ನಾನೊಬ್ಬ ಭಾರತೀಯ ಪ್ರವಾಸಿ
- vidyaram2
- Oct 23, 2022
- 4 min read
Updated: Mar 19, 2023
‘ನಾನೊಬ್ಬ ಭಾರತೀಯ ಪ್ರವಾಸಿ', ೧೯೮೭ ರಲ್ಲಿ ಮೊದಲ ಮುದ್ರಣ ಕಂಡ, ‘ಅತ್ಯುತ್ತಮ ಪ್ರವಾಸ ಗ್ರಂಥ’ ಪ್ರಶಸ್ತಿಯನ್ನು ಪಡೆದುಕೊಂಡ ವ್ಯಾಸರಾಯ ಬಲ್ಲಾಳರ ಶ್ರೇಷ್ಠ ಕೃತಿ. ಬಲ್ಲಾಳರು ೧೯೮೪ರಲ್ಲಿ ಮಾಡಿದ ಸುಮಾರು ಐದಾರು ತಿಂಗಳ ಕಾಲದ ಯೂರೋಪು ಮತ್ತು ಅಮೆರಿಕಾ ಪ್ರವಾಸದ ಕುರಿತ ವಿಶಿಷ್ಟವಾದ ಪ್ರವಾಸ ಕಥನವಿದು.
ಈ ಪ್ರವಾಸ ಕಥನದಲ್ಲಿ ಬಲ್ಲಾಳರು, ವಿಭಿನ್ನ ನೆಲೆಗಳಲ್ಲಿ ಪೂರ್ವ-ಪಶ್ಚಿಮ ದೇಶಗಳ ವೈಪರೀತ್ಯ, ಪಾಶ್ಚಿಮಾತ್ಯ ದೇಶಗಳಿಗೆ (ನಿರ್ದಿಷ್ಟವಾಗಿ ಅಮೆರಿಕೆಗೆ) ವಲಸೆ ಹೋಗುವ ಭಾರತೀಯರು ಅಲ್ಲಿ ಎದುರಿಸಬೇಕಾದ ಅನೇಕ ಸಂಘರ್ಷಗಳು ಮತ್ತು ಆ ಸಂಘರ್ಷಗಳ ನಡುವೆ ಅವರು ತಮ್ಮ ಅನನ್ಯತೆಯನ್ನು ಗುರುತಿಸಿಕೊಳ್ಳುವುದರ, ಗುರುತಿಸಿದರೆ ಕಾಪಾಡಿಕೊಳ್ಳುವುದರ ಸಾಧ್ಯತೆ , ಪಾಶ್ಚಿಮಾತ್ಯರ ಅನನ್ಯತೆಯ ಬಗೆ ಎಂತದ್ದು ಎಂದೆಲ್ಲಾ ಚರ್ಚಿಸಿದ್ದಾರೆ. ಇಂತಹ ಮೂಲಭೂತ ವಿಚಾರಗಳಿಗೆ, ತಮ್ಮ ಅಂತರಂಗದ ಜಿಜ್ಞಾಸೆಗಳಿಗೆ ಉತ್ತರ ಶೋಧಿಸಲು ಅವರು ನಡೆಸಿದ ಪ್ರಯತ್ನವನ್ನು ಪ್ರಾಮಾಣಿಕವಾಗಿ ಓದುಗರ ಮುಂದೆ ತೆರೆದಿಟ್ಟಿದ್ದಾರೆ. ತಮ್ಮ ಪ್ರವಾಸದ ಹೆಜ್ಜೆ ಹೆಜ್ಜೆಯಲ್ಲೂ ಅವರು ವಸ್ತುನಿಷ್ಠತೆಯಿಂದ ಈ ಎರಡು ಸಂಸ್ಕೃತಿಗಳನ್ನೂ, ಅವುಗಳ ನಡುವಿನ ಸಂಘರ್ಷವನ್ನೂ ತುಲನಾತ್ಮಕವಾಗಿ ಕಾಣುವ ಪ್ರಯತ್ನ ಮಾಡಿದ್ದಾರೆ. ಸಾಂಸ್ಕೃತಿಕ, ಸಾಮಾಜಿಕ, ಕೌಟುಂಬಿಕ,ಆರ್ಥಿಕ,ರಾಜಕೀಯ , ಶೈಕ್ಷಣಿಕ ಹೀಗೆ ಹಲವು ಆಯಾಮಗಳಲ್ಲಿ ಅವರು ಭಾರತ ಮತ್ತು ಪಾಶ್ಚಾತ್ಯ ನಾಗರಿಕತೆಗಳ ತುಲನೆಯನ್ನು ಸಾಧಾರವಾಗಿ, ಬಹಳ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ.
