top of page

ನಮ್ಮ ಗುರುಗಳಾದ ಉಪಾಧ್ಯರಿಗೊಂದು ಪತ್ರ...

  • vidyaram2
  • Aug 27, 2022
  • 2 min read

Updated: Aug 11, 2025


ಸರ್,


ನಾನು ವಿಭಾಗಕ್ಕೆ ಬಂದಾಗಿನಿಂದ, ಈ ಒಂದು ತಿಂಗಳಿನಲ್ಲಿ ನಿಮ್ಮ ಕನ್ನಡ ಪರ ಕಾಳಜಿ, ಅಭಿಮಾನ, ಜ್ಞಾನ, ಕನ್ನಡ ಕಟ್ಟುವಲ್ಲಿ ನಿಮ್ಮ ವಿವಿಧ ಚಟುವಟಿಕೆಗಳು, ಸಂಶೋಧನಾ ಪ್ರವೃತ್ತಿ, ಸಂಘಟನಾ ಮನೋಭಾವ ಎಲ್ಲದರ ತುಣುಕುಗಳನ್ನು ಸಾಕಷ್ಟು ಕಂಡೆ.


ನಿಮ್ಮ ನಿರಂತರ ಕನ್ನಡ ಪರ ಚಿಂತನೆಗೆ ಸಾಕ್ಷಿ ನಿಮ್ಮೆಲ್ಲ ಕೃತಿಗಳು. ಅವುಗಳಲ್ಲಿ ಕೆಲವನ್ನು ಓದಿದೆ. ಕನ್ನಡ ಕಲಿಯೋಣ ಬನ್ನಿ, ಕರ್ನಾಟಕ ಸಂಸ್ಕೃತಿ ಚಿಂತನ, 'ಜೀವಿ' ಸಾಹಿತ್ಯ ಸಮಗ್ರ ದರ್ಶನ, ಮತ್ತು ಬಾಳ್ವೆಗೆ ಬೆಳಕಾದವರು - ಈ ನಾಲ್ಕು ಪುಸ್ತಕಗಳು ನಿಮ್ಮ ಮನೋಧರ್ಮವನ್ನು ಕುರಿತ ನನ್ನ ಅರಿವನ್ನು ದೃಢೀಕರಿಸಿದವು.


ಕನ್ನಡ ನಾಡು, ನುಡಿಯ ಇತಿಹಾಸ, ಅದರ ಬೆಳವಣಿಗೆ ಕುರಿತು ನೀವು ಮಾಡಿದ ಚಿಂತನೆ, ಸಂಶೋಧನೆಗಳ ಪರಿಣಾಮವಾಗಿ ಬಂದ ಕೃತಿಗಳು ಹಲವಾದರೆ, ಕನ್ನಡ ಕಟ್ಟುವಲ್ಲಿ ಶ್ರಮಿಸಿ ಮಾದರಿಯಾದ ಅನೇಕ ಸಾಧಕರ ಸಾಧನೆಗಳನ್ನು ಸಂಗ್ರಹಿಸಿ ಕೃತಿ ರೂಪದಲ್ಲಿ ಬಂದವು ಹಲವು, ಕನ್ನಡ ಬಾರದವರಿಗೂ ಅದನ್ನು ಕಲಿಸುವ ಸಲುವಾಗಿ ಬಂದವು ಕೆಲವು! ಹೊರನಾಡಿನ ವಿಶ್ವವಿದ್ಯಾನಿಲಯದಲ್ಲಿ 'ಕನ್ನಡ ವಿಭಾಗದ ಮುಖ್ಯಸ್ಥ' ಎಂಬ ಜವಾಬ್ದಾರಿ ಹೇಗೆ ನಿಭಾಯಿಸಬೇಕೆಂಬುದಕ್ಕೆ ನೀವು ಮಾದರಿ. ನಿಮ್ಮನ್ನು ಗುರುವಾಗಿ ಪಡೆದಿದ್ದು ನನ್ನ ಪುಣ್ಯ, ನಿಮ್ಮ ಶಿಷ್ಯೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ.


