ನನ್ನ ಇತ್ತೀಚಿನ ಓದು - ಡಾ.ಪೂರ್ಣಿಮಾ ಶೆಟ್ಟಿ
- vidyaram2
- Apr 19, 2024
- 1 min read

ಡಾ.ಪೂರ್ಣಿಮಾ ಶೆಟ್ಟಿ ಅವರ 'ನನ್ನ ಇತ್ತೀಚಿನ ಓದು (ಆಯ್ದ ಕೃತಿಗಳ ವಿಮರ್ಶೆ)' 35 ಬಿಡಿ ಲೇಖನಗಳ ಗುಚ್ಛವಿರುವ, ಆಕರ್ಷಕ ಮುಖಪುಟವನ್ನು ಹೊತ್ತ ಕೃತಿ. ಲೇಖಕರು ತಾವು ಓದಿದ ಕೃತಿಗಳ ಪರಿಚಯವನ್ನು ಇಲ್ಲಿ ಸೊಗಸಾಗಿ ಮಾಡಿಕೊಟ್ಟಿದ್ದಾರೆ. ಲೇಖಕರ ಅಧ್ಯಯನಶೀಲತೆ, ಪುಸ್ತಕ ಪ್ರೀತಿ, ವಿಮರ್ಶಿಸುವ ಕಲೆಯನ್ನು ಈ ಕೃತಿ ಪರಿಚಯಿಸುತ್ತದೆ. ತಮ್ಮ ಬಿಡುವಿಲ್ಲದ ಕಾರ್ಯ ಚಟುವಟಿಕೆಗಳ ನಡುವೆ ಅಧ್ಯಯನಕ್ಕೆ ಸಮಯ ನೀಡಿ, ಓದಿದ್ದನ್ನು ವಿಮರ್ಶಿಸಿ, ಅದನ್ನು ಇತರರೊಂದಿಗೆ ಹಂಚಿಕೊಳ್ಳುವ ಸಲುವಾಗಿ ಲೇಖಕರು ಕೃತಿ ರೂಪಕ್ಕೆ ಇಳಿಸಿರುವುದು ಅಭಿನಂದನಾರ್ಹ ಸಂಗತಿಯಾಗಿದೆ.
ಕೇವಲ ಬಹು ಜನಪ್ರಿಯವಾದ ಕಾದಂಬರಿ, ಕವನ ಅಥವಾ ಕಥಾ ಸಂಕಲನಗಳ ವಿಮರ್ಶೆಯಷ್ಟೇ ಅಲ್ಲದೆ ವ್ಯಕ್ತಿ ಚಿತ್ರಣ, ನಾಡು ನುಡಿಯ ಪರಿಚಯ ಕೊಡುವ ಕೃತಿಗಳು (ಉದಾ - ಮುಂಬೈ ಕನ್ನಡ ರಂಗಭೂಮಿ, ಕರ್ನಾಟಕದ ಸಂಸ್ಕೃತಿ, ಗಾದೆಗಳು, ತುಳುನಾಡಿನ ವೀರಮಣಿಯರು ಮುಂತಾದವು) , ಮಕ್ಕಳ ಕಥೆ, ಹಾಇಕು - ಹೀಗೆ ವೈವಿಧ್ಯಮಯವಾದ ಕೃತಿಗಳನ್ನು ವಿಶ್ಲೇಷಿಸಿರುವುದು ಈ ಕೃತಿಯ ವೈಶಿಷ್ಟ್ಯವಾಗಿದೆ. ಪ್ರಸ್ತುತದಲ್ಲಿ ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಲೇಖಕರು ಸಂಶೋಧನೆ, ಸಂಪ್ರಬಂಧಗಳೂ ಸೇರಿ ಅನೇಕ ಪ್ರಕಾರದ ಸಾಹಿತ್ಯ ಕೃತಿಗಳನ್ನು ಅವಲೋಕಿಸಿರುವುದು ಉಚಿತವೂ ಆಗಿದೆ. ತಮ್ಮ ಮಾತೃಭಾಷೆಯಾದ ತುಳುವಿನ ಸಂಸ್ಕೃತಿ, ಸೊಗಡನ್ನು ಪರಿಚಯಿಸುವ ಕೆಲವು ತುಳುವಿನ ಕೃತಿಗಳನ್ನೂ, ತುಳು ಸಂಸ್ಕೃತಿ, ಜನರ ಕುರಿತ ಕನ್ನಡದ ಕೃತಿಗಳನ್ನೂ ಪರಿಚಯಿಸುವುದರ ಮೂಲಕ ಕೇವಲ ಕನ್ನಡ ಬಲ್ಲ ಕನ್ನಡಿಗರಿಗೆ ತುಳುನಾಡಿನ ಸಂಪ್ರದಾಯ, ವಿಶಿಷ್ಟತೆಗಳ ಅರಿವನ್ನೂ ಮೂಡಿಸಿರುವುದು ಗಮನಾರ್ಹವಾಗಿದೆ.
