top of page

ಕಾನೂರು ಹೆಗ್ಗಡತಿ

  • vidyaram2
  • Jan 26, 2023
  • 4 min read


ಬಹಳ ಕಾಲದಿಂದ ಓದಬೇಕೆಂದು ಬಯಸಿದ, ಎಳವೆಯಲ್ಲಿ ಒಮ್ಮೆ ಓದಲು ಪ್ರಯತ್ನಿಸಿ ರುಚಿಸದೆ ಮುಗಿಸಲಾರದ ಕುವೆಂಪು ಅವರ ‘ಕಾನೂರು ಹೆಗ್ಗಡತಿ’ಯನ್ನು ಇತ್ತೀಚಿಗೆ ಓದಿ ಮುಗಿಸಿದೆ. ಈ ಬಾರಿ ಕಾದಂಬರಿ ರುಚಿಸಿತಷ್ಟೆ ಅಲ್ಲದೆ ಎಲ್ಲೂ ಬೇಸರ ಉಂಟುಮಾಡದೇ ಕೊನೆಯ ತನಕ ಶೀಘ್ರವಾಗಿ ಓದಿಸಿಕೊಂಡು ಹೋಯಿತು ಎಂಬುದೇ ನನ್ನ ಪ್ರಗತಿಯ ಮಟ್ಟಿಗೆ ನನಗೆ ಖುಷಿ ಕೊಟ್ಟ ಸಂಗತಿ. ಆದರೂ ಓದಿ ಮುಗಿದ ಕೂಡಲೇ ಅದರ ಕುರಿತು ಬ್ಲಾಗಿಸಲು ಆತ್ಮವಿಶ್ವಾಸ ಸಾಲದೇ, ಸಣ್ಣ ಟಿಪ್ಪಣಿ ಮಾಡಿಕೊಂಡು ಕೈಬಿಟ್ಟಿದ್ದೆ! ನಿನ್ನೆ ತರಗತಿಯಲ್ಲಿ ಪೂರ್ಣಿಮಾ ಮೇಡಂ ಆ ಕುರಿತು ಬರೆಯಿರಿ ಎಂದು ಮನೆಗೆಲಸ ನೀಡಿದ ಮೇಲೆ ಗತ್ಯಂತರವಿಲ್ಲದೇ ನನ್ನ ಅನಿಸಿಕೆ ಬರೆಯುವ ಪ್ರಯತ್ನವನ್ನಿಲ್ಲಿ ಮಾಡಿದ್ದೇನೆ.


‘ಕಾನೂರು ಹೆಗ್ಗಡತಿ ’1936 ರಲ್ಲಿ ಮುದ್ರಣ ಕಂಡ ಕುವೆಂಪು ಅವರ ಮೊದಲ ಕಾದಂಬರಿ. 2011 ರಲ್ಲಿ ಹದಿನೆಂಟನೆಯ ಮುದ್ರಣ ಕಂಡಿದೆ. ಕುವೆಂಪು ಅವರು ಅರಿಕೆ ಮಾಡಿದಂತೆ ಕೃತಿ ರಚನೆಯಂತೆಯೆ ಕೃತಿಯ ರಸಾಸ್ವಾದನೆಯೂ ಒಂದು ಸೃಷ್ಟಿಕಾರ್ಯ. ಸೃಷ್ಟಿಕಾರ್ಯವಲ್ಲದ ಸರ್ವ ಕರ್ಮಗಳೂ ನೀರಸವಾಗುತ್ತವೆ. ಕೋಲಾಹಲದಲ್ಲಿ ಓದದೇ ಸಾವಧಾನವಾಗಿ ಸಚಿತ್ರವಾಗಿ ಸಜೀವವಾಗಿ ಓದಿಯೇ ಸವಿಯಬೇಕಾದ ಸುಮಾರು 590 ಪುಟಗಳ ದೀರ್ಘ ಕಾದಂಬರಿ ಇದು.


