top of page

ಕನ್ನಡ ಸಾಹಿತ್ಯದತ್ತ ಅಂಬೆಗಾಲು ...

  • vidyaram2
  • Jul 30, 2022
  • 5 min read

Updated: Nov 20, 2022

ಅಧ್ಯಯನದ ದೃಷ್ಟಿಯಿಂದ ಬರೆದ ಸಂಪ್ರಬಂಧ ನಾನು ಓದಿದ್ದು ಇದೇ ಮೊದಲು. ಅದರ ಬಗ್ಗೆ ನನಗೆ ತಿಳಿದಿದ್ದೂ ಆಕಸ್ಮಿಕವಾಗಿ. ಆಕಸ್ಮಿಕವಾಗೇ ಸಾಮಾಜಿಕ ಜಾಲತಾಣ facebookನಲ್ಲಿ ವಿದ್ಯಾ ದತ್ತಾತ್ರಿ, ಹೊಸಕೊಪ್ಪ ಎನ್ನುವವರು ಕಂಡು, ಅವರು ಮೊದಲಬಾರಿ ಒಂದು ಪುಸ್ತಕ ಬರೆದು ಪ್ರಕಟಿಸಿದ್ದು ಗೊತ್ತಾಗಿ, ನನ್ನ ಚಿಕ್ಕಮ್ಮನ ಊರಾದ ಹೊಸಕೊಪ್ಪದವರಿರಬಹುದೇ ಎಂಬ ಕುತೂಹಲಕ್ಕೆ ಅವರ ಪುಸ್ತಕ ತರಿಸಿ, ಓದಿ ಇಷ್ಟ ಆಗಿ ಅದಕ್ಕೆ ಮತ್ತೆ facebookನಲ್ಲೇ ಪ್ರತಿಕ್ರಿಯೆ ತಿಳಿಸಿದ್ದೆ. ಅವರು ಪ್ರತಿಕ್ರಿಯೆಗೆ thanks ಹೇಳಲು ಫೋನಾಯಿಸಿ ಪರಿಚಯ ಆದಾಗ, ಮುಂಬೈನಲ್ಲಿ ಅವರಿಗೆ ಉಮಾ ರಾವ್ ಎನ್ನುವವರೊಬ್ಬರು ಆಗಷ್ಟೇ ಪರಿಚಯ ಆಗದ್ದಾರೆ, ಅವರು ತುಂಬಾ ಓದಿಕೊಂಡವರು, ಭೈರಪ್ಪನವರೊಡನೆ ಒಡನಾಟ ಇರುವವರು, ಅವರ mphil ಅಧ್ಯಯನಕ್ಕೆ, ಭೈರಪ್ಪನವರ ಪರ್ವ ಆಯ್ದುಕೊಂಡು ಬರೆದ thesis ಈಗ ಪುಸ್ತಕ ರೂಪದಲ್ಲಿ ಮುದ್ರಣವಾಗಿದೆ ಎಂದು ಹೇಳಿದರು....ಆಮೇಲೆ ನಾನು ತಕ್ಷಣ ಉಮಾ ಅವರಿಗೆ phone ಮಾಡಿ ಮಾತಾಡಿದ್ದೆ, ಮುಂಬೈಲಿ ಇನ್ನೊಬ್ಬ ಕನ್ನಡಿಗರ ಪರಿಚಯ ಆಗುತ್ತೆ ಅನ್ನೋ ಸಂತೋಷದಲ್ಲಿ. ಮತ್ತೆ ಅವರು ಮುಂಬೈ ವಿಶ್ವವಿದ್ಯಾಲಯಕ್ಕೆ ಒಮ್ಮೆ ಆಹ್ವಾನಿಸಿದಾಗ ಹೋಗಿ ಭೇಟಿಯಾಗಿದ್ದೆವು. ಬಹಳ ಸರಳ ಸಹೃದಯರಾದ ಅವರ ಭೇಟಿ ನನಗೆ, ನನ್ನವರಿಗೆ ಮುದ ಕೊಟ್ಟಿತ್ತು.


