ಜೀವ ಸ್ವರದ ಕುರಿತು ...
- vidyaram2
- Jul 30, 2022
- 3 min read
Updated: Mar 6, 2024
ಮುಂಬೈ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಮಾಡಬೇಕೆಂದು ನಿರ್ಧರಿಸಿ ಮೊದಲ ದಿನ ನಾನು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಎನ್.ಉಪಾಧ್ಯರನ್ನು ಭೇಟಿ ಮಾಡಲು ಹೋದಾಗ ಅವರು ಎರಡು ಪುಸ್ತಕಗಳನ್ನು ಕೊಟ್ಟು, 'ನೋಡಿ ಕಲಾ ಭಾಗ್ವತ್ ಅನ್ನುವ ಎಂ. ಎ ವಿದ್ಯಾರ್ಥಿನಿ ಬರೆದಿರೋ ಶೋಧ ಸಂಪ್ರಬಂಧಗಳು. ನಿಮಗೆಲ್ಲ ಸಹ ಈ ರೀತಿ ಎರಡು ಶೋಧ ಪ್ರಬಂಧ ಸಲ್ಲಿಸೋದು ಕಡ್ಡಾಯ' ಎಂದು ಹೇಳಿದರು. ನಾನು ಆ ಪುಸ್ತಕಗಳ ಗಾತ್ರ ನೋಡಿಯೇ ಹೆದರಿದೆ, ಇಷ್ಟೆಲ್ಲಾ ಎರಡು ವರ್ಷಗಳಲ್ಲಿ ಬರೆಯೋಕ್ಕೆ ನನ್ನ ಕೈಲಾಗುತ್ತಾ ಅಂತ! ಮನೆಗೆ ಬಂದು ನನ್ನ ಮೆಚ್ಚಿನ ವೈದ್ಯ, ಲೇಖಕರಾದ ಡಾ.ಬಿ.ಎಂ. ಹೆಗ್ಡೆ ಅವರ ಪುಸ್ತಕ ಮೊದಲು ಓದಿದೆ. ಅದು ಹೆಗಡೆ ಅವರ ಬದುಕಿನ ಬಗ್ಗೆ ಅವರಿಂದ, ಅವರ ಒಡನಾಡಿದವರಿಂದೆಲ್ಲಾ ತಿಳಿದು, ಅವರು ಬರೆದ ಪುಸ್ತಕಗಳ ಅಭ್ಯಾಸ ಮಾಡಿ ಸಾಕಷ್ಟು ಮಾಹಿತಿ ಕಲೆಹಾಕಿ ಬಹಳ ಒಪ್ಪವಾಗಿ ಸುಂದರವಾಗಿ ಬರೆದ ಸರಳವಾಗಿ ಓದಿಸಿಕೊಂಡು ಹೋಗುವ ಪುಸ್ತಕ. ಅದನ್ನು ಓದಿ, ನಾವೂ ಇದೆ ರೀತಿ ಬರೆಯಲು ಪ್ರಯತ್ನ ಮಾಡಬಹುದೇನೋ ಎಂಬ ಉತ್ಸಾಹ ಬಂತು...

