top of page

ನೀಲಿನಕ್ಷೆ

  • vidyaram2
  • Dec 8, 2023
  • 3 min read

ಅಮಿತಾ ಭಾಗ್ವತ್ ಅವರು ತಮ್ಮ ಮೊದಲ ಕಾದಂಬರಿಯಾದ 'ನೀಲಿ ನಕ್ಷೆ'ಯಲ್ಲಿ ಕಾರವಾರ ಮತ್ತು ಮುಂಬೈ ಕಡಲ ತೀರದ ಬದುಕನ್ನು, ಅವುಗಳ ನಡುವಿನ ವೈವಿಧ್ಯ, ವೈಪರೀತ್ಯಗಳನ್ನು ರಸವತ್ತಾಗಿ ಉಣಬಡಿಸಿದ್ದಾರೆ. ಕಾರವಾರದ ಕರಾವಳಿಯ ಮೀನುಗಾರರ ಮನೆತನದ ಒಬ್ಬ ಸರಳ ಸುಂದರ, ಚುರುಕಿನ ಹುಡುಗಿ ಸರಯೂಳ ಜೀವನದ ಸುತ್ತ ಹೆಣೆದ ಕಾದಂಬರಿ ಇದು. ಸಮಕಾಲೀನ ಸಮಾಜದಲ್ಲಿ ಸಶಕ್ತ ಮಹಿಳೆಯ ಸ್ಥಾನಮಾನ,

ಅವಳ ಮಹತ್ವಾಕಾಂಕ್ಷೆಗಳು, ಅದನ್ನು ಸಾಧಿಸಲು ಅವಳು ಎದುರಿಸುವ ಅಡೆತಡೆಗಳು, ಏನಾದರೂ ತನ್ನ ಮೂಲಗುಣವಾದ ಮಾನವೀಯತೆಯೊಂದಿಗೆ ರಾಜಿ ಮಾಡಿಕೊಳ್ಳದ, ಇನ್ಯಾವುದಕ್ಕೂ ಹಿಂಜರಿಯದ ಅವಳ ದಿಟ್ಟ ನಿಲುವುಗಳನ್ನು ಕಾದಂಬರಿ ಪ್ರತಿಪಾದಿಸುತ್ತದೆ. ಪ್ರಾದೇಶಿಕ ಸೊಗಡಿನೊಂದಿಗೆ ಸಹಜ, ಸರಳವಾದ ಭಾಷೆಯನ್ನು ಅಲ್ಲಲ್ಲಿ ಹದವಾಗಿ ಕಾವ್ಯಮಯಗೊಳಿಸಿ ಸುಂದರ ಉಪಮೆ, ಪ್ರತಿಮೆ, ಪ್ರತೀಕಗಳ ಮೂಲಕ ಮಿತವಾಗಿ ಅಲಂಕರಿಸಿ ಅಮಿತಾ ಅವರು ನೀಡಿರುವ ಈ ಪರಿಪಕ್ವವಾದ ಕೊಡುಗೆ ಸಹೃದಯ ಓದುಗರನ್ನು ತನ್ನಾಕರ್ಷಣೆಯಲ್ಲಿ ಸೆಳೆದು ಕೊನೆಯವರೆಗೆ ಹಿಡಿದಿಡುವಲ್ಲಿ ಸಫಲವಾಗುತ್ತದೆ. ಹೇರಳವಾಗಿ ದೊರೆಯುವ ಪಾತ್ರಗಳ ಜೀವನಾನುಭವದ ಮಾತುಗಳು, ತಾತ್ವಿಕ ಚಿಂತನೆಗಳು, ಆಲೋಚನೆಗಳು ಓದುಗನ ಚಿಂತನೆಯನ್ನು ಚುರುಕುಗೊಳಿಸುತ್ತಲೇ ಕಾದಂಬರಿಗೆ ಪ್ರಬುದ್ಧತೆ ತಂದುಕೊಡುತ್ತವೆ.