ಮೊದಲೊಮ್ಮೆ ಹೈಸ್ಕೂಲಲ್ಲೊ, ಪದವಿ ಪೂರ್ವ ಕಾಲೇಜಲ್ಲೋ ಇದ್ದಾಗ ನಾನು ಪರ್ವ ಓದಲು ಪ್ರಯತ್ನಿಸಿ, ಮನ ಬಾರದೆ ಭೈರಪ್ಪನವರು ನನ್ನ ಮಟ್ಟಕ್ಕೆ ಗಗನ ಕುಸುಮವೇ ಸರಿ ಎಂದು ತೀರ್ಮಾನಿಸಿ ಕೈ ಬಿಟ್ಟಿದ್ದೆ. ಈಗ ಉಮಾರವರು ಅದರ ಮೇಲೆ thesis ಬರೆದಿದ್ದಾರೆ, ನಾನು ಓದೂ ಇಲ್ವಲ್ಲಪ್ಪ ಅನ್ನಿಸಿ, ಇನ್ನೊಮ್ಮೆ ಅದನ್ನು ಓದುವ ಪ್ರಯತ್ನ ಮಾಡೋಣ ಅಂತ ಪುಸ್ತಕ ಕೊಂಡೆ (2020ರಲ್ಲಿ). ಇಷ್ಟು ವರ್ಷಗಳಲ್ಲಿ ನನ್ನ ಬುದ್ಧಿ ತಕ್ಕ ಮಟ್ಟಿಗೆ ಪ್ರೌಢ/ಪಕ್ವವಾಗಿರೋದರಿಂದ ಮತ್ತು ನಮ್ಮ ಮಹಾಕಾವ್ಯ/ಪುರಾಣಗಳನ್ನು ಆಧಾರವಾಗಿಟ್ಟುಕೊಂಡು ಪೂರ್ತಿ ಹೊಸ ಆಯಾಮದಿಂದ ಬರೆದ ಕಾಲ್ಪನಿಕ ಕಾದಂಬರಿಗಳನ್ನು ಓದಿದ ತಕ್ಕಮಟ್ಟಿನ ಅನುಭವದಿಂದ ಈ ಭಾರಿ ಪರ್ವ ನನಗೆ ಬಹಳ ಪ್ರಿಯವೆನಿಸಿತು. ಭೈರಪ್ಪನವರು ಅಷ್ಟೊಂದು ಪಾತ್ರಗಳನ್ನು ಅಷ್ಟು ಸೂಕ್ಷ್ಮದಲ್ಲಿ ವಿಶ್ಲೇಷಿಸಿ ಪವಾಡಗಳಿಲ್ಲದೇ ಈ ಕಾಲಕ್ಕೂ ನಮ್ಮ ತರ್ಕಗಳಿಗೆ ಸುಲಭವಾಗಿ ನಿಲುಕುವನಂತೆ ಆದರೆ ಮೂಲಕಥೆಗೆ ಧಕ್ಕೆಬಾರದಂತೆ ತಾಳೆ ಹಾಕಿ ಸೃಷ್ಟಿಸಿದ ಈ ಮಹಾಗ್ರಂಥ ಏಕಿಷ್ಟು ಮನ್ನಣೆ ಗಳಿಸಿತು ಎಂದು ನನಗೆ ಸ್ಪಷ್ಟವಾಯಿತು. ನಾನು ಬೈರಪ್ಪನವರ ಬಗ್ಗೆ ನನ್ನ ಧೋರಣೆ ಸರಿಪಡಿಸಿಕೊಂಡು ಅವರ 'ಫ್ಯಾನ್' ಆದೆ. ಅಭ್ಯಾಸಬಲದಂತೆ ನನ್ನ ಅನಿಸಿಕೆಗಳನ್ನ goodreads ಅಲ್ಲಿ ಬಹಳ ಸಂಕ್ಷಿಪ್ತವಾಗಿ ದಾಖಲಿಸಿ ಮತ್ತೆ ನನ್ನ ಲೈಬ್ರರಿಯಿಂದ ಇಂಗ್ಲಿಷ್ ಪುಸ್ತಕಗಳನ್ನು ಓದೋದು ಮುಂದುವರೆಸಿದೆ.


ಮತ್ತೆ ಯಾಕೋ ಉಮಾ ಅವರ ಹತ್ತಿರ ಅವರು ಬರೆದ ಪುಸ್ತಕದ ಬಗ್ಗೆ ಕೇಳಲು ಆಗಲೇ ಇಲ್ಲ...ನಿಜ ಹೇಳಬೇಕೆಂದರೆ ಒಂದು ಪುಸ್ತಕ ಕುರಿತು ವಿಶ್ಲೇಷಣೆ ಮತ್ತೊಂದು ಪುಸ್ತಕದಷ್ಟು ಬರೆದಿದ್ದಾರೆ...ಅದು ಏನು ಅಷ್ಟು ಇಂಟರೆಸ್ಟಿಂಗ್ ಇರಲು ಸಾಧ್ಯ ಅಂತ ನನ್ನ ಒಂದು ಸಣ್ಣ ಮೌಢ್ಯ ಧೋರಣೆ ಕೂಡ ಇತ್ತು ;) ಆದರೆ ಈಗ ಕೆಲ ತಿಂಗಳ ಹಿಂದೆ ವಿದ್ಯಾ ಮತ್ತೆ ನನಗೆ ಸಿರಿಗನ್ನಡಂ ಗೆಲ್ಗೆ ಪ್ರತಿಷ್ಠಾನದ YouTube channel nalli ಉಮಾ ರಾವ್ ಅವರ ಪುಸ್ತಕದ ಬಗ್ಗೆ ಕಾರ್ಯಕ್ರಮ ಇದೆ ನೋಡಿ ಅಂತ ಲಿಂಕ್ ಕಳುಹಿಸಿದ್ರು. ಅದನ್ನು ನೋಡಿ, ಅದರಲ್ಲಿ ಉಮಾ ಅವರ ಮಾತುಗಳನ್ನು ಕೇಳಿ, ಅರೆ, ಇವರೂ ನನಗೆ ಮೆಚ್ಚುಗೆಯಾದ ಎಷ್ಟೋ ಆಯಾಮಗಳ ಬಗ್ಗೆ ಇಷ್ಟೊಂದು ಚಂದವಾಗಿ ಹೇಳ್ತಿದ್ದಾರಲ್ಲ ಅನ್ನಿಸಿ ಅವರು ಬರೆದಿರೋ ಈ ಪುಸ್ತಕ ಓದಲೇಬೇಕೆಂಬ ಹಂಬಲ ಬಂತು. ತಕ್ಷಣ ಅವರೊಂದಿಗೆ ಮಾತಾಡಿ ಪುಸ್ತಕ ತರಿಸಿದೆ. ಕುಟುಂಬದಲ್ಲಿ ಹಲವರಿಗೆ ಬಂದ ಕೋವಿಡ್ ಹಾವಳಿಯಿಂದ ಪುಸ್ತಕ ಓದುವುದು ತುಂಬಾ ನಿಧಾನವಾದರೂ, ಅವರ ಈ ಸಂಪ್ರಬಂಧ ಬಹಳ ಮೆಚ್ಚುಗೆಯಾಯಿತು. ನನ್ನ ತಪ್ಪು ಅಭಿಪ್ರಾಯ ಕಳೆದು, ಬಹಳಷ್ಟು ಹೊಸ ವಿಚಾರಗಳು, ಭೈರಪ್ಪನವರ ನಿಜವಾದ ಪರಿಚಯ, ಉಮಾ ಅವರ ನಿಜ ಪರಿಚಯ, ಅವರ ಜ್ಞಾನದ ಆಳ ಎಲ್ಲಾ ಅರಿವಾಯಿತು. A big hearty thanks to Vidya for pushing me towards this!