ಆಮೇಲೆ ಬಹಳವೇ ಆಕರ್ಷಕ ಶೀರ್ಷಿಕೆಯುಳ್ಳ ಜಯಂತ ಕಾಯ್ಕಿಣಿ ಅವರ ಪ್ರಬಂಧ ಲೋಕವನ್ನು ಪರಿಚಯಿಸುವ 'ಜೀವ ಸ್ವರ' ಕೈಗೆತ್ತಿಕೊಂಡೆ. ಬಹುಮುಖ ಪ್ರತಿಭೆ ಇರುವ ಜಯಂತ್ ಕಾಯ್ಕಿಣಿಯವರ ಬಗ್ಗೆ ತಿಳಿಯದ, ಅವರನ್ನು ಮಾದ್ಯಮದಲ್ಲಿ ನೋಡದ, ಅವರ ಮಾತುಗಳನ್ನು ಒಮ್ಮೆಯಾದರೂ ಕೇಳದ ಕನ್ನಡಿಗರು ಇಲ್ಲವೇ ಇಲ್ಲ ಅಂತ ನನ್ನ ಅಭಿಪ್ರಾಯ. ಪತ್ರಿಕೆಗಳಲ್ಲಿ ಅವರ ಲೇಖನ, ಅಂಕಣಗಳನ್ನೋದಿ, T.Vಯಲ್ಲಿ ಅವರ ಸಂದರ್ಶನ, ಅವರು ನಡೆಸಿಕೊಟ್ಟ ಕಾರ್ಯಕ್ರಮಗಳನ್ನು ನೋಡಿರೋದು ಬಿಟ್ಟರೆ ನಾನು ಅವರ ಯಾವ ಪುಸ್ತಕವನ್ನೂ ಓದಿಲ್ಲ. ಅವರ ಆಕರ್ಷಕ ವ್ಯಕ್ತಿತ್ವ, ಮಾತಿನ ಚತುರತೆ, ಅವರ ಮಾತು, ಲೇಖನಗಳಲ್ಲಿ ಎದ್ದು ಕಾಣುವ ಅವರ ಪ್ರಾಮಾಣಿಕ ಸೂಕ್ಷ್ಮ ಸಂವೇದನಾಶೀಲ ಮನಸ್ಸು ಎಲ್ಲವೂ ನನ್ನನ್ನು ಆಕರ್ಷಿಸಿವೆ. ಹಾಗಾಗಿ ಈ ಪುಸ್ತಕ ಅವರ ವ್ಯಕ್ತಿತ್ವದ ಇನ್ನೂ ಕೆಲ ಮುಖಗಳ ಸಮಗ್ರ ಪರಿಚಯ ಮಾಡಿಕೊಡಬಹುದು, ಹಾಗೂ ಅವರ ಪುಸ್ತಕಗಳನ್ನು ಓದಲು ಪ್ರೇರೇಪಿಸಬಹುದು ಎಂಬ ಆಶಯದೊಂದಿಗೆ ಓದಲು ಶುರುಮಾಡಿದೆ.
ಡಾ.ಬಿ.ಎಂ. ಹೆಗ್ಡೆ ಪುಸ್ತಕದಂತೆ ಇದು ಆರಂಭದಲ್ಲಿ ನನ್ನನ್ನು ಸುಲಭವಾಗಿ ಓದಿಸಿಕೊಂಡು ಹೋಗಲಿಲ್ಲ! ಮೊದಲೆರಡು ಅಧ್ಯಾಯಗಳನ್ನು ಸಾಕಷ್ಟು ಏಕಾಗ್ರತೆಯಿಂದ ಸಾವಕಾಶವಾಗಿ ಓದಬೇಕಾಯಿತು:)
Dr B ಜನಾರ್ದನ ಭಟ್ ಅವರು ಧೀರ್ಘ ಮುನ್ನುಡಿಯ ಶುರುವಿನಲ್ಲಿ ಹೇಳಿದ ಸಾಲುಗಳು - ' ಈ ಕೃತಿ ನಮ್ಮ ಹಿರಿಯ ತಲೆಮಾರಿನ ವಿದ್ವಾಂಸರು ಎಂ. ಎ ಪದವಿಗೆ ಸಲ್ಲಿಸುತ್ತಿದ್ದ ಅಧ್ಯಯನ ಪ್ರಬಂಧಗಳ ನೆನಪು ತರುತ್ತದೆ ' - ಗಮನಾರ್ಹ. ಸಾಹಿತ್ಯ ಇತಿಹಾಸದಲ್ಲಿ ಈ ಕೃತಿಗೆ ಹೋಲಿಸಬಹುದಾದ ಕೆಲವು ಪ್ರಬಂಧಗಳನ್ನು ಅವರು ಉಲ್ಲೇಖ ಮಾಡಿರುವುದು, ಹಿರಿಯ ತಲೆಮಾರಿನಲ್ಲಿ ಇದ್ದ ಸಾಹಿತ್ಯದ ಅಭಿರುಚಿ, ಶ್ರದ್ಧೆ, ಜ್ಞಾನದ ಮಟ್ಟ ನಮ್ಮ ತಲೆಮಾರುಗಳಲ್ಲಿ ಇಲ್ಲ ಎಂಬುದಕ್ಕೆ ಕಲಾರವರು ಅಪವಾದ ಎಂದು ಸ್ಪಷ್ಟವಾಗುತ್ತದೆ, ಹೆಮ್ಮೆಯಾಗುತ್ತದೆ.