ಕನ್ನಡ ಕಟ್ಟಿದ ಇಪ್ಪತ್ತೆಂಟು ಹಿರಿಯರ ಸಾಧನೆಗಳ ಪರಿಚಯ ಹೊತ್ತ 'ಬಾಳ್ವೆಗೆ ಬೆಳಕಾದವರು' ನನ್ನ ಮಟ್ಟಿಗೆ ಬಹುಮೂಲ್ಯದ ಸಂಗ್ರಹಯೋಗ್ಯ ಕೃತಿ. ರಂಗಭೂಮಿ, ನಾಟಕ, ಕವನ, ಪ್ರಬಂಧ, ಕಾದಂಬರಿ, ಸಮಾಜ ಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪರಿಣತರಾದ ಕೆಲವರನ್ನು ಸಂದರ್ಶಿಸಿ, ಇನ್ನು ಕೆಲವರ ಸಾಧನೆಗಳನ್ನು ಅಭ್ಯಸಿಸಿ ಬರೆದಿದ್ದೀರಿ. ಸಣ್ಣ ಅಧ್ಯಾಯದಲ್ಲಿ ಸರಳವಾಗಿ, ಆದರೆ ಪರಿಣಾಮಕಾರಿಯಾಗಿ ಅವರ ಪೂರ್ಣ ವ್ಯಕ್ತಿತ್ವವನ್ನು ಕಟ್ಟಿಕೊಡುವ ನಿಮ್ಮ ಜಾಣ್ಮೆ ಮೆಚ್ಚಿತು.


ಹಲವರ ಕುರಿತು ನನಗೆ ಸ್ವಲ್ಪ ತಿಳಿದಿದ್ದರೂ, ಅವರ ಅನೇಕ ಉತ್ತಮ ವಿಷಯ ಈ ಕೃತಿ ಓದಿದಾಗ ತಿಳಿಯಿತು. ಇನ್ನೂ ಕೆಲವರ ಕುರಿತು ನನಗೇನೂ ತಿಳಿದಿರಲಿಲ್ಲ. ಉದಾಹರಣೆಗೆ ಕಾಶಿಯಲ್ಲಿ ಕನ್ನಡ ಬೆಳಗಿದ ಪ್ರೊ.ಶಿವಾನಂದ ಪ್ರೊ. ಹಿರೆಮಲ್ಲೂರು ಈಶ್ವರನ್, ನಿ.ಮುರಾರಿ, ಡಾಕ್ಟರ್ ಲಲಿತಾ ರಾವ್ ಇತ್ಯಾದಿ. ಸಂಕ್ಷಿಪ್ತದಲ್ಲಿ ಇವರೆಲ್ಲರ ಕನ್ನಡ ಸೇವೆ ಕುರಿತು ತಿಳಿಯಲು ಸಿಕ್ಕಿದ್ದು ಖುಷಿ.


ನನಗೆ ಖುಷಿ ಕೊಟ್ಟು, ಮೆಲಕು ಹಾಕುವಂತೆ ಮಾಡಿದ ಈ ಕೃತಿಯ ಕೆಲವು ಉಕ್ತಿಗಳು:


ಬಿ .ವಿ.ಕಾರಂತರು - ರಂಗಭೂಮಿ ಅಂತಂದ್ರೆ ದೇವರಿಗೆ ನಾವು ಚಾಲೆಂಜ್ ಕೊಟ್ಟ ಹಾಗೆ, ರಂಗಭೂಮಿಯಲ್ಲಿ ಏನೆಲ್ಲಾ ಸೃಷ್ಟಿಯಾಗುತ್ತೆ ಎಂಬುದನ್ನು ಹೇಳೋದು ಕಷ್ಟ.


ಪ್ರೊ.ಎಸ್.ಕೆ.ರಾಮಚಂದ್ರ ರಾವ್ ಅವರ ಧನಾತ್ಮಕ ಚಿಂತನೆ ಇಷ್ಟವಾಯಿತು - ಶತಮಾನಗಳಿಂದ ಸಾಗಿ ಬಂದ ಈ ಸಂಸ್ಕೃತಿಯ ಪ್ರವಾಹ ನಿರಂತರವಾದದು. ಸಂಸ್ಕೃತಿ ಚಲನಶೀಲವಾದುದು.... ಒಳ್ಳೆಯದು ಮೈನಾರಿಟಿ ಆಗಿ ಕಂಡುಬರುತ್ತದೆ.


ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ - ಕವಿತೆ ಕಣ್ಣು ತೆರೆದದ್ದೇ ಗಾಯಕನ ಕಂಠದಲ್ಲಿ.


ಡಾ.ಹಾ.ಮಾ.ನಾ - ಕೇವಲ ಜೀವಿಸಿದ್ದರೆ ಸಾಲದು, ಚೆಲುವಾದ ಜೀವನ ಮಾಡಬೇಕು.