ಇನ್ನು ಉಮಾ ಅವರ ಸಂಪ್ರಬಂಧದಲ್ಲಿ ನನಗಿಷ್ಟವಾದ ಕೆಲವು ವಿಷಯಗಳನ್ನ ಸಂಕ್ಷಿಪ್ತವಾಗಿ ಇಲ್ಲಿ ಹಂಚಿಕೊಳ್ಳೋಕೆ ಪ್ರಯತ್ನಿಸುತ್ತೀನಿ (ನನ್ನ ಎಲ್ಲಾ book reviews ತುಂಬಾನೇ short ಇರುತ್ತೆ, written just for my own reference, to remember what was the gist of the book as per me).


ಉಮಾ ಅವರು ಪುಸ್ತಕದ ಪ್ರಾರಂಭದಲ್ಲಿ ಅರಿಕೆ ಮಾಡಿಕೊಂಡಿರುವಂತೆ ನಾನು confess ಮಾಡುವುದಾದರೆ - ತುಂಬಾ ವಿನೀತವಾಗಿ, ಅವಮಾನಿತಳಾಗಿ ಹೇಳಬೇಕು - ನಾನು ಕನ್ನಡ ಸಾಹಿತ್ಯ ಅಷ್ಟು ಓದಿರೋಳೆ ಅಲ್ಲ. ನಮ್ಮ ಮಹಾಕಾವ್ಯ ಗ್ರಂಥಗಳ ಮೂಲದ ನಿಜ ಅನುವಾದ ಕೂಡ ಯಾವುದೇ ಭಾಷೆಯಲ್ಲಿ ಓದಿಲ್ಲ. ಚಿಕ್ಕಂದಿನಲ್ಲಿ ಮನೆಯಲ್ಲಿ ಹೇಳುತ್ತಿದ್ದ ರಾಮಾಯಣ, ಮಹಾಭಾರತದ ಕೆಲವು ಮುಖ್ಯ ಕಥನಗಳನ್ನು ಬಿಟ್ಟರೆ, ರಾಮಾನಂದ ಸಾಗರರ ರಾಮಾಯಣ, ಮಹಾಭಾರತ ನೋಡಿದ ಜ್ಞಾನವಷ್ಟೇ. ಚಿಕ್ಕಂದಿನಿಂದಲೂ ಓದುವ ಹವ್ಯಾಸ ಇದ್ದರೂ ಅದು ಚಂದಮಾಮ, ತರಂಗ, ಸುಧಾ, ಮಯೂರ, ತುಷಾರಗಳಂತಹ ವಾರ/ಮಾಸಿಕ ಪತ್ರಿಕೆಗಳಿಗೆ ಹೆಚ್ಚು ಸೀಮಿತವಾಗಿತ್ತು. ಅದು ಬಿಟ್ಟರೆ ಕೆಲವು ಕೌಟುಂಬಿಕ ಕಾದಂಬರಿಗಳನ್ನು (ಸಾಯಿಸುತೆ, M.K.ಇಂದಿರಾ, ತ್ರಿವೇಣಿ, Dr.ಅನುಪಮ ನಿರಂಜನ, ನೇಮಿಚಂದ್ರ (science related)...ಹೀಗೆ ಬಿಟ್ಟರೆ ದುರ್ಗಾಸ್ತಮಾನ, ಮೂಕಜ್ಜಿಯ ಕನಸುಗಳು ಎರಡು ಕಷ್ಟ ಪಟ್ಟು ಓದಿ ಮುಗಿಸಿದ್ದ ನೆನಪಿದೆ...ಮಲೆಗಳಲ್ಲಿ ಮದುಮಗಳು, ಪರ್ವ ಓದಲು ಪ್ರಯತ್ನಿಸಿ ಕೈ ಬಿಟ್ಟಿದ್ದು ನೆನಪಿದೆ ಅಷ್ಟೇ :) ಹತ್ತನೇ ತರಗತಿ ನಂತರ ಶೈಕ್ಷಣಿಕವಾಗಿ ಕನ್ನಡ ಭಾಷೆ ಅಧ್ಯಯನ ಕೂಡ ನಿಂತುಹೋಯಿತು!