ಕಾರವಾರದಲ್ಲಿ ಹುಟ್ಟಿ ಬೆಳೆಯುವ ಸರಯೂವಿನ ಎಳೆತನದ ಜೀವನದ ಮುಖ್ಯ ಅಂಗವಾಗಿ ಅವಳನ್ನು ರೂಪಿಸುವ ಪಾತ್ರಗಳು - ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಂಡ ಅವಳ ಸಂಸ್ಕಾರವಂತ ತಂದೆ ಆನಂದು, ಅವಳಿಗೆ ಬೆನ್ನೆಲುಬಾಗಿ ಸದಾ ಅವಳ ಖುಷಿಯನ್ನು, ಏಳಿಗೆಯನ್ನು ಬಯಸುವ ಪ್ರಾಂಜಲ ಮನಸ್ಸಿನ ಗಟ್ಟಿಗಿತ್ತಿ ತಾಯಿ ಕೃಷ್ಣಿ, ತಂದೆಯ ಸ್ನೇಹಿತ ಶೇಖರ ಅಂಕಲ್, ಶಂಕರ ಮುಂತಾದ ಹಿತೈಷಿಗಳು.


ಸರಯೂ ತನ್ನ ಅಪ್ರತಿಮ ಸೌಂದರ್ಯದ ಕಾರಣವೊಂದರಿಂದಲೇ ಚಿಕ್ಕಂದಿನಲ್ಲಿ ತಂದೆ ಆನಂದುವಿನ ಪ್ರೀತಿಯಿಂದ ವಂಚಿತಳಾಗಿ ಬೆಳೆಯುವುದು ವಿಪರ್ಯಾಸ ಎಂದು ಒಂದು ಕ್ಷಣ ಅನ್ನಿಸಿದರೂ, ಶ್ರೀರಾಮನ ಭಕ್ತನಾದ ಆನಂದು ಶ್ರೀರಾಮನಂತೆಯೇ ಹೆಂಡತಿಯ ಶೀಲವನ್ನು ಶಂಕಿಸಿದ ಎನ್ನುವ ತರ್ಕಕ್ಕೆ ತಲೆದೂಗಬಹುದು ಎಂದೂ ಮರುಕ್ಷಣಕ್ಕೆ ಅನ್ನಿಸುತ್ತದೆ. ಆಕಸ್ಮಿಕವಾಗಿ ಸಿಕ್ಕ ಮನೆತನದ ಹಿರಿಯರ ಚಿತ್ರಪಟ ನೋಡಿ ತಂದೆಯ ಸಂದೇಹ ಅಳಿದರೂ ಅವಳ ಸರಳತೆ, ಮುಗ್ಧತೆ, ಅಸಹಾಯಕತೆಗಳನ್ನು ಶೋಷಿಸಿ ಸೌಂದರ್ಯವೇ ಶಾಪವಾಗುವಂತೆ ಮಾಡುತ್ತದೆ ಸುತ್ತಲಿನ ಸಮಾಜ. ಅದರಿಂದ ಬೇಸತ್ತು ಕಾರವಾರದಿಂದ ಮುಂಬೈ ಮಹಾನಗರಿಗೆ ಅವಳನ್ನು ಕಳುಹಿಸಿ ಅವಳ ಉಜ್ವಲ ಭವಿಷ್ಯದ ಕನಸು ನೇಯುತ್ತಾನೆ ತಂದೆ. ಹೀಗೆ ಒಮ್ಮೆಲೆ ಹೊಸ ಪ್ರಪಂಚಕ್ಕೆ ದೂಡಲ್ಪಟ್ಟ ಮುಗ್ಧೆ ಸರಯೂ, ಆ ಪರಿಸರಕ್ಕೆ ಹೊಂದಿಕೊಂಡು ಎಲ್ಲರೊಳಗೆ ಒಂದಾಗುವ ಪರಿ, ಅವಳ ಛಲ, ಗಟ್ಟಿತನ, ಜೀವನ ಕೊಂಡೊಯ್ದಲ್ಲಿ ಗಟ್ಟಿಯಾಗಿ ಬೇರೂರಿ ನಿಲ್ಲುವ ಮಹತ್ವಾಕಾಂಕ್ಷೆಯನ್ನು ಅಮಿತಾ ಅವರು ಬೆರಗಾಗುವಂತೆ ಚಿತ್ರಿಸಿದ್ದಾರೆ.