ಓದುತ್ತಾ ಹೋದಂತೆ ಈ ಕೃತಿ ಹೊರತರುವುದು ಖಂಡಿತಾ ಸುಲಭದ ಕೆಲಸವಾಗಿರಲಿಲ್ಲ ಎಂದು ಸುಲಭವಾಗಿ ಅರ್ಥವಾಗುತ್ತದೆ! ಒಂದು ಕಾದಂಬರಿ, ಒಂದು ಜಾಗ ಅಥವಾ ಒಂದು ವ್ಯಕ್ತಿತ್ವದ ಕುರಿತಂತೆ ಅಭ್ಯಸಿಸಿ ಬರೆಯಲು ಒಂದು natural flow ತಾನಾಗೇ ಒದಗುತ್ತದೆ. ಆದರೆ ಹಲವು ಕಾಲಘಟ್ಟಗಳಲ್ಲಿ, ಹಲವು ಹಿನ್ನೆಲೆ-ಪರಿಸರ, ಹಲವು ಭಾವನೆಗಳು-ಸಂವೇದನೆಗಳನ್ನು ಒಳಗೊಂಡ ಹಲವು ಹತ್ತು ಪ್ರಬಂಧಗಳನ್ನು ಹೊತ್ತ ಎಲ್ಲಾ ಕೃತಿಗಳನ್ನು ಅಭ್ಯಸಿಸಿ, ವಿಂಗಡಿಸಿ, ಅದನ್ನು ಬೇರೆ ಬೇರೆ ನೆಲೆಗಳಲ್ಲಿ ವಿಮರ್ಶಿಸಿ, ಅದಕ್ಕೆ ಚೊಕ್ಕವಾಗಿ flow ನೀಡುವುದು ನಿಜಕ್ಕೂ ಒಂದು ಚಾಲೆಂಜ್. ಅದನ್ನು ಕಲಾ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರು ಪ್ರಬಂಧದ ಇತಿಹಾಸ, ಅದರ ಹುಟ್ಟು, ಬೆಳವಣಿಗೆ, ಅದರ ಪ್ರಕಾರಗಳು, ಯಾವ ಭಾಷೆಗಳಲ್ಲಿ ಅದರ ಬೆಳವಣಿಗೆ ಹೇಗೆ, ನಮ್ಮ ಸಾಹಿತಿಗಳಲ್ಲಿ ಯಾರ್ಯಾರು ಅದರ ಬಗ್ಗೆ ಒಲವು ತಾಳಿ ಅದನ್ನು ಬೆಳೆಸಿದ್ದಾರೆ....ಆಮೇಲೆ ಜಯಂತರ ಬಗ್ಗೆ, ಅವರ ಕೃತಿಗಳ, ಪ್ರಬಂಧಗಳ ಬಗ್ಗೆ, ಇನ್ಯಾರು ಏನೇನು ಹೇಳಿದ್ದಾರೆ, ಇನ್ಯಾವುದೋ ದೊಡ್ಡ ವ್ಯಕ್ತಿ ಹೇಳಿರುವ ಕೆಲವು ಉಲ್ಲೇಖಗಳು ಜಯಂತರಿಗೆ ಹೇಗೆ ಹೊಂದುತ್ತವೆ - ಇದೆಲ್ಲವನ್ನೂ ಅಚ್ಚುಕಟ್ಟಾಗಿ ಹೇಳಿದ್ದಾರೆ. ಇದರ ಹಿಂದೆ ಅವರ ಪರಿಶ್ರಮ ಎಷ್ಟಿದೆ ಅಂತ ಕೊನೆಯಲ್ಲಿ ವಾಂಗ್ಮಯ ಸೂಚಿ ನೋಡಿದರೆ ತಿಳಿಯುತ್ತದೆ.