ಆಮೇಲೆ ಓದು, ಕೆಲಸ, ಕುಟುಂಬ ಜವಾಬ್ದಾರಿಯಲ್ಲಿ ಪೂರ್ತಿ ಬಿಟ್ಟು ಹೋಗಿದ್ದ ಓದು, ಕೆಲಸದಿಂದ ಸ್ವಯಂ ನಿವೃತ್ತಿ ಘೋಷಿಸಿ ಮನೆಯಲ್ಲುಳಿದ ಮೇಲೆ ಈಗ್ಗೆ 4,5 ವರ್ಷಗಳಿಂದ ಮತ್ತೆ ಶುರುವಾದರೂ ಇಂಗ್ಲಿಷ್ ಪುಸ್ತಕಗಳ ಬಗ್ಗೆ ಒಲವೇ ಯಾಕೋ ಜಾಸ್ತಿ ಆಗಿತ್ತು. ಹತ್ತಿರದ ಲೈಬ್ರರಿಯಲ್ಲಿ ಸುಲಭದಲ್ಲಿ ಸಿಗುತ್ತವೆ ಅಂತ ಒಂದು ಕಾರಣ ಮತ್ತೆ 10-15 ವರ್ಷಗಳು corporate ಕಂಪನಿಗಳಲ್ಲಿ ಕೆಲ್ಸ ಮಾಡಿದ ಅನುಭವದಿಂದ ಪಾಶ್ಚ್ಯಾತ್ಯ influence ಕೂಡ ಇಂಗ್ಲಿಷ್ ಓದಲು, ಬರಿಯಲು ಕನ್ನಡಕ್ಕಿಂತ ಸುಲಭ ಎನ್ನುವಷ್ಟರ ಮಟ್ಟಿಗೆ ಆಗಿದ್ದು ಇನ್ನೊಂದು ಕಾರಣ. ಆದರೆ ಕನ್ನಡ ಸಾಹಿತ್ಯ ಓದಬೇಕಿತ್ತು ಅನ್ನೋ conscious guilt ಸದಾ ಇದ್ದೇ ಇದೆ. ಇನ್ನು, ನೇರ ವಿಷಯಕ್ಕೆ ಬರ್ತೀನಿ....ಇದುವರೆಗೆ ಬಹಳವೇ ಹರಟೆಯಾಯಿತು! ಸಂಪ್ರಬಂಧವನ್ನು ಭೈರಪ್ಪನವರ ಬದುಕು ಮತ್ತು ಬರಹದಿಂದ ಪ್ರಾರಂಭಿಸಿರೋದು ತುಂಬಾ ಸೂಕ್ತ ಮತ್ತು ಉಪಯುಕ್ತ ಆನ್ನಿಸಿತು. ಭೈರಪ್ಪನವರ ಬಗ್ಗೆ ಹೆಚ್ಚೇನೂ ತಿಳಿಯದ ನನ್ನಂಥವರಿಗೆ ಅವರ ಹಿನ್ನೆಲೆ ತಿಳಿದು ಅವರ ಬಗ್ಗೆ