ಬಲ್ಲಾಳರು ಚರ್ಚಿಸಿದ ಈ ಮೇಲಿನ ವಿಷಯಗಳೆಲ್ಲ ಬಹಳ ಸೂಕ್ಷ್ಮವಾದ ಆದರೆ ಜಟಿಲವಾದ ವಿಚಾರಗಳು. ಇದೊಂದು ‘ಇದಮಿತ್ಥಮ್’ ಎಂದು ನಿರ್ಧಾರಕ್ಕೆ ಬರಲಾಗದ, ಸಮಸ್ಯೆಯ ಮೂಲಕ್ಕೆ ಸೀದಾ ಸರಳವಾಗಿ ಇಳಿಯಲಾರದ, ಅನೇಕ ಮಗ್ಗಲುಗಳನ್ನೂ, ಸಾಧ್ಯತೆಗಳನ್ನೂ ಹೊಂದಿದ ಸಂಕೀರ್ಣವಾದ ತರ್ಕ. ಆ ತರ್ಕವನ್ನು ಅವರು ಮಂಡಿಸುವ ರೀತಿ, ಶೈಲಿ ಇನ್ನೂ ಸಂಕೀರ್ಣ. ಕೆಲವೆಡೆ ಬಹಳ ನೀರಸವೆಂದು ತೋರುವ, ಓದುಗನಲ್ಲಿ ಕುತೂಹಲ ಕಾಯ್ದುಕೊಳ್ಳಲು ಅಸಮರ್ಥವೆನಿಸುವ ಈ ಕಥನದಲ್ಲಿರುವ ಮೌಲ್ಯಯುತವಾದ (ಗಟ್ಟಿ )ವಿಚಾರಗಳು ಈ ಶೈಲಿಯ ಬರವಣಿಗೆಯ ಕಾರಣದಿಂದ, ನನ್ನಂತಹ ಬಹಳಷ್ಟು ಸಾಮಾನ್ಯ ಓದುಗರನ್ನು ತಲುಪುವುದಿಲ್ಲವೇನೋ ಎಂಬ ಶಂಕೆ ನನಗಿದೆ.ಆದರೆ ನಾನೂ ಸ್ವಲ್ಪ ಸಂಕೀರ್ಣವಾಗಿ ಉದ್ದುದ್ದ ವಾಕ್ಯ ಬರೆಯುವ ದೌರ್ಬಲ್ಯ ಉಳ್ಳವಳಾದ್ದರಿಂದ(ಹಹ ಹಾ!) ಹಾಗೂ ಅವರು ಸಂಚರಿಸಿದ ಅನೇಕ ಸ್ಥಳಗಳಲ್ಲಿ ನಾನೂ ಸಂಚರಿಸಿ, ಕೆಲ ಕಾಲ ವಾಸಿಸಿದ ಅನುಭವವೂ ಇರುವುದರಿಂದ ನನಗೆ ಅವರ ಈ ಶ್ರೇಷ್ಠ ಬರಹ ಆಪ್ತವೆನಿಸಿತು.
ಬಲ್ಲಾಳರು ಇಡೀ ಕೃತಿಯಲ್ಲಿ ಎಲ್ಲೂ ಅವರ ಅನಿಸಿಕೆಗಳನ್ನು ಸಡಿಲವಾಗಿ ಹಂಚಿಕೊಂಡಿಲ್ಲ. ಬಹಳ ಚಿಂತಿಸಿ, ಮಥಿಸಿ ತಯಾರಿಸಿದ ಒಂದು ನಿರ್ದಿಷ್ಟವಾದ ಯೋಜನೆಯ ಹಾಗೆ ಅವರು ತಾವು ಹೋದಲ್ಲೆಲ್ಲ ಅಲ್ಲಿಯ ಸ್ಥಳೀಯರ ಜೊತೆಯಲ್ಲಿ (ಕೆಲವೊಮ್ಮೆ ಮುಕ್ತವಾಗಿ,ಕೆಲವೊಮ್ಮೆ ಸೂಕ್ಷ್ಮವಾಗಿ) ಚರ್ಚಿಸಿ, ವಿವೇಚಿಸಿ ತಮಗೆ ದೊರೆತ ಪ್ರತಿಕ್ರಿಯೆಗಳನ್ನು ಸ್ಪಷ್ಟವಾಗಿ ದಾಖಲಿಸಿದ ನಂತರವಷ್ಟೇ ತಮ್ಮ ವಿಚಾರವನ್ನು, ಜಿಜ್ಞಾಸೆಯನ್ನು ತೆರೆದಿಡುತ್ತಾರೆ.
