ದೇವರು - ಎ. ಎನ್ .ಮೂರ್ತಿರಾವ್
- vidyaram2
- Jan 10, 2023
- 1 min read

ಒಂದು ತ್ವರಿತ ಟಿಪ್ಪಣಿ (ಕ್ವಿಕ್ ನೋಟ್ಸ್)
ದೇವರು - 1991 ರಲ್ಲಿ ಮೊದಲ ಮುದ್ರಣಗೊಂಡ ಪಂಪ ಪ್ರಶಸ್ತಿ ವಿಜೇತ ವೈಚಾರಿಕ ಕೃತಿ. ಇಪ್ಪತ್ತೈದಕ್ಕೂ ಹೆಚ್ಚು ಬಾರಿ ಮರು ಮುದ್ರಣಗೊಂಡಿರುವುದು ಕೃತಿಯ ಜನಪ್ರಿಯತೆಯನ್ನು ಸಾರುತ್ತದೆ.
ಮೂರ್ತಿರಾವ್ ಅವರು ಈ ಕೃತಿಯಲ್ಲಿ ದೇವರನ್ನು ಕುರಿತ ನಂಬಿಕೆ, ಶ್ರದ್ಧೆ, ಕಲ್ಪನೆ, ಕತೆಗಳು, ಮೂಢ ನಂಬಿಕೆ, ಗೊಡ್ಡು ಸಂಪ್ರದಾಯಗಳು, ಅಧ್ಯಾತ್ಮ ಸೇರಿದಂತೆ ಹಲವಾರು ಆಯಾಮಗಳನ್ನು ವಿಸ್ತೃತವಾಗಿ ಪರಿಚಯಿಸಿದ್ದಾರೆ.
ಅಂಧಕಾರ ಯುಗದಲ್ಲಿ (The dark ages) ನಾಗರೀಕತೆ ನಾಚುವಂತೆ ಇದ್ದ ಮೌಢ್ಯ, ಅದರಿಂದಾದ ಅನಾಹುತಗಳ ವಿವರಣೆ ಕೊಡುತ್ತಾರೆ. ಧರ್ಮದ ಹೆಸರಿನಲ್ಲಿ ನಡೆದ ಯುದ್ಧಗಳ ಪಟ್ಟಿ ಮಾಡುತ್ತಾರೆ. ಮತಾಂಧರ ಧೋರಣೆಗಳಿಂದ ಮನುಕುಲಕ್ಕೆ ಆದ ಹಾನಿಯನ್ನು ಎತ್ತಿ ತೋರಿಸುತ್ತಾರೆ. ಅದಾಗಿ ಶತ ಶತಮಾನಗಳೇ ಸಂದು, ನಾಗರೀಕತೆ ಮುಂದುವರೆದ ಮೇಲೂ ಧರ್ಮದ ಹೆಸರಿನಲ್ಲಿ ಇಂದಿನವರೆಗೂ ನಡೆಯುತ್ತಾ ಬಂದ ಅನಾಚಾರಗಳನ್ನು ವಿಶ್ಲೇಷಿಸುತ್ತಾರೆ. ಮುಗ್ಧ ಜೀವಿಗಳ ಮೇಲೆ ಆಗುವ ಇಷ್ಟೆಲ್ಲಾ ಅತ್ಯಾಚಾರ, ಅನಾಚಾರಗಳನ್ನು ಕಂಡೂ ಏನೂ ಮಾಡದ ದೇವರು ಇರುವುದೇ ಸುಳ್ಳೆಂದು ತರ್ಕಿಸುತ್ತಾರೆ.
ವಿಗ್ರಹ ಪೂಜೆ, ಹಿಂದೂಗಳ ಲಕ್ಷಾಂತರ ದೇವರು, ದೇವತೆಗಳು, ಅವುಗಳ ಸುತ್ತ ಇರುವ ಪುರಾಣ, ಅಂತೆ - ಕಂತೆ ಕತೆಗಳ ಕುರಿತು ಹಾಸ್ಯ ಮಾಡುತ್ತಾರೆ. ದೇವಾನುದೇವತೆಗಳ ಇತಿ ಮಿತಿಗಳನ್ನು ಟೀಕಿಸುತ್ತಾರೆ. ದೇವರು ಸರ್ವಶಕ್ತ, ಸರ್ವಜ್ಞ ಎರಡೂ ಏಕಕಾಲದಲ್ಲಿ ಆಗಲು ಸಾಧ್ಯವಿಲ್ಲ. ಅವನು ಪಕ್ಷಪಾತಿಯಾಗಿರಲು, ಎಲ್ಲವನ್ನೂ ಕರ್ಮಕ್ಕೆ ದಾಟಿಸಿ, ಪಲಾಯನ ಮಾಡುವ, ಆಟ ನೋಡುವ ಗೊಂಬೆಯಾಗಿರಲು ಸಾಧ್ಯವಿಲ್ಲ - ಎಂಬೆಲ್ಲಾ ತರ್ಕ, ವಿಚಾರ ಮಂಡನೆ ಮಾಡುತ್ತಾರೆ. ಭಗವದ್ಗೀತೆ, ಉಪನಿಷತ್ತುಗಳನ್ನು ತಿಳಿದುಕೊಂಡಿರುವ ಅವರು ತಮ್ಮ ತರ್ಕದಲ್ಲಿ ಅಲ್ಲಿಯ ಕೆಲವು ಶ್ಲೋಕಗಳನ್ನು ಉದಾಹರಿಸುತ್ತಾರೆ.
ಭಗವಂತ ಒಂದು ಚೈತನ್ಯ. ಭಕ್ತಿ, ಜ್ಞಾನಗಳ ಮೂಲಕ ಮಾನವ ಸ್ವತಃ ಅನುಭವಿಸಿ ಕಂಡುಕೊಳ್ಳಬಲ್ಲ ಸ್ವರೂಪ ಎನ್ನುವ ಸಿದ್ಧಾಂತವನ್ನೂ ವಿವೇಚಿಸುತ್ತಾರೆ. ಶರಣರು, ದಾಸರು, ರಾಮಕೃಷ್ಣ ಪರಮಹಂಸರು ಮುಂತಾದ ಆಧ್ಯಾತ್ಮಿಕತೆಯ ತುದಿ ಮುಟ್ಟಿದ ಮಹಾನ್ ಪುರುಷರ ವಿಷಯವನ್ನೂ ಚರ್ಚಿಸುತ್ತಾರೆ. ಆದರೆ ಸ್ವತಃ ನಾವು ಕಂಡಲ್ಲದೆ, ಅನುಭವಿಸದೆ ಯಾವುದನ್ನೂ ಒಪ್ಪುವ ಅಗತ್ಯವಿಲ್ಲ ಎನ್ನುವುದು ಅವರ ನಿಲುವು. ಹಾಗೆಯೇ ಆ ಮಹಾನ್ ಪುರುಷರು ತಮ್ಮ ನಂಬಿಕೆಯಿಂದ ಒಂದು ರೀತಿಯ ಭ್ರಮೆಗೆ (hallucination) ಒಳಪಟ್ಟಿರಬಹುದಾದ ಸಾಧ್ಯತೆಯನ್ನೂ ವೈಜ್ಞಾನಿಕ ದೃಷ್ಟಿಕೋನದಿಂದ ವಿವರಿಸುತ್ತಾರೆ.
ಸನಾತನ ಕಾಲದಿಂದ ನಮ್ಮ ಧರ್ಮ ಹೇಳಿದ ರೀತಿ ಸನ್ಮಾರ್ಗದಲ್ಲಿ ನಡೆದು, ಯಾರಿಗೂ ಹಾನಿ ಮಾಡದೇ, ಬಂದದ್ದೆಲ್ಲಾ ಅನುಭವಿಸಿ, ಕಷ್ಟವನ್ನು ಯಾವುದೋ ಹಳೆಯ ಕರ್ಮವೆಂದು ಅನುಭವಿಸಬೇಕೆಂದು ಹೇಳುವ ಸಾತ್ವಿಕ ಮಾನವರನ್ನು ಅವರು ಗೌರವಿಸುತ್ತಾರಾದರೂ ಮಾನವ ಸೇವೆಗಿಂತ ದೇವರ ಸೇವೆಯಲ್ಲಿ ಹೆಚ್ಚು ಶ್ರದ್ಧೆ ತೋರುವ ಈ ಸಾತ್ವಿಕ ಆಸ್ತಿಕರ ಧೋರಣೆಯನ್ನು ಒಪ್ಪುವುದಿಲ್ಲ. ಅವರಿಗಿಂತ ಮಾನವ ಸೇವೆಯಲ್ಲಿ ತೊಡಗಿರುವ ಮಾನವರ ಮಾನವೀಯತೆ ಹಿರಿದೆಂದು ಹೇಳುತ್ತಾರೆ.
ಒಟ್ಟಿನಲ್ಲಿ ದೇವರು ಇಲ್ಲ ಎನ್ನುವುದು ಒಂದು ವಿಷಾದಭಾವ, ನಾಸ್ತಿಕತೆ ತಮ್ಮ ಮೇಲ್ಮೈ ಎಂಬ ಮೇಲರಿಮೆ ಅಲ್ಲ, ಇಷ್ಟೆಲ್ಲಾ ಅನ್ಯಾಯ ನಡೆಯುವ ಜಗತ್ತಿನಲ್ಲಿ ನಮ್ಮ ಕಲ್ಪನೆಯಂತೆ ಸರ್ವ ಶಕ್ತ ದೇವರು ಯಾಕಿಲ್ಲ ಎಂಬ ನಿರಾಸೆ ಎನ್ನುತ್ತಾರವರು.





Comments