ಅಬ್ಬಾ...ಕಲಾರವರ ಈ ಕಲಾಕೃತಿ ಬಹಳವೇ ಮೇಲುಸ್ತರದಲ್ಲಿ ಮೂಡಿಬಂದಿದೆ ಅಂತ ಆರಂಭದ ಎರಡು ಅಧ್ಯಾಯಗಳನ್ನು ಓದಿಯೇ ಅನ್ನಿಸಿತು! ಅದಕ್ಕೆ ಮೊದಲು ಅವರು ತಮ್ಮ ಅಂತರಂಗ ತೆರೆದಿಟ್ಟ 'ಅಂತರಂಗದಿಂದ' ಭಾಗದ ಮೊದಲ ಪ್ಯಾರಾದಲ್ಲೇ ಕಲಾರವರ ಸಾಹಿತ್ಯ ಸಾಮರ್ಥ್ಯ ತಿಳಿಯಿತು. ಅವರ ಉನ್ನತ ಮಟ್ಟದ ಭಾವನಾತ್ಮಕತೆ, ಮತ್ತು ಅದನ್ನು ಅವರು ಬಿಚ್ಚಿಟ್ಟ ರೀತಿ ಸೊಗಸಾಗಿದೆ. ಸಾಹಿತಿಯ ವಿವೇಚನೆಯಿಂದ ತ್ರಿಕಾಲ ಪ್ರಜ್ಞೆಯ ವೃತವು ಶಕ್ತಿಯಾಗಿ ಹೊರಹೊಮ್ಮುವುದರ ಬಗ್ಗೆ, ಸಾಹಿತ್ಯ ಸೃಷ್ಟಿಸುವಾಗ ಅವನು ಲೌಕಿಕ ವ್ಯಕ್ತಿತ್ವವನ್ನು ಮೀರಿ ನಿಲ್ಲುವ ಬಗ್ಗೆ, ಅಂತ ಸಾಹಿತ್ಯ ಓದಿ ಒಳಗಿನ ಅಹಂಕಾರ ಕಳೆದುಹೋಗುವ ಬಗ್ಗೆ ಅವರು ಬರೆದಿರುವುದು ಓದಿದರೆ, ಬಹಳ ಓದಿ, ಚಿಂತನೆ-ಮಂಥನ ನಡೆಸಿ ಅರಿವೇ ಗುರುವಾಗುವುದನ್ನು ಸ್ವತಃ ಕಂಡುಕೊಂಡ ದಾರ್ಶನಿಕರಂತೆ ನನಗವರು ಕಂಡರು. ಜಯಂತರ ಪ್ರಬಂಧಗಳನ್ನು ವಿಶ್ಲೇಷಿಸಲು ಇಂತಹ ಉನ್ನತ, ಸೂಕ್ಷ್ಮ ಸಂವೇದನೆ ಹೊಂದಿರುವ ಇವರು ಸರಿಯಾದ ಆಯ್ಕೆ...(kudos to ಉಪಾಧ್ಯ ಸರ್ for that)!
'ಬದುಕಿನೊಂದಿಗೆ ಮೂಡಿದ ಬರಹ ' ಅಧ್ಯಾಯದಲ್ಲಿ ಜಯಂತರ ಇದುವರೆಗಿನ ಜೀವನದ ಚಿತ್ರಣವನ್ನು ಅಂದವಾಗಿ ಬಿಚ್ಚಿಟ್ಟಿದ್ದಾರೆ. ಅವರ ವೈಯುಕ್ತಿಕ ಬದುಕು, ಸಾಧನೆಗಳೆಲ್ಲವುದರ ಕಿರು ಪರಿಚಯ ಇಲ್ಲಿದೆ.