ಮಲೆನಾಡಿನ ಜನಜೀವನವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ದೃಶ್ಯ ಕಾವ್ಯ ಸದೃಶವಾದ ಈ ಕಾದಂಬರಿಯಲ್ಲಿ, ಮಲೆನಾಡಿನ ಗುಡ್ಡ, ಕಾಡುಗಳ ಪ್ರಕೃತಿಯ ಸೌಂದರ್ಯವನ್ನು, ತಾವು ಕಂಡ ಸಣ್ಣ ಸಣ್ಣ ವಿವರಗಳ ಸಹಿತ ಕುವೆಂಪು ಅವರು ವರ್ಣಿಸಿರುವ ರೀತಿ ಅನನ್ಯವಾಗಿದೆ. ಚಿಕ್ಕಂದಿನಲ್ಲಿ ವರ್ಷದಲ್ಲಿ ಒಂದೆರಡು ತಿಂಗಳುಗಳನ್ನು ಅದೇ ಮಲೆನಾಡಿನಲ್ಲಿ ಕಳೆಯುವ ಅವಕಾಶವಿದ್ದರೂ ಕುವೆಂಪು ಬಣ್ಣಿಸುವಂತೆ ಆ ಸೌಂದರ್ಯವನ್ನು ಸವಿಯದೇ ಇದ್ದ ನನ್ನಂತಹ ಓದುಗರೂ, ಈ ಕಾದಂಬರಿ ಓದುವಾಗ ಆ ಬದುಕನ್ನು ಮತ್ತೆ ಕಣ್ಮುಂದೆ ತಂದುಕೊಂಡು ಸವಿದು ಸುಖಿಸಬಹುದಾದಂತಹ ಮಾಂತ್ರಿಕತೆ ಈ ರಸಋಷಿಯ ವಿವರಣೆಗಳಲ್ಲಿದೆ.


ಕುವೆಂಪು ಅವರ ಉನ್ನತ ಆದರ್ಶ, ರಾಮಕೃಷ್ಣ ಪರಮಹಂಸ, ವಿವೇಕಾನಂದ, ಬುದ್ಧರು ಅವರ ಮೇಲೆ ಬೀರಿದ ಪ್ರಭಾವಗಳನ್ನು ಮುಖ್ಯ ಪಾತ್ರವಾದ ಹೂವಯ್ಯನಲ್ಲಿ ಸ್ಪಷ್ಟವಾಗಿ ನೋಡಬಹುದು. ಆಗಾಗ ತಟ್ಟನೆ ಭಾವ ಸಮಾಧಿಗೆ ಏರಿ ಆತ್ಮಾನಂದದಲ್ಲಿ ಲೀನವಾಗುವ ಹೂವಯ್ಯನ ಪಾತ್ರವನ್ನು ಓದಿದಾಗ ರಾಮಕೃಷ್ಣರ ಜೀವನ ಚರಿತ್ರೆಯೇ ಕಣ್ಣ ಮುಂದೆ ಬರುತ್ತದೆ. ಆದರೂ ರಾಮಕೃಷ್ಣರನ್ನು ಪರಮಹಂಸರೆಂದೂ, ಸಾಮಾನ್ಯ ಮಾನವರಿಗಿಂತ ಬಹು ಉನ್ನತರು ಎಂದು ಒಪ್ಪ್ಪಿರುವ ಮನಸ್ಸಿಗೆ ಸಾಮಾನ್ಯ ಮನುಷ್ಯನಾದ ಹೂವಯ್ಯನ ಈ ಗುಣ, ನಡತೆ ಏಕೋ ಅಷ್ಟು ಸಹಜ ಎಂದೆನಿಸಲಿಲ್ಲ (The character is too good to be true ಎಂಬಂತೆ )! ಆದರೆ ಆ ರೀತಿ ಬೇಕೆಂದಾಗ ಭಾವ ಸಮಾಧಿಗೆ ಏರಬಲ್ಲ ಅವನ ಸಾಮರ್ಥ್ಯದ ಕುರಿತು ಕೊಂಚ ಈರ್ಷ್ಯೆಯಾದದ್ದು ಸುಳ್ಳಲ್ಲ! ಕುವೆಂಪು ಅವರ ಪಾತ್ರವನ್ನು ಹೀಗೆ ಅಳೆಯುವ ಯೋಗ್ಯತೆ, ದಾರ್ಷ್ಟ್ಯ ಖಂಡಿತಾ ನನಗಿಲ್ಲ. ನನ್ನ ಯೋಗ್ಯತೆಯನ್ನು ಪ್ರಾಮಾಣಿಕವಾಗಿ ತೋರ್ಪಡಿಸುವ ಪ್ರಯತ್ನವಿದಷ್ಟೇ.