ಸರಯೂಳ ಮುಂಬೈನ ಜೀವನದಲ್ಲಿ ಬರುವ ಪಾತ್ರಗಳು ಹಲವು. ಅವುಗಳಲ್ಲಿ ಸ್ನೇಹಿತ ನಿಖಿಲ್, ಶಿಷ್ಯೆ ವಸುಧಾ, ಪ್ರಿಯಕರ ವಿಶಾಲ್, ಅವರ ತಾಯಿ ಶಾಲ್ಮಲಾ, ಬಾಸ್ ಅಂಕಿತ್ ಪಾರೀಖ್, ಅವನ ತುಂಬು ಕುಟುಂಬದ ಸದಸ್ಯರು ಮುಖ್ಯರು. ಹತ್ತನೆಯ ತರಗತಿ ಮುಗಿಸಿ ಮುಂಬೈಗೆ ಬಂದ ಸರಯೂ ಮುಂಬೈ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಸವಾಲುಗಳನ್ನು ಧನಾತ್ಮಕವಾಗಿ ಸ್ವೀಕರಿಸಿ, ಅಲ್ಲಿಯ ಬಹು ಸಂಸ್ಕೃತಿಯ ಬದುಕಿನ ವಿವಿಧ ಆಯಾಮಗಳಿಗೆ ಮೀನು ನೀರಿಗೆ ಹೊಂದಿಕೊಳ್ಳುವಷ್ಟು ಸಹಜವಾಗಿ ಹೊಂದಿಕೊಳ್ಳುತ್ತಾಳೆ. ಅವಳು ಮುಗ್ಧೆಯಾದರೂ ಪ್ರಬುದ್ಧೆ. ತಾನು ತಿಂದ ಪ್ರತೀ ಪೆಟ್ಟಿನಿಂದ ಪಾಠ ಕಲಿಯುತ್ತಾ ಅಳುಕಿಲ್ಲದೆ ಸಾಧಾರಣದವರಿಗೆ ಆಶ್ಚರ್ಯವೆನಿಸುವ ರೀತಿಯಲ್ಲಿ ಜೀವನದ ಕುರಿತ ನಿರ್ಧಾರ ಕೈಗೊಳ್ಳುತ್ತಾಳೆ. ಇದು ಒಮ್ಮೆ ಇರುಸುಮುರುಸು ಉಂಟುಮಾಡಿದರೂ ಹಿಂದುಮುಂದಿಲ್ಲದ ಸಾಮಾನ್ಯ ಹುಡುಗಿಯೊಬ್ಬಳು ಗಾಡ್ ಫಾದರ್ ಇಲ್ಲದೆ ಮುಂಬೈ ಬದುಕಿನಲ್ಲಿ ಆ ಮಟ್ಟದ ಯಶಸ್ಸು ಕಾಣಲು ಅವಶ್ಯವೇ ಎನ್ನಬಹುದಾದಷ್ಟು ಪ್ರಾಕ್ಟಿಕಲ್ ಆಗಿರುವುದು ಸರಿಯೇ ಎನ್ನಿಸುವುದು.

