ಪುನರ್ವಸು - ಸ್ಥಿತ್ಯಂತರಕ್ಕೆ ಸಿಲುಕಿ ನಲುಗಿದ ಒಂದು ಭವ್ಯ ಸಂಸ್ಕೃತಿಯ ನೋಟ
- vidyaram2
- Oct 16, 2024
- 9 min read

ಗಂಭೀರವಾದ ಅಧ್ಯಯನಪೂರ್ಣ ಸಾಹಿತ್ಯ ರಚನೆಗೆ ಹೆಸರಾಗಿರುವ ಡಾ.ಗಜಾನನ ಶರ್ಮರದು ಬಹುಮುಖ ಪ್ರತಿಭೆ. ಇಂಜಿನಿಯರ್ ವೃತ್ತಿಯೊಂದಿಗೆ ನಟನೆ, ನಿರ್ದೇಶನ, ನಾಟಕ ಮತ್ತು ಇತರ ಸಾಹಿತ್ಯ ರಚನೆ - ಹೀಗೆ ಅನೇಕ ಪ್ರವೃತ್ತಿಗಳನ್ನು ಅವರು ರೂಢಿಸಿಕೊಂಡಿದ್ದಾರೆ. ‘ಬೆಳಕಾಯಿತು ಕರ್ನಾಟಕ’,‘ಕನ್ನಡದಲ್ಲಿ ಮಕ್ಕಳ ನಾಟಕ ಮತ್ತು ರಂಗಭೂಮಿ’, ‘ಕಾಡು ಕಣಿವೆಯ ಹಾಡುಹಕ್ಕಿ ಗರ್ತಿಕರೆ ರಾಘಣ್ಣ’, ‘ಚೆನ್ನಭೈರಾದೇವಿ’ ಮುಂತಾದವು ಅವರ ಸಂಗ್ರಹಯೋಗ್ಯ ಕೃತಿಗಳು. 2019ರಲ್ಲಿ ಅಂಕಿತ ಪುಸ್ತಕದಿಂದ ಪ್ರಕಟಣೆ ಕಂಡ 540 ಪುಟಗಳ ಬೃಹತ್ ಕಾದಂಬರಿ ‘ಪುನರ್ವಸು’ ಕೂಡ ಮೇಲಿನ ಸಾಲಿಗೆ ಸೇರಿರುವ ಅವರ ಇನ್ನೊಂದು ಮಹತ್ತರವಾದ ಕೃತಿ. ಇವರನ್ನು ವಾಸ್ತವವಾದಿ ಕಾದಂಬರಿಕಾರರೆಂದು ಗುರುತಿಸಬಹುದು.
ಪುನರ್ವಸು ಕಾದಂಬರಿಯ ಕಾಲಘಟ್ಟ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಭಾರತದ ಸ್ಥಿತ್ಯಂತರದ ಪರ್ವಕಾಲ. ಶರಾವತಿಗೆ ಅಣೆಕಟ್ಟೆ ಕಟ್ಟಿ ವಿದ್ಯುತ್ ಉತ್ಪಾದಿಸುವ ಸರ್ ಎಂ.ವಿಶ್ವೇಶ್ವರಯ್ಯನವರ ಕನಸು ಸಾಕಾರಗೊಂಡ ಕಾಲಘಟ್ಟವದು. ಆ ಸಮಯಕ್ಕಾಗಲೇ ವಿಶ್ವೇಶ್ವರಯ್ಯನವರಂತವರ ಬುದ್ಧಿವಂತಿಕೆಯಿಂದ ಕನ್ನಂಬಾಡಿ ಕಟ್ಟೆ ಕಟ್ಟಿಸಿಕೊಂಡ ಜೀವನದಿ ಕಾವೇರಿ, ಮಾನವನ ಮೂಲ ಅಗತ್ಯಗಳಿಗೆ ನೀರು ಪೂರೈಸುವುದರ ಜೊತೆಜೊತೆಗೆ ಶಿವನಸಮುದ್ರ ವಿದ್ಯುತ್ ಯೋಜನೆಯನ್ನು ಸಫಲಗೊಳಿಸಿದ್ದಳು (1902). ಆ ಯೋಜನೆ ಬಹುಬಾರಿ ವಿಸ್ತರಣೆಗೊಂಡಮೇಲೆ ತನ್ನ ಸಾಮರ್ಥ್ಯದ ತುತ್ತತುದಿಗೆ ತಲುಪಿದ ಕಾವೇರಿ, ಇನ್ನೂ ಹೆಚ್ಚು ನೀಡಲಾಗದೆ ಮಾನವನ ಮಹತ್ವಾಕಾಂಕ್ಷೆಯ ಎದುರು ಸೋತು ಕೈಚೆಲ್ಲಿದ್ದಳು. ಆಗ ಇಡೀ ನಾಡಿಗೆ ವಿದ್ಯುತ್ ಹರಿಸಲು ಅವಳಿಗಿಂತ ಹೆಚ್ಚು ಸಾಮರ್ಥ್ಯವಿರುವ ನದಿಯೆಂದು ಮಲೆನಾಡಿನ ಮೂಲೆಯಲ್ಲಿ ಹುಟ್ಟಿ ಹರಿಯುವ ಶರಾವತಿ ಆಯ್ಕೆಯಾದಳು. ಮಲೆನಾಡಿನ ಜೋಗದಲ್ಲಿ ಮೊದಲು ಮಡೇನೂರು ನಂತರ ಲಿಂಗನಮಕ್ಕಿ ಅಣೆಕಟ್ಟೆಗಳು ನಿರ್ಮಾಣಗೊಂಡು ಶರಾವತಿಯನ್ನು, ಅವಳ ಸುತ್ತಮುತ್ತಲ ದಟ್ಟವಾದ ಗುಡ್ಡಗಾಡುಗಳನ್ನು ಶೋಷಿಸಿದವು. ಮಾನವನ ಪ್ರಗತಿಯ ಅಟ್ಟಹಾಸದೆದುರು ಪ್ರಕೃತಿ ಮೌನವಾಗಿ ಶರಣಾದಳು. ಪ್ರಕೃತಿಯ ಮಡಿಲಲ್ಲಿ ಮಕ್ಕಳಾಗಿ ಬೆಳೆದ ಮಲೆನಾಡಿನ ಜೀವಜಂತು, ಪಶುಪಕ್ಷಿ ಮತ್ತು ಮಲೆನಾಡಿನ ಮುಗ್ಧ ಜನತೆ, ಅವಳ ಮೇಲಾದ ದೌರ್ಜನ್ಯಕ್ಕೆ ಊಹಿಸಲಸಾಧ್ಯವಾದ ಬೆಲೆ ತೆತ್ತರು. ಹೊರಜಗತ್ತಿಗೆ ಇನ್ನೂ ಅಷ್ಟಾಗಿ ತೆರೆದುಕೊಳ್ಳದೆ ತನ್ನ ಶ್ರೀಮಂತ ಪರಂಪರೆ, ಸಂಸ್ಕೃತಿಗಳ ಭದ್ರಕೋಟೆಯೊಳಗೆ ಭಾವನಾತ್ಮಕವಾಗಿ, ಮಾನಸಿಕವಾಗಿ, ಶಾರೀರಿಕವಾಗಿ ಪ್ರಕೃತಿಯೊಂದಿಗೆ ಬೆಸೆದುಕೊಂಡು ಬಾಳಿದ ಮಲೆನಾಡಿಗರ ಜೀವಮಾನದಲ್ಲಿ ಬಂದ ಈ ಸಂಕ್ರಮಣದ ಕಾಲ ಅವರ ಬದುಕನ್ನು ಶಾಶ್ವತವಾಗಿ ಬದಲಿಸಿದ ರೀತಿಯ ನೈಜ ಚಿತ್ರಣವೇ ಈ ಕಾದಂಬರಿಯ ಕಥಾವಸ್ತು.
ಶರಾವತಿಯ ಮೊದಲು ಕಾವೇರಿ, ನಂತರ ತುಂಗಭದ್ರಾ, ವಾರಾಹಿ, ಕೃಷ್ಣ, ಕಾಳಿ ಹೀಗೆ ಒಟ್ಟು 34 ಅಣೆಕಟ್ಟೆಗಳು, 24 ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲದೆ ಉಷ್ಣ ವಿದ್ಯುತ್ ಸ್ಥಾವರಗಳು, ಕೈಗಾದಂತಹ ಪರಮಾಣು ವಿದ್ಯುತ್ ಸ್ಥಾವರಗಳು, ಅನೇಕ ಸೌರಶಕ್ತಿ ಸ್ಥಾವರಗಳು ಇಂದು ಕರ್ನಾಟಕದಲ್ಲಿವೆ. ಇಂತಹ ಅನೇಕ ಶಕ್ತಿ ಕೇಂದ್ರಗಳು ಇಡೀ ಭಾರತದಾದ್ಯಂತ, ಜಗತ್ತಿನಾದ್ಯಂತ ಮಾನವನ ಆಧುನಿಕ ಅವಶ್ಯಕತೆಗಳನ್ನು ಪೂರೈಸುವಲ್ಲಿ ಶ್ರಮಿಸುತ್ತಿವೆ. ಈ ಎಲ್ಲ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಸಂದರ್ಭಗಳಲ್ಲಿಯೂ ಪ್ರಕೃತಿಗೆ, ಜೀವಸಂಕುಲಕ್ಕೆ, ಪ್ರಾದೇಶಿಕ ಜನತೆಗೆ ಒದಗಿದ ಅಪಾರ ಸಂಕಷ್ಟಗಳು, ಅವರ ಮುಂದಿನ ಬದುಕಿನ ಬವಣೆಗಳು ಮಾನವ ಕುಲದ ಪ್ರಗತಿಗಾಗಿ ತೆತ್ತ ಬೆಲೆಯಾಗಿದೆ. ವಿದ್ಯುಚ್ಛಕ್ತಿ ಇಲ್ಲದ ಜೀವನವನ್ನು ಇಂದು ಯಾರಿಗೂ ಕಲ್ಪಿಸಲೂ ಸಾಧ್ಯವಿಲ್ಲ. ಮಲೆನಾಡಿನ ಮೂಲೆಯಲ್ಲೂ ಇಂದು ಮಿಕ್ಸಿ, ಗ್ರೈಂಡರ್ಗಳು ತಿರುಗುತ್ತವೆ. ಬಟ್ಟೆ ಒಗೆಯುವ ಯಂತ್ರ, ಫ್ಯಾನ್, ಹವಾ ನಿಯಂತ್ರಣ, ವಿದ್ಯುತ್ ಚಾಲಿತ ನೀರೆತ್ತುವ ಪಂಪ್, ದೂರದರ್ಶನ, ಮೊಬೈಲ್ ಫೋನ್, ವೈಫೈ ಜಾಲ - ಹೀಗೆ ವಿದ್ಯುಚ್ಛಕ್ತಿ ಮಾನವನ ಮೂಲಭೂತ ಅವಶ್ಯಕತೆಯಾಗಿ ಪರಿಣಮಿಸಿದೆ. ಇದು ಸರಿಯೋ ತಪ್ಪೋ ಎಂದು ನಿರ್ಧರಿಸುವುದು ಸರಳವಲ್ಲ. ಕಾಲಕ್ಕೆ ತಕ್ಕಂತೆ ಬದಲಾವಣೆಗಳಿಗೆ ಹೊಂದಿ ಬಾಳುವ ಅಗತ್ಯ ಪ್ರಕೃತಿಯಲ್ಲಿಯೂ ಸಹಜವಾಗಿದೆ. ಆದರೆ ಪ್ರಕೃತಿಯೊಂದಿಗೆ ಇಂತಹ ಸಂಧಾನಗಳನ್ನು ಮಾಡಿಕೊಳ್ಳುವಾಗ ಮಾನವೀಯತೆಯನ್ನು ಮರೆಯದೆ, ಸಾಧ್ಯವಾದಷ್ಟು ಕಡಿಮೆ ಹಾನಿಯಾಗುವ ಹಾಗೆ, ಸಂಕಷ್ಟಕ್ಕೊಳಗಾಗುವ ಸಕಲ ಜೀವಿಗಳಿಗೆ ಪ್ರಾಮಾಣಿಕವಾಗಿ ಆದಷ್ಟು ನ್ಯಾಯ ಸಲ್ಲಿಸುವ ಹೊಣೆಗಾರಿಕೆ ಮಾನವ ನಿರ್ಮಿತ ವ್ಯವಸ್ಥೆಯ ಮೇಲಿದೆ. ಆದರೆ ಅಂತಹ ವ್ಯವಸ್ಥೆಯಲ್ಲಿ ನಿಸ್ವಾರ್ಥದಿಂದ ದುಡಿಯುವವರ ಜೊತೆ ಅವರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಸ್ವಾರ್ಥಿಗಳು, ಕಪಟಿಗಳು, ಕ್ರೂರಿಗಳು ಹುಟ್ಟಿಕೊಳ್ಳುತ್ತಾರೆ. ಇದರಿಂದಾಗಿ ಆಗುವ ಅನ್ಯಾಯ, ಶೋಷಣೆಗೆ ಬಲಿಯಾಗುವವರು ಅಮಾಯಕ ಅಸಹಾಯಕರು. ಅಂತಹ ಅಸಹಾಯಕ ಮಲೆನಾಡಿನ ಮುಗ್ಧ ಜನತೆ ತಮ್ಮ ಜಮೀನು, ಮನೆ-ಮಠಗಳನ್ನು ಕಳೆದುಕೊಂಡು, ತಮ್ಮ ಬೇರು ಕಿತ್ತುಕೊಂಡು ಸ್ಥಳಾಂತರ ಮಾಡಬೇಕಾದ ಅನಿವಾರ್ಯ, ದೀಪದ ಬುಡದಲ್ಲಿ ಕತ್ತಲೆ ಎಂಬಂತೆ ನಾಡಿಗೆ ಬೆಳಕು ನೀಡುವ ಸಲುವಾಗಿ ಒಂದು ಸಂಸ್ಕೃತಿಯೇ ಕ್ಷೀಣಿಸಿದ ದಾರುಣ ಕತೆಯನ್ನು ಈ ಕಾದಂಬರಿ ಅರುಹುತ್ತದೆ.
