top of page

ಕರ್ವಾಲೊ

  • vidyaram2
  • Aug 10, 2022
  • 2 min read

Updated: Aug 12, 2022


'ಕರ್ವಾಲೊ' ಪೂರ್ಣಚಂದ್ರ ತೇಜಸ್ವಿಯವರು ಬರೆದ ಬಹಳ ಪ್ರಸಿದ್ಧಿ ಪಡೆದ ಕಾದಂಬರಿ. 'ಪುಸ್ತಕ ಪ್ರಕಾಶನ, ಮೈಸೂರು' ಇವರು ಪ್ರಕಾಶಿಸಿದ ಈ ಕಾದಂಬರಿಯ ಮೊದಲ ಮುದ್ರಣ ಹೊರಬಂದಿದ್ದು 1980 ರಲ್ಲಿ. ಈವರೆಗೆ ಸುಮಾರು ನಲವತ್ತಕ್ಕೂ ಹೆಚ್ಚು ಮರು ಮುದ್ರಣ ಕಂಡಿರುವುದು ಈ ಕಾದಂಬರಿಯ ಜನಪ್ರಿಯತೆಗೆ ಸಾಕ್ಷಿ.


ಬಹಳ ವಿಭಿನ್ನವಾದ ಕಥಾಹಂದರವನ್ನು ಹೊಂದಿದ ಈ ಕಾದಂಬರಿ, ಮೇಲ್ನೋಟಕ್ಕೆ ಮಲೆನಾಡಿನ ಹಳ್ಳಿಯಲ್ಲಿ ಪ್ರಕೃತಿಯೊಂದಿಗೆ ಸಮರಸದ ಜೀವನ, ರೈತರ ದಿನಚರಿ, ಅವರ ಕಷ್ಟ ಸುಖಗಳನ್ನು ಪರಿಚಯಿಸುವ ಸರಳವಾದ ಕಥೆಯಂತೆ ಕಂಡರೂ, ಜೊತೆಜೊತೆಯಲ್ಲೇ ಕಾಲದೇಶಗಳನ್ನು ಮೀರುವ, ಸಾಕ್ಷಾತ್ಕಾರದ ಚಿಂತನೆಯನ್ನೂ ಮಾಡುತ್ತಾ, ನಮ್ಮನ್ನೂ ತತ್ವ ಚಿಂತನೆಗೆ ಒಳಪಡಿಸುವ ಒಂದು ಗಹನವಾದ ಆಯಾಮವನ್ನು ಹೊಂದಿದೆ . ಅಲ್ಲಲ್ಲಿ ನವಿರಾದ ಹಾಸ್ಯ ಲೇಪನದೊಂದಿಗೆ ಸರಳವಾಗಿ ಹೆಣೆದ ಈ ಥೆ ಸುಲಭವಾಗಿ ಓದಿಸಿಕೊಂಡು ಹೋಗಿ, ಕೊನೆಯವರೆಗೆ ಕುತೂಹಲ ಕಾಯ್ದುಕೊಳ್ಳುವಲ್ಲಿ ಸಫಲವಾಗುತ್ತದೆ. ಕೆ. ಟಿ. ಶಿವಪ್ರಸಾದರ ರೇಖಾಚಿತ್ರಗಳು ಆಕರ್ಷಕವಾಗಿ ಮೂಡಿ ಬಂದಿವೆ.


ಕಾದಂಬರಿಯಲ್ಲಿ ಸ್ವತಃ ಲೇಖಕರೇ ನಿರೂಪಕರು.. ಮೂಡಿಗೆರೆ ಬಳಿಯ ಅವರ ಹಳ್ಳಿಯಲ್ಲಿ ಅವರಿಗೆ ಎದುರಾಗುವ ಪಾತ್ರಗಳು ಹಳ್ಳಿಯ ಮಂದಣ್ಣ, ಪ್ರಭಾಕರ, ಕರಿಯಪ್ಪ, ಪ್ಯಾರ, ಎಂಗ್ಟ ಮತ್ತು ಕೀಟವಿಜ್ಞಾನಿ ಕರ್ವಾಲೊ. ಮಲೆನಾಡಿನ ರೈತ ಎದುರಿಸುವ ಸಂಕಷ್ಟ, ಕೋಟಲೆಗಳಿಂದ ಬೇಸತ್ತು ಗದ್ದೆ ಮಾರಿ ಅಲ್ಲಿಂದ ಪಲಾಯನಗೈಯಬೇಕೆಂದಿರುವ ನಿರೂಪಕ, ವಿಜ್ಞಾನಿ ಕರ್ವಾಲೊ ಅವರ ಪರಿಚಯವಾದ ಮೇಲೆ ಕಾಲಾತೀತವಾದ ಹಾರುವ ಓತಿಯ ಹುಡುಕಾಟದಲ್ಲಿ ಕುತೂಹಲ ತಳೆದು, ಜೀವ ವಿಕಸನದ ತತ್ವ ಚಿಂತನೆಯಲ್ಲಿ ಮುಳುಗುವುದೇ ಈ ಕಾದಂಬರಿಯ ಸಾರ.


ಕಾಡಿನ ಜೀವ ವಿಸ್ಮಯಗಳನ್ನು ಹತ್ತಿರದಿಂದ ಬಲ್ಲ ಮಂದಣ್ಣನನ್ನು ಶಿಷ್ಯನಾಗಿ, ಸಾರಥಿಯಾಗಿ ಇಟ್ಟುಕೊಂಡು ಕರ್ವಾಲೊ, ಶಾಖವಿಲ್ಲದ ಬೆಳಕು ಬೀರುತ್ತಾ ಬೇಟೆಯಾಡುವ ಗ್ಲೋ worm, ಬಗೆಬಗೆ ಜಾತಿಯ ಜೇನುಗಳು, ಕೀಟಗಳು ಹೀಗೆ ಅನೇಕ ಬಗೆಯ ಕೌತುಕ ಜೀವಗಳ ಅಧ್ಯಯನ ನಡೆಸುತ್ತಿರುತ್ತಾರೆ. ಹಾರುವ ಓತಿಯನ್ನು ಕಂಡಿದ್ದೇನೆ ಎಂದು ಮಂದಣ್ಣ ಹೇಳಿದಾಗ, 3,00,00,000 ವರ್ಷಗಳ ಹಿಂದಿನ ಆ ಜೀವಿ ಈಗಲೂ ಭೂಮಿ ಮೇಲೆ ಇರುವ ಸತ್ಯವನ್ನು ಜಗತ್ತಿಗೆ ತೋರಿಸುವ, ಅದನ್ನು ಹಿಡಿದು ಅದರ ರಚನೆ ಮತ್ತು ರಹಸ್ಯಗಳನ್ನು ಅರಿಯುವ ಸಲುವಾಗಿ ಅದರ ಅನ್ವೇಷಣೆಯಲ್ಲಿ ತೊಡಗುತ್ತಾರೆ. ಅವರ ಈ ರೋಚಕ ಸಾಹಸ ಯಾನದಲ್ಲಿ ಪಾಲ್ಗೊಳ್ಳುವ ಮಂದಣ್ಣ, ಮರ ಹತ್ತುವ ಕರಿಯಣ್ಣ, ಎಂಗ್ಟ, ಛಾಯಾಗ್ರಾಹಕ ಪ್ರಭಾಕರ, ನಿರೂಪಕರು ಮತ್ತವರ ನಾಯಿ 'ಕಿವಿ' ಅನೇಕ ತೊಂದರೆಗಳನ್ನು ಎದುರಿಸುತ್ತಾ ಕಾಡು ಸೇರಿ, ಕೊನೆಗೂ ಓತಿಯನ್ನು ಕಾಣುವಲ್ಲಿ ಸಫಲರಾಗುತ್ತಾರೆ. ಆದರೆ ಅದನ್ನು ಹಿಡಿಯುವ ಅವರ ಪ್ರಯತ್ನ ವಿಫಲವಾಗಿ, ಓತಿ ಸಹ್ಯಾದ್ರಿ ಪರ್ವತದ ಶ್ರೇಣಿಯಿಂದ ಕೆಳಗಿನ ತಪ್ಪಲಿಗೆ ಹಾರಿಬಿಡುತ್ತದೆ. ಆದರೆ "ಕಾಲ ದೇಶಗಳ ಸುಭದ್ರ ವಾಸ್ತವ ಇದ್ದರೆ ಆಲ್ಲಿ ನಡೆಯುವ ಕ್ರಿಯೆಗೆ ಅರ್ಥ, ಉದ್ದೇಶ ಎಲ್ಲಾ. ಯಾವ ಅಂತಿಮ ಉದ್ದೇಶವೂ ಇಲ್ಲದ ಜೀವ ವಿಕಸನದ ನಿರಂತರ ಘಟನಾವಳಿಗಳ ನಡುವೆ ಕ್ರಿಯೆಗೆ ಅರ್ಥ, ಉದ್ದೇಶ ಇಲ್ಲದೇ ಹೋದ ಸ್ಥಿತಿಯಲ್ಲಿ ಕಾಲವೆನ್ನುವುದು ಇರುವುದೇ?" ಎಂಬ ನಿರೂಪಕರ ಚಿಂತನೆ, ಕಾಲಪ್ರಜ್ಞೆಗೆ ಮೀರಿದ ತರ್ಕ ಓದುಗರ ಮನದಲ್ಲಿ ನಮ್ಮ ಅಸ್ತಿತ್ವದ ಕಾರಣ ಹಾಗೂ ಪ್ರಸ್ತುತತೆ (relevance) ಕುರಿತು ಚಿಂತಿಸುವ ಅಧ್ಯಾತ್ಮಿಕ ಪ್ರಚೋದನೆ ನೀಡುತ್ತದೆ.


ಒಂದು ತಳಿಯ ಜೀವಿ ತನ್ನ ಮಿತಿಯನ್ನು ದಾಟಿ ಏನಿದೆ ಎಂಬುದನ್ನು ಪರೀಕ್ಷಿಸುವ ಕುತೂಹಲದಿಂದ ಮುಂದಿಟ್ಟ ಒಂದು ಹೆಜ್ಜೆಯೇ ಅವುಗಳನ್ನು ವಿಕಸನದ ಹಾದಿಯಲ್ಲಿ ಕೊಂಡೊಯ್ಯುವ ಪ್ರಕ್ರಿಯೆಯಾಗುತ್ತದೆ. ಬಲ ಮುಂಗೈ ಬಳಸಿ ಭೂಮಿಗೆ ಇಳಿದ ಮಂಗನಿಂದ ಮಾನವನಾಗಿ ಎರಡು ಕಾಲು ಬಳಸಿ ನಿಂತದ್ದು, ಆ ಕಾಲದಲ್ಲಿ ಇಳಿಯದೆ, ಮುಂಗೈಯಿಂದ ಮರದಿಂದ ಮರಕ್ಕೆ ಹಾರಿ, ಕೈ ಇನ್ನೂ ಉದ್ದವಾಗಿ ವಿಕಾಸಗೊಂಡ ಮೇಲೆ ಭೂಮಿಗಿಳಿದ ಗೊರಿಲ್ಲಾ ಇಂದಿಗೂ ನಾಲ್ಕು ಕಾಲ ಮೇಲೆ ನಿಂತದ್ದು, ಹಾಗೆಯೇ ಹಾರಲು ಕೈ ಬಳಸದೇ ಪಕ್ಕೆಲುಬು ಬಳಸಿದ ಓತಿ ಹಕ್ಕಿಯಾಗದೇ 30 ಮಿಲಿಯನ್ ವರ್ಷಗಳ ಹಿಂದಿನಿಂದ ಹಾಗೇ ಉಳಿದದ್ದು ಕೆಲ ಉದಾಹರಣೆಗಳು.


ಇದನ್ನು ಓದುವಾಗ ಬಹಳ ವರ್ಷಗಳ ಕೆಳಗೆ ನಾನು ಓದಿದ ರಿಚರ್ಡ್ ಬಾಕ್ ಅವರ, ಕುತೂಹಲವೇ ಜ್ಞಾನೋದಯಕ್ಕೆ, ಆನಂದಕ್ಕೆ ದಾರಿ ಎನ್ನುವ ತತ್ವದ 'Jonathan Livingston Seagull' ಕಾದಂಬರಿ ನೆನಪಾಯಿತು. ಒಟ್ಟಿನಲ್ಲಿ ಕರ್ವಾಲೋ ಬಹಳ ಕಾಲ ಮನದಲ್ಲಿ ಉಳಿಯುವ ಚಿಂತನೆಗೆ ಹಚ್ಚುವ ಉತ್ತಮ ಕಾದಂಬರಿ.


Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page