ಚೋಮನ ದುಡಿ
- vidyaram2
- Sep 29, 2022
- 3 min read
Updated: Oct 1, 2022
'ಚೋಮನ ದುಡಿ' 1933 ರಲ್ಲಿ ಶಿವರಾಮ ಕಾರಂತರು ಬರೆದ ಕಾದಂಬರಿ. ಇಪ್ಪತ್ತಕ್ಕೂ ಹೆಚ್ಚು ಮರುಮುದ್ರಣ ಕಂಡ, ಚಲನ ಚಿತ್ರವಾಗಿ ಹಲವು ರಾಷ್ಟ್ರೀಯ ಪುರಸ್ಕಾರಗಳನ್ನು ಗಳಿಸಿದ ಪ್ರಸಿದ್ಧ ಕಾದಂಬರಿ ಇದು.

ಸ್ವಾತಂತ್ರ್ಯಪೂರ್ವದ ದಕ್ಷಿಣ ಕನ್ನಡ ಪ್ರಾಂತ್ಯದ ಹೊಲೆಯರ ಜನಜೀವನವನ್ನು ಮನಸ್ಸು ಕಲಕುವಂತೆ ಕಾರಂತರು ಕಟ್ಟಿಕೊಟ್ಟಿದ್ದಾರೆ. ವರ್ಣಾಶ್ರಮ ಪದ್ಧತಿ ವಿರೂಪಗೊಂಡು, ತನ್ನ ವಿಕೃತ ಅಟ್ಟಹಾಸದಿಂದ ಮೆರೆಯುತ್ತಿದ್ದ ಕಾಲವದು. ಶೂದ್ರರನ್ನು ಬಹು ಹೀನವಾಗಿ, ಅವರಿಗೆ ತಮ್ಮಂತೆ ಸಹಜ ಮಾನವ ಹಕ್ಕುಗಳೂ ಇಲ್ಲವೆಂದು ತಿಳಿದು ಸಮಾಜ ಅವರನ್ನು ಶೋಷಿಸುತ್ತಿದ್ದ ಕಾಲಘಟ್ಟ. ತಮ್ಮದೇ ಒಂದು ಗೇಣು ಭೂಮಿ ಹೊಂದಲು ಸಹ ಅವರು ಅರ್ಹರಲ್ಲವೆಂದೂ, ಮೇಲ್ವರ್ಗದವರ ಮನೆಯಲ್ಲಿ ಜೀತ ಮಾಡಿ, ಅವರು ನೀಡಿದ ಭಿಕ್ಷೆ, ಅವರು ತಿಂದು ಬಿಟ್ಟ ಎಂಜಲು ತಿನ್ನಲು ಅವರು ಯೋಗ್ಯರೆಂದೂ ಕ್ರೂರ ಸಮಾಜ ತೀರ್ಮಾನಿಸಿ ನಡೆಯುತ್ತಿದ್ದ ಕಾಲವದು. ಮಾನವೀಯತೆ ಶೂನ್ಯವಾಗಿ ನಾಗರೀಕತೆ ಈ ಕ್ರೂರ ಕಳಂಕ ಹೊತ್ತು ನಾಚಿದ ಕಾಲ. ಅಂತಹ ಕಾಲದಲ್ಲಿ ಚೋಮನೆಂಬ ಒಬ್ಬ ನತದೃಷ್ಟ ಹೊಲೆಯ ಮತ್ತು ಅವನ ಸಂಸಾರ ಪಟ್ಟ ಪಾಡುಗಳನ್ನು ಹೊಲೆಯ ಜನಾಂಗದ ಪ್ರತಿನಿಧಿತ್ವವಾಗಿ ಮನಕರಗುವಂತೆ ಚಿತ್ರಿಸಲಾಗಿದೆ. ಒಂದು ಚೂರು ಭೂಮಿಗಾಗಿ ಆಸೆ ಪಟ್ಟ ಚೋಮ, ಎಲ್ಲಾ ಕಷ್ಟಗಳನ್ನು ಗಟ್ಟಿತನದಿಂದ ಸಹಿಸುತ್ತಾ ಆ ಕನಸಿಗಾಗಿ ಬದುಕಿ, ಅದು ನನಸಾಗದೇ ಅಳಿಯುವ ದಾರುಣ ಕಥಾಹಂದರವೇ ಈ ಕಾದಂಬರಿಯ ತಿರುಳು.