ಜೋಗ ಹಾಗೂ ಸುತ್ತಮುತ್ತಲ ಹಳ್ಳಿಯ ಜನತೆಯ ಅಂದಿನ ಕೌಟುಂಬಿಕ, ಸಾಮಾಜಿಕ, ಸಾಂಸ್ಕೃತಿಕ ಬದುಕಿನ ಚಿತ್ರಣವನ್ನು ಅಲ್ಲಿಯವರೇ ಆದ ಲೇಖಕರು ಅತ್ಯಂತ ವಾಸ್ತವಿಕವಾಗಿ ಕಟ್ಟಿಕೊಟ್ಟಿದ್ದಾರೆ. ಅದಲ್ಲದೆ, ವಿದ್ಯುತ್ ಇಲಾಖೆಯಲ್ಲಿಯೇ ಇಂಜಿನಿಯರ್ ಆಗಿ ಮೂರೂವರೆ ದಶಕಗಳ ಕಾಲ ಸೇವೆಗೈದವರಾಗಿ ವಿದ್ಯುತ್ ಉತ್ಪಾದನಾ ಯೋಜನೆಗಳ ಕುರಿತು ಆಳವಾದ ಜ್ಞಾನವನ್ನು ಹೊಂದಿರುವವರಾಗಿದ್ದಾರೆ. ಜೋಗದೊಂದಿಗೆ ತಮಗಿರುವ ಭಾವನಾತ್ಮಕ ಸಂಬಂಧವನ್ನು ಮುನ್ನುಡಿಯಲ್ಲಿ ಬಿಚ್ಚಿಟ್ಟಿರುವ ಅವರು, ಆಧುನಿಕ ಬದುಕಿನಲ್ಲಿ ವಿದ್ಯುತ್ತಿನ ಅನಿವಾರ್ಯತೆಯನ್ನು ಅರಿತವರಾಗಿ ಪ್ರಕೃತಿ ಮತ್ತು ಪ್ರಗತಿಯ ನಡುವೆ ಆಯ್ಕೆ ಮಾಡಿಕೊಳ್ಳುವಂತಹ, ಸಂಧಾನ ಮಾಡಿಕೊಳ್ಳುವಂತಹ ಪರಿಸ್ಥಿತಿಯಲ್ಲಿ ಹುಟ್ಟುವ ಇಬ್ಬಂದಿತನವನ್ನು, ಮಾನವೀಯ ಜಿಜ್ಞಾಸೆಗಳನ್ನು ಅಧಿಕೃತವಾಗಿ ತೆರೆದಿಡಬಲ್ಲವರಾಗಿದ್ದಾರೆ. ಮುನ್ನುಡಿಯಲ್ಲಿ ಹೇಳಿರುವಂತೆ, 1916 ರಲ್ಲಿ ವಿಶ್ವೇಶ್ವರಯ್ಯನವರು ಜೋಗಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಲು ಆದೇಶಿಸಿದ ಘಟನೆಯೊಂದಿಗೆ ಪ್ರಾರಂಭವಾಗಿ, ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಸಂಗ್ರಹಣೆ ಆರಂಭವಾಗುವವರೆಗಿನ ಎಲ್ಲ ಮಹತ್ವದ ವಾಸ್ತವ ಘಟನೆಗಳನ್ನು ಆಧರಿಸಿ ಈ ಕಾದಂಬರಿಯ ರಚನೆಯಾಗಿದೆ. ವಾಸ್ತವ ಘಟನೆಗಳ ಅಧ್ಯಯನಪೂರ್ಣ ಮಾಹಿತಿ, ವಿವರಗಳೊಂದಿಗೆ ಲೇಖಕರು, ತಮ್ಮ ಬಾಲ್ಯದಲ್ಲಿ ಸ್ವತಃ ಕಂಡುಂಡ ಅನುಭವಗಳಿಗೆ ಹಲವು ಹಿರಿಯರು ತಮ್ಮೊಂದಿಗೆ ಹಂಚಿಕೊಂಡ ಮುಳುಗಡೆಯ ಅನುಭವಗಳನ್ನೂ ಸೇರಿಸಿ ಪರಿಣಾಮಕಾರಿಯಾಗಿ ಹೆಣೆದ ಉತ್ಕೃಷ್ಟ ಕಾದಂಬರಿ ಇದಾಗಿದೆ.
ಭಾರಂಗಿ ಎಂಬ ಗ್ರಾಮದ ಒಂದು ಪ್ರತಿಷ್ಠಿತ ಹವ್ಯಕ ಬ್ರಾಹ್ಮಣ ಕುಟುಂಬವಾದ ದತ್ತಪ್ಪ ಹೆಗಡೆ ಎಂಬ ಮುಖ್ಯ ಪಾತ್ರದ ಕುಟುಂಬದ ಸುತ್ತ ಚಾಚಿಕೊಂಡ ಈ ಕಥಾನಕದ ಹರಹು ಸುಮಾರು ನಲವತ್ತೈವತ್ತು ವರ್ಷಗಳಷ್ಟು ದೀರ್ಘವಾಗಿದೆ. ಲೇಖಕರ ಕಥನ ಶೈಲಿ ಮನೋಜ್ಞವಾಗಿದ್ದು, ಕಥನ ತಂತ್ರ ಆಕರ್ಷಕವಾಗಿದ್ದು, ಸರಾಗವಾಗಿ ಓದಿಸಿಕೊಂಡು ಹೋಗುವುದಲ್ಲದೆ, ಓದುಗರನ್ನು ಮಲೆನಾಡಿನ ಆ ಪರಿಸರಕ್ಕೆ ಎಳೆದೊಯ್ದು, ಅಲ್ಲಿಯೇ ಒಬ್ಬರಾಗಿ ಅವರ ಔದಾರ್ಯ, ಆತಿಥ್ಯವನ್ನು ಸ್ವತಃ ಅನುಭವಿಸುವ ಭಾವ ನೀಡುತ್ತದೆ. ಓದುತ್ತಾ ಹೋದಂತೆ ಅನೇಕ ಬಾರಿ ಓದುಗನ ಕಣ್ಣಂಚು ಒದ್ದೆಯಾಗುವುದಲ್ಲದೆ ಕೊನೆಗೆ ಭಾರಂಗಿಯೂ ಮುಳುಗಡೆಗೆ ತುತ್ತಾಗಿ ಗ್ರಾಮಸ್ಥರೆಲ್ಲ ಪರಸ್ಥಳಗಳಿಗೆ ಗುಳೆಹೋಗುವ ಚಿತ್ರಣ ಓದುಗನ ಹೃದಯವನ್ನು ಭಾರವಾಗಿಸಿ ಅನೇಕ ದಿನಗಳವರೆಗೆ ಅವನ ಮನವನ್ನು ಹಿಡಿದಿಟ್ಟು ಮುದುಡಿಸಿಬಿಡುತ್ತದೆ.