ಭಾರತ ಮತ್ತು ಅಮೇರಿಕಾ (ಅಥವಾ ಅವರು ಕಂಡ ಇತರ ಪಾಶ್ಚಾತ್ಯ ) ದೇಶಗಳನ್ನು ವಿವಿಧ ನೆಲೆಗಳಲ್ಲಿ ತುಲನೆ ಮಾಡುವ ಅವರ ಚಿಕಿತ್ಸಕ ದೃಷ್ಟಿಕೋನದಲ್ಲಿ, ಅವರ ಭಾರತದ ಕುರಿತ ರಾಷ್ಟ್ರಾಭಿಮಾನ, ಉತ್ಕೃಷ್ಟತೆಯನ್ನು ರಾಜಿ ಮಾಡಿಕೊಳ್ಳಲು ಒಪ್ಪದ (ಆದರೆ ಭಾರತೀಯರಲ್ಲಿ ಆ ಮನೋಭಾವ ಕಂಡು ವಿಷಾದಿಸುವ ) ಅವರ ಉನ್ನತ ಆದರ್ಶ, ಆಳವಾಗಿ ಸಮೃದ್ಧವಾಗಿರುವ ಭಾರತೀಯ ಸಂಸ್ಕೃತಿಯ ಬೇರಿನ ಕುರಿತು ಅವರ ಅಭಿಮಾನ, ಅದಕ್ಕೆ ನೀರೆರೆದು ಪೋಷಿಸಲು ಅಶಕ್ತರಾದ ಭಾರತೀಯರ ದೌರ್ಬಲ್ಯದ ಕುರಿತು ನಿರಾಸೆ, ಜೊತೆಗೆ ಇದೆಲ್ಲ ಬದಲಾಗಿ ಭಾರತ ಇನ್ನೂ ಉನ್ನತಕ್ಕೆ ಏರಬಲ್ಲದಲ್ಲವೇ ಎಂಬ ಆಶಾದಾಯಕ ನಿಲುವು ಇವೆಲ್ಲವೂ ಸ್ಪಷ್ಟವಾಗಿ ಗೋಚರಿಸುತ್ತವೆ .
ಮೊದಲ ಬಾರಿಗೆ ಓದಿದ ನಂತರ ನನ್ನ ಮನದಲ್ಲಿ ಮೂಡಿದ ವಿಚಾರಧಾರೆ......
ಸ್ನಾತಕೋತ್ತರ ಪದವಿಗಾಗಿ ಪ್ರಥಮ ವರ್ಷದಲ್ಲಿ ಪಠ್ಯವಾಗಿ ಈ ಕೃತಿ ಓದುತ್ತಿರುವುದರಿಂದ ಅದರ ಕುರಿತು ಆಳವಾದ ಚರ್ಚೆ, ಬರವಣಿಗೆಗಳನ್ನು ನಾನು ಮಾಡುವವಳಿದ್ದೇನೆ. ಈ ಕೃತಿಯನ್ನು ಮೊದಲ ಬಾರಿಗೆ ಓದಿ ಮುಗಿಸಿದಾಗ ನನ್ನ ಮನದಲ್ಲಿ ಮೂಡಿದ ಅನಿಸಿಕೆಗಳನ್ನು ಮಾತ್ರ ಇಲ್ಲಿ ಹಂಚಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.