ಕುಡಿದು, ದುಡಿ ಬಾರಿಸಿ ಮೈ ಮರೆಯುತ್ತಿದ್ದ ಚೋಮನೊಬ್ಬನ ಕತೆಯಲ್ಲ ಇದು. ಅವನು ಇಡೀ ಹೊಲೆಯ ಜನಾಂಗದ ಪ್ರತಿನಿಧಿಯಾಗಿ ನಿಲ್ಲುತ್ತಾನೆ. ಚೋಮನ ಮೇಲೆ ವಿಶ್ವಾಸ, ಕರುಣೆ ಇದ್ದರೂ ತಾಯಿಗೆ, ಸಮಾಜಕ್ಕೆ ಹೆದರಿ ಅವನಿಗೆ ಭೂಮಿ ನೀಡಲು ನಿರಾಕರಿಸುವ ಅವನ ಧಣಿ ಸಂಕಪ್ಪಯ್ಯ, ಅವನ ದೌರ್ಬಲ್ಯಗಳನ್ನು ಉಪಯೋಗಿಸಿ ಶೋಷಿಸುವ ಸೇರೇಗಾರ ಮನ್ವೇಲ, ಕಾಫಿ ಎಸ್ಟೇಟಿನ ಯಜಮಾನ, ಮಗು ನೀರಿನಲ್ಲಿ ಮುಳುಗಿ ಸಾಯುತ್ತಿದ್ದರೂ ಅದು ಅಸ್ಪೃಶ್ಯ ಮಗುವೆಂಬ ಕಾರಣಕ್ಕೆ ಅದನ್ನು ಬದುಕಿಸಲು ಹಿಂದೇಟು ಹಾಕುವ ಬ್ರಾಹ್ಮಣ ಯುವಕ - ಇವರೆಲ್ಲಾ ಮೇಲ್ವರ್ಗದ ಪ್ರತಿನಿಧಿಗಳಾಗಿ ತೆರೆದುಕೊಳ್ಳುತ್ತಾರೆ. ಮೇಲ್ವರ್ಗದ ಎಷ್ಟೋ ಜನ ಅಂತಃಕರಣ ಇದ್ದರೂ, ಮಾನವೀಯತೆ ಇದ್ದರೂ ಸಮಾಜವನ್ನು ಎದುರಿಸಿ ನಿಲ್ಲುವ ಧೈರ್ಯವಿಲ್ಲದೇ ಹೇಡಿಗಳಾಗಿ ಅಂಜಿ, ಆತ್ಮ ಸತ್ತವಾರಾಗಿ ಬದುಕುತ್ತಿದ್ದ ಚಿತ್ರಣವೂ ಕಾಣಿಸುತ್ತದೆ.
ಅಮ್ಮನನ್ನು ಕಳೆದುಕೊಂಡು ಸಂಸಾರದಲ್ಲಿ ಒಂಟಿ ಹೆಣ್ಣಾಗಿ ಅಪ್ಪನ, ಅಣ್ಣತಮ್ಮಂದಿರ ಆಸರೆಯಾಗಿ ನಿಂತು, ಮನೆ ಹೊರಗೂ ಒಳಗೂ ಮೈಮುರಿದು ದುಡಿದು, ಸೀಮಿತವಾಗಿ ಸಿಗುತ್ತಿದ್ದ ಅಕ್ಕಿಯನ್ನು ಜಾಣತನದಿಂದ ಉಪಯೋಗಿಸಿ ಸಂಸಾರದ, ನೆಂಟರ ಹೊಟ್ಟೆ ತುಂಬಿಸುತ್ತ, ತಮ್ಮಂದಿರಿಗೆ ತಾಯಿಯಾಗಿ ಕುಟುಂಬದವರ ಬಾಳಿಗೆ ದಿಕ್ಕಾದ ಗಟ್ಟಿಗಿತ್ತಿ ಬೆಳ್ಳಿ ಬಹಳ ಆಪ್ತಳಾಗುತ್ತಾಳೆ. ಚನಿಯ, ಗುರುವ, ನೀಲ, ಕಾಳರೂ, ಚೋಮನ ನಾಯಿ ಬಾಡು, ಅವನ ಎತ್ತುಗಳು - ಎಲ್ಲರೂ ನಮ್ಮ ಮನಸ್ಸಿನಲ್ಲಿ ನಿಲ್ಲುತ್ತಾರೆ.