ಅಣೆಕಟ್ಟು ಕಟ್ಟಲು ಬಂದ ಒಬ್ಬ ನಿಷ್ಠಾವಂತ ಅಧಿಕಾರಿ ಕೃಷ್ಣರಾವ್ ಎಂಬ ಇನ್ನೊಂದು ಪ್ರಮುಖ ಪಾತ್ರದ ವೃತ್ತಿ ಹಾಗೂ ವೈಯಕ್ತಿಕ ಜೀವನದ ಕತೆಯನ್ನು ಗ್ರಾಮಸ್ಥರ ಕತೆಗೆ ಸಮಾನಾಂತರವಾಗಿ ಹೆಣೆಯುತ್ತಾ, ದತ್ತಪ್ಪ ಹೆಗಡೆ ಮತ್ತು ಕೃಷ್ಣರಾವ್ ಕುಟುಂಬಗಳನ್ನು ಪ್ರೀತಿ ವಿಶ್ವಾಸದ ಬಾಂಧವ್ಯದಲ್ಲಿ ಲೇಖಕರು ಬೆಸೆದಿದ್ದಾರೆ. ಈ ಮೂಲಕ ಕೃಷ್ಣರಾವ್ ಅವರಂತಹ ಅನೇಕ ಉದ್ಯೋಗಿಗಳ ನಿಸ್ವಾರ್ಥ ಸೇವೆಯನ್ನೂ ವಿದ್ಯುತ್ ಯೋಜನೆಯ ಧನಾತ್ಮಕ ಮುಖವನ್ನೂ ವಸ್ತುನಿಷ್ಠವಾಗಿ ತೋರಿಸುವ ಅವಕಾಶವನ್ನು ಲೇಖಕರು ಸೃಷ್ಟಿಸಿಕೊಂಡಿದ್ದಾರೆ. ಆದರೆ ಎರಡು ಮಗ್ಗುಲುಗಳಿಂದಲೂ ಸಮರ್ಪಕವಾದ ತರ್ಕವನ್ನು, ವಿಚಾರಗಳನ್ನು ಮಂಡಿಸುವ ಪ್ರಯತ್ನ ಸಮತೋಲನ ಸಾಧಿಸುವುದಿಲ್ಲ. ಜೋಗದಲ್ಲಿ ಕಾಲೋನಿಗಳನ್ನು ನಿರ್ಮಿಸಿ, ಅದನ್ನು ಪಟ್ಟಣವಾಗಿಸಿ ಅದರ ಮುಗ್ಧ ಸೌಂದರ್ಯವನ್ನು ಹಾಳುಗೆಡವಿದ್ದಲ್ಲದೆ, ಮಾನವೀಯತೆಯನ್ನು ಮರೆತು ಸ್ಥಳೀಯ ಗ್ರಾಮಸ್ಥರಿಗೆ ಅಲ್ಲಿ ದ್ವಿತೀಯ ದರ್ಜೆ ನೀಡಿ, ಅವರನ್ನು ಎಲ್ಲ ಸೌಕರ್ಯ ಸವಲತ್ತುಗಳಿಂದ ದೂರವಿಟ್ಟು, ಎಷ್ಟೋ ಅಮಾಯಕರ ಬಲಿ ತೆಗೆದುಕೊಂಡು, ಅವರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನೂ ನೀಡದೆ, ಅವರ ಕೌಟುಂಬಿಕ, ಸಾಮಾಜಿಕ ಜೀವನವನ್ನೂ ಹದಗೆಡಿಸಿ ಒಂದು ಸಂಸ್ಕೃತಿಯನ್ನೇ ನಾಶ ಮಾಡಿದ ವ್ಯವಸ್ಥೆಯ ಕುರಿತು ಓದುಗನಲ್ಲಿ ಧನಾತ್ಮಕ ಭಾವ ಮೂಡಲು ಸಾಧ್ಯವೇ? ನಾಡಿಗೆ ವಿದ್ಯುತ್ ಬೆಳಕು ಕೊಟ್ಟ ಮೊದಮೊದಲ ಯೋಜನೆಗಳಲ್ಲಿ ಮಲೆನಾಡು ಪ್ರಮುಖವಾದದ್ದಾದರೂ ಅಲ್ಲಿಯೇ ಇಂದಿಗೂ ದಿನಗಟ್ಟಲೆ, ವಾರಗಟ್ಟಲೆ ವಿದ್ಯುಚ್ಛಕ್ತಿಯ ಪೂರೈಕೆಯಲ್ಲಿ ಕಡಿತ ಅತ್ಯಧಿಕ ಪ್ರಮಾಣದಲ್ಲಿ ಇರುವುದು ವಿಪರ್ಯಾಸವಲ್ಲದೆ ಮತ್ತೇನು?
'ಪುನರ್ವಸು’ ಎಂಬ ಕಾದಂಬರಿಯ ಶೀರ್ಷಿಕೆಯು ಲೇಖಕರ ಧನಾತ್ಮಕ ಆಶಯವನ್ನು ಮಾರ್ಮಿಕವಾಗಿ ಸೂಚಿಸುತ್ತದೆ. ಪುನರ್ವಸು ಎಂದರೆ ಹಿಂತಿರುಗುವಿಕೆ, ನವೀಕರಣ, ಮರುಸ್ಥಾಪನೆ ಅಥವಾ ಪುನರಾವರ್ತನೆ ಎಂಬ ಅನೇಕ ಅರ್ಥಗಳಿವೆ. ಹಾಗೆಯೇ ಮತ್ತೆ ಮತ್ತೆ ಚಿಗುರುವ, ಫಲಭರಿತಳಾಗುವ ವಸುಂಧರೆ ಎಂಬರ್ಥವೂ ಇದೆ. ಈ ಕಾದಂಬರಿಯಲ್ಲಿ ವಿವರಿಸಿರುವಂತಹ ಸ್ಥಿತ್ಯಂತರವಾದ ಮೇಲೆ ಮತ್ತೆ ಬದುಕು ಹೊಸ ರೀತಿಯಲ್ಲಿ ಪುನರ್ಸ್ಥಾಪನೆಯಾಗಿ ಹೊಸ ನೆಲೆಯಲ್ಲಿ ಮುಂದುವರಿದು ಸಾಗುವುದೇ ಪ್ರಕೃತಿಯ ನಿಯಮ ಎಂಬ ಭಾವವಿಲ್ಲಿದೆ.
ಕಾದಂಬರಿಯಲ್ಲಿ ಬಹಳ ಗಟ್ಟಿಯಾದ, ನೈಜವಾದ ಪಾತ್ರಚಿತ್ರಣ ನೀಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಮುಗ್ಧ ಗ್ರಾಮಸ್ಥರ ಮತ್ತು ಆಡಳಿತ ವ್ಯವಸ್ಥೆಯ ನಡುವೆ ಸೇತುವೆಯಾಗುವ ಪ್ರಮುಖ ಪಾತ್ರ ವಿಶಾಲ ಹೃದಯಿಯಾದ, ದೂರದೃಷ್ಟಿ ಹೊಂದಿದ್ದ, ವಿಚಾರವಂತ ಸದ್ಗುಣಿ, ಸ್ವಾತಂತ್ರ್ಯ ಹೋರಾಟಗಾರ, ಕಾಂಗ್ರೆಸ್ ಸದಸ್ಯರಾದ ಭಾರಂಗಿಯ ದತ್ತಪ್ಪ ಹೆಗಡೆಯವರದ್ದು. ಮಧ್ಯ ವಯಸ್ಸಿನಲ್ಲಿ ವಿಧವೆಯಾಗಿ ತವರಿಗೆ ಹಿಂದಿರುಗಿ, ಅಲ್ಲಿಯ ಸಂಪೂರ್ಣ ಜವಾಬ್ದಾರಿ ಹೊತ್ತು, ಸಂಸಾರವನ್ನು ನಿಭಾಯಿಸುವ ಗಟ್ಟಿಗಿತ್ತಿ ಮಡಿ ಹೆಂಗಸು ಹೆಗಡೆಯವರ ಅಕ್ಕ ತುಂಗಕ್ಕಯ್ಯ, ಹುಟ್ಟು ಮೂಕಿಯಾದ ಅವಳ ಮಗಳು ಶರಾವತಿ, ಸ್ವಭಾವತಃ ಒಳ್ಳೆಯವನೆ ಆದರೂ ಆಧುನಿಕ ವಿಚಾರದಾರೆಯುಳ್ಳ ಹೆಗಡೆಯವರ ಮಗ ಗಣೇಶ, ಸೊಸೆ ಕುಸುಮಾ, ಮಗಳು ಧಾತ್ರಿ, ನೆರೆಮನೆಯ ಭವಾನಿ, ಹೆಗಡೆಯವರ ಮುಗ್ಧ ಚಿಕ್ಕಪ್ಪ ಮಾಣಿಚಿಕ್ಕಯ್ಯ ಮತ್ತವರ ಕುಟುಂಬ, ದೋಣಿ ಗಣಪ ಮತ್ತವನ ಕುಟುಂಬ, ಮುರಾರಿ ಭಟ್ಟ ಮತ್ತು ಇನ್ನೂ ಅನೇಕ ನೆರೆಹೊರೆಯವರು, ಆಳುಕಾಳುಗಳು, ಜಾನುವಾರುಗಳು - ಹೀಗೆ ಗ್ರಾಮಸ್ಥರ ಪಾತ್ರಗಳು ಸಂಖ್ಯೆಯಲ್ಲಿ ದೊಡ್ಡದ್ದಿದ್ದು, ಎಲ್ಲ ಪಾತ್ರಗಳೂ ತಮ್ಮದೇ ಆದ ಪ್ರಾಮುಖ್ಯ ಪಡೆದಿವೆ. ಮಲೆನಾಡಿನ ಸಂಪ್ರದಾಯಗಳು, ಜನಜೀವನ ಶೈಲಿ, ಹವ್ಯಕ ಸಮಾಜದ ಆಚರಣೆಗಳನ್ನು ಲೇಖಕರು ವಿವರವಾಗಿ, ಸೂಕ್ಷ್ಮಗಳನ್ನು ತೆರೆದಿಡುತ್ತಾ ಎಳೆಎಳೆಯಾಗಿ ಪರಿಚಯಿಸಿದ್ದಾರೆ. ಕೌಟುಂಬಿಕರು ತಮ್ಮತಮ್ಮಲ್ಲೇ ಸಂಭಾಷಿಸುವಾಗ ಬಳಸುವ ಹವ್ಯಕ ಭಾಷೆಯ ಸೊಗಡು, ಇತರರೊಂದಿಗೆ ಮಾತನಾಡುವಾಗ ಶಿಷ್ಟ ಭಾಷೆಯ ಬಳಕೆ, ಕೂಡ್ಲಿ ಶೈವ ಮಠದ ಸ್ವಾಮೀಜಿಯವರು ಬಳಸುವ ಉತ್ತರ ಕರ್ನಾಟಕದ ಭಾಷೆಗಳು ಕಾದಂಬರಿಗೆ ಸಹಜತೆ ನೀಡಿವೆ. ಇನ್ನು ಬೆಂಗಳೂರಿನಿಂದ ಯೋಜನೆಯ ಕೆಲಸಕ್ಕೆ ನೇಮಿತವಾಗಿ ಬರುವ ನಿಷ್ಠಾವಂತ ಯುವ ಇಂಜಿನಿಯರ್ ಕೃಷ್ಣರಾವ್, ಅವರ ಪತ್ನಿ ಚರಿತ್ರೆಯ ಪ್ರಾಧ್ಯಾಪಕಿ ವಸುಧಾ, ಅವರಿಬ್ಬರ ಕೌಟುಂಬಿಕರು, ಅವರಿಬ್ಬರ ಬಹುಕಾಲದ ಹಂಬಲದಿಂದ, ಹೆಗಡೆ ಕುಟುಂಬದವರ ಒತ್ತಾಸೆ, ಆಶ್ರಯದಲ್ಲಿ ದೊರೆತ ನಾಟಿ ಚಿಕಿತ್ಸೆಯ ಫಲವಾಗಿ ಜನಿಸಿದ ಅವರ ಮಗಳು ಪುನರ್ವಸು, ರಂಗನಾಥ್ ಮತ್ತಿತರ ಪ್ರಾಜಕ್ಟಿನ ಸಿಬ್ಬಂದಿವರ್ಗದವರು, ಜೋಗದ ಐಬಿಯ ಮೇಟಿ ವೃಷಭಯ್ಯ, ಅವನ ಕುಟುಂಬ, ವಟ್ಟಕ್ಕಿ ಕುಟುಂಬದವರು, ಅಲ್ಲಿಯ ಕೆಲವು ಸ್ಥಳೀಕರು - ಮುಂತಾದವು ಯೋಜನೆಯ ಪರ ದುಡಿಯುವ ಪಾತ್ರಗಳು. ಈ ಪಾತ್ರಗಳಲ್ಲದೆ, ಸರ್ ಎಂ.ವಿಶ್ವೇಶ್ವರಯ್ಯ, ಕಡಾಂಬಿ, ಫೋರ್ಬ್ಸ್, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಮಿರ್ಜಾ ಇಸ್ಮಾಯಿಲ್ ಮುಂತಾದ ಐತಿಹಾಸಿಕ ಪಾತ್ರಗಳ ಜೊತೆಗೆ ಕಾದಂಬರಿಯ ಪಾತ್ರಗಳ ಒಡನಾಟ ಕೂಡ ಬರುತ್ತದೆ. ಎಲ್ಲ ಪಾತ್ರಗಳನ್ನೂ ಕೊನೆಯವರೆಗೆ ಸಮಂಜಸವಾಗಿ ಪೋಷಿಸಿ, ಅವುಗಳ ವ್ಯಕ್ತಿತ್ವವನ್ನು ಸಹಜವಾಗಿ, ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿರುವುದು ಕಾದಂಬರಿಕಾರರಾಗಿ ಲೇಖಕರ ಹಿರಿಮೆಯನ್ನು ಸಾರುತ್ತದೆ. ತುಂಗಕ್ಕಯ್ಯ ದೋಣಿ ಗಣಪರ ಪಾತ್ರಗಳು ಬಹು ಆಪ್ತವಾಗಿ ಚಿರಕಾಲ ಮನದಲ್ಲಿ ಉಳಿಯುತ್ತವೆ.
ಜೋಗ ಜಲಪಾತದ ನಾಲ್ಕು ಧಾರೆಗಳಂತೆ ಈ ಕಾದಂಬರಿಯನ್ನೂ ನಾಲ್ಕು ಧಾರೆಗಳಾಗಿ, ಪ್ರತಿಯೊಂದು ಧಾರೆಯನ್ನು ಮೂರ್ನಾಲ್ಕು ಅಧ್ಯಾಯಗಳಾಗಿ ವಿಂಗಡಿಸಿಕೊಂಡು ಲೇಖಕರು ಕಥಾ ಸಂವಿಧಾನವನ್ನು ರಚಿಸಿದ್ದಾರೆ. ಒಂದು ಅಧ್ಯಾಯ ದತ್ತಪ್ಪ ಹೆಗಡೆಯವರಿಗೆ, ಅವರ ದೃಷ್ಟಿಕೋನ, ವಿಚಾರಧಾರೆಗೆ ಸಂಬಂಧಿಸಿದ್ದಾದರೆ, ಮುಂದಿನ ಅಧ್ಯಾಯ ಕೃಷ್ಣರಾವ್ ಅವರ ದೃಷ್ಟಿಕೋನದಲ್ಲಿ ಎಂಬಂತೆ ಸಾಗುವ ಕಥಾತಂತ್ರದಿಂದ ಮೊದಲೇ ಹೇಳಿದಂತೆ ಎರಡೂ ಕಡೆಯ ವಿಚಾರಗಳನ್ನು ವಸ್ತುನಿಷ್ಠವಾಗಿ ಪುಷ್ಟೀಕರಿಸಲು ಲೇಖಕರಿಗೆ ಸಾಕಷ್ಟು ಅವಕಾಶ ದೊರೆತಿದೆ. ಕಾದಂಬರಿಯ ಮೊದಲ ಧಾರೆಯಲ್ಲಿ ಕೃಷ್ಣರಾವ್ ಅವರ ಜೀವನ ಅನಿಶ್ಚಿತತೆಯಲ್ಲಿ ಸಾಗುತ್ತಿದ್ದರೆ, ಹೆಗಡೆಯವರ ಜೀವನ ಸಮೃದ್ಧವಾಗಿ ಸುರಕ್ಷಿತವಾಗಿರುತ್ತದೆ. ಕೊನೆಯ ಧಾರೆಗೆ ಬರುವ ವೇಳೆಗೆ ಕೃಷ್ಣರಾವ್ ಅವರ ವೃತ್ತಿ, ಜೀವನ ಎರಡೂ ಯಶಸ್ವಿಯಾಗಿ ಸಾಗುತ್ತಿದ್ದರೆ ಹೆಗಡೆಯವರ ಬದುಕಿನ ದೋಣಿ ಸಂಕಷ್ಟಕ್ಕೆ ಸಿಲುಕಿ ಮೂರಾಬಟ್ಟೆಯಾಗುತ್ತದೆ. ಅವರಿಬ್ಬರ ನಡುವೆ ಹಿಂದಿದ್ದ ನಿರ್ಮಲ ಪ್ರೇಮದ ಬಾಂಧವ್ಯವೂ ಸಡಿಲಾಗುತ್ತಾ ಹೋಗುತ್ತದೆ.
ಮೊದಲನೆಯ ಧಾರೆ ಧನಾತ್ಮಕ ದೃಷ್ಟಿಕೋನದಲ್ಲಿ ಸಾಗುತ್ತದೆ. ಮಡೆನೂರು (ಹಿರೇಭಾಸ್ಕರ) ಅಣೆಕಟ್ಟು ಯೋಜನೆಯನ್ನು ಮೈಸೂರು ಸಂಸ್ಥಾನವು ಆಳುವ ಬ್ರಿಟಿಷ್ ಸರಕಾರದ ಸಹಕಾರ, ಸಹಯೋಗದಲ್ಲಿ ಆರಂಭಿಸುತ್ತದೆ. ಜೋಗ ಜಲಪಾತದ ಇಪ್ಪತ್ತೈದು ಶೇಕಡಾ ನೀರನ್ನಷ್ಟೇ ಹಿಡಿದಿಡಲಾಗುವುದು, ಇದರಿಂದ ಜಲಪಾತದ ಸೌಂದರ್ಯಕ್ಕೆ, ಪರಿಸರಕ್ಕೆ ಹಾನಿ ಇಲ್ಲ ಎಂಬ ಭರವಸೆಯ ಮೇಲೆ ಸ್ಥಳೀಯರು ಆ ಕುರಿತು ಒಳ್ಳೆಯ ಅಭಿಪ್ರಾಯ ಹೊಂದಿರುತ್ತಾರೆ. ಫೋರ್ಬ್ಸ್ ಅವರಂತಹ ಹಿರಿಯ ದಕ್ಷ ಅಧಿಕಾರಿಗಳೊಂದಿಗೆ ತಾವೇ ಚರ್ಚಿಸಿ, ಜಮೀನು, ಮನೆ ಕಳೆದುಕೊಳ್ಳುವ ಗ್ರಾಮಸ್ಥರಿಗೆ ನ್ಯಾಯಯುತವಾಗಿ ಪರಿಹಾರ ದೊರೆಯುವ ನಂಬಿಕೆಯಲ್ಲಿ, ನಾಡಿಗೆ ಒಳಿತಾಗಲಿ ಎಂಬ ಸದಾಶಯದೊಂದಿಗೆ ಯೋಜನೆಯನ್ನು ಸ್ವಾಗತಿಸುತ್ತಾರೆ.
ಎರಡನೆಯ ಧಾರೆಯಲ್ಲಿ ಲಿಂಗನಮಕ್ಕಿ ಯೋಜನೆಯ ವಿರುದ್ಧ ಸ್ಥಳೀಯರ ಬೇಸರ, ಅಪನಂಬಿಕೆಗಳು ಆರಂಭವಾಗುತ್ತದೆ. ಮೊದಲ ಯೋಜನೆ ಸಫಲವಾದ ಮೇಲೆ ಅಷ್ಟಕ್ಕೇ ತೃಪ್ತವಾಗದ ಆಡಳಿತ ವರ್ಗವು ಅದಕ್ಕಿಂತ ಹೆಚ್ಚು ಉತ್ಪಾದನಾ ಸಾಮರ್ಥ್ಯವಿರುವ ಯೋಜನೆಯನ್ನು ತರಲು ನಿರ್ಧರಿಸುತ್ತದೆ. ಆ ಕಾಲದಲ್ಲಿ ಮೈಸೂರು ರಾಜ್ಯದಲ್ಲಿ ಹೆಚ್ಚು ವಿದ್ಯುತ್ ಉತ್ಪಾದನೆ ನಡೆಯುತ್ತಿದ್ದ ಕಾರಣದಿಂದಾಗಿ, ಎಚ್.ಎ.ಎಲ್., ಬಿ.ಇ.ಎಲ್., ಎನ್.ಎ.ಎಲ್., ಬಿ.ಎಚ್.ಇ.ಎಲ್., ಮುಂತಾದ ಉದ್ಯಮಗಳ ಸ್ಥಾಪನೆಗೆ ಬೆಂಗಳೂರನ್ನು ಆಯ್ದುಕೊಳ್ಳಲಾಗಿತ್ತು. ಇದರಿಂದ ಉತ್ತೇಜಿತವಾದ ಸರಕಾರ ಈ ಬಾರಿ ಶರಾವತಿಯ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಅತ್ಯಾಸೆಗೆ ಕೈಹಾಕಿತ್ತು. ಜಲಪಾತ ಸೊರಗಿದರೂ, ಪರಿಸರಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯುಂಟಾದರೂ ಲೆಕ್ಕಿಸದೆ ಪ್ರಗತಿಯ ಬೆನ್ನೇರಿ ಹೊರಟಿತ್ತು. ಹಾಗಾಗಿ ಲಿಂಗನಮಕ್ಕಿ ಯೋಜನೆಗೆ ಸ್ಥಳೀಯರು ಸಹಮತರಾಗುವುದಿಲ್ಲ. ಈ ಸಮಯಕ್ಕೆ ನಡೆಯುತ್ತಿದ್ದ ಎರಡನೆಯ ಮಹಾಯುದ್ಧದ ಭೀಕರತೆ ಹೆಚ್ಚಿ, ‘ಗಂಡಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು’ ಎಂಬಂತೆ, ಬ್ರಿಟಿಷರ ದಾಸ್ಯದಲ್ಲಿದ್ದ ಬಡ ಭಾರತವು ಶ್ರೀಮಂತ ರಾಷ್ಟ್ರಗಳ ಗುದ್ದಾಟದಲ್ಲಿ ನಲುಗಿ ಹೋಗಿತ್ತು. ಸೈನಿಕರಿಗೆ ಆಹಾರ ಒದಗಿಸುವ ಸಲುವಾಗಿ ಹಳ್ಳಿಹಳ್ಳಿಗಳಲ್ಲಿ ರೈತರ ಮೇಲೆ ದೌರ್ಜನ್ಯ ನಡೆಯುತ್ತಿತ್ತು. ಮಲೆನಾಡಿನ ರೈತರೂ ಇದಕ್ಕೆ ಹೊರತಾಗದೆ ತಾವು ಬೆಳೆದಿದ್ದನ್ನು ದೋಚುತ್ತಿದ್ದ ಬ್ರಿಟಿಷ್ ಸರಕಾರದ ಕೃಪೆಯಿಂದ ತಿನ್ನಲು ಇಲ್ಲದ ಸ್ಥಿತಿಗೆ ತಲುಪಿದರು. ಬಂಗಾಳದಲ್ಲಿ ಕ್ಷಾಮ, ಪರಕೀಯರ ದೌರ್ಜನ್ಯದಿಂದ ದೇಶದಲ್ಲಿ ಆಹಾರದ ಅಭಾವ, ಹಣದುಬ್ಬರ ಅಸಹನೀಯ ಮಟ್ಟಕ್ಕೆ ತಲುಪಿತ್ತು.