ಈ ಕೃತಿ ಹೊರಬಂದು ಸಂದಿದ ಈ ನಲವತ್ತು ವರ್ಷಗಳಲ್ಲಿ ಅವರು ಬಯಸಿದ ಅನೇಕ ಬದಲಾವಣೆಗಳು ಭಾರತದಲ್ಲಿ ಆಗಿವೆ. ಅವರು ಅಂದು ಅಭಿವೃದ್ಧಿ ಹೊಂದಿದ ರಾಷ್ತ್ರಗಳಲ್ಲಿ ಗಮನಿಸಿದ ಎಲ್ಲಾ ತಾಂತ್ರಿಕ ಸುಧಾರಣೆಗಳು ಜಾಗತೀಕರಣದ ತೆಕ್ಕೆಯೊಳಗೆ ಈಗ ಭಾರತದಲ್ಲಿ ಆಗಿವೆ. ಅವರು ಬಯಸಿದ ಆರ್ಥಿಕ ಅಭಿವೃದ್ಧಿಯೂ ಅಂದಿನ ಹೋಲಿಕೆಯಲ್ಲಿ ಧನಾತ್ಮಕವಾಗಿ ಆಗಿದೆ. ಆದರೆ ಅದರ ಜೊತೆ ಜೊತೆಗೆ ಅನಿವಾರ್ಯವೆಂಬಂತೆ ಅವರು ಅಲ್ಲಿ ಗಮನಿಸಿದ ಋಣಾತ್ಮಕವಾದ ಸಾಮಾಜಿಕ, ಕೌಟುಂಬಿಕ ಅಂಶಗಳೂ ಇಂದು ಭಾರತದಲ್ಲಿ ತಲೆದೋರಿವೆ . ಪಾಶ್ಚಾತ್ಯರಂತೆ ಅಭಿವೃದ್ಧಿ ಹೊಂದುವ ಗುರಿಯ ಹಿಂದೆ ಓಡುತ್ತಾ, ಅವರ ಬಂಡವಾಳಶಾಹಿ ಉದ್ಯಮಗಳಿಗೆ ಇಲ್ಲಿ ಅವಕಾಶ ಕೊಟ್ಟು, ಅವರ ಚಾಳಿಯಂತೆ ಎಲ್ಲದರಲ್ಲೂ ಲಾಭ ಹುಡುಕುತ್ತಾ, ಮೂಲಭೂತ ಮಾನವೀಯ ಸೇವೆಗಳನ್ನೂ (ಆಹಾರ, ಆರೋಗ್ಯ , ಶಿಕ್ಷಣ ಇತ್ಯಾದಿ) ವ್ಯವಹಾರವಾಗಿ ಬೆಳೆಸಿ, ಅದರಿಂದ ಉತ್ತಮ ಆರ್ಥಿಕತೆ ಸಾಧಿಸಿ, ಅವರಂತೆ ಕೊಳ್ಳುಬಾಕತನ, Use and Throw attitude, ಸ್ವೇಚ್ಛಾಚಾರ, ಮಾಲ್ ಸಂಸೃತಿಗಳನ್ನು ರೂಢಿಸಿಕೊಂಡು ಕೌಟುಂಬಿಕ, ಮಾನವೀಯ ಮೌಲ್ಯಗಳನ್ನು ಕಡೆಗಣಿಸಿ ಅದನ್ನೇ ಪ್ರಗತಿ ಎಂದು, ಆನಂದದ ಮಾರ್ಗ ಎಂದೂ ಅರ್ಥೈಸಿಕೊಳ್ಳುವಂತಾಗಿದೆ. ಬಲ್ಲಾಳರು ಅಂದು ಅಲ್ಲಿ ಕಂಡ ಎಷ್ಟೋ ಸಂಘರ್ಷಗಳನ್ನು ಇಂದು ಎರಡು ಪೀಳಿಗೆಗಳ ನಡುವೆ ಇಲ್ಲೇ ಕಾಣುವಂತಾಗಿದೆ.