ಇದ್ದ ಒಂದು pre-notion ಅಳಿಸಿತು. ಅಷ್ಟು ಕಷ್ಟ ಕಾರ್ಪಣ್ಯ ಆದರೆ ಅಷ್ಟೇ ವೈವಿಧ್ಯವಾದ ಅವರ ಬಾಲ್ಯ, ಯೌವ್ವನ ...ಮತ್ತೆ ಅಷ್ಟು ಜ್ಞಾನಾರ್ಜನೆ, ಜೀವನಾನುಭವ, ಯಶಸ್ಸು, ಕೀರ್ತಿ ಎಲ್ಲಾ ನನ್ನ ಕಲ್ಪನೆಗೆ ನಿಲುಕದ್ದೇ. ಇದೆಲ್ಲಾ ಮೀರಿದ ಅವರ ಸರಳತೆ, ಸಹೃದಯತೆ, ಅದನ್ನು ಉಮಾರವರು ಸಹಜವಾಗಿ ಸುಂದರವಾಗಿ ನಿರೂಪಿಸಿದ ರೀತಿ ಮಾತ್ರ ಅವರೂ ನಮ್ಮ ಹಾಗೇ, ಉಮಾರವರ ಹಾಗೇ ಒಬ್ಬರು ಎಂಬ ಕಲ್ಪನೆ ಬಂದು, ಅವರೂ ನನಗೆ ತುಂಬಾ ಹತ್ತಿರದವರೇನೋ ಎಂಬ ಭಾವನೆ ಬಂತು. ಅವರು ಬರೆದ ಎಲ್ಲಾ ಪುಸ್ತಕಗಳ ಪಕ್ಷಿನೋಟ ಸಹ ನನ್ನಂತ ಓದುಗರಿಗೆ ಮುಂದೆ ಯಾವ ಭೈರಪ್ಪನವರ ಪುಸ್ತಕಗಳನ್ನು ಓದಬಹುದು, ಯಾವ ಕಾದಂಬರಿಯಲ್ಲಿ ಏನು ನಿರೀಕ್ಷಿಸಬಹುದು ಎಂದು ಸ್ಪಷ್ಟ ನಿಲುವು ತಳೆಯಲು ಸಹಕಾರಿಯಾಗುತ್ತದೆ. ಕಾದಂಬರಿಯ ವಿಭಿನ್ನ ನೆಲೆಗಳ ಚರ್ಚೆಯಂತೂ ನನ್ನ ನೆಚ್ಚಿನ ಅಧ್ಯಾಯ. ನಿಜ ಹೇಳಬೇಕೆಂದರೆ, ಅವರ ಪುಸ್ತಕದ ಶೀರ್ಷಿಕೆಯಲ್ಲಿದ್ದ 'ಆಯಾಮ' ಪದವೇ ನನ್ನನ್ನು ಬಹಳ ಆಕರ್ಷಿಸಿದ್ದು. ಏಕೆಂದರೆ ಯಾವುದೇ ಕಥೆ (ಕಾಲ್ಪನಿಕ ಕಥೆಯೇ ಆದರೂ) ಓದುವಾಗಲೂ ಅದರಲ್ಲಿ ಕಥೆಗಿಂತ ಹೆಚ್ಚು ಇತರ ಆಯಾಮಗಳಿಗೆ ಪ್ರಾಮುಖ್ಯತೆ ಕೊಟ್ಟು ವಿಷಯ ಗ್ರಹಣ ಮಾಡಿ ಅದರಿಂದ ಏನಾದರೂ ಒಂದು ಹೊಸತು ಕಲಿತುಕೊಳ್ಳೋದು ನನ್ನ ಸ್ವಭಾವ. ಆ ಕಥೆಯಲ್ಲಿ ಬರುವ ಊರು, ಜಾಗಗಳ ವಿವರಣೆ, ಕಥೆಗೆ ಪೂರಕವಾಗಿ ವಿವರಣೆಯಲ್ಲಿ ಸಿಗುವ ಜನರ ಜೀವನ, ಸಂಸ್ಕೃತಿ, ಉಡುಗೆ, ಆಹಾರ, ಭಾಷಾ ಶೈಲಿ, ಕಥಾ ಪಾತ್ರಗಳ ರೀತಿ ಮನಸ್ಥಿತಿ ತಾಳಿ ಯೋಚಿಸಿ ನೋಡೋದು (empathizing with the character) ಹೀಗೆ....ಅದರಂತೆಯೇ ಉಮಾ ಅವರು ಎಷ್ಟೊಂದು ಆಯಾಮಗಳಲ್ಲಿ (dimensions, perspectives) ಪರ್ವವನ್ನು ಅಳೆದು ಸಹಜವಾಗಿ ನಾವು ಯೋಚಿಸೋ ಧಾಟಿಯಲ್ಲೇ ಕೆಲವು ಪ್ರಶ್ನೆಗಳನ್ನು ಹಾಕಿ, ಮತ್ತೆ ಅದಕ್ಕೆ ಅವರಿಗನ್ನಿಸಿದ ಉತ್ತರವನ್ನೂ ಬರೆದಿರೋದು ಬಹಳ ಅಪ್ಯಾಯವೆನಿಸಿತು. ಯಾಕೆಂದರೆ, ಅವರು ಹಾಗೆ ಪ್ರಶ್ನೆಗಳನ್ನು ಕೇವಲ ಅವರ ಮನಸ್ಸಿನಲ್ಲಿ ಹಾಕಿಕೊಂಡು ಉತ್ತರ ಮಾತ್ರ ಪ್ರಬಂಧ ರೀತಿಯಲ್ಲಿ ಬರೆದಿದ್ದರೆ, ಅದು ತುಂಬಾ ನೀರಸವಾಗುತ್ತಿತ್ತು. ಹಾಗೂ ಓದುಗನಿಗೆ ಬೇಕಾದ trigger ತಕ್ಷಣಕ್ಕೆ ಸಿಗದೆ ವಿಷಯ ಮನ ಮುಟ್ಟದೇ ಹೋಗುವ ಸಾಧ್ಯತೆಯೂ ಇತ್ತು.

ನಾನು ಪರ್ವ ಓದಿದಾಗ ಮನೋವೈಜ್ಞಾನಿಕ ಮತ್ತು ಯುದ್ಧ ತಂತ್ರ, ನೀತಿಯ ಆಯಾಮ ಕುರಿತು ಮಾತ್ರ ಯೋಚಿಸಿದ್ದೆ. ಉಮಾ ಅವರ ಇನ್ನೂ ಅನೇಕ ಆಳವಾದ ವಿಚಾರಗಳ readymade triggers ಸಿಕ್ಕಿದ್ದು ತುಂಬಾ ಉಪಯುಕ್ತ ಎನಿಸಿತು. ಇನ್ನೊಮ್ಮೆ ಪರ್ವ ಓದಲೇ ಬೇಕು...ಇವರು ಚರ್ಚಿಸಿದ ಎಲ್ಲಾ ದೃಷ್ಟಿಕೋಣಗಳಿಂದ ನಾನು ಓದಿದಾಗ ಇನ್ನೂ ಹೆಚ್ಚು ಹೆಚ್ಚಾಗಿ ಪರ್ವ ನನಗೆ ತೆರೆದುಕೊಳ್ಳುತ್ತಾ ಹೋಗುತ್ತದೆ ಅನ್ನಿಸಿತು. ಈ ಅಧ್ಯಾಯದಲ್ಲಿ ಬಹಳಷ್ಟು ವಿಚಾರಗಳು ಉಮಾರವರಂತೆಯೇ ನನಗೂ ಅನ್ನಿಸಿರೋದು (ಉದಾಹರಣೆಗೆ ಕುಂತಿ ಮಗುವಿನ ಜನನದ ಬಗ್ಗೆ ಅತಿಥಿಯನ್ನು ಕೇಳೋದು, ಜರಾಸಂಧಾನ ಮನಸ್ಸಿನ ತುಮುಲಾಟ) ನನ್ನ ಬುದ್ಧಿಮಟ್ಟದ ಬಗ್ಗೆ ನನಗೆ ಕಾಂಫಿಡೆನ್ಸ್ ಕೊಟ್ಟರೆ, ಇನ್ನೂ ಕೆಲವು ಮುಖ್ಯ ವಿಚಾರಗಳ ಯೋಚನೆನೆ ನನಗೆ ಬಂದಿರಲಿಲ್ವಲ್ಲ (ಉದಾಹರಣೆಗೆ ಶ್ರೀಕೃಷ್ಣನ ವಿಶ್ವರೂಪ ದರ್ಶನ ಬಿಟ್ಟು ಹೋಗಿರೋದು) ಎಂದು ಪೆಚ್ಛೆನಿಸಿತು. ಕುಮಾರವ್ಯಾಸ ಭಾರತದ ಜೊತೆ ತುಲನೆ ಮಾಡಿರುವ ಅಧ್ಯಾಯ ನನಗೆ ಜ್ಞಾನದಾಯಕವಾಗಿ ಕಂಡುಬಂತು. ನಾನು ಮೊದಲೇ ಹೇಳಿದಂತೆ ಯಾವ ಭಾರತವನ್ನೂ ಓದಿಲ್ಲವಾದ್ದರಿಂದ ನನಗೆ ಶಾಲೆಯ ಪುಸ್ತಕದಲ್ಲಿ ಹಳೆಗನ್ನಡ ಕಾವ್ಯಗಳನ್ನು ಓದಿದ್ದು ನೆನಪಾಯಿತು. ಆಗಲೂ ಕೆಲವು ಮುಖ್ಯ ಸಾಲುಗಳನ್ನು ಉಪಾಧ್ಯಾಯರು ಹೇಳಿಕೊಟ್ಟಾಗ ಅದನ್ನು underline ಮಾಡಿಕೊಂಡು ಎಷ್ಟು ಚೆನ್ನಾಗಿ ವಿವರಿಸಿದರಲ್ಲ ನಮ್ ಮೇಷ್ಟ್ರು, ಇದನ್ನ ಹೀಗೆ ಆಸ್ವಾದಿಸಬೇಕು ಅಂತ ಮನೆಗೆ ಬಂದು ಮತ್ತೆ ಮತ್ತೆ ಮೆಲುಕು ಹಾಕುತ್ತಿದ್ದ ನೆನಪು ಹಸಿರಾಯಿತು. ಈ ಅಧ್ಯಾಯದಲ್ಲಿ ಉಮಾರವರು ಕುವೆಂಪು ಧಾಟಿಯಲ್ಲಿ 'ಪರ್ವವನೋದಿದರೆ ದ್ವಾಪರ ಕಲಿಯುಗವಾಗುವುದು' ಎಂದ ಮಾತು ಸತ್ಯವೆನಿಸಿತು. ಕುಮಾರವ್ಯಾಸನ 'ಚೋರ ನಿಂದಿಸಿ ಶಶಿಯ ಬೈದೊಡೆ, ಕ್ಷೀರವನು ಕ್ಷಯರೋಗಿ ಹಳಿದೊಡೆ....' ಎಂಬ ನಿಲುವು ಮನಸೆಳೆಯಿತು. ಇನ್ನೂ ಬಹಳಷ್ಟು ಸಾಲುಗಳು, ಅದಕ್ಕೆ ಅನುರೂಪ ಅಥವಾ ವಿರುದ್ಧವಾದ ಭೈರಪ್ಪನವರ ವರ್ಣನೆಗಳು ಓದಲು ಖುಷಿಕೊಟ್ಟವು (ಆ ಎಲ್ಲಾ ಸಾಲುಗಳನ್ನು ಈಗ ಮೊಬೈಲ್ಡ್ನಲ್ಲಿ ಟೈಪಿಸಲು ಕಷ್ಟವಾದ್ದರಿಂದ ಅದನ್ನು ಕೈಬಿಟ್ಟೆ;)) ಭೈರಪ್ಪನವರೊಡನೆ ಪ್ರಶ್ನೋತ್ತರ ಅಧ್ಯಾಯವೂ ತುಂಬಾ ಪರಿಣಾಮಕಾರಿಯಾಗಿದೆ. ಉಮಾರವರ ಉತ್ತಮ ಪ್ರಶ್ನೆಗಳು, ಅದಕ್ಕೆ ಭೈರಪ್ಪನವರ ಸಮಂಜಸ ಸರಳ ಉತ್ತರಗಳು ನಮಗೆ ಮಾರ್ಗದರ್ಶಕವಾಗಿವೆ. ನನಗೂ ಬೇರೆ ಪ್ರಾಂತದ ಜನರ ಭೇಟಿ ಅವಕಾಶ ಸಿಕ್ಕಾಗ, ಅವರು ಹೇಗೆ ನಮಗಿಂತ ವಿಭಿನ್ನ ಅಥವಾ ಸಾಮ್ಯ...ಅವರ ರೀತಿ ರಿವಾಜುಗಳು ಹೇಗೆ, ಯಾಕೆ ಹಾಗೆ ಅಂತೆಲ್ಲ ವಿಮರ್ಶಿಸೋದು ಅಭ್ಯಾಸ...ಅಂತೆಯೇ ಭೈರಪ್ಪನವರು ಉತ್ತರ ಭಾರತದ ಜನ ಜೀವನದ ಅಧ್ಯಯನದ ಬಗ್ಗೆ ಹೇಳಿರೋದನ್ನ ...ಹಾಗೆ ಬಹಳ ವರ್ಷಗಳ ತಯಾರಿಯಿಂದಲೇ ಯಾವುದಾದರೂ ಬರವಣಿಗೆ ಅವರು ಮಾಡುವುದರಿಂದಲೇ ಅವರ ಕೃತಿಗಳು ಅಷ್ಟು ಮೇಲು ಸ್ತರದಲ್ಲಿ ಮೂಡಿಬರುತ್ತವೆ ಅನ್ನೋದರಲ್ಲಿ ಎರಡು ಮಾತಿಲ್ಲ. ಜೊತೆಗೆ ಅವರು ಬಹಳ ಸಂಶೋಧನೆ ಮಾಡಿ ಬರೆದ ಬಹಳ ಪುಸ್ತಕಗಳನ್ನೂ ಅದ್ಯಯಿಸಿ ಅವರ ವ್ಯಾಪ್ತಿ ಇನ್ನೂ ಹೆಚ್ಚಿಸಿಕೊಳ್ಳೋದು ನಾವು ಕಲಿಯಬೇಕಾದ ಅಂಶ. ಅವರೇ ಹೇಳಿದಂತೆ ನಮ್ಮ 'ವ್ಯಾಸಂಗ ದಾರಿದ್ರ್ಯ'ದಿಂದ ನಾವು ಬಹಳ ವಿಷಯ ತಿಳಿದುಕೊಳ್ಳುವ ಅವಕಾಶ ಕಳೆದುಕೊಳ್ಳುತ್ತೇವೆ. ಒಂದು ಕೃತಿಯನ್ನು ಹೇಗೆ ಆಸ್ವಾದಿಸಬೇಕೆಂದು ಅವರು ಕೊಟ್ಟ ಸೂಚನೆಗಳು (guidance) - willing suspension of disbelief, suspension is not dismissal, ಬೇರೆ ಬೇರೆ ರೀತಿಯ ಸಾಹಿತ್ಯ ಅಧ್ಯಯನದ ಮಾರ್ಗಗಳು ಹೇಗೆ ಸದಭಿರುಚಿ ಹೆಚ್ಚಿಸುತ್ತವೆ - ತುಂಬಾ ಅಮೂಲ್ಯ ಸಂಗತಿಗಳು. ದ್ರಷ್ಟಾರ ಮತ್ತು ಸಂಗ್ರಾಹಕರು ಅಂತ ವೇದಜ್ಞಾತರಲ್ಲಿ ವಿಂಗಡಣೆ, ಅವರ ಶಕ್ತಿ, ಯುಕ್ತಿಗಳ ವ್ಯತ್ಯಾಸ, Oppenheimer ಭಗವದ್ಗೀತೆಯ ಶ್ಲೋಕ ಹೇಳಿದ್ದು ಹೀಗೆ ಬಹಳ ಹೊಸ ಸಂಗತಿಗಳನ್ನು ತಿಳಿದುಕೊಂಡೆ. ಭಾವದ ಎತ್ತರಕ್ಕೆ ಹೋದಾಗಿನ ಮನಸ್ಥಿತಿ ಅದು ಕಳೆದ ಮೇಲೆ ಮತ್ತೆ ಆ ಭಾವನೆ ಬರದೇ ಇರುವುದು...ಓದುಗರಿಗೂ, ಅಧ್ಯಯನ ಮಾಡುವವರಿಗೂ ಆಗುವ ಇದೇ ಭಾವಗಳ ಅನುಭೂತಿ ತುಂಬಾ ಮನಸ್ಸಿಗೆ ನಾಟಿತು. ನನಗೂ ಹೀಗೆ ಓದುವಾಗ, ಕಲಿಯುವಾಗ ಭಾವೋದ್ರೇಕ ಆದ ಸಂದರ್ಭಗಳ ನೆನಿಕೆಯಾಯಿತು. ರಾಮಾಯಣ ಕಾಲದ ಚೈತ್ಯಗಳ ವಿಷಯ, ಸನ್ಯಾಸತ್ವದ ಮೂಲಕಲ್ಪನೆ (concept) ಬೌದ್ಧಮತದಿಂದ ಬಂದಿದ್ದು ಇತ್ಯಾದಿ ವಿವರಗಳು ಶುಕನ ವಿಷಯ ಸೇರಿಸಿ ಹೇಳಿದ ರೀತಿ...ಇದೆಲ್ಲ ವಿವರಗಳು ಭೈರಪ್ಪನವರೊಡನೆ ಪ್ರಶ್ನೋತ್ತರ ಅಲ್ಲದೆ ಹಾಗೇ ಹೊರಬರಲು ಸಾಧ್ಯವೇ ಇರಲಿಲ್ಲ. ಅದರ ಜೊತೆ ನನ್ನ ಮನಸ್ಸಿನಲ್ಲಿ ಯಾವಾಗಲೂ ಏಳುವ ಪ್ರಶ್ನೆಯೊಂದು ಮತ್ತೆ ಮರುಕಳಿಸಿತು....