ಮೂರನೆಯ ಧಾರೆಯಲ್ಲಿ ಗ್ರಾಮಸ್ಥರು ಒಂದೆಡೆ ತಮ್ಮ ದವಸ ಧಾನ್ಯವನ್ನು ಉಳಿಸಿಕೊಳ್ಳಲು ಹೋರಾಡುವ, ಇನ್ನೊಂದೆಡೆ ವಿದ್ಯುತ್ ಯೋಜನೆಯ ವಿರುದ್ಧ ಹೋರಾಡುವುದರಲ್ಲಿ ತಮ್ಮೆಲ್ಲ ಧನಾತ್ಮಕ ಶಕ್ತಿಯನ್ನು ವ್ಯಯಿಸಿ ಬದುಕಿನಲ್ಲಿ ಭರವಸೆ ಕಳೆದುಕೊಳ್ಳುವ ಮಟ್ಟಕ್ಕೆ ಬಂದು ನಿಲ್ಲುತ್ತದೆ. ಕೆಲಕಾಲದ ನಂತರ ಮಹಾಯುದ್ಧ ಮುಗಿದು ಬ್ರಿಟಿಷರು ಗೆಲುವು ಕಂಡರೂ, ಯುದ್ಧದ ಪರಿಣಾಮದಿಂದ ಶಕ್ತಿಗುಂದಿದ ಬ್ರಿಟಿಷ್ ಸರಕಾರ, ಹೆಚ್ಚುತ್ತಿದ್ದ ಭಾರತದ ಸ್ವಾಂತಂತ್ರ್ಯ ಹೋರಾಟದ ಕಾವಿಗೆ ಶರಣಾಗುತ್ತದೆ. ಸ್ವಾತಂತ್ರ್ಯ ಪಡೆದ ಹುಮ್ಮಸ್ಸಿನಲ್ಲಿ, ದೇಶವನ್ನು ಪ್ರಗತಿ ಪಥದೆಡೆಗೆ ಕೊಂಡೊಯ್ಯುವ ಆತುರದಲ್ಲಿ ಲಿಂಗನಮಕ್ಕಿ ಯೋಜನೆ ಪೂರ್ಣ ಬೆಂಬಲ ಪಡೆಯುತ್ತದೆ. ಮೈಸೂರು ರಾಜ್ಯ ಸರಕಾರ, ಭಾರತದ ಕೇಂದ್ರ ಕಾಂಗ್ರೆಸ್ ಸರಕಾರದ ಸಹಯೋಗದಿಂದ ಯೋಜನೆಯನ್ನು ಚುರುಕುಗೊಳಿಸುತ್ತದೆ. ಅಮೆರಿಕದಿಂದ ಆರ್ಥಿಕ ಸಹಾಯವನ್ನೂ ಗಿಟ್ಟಿಸಿಕೊಳ್ಳುತ್ತದೆ. ಬಲಿಷ್ಠ ಸರಕಾರದ ಕಿವಿಗೆ ಗ್ರಾಮಸ್ಥರ ನೋವಿನ ಅಹವಾಲು ಕೇಳುವುದೇ ಇಲ್ಲ. ಯೋಜನೆ ಆರಂಭವಾಗಿ, ಜೋಗ ಪಟ್ಟಣವಾಗಿ, ಅಲ್ಲಿನ ಕಾಲೋನಿಗಳಲ್ಲಿ ಲಕ್ಷಾಂತರ ವಲಸಿಗರು ಬಂದು ಸೇರಿ, ಮಲೆನಾಡಿನ ಮುಗ್ಧತೆಯ ವಧೆಯಾಗುತ್ತದೆ. ಬ್ರಿಟಿಷ್ ಸರಕಾರವಿದ್ದ ಕಾಲಕ್ಕಿಂತ ಹೆಚ್ಚಿನ ಸ್ವಾರ್ಥವನ್ನು ಭಾರತೀಯ ವ್ಯವಸ್ಥೆಯೇ ಮೆರೆದು ಆಧುನಿಕ ಯುಗದ ಎಲ್ಲ ಮೋಸ, ಶೋಷಣೆಗಳಿಗೆ ಮಲೆನಾಡಿನ ಪ್ರಕೃತಿ, ಪರಿಸರ ಮತ್ತು ಸ್ಥಳೀಯರು ಮೌನವಾಗಿ ಬಲಿಯಾಗುತ್ತಾರೆ. ಅವರ ಸಂಸ್ಕೃತಿಯ ಪತನ ಆರಂಭವಾಗುತ್ತದೆ.
ನಾಲ್ಕನೆಯ ಧಾರೆಯಲ್ಲಿ ಭಾರಂಗಿಯ ಮುಗ್ಧರು ಮನೆಮಠ ತೊರೆದು ಹೊರಡುವ ಹೃದಯ ವಿದ್ರಾವಕ ಪ್ರಸಂಗದ ವರ್ಣನೆಯಿದೆ. ಹೀಗೆ ಧನಾತ್ಮಕವಾಗಿ ಆರಂಭವಾದ ಕಥನ ಧಾರೆ, ಒಂದು ಜನಜೀವನದ, ಪರಂಪರೆಯ, ಸಂಸ್ಕೃತಿಯ ಪತನದಲ್ಲಿ ಋಣಾತ್ಮಕವಾದ ಅಂತ್ಯಗಾಣುತ್ತದೆ.
ಇನ್ನು ಕಾದಂಬರಿಯ ಕೆಲವು ಒಳನೋಟಗಳು, ಮನಸೆಳೆಯುವ ಸೂಕ್ಷ್ಮಗಳ ಕುರಿತು ಹೇಳುವುದಾದರೆ - ಪ್ರಕೃತಿ ಮತ್ತು ಪ್ರಗತಿಯ ಮುಖಾಮುಖಿಯನ್ನು, ಅದರ ಒಳಿತು ಕೆಡುಕುಗಳನ್ನು ವಿವೇಕದಿಂದ ವಿಮರ್ಶಿಸುವ ಮನೋಭಾವ ಹೊಂದಿರುವ ದತ್ತಪ್ಪ ಹೆಗಡೆ, ವಸುಧಾರಂತಹ ಪಾತ್ರಗಳ ಮೂಲಕ ಲೇಖಕರು ತಮ್ಮ ವಿಚಾರಧಾರೆಯನ್ನು ಹರಿಯಬಿಟ್ಟಿದ್ದಾರೆ. ‘ನಮ್ಮಲ್ಲಿ ರಸ್ತೆಗಳಿರಲಿಲ್ಲ, ದಾರಿಯಿತ್ತು; ಶಾಲೆಗಳಿರಲಿಲ್ಲ, ಶಿಕ್ಷಣವಿತ್ತು; ಆಸ್ಪತ್ರೆಗಳಿರಲಿಲ್ಲ, ವೈದ್ಯೋಪಚಾರವಿತ್ತು’ ಎನ್ನುವ ಹೆಗಡೆಯವರ ಮಾತು ನಮ್ಮ ಪಾರಂಪರಿಕ ಮೌಲ್ಯಗಳನ್ನು ತೋರುತ್ತದೆ. ಯಾವ ಹೊತ್ತಿನಲ್ಲಿ ಬಂದರೂ ದೋಣಿಯಲ್ಲಿ ಜನರನ್ನು ದಾಟಿಸಲು ಸಿದ್ಧನಿರುತ್ತಿದ್ದ ದೋಣಿ ಗಣಪ; ಶಾಲೆಗೆ ಹೋಗಿ ಅಕ್ಷರ ಕಲಿಯದಿದ್ದರೂ ದಿನವೂ ದೇವರಿಗೆ ಅಭಿಷೇಕ ಮಾಡುವಾಗ ತನ್ನ ಕುಟುಂಬದ ಎಲ್ಲರ ಹೆಸರನ್ನೂ, ಗ್ರಾಮ, ಊರಿನ ಜನರ ಹೆಸರನ್ನೂ ಬರೆದ ಪಟ್ಟಿಯನ್ನು ದೇವರಿಗೆ ತೋರಿಸಿ ಇವರೆಲ್ಲರಿಗೂ ಒಳಿತು ಮಾಡು ಎನ್ನುತ್ತಾ ಮುಗ್ಧವಾಗಿ, ನಿಷ್ಕಲ್ಮಶ ಮನದಿಂದ ಉನ್ನತ ಭಾವವನ್ನು ಅಷ್ಟು ಸರಳವಾಗಿ ಮೆರೆಯುತ್ತಿದ್ದ ಮಾಣಿ ಚಿಕ್ಕಯ್ಯ; ಮೂರ್ನಾಲ್ಕು ಬಾರಿ ಗರ್ಭಪಾತವಾಗಿ ಸೊರಗಿದ ಮೇಲೆ ಬೆಂಗಳೂರಿನ ಪ್ರಸಿದ್ಧ ವೈದ್ಯರೆಲ್ಲರೂ ಇನ್ನು ಗರ್ಭಧಾರಣೆ ಅವಳ ಜೀವಕ್ಕೆ ಅಪಾಯ ಎಂದು ಹೆದರಿಸಿದ್ದಾಗಲೂ, ಹಳ್ಳಿಯ ವೈದ್ಯನ ನಾಟಿ ಔಷಧಿ, ಹೆಗಡೆಯವರ, ತುಂಗಕ್ಕಯ್ಯನ ಧೃಢ ನಂಬಿಕೆ, ಒತ್ತಾಸೆಗಳಿಂದ ಹೆಣ್ಣು ಮಗುವಿಗೆ ಜನ್ಮ ನೀಡುವ ವಸುಧಾ ಇವರೆಲ್ಲ ಹೆಗಡೆಯವರ ಆ ಮಾತಿಗೆ ಪ್ರತೀಕಗಳಂತೆ ಕಂಡುಬರುತ್ತಾರೆ.