ಇನ್ನುಳಿದ ಐದು ಅಧ್ಯಾಯಗಳಲ್ಲಿ ಈ ಶೋಧದಲ್ಲಿ ಅಧ್ಯಯನಕ್ಕೆ ಒಳಪಡಿಸಿದ ಜಯಂತರ ನಾಲ್ಕು ಕೃತಿಗಳಲ್ಲಿನ (ಬೊಗಸೆಯಲ್ಲಿ ಮಳೆ, ಶಬ್ದತೀರ, ಗುಲ್ ಮೋಹರ್ ಮತ್ತು ಟೂರಿಂಗ್ ಟಾಕೀಸ್) ಪ್ರಬಂಧಗಳ ಕುರಿತು ವಿವರ, ವಿಶ್ಲೇಷಣೆ, ಟೀಕೆ-ಟಿಪ್ಪಣಿಗಳು ಇವೆ. ಅವುಗಳನ್ನು ಶಿಸ್ತಿನ ಅಧ್ಯಯನದಿಂದ ಬದುಕಿನ ವಿನ್ಯಾಸ, ಲಲಿತ ಪ್ರಬಂಧ, ಲಘು ಪ್ರಬಂಧ ಇತ್ಯಾದಿ ತಲೆಬರಹದ ಅಡಿಯಲ್ಲಿ ವಿಂಗಡಿಸಿದ್ದಾರೆ. ಎಲ್ಲಾ ಅಧ್ಯಾಯಗಳಲ್ಲಿ ಜಯಂತರ ಬರಹಗಳ ರೀತಿ, ವಿಶೇಷತೆಯನ್ನು ಎತ್ತಿ ತೋರಿಸಿದ್ದರೂ ಕೊನೆಯ ಅಧ್ಯಾಯದಲ್ಲಿ ಮತ್ತೆ ಜಯಂತರ ಬರಹಗಳ ಅನನ್ಯತೆಯನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ.
ಇನ್ನು ಜಯಂತರ ಪ್ರಬಂಧಗಳ ವಿಷಯಗಳು ಅದೇನು ವೈವಿಧ್ಯ,ವಿಶಾಲ! ಅವರು ಕೊಡುವ ಶೀರ್ಷಿಕೆಗಳು ಸಹ ಬಹಳ ಆಕರ್ಷಣೀಯ. ಮುದ ಕೊಡುವ ಕ್ಷುಲ್ಲಕವೆಂದು ನಾವು ಗಮನವೂ ಕೊಡದ ದೈನಂದಿನ ವಿಷಯಗಳಿಂದ ಹಿಡಿದು, ಸಮಾಜದ ಓರೆಕೋರೆಗಳು, ನತದೃಷ್ಟರು ಅನುಭವಿಸುವ ನೋವು, ಮಾನವನಿಂದ ಪ್ರಕೃತಿ, ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳು, ಅವರ ಜೀವನದಲ್ಲಿ ಆದರ್ಶಪ್ರಾಯರಾದ ವ್ಯಕ್ತಿಗಳ ಕುರಿತು, ಸೂಕ್ಷ್ಮ ಸಂವೇದನೆಯ ಮಾನವ ಸಂಬಂಧಗಳು (ಅಂಚೆಯಣ್ಣ, ಹವಾಯಿ ಚಪ್ಪಲಿ ದೋಸ್ತ ) ,ಸಿನೆಮಾನುಭೂತಿ ಹೀಗೆ ಅವರ ಭಾವನಾ ಲಹರಿಯಲ್ಲಿ ಬಾರದ ವಿಷಯಗಳಿಲ್ಲ. ಮರಕ್ಕೆ ನೇತು ಹಾಕಿ ಮಾರಾಟವಾಗುತ್ತಿರುವ ನೈಟಿಗಳು, ಹೆದ್ದಾರಿ, ಬಸ್ ಸ್ಟ್ಯಾಂಡ್ ಎಲ್ಲವೂ ಜಯಂತರ ಲೇಖಣಿಯಲ್ಲಿ ಜೀವ ತಳೆದು ನಮ್ಮೊಂದಿಗೆ ಮಾತನಾಡುತ್ತವೆ. "ಯಾರದೋ ಕನಸಿನಲ್ಲಿ ನಾವ್ಯಾಕೆ ಊಳಿಗರಾಗಬೇಕು? ನಮ್ಮ ಕನಸು ನಾವೇ ಕಾಣುವ ಅವಕಾಶವಿರುವಾಗ" ಎನ್ನುವ ಅವರ ಧೋರಣೆ ಎಷ್ಟು ಅದ್ಭುತ! ಮುಂಬೈನ ಅವರ ಅನುಭವಗಳು ಓದಲು ನಮಗೆ ರಸದೂಟ. ರಸ್ತೆ ಬದಿಯ ಬಡ/ಅನಾಥ ಮಕ್ಕಳು, ಪಿಕ್ ಪಾಕೆಟ್, ಹೊತ್ತಿನ ಅನ್ನಕ್ಕೆ ಬೆವರು ಸುರಿಸುವ ಜನಸಂದಣಿಯನ್ನೆಲ್ಲ ಅವರು ಸೂಕ್ಷ್ಮವಾಗಿ ಅವಲೋಕಿಸಿ ಅತೀ ವೈಭವೀಕರಿಸದೆ ನೈಜವಾಗಿ ಅರ್ಥೈಸಿರುವ ರೀತಿ ಮನಸ್ಸಿಗೆ ಹಿಡಿಸುತ್ತದೆ.