ಉಳಿದಂತೆ ಬರುವ ಎಲ್ಲಾ ಪಾತ್ರಗಳನ್ನು ಬಹಳ ನೈಜವಾಗಿ ಆ ಕಾಲಘಟ್ಟದ ಮಲೆನಾಡಿನ ಜೀವನದಲ್ಲಿ ವಾಸ್ತವವೆನಿಸಿರುವಂತೆಯೆ ಕಟ್ಟಿ ಕೊಟ್ಟಿದ್ದಾರೆ. ಕಾನೂರು ಗೌಡರ ಮನೆತನದ ಒಂದು ಪೂರ್ತಿ ಜೀವಮಾನದ ಕತೆಯಿದು. ಚಂದ್ರಯ್ಯ ಗೌಡರ ಯೌವ್ವನದ ದರ್ಪ, ಗತ್ತುಗಳಿಂದ ಪ್ರಾರಂಭವಾಗಿ ಅವರ ವೃದ್ದಾಪ್ಯ, ಕೃಶವಾದ ಶರೀರದೊಂದಿಗೆ ಮೃದುವಾಗುವ ಮನಸ್ಸು, ಸುಬ್ಬಮ್ಮ ಹೆಗ್ಗಡತಿಯ ವಿವಿಧ ಅವಸ್ಥೆಗಳು, ಅವಳ ಏಳು ಬೀಳುಗಳು, ಹೂವಯ್ಯ, ರಾಮಯ್ಯ, ಸೀತೆಯರ ಬವಣೆಗಳು, ಅದನ್ನು ಮೆಟ್ಟಿ ನಿಲ್ಲಲು ಅವರೆಲ್ಲ ತಮ್ಮೊಳಗೆ ಕಂಡುಕೊಂಡ ಮಾರ್ಗ ಎಲ್ಲವನ್ನೂ ಕುವೆಂಪು ಅವರು ಈ ಕಾದಂಬರಿಯ ಕಥಾ ಹಂದರದಲ್ಲಿ ಸೊಗಸಾಗಿ ಬೆಸೆದಿದ್ದಾರೆ. ತುಂಬು ಕುಟುಂಬದ ಮನೆಯ ಜನರು, ಘಟ್ಟದ ಕೆಳಗಿನಿಂದ ಬಂದ ಸೇರೆಗಾರರು, ಅವರ ಪ್ರೇಯಸಿ ಗಂಗೆ, ಇನ್ನೂ ಹಲವು ಆಳು ಕಾಳುಗಳು- ಒಕ್ಕಲುಗಳು, ಜೀತದಾಳುಗಳು, ಒಳಕೆಲಸದ ಆಳುಗಳು, ಊರಿನ ಅಗ್ರಹಾರದ ಜೋಯಿಸರು, ಮುತ್ತಳ್ಳಿಯ ಶಾಮಯ್ಯ ಗೌಡ್ರ ಕುಟುಂಬ, ಸೀತೆಮನೆಯ ಸಿಂಗಪ್ಪ ಗೌಡ್ರ ಕುಟುಂಬ, ಎತ್ತು, ದನ, ಕರು, ನಾಯಿ, ಹೋತ, ಕುರಿಗಳು ಎಲ್ಲವೂ ಕಾದಂಬರಿಗೆ ಜೀವ ತುಂಬಿವೆ . ಹೂವಯ್ಯನ ಉನ್ನತ ಆದರ್ಶದ ವಿಚಾರಧಾರೆಗಳು ಮಾತಿಗೆ ನಿಲುಕದ ಆನಂದವನ್ನು ಒಂದೆಡೆ ನೀಡಿದರೆ, ಇನ್ನೊಂದೆಡೆ ಹಳ್ಳಿಯ ಕೆಲ ಜನಾಂಗಗಳಲ್ಲಿ ಆ ಕಾಲದಲ್ಲಿ ಆಚರಣೆಯಲ್ಲಿದ್ದ ಗೊಡ್ಡು ಸಂಪ್ರದಾಯಗಳು, ಪ್ರಾಣಿ ಹಿಂಸೆ,ಅನಾಚಾರಗಳ ವರ್ಣನೆ ಮನಸ್ಸನ್ನು ನಡುಗಿಸಿ ನಲುಗಿಸುವಂತೆ ಭೀಕರವಾಗಿದೆ. ಒಟ್ಟಿನಲ್ಲಿ ಕಾದಂಬರಿಯಲ್ಲಿ ನವರಸಗಳು ಸಮತೋಲನ ಕಾಪಾಡಿಕೊಂಡಿವೆ.