ಅತೀ ಭಾವನಾತ್ಮಕತೆಯನ್ನು ಬದಿಗಿರಿಸಿ ವಾಸ್ತವಿಕವಾಗಿ (ಪ್ರಾಕ್ಟಿಕಲ್) ನೋಡಿದರೆ, ಈ ಎರಡೂ ರೀತಿಯ ಅಭಿವೃದ್ಧಿಗಳು ಒಂದೇ ನಾಣ್ಯದ ಎರಡು ಮುಖಗಳು ಅನ್ನಿಸದಿರದು. ಕ್ಷಿಪ್ರವಾಗಿ ಬದಲಾವಣೆ ಕಾಣುತ್ತಿರುವ ಇಂದಿನ ‘ಜಾಗತಿಕ ಗ್ರಾಮ’ (ಗ್ಲೋಬಲ್ ವಿಲೇಜ್ )ದಲ್ಲಿ ತೀವ್ರತರವಾದ ಸ್ಪರ್ಧೆಯಲ್ಲಿ ಸಿಕ್ಕಿ ನಲುಗುತ್ತಿರುವ ಯುವ ಜನತೆಗೆ ಅವರ ಕೈಗೆ ಸುಲಭವಾಗಿ ಎಟುಕುವುದನ್ನೆಲ್ಲಾ ಅನುಭವಿಸುವುದಲ್ಲದೆ (ಆ ಅನುಭವದಿಂದ ಪಾಠ ಕಲಿಯದೇ) ಬೇರೆ ಸುಲಭದ ದಾರಿಯಿಲ್ಲ. ನಾವು ಹೆಮ್ಮೆ ಪಡುವ, ತಾಂತ್ರಿಕ ಕ್ಷೇತ್ರದಲ್ಲಿನ ಅಭಿವೃದ್ಧಿ ನಮಗೆ ಇಂದು ಸಾಧಿಸಿಕೊಟ್ಟಿರುವ ಮಾಯಾಜಾಲದಿಂದ ವಿಶ್ವದ ಯಾವುದೇ ಒಂದು ಸಮುದಾಯವನ್ನು, ಪೀಳಿಗೆಯನ್ನು ಬೇರ್ಪಡಿಸಿ ದ್ವೀಪದಂತೆ ಇರಿಸಲು ಇಂದು ಸಾಧ್ಯವಿಲ್ಲ.
ಅಂತೆಯೇ ನಮ್ಮ ಸನಾತನ ಧರ್ಮ, ಸಂಸ್ಕೃತಿಗಳ ಪೂರ್ಣ ತಿಳುವಳಿಕೆ, ಅದರ ಸಾರ ಪೀಳಿಗೆಯಿಂದ ಪೀಳಿಗೆಗೆ ಹರಿಯುವುದು ನಿಂತುಹೋದ ಹಿನ್ನಲೆಯೂ ಸರಳವಾಗಿ ಸಮೀಕರಿಸುವಂತದ್ದಲ್ಲ. ಪಾಶ್ಚಾತ್ಯ ವಸಾಹತುಶಾಹಿಗಳು ನಮ್ಮ ಸ್ವಾತಂತ್ರ ಹರಣ ಮಾಡದೆ ಇದ್ದರೆ, ಅವರ ಶೈಕ್ಷಣಿಕ ನೀತಿ ನಮ್ಮಲ್ಲಿ ತರದೇ ಇದ್ದರೆ,ಅದರಿಂದ ಲಾಭದಷ್ಟೇ ನಷ್ಟವೂ ಆಗುತ್ತಿತ್ತು. ಅವರು ಮಾಡಿದ ಒಡೆದು ಆಳುವ ನೀತಿ, ನಮ್ಮತನವನ್ನು ನಾವು ಕೀಳೆಂದು ಭಾವಿಸುವಂತೆ ಅವರು ರಚಿಸಿದ ವ್ಯೂಹ, ಬಿಳಿ ತೊಗಲು ಕಂಡರೆ ಈಗಲೂ ನಮಗಿರುವ ಮೇಲುಭಾವ, ನಮ್ಮದು ಎಂದರೆ ಅಸಡ್ಡೆ, ಇಂದಿಗೂ ನಮ್ಮದನ್ನು ನಾವು ಕೀಳರಿಮೆಯಿಂದ ಕಾಣುವ ಬುದ್ಧಿ …ಇದು ಈ ರೀತಿ ಇರದಿದ್ದರೆ ಇನ್ಯಾವ ರೀತಿ ಇದ್ದರೂ ನಮಗೆ ಈಗ ಅರಿವಿಲ್ಲದ ಮತ್ತ್ಯಾ ವುದೋ ಸಮಸ್ಯೆ ಮೈದಳೆಯುತ್ತಿತ್ತು!!