ಮಡೇನೂರು ಅಣೆಕಟ್ಟಿಗೆ ಸಮೀಕ್ಷೆ ನಡೆಯುತ್ತಿದ್ದಾಗಿನಿಂದಲೇ ಮುರಾರಿ ಭಟ್ಟ ಅಣೆಕಟ್ಟು ಬಂದರೆ ನಮ್ಮ ಸರ್ವನಾಶ ಎಂದು ಉನ್ಮಾದದಿಂದ ಸಾರುತ್ತಿರುತ್ತಾನೆ. ಚಿಕ್ಕಂದಿನಲ್ಲೇ ಬರೀ ಕಷ್ಟವನ್ನೇ ನೋಡಿ. ಕುಟುಂಬದಿಂದ ದೂರಾಗಿ ಊರೂರು ಅಲೆದು ಜೀವನಾನುಭವ ಪಡೆದು ಬಂದ ಆ ನತದೃಷ್ಟ, ಕನ್ನಂಬಾಡಿ ನಿರ್ಮಾಣವಾದಾಗ ತಾನು ಕಣ್ಣಾರೆ ನೋಡಿದ ಬವಣೆಗಳಿಂದ ಸತ್ಯವನ್ನೇ ಹೇಳುತ್ತಿದ್ದರೂ ಅದು ಉತ್ಪ್ರೇಕ್ಷೆಯೆಂದು, ಅವನಿಗೆ ಹುಚ್ಚು ಎಂದೂ ಜನ ಗೇಲಿಮಾಡುತ್ತಿರುತ್ತಾರೆ. ಹೆಗಡೆಯವರಿಗೆ ಮಾತ್ರ ಅವನ ಮೇಲೆ ಮೊದಲಿನಿಂದಲೂ ಇದ್ದ ನಂಬಿಕೆ, ವಿಶ್ವಾಸ, ಕೊನೆಯಲ್ಲಿ ಶರಾವತಿಯ ಜವಾಬ್ದಾರಿಯನ್ನು ಅವರು ಅವನಿಗೆ ವಹಿಸುವುದರ ಮೂಲಕ ಸಾಬೀತಾಗುತ್ತದೆ.
ಚಿಕ್ಕಂದಿನಿಂದಲೂ ತನ್ನ ಹುಟ್ಟೂರಿನಲ್ಲಿ ತನ್ನದೇ ದೋಣಿಯಲ್ಲಿ ತನ್ನೂರಿನ ಜನರನ್ನು ಹೊತ್ತುಗೊತ್ತಿಲ್ಲದಂತೆ ಬೇಕೆಂದಾಗ ನದಿ ದಾಟಿಸುತ್ತಿದ್ದ ನಾವಿಕ ದೋಣಿ ಗಣಪ. ಭಾರಂಗಿಯ ಜನಕ್ಕೆ ಹೊರಜಗತ್ತಿನ ಸಂಪರ್ಕ ಕಲ್ಪಿಸಲು ದೋಣಿ ಗಣಪನನ್ನು ಬಿಟ್ಟರೆ ಇನ್ನಿಲ್ಲ ಎಂಬಂತಿದ್ದು ಅದುವೇ ಅವನ ಅಸ್ತಿತ್ವದ ಸಂಕೇತವಾಗಿರುತ್ತದೆ. ಜೋಗ ಪಟ್ಟಣವಾದ ಮೇಲೆ ಊರಿಗೆ ರಸ್ತೆ, ಓಡಾಡಲು ಬಸ್ ಸೌಕರ್ಯಗಳು ದೊರೆಯುತ್ತವೆ. ಯಾವಾಗ ಹಿನ್ನೀರಿನ ಮಟ್ಟ ಏರುತ್ತದೆಂದು ಅರಿಯಲು ಸಾಧ್ಯವಿಲ್ಲದ ಕಾರಣ ಅಲ್ಲಿ ದೋಣಿ ನಡೆಸುವುದು ಸುರಕ್ಷಿತವಲ್ಲವೆಂದೂ ಓಡಾಡಲು ಬಸ್ ಇರುವುದರಿಂದ ಗ್ರಾಮಸ್ಥರಿಗೆ ತೊಂದರೆಯಿಲ್ಲವೆಂದೂ ಪ್ರಾಜೆಕ್ಟಿನಿಂದ ಅವನಿಗೆ ನೋಟಿಸ್ ದೊರೆಯುತ್ತದೆ. ಇಳಿ ವಯಸ್ಸಿನಲ್ಲಿ ಗಣಪನ ಅಸ್ತಿತ್ವವೇ ಕಳೆದುಹೋದಂತಾಗಿ, ಇನ್ನು ತನ್ನ ಬದುಕಿಗೆ ಕಾರಣ ಇಲ್ಲವೆಂದು ಅವನು ಕುಸಿದುಹೋಗುತ್ತಾನೆ. ಕುಲಕಸುಬಾಗಿ ದೀಪಾವಳಿಯಲ್ಲಿ ಮನೆಮನೆಗೆ ಹೋಗಿ ದೀಪ ಬೆಳಗುತ್ತಿದ್ದ ದೋಣಿ ಗಣಪ, ತನ್ನ ಬದುಕಿನ ದೀಪ ಆರಿತೆಂದು ನೊಂದು ಕಲ್ಲುಗಳಿಂದ ತುಂಬಿದ ದೋಣಿಗೆ ಬಿಗಿದುಕೊಂಡು ಶರಾವತಿಯಲ್ಲಿ ಮುಳುಗಿ ಜೀವ ಕಳೆದುಕೊಳ್ಳುವುದು ವಿಷಾದನೀಯ.
ಮುಳುಗಡೆ ಆಗುವುದು ಖಾತ್ರಿಯಾದಮೇಲೆ ಅಲ್ಲಿಯವರೆಗೆ ಕೂಡುಕುಟುಂಬದಲ್ಲಿ ಅನ್ಯೋನ್ಯವಾಗಿದ್ದವರು ಆಸ್ತಿ ಪಾಲು ಮಾಡಿಕೊಳ್ಳುವುದು, ತಮಗೆ ಹೆಚ್ಚು ಪರಿಹಾರ ಸಿಗುವ ಆಸೆಯಿಂದ ಅಣ್ಣ ತಮ್ಮಂದಿರು ದಾಯಾದಿಗಳ ಹಾಗೆ ಕಾದಾಡಿ, ಕೋರ್ಟು ಮೆಟ್ಟಿಲು ಹತ್ತುವಂತಾಗುವುದು, ತಮ್ಮ ಗದ್ದೆ, ಜಮೀನುಗಳನ್ನು ಉಳದೆ, ಬೆಳೆಯದೆ ಪರಿಹಾರದ ಚಿಂತೆಯಲ್ಲಿ ಕಾಲ ಕಳೆಯುವುದು, ಕಳ್ಳತನ ಸುಲಿಗೆಗಳು ಹೆಚ್ಚುವುದು, ಜಾನುವಾರುಗಳನ್ನು ಮನೆಯವರಂತೆ ಪ್ರೀತಿಯಿಂದ ಸಾಕುತ್ತಿದ್ದವರು, ಸ್ಥಳಾಂತರಗೊಳ್ಳುವ ಸಮಯದಲ್ಲಿ ಎಲ್ಲ ಜಾನುವಾರುಗಳನ್ನು ಕರೆದೊಯ್ಯುವುದು ಕಷ್ಟವೆಂದು ಇದು ಗೊಡ್ಡು, ಇದು ಮುದಿ ಎಂದು ಭೇದ ಮಾಡುವುದು, ಯುವ ಜನಾಂಗ ಪಟ್ಟಣಗಳಿಗೆ ಹೋಗಿ ಸುಖಕರ ಬದುಕು ರೂಪಿಸಿಕೊಳ್ಳುವ ಕಡೆಗೆ ಆಸ್ಥೆ ತೋರುವುದು - ಇವೆಲ್ಲ ಅವರ ಆಂತರ್ಯದಲ್ಲಿ ಆಗುತ್ತಿರುವ ಸಂಸ್ಕೃತಿಯ ಅವನತಿಗೆ ಸಾಕ್ಷಿಗಳಾಗುತ್ತವೆ. ಇದರ ಜೊತೆಗೆ ಜೋಗ ಪಟ್ಟಣವಾಗಿ ಅಲ್ಲಿಗೆ ಪ್ರಾಜೆಕ್ಟಿನ ಕೆಲಸಕ್ಕಾಗಿ ಬಂದು ನೆಲೆಸಿದ ಲೆಕ್ಕವಿಲ್ಲದಷ್ಟು ಸಂಖ್ಯೆಯ ವಲಸಿಗರಲ್ಲಿ ಧೂರ್ತರೂ, ಸ್ವಾರ್ಥಿಗಳೂ ಸೇರಿಕೊಂಡು ಅಲ್ಲಿಯ ಸುಂದರ ಸಂಸ್ಕೃತಿಯನ್ನು ಹೊರಗಿನಿಂದ ನಾಶ ಮಾಡಲು ಕಾರಣರಾಗುತ್ತಾರೆ. ಅಣೆಕಟ್ಟೆಯನ್ನು ಕಟ್ಟಲು ಬೇಕಾಗುವ ಕಲ್ಲುಗಳನ್ನು ಪೂರೈಸುವ ಸಲುವಾಗಿ ದೂರದ ಕೇರಳ, ತಮಿಳುನಾಡು ಮುಂತಾದ ಪ್ರದೇಶಗಳಿಂದ ವಲಸೆ ಬಂದು ಕ್ವಾರಿ ಕಲ್ಲು ಒಡೆಯುವ ಒಡ್ಡರು, ಅವರುಗಳ ಸಿರಿವಂತ ಗುತ್ತಿಗೆದಾರ ಒಡೆಯರು ಹಳ್ಳಿಯ ಮುಗ್ಧ ಪರಿಸರವನ್ನು ಹಾಳುಗೆಡವುತ್ತಾರೆ. ಇಂತಹ ಧೂರ್ತರಿಂದ ಕಿವುಡಿ, ಮೂಕಿಯಾದ ತುಂಗಕ್ಕಯ್ಯನ ಮಗಳು ಶರಾವತಿಯ ಮೇಲಾಗುವ ಲೈಂಗಿಕ ದೌರ್ಜನ್ಯದಿಂದ ಅವರ ಕುಟುಂಬದವರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಶರಾವತಿ ನದಿ ಮೌನವಾಗಿ ತನ್ನ ಮೇಲಾದ ಶೋಷಣೆ, ದೌರ್ಜನ್ಯಗಳನ್ನು ಸಹಿಸಿಕೊಂಡಂತೆ, ಮುಗ್ಧೆಯಾದ ಈ ಮೂಕಿ ಶರಾವತಿಯೂ ಅತ್ಯಾಚಾರದ ನೋವು, ಅವಮಾನಗಳನ್ನಲ್ಲದೆ ಅದರ ಫಲವನ್ನೂ ಗರ್ಭದಲ್ಲಿ ಹೊತ್ತು ಮೌನವಾಗಿ ಅನುಭವಿಸುವಂತಾಗುವುದು ವಿಪರ್ಯಾಸ. ಶರಾವತಿ ಮೈನೆರೆದು ದೊಡ್ಡವಳಾದ ವಿಷಯದಿಂದ ಆರಂಭಗೊಳ್ಳುವ ಕಾದಂಬರಿ, ಅವಳ ಮೇಲಾದ ಅತ್ಯಾಚಾರದ ಫಲವನ್ನು ಅವಳ ಗರ್ಭದಿಂದ ಹೊರಹಾಕಿ ಅವಳನ್ನು ಗುಣಪಡಿಸುವಲ್ಲಿಗೆ ಮುಗಿಯುತ್ತದೆ. ಮೈದುಂಬಿ ಹರಿಯುತ್ತಿದ್ದ ಶರಾವತಿ ನದಿಗೆ ಒದಗಿದ ಸಂಕಷ್ಟದ ಪ್ರತೀಕವಾಗಿಯೇ ಅವಳ ಪಾತ್ರದ ಚಿತ್ರಣವಾಗಿದೆ.