ಸುಬ್ಬಮ್ಮನ ಮುಗ್ಧ ಜೀವನ ಮನಸ್ಸನ್ನು ತಟ್ಟುತ್ತದೆ. ಈ ಕಾದಂಬರಿಯಾಧಾರಿತ ಚಲನಚಿತ್ರವನ್ನು ವೀಕ್ಷಿಸಿದಾಗ ಅವಳ ಪಾತ್ರದ ಸೂಕ್ಷ್ಮತೆ ಮನಸ್ಸಿಗೆ ಇಷ್ಟು ತಟ್ಟಿರದಿದ್ದರೂ, ಇದನ್ನು ಓದುವಾಗ ನಟಿ ತಾರಾ ಅವರೇ ಸುಬ್ಬಮ್ಮನಾಗಿ ಕಣ್ಮುಂದೆ ಸುಳಿದದ್ದು ಸುಳ್ಳಲ್ಲ. ಬಡತನದಲ್ಲಿ ಬೆಳೆದು,ತುಂಬು ಯೌವನದಲ್ಲಿ ಅನೇಕ ವಯೋಸಹಜವಾದ ಆಸೆ,ಆಕಾಂಕ್ಷೆಗಳನ್ನು ಹೊಂದಿದ್ದ ಸುಬ್ಬಮ್ಮ, ಊರಿನ ಪ್ರತಿಷ್ಠಿತ ಸಿರಿವಂತ ಮುದುಕ ಚಂದ್ರಯ್ಯ ಗೌಡರ ಕೈ ಹಿಡಿದ ಮೇಲೆ ಯಾವುದೇ ಕೆಟ್ಟ ಆಲೋಚನೆ, ಕಾಮನೆಗಳಿಗೆ ಬಲಿಯಾಗದೆ ಬಾಳುತ್ತಾಳೆ. ಗಂಡ ಮಾಡಿದ ಶೋಷಣೆ, ಕಿರುಕುಳಗಳನ್ನು ಸಹಿಸಿ, ಅವನಿಂದ ಪರಿತ್ಯಕ್ತೆಯಾಗಿ ಮತ್ತೆ ತವರಿನ ಹಂಗಿನಲ್ಲಿ ಬಡತನದ ಬಾಳಿಗೆ ನೂಕಲ್ಪಡುತ್ತಾಳೆ. ಗಂಡನ ಕೊನೆಯ ಕಾಲಕ್ಕೆ ಅವನ ಚಾಕರಿ ಮಾಡಲು ಹಿಂದಿರುಗಿ, ಅವನು ಮಾಡಿದ ದುಷ್ಕೃತ್ಯಗಳನ್ನು ಮರೆತು ತಾಯಿಯ ಮಮತೆಯಿಂದ ಅವನ ಸೇವೆ ಮಾಡುತ್ತಾಳೆ. ಅವನು ಸತ್ತ ಮೇಲೆ ಅವಳಲ್ಲಿ ಅಡಗಿದ್ದ ಸಿರಿವಂತಿಕೆಯ ಮದ ಹೊರಬರಲು ಅವಕಾಶವಾದಾಗ ಹೆಗ್ಗಡತಿಯಾಗಿ ಆಳುತ್ತಾಳೆ. ಅಲ್ಲಿಯವರೆಗೆ ಸೈರಣೆಯಿಂದ ಇದ್ದ ಅವಳು, ಆಗ ಮನದಾಸೆಯ, ಪರಿಸ್ಥಿತಿಯ ಕೈವಶಳಾಗಿ ಸೇರೆಗಾರರ ಆಮಿಷಕ್ಕೆ ಬಲಿಯಾಗಿ ದುರಂತದ ಅಂತ್ಯ ಕಾಣುತ್ತಾಳೆ. ಅವಳ ಈ ಸಮಗ್ರ ಚಿತ್ರಣ ಯಾವುದೇ ಸರಳ ಹೆಣ್ಣಿನಲ್ಲೂ ಆಳದಲ್ಲಿ ಹುದುಗಿರುವ ಅನೇಕ ಆಯಾಮಗಳ ಪರಿಚಯ ಮಾಡಿಕೊಡುತ್ತವೆ. ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಂಡು ಬಾಳುವ ಹೆಣ್ಣಿನ ಸಾಮರ್ಥ್ಯ, ವಾತಾವರಣ ಅವಳನ್ನು ಒರಟಾಗಿ ರೂಪಿಸಿದರೂ, ಬಾಲಿಶ ಆಸೆ, ಕನಸುಗಳು ಚೂರಾದರೂ ಸಹಜ ಬಾಳ್ವೆ ನಡೆಸುವ ದಿಟ್ಟತನ, ಕ್ರೂರತೆಗೆ ಬಲಿಯಾದರೂ ಮಾತೃತ್ವವನ್ನು ಕಾಪಾಡಿಕೊಳ್ಳುವ ಕೋಮಲತೆ ಹೆಣ್ಣಿನ ನೈಸರ್ಗಿಕ ಶಕ್ತಿ ಎಂದು ಕುವೆಂಪು ಸುಬ್ಬಮ್ಮನ ಪಾತ್ರದ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ.