ಒಮ್ಮೆ ಮೇಲೆ ಏರಿದ್ದು ಇನ್ನೊಮ್ಮೆ ಕೆಳಗಿಳಿಯುವಂತೆ ಈ ಕಾಲಚಕ್ರದ ಯಾವ ಘಟ್ಟದಲ್ಲಿ ಏನೇನಾಯಿತೋ ಅದೆಲ್ಲ ಆಗಬೇಕಾದುದೇ. ಒಮ್ಮೆ ಉನ್ನತಿಯ ತುತ್ತ ತುದಿಯಲ್ಲಿದ್ದ ಭಾರತ, ಹಿನ್ನಡೆ ಸಾಧಿಸಿ, ಮತ್ತೆ ಮೇಲೆ ಬರುವ ಕಾಲವೂ ಇದ್ದೇ ಇರುತ್ತದೆ. ದೇಶ ದೇಶಗಳ ಇಂದಿನವರೆಗಿನ ಇತಿಹಾಸ ನೋಡಿದರೆ ಇದು ಸ್ಪಷ್ಟವಾಗುತ್ತದೆ. ಪೌರಾಣಿಕ ಯುಗಗಳ ಕಲ್ಪನೆಯನ್ನು ನಂಬುವುದಾದರೆ ಸಹ ಇದು ಕಾಣುವಂತದ್ದೇ (ರಾಮನ ಕಾಲ ಒಳ್ಳೆಯದೆಂದು ತ್ರೇತಾಯುಗ ನಿರಂತರ ಸಾಗಲಿಲ್ಲ). ಕಾಲಮಾನದ ಯಾವ ಭಾಗದಲ್ಲಿ ನಾವು ಪ್ರಸ್ತುತವಾಗುವೆವೋ ಅದಕ್ಕೆ ಅನುಗುಣವಾಗಿ ವಿವೇಚನೆ, ತರ್ಕ ನಾವು ನಮ್ಮ ಮಿತಿಯೊಳಗೆ ಮಾಡಿ, ಆ ಮಿತಿಯಲ್ಲಿ ಒಳಿತು, ಕೆಡಕುಗಳನ್ನು ಅರಿತು ಜೀವನವನ್ನು ಸಹ್ಯ ಮಾಡಿಕೊಂಡು ಬಾಳಿ ನಿರ್ಗಮಿಸುವುದೇ ಜಾಣತನ ಎಂದು ನನ್ನ ಮತ. ಕಾಲಾಯ ತಸ್ಮಯ್ ನಮಃ !
ಜಾತ್ಯಾತೀತ ರಾಷ್ಟ್ರವಾಗಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ , ಬಹು ಭಾಷೆ-ಬಹು ಸಂಸ್ಕೃತಿಗಳ ನೆಲೆಬೀಡಾಗಿ ಇದ್ದು, ಒಂದು ಭಾರತೀಯ ಅನನ್ಯತೆ ಕಂಡುಕೊಳ್ಳುವುದು ಸುಲಭದ ಮಾತಲ್ಲ. ವಿವಿಧತೆಯೇ ನಮ್ಮ ಏಕತೆ. ಅಂತೆಯೇ ಇಷ್ಟು ಜನಸಂಖ್ಯೆ ಹೊಂದಿರುವ, ಇಷ್ಟು ವಿಭಿನ್ನ ಸಮಸ್ಯೆಗಳಿರುವ ನಮ್ಮ ದೇಶದಲ್ಲಿ ಅವರು ಬಯಸುವ ಉತ್ಕೃಷ್ಟತೆ ಎಲ್ಲರಿಗೂ ಸುಲಭ ಸಾದ್ಯವಾಗಿ ಸಾಧಿಸುವ ಗುರಿಯಲ್ಲ. ಎಲ್ಲರೂ ಅವರವರ ಭಾವಕ್ಕೆ ನೋಡುವರು. ರಾಜಕೀಯದಲ್ಲಿ ಹೊಲಸು (ಅದು ಪೂರ್ವ, ಪಶ್ಚಿಮ ಎಲ್ಲ ಕಡೆಯೂ ಇರುವಂತದ್ದೇ, ಪ್ರಮಾಣ ಬೇರೆ ಬೇರೆ ಇರಬಹುದು) ಇವೆಲ್ಲದರ ಮೇಲೆ ಕಿರೀಟದಂತೆ ಇರುವಾಗ ನಾವು ಪೂರ್ವ ಪಶ್ಚಿಮಗಳ ತುಲನೆ ಮಾಡುವುದೇ ಎಷ್ಟು ಸಮಂಜಸ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಇಂಗ್ಲೀಷಿನಲ್ಲಿ ಹೇಳುವ ಒಂದು ನಾಣ್ಣುಡಿಯಂತೆ “Why to compare oranges to apples”, ಏನಂತೀರಿ?