ಹಿಂದೆ ಇಂತಹ ಹಳ್ಳಿಗಳಲ್ಲಿ ಅನ್ಯಾಯಗಳೇ ನಡೆಯುತ್ತಿರಲಿಲ್ಲವೇ ಎಂಬಂತಹ ತರ್ಕಕ್ಕೆ ಹೆಗಡೆಯವರ ಬಾಯಲ್ಲಿ ಲೇಖಕರು ಹೇಳಿಸಿದ ಈ ಕೆಳಗಿನ ನುಡಿಗಳು ತಕ್ಕ ಉತ್ತರ ನೀಡುತ್ತವೆ.
“ನಾನು ಯಾವತ್ತೂ ನಮ್ಮ ಸೀಮೆಗಳಲ್ಲಿ ಅನ್ಯಾಯಗಳೇ ಇರಲಿಲ್ಲ, ವಂಚನೆ, ದ್ರೋಹಗಳಿಂದ ಮುಕ್ತವಾದ ಧರ್ಮಭೂಮಿಯಾಗಿತ್ತು ನಮ್ಮ ನೆಲ ಅಂತ ಹೇಳಿಲ್ಲ. ಹೇಳುವುದೂ ಇಲ್ಲ. ಇಲ್ಲಿ ಕೊಲ್ಲೂರಯ್ಯನಂತ ದುಷ್ಟ ಶಾನುಭೋಗರೂ ಇದ್ದರು. ದೂಪದಕೈ ಪಟೇಲನಂತ ಧೂರ್ತ ಪಟೇಲರೂ ಇದ್ದರು. ದೇವಸ್ಥಾನದ ಜಮೀನುಗಳನ್ನೂ ಬಿಡದೆ ಸ್ವಾಹಾ ಮಾಡಿದವರೂ ಇದ್ದರು, ವಿಧವೆಯರ ಯೌವನವನ್ನು ಕದ್ದು ಮೆದ್ದವರೂ ಇದ್ದರು. ಆದರೆ ಕಳಂಕಿತರನ್ನೇ ಮುಂದಿಟ್ಟುಕೊಂಡು ಸಮಷ್ಟಿಯ ಬದುಕನ್ನು ಅಪಾರ್ಥ ಮಾಡಿಕೊಂಡು ವಾದಮಾಡೋದು ಬಾಲಿಶ. ನಿಜ, ಭಾರಂಗಿ ಅಳಿದರೂ ಭಾರತ ಉಳೀಬೇಕು. ಅದನ್ನು ನಮಗೆ ಯಾರೋ ಮೂರನೆಯವರು ಹೇಳಬೇಕಿಲ್ಲ. ಅದಕ್ಕಾಗಿ ನಾವೂ ಕೂಡ ಹೋರಾಟ ಮಾಡಿದವರೇ. ಆದರೆ ತೋಟವಿಲ್ಲದಲ್ಲಿ ತೋಟವಿದೆ ಅಂತ ದಾಖಲೆ ಸೃಷ್ಟಿಸಿ ಹಣ ನುಂಗುವ, ಮಣ್ಣುಗೋಡೆಗೆ ಸಿಮೆಂಟ್ ಒರೆಸಿ ಕಾಂಕ್ರೀಟ್ ಗೋಡೆ ಅಂತ ಸರ್ಕಾರದ ಕಣ್ಣಿಗೆ ಮಣ್ಣೆರಚುವ, ಸರ್ಕಾರದ ಮರವನ್ನು ಯಾರದೋ ಸ್ವಂತಕ್ಕೆ ಎಣಿಸುವ, ಗದ್ದೆಯನ್ನು ತೋಟಿ ಅಂತ ಪಹಣಿ ತಿದ್ದುವ, ಕೊಟ್ಟಿಗೆಯನ್ನು ಮನೆಯೆಂದು ತೋರಿಸುವ ಸದ್ಗುಣಗಳನ್ನು ನಮ್ಮ ಜನಕ್ಕೆ ಕಲಿಸಿದ್ದು ಇವರ ಪ್ರಾಜೆಕ್ಟ್, ಇಸ್ಪೀಟಿನಂತಹ ಜೂಜುಕೋರ ಆಟವನ್ನು ಈ ನೆಲಕ್ಕೆ ತಂದು ಹಾಕಿದ್ದು ಇವರ ಪ್ರಾಜೆಕ್ಟ್, ಮೊದಲು ನಮ್ಮವರೂ ಹೊಟ್ಟೆಪಾಡಿಗಾಗಿ, ಬೆಳೆ ರಕ್ಷಣೆಗಾಗಿ ಬೇಟೆಯಾಡುತ್ತಿದ್ದರು. ಆದರೆ ಮಾಂಸ, ಕೊಂಬು ದಂತಗಳ ಮಾರುಕಟ್ಟೆಗೆ ಬೇಕಾಗಿ ಬೇಟೆಯನ್ನಾಡಲು ಕಲಿಸಿದ್ದು ಈ ಪ್ರಾಜೆಕ್ಟ್. ಅಲ್ಲ ಸಾಹೇಬ್ರೇ ರಾತ್ರಿವೇಳೆ ಪೋಲೀಸ್ ಮತ್ತು ಪ್ರಾಜೆಕ್ಟ್ ಅಧಿಕಾರಿಗಳೇ ಕದ್ದು ಬೇಟೆ ಆಡಿದ್ರಲ್ಲ ,ಅವರಿಗೆ ಬಂದೂಕು ಲೈಸೆನ್ಸ್ ಇತ್ತಾ? ನಮ್ಮವರು ಒಂದೆರಡು ಮರ ಕಡಿದು ಮನೆ ಮಾಡಿಕೊಂಡಿದ್ದಿರಬಹುದು. ಆದರೆ ಕಾಡನ್ನು ಕಡಿದು ಮಾರಿ ಹಣಮಾಡಿಕೊಂಡು ಮನೆ ಮಾಡಿಕೊಳ್ಳಲು ಕಲಿಸಿದ್ದು ಈ ಪ್ರಾಜೆಕ್ಟ್, ನಮ್ಮಲ್ಲಿ ಗಂಧದ ಮರದ ಬೇರನ್ನು ದೇವರಿಗೆ ಗಂಧ ತೇಯಲು ಮೊದಲೂ ಬಳಸುತ್ತಿದ್ದರು. ಆದರೆ ಬುಡಸಮೇತ ಗಂಧದ ಮರವನ್ನು ಕಡಿದು ಕದ್ದುಮಾರಲು ಕಲಿಸಿದ್ದು ಪ್ರಾಜೆಕ್ಟ್, ಕಂಡಕಂಡಲ್ಲಿ ಕ್ವಾರಿ ತೆಗೆದು ಕಲ್ಲು ಕದ್ದರಲ್ಲ ಅದಕ್ಕೆ ಲೈಸೆನ್ಸ್ ತಗೊಂಡ್ರಾ? ಬೇಕುಬೇಕಾದಲ್ಲಿ ಮಣ್ಣು ತೆಗೆದ್ರಲ್ಲ ಅದಕ್ಕೆ ರಾಯಲ್ಟಿ ಕಟ್ಟಿದ್ರಾ? ಒಳೊಳ್ಳೆ ಮರಗಳನ್ನು ಸುಟ್ಟು ಚಾರಕೋಲ್ ಮಾಡಿದ್ರಲ್ಲ, ಅದು ಅರಣ್ಯ ನಾಶ ಅಲ್ವ? ಕೋಟ್ಯಾಂತರ ಹಣ ಖರ್ಚು ಮಾಡಿ ಕಟ್ಟಿದ ಅಣೆಕಟ್ಟೆಯನ್ನು ಇಷ್ಟು ಬೇಗ ಮುಳುಗಿಸಿದ್ರಲ್ಲ ಅದು ಅಕ್ರಮ ಅಲ್ವಾ? ಇವರು ಭಾರತ ಉಳಿಸೋರಂತೆ!? ಹಸಲರ, ಉಪ್ಪಾರರ, ಗಾಣಿಗರ ಕೇರಿ ಬಗ್ಗೆ ಮಾತಾಡೋ ನೀವು ನಿಮ್ಮ ಮೂಗಿನ ಕೆಳಗೇ ಕೆಲಸ ಮಾಡೋ ವಡ್ಡರ, ಟೆಂಪರರಿ ಕಾರ್ಮಿಕರ ಕೇರಿಗಳನ್ನು ನೋಡಿದ್ದೀರ? ಗುತ್ತಿಗೆದಾರರ ಕೈ ಕೆಳಗೆ ಕೆಲಸ ಮಾಡುವ ತಾತ್ಕಾಲಿಕ ಕೂಲಿಗಳ ಕ್ಯಾಂಪು ನೋಡಿದ್ದೀರ? ನಿಮ್ಮದೇ ಹೆಲ್ತ್ ಕ್ಯಾಂಪ್ ನೋಡಿದ್ದೀರಾ? ಅವರಿಗೆ ಆರೋಗ್ಯ, ನೈರ್ಮಲ್ಯ, ದೀಪ, ಕುಡಿಯೋ ನೀರು, ಶಿಕ್ಷಣ ಯಾವುದಾದರೂ ಸೌಲಭ್ಯ ಕೊಟ್ಟಿದ್ದೀರ? ತನ್ನ ಹೆತ್ತ ತಾಯಿಗೇ ಅನ್ನ ಹಾಕದಿದ್ದವನು ಭಾರತಮಾತೆಗೆ ಚಿನ್ನದ ಕಿರೀಟ ತೊಡಿಸ್ತಾನೆ ಅಂದ್ರೆ ನಾವು ನಂಬಬೇಕಾ?”.