ನನಗೆ ಖುಷಿ ಕೊಟ್ಟು ಮೆಲಕು ಹಾಕುವಂತೆ ಮಾಡಿದ ಕಾದಂಬರಿಯ ಕೆಲ ಸಾಲುಗಳನ್ನು ಇಲ್ಲಿ ಬರೆದುಕೊಂಡರೆ ಮತ್ತೆ ಬೇಕೆಂದಾಗ ಓದಿ ಆಸ್ವಾದಿಸಲು ಅನುಕೂಲ ಎಂಬ ಉದ್ದೇಶದಿಂದ ಕೆಳಗೆ ಬರೆದಿದ್ದೇನೆ. ಈ ಲೇಖನ ಓದುವವರಿಗೂ ಆ ಸಾಲುಗಳು ಖುಷಿ ಕೊಟ್ಟು ಕಾದಂಬರಿಯನ್ನು ಓದಲು ಪ್ರೇರೇಪಿಸಿದರೆ ಸಂತೋಷ.


ಹೂವಯ್ಯ ತನ್ನ ಪ್ರೇಯಸಿ ಸೀತೆಯನ್ನು ನೆನೆದು ಮಧುರ ಭಾವದಲ್ಲಿ ತೇಲಾಡುತ್ತ ಹಾಸಿಗೆಯಲ್ಲಿ ಒರಗಿ ಕಿಟಕಿಯಿಂದಾಚೆ ನೋಡುತ್ತಿದ್ದ ಸಂದರ್ಭದಲ್ಲಿ ಬರುವ ಸಾಲುಗಳು ಇವು.

