ತಲ್ಲಣ
- vidyaram2
- Dec 8, 2023
- 2 min read

ಮೊಗೆದಷ್ಟೂ ಹೊಸ ಹೊಸ ಒಳನೋಟಗಳನ್ನು, ಮಗ್ಗುಲುಗಳನ್ನು ತೋರುತ್ತಲೇ ಹೋಗುವ ನಮ್ಮ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳು ಇಂದಿಗೂ ನಿತ್ಯನೂತನವಾಗಿವೆ. ಮಾನವನ ಮನೋಭೂಮಿಕೆಯ ಸೂಕ್ಷ್ಮಗಳನ್ನು ಅಳೆಯುವ, ಅವನ ವಿಕಸನದ ಹಾದಿಯನ್ನು ಅವಲೋಕಿಸುವ ಮಾನದಂಡಗಳಾಗಿವೆ. ಅದರಲ್ಲೂ ಮಹಾಭಾರತದ ಹರಹು ಮಹಾನ್ ಆದುದು. ಅದರಲ್ಲಿ ಬರದಂತಹ ಒಂದು ವ್ಯಕ್ತಿತ್ವ ಇಂದಿಗೂ ಭೂಮಿಯ ಮೇಲಿರಲು ಸಾಧ್ಯವಿಲ್ಲ ಎಂದರೆ ತಪ್ಪಾಗದಷ್ಟು ವಿಸ್ತಾರವಾದ ವ್ಯಾಪ್ತಿ ಅದರದ್ದು. ಆದ್ದರಿಂದಲೇ ನಮ್ಮ ಕವಿಗಳಿಗೆ, ಸಾಹಿತಿಗಳಿಗೆ ಈ ಮಹಾಕಾವ್ಯಗಳು ನಿರಂತರವಾಗಿ ಪ್ರೇರಣೆ ಒದಗಿಸುತ್ತಾ ಬಂದಿವೆ. ಗೊತ್ತಿರುವ ಅದೇ ಕಥೆ, ಉಪಕಥೆ, ಪಾತ್ರಗಳು, ಪ್ರತಿಯೊಬ್ಬ ಲೇಖಕನ ದೃಷ್ಟಿಕೋನದಲ್ಲಿ ಹೊಸದೊಂದು ರೂಪ ತಳೆದು ಬರುತ್ತವೆ.
ಸುರೇಖಾ ಭೀಮಗುಳಿ ಅವರ 'ತಲ್ಲಣ'ವೂ ಕೂಡ ಅಂತಹ ಒಂದು ಪ್ರಯತ್ನ. ಅವರ ಮೊದಲ ಕೃತಿ 'ಅಂತರಂಗ'ದಲ್ಲಿ ಮೂಡಿದ 48 ಪಾತ್ರಗಳ ವಿಶ್ಲೇಷಣೆ ನನಗೆ ಬಹಳ ಹಿಡಿಸಿತ್ತು. ಸಾಮಾನ್ಯವಾಗಿ ವಿಶ್ಲೇಷಣೆಗೆ ಒಳಪಡುವ ಪ್ರಮುಖ ಪಾತ್ರಗಳ ಜೊತೆಗೆ ಪ್ರಮುಖವಲ್ಲದ ಅನೇಕ ಪಾತ್ರಗಳ ಅಂತರಂಗದ ಜಿಜ್ಞಾಸೆಗಳನ್ನು ಸುರೇಖಾ ಅವರು ಮನೋಜ್ಞವಾಗಿ ಚಿತ್ರಿಸಿದ್ದರು. ತಲ್ಲಣದಲ್ಲಿ ಏಳು ಪ್ರಮುಖ ಪಾತ್ರಗಳ ಮನದೊಳಗಿನ ತಾಕಲಾಟಗಳನ್ನು ನೀಳ್ಗತೆಗಳಾಗಿ ಸಾದರಪಡಿಸಿದ್ದಾರೆ. ಇಲ್ಲಿ ಬರುವ ಪಾತ್ರಗಳ ಕುರಿತು ಅನೇಕ ಕಥೆ, ಕಾದಂಬರಿಗಳಲ್ಲಿ ವಿಶ್ಲೇಷಣೆಗಳನ್ನು ಓದಿರುವುದರಿಂದ ಈ ಕೃತಿ 'ಅಂತರಂಗ'ದಷ್ಟು ವಿಶಿಷ್ಟ ಅನ್ನಿಸದಿದ್ದರೂ ಆಸಕ್ತಿಯಿಂದ ಓದಿಸಿಕೊಂಡುಹೋಗುವ ಸುರೇಖಾ ಅವರ ಅಚ್ಚುಕಟ್ಟಾದ ಬರವಣಿಗೆಯ ಶೈಲಿಯಿಂದ ಆಪ್ತವೆನಿಸುತ್ತದೆ, ಎಲ್ಲೂ ನೀರಸವೆನಿಸುವುದಿಲ್ಲ.