ಇಲ್ಲಿ ಅವಲೋಕಿಸಲಾದ ಹೆಚ್ಚಿನ ಕೃತಿಗಳು ಹೊರನಾಡು ಮುಂಬಯಿಯ ಲೇಖಕರು ರಚಿಸಿರುವುವೇ ಆಗಿವೆ. ಸಮಕಾಲೀನ ಹಿರಿ - ಕಿರಿ, ಹೊಸ - ಹಳೆ ಲೇಖಕರ ಇತ್ತೀಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯ ಮಾಡಿಕೊಡುವ ಲೇಖಕಿಯ ಆಶಯ ಸ್ತುತ್ಯಾರ್ಹವಾಗಿದೆ. ಸರಳವಾದ ಭಾಷೆಯಲ್ಲಿ ವಸ್ತುನಿಷ್ಠವಾಗಿ ಮಾಡಿರುವ ವಿಶ್ಲೇಷಣೆ ಓದುಗರಿಗೆ ಆಪ್ತವಾಗುತ್ತದೆ. ತಮ್ಮ ಅನಿಸಿಕೆಯನ್ನು ತಿಳಿಸುವುದರ ಜೊತೆಗೆ ಒಂದು ಕೃತಿಯ ಕುರಿತು ಬಂದ ಇತರ ವಿಮರ್ಶಕರ ಟಿಪ್ಪಣಿಗಳನ್ನು ನೀಡಿರುವುದು ಲೇಖಕಿಯ ಅಧ್ಯಯನದ ಆಳವನ್ನು ತೋರಿಸುತ್ತದೆ. ಕಮಲಾ ಹಂಪನಾ ಅವರ ಸಂಸ್ಕೃತದಿಂದ ಅನುವಾದವಾದ ನೀತಿ ವಾಕ್ಯಾಮೃತ, ರಾಮಚಂದ್ರ ಉಚ್ಚಿಲರ ಪಂಪ ರಾಮಾಯಣ, ನಾ.ಮೊಗಸಾಲೆ ಅವರ ಕಾವ್ಯಗಳು, ಮಧುರ ಚೆನ್ನರ ಅಧ್ಯಯನ, ದಾಕ್ಷಾಯಣಿ ಯಡಹಳ್ಳಿ ಅವರ ಅಕ್ಕಮಹಾದೇವಿ ಮತ್ತು ಮೀರಾಬಾಯಿಯರ ಕುರಿತ ಅಧ್ಯಯನ ಮುಂತಾದ ಲೇಖನಗಳು ಮಹತ್ವದ್ದಾಗಿವೆ.
ಕೃತಿಯ ಕೊನೆಯಲ್ಲಿ ಲೇಖಕಿಯ ಇತರ ಕೃತಿಗಳಿಗೆ ಬಂದ ಪ್ರತಿಕ್ರಿಯೆಯನ್ನು ದಾಖಲಿಸಿರುವುದು ಅವರ ಇತರ ಕೃತಿಗಳ ಕಿರು ಪರಿಚಯ ಮಾಡಿಕೊಳ್ಳಲು ಸಹಾಯಕವಾಗುತ್ತದೆ. ಒಟ್ಟಿನಲ್ಲಿ 35 ವಿವಿಧ ಪ್ರಕಾರದ ಕೃತಿಗಳ ಕುರಿತು ಅರಿಯಲು, ನಾಡು, ನುಡಿ, ಸಂಸ್ಕೃತಿ, ಕಾವ್ಯ, ಕಲೆ, ಸಾಹಿತ್ಯ ಮುಂತಾದ ವಿಷಯಗಳ ಮೇಲೆ ಆಗಿರುವ ಸಂಶೋಧನೆಗಳನ್ನು ತಿಳಿಯಲು ಸಾಹಿತ್ಯಾಸಕ್ತರಿಗೆ ಉಪಯುಕ್ತವಾಗುವ ಕೃತಿ ಇದು.





Comments