ಗ್ರಾಮಸ್ಥರು ಕೈಲಾದಷ್ಟು ಹೋರಾಟ ನಡೆಸಿ, ಪ್ರಧಾನಿ ನೆಹರೂ ಅವರವರೆಗೂ ಅಹವಾಲು ತೆಗೆದುಕೊಂಡುಹೋದರೂ ಏನೂ ಪ್ರಯೋಜನವಾಗದೆ ಕೊನೆಗೆ ಲಿಂಗನಮಕ್ಕಿಯಲ್ಲಿ ನೀರು ಸಂಗ್ರಹಣೆ ಆರಂಭವಾಗಿ ಭಾರಂಗಿ ಮುಳುಗುವುದು ಖಚಿತವಾಗುತ್ತದೆ. ಹೆಗಡೆಯವರ ಮಗ ಗಣೇಶ ಭದ್ರಾವತಿಯಲ್ಲಿ ಹೊಸ ಬದುಕು ಕಟ್ಟಿಕೊಳ್ಳುವ ಇಚ್ಚೆಯಿಂದ, ಉತ್ಸಾಹದಿಂದ ಭಾರಂಗಿ ಮನೆಯ ವಾಸ್ತು ಬಾಗಿಲನ್ನು ಕಿತ್ತುಕೊಂಡು ಹೋಗಲಿಚ್ಚಿಸಿದಾಗ ಭಾವನಾಜೀವಿಗಳಾದ ಹೆಗಡೆಯವರು ನಿರ್ಭಾವುಕರಾಗಿ ಅದಕ್ಕೆ ಅನುಮತಿಸುತ್ತಾರೆ. ‘ಹಕ್ಕಿಯನ್ನು ವಿಶಾಲ ಆಕಾಶದಲ್ಲಿ ಹಾರಿ ಬಿಡಬೇಕು. ಆಗಲೇ ಅದಕ್ಕೆ ಬಿಸಿಲು, ಬೆಂಕಿ ಎದುರಿಸೋ ಛಾತಿ ಬರೋದು. ರೆಕ್ಕೆ ಬಲಿಯೋದೇ ಅಮ್ಮನ ತೆಕ್ಕೆ ಬಿಟ್ಟು ಹಾರಿದ ಮೇಲೆ. ಹಳೆಯ ಗರಿಗಳು ಉದುರಿದ್ರೆ ಹೊಸಬಣ್ಣದ ರೆಕ್ಕೆ ಹುಟ್ಟೋದು' ಎಂದು ಬುದ್ದಿ ಹೇಳುವ ಮಗನನ್ನು ತಡೆಯುವುದರಲ್ಲಿ ಪ್ರಯೋಜನ ಕಾಣದೆ ‘ನನಗೂ ಅದು ಸರಿಯೇನೋ ಅನ್ನಿಸ್ತು. ಅಲ್ಲಿ ದೊಡ್ಡಮನೆ ಕಟ್ಟಿಸೋಕ್ಕೆ ಶುರು ಮಾಡಿದ್ದಾನಂತೆ, ಒಳ್ಳೇದಾಗ್ಲಿ ಅಂತ ಹಾರೈಸಿ ಸುಮ್ಮನಾದೆ' ಎಂದು ಒಳಗೇ ಕುಸಿಯುತ್ತಾರೆ. ಕೊನೆಗೆ ತಮಗೆ ಬಂದ ಪರಿಹಾರವನ್ನೂ, ಉಳಿದ ಜಮೀನನ್ನು ತಮ್ಮೊಂದಿಗಿದ್ದ ಎಲ್ಲರಿಗೂ ನ್ಯಾಯವಾಗಿ ಹಂಚಿ ಇಡೀ ಊರೇ ಖಾಲಿಯಾದರೂ ತಾವು ಮಾತ್ರ ಭದ್ರಾವತಿಗೆ ಹೋಗಲು ಒಪ್ಪದೇ ತಡವಾಗಿ ಬರುವೆನೆಂದು ಹೇಳಿ ಭಾರಂಗಿಯಲ್ಲಿಯೇ ಉಳಿಯುವ ಹೆಗಡೆಯವರ ಜೊತೆ ಹಠ ಮಾಡಿ ತುಂಗಕ್ಕಯ್ಯ, ಶರಾವತಿಯರೂ ಉಳಿದುಕೊಳ್ಳುತ್ತಾರೆ. ಮನೆಯ ಎಲ್ಲ ಜಾನುವಾರುಗಳನ್ನು ಗಣೇಶ ಭದ್ರಾವತಿಗೆ ಸಾಗಿಸಿದ್ದರೂ, ಹೆಗಡೆಯವರ ಪ್ರೀತಿಯ ಹಸು ಮಂಗಳಗೌರಿ, ಅದರ ಜೊತೆಗೆ ಇನ್ನೊಂದೆರಡು ಹಸುಗಳು ಅಲ್ಲಿಂದ ಹಿಂದಿರುಗಿ ಬಂದುಬಿಡುತ್ತವೆ. ಆ ಸಮಯದಲ್ಲಿಯೇ ತುಂಗಕ್ಕಯ್ಯ ಇಚ್ಛಾಮರಣಿಯಂತೆ ರಾತ್ರಿ ಮಲಗಿದಲ್ಲೇ ಪ್ರಾಣ ಬಿಟ್ಟರೆ, ಅವಳನ್ನು ಮನೆಯ ಹಿತ್ತಿಲಲ್ಲೇ ಮಣ್ಣು ಮಾಡಿದ ಹೆಗಡೆಯವರು ಮುರಾರಿ ಭಟ್ಟ ಅಲ್ಲಿಗೆ ಬಂದ ನಂತರ ಶರಾವತಿಯ ಜವಾಬ್ದಾರಿಯನ್ನು ಅವನಿಗೆ ವಹಿಸಿ ಯಾರಿಗೂ ತಿಳಿಯದಂತೆ ಮನೆ ಬಿಟ್ಟು ಹೋಗಿಬಿಡುತ್ತಾರೆ .ನಂತರ ಅವರನ್ನು ಹುಡುಕಿಕೊಂಡು ಬಂದ ಮಗ ಪಶ್ಚಾತ್ತಾಪ ಪಡುತ್ತಾನೆ. ಆಗಲೇ ಸಾಕಷ್ಟು ನೀರು ತುಂಬಿದ್ದ ಆ ಪರಿಸರದಿಂದ ಉಳಿದ ಜಾನುವಾರುಗಳನ್ನು, ಶರಾವತಿ, ಮುರಾರಿ ಭಟ್ಟರನ್ನೂ ಕರೆದೊಯ್ಯುತ್ತಿರುವಾಗ ದೋಣಿಯಲ್ಲಿ ನೀರನ್ನು ದಾಟಿ ಇಳಿದು ಎಲ್ಲರೂ ಹೊರಟ ಮೇಲೆ ಮಂಗಳಗೌರಿ ಹಸು ಮತ್ತೆ ನೀರಿಗಿಳಿದು ಮನೆಯ ಕಡೆ ಓಡಲು ತೊಡಗುತ್ತಾಳೆ ಎಂಬಲ್ಲಿಗೆ ಅಂತ್ಯ ಕಾಣುವ ಕಾದಂಬರಿ ಓದುಗನನ್ನು ವಿಷಾದದ ಅಲೆಯಲ್ಲಿ ತೇಲಿಸಿ ಮುಳುಗಿಸಿಬಿಡುತ್ತದೆ. ಮುಳುಗಿದ್ದು ಭಾರಂಗಿಯೇ? ಭರವಸೆಯೇ? ಬದುಕೇ? ಎಂಬ ಲೇಖಕರ ಪ್ರಶ್ನೆ ಓದುಗನ ಹೃದಯಾಂತರಾಳವನ್ನು ಕದಡಿ ಅಲ್ಲೋಲಕಲ್ಲೋಲಗೊಳಿಸುತ್ತದೆ. ಗಣೇಶನಂತಹ ಹೊಸ ಪೀಳಿಗೆಯ ಜನರು ಬೇರು ಕಡಿದು, ಸಂಬಂಧಗಳನ್ನು ತೊರೆದು ಸುಲಭದಲ್ಲಿ ದೂರ ಹೋದರೂ ಹಸುವಿಂತಹ ಮುಗ್ಧ ಪ್ರಾಣಿಗಳಿಗೆ ಅದು ಸಾಧ್ಯವಾಗುವುದಿಲ್ಲ.
ಓದುತ್ತಿರುವಾಗ ಅಲ್ಲಲ್ಲಿ ಮಾಹಿತಿ, ವಿವರಣೆ, ಭಾವುಕ ಸಂಭಾಷಣೆಗಳು ತುಸು ಹೆಚ್ಚೇ ಆದವು ಎನ್ನಿಸಿದರೂ ಕಾದಂಬರಿ ಓದುಗನ ಮನಮುಟ್ಟಿ ಬಹುಕಾಲ ಅಲ್ಲಿ ಉಳಿಯುತ್ತದೆ, ಜೊತೆಗೆ ನಮ್ಮ ಇತಿಹಾಸದ ಅನೇಕ ವಿಚಾರಗಳ ಕುರಿತು ಓದುಗನ ಜ್ಞಾನವನ್ನು ಹೆಚ್ಚಿಸುತ್ತದೆ ಎಂಬುದು ಶತಸಿದ್ಧ. ಒಟ್ಟಿನಲ್ಲಿ ಲಿಂಗನಮಕ್ಕಿ ಪ್ರಾಜೆಕ್ಟಿನ ವೈಜ್ಞಾನಿಕ ಸಾಧನೆಯನ್ನು ತಿಳಿದುಕೊಂಡು ಹೆಮ್ಮೆಪಡುವ, ಮುಳುಗಡೆ ಅದರ ಒಂದು ಸಹಜ ಪರಿಣಾಮ ಎಂದಷ್ಟೇ ಬಲ್ಲ 60,70ರ ದಶಕ ಮತ್ತು ನಂತರ ಹುಟ್ಟಿರುವ ಓದುಗರಿಗೆ ಈ ಕಾದಂಬರಿಯು ವಾಸ್ತವದ ಅರಿವು ಉಂಟುಮಾಡಿ, ನೈಜ ಘಟನೆಗಳ ವಿವರವನ್ನು ತಿಳಿಸುವ ಮಾಹಿತಿಯ ಕಣಜವಾಗಿದೆ. ಜೊತೆಗೆ ಅಂದಿನ ಕೂಡುಕುಟುಂಬಗಳಲ್ಲಿ ಮನೆಯವರ, ಆಳುಕಾಳು, ಜಾನುವಾರು, ನೆರೆಹೊರೆಯವರೊಂದಿಗಿದ್ದ ಬಾಂಧವ್ಯ, ಪ್ರೀತಿ ವಿಶ್ವಾಸ, ಹಬ್ಬಹರಿದಿನಗಳಲ್ಲಿ ಒಟ್ಟಾಗಿ ಮಾಡುವ ಸಂಭ್ರಮಾಚರಣೆ, ಹೊಡಚಲಿನಲ್ಲಿ ಬೆಂಕಿ ಕಾಯಿಸುವುದು - ಕಂಬಳಿ ಕುಪ್ಪೆಗಳನ್ನು ಒಣಗಿಸಿಕೊಳ್ಳುವುದು, ಮಳೆಗಾಲದಲ್ಲಿ ಸಿಗುವ ಸೊಪ್ಪು, ಗಡ್ಡೆಗೆಣಸುಗಳಿಂದ ತಯಾರಿಸುವ ವಿವಿಧ ವ್ಯಂಜನಗಳು, ದೀಪಾವಳಿಯಲ್ಲಿ ಮನೆಮನೆಗೆ ಬಂದು ಎಣ್ಣೆ ತೆಗೆದುಕೊಂಡು, ಅವರ ಮನೆಯ ದೀಪ ಬೆಳಗಿ, ಪದ ಹಾಡಿ, ಎಣ್ಣೆ ಕೊಟ್ಟ ಮನೆಗೆ ಒಳ್ಳೆಯದಾಗಲಿ ಎಂದು ಮನದುಂಬಿ ಹರಸಿ ಹೋಗುವ ಸಂಪ್ರದಾಯ ಮುಂತಾದ ಮಲೆನಾಡಿನ ವಿಶಿಷ್ಟ ಪರಂಪರೆಯ ಸಾಂಸ್ಕೃತಿಕ ದಾಖಲೆಯೂ ಕಥಾಹಂದರದೊಳಗೆ ಅಧಿಕೃತವಾಗಿ ಮೂಡಿಬಂದು ಕಾದಂಬರಿಯನ್ನು ಸಂಗ್ರಹಯೋಗ್ಯವಾಗಿಸಿವೆ.





Comments