ಬಾಹ್ಯದಲ್ಲಿ ಅತ್ಯಂತ ಯಶಸ್ವಿಯಾದ ಜೀವನ ಪಡೆದರೂ ವೈಯಕ್ತಿಕ ಜೀವನದಲ್ಲಿ ಇದ್ದ ಕೊರತೆಗಳನ್ನು (ಅಂತರಂಗದಲ್ಲಿ ಗಂಡನೊಂದಿಗೆ ಇದ್ದ ಬಿರುಕು, ಧಮನಿಯಲ್ಲಿ ಶ್ರೀಮಂತಿಕೆ ಹರಿಯುವವರ ಜೀವನಶೈಲಿಯನ್ನು ಕಷ್ಟಪಟ್ಟು ಮೈಗೂಡಿಸಿಕೊಳ್ಳಬೇಕು ಎಂಬ ಅರಿವು, ಮಗಳೊಂದಿಗೆ ತಾದಾತ್ಮ್ಯ ಸಾಧಿಸಲು ಸಾಧ್ಯವಾಗದೆ ಹೋಗುವುದು, ಮಗಳ ಜೀವನ ದುರಂತದಲ್ಲಿ ಕೊನೆಗಾಣುವುದು ಇತ್ಯಾದಿ) ಸಮಚಿತ್ತದಿಂದ ಸ್ವೀಕರಿಸಿ ಧೃತಿಗೆಡದೆ ತಾನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುವಲ್ಲಿ ಮಾತ್ರ ಸರಯೂ ಓದುಗನ ಮನ ಮಾತಿಲ್ಲದೆ ಗೆಲ್ಲುತ್ತಾಳೆ. ಅವಳು ತಯಾರಿಸಿದ ನೀಲಿ ನಕ್ಷೆ ಸಾಕಾರವಾಗಿ ಅವಳ ಬದುಕಿಗೆ ಪರಿಪೂರ್ಣತೆ ತಂದುಕೊಟ್ಟಂತೆ, ಕಥಾಹಂದರದಲ್ಲಿ ಕೊನೆಯವರೆಗೆ ಚದುರಿದ ಅವಳ ಆತ್ಮೀಯ ಪಾತ್ರಗಳ ಹಿಡಿದು ಸೇರಿಸುವಿಕೆ, ಅವುಗಳಿಗೆ ನೀಡಿದ ಸಮಂಜಸವಾದ ಅಂತ್ಯ ಕಾದಂಬರಿಗೆ ಪರಿಪೂರ್ಣತೆ ತಂದುಕೊಡುತ್ತದೆ.


ಯಾವುದೇ ಉದ್ವಿಗ್ನತೆ ಇಲ್ಲದೆ, ಮುಗಿಸುವ ತವಕವಿಲ್ಲದೆ ತಾಳ್ಮೆಯಿಂದ ಅಮಿತಾ ಅವರು ಪ್ರಬುದ್ಧವಾಗಿ ಹೆಣೆದ ಈ ಕಾದಂಬರಿ ಅವರ ಪ್ರಥಮ ಪ್ರಯತ್ನ ಎಂದರೆ ಆಶ್ಚರ್ಯವಾಗುತ್ತದೆ. ಅವರ ಮುಂದಿನ ಕಾದಂಬರಿಗಳ ಸರದಿಗೆ ಕಾಯುವಂತಾಗುತ್ತದೆ. ಮೂರ್ನಾಲ್ಕು ದಶಕಗಳಿಂದ ಮುಂಬೈಕರ್ ಆಗಿರುವ, ನ್ಯಾಯವಾದಿಗಳಾಗಿ ಎಲ್ಲ ಸ್ತರಗಳ ಜನರ ಬಳಕೆಯಿರುವ ಅಮಿತಾ ಅವರು ಕನ್ನಡ, ಕೊಂಕಣಿ ಸಂಸ್ಕೃತಿಗಳನ್ನು ಚಿತ್ರಿಸಿದಷ್ಟೆ ಸಹಜವಾಗಿ ಮರಾಠಿ, ಗುಜರಾತಿ ಸಂಸ್ಕೃತಿಗಳನ್ನೂ ಚಿತ್ರಿಸಿರುವುದು ಸರಿಯಷ್ಟೆ. ಆದರೆ ಅದನ್ನೆಲ್ಲ ಈ ನೀಳವಾದ ಸಾಮಾಜಿಕ ಕತೆಯಲ್ಲಿ ಒಪ್ಪವಾಗಿ ಜೋಡಿಸಿ ಕಟ್ಟಿರುವ ಅವರ ಪ್ರತಿಭೆ ಬಹಳ ವಿಶಿಷ್ಟವಾದುದು ಎನ್ನಿಸುತ್ತದೆ. ಅದಕ್ಕಾಗಿ ಅವರಿಗೆ ಹಾರ್ದಿಕ ಅಭಿನಂದನೆಗಳು.