ತಮಗೊದಗಿದ ವಿಪತ್ತು ಯಾವುದೋ ದೆವ್ವ,ಭೂತಗಳ ಶಾಪ, ದೇವರ ಶಾಪ ಎನ್ನುವ ಗಾಢ, ಮುಗ್ಧ ನಂಬಿಕೆಯೇ ಅವರ ಜೀವನಕ್ಕೆ ಶಕ್ತಿ ಕೊಡುತ್ತಿದ್ದುದು ಗಮನಾರ್ಹ ವಿಷಯ. ಕೊನೆಯಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಮಗ ಗುರುವನಿಗೆ ಭೂಮಿ ಸಿಕ್ಕಿದ್ದನ್ನು ನೆನೆದು, ಮಗಳೂ ಒಪ್ಪಿದ ಮೇಲೆ, ಅವನ ಕನಸು ಸಾಕಾರಕ್ಕಾಗಿ ಮತಾಂತರಕ್ಕೆ ಮುಂದಾಗಿ, ಕೊನೆಗೆ ಒಂದು ಗೇಣು ಭೂಮಿಯ ಆಸೆಗೆ ಮುಪ್ಪಿನ ಕಾಲಕ್ಕೆ ಬೇರೆ ದೇವರು ಬೇಕಾಯಿತೇ ಎಂದು ತಿವಿದ ಅವನ ಆತ್ಮಸಾಕ್ಷಿಗೆ ಬೆಲೆಗೊಟ್ಟು ಗುರುವನನ್ನು ಭೇಟಿ ಮಾಡದೇ ಹಿಂದಿರುಗುತ್ತಾನೆ. ಎಂಥಾ ಕಷ್ಟದಲ್ಲಿಯೂ ತಮ್ಮನ್ನು ಹೀನಾಯವಾಗಿ ನಡೆಸಿಕೊಂಡ ತಮ್ಮ ಧರ್ಮದ ವಿಷಯದಲ್ಲಿ ಈ ಅಗಾಧ ನಂಬಿಕೆ, ವಿಶ್ವಾಸಗಳ ಆಳವನ್ನು ಈ ದೃಶ್ಯದಲ್ಲಿ ಕಾರಂತರು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಅಂತಹ ಆಳ ನಂಬಿಕೆಯೇ ಆ ದುರ್ದೈವಿಗಳಿಗೆ ಜೀವನ ಪ್ರೀತಿ, ಸಹನೆ, ಚೈತನ್ಯ ಕೊಟ್ಟಿತ್ತೇನೋ ಎನ್ನಿಸುತ್ತದೆ.
ತನ್ನ ಮನದ ಹತಾಶೆಯೇ ಈರ್ಷ್ಯೆ, ಕೋಪವಾಗಿ ಪರಿವರ್ತಿತವಾದಾಗ ತನ್ನ ಎತ್ತುಗಳಿಗೆ, ಮಕ್ಕಳಾದ ಕಾಳ, ನೀಲರಿಗೆ ಚೋಮ ಹೊಡೆದು, ಬಡಿದು ದಂಡಿಸುವ ದೃಶ್ಯವೂ ಹೃದಯವಿದ್ರಾವಕವಾಗಿ ಮೂಡಿ ಬಂದಿದೆ.
ತನ್ನ ವಯಸ್ಸಿಗೆ ಮೀರಿದ ಸ್ಥಿತಪ್ರಜ್ಞತೆ ತೋರುತ್ತಾ, ಹತಾಶೆಯಲ್ಲಿ ಆಗಾಗ ಕುಗ್ಗಿ ಹೋಗುತ್ತಿದ್ದ ತಂದೆಗೆ ಇರುವುದರಲ್ಲಿ ನೆಮ್ಮದಿಯಾಗಿ ಇರೋಣವೆಂದೂ, ಒಳ್ಳೆಯ ಧಣಿಗಳನ್ನು ಪಡೆದ ನಾವೇ ಪುಣ್ಯವಂತರೆಂದೂ ಧನಾತ್ಮಕ ದೃಷ್ಟಿಕೋನ, ಧೈರ್ಯ ನೀಡುತ್ತಿದ್ದವಳು ಬೆಳ್ಳಿ. ತನ್ನ ವಯೋಸಹಜ ದೇಹದ ಕಾಮನೆಗಳನ್ನು ತೀರಿಸಿಕೊಳ್ಳಲು ಅವಳು ಮನ್ವೇಲನ ಸಂಗ ಮಾಡಿದ್ದನ್ನು ಸಹಿಸದ ಚೋಮ ಅದನ್ನರಗಿಸಿಕೊಳ್ಳಲಾಗದೆ ಹೋದದ್ದು, ಅಂದೇ ಅವನ ಜೀವನ ಕೊನೆಯಾದದ್ದು ವಿಷಾದನೀಯ. ಕಷ್ಟ, ಸುಖಗಳನ್ನು ಅರಗಿಸಿಕೊಳ್ಳಲು, ಆವೇಶ, ಹತಾಶೆ ನೀಗಿಕೊಳ್ಳಲು ಸದಾ ದುಡಿಯನ್ನು ತನ್ನ ಅಭಿವ್ಯಕ್ತಿ ಮಾಧ್ಯಮವಾಗಿ ಬಳಸುತ್ತಿದ್ದ, ದುಡಿ ಬಾರಿಸುತ್ತಲೇ ಪ್ರಾಣ ಬಿಟ್ಟ ಚೋಮ, ದೊಡ್ಡ ಸಂಸಾರದಲ್ಲಿ ಕೊನೆಗೆ ಉಳಿದ ಬೆಳ್ಳಿ, ಕಾಳ, ನಾಯಿ, ಎತ್ತುಗಳು ನಮ್ಮನ್ನು ಬಹುಕಾಲ ಕಾಡುತ್ತಾರೆ.