ಒಮ್ಮೆ ಓದಿದ ನಂತರ ಮನದಲ್ಲಿ ಉಳಿದ ಕೆಲವು ವಿಷಯಗಳು ಇಂತಿವೆ:
ಬಾಲ್ಯದ ಮುಗ್ಧ ಕನಸಿನ ಲೋಕ - ಬಸ್ಸಿನ ದೀಪಾವಳಿ ಆಚರಣೆ, ರಥಬೀದಿಯ ಬಸ್ ಸ್ಟ್ಯಾಂಡ್, ಹೆದ್ದಾರಿಯ ಕುರಿತಂತೆ ಇತ್ಯಾದಿ
ಚಿಕ್ಕ ಪುಟ್ಟ ಕೌಟುಂಬಿಕ ರಸಮಯ ಕ್ಷಣಗಳು - ಸಂಜೆ ವೇಳೆಯಲ್ಲಿ ಎಲ್ಲರೂ ಒಟ್ಟು ಕುಳಿತು ಭಜನೆ ಮಾಡುವಾಗ ಉಂಟಾಗುವ ವಿಶೇಷ ಅನುಭೂತಿ, ಹೆಚ್ಚುವ ಬಾಂಧವ್ಯ, ಬಾನುಲಿಯ ಹಾಡುಗಳ ಕೇಳುವ ನಿರಂಕುಶ ಆನಂದ, ರಾತ್ರಿಯ ವೇಳೆ ಚಲನಚಿತ್ರ ನೋಡಿ ಹೊರಬಂದಮೇಲೂ ಇನ್ನೂ ಅದರ ಗುಂಗಿನಲ್ಲಿ ಕಳೆಯುವ ಮಧುರ ಕ್ಷಣಗಳು .. ಇತ್ಯಾದಿ
ಸಮಾಜದ ಕರಾಳ ಮುಖ, ಕ್ರೌರ್ಯ - ಕಾಮಾಟಿಪುರದಲ್ಲಿ ಹೆಣ್ಣು ಮಗು ಜನಿಸಿದಾಗ ಸಿಹಿ ಹಂಚುವಿಕೆ, ವಿಕಾರವಾದ ಮೃತ ಶರೀರವನ್ನು ವೈಭವೀಕರಿಸಿ ತೋರಿಸುವ ಮಾಧ್ಯಮಗಳ ಅಮಾನವೀಯತೆ, ಅರುಣಾ ಶಾನುಭಾಗ ಅವರ ಕಥೆ ಇತ್ಯಾದಿ.
ಒಟ್ಟಿನಲ್ಲಿ ಈ ಕೃತಿ, ಸಾಹಿತ್ಯ ಅಧ್ಯಯನ ಮಾಡುವವರಿಗೆ, ಆಸಕ್ತರಿಗೆ ಪ್ರಬಂಧ ಪ್ರಕಾರದ ಬಗ್ಗೆ ಉಪಯುಕ್ತ ಮಾಹಿತಿಗಳನ್ನು, ಜಯಂತರ ವ್ಯಕ್ತಿತ್ವ, ಬದುಕು, ಬರಹ ಮತ್ತು ಅವರ ಪ್ರಬಂಧಗಳ ಸಮಗ್ರ ಅವಲೋಕನವನ್ನು ಒದಗಿಸುವ ಉತ್ತಮ ಕೊಡುಗೆಯಾಗಿದೆ. ಕಲಾರವರು ಸಾಹಿತಿಯಾಗಿ ಇನ್ನೂ ಅನೇಕ ಇಂಥ ಕೊಡುಗೆಗಳನ್ನು ಕನ್ನಡಕ್ಕೆ ನೀಡಬೇಕು ಎಂದು ನನ್ನ ಆಶಯ. ಅಭಿನಂದನೆಗಳು.





Comments