ಮನಸೆಳೆದ ಕೆಲವು ಸಾಲುಗಳು...


ಪುಟ್ಟ ಹಜಾರ ದಾಟಿದರೆ ಮುದುರಿ ಕುಳಿತಂತಹ ಅಡುಗೆ ಮನೆ.


ತಿಳಿನೀಲಿ ಬಾನಿನ ಬಣ್ಣವನ್ನು ಉಜ್ಜಿ ಬಂದಂತಹ ಜೀನ್ಸ್ ಹಾಕಿ....


ಬಸ್ಸಿನಲ್ಲಿ ಬೆನ್ನ ಮೇಲೆ ತೂಗಾಡಲು ಬಿಟ್ಟರೆ, ಜಡೆ ಯಾವುದಾದರೂ ಆಂಟಿಯ ಪರ್ಸಿನ ಜಿಪ್ ಅಥವಾ ಯಾರದೋ ಶರ್ಟಿನ ಬಟನ್ ಒಳಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇತ್ತು.


ಯಾರಿಗೋ ತಾನು ಬೇಕಾದವಳು, ತಾನಿಲ್ಲದಿದ್ದರೆ ಅವರಿಗೆ ನಡೆಯುವುದಿಲ್ಲ ಎನ್ನುವ ಭಾವನೆಯಿಂದ ಅವಳಲ್ಲಿ ಹೊಸ ಆತ್ಮವಿಶ್ವಾಸ ಮೂಡಿ ಅವಳ ತೇಲು ನಡಿಗೆಯ ಬದಲಾಗಿ ಹೆಜ್ಜೆಗಳು ಧೃಢವಾಗಿ ನೆಲಕ್ಕೆ ಊರತೊಡಗಿದವು.


ಮಧ್ಯರಾತ್ರಿಯಾಗುವವರೆಗೆ ಓಡಾಡುವ ವಾಹನಗಳ ಸದ್ದು ಕಡಿಮೆಯಾಗಿ ನೀರವತೆ ನೆಲೆಸಿದ್ದರೂ ರಸ್ತೆಯ ದೀಪದ ಕಂಬದ ಬೆಳಕು ಅವಳಿಗೆ ಭದ್ರತೆ ಕೊಡುವಂತೆ ಅವಳ ಹೊದಿಕೆಯ ಮೇಲೆ ತಾನೂ ಪವಡಿಸಿಬಿಡುತ್ತಿತ್ತು. ಕನಸಿಗೆ ಬೆಚ್ಚಿಬಿದ್ದು ಕಣ್ತೆರೆದರೆ ಕಾಣುವ ಬೆಳಕು ಯಾವುದೋ ದಾರಿ ತೆರೆದುಕೊಂಡಿದೆ ಅನ್ನುವಂತಿತ್ತು.


ಸರಯೂ ಶಿಶಿರನಿಗೆ ಕತೆ ಹೇಳುತ್ತಾ ನಿದ್ದೆ ಹೋದರೆ ಅಂಕಿತ್ ಕಿಟಕಿಯಲ್ಲಿ ನಿಂತು ಚಂದಿರನನ್ನು ಕಾಯುತ್ತಿದ್ದ. ಬೆಳದಿಂಗಳು ಮಾತ್ರ ಮನದೊಳಗೆ ಇಳಿಯುತ್ತಲೇ ಇರಲಿಲ್ಲ.


ಹೊರೆಯನ್ನು ಹೊತ್ತು ಹೋಗಬೇಕಾದರೆ ತಲೆಯ ಮೇಲಿನ ಒಜ್ಜೆಗೆ ಸರಿಯಾಗಿ ಹೆಜ್ಜೆ ಹಾಕಬೇಕಾಗಿತ್ತು.


Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page