ಹಾಗೇ ಇನ್ನೊಂದು ವಿಚಾರ…ಇದು ನಾನು ಎರಡು ಮೂರು ವರ್ಷಗಳ ಹೊರದೇಶದ ಜೀವನದಲ್ಲಿ ನನ್ನ ಸಂಪರ್ಕಕ್ಕೆ ಬಂದ ಬಂಧು-ಮಿತ್ರರನ್ನು ನೋಡಿದ, ತಿಳಿದ ಅನುಭವದಿಂದ ಹೇಳುತ್ತಿರುವುದು… ಅದು ತಪ್ಪಿರಲೂಬಹುದು.
ಇಲ್ಲಿಂದ ಹೊರದೇಶಗಳಿಗೆ ಹೋಗುವ ಬಹುಪಾಲು ಜನರು, ಅಲ್ಲಿನ ಐಷಾರಾಮಿ ಸುಖಕರ ಜೀವನ ಶೈಲಿ, ಹಣ ಅಥವಾ ತಮ್ಮ ಪ್ರತಿಭೆಗೆ ಅಲ್ಲಿ ದೊರೆಯುವ ಅವಕಾಶಗಳನ್ನು ಉಪಯೋಗಿಸಿಕೊಂಡು ತಮ್ಮ ಜೀವನವನ್ನು ಉತ್ತಮಗೊಳಿಸಿಕೊಳ್ಳುವ ಹಂಬಲ, ನಂಬಿಕೆಯಿಂದಲೇ ಹೋದವರು. ಅದನ್ನು ಮೀರಿದ ಆಲೋಚನೆ, ತರ್ಕ ಬಂದರೂ ಅದನ್ನು ಬದಿಗೊತ್ತಿ ತಮ್ಮ ದೈನಂದಿನದೊಳಗೆ ಮುಳುಗುವವರು. ತಮ್ಮ ವಲಸೆಯನ್ನು ಸಮರ್ಥಿಸಿ ನೆಮ್ಮದಿಯಿಂದ ಬಾಳುವ ಮಾರ್ಗ ಬಿಟ್ಟು ಹೋದರೆ ಅವರ ಮಾನಸಿಕ ಒತ್ತಡ ಹೆಚ್ಚುವುದೇ ಹೊರತು, ಅವರ ಮಿತಿಯಲ್ಲಿ ಅವರು ಬಲ್ಲಾಳರು ಅಂದು ಕಂಡಿದ್ದಕ್ಕಿಂತ ಹೆಚ್ಚೇನೂ ಮಾಡಲು ಶಕ್ತರಲ್ಲ . ಅವರನ್ನೆಲ್ಲ ಹಿಡಿದು ಬಲ್ಲಾಳರು ತಮ್ಮ ಜಿಜ್ಞಾಸೆ ಅವರ ಮುಂದಿಟ್ಟು ಪೀಕಲಾಟಕ್ಕೆ ಸಿಕ್ಕಿಸಿದ್ದರೋ ಎಂಬ ಸಂಶಯ ನನ್ನದು….:):):)
ನನ್ನ ಅನಿಸಿಕೆ ಏನೇ ಇದ್ದರೂ, ಮನದಲ್ಲಿ ಇಷ್ಟು ವಿಚಾರಗಳ ಮಂಥನ ನಡೆಸಲು ಪ್ರಚೋದಿಸುವ ಬಲ್ಲಾಳರ ಈ ಪ್ರವಾಸ ಕಥನ ಒಂದು ಮೇರು ಕೃತಿ ಎನ್ನುವುದರಲ್ಲಿ ಎರಡು ಮಾತಿಲ್ಲ.





Comments