ಎಲ್ಲೂ ಅತಿ ಭಾವುಕತೆ ಪ್ರದರ್ಶಿಸದೆ, ಓದುಗನ ಮನಸ್ಸಿಗೆ ತಟ್ಟುವ ಹಾಗೆ ಚುರುಕು ಮುಟ್ಟುವ ಸಂಭಾಷಣೆಗಳು, ವಿಡಂಬನೆ, ಪಾತ್ರಗಳ ಗಟ್ಟಿತನ ಪೋಷಿಸುವಲ್ಲಿ ಕಾರಂತರು ತಮ್ಮ ಎಂದಿನ ಛಾಪು ತೋರಿಸಿದ್ದಾರೆ.
ನನ್ನ ಮನದೊಳಗಿನ ತುಮುಲ…
ಉನ್ನತಮಟ್ಟದ ಮಾನವೀಯತೆಯೇ ಎಲ್ಲಾ ಧರ್ಮಗಳ ಮೂಲ ಆಶಯ. ಧರ್ಮದ ಈ ಮೂಲ ಆಶಯವನ್ನು ಅಪಾರ್ಥ ಮಾಡಿಕೊಂಡು ಅಥವಾ ಅರ್ಥವಾದರೂ ಸ್ವಾರ್ಥಕ್ಕಾಗಿ ಅದರ ಹೆಸರಿನಲ್ಲಿ ಅನಾಚಾರ ನಡೆಸುವವರೇ ಹೆಚ್ಚು. ಅಸ್ಪೃಶ್ಯತೆ ಈಗ ಭಾರತದಲ್ಲಿ ಆ ಮಟ್ಟದಲ್ಲಿ ಇಲ್ಲವಾದರೂ, ಒಂದಲ್ಲ ಒಂದು ರೀತಿಯಲ್ಲಿ ದುರ್ಬಲ ಜನರ ಶೋಷಣೆ, ಅತ್ಯಾಚಾರಗಳು ಮಾನವ ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಮಾನವನು ಸಂಘ ಜೀವಿಯಾಗಿ ನೆಲೆ ನಿಲ್ಲಲು ಕಟ್ಟಿಕೊಂಡ ಸಾಮಾಜಿಕ ವ್ಯವಸ್ಥೆಗಳು - ಅವುಗಳಲ್ಲಿ 'ಕೆಲವು' ಮಾನವ ಕಲ್ಯಾಣಕ್ಕಾದರೆ, 'ಹಲವು' ಕೆಲವರ ಸ್ವಾರ್ಥಕ್ಕಾಗಿ ರೂಢಿಗೆ ಬಂದ ಕಟ್ಟುಪಾಡುಗಳು - ಅದರ ಸುತ್ತಲಿನ ರಾಜಕೀಯ , ಆ ವ್ಯವಸ್ಥೆಯ ಆಳ, ವಿಸ್ತಾರ, ಒಳ ಆಯಾಮಗಳು ಹತ್ತು ಹಲವು.
ಮೊದಲು ನಿರಂಕುಶವಾದದಿಂದ ಪ್ರಾರಂಭವಾದ ಮಾನವ ಸಮಾಜ, ಪ್ರಗತಿ ಹೊಂದಿದಂತೆ ಸಮಾನತಾವಾದ, ಆಮೇಲೆ ಶ್ರೇಣೀಕೃತ ವ್ಯವಸ್ಥೆಯ(ಈ ವ್ಯವಸ್ಥೆಯಲ್ಲಿ ಪ್ರಾಬಲ್ಯತೆ ಮತ್ತು ಅಧೀನತೆ ಡಾರ್ವಿನ್ನನ 'survival of fittest' ಸಿದ್ಧಾಂತವನ್ನೂ ಧೃಢಪಡಿಸುತ್ತವೆ) ಮೇಲೆ ಬೆಳೆಯುತ್ತಾ ಹೋಯಿತು.