"ಕಿಟಕಿಯಲ್ಲಿ ಕಂಡ ನಕ್ಷತ್ರ ಅವನನ್ನು ದೂರ ದೂರ ದೂರಕ್ಕೆ ಎಳೆದೊಯ್ದು ಈ ಪ್ರಪಂಚವನ್ನೂ ಅದರ ವ್ಯಾಪಾರಗಳನ್ನೂ ಕ್ಷುದ್ರವಾಗಿ ಕಾಣುವಂತೆ ಮಾಡಿಬಿಟ್ಟಿತು. ಹಾಗೆಯೇ ಸೀತೆಯನ್ನು ನೆನೆದ ಹೂವಯ್ಯನ ಮನಸ್ಸಿಗೆ ವಿಶಾಲ ವಿಶ್ವವೇ ಕ್ಷುದ್ರವಾದಂತೆ ತೋರಿತು. ಲಲನೆಯ ಸೌಂದರ್ಯ ಪ್ರೇಮಗಳ ಪ್ರಳಯ ಜಾಲದಲ್ಲಿ ಕೋಟ್ಯಂತರ ಗ್ರಹ ನಕ್ಷತ್ರ ನೀಹಾರಿಕಾ ಖಚಿತವಾದ ಅನಂತ ಕಾಲದೇಶಗಳ ಮಹಾಬ್ರಹ್ಮಾಂಡ ಸಣ್ಣದೊಂದು ಗುಳ್ಳೆಯಂತೆ ನಿಸ್ಸಹಾಯವಾಗಿ ತೇಲುತ್ತಿತ್ತು!”

ಆಹಾ! ಎಂತಹ ಅದ್ಭುತ ಕಲ್ಪನೆ ಕುವೆಂಪು ಅವರದ್ದು! ಬ್ರಹ್ಮಾಂಡದಲ್ಲಿ ಈ ಪ್ರಪಂಚ ಯಕಶ್ಚಿತ್ ಆಗಿರಬಹುದು. ಆದರೆ ನಮ್ಮ ಅಂತರಂಗದಲ್ಲಿಯ ಮಧುರ ಭಾವನೆಗಳು, ಪ್ರೇಮ, ಸೌಂದರ್ಯದ ಪ್ರಳಯದಲ್ಲಿ ಇಡೀ ವಿಶ್ವವೂ ಯಕಶ್ಚಿತ್ ಎನ್ನುವುದೂ ಅಷ್ಟೇ ಸತ್ಯ. ಹೊರಗಿರುವ ವಿಶಾಲತೆಯೆಲ್ಲಾ ನಮ್ಮ ಮನದ ದಹರಾಕಾಶದಲ್ಲಿಯೂ ಇವೆ. ಯಾವುದೊಂದು ಸಣ್ಣ ಜೀವಿಯ ಅನುಭವವೂ ಬ್ರಹ್ಮಾಂಡದ ಅನಂತತೆಯನ್ನು ಮೀರಿ ಬೆಳೆಯಬಲ್ಲದು ಎಂಬುದಕ್ಕೆ ಅವರ ಈ ಸುಂದರ ವ್ಯಾಖ್ಯಾನ ಮನಸೆಳೆಯುವಂತಿದೆ.


ಜಾಕಿ ಎಂಬ ಆಳು ಸಿಟ್ಟಿನ ಭರದಲ್ಲಿ ಮುಗ್ಧ ಮೂಕ ನಾಯಿಯನ್ನು ಕೊಂದ ಸಂದರ್ಭದಲ್ಲಿ ಕುವೆಂಪು ಅವರು ಮಾಡುವ ಮನೋಜ್ಞ ವಿಶ್ಲೇಷಣೆ ಹೀಗಿದೆ.