ಸನಾತನ ಹಿಂದೂ ಧರ್ಮಕ್ಕೆ ಬೌಧ್ದ ಧರ್ಮದಿಂದ competition ಇತ್ತು ಧರ್ಮ ಪ್ರಚಾರ ಭರದಿಂದ ಚಾಲ್ತಿಯಲ್ಲಿದ್ದ ಕಾಲದಲ್ಲಿ ಅಂತ ಕೇಳ್ತೀವಲ್ಲ...ಹಿಂದೂ ಧರ್ಮದಲ್ಲಿ ಯಾಕೆ ಬುದ್ಧನನ್ನ ವಿಷ್ಣುವಿನ ಅವತಾರ ಅಂತೀವಿ? ಬೌಧ್ದರು (ಬುದ್ಧನ ಅನುಯಾಯಿಗಳು) ಅದನ್ನು ಒಪ್ಪೋದಿಲ್ಲ....ಆದರೆ ಸ್ವತಃ ಬುದ್ಧ ಹಿಂದೂ ಧರ್ಮವನ್ನ ವಿರೋಧಿಸೋ ಬಗ್ಗೆ ಹೇಳಿದ್ನ? ಈ ವಿಷಯವಾಗಿ ನಾನು ತಿಳಿದುಕೊಳ್ಳುವ ತುಂಬಾ ಪ್ರಯತ್ನವೇನೂ ಮಾಡಿಲ್ಲ (just some lazy google search through which I didn't get satisfying answers).... ಇನ್ನೊಂದು ಚಿಕ್ಕ ಪ್ರಶ್ನೆ...ಗಡವಾಲ್ ಪ್ರಾಂತದಲ್ಲಿ ಬಹುಪತಿತ್ವವೋ ಅಥವಾ ಬಹುಪತ್ನಿತ್ವ ಇದ್ದಿದ್ದೋ ಅನ್ನೋ ಗೊಂದಲ...ಅದು ಮುದ್ರಣ ದೋಷವೇ ಅಥವಾ ನಾನೇ ಸರಿಯಾಗಿ ಓದಲಿಲ್ಲವೇನೋ... ಒಟ್ಟಿನಲ್ಲಿ ಹೇಳುವುದಾದರೆ, ಉಮಾ ಅವರ ಈ ಪ್ರಯತ್ನದಿಂದ ನನಗೆ ಭೈರಪ್ಪನವರ ಆತ್ಮೀಯ ಪರಿಚಯ, ಅವರೆಲ್ಲಾ ಪುಸ್ತಕಗಳ, ಅದರ ವಿಷಯಗಳ ಪರಿಚಯದ ಜೊತೆ ಉಮಾ ಅವರು ಮಾಡಿದ ಎಷ್ಟೋ ಪುಸ್ತಕ, ಲೇಖನಗಳ ಆಳವಾದ ಅಧ್ಯಯನದ ಬಗ್ಗೆ, ನಾವು ಈ ಮಹಾಕಾವ್ಯಗಳ ಸಾಗರದಲ್ಲಿ ಹೊಕ್ಕರೆ ಏನೇನು ಪಡೆಯಬಹುದೆಂಬ ಕಲ್ಪನೆ ಮತ್ತು ತುಂಬಾ ಹೊಸ ವಿಷಯಗಳ ಜ್ಞಾನ...ಎಲ್ಲಕ್ಕಿಂತ ಹೆಚ್ಚಾಗಿ ಭೈರಪ್ಪನವರು ಮತ್ತು ಉಮಾರ ಸರಳ ಸಜ್ಜನ ವ್ಯಕ್ತಿತ್ವದ ಪರಿಚಯ ಸಿಕ್ಕಿತು. ಈ ನಿಟ್ಟಿನಲ್ಲಿ ಇದೊಂದು ಬಹಳ ಅರ್ಥಪೂರ್ಣ ಮತ್ತು ಹೊಸ ಓದುಗರಲ್ಲಿ ಹೀಗೆ ಸಾಹಿತ್ಯ ಅಧ್ಯಯನದ ಕಿಡಿ ಹೊತ್ತಿಸುವೆಡೆಗೆ ಯಶಸ್ವೀ ಪ್ರಯತ್ನ. ಅಭಿನಂದನೀಯ ಸಾಧನೆ.


2 Comments

Rated 0 out of 5 stars.
No ratings yet

Add a rating
Sunil Deshpande
Sunil Deshpande
Aug 10, 2022

ಮನದಾಳದಿಂದ ಬಂದ ಪ್ರತಿಕ್ರಿಯೆ, ಅದರ ಪ್ರಸ್ತುತಿ ಉಲ್ಲೇಖನೀಯ.

Like
vidyaram2
Aug 10, 2022
Replying to

ತುಂಬು ಹೃದಯದ ಧನ್ಯವಾದಗಳು ಸರ್. ಇಂತಹ ಬರಹಗಳಿಗೆ ಪ್ರೋತ್ಸಾಹ ನೀಡುವಂತ ನಿಮ್ಮಂತ ಸಮಾನ ಮನಸ್ಕ ಸಹೃದಯರು ಸಿಕ್ಕಿದ್ದು ನನ್ನ ಭಾಗ್ಯ.

Like
  • alt.text.label.Facebook
  • alt.text.label.LinkedIn
bottom of page