ಒಂದು ಸಮಾಜದಲ್ಲಿ ಜನ ನೆಮ್ಮದಿಯಿಂದ ನೆಲೆವೂರಲು ಎಲ್ಲಾ ಶ್ರೇಣಿಯ ಜನರ ಅವಶ್ಯಕತೆ ಇದೆ, ಅಲ್ಲಿ ಆಳುವವನೂ ಬೇಕು, ಆಳಿಸಿಕೊಂಡು ಹಾಗೇ ಎಲ್ಲಾ ರೀತಿಯ ಜನಸೇವೆ ಮಾಡುವ ಜನರೂ ಬೇಕೆಂಬ ವಾಸ್ತವತೆಯ ಆಧಾರದ ಮೇಲೆ ಶ್ರೇಣೀಕೃತ ವ್ಯವಸ್ಥೆ ನಿಂತಿದೆ. ನಮ್ಮಲ್ಲಿ ಇದು skill based ವರ್ಣಾಶ್ರಮವಾಗಿ ಪ್ರಾರಂಭಗೊಂಡು, ಕಾಲಾಂತರದಲ್ಲಿ ಜಾತಿ ಪದ್ಧತಿ, ಮೇಲು-ಕೀಳು ಎಂಬ ಅಸಹ್ಯಕರ ಪದ್ಧತಿಯಾಗಿ ಆಚರಣೆಗೆ ಬಂದಿದ್ದರೆ, ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ ಬಣ್ಣ, ಘನತೆ, ಹಣದ ಆಧಾರದ ಮೇಲೆ ಇಂದಿಗೂ ಆಚರಣೆಯಲ್ಲಿವೆ. ಒಟ್ಟಿನಲ್ಲಿ ಬಲಶಾಲಿಗಳು ಬಲಹೀನರನ್ನು ಶೋಷಿಸುವುದು ಪ್ರಕೃತಿಯ ನಿರಂತರ ಕ್ರಿಯೆಯೇ ಅನ್ನಿಸಿದರೂ, ಬುದ್ಧಿಜೀವಿ ಮಾನವ ಅದರಿಂದ ಹೊರಬಂದು ಮಾನವೀಯತೆಯಿಂದ ಬದುಕುವುದು ಏಕೆ ಸಾಧ್ಯವಿಲ್ಲ ಎಂದು ವಿಷಾದವಾಗುತ್ತದೆ. ನಮ್ಮ ನಶ್ವರತೆಯ ಅರಿವಿರುವ ನಾವು, ಸರಳವಾಗಿ ಎಲ್ಲರೊಳಗೊಂದಾಗಿ ಬಾಳಿ ಬದುಕುವ ಮನಸ್ಥಿತಿ ಏಕೆ ಹೊಂದಿಲ್ಲ ಎಂದು ತಳಮಳವಾಗುತ್ತದೆ. ಯಾವ ಜೀವಿಯೂ ತಾನು ಹೇಗೆ ಎಲ್ಲಿ ಹುಟ್ಟಬೇಕೆಂಬುದನ್ನು ಆಯ್ಕೆ ಮಾಡುವ ಅವಕಾಶ ಇಲ್ಲದಿರುವಾಗ, ನನಗೆ ವೈಯುಕ್ತಿಕವಾಗಿ ಬಹಳ ಕಾಡುವ ಪ್ರಶ್ನೆ ಎಂದರೆ ಕೆಲವರ ಅತಿ ದುಸ್ತರವಾದ ಬದುಕು, ಕೆಲವರ ಅತಿ ಸುಖದ ಬದುಕು ಏಕೆ? ಕೆಲವರ ಸ್ವಾರ್ಥಕ್ಕೆ ಬಲಿಯಾಗುವ ಅನೇಕ ಮುಗ್ಧ ಜೀವಿಗಳ ಸಂಕಟ...ಎಲ್ಲಾ ಮಾನವರಲ್ಲೂ ತಕ್ಕ ಮಟ್ಟಿನ ಮಾನವೀಯತೆ ಯಾಕೆ ಮೈಗೂಡಿಲ್ಲ?!
ಈ ಎಲ್ಲಾ ದೃಷ್ಟಿಯಿಂದ ಕಾರಂತರ ಈ ಕಾದಂಬರಿ ಇಂದಿಗೂ, ಎಂದಿಗೂ ಪ್ರಸ್ತುತವಾಗಿ ನಿಲ್ಲುತ್ತದೆ.





Comments