ಮತ್ತೂರು ಕೃಷ್ಣಮೂರ್ತಿ ಯವರು ಸ್ಮರಿಸಿದ ವಾರಾನ್ನದ ಅನುಭವ ಓದಿ ಹೃದಯ ತುಂಬಿ ಬಂತು


ಈಶ್ವರನ್ ಅವರು ಡಚ್ ಜನಾಂಗದ ಜೀವನಕ್ರಮದ ಮೇಲೆ ಬರೆದ ಮಹಾಪ್ರಬಂಧ ಕುರಿತು ಓದಿ ಹೆಮ್ಮೆಯಾಯಿತು.


ಸಂಸರ ಪ್ರತಿಭೆ, ಜೀವನದ ಬಗ್ಗೆ ಓದಿ ಮರುಕವಾಯಿತು.


ಗೊರೂರರ ಹಾಸ್ಯ ಪ್ರಸಂಗಗಳನ್ನು ಓದಿ ಮುದವಾಯಿತು. ಗುಲಾಮರನ್ನು ಸೃಷ್ಟಿಸುವ ವಿದ್ಯೆ ಬೇಡವೆಂದು ತ್ಯಜಿಸಿದ ಅವರ ನಿರ್ಧಾರ ಕೇಳಿ ಹೆಮ್ಮೆಯಾಯಿತು.


'ದೇವರನ್ನು ನಂಬದ ದೇವರಂತಹ ಮನುಷ್ಯ' ಡಾ. ಎ.ಎನ್.ಮೂರ್ತಿರಾಯರ ಬದುಕಿನ ಕುರಿತ ಧೋರಣೆ ಒಪ್ಪಿಗೆಯಾಯಿತು. ಮಾನವನಿಗೆ ತೀವ್ರವಾದ ದುಃಖವನ್ನು ದೀರ್ಘಕಾಲ ಅನುಭವಿಸುವ ಶಕ್ತಿಯೇ ಇಲ್ಲ, ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇದೆ ಎಂಬ ಅವರ ವಾದ ಯೋಚಿಸುವ ಹಾಗೆ ಮಾಡಿತು.


ಧಾರಾವಿಗೆ ಕಾಯಕಲ್ಪ ನೀಡಿದ ಡಾ.ಲಲಿತಾ ರಾವ್ ಅವರ ಜೀವನ ಅನುಕರಣೀಯ.


ಡಾ. ಯು.ಆರ್.ಅನಂತಮೂರ್ತಿ ಅವರ ಕೆಲವು ಮಾತುಗಳು ಮಾತ್ರ ಅರ್ಥವಾಗಲಿಲ್ಲ! "ಗಾಂಧಿ ಅವರ ಬಗ್ಗೆ ಕೇವಲ ಗೌರವ ಭಾವದಿಂದ ನೋಡಿದ್ದಲ್ಲ. ಸಮಸ್ಯಾತ್ಮಕವಾಗೇ ನೋಡಬೇಕು, ಒಪ್ಪಿಬಿಟ್ಟರೂ ಸಮಸ್ಯೆ ಇಲ್ಲ, ನಿರಾಕರಿಸಿದರೂ ಸಮಸ್ಯೆ ಇಲ್ಲ. ಸಮಸ್ಯಾತ್ಮಕವಾಗಿ ನೋಡೋದೇ ನನ್ನ ಪ್ರವೃತ್ತಿ" .

ಅದೇ ರೀತಿ ಇಂಗ್ಲಿಷ್ ಬ್ರಾಹ್ಮಣ, ಕನ್ನಡ ಶೂದ್ರ…ಇಂಗ್ಲಿಷ್ ನಿರಾಕರಣೆಯ ಮಾತೂ ಅದಲ್ಲ…ಇತ್ಯಾದಿ.

ನನ್ನ ಮಟ್ಟಿಗೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಇರುವ ಈ ಮಾತುಗಳು … ಅಥವಾ ಸರಿಯಾಗಿ ಅರ್ಥೈಸಿಕೊಳ್ಳುವ ಸಾಮರ್ಥ್ಯದ ನನ್ನ ಕೊರತೆಯೇ ಇರಬಹುದು.


ಇಂತಿ ನಿಮ್ಮ ವಿಧೇಯ ವಿದ್ಯಾರ್ಥಿನಿ,

ವಿದ್ಯಾ.



Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page