ಕಥೆ ಹೇಳುವ ಕಲೆ ಸುರೇಖಾ ಅವರಿಗೆ ಒಲಿದಿದೆ. ಪಾತ್ರದೊಳಹೊಕ್ಕು ತಲ್ಲೀನರಾಗಿ ಅವರು ಸೃಷ್ಟಿಸುವ ಪಾತ್ರಗಳು ತಮ್ಮೊಳಗನ್ನು ತೆರೆದಿಡುತ್ತ ಓದುಗರನ್ನೂ ಹಾಗೆಯೇ ಸೆಳೆದು ಹಿಡಿದಿಟ್ಟುಕೊಳ್ಳುತ್ತವೆ. ಓದುಗ ಆ ಪಾತ್ರಗಳ ಒಳಗುದಿಯನ್ನು ಕೇಳುವ ಕನಿಕರದ ಕಿವಿಯಾಗುತ್ತಾನೆ; ಪಾತ್ರಗಳು ಎತ್ತುವ ಉತ್ತರವಿಲ್ಲದ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಅಸಹಾಯಕನಾಗುತ್ತಾನೆ; ಪಾತ್ರದ ತಲ್ಲಣವನ್ನು ತಾನೂ ಅನುಭವಿಸುತ್ತಾನೆ.
ಸತ್ಯವತಿ, ಪಾಂಚಾಲಿ, ಕುಂತಿ ಮೊದಲಾದ ಕಥೆಗಳಲ್ಲಿ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಗೆ ಆಗುವ ಅನ್ಯಾಯಗಳ ಕುರಿತು ಹೆಣ್ಣಿನ ಮನಸ್ಸಿನಲ್ಲಿ ಏಳುವ ಸಹಜ ಪ್ರಶ್ನೆಗಳನ್ನು ಲೇಖಕಿ ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. ಭೀಷ್ಮ, ಶಂತನು ಮೊದಲಾದವರು ತಾವು ಹೆಣ್ಣಿಗೆ ಮಾಡಿದ ಅನ್ಯಾಯಗಳನ್ನು ನೆನೆದು ಮರುಗುವುದು, ಪಶ್ಚಾತ್ತಾಪ ಪಡುವುದನ್ನು ಚಿತ್ರಿಸಿದರೂ ಸರಿತಪ್ಪುಗಳ ಗೋಜಲುಗಳು ಪರಿಸ್ಥಿತಿಯ, ವಿಧಿಯ ಆಟ; ಅದಕ್ಕೆ ಎಲ್ಲರೂ ಕೈಗೊಂಬೆಗಳು ಎಂದು ಮಾರ್ಮಿಕವಾಗಿ ಸಾರಿದ್ದಾರೆ. ಆ ಕಾಲಘಟ್ಟದಲ್ಲಿ ನಡೆದಿರಬಹುದಾದ ಘಟನಾವಳಿಗಳನ್ನು ಇದೇ ಸರಿ, ಇದು ತಪ್ಪು ಎಂಬ ಪೊಳ್ಳು ಧೋರಣೆಯಿಂದ ನೋಡದೇ ಸ್ಥಿತಪ್ರಜ್ಞತೆಯಿಂದ ನೋಡಿರುವುದು ಲೇಖಕಿಯ ಪ್ರಬುದ್ಧತೆಯನ್ನು ಸಾರುತ್ತದೆ. ಸಮಕಾಲೀನ ಬದುಕಿಗೂ ಅನ್ವಯಿಸುವ ವಿಚಾರಗಳನ್ನು ಅಲ್ಲಲ್ಲಿ ತರುತ್ತಾರೆ. ಅಭಿಮಾನ, ಅಹಂಕಾರ, ಸ್ವಾಭಿಮಾನಗಳಿಗಿರುವ ಸಣ್ಣ ಅಂತರವನ್ನು ಭೀಷ್ಮ ಮರಣ ಶಯ್ಯೆಯಲ್ಲಿರುವಾಗ ಶಂಕೆಯಿಂದ ವಿವೇಚಿಸುವ ರೀತಿ, ಯುಧಿಷ್ಠಿರನ ಅತಿಯಾದ ಧರ್ಮಪಾಲನೆ, ಇತರರ ಕುರಿತು ಯೋಚಿಸದೆ ಮಾಡುವ ನಿರ್ಧಾರ, ಅದನ್ನು ಪ್ರಶ್ನಿಸದೆ ಬೆಳೆಸಿದ ಕುಂತಿಯ ರೀತಿಯನ್ನು ಪಾಂಚಾಲಿ ವಿವೇಚಿಸುವ ಪರಿ... ನಾವು ಒಳ್ಳೆಯತನ ಎಂದುಕೊಳ್ಳುವ ಅಭಿಮಾನಪಡುವ ನಡತೆ ಕೂಡ ಇತರರಿಗೆ ಹೇಗೆ ಮುಳ್ಳಾಗಬಹುದು ಎಂದು ತೋರಿಸುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ವಿಚಾರದಲ್ಲಿ ಪೋಷಕರು ಎಷ್ಟು ಜಾಗೃತರಾದರೂ ಸಾಲದು ಎಂಬುದನ್ನು ತೋರಿಸುತ್ತದೆ.
ಕೊನೆಯಲ್ಲಿ ಬದುಕೆಂಬ ಯಜ್ಞಕ್ಕೆ ಈ ಪಾಂಚಾಲಿ ಒಂದು ಹವಿಸ್ಸು ಅಷ್ಟೇ ಎನ್ನುತ್ತಾ ಓದುಗನನ್ನೂ ಆ ಚಿಂತನೆಗೆ ಒಳಪಡಿಸಿದ್ದಾರೆ. ಎಲ್ಲರ ಬದುಕು ಒಂದು ಯಜ್ಞವೇ. ನಮಗೆ ತೋಚಿದ ರೀತಿಯಲ್ಲಿ ಒಳಿತು, ಕೆಡಕುಗಳನ್ನು ಮಾಡುತ್ತಲೇ, ಪ್ರಪಂಚವನ್ನು ತಮ್ಮ ದೃಷ್ಟಿಕೋನದಲ್ಲಿ ನೋಡುತ್ತಾ ಸುಖದುಃಖಗಳನ್ನು ತಂದುಕೊಂಡು ನಮಗರಿವಿಲ್ಲದಂತೆ ಬದುಕಿಗೆ ಹವಿಸ್ಸಾಗಿ ಹೋಗುತ್ತೇವೆ. ನಡುನಡುವೆ ನಿಂತು ಅವಲೋಕಿಸಿ ವಿವೇಚಿಸಿ ಸಾಧ್ಯವಾದಷ್ಟು ಇತರರಿಗೆ ಕೆಡುಕು ಮಾಡದೇ, ಪಶ್ಚಾತ್ತಾಪವಿಲ್ಲದ ಬದುಕು ಬದುಕಿ ಹೋಗುವ ಆಶಯವೊಂದೆ ಗುರಿ.
ಮೊದಲು ಸಣ್ಣ ಕಥೆ, ಈಗ ನೀಳ್ಗತೆ ಬರೆಯುವುದರಲ್ಲಿ ಯಶಸ್ವಿಯಾಗಿರುವ ಸುರೇಖಾ ಅವರು ಮುಂದೆ ಭೈರಪ್ಪನವರ ಪರ್ವದಂತೆ ಸಮಗ್ರ ಮಹಾಭಾರತದ ಚಿತ್ರಣವಿರುವ,ತಮ್ಮದೇ ವಿಭಿನ್ನ ವಿಶ್ಲೇಷಣೆಯಿರುವ ಕಾದಂಬರಿ ಬರೆಯುವ ನಿಟ್ಟಿನಲ್ಲಿ ಯೋಚಿಸಲಿ ಎಂದು ಹಾರೈಸುತ್ತೇನೆ.





Comments