ ಬಂತೆಂದರೆ ಎಲ್ಲ ಪಕ್ಷಗಳೂ ತಮ್ಮ ವಿರೋಧಿಗಳ ಹೆಸರಿನ  ಮೇಲೆ ಮಸಿ ಬಳೆಯುವ ಕೆಲಸಕ್ಕೆ ಮುಂದಾಗುತ್ತಾರೆ. ಆಡಳಿತ ಪಕ್ಷದವರು ತಮಗಾಗದವರ ಬಾಯಿ ಮುಚ್ಚಿಸಲು ಅನೇಕ ಪ್ರಬಲ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಈ ಎಲ್ಲ ವಿಷಯಗಳು ಜನಸಾಮಾನ್ಯನ ಅರಿವಿಗೆ ಅಷ್ಟಿಷ್ಟು ಬಂದರೂ ಅವನು ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿರುತ್ತಾನೆ. 


ಒಟ್ಟಿನಲ್ಲಿ ಭಾರತದಂತಹ ದೊಡ್ಡ ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬ ಪ್ರಭಾವಿ ಪರಿಕರದ ಪ್ರಭಾವ ಕುಂದಿ, ಶಕ್ತಿ ಅಡಗಿ ಸೊರಗುತ್ತಿರುವುದು ಕಳವಳಪಡುವ ಸಂಗತಿ. ಆದಾಗ್ಯೂ ಇತ್ತೀಚಿನ ಎರಡು ಮೂರು ದಶಕಗಳಲ್ಲಿ ಚುನಾವಣೆಯ ಪ್ರಕ್ರಿಯೆಯಲ್ಲಿ ಕೆಲವಾದರೂ ಸ್ವಾಗತಾರ್ಹ ಬದಲಾವಣೆಗಳು  ಕಂಡುಬಂದಿರುವುದು ಸಮಾಧಾನ ತರುವ ಸಂಗತಿ. ೧೯೯೦ರ ದಶಕದಲ್ಲಿ ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದ ಟಿ.ಎನ್.ಶೇಷನ್ ಅವರು ಜಾರಿಗೆ ತಂದ ಮತದಾರರ ಚೀಟಿ (ವೋಟರ್ ಐಡಿ) , ನಂತರದ ದಶಕದಲ್ಲಿ ಬಂದ ಮತದಾನದ ಯಂತ್ರಗಳಿಂದ (ಎಲೆಕ್ಟ್ರಾನಿಕ್ ವೋಟಿಂಗ್ ಮಶೀನ್) ಅಕ್ರಮ ಮತದಾನಕ್ಕೆ ಒಂದು ಹಂತದ ಕಡಿವಾಣ ಬಿದ್ದಂತಾಗಿತ್ತು. ಈಗ ಚುನಾವಣೆಯಲ್ಲಿ ಬೇಕಾಗುವ  ಹಣದ ವಹಿವಾಟಿನಲ್ಲಿ ಪಾರದರ್ಶಕತೆ ತರಲು ನಗದು ವ್ಯವಹಾರಕ್ಕೆ ಕಡಿವಾಣ ಹಾಕಲು ತರಲಾದ ‘ಚುನಾವಣಾ ಬಾಂಡ್’ ಅನ್ನು ಮುಂದೆ ಇನ್ನೂ ಸುಧಾರಿಸುವ ಅವಕಾಶಗಳು, ಆಶಯಗಳು ಗೋಚರಿಸುತ್ತಿದೆ ಎಂಬ ಇತ್ತೀಚಿನ ಸುದ್ದಿಯೂ ಒಂದು ಉತ್ತಮ ಬೆಳವಣಿಗೆಯೇ. ಭಾರತದಂತಹ ದೊಡ್ಡ ರಾಷ್ಟ್ರದ ಸಂಕೀರ್ಣ ಪ್ರಜಾಪ್ರಭುತ್ವ  ವ್ಯವಸ್ಥೆಯಲ್ಲಿ ಇರುವ ಲೋಪದೋಷಗಳನ್ನೆಲ್ಲ ಕಿತ್ತೊಗೆಯುವುದು ಸುಲಭದ ಮಾತೇನಲ್ಲ. ‘ನೀನು ಚಾಪೆ ಕೆಳಗೆ ತೂರಿದರೆ ನಾನು ರಂಗೋಲಿ  ಕೆಳಗೆ ತೂರುವೆ‘ ಎನ್ನುವ ನೀಚ ಬುದ್ಧಿಯ ಸ್ವಾರ್ಥ ಜನ ತುಂಬಿರುವ ರಾಜಕೀಯದಲ್ಲಿ ಬದಲಾವಣೆ ತರಲು ಹೊಸಗಾಳಿ ಬೀಸಬೇಕು. ಸ್ವಾರ್ಥರಹಿತರಾದ, ಪ್ರಗತಿಪರರಾದ, ಉನ್ನತ ಚಿಂತಕರಾದ ಮತ್ತು ಪ್ರಾಮಾಣಿಕರಾದ ಹೊಸ ತಲೆಮಾರಿನ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿಯಬೇಕು. ಅಲ್ಲಿಯವರೆಗೆ ದೇಶದ ಬಡಪ್ರಜೆಗಳು  ‘ಯಾರು ಆರಿಸಿ ಬಂದರೇನು, ನಮ್ಮ ಕಷ್ಟ ತೊಲಗೀತೇ’ ಎಂಬ ಹೊಂದಾಣಿಕೆಯ ಬುದ್ಧಿ ತೋರುವುದೊಂದೇ ದಾರಿ. ಸಾಲ ಮಾಡಿ ಹೆಣಗುವ ರೈತ, ಗುಂಡಿಬಿದ್ದ ರಸ್ತೆಗಳಲ್ಲಿ ಟ್ರಾಫಿಕ್ ಸಮುದ್ರದಲ್ಲಿ ದಿನದಿನವೂ ಹೋರಾಡುತ್ತಾ ಈಜಾಡುತ್ತಾ ಸಂಸಾರವನ್ನು ದಡ ಮುಟ್ಟಿಸುವ ಹಂಬಲದಲ್ಲಿ ಹೈರಾಣಾಗುವ ನಗರವಾಸಿಗಳೆಲ್ಲರೂ ‘ಅತ್ತ ದರಿ ಇತ್ತ ಪುಲಿ’ ಎಂಬಂತಹ ಸ್ಥಿತಿಯಲ್ಲಿ ದೂರದಲ್ಲಿ ಕಾಣುವ ಭರವಸೆಯ ನೆನಪಿನಲ್ಲಿ ಮತ ಚಲಾಯಿಸಿ ಕಾಯುತ್ತಾರೆ, ಒಳ್ಳೆಯ ದಿನಗಳಿಗಾಗಿ; ಅವರ ಮತದಿಂದ ಗೆದ್ದು ಗದ್ದುಗೆಯೇರಿದ ಮಂತ್ರಿಗಳೂ ಕಾಯುತ್ತಾರೆ, ಮುಂದಿನ ಚುನಾವಣೆಯ ಗೆಲುವಿಗಾಗಿ!! 

Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page