“ಧೈರ್ಯದಲ್ಲಿ ಎರಡು ವಿಧಗಳಿವೆ. ಒಂದನೆಯದು ಮೃಗೀಯ ಮತ್ತು ತಾಮಸ. ಎರಡನೆಯದು ದೈವಿಕ ಮತ್ತು ಸಾತ್ವಿಕ. ತಾಮಸ ಧೈರ್ಯ ರಾಗಾಮೂಲವಾದುದು. ಕ್ಷಣಿಕ ಉದ್ರೇಕಗಳಿಂದ ಉದ್ದೀಪನವಾದುದು, ಅವಿವೇಕವಾದುದು. ಸಾತ್ವಿಕ ಧೈರ್ಯ ನೀತಿಮೂಲವಾದುದು. ಮೊದಲನೆಯದು ಹುಲ್ಲು ಬೆಂಕಿಯಂತೆ; ಎರಡನೆಯದು ಕಲ್ಲಿದ್ದಲ ಬೆಂಕಿಯಂತೆ. ಮೃಗೀಯ ಧೈರ್ಯ ದೇಹಬಲದ ಮೇಲೆ ನಿಂತಿದೆ. ಅದು ತನಗಿಂತಲೂ ಬಲವತ್ತರವಾದ ಪ್ರತಿಭಟನೆಯಿಂದ ಕುಗ್ಗಿ ಹೋಗುತ್ತದೆ. ದೈವಿಕ ಧೈರ್ಯ ಆತ್ಮಬಲದ ಮೇಲೆ ನಿಂತಿದೆ. ಅದು ಕಷ್ಟ, ಸಂಕಟ, ಪ್ರತಿಭಟನೆಗಳಿಂದ ಮತ್ತಿನಿತು ಹಿಗ್ಗಿ ಉಜ್ವಲವಾಗುತ್ತದೆ. ಮೊದಲನೆಯದಕ್ಕೆ ಮರಣಭಯವಿದೆ, ಎರಡನೆಯದಕ್ಕೆ ಅದಿಲ್ಲ. ಮೊದಲನೆಯದು ಕೇಡಿಯಾಗಿರುವ ಮಾರುವೇಷದ ಹೇಡಿತನ. ಎರಡನೆಯದು ಶಿಲುಬೆಗೇರುವ ಯೇಸುಕ್ರಿಸ್ತನ ಅಪಾರ ಸಾಮರ್ಥ್ಯ.”

ಜಗತ್ತು ಆನಂದಮಯವಾಗುವುದರ ಕುರಿತು ಸೀತೆಗೆ ಹೂವಯ್ಯ ವಿವರಿಸುವ ಒಂದು ಸಂದರ್ಭದಲ್ಲಿ ಅಂತರ್ಗತವಾದ ಯಾವುದೊ ಒಂದು ಭಾವನೆಗೆ ಸಂಪೂರ್ಣ ಶರಣಾಗಿ ಅದರಲ್ಲಿ ಲೀನವಾಗುವುದು ಹೇಗೆ ಎಂದು ವಿವರಿಸುವ ಪರಿ ಹೀಗಿದೆ:

“ಆಗಸದಲ್ಲಿ ಮಹಾಸರ್ಪದ ಮಹಾಜಿಹ್ವಗಳಂತೆ ಬಳ್ಳಿ ಮಿಂಚು ಕುಣಿಯುವುದನ್ನು ನೋಡಿ ಕಣ್ಣೀರು ಕರೆದಿದ್ದೇನೆ.. ಪೂರ್ಣಿಮಾ ರಾತ್ರಿಯಲ್ಲಿ ಚಂದ್ರನು ಶುಭ್ರ ಜ್ಯೋತ್ಸ್ನೆ ಹಾಲು ಚೆಲ್ಲಿದಂತೆ ಕಾಡುಗಳ ಮೇಲೆ ಮಲಗಿರುವುದನ್ನು ನೋಡಿ ಕಣ್ಣೀರು ಕರೆದಿದ್ದೇನೆ...ಮಹಾತ್ಮರ ಕಥೆಗಳನ್ನು ಓದುತ್ತ ಕಣ್ಣೀರು ಕರೆದಿದ್ದೇನೆ...ನಿನಗೆ ಆಶ್ಚರ್ಯವಾಗಬಹುದು.. ನನಗೇಕೆ ಕಣ್ಣೀರು ಬರುತ್ತದೆ ಎಂದು… ನಿನಗೂ ಕಣ್ಣೀರು ಕರೆಯುವ ಶಕ್ತಿಯಿದೆ. ಅದನ್ನು ನಿನಗ್ಯಾರೂ ಹೇಳಿಕೊಟ್ಟಿಲ್ಲ. ಚಿಂತೆಯಿಲ್ಲ. ನಾನು ಹೇಳಿಕೊಡುತ್ತೇನೆ. ಆಮೇಲೆ ನಿನ್ನ ದೃಷ್ಟಿ ಬದಲಾಯಿಸುತ್ತದೆ. ನಿನ್ನ ಆತ್ಮವೇ ಬೇರೆಯಾಗುತ್ತದೆ...ಜಗತ್ತೆಲ್ಲ ಆನಂದಮಯವಾಗುತ್ತದೆ. ದುಃಖವೂ ಕೂಡ ಮಧುರವಾಗುತ್ತದೆ… ಮಹ ತ್ತಾದ್ದನ್ನು ಕಂಡರೂ ಕೇಳಿದರೂ ನಮ್ಮ ಮಹತ್ತಿನ ನೆನಪಾಗಿ ಸಂತೋಷದಿಂದ ಕಣ್ಣೀರು ಬರುತ್ತದೆ. ಅಂಥಾ ಕಣ್ಣೀರನ್ನು ನಾವೆಷ್ಟು ಸುರಿಸಿದರೆ ಅಷ್ಟು ಧನ್ಯರಾಗುತ್ತೇವೆ! ದೊಡ್ಡದೆಲ್ಲಾ ದೇವರೇ!... “

ಇಂಥ ಸೊಗಸಾದ ಭಾವನಾ ಸ್ಪುರಣೆ ಹಾಗೆ ಹೇಳಿಕೊಟ್ಟು ಕಲಿಯಲು ಬರುವಷ್ಟು ಸುಲಭದ ಅನುಭೂತಿಯಲ್ಲ, ಆದರೂ ಅದನ್ನು ಓದುವಾಗ ಒಂದು ರೀತಿಯ ದಿವ್ಯಾನಂದ ದೊರಕುವುದು ಸುಳ್ಳಲ್ಲ. ‘ದೊಡ್ಡದೆಲ್ಲಾ ದೇವರೇ’ ಎಂಬ ಸರಳ ಸುಂದರ ವಿನೀತ ಭಾವ ಬದುಕನ್ನೇ ಸುಂದರಗೊಳಿಸುತ್ತದೆ.


ಇಂತಹ ಇನ್ನೂ ಅನೇಕ ಮನಸ್ಸನ್ನು ಉದ್ದೀಪನಗೊಳಿಸುವ, ಆನಂದ ನೀಡುವ ವಿಚಾರಧಾರೆಗಳು ಈ ದೊಡ್ಡ ಕಾದಂಬರಿಯಲ್ಲಿ ಬಂದಿವೆ. ಎಲ್ಲವನ್ನೂ ಇಲ್ಲಿ ಟೈಪಿಸಲಾರೆ ಎಂಬ ಕಾರಣಕ್ಕಾಗಿ ಕೆಲವನ್ನಷ್ಟೇ ಉಲ್ಲೇಖಿಸಿದ್ದೇನೆ. ಇನ್ನು ನನ್ನನ್ನಾಕರ್ಷಿಸಿದ ಕೆಲವು ಒಂದೆರಡೇ ವಾಕ್ಯಗಳ ಸುಂದರ ಸಾಲುಗಳು ಇಂತಿವೆ:


“ದೊಡ್ಡದ್ದನ್ನು ಕಂಡಾಗ ಅದನ್ನು ಪೂಜಿಸಬೇಕು, ಅದರಂತಾಗಬೇಕು, ಅದರ ಕಣ್ಣಿಗೆ ಬೀಳಬೇಕು, ಅದರ ಪ್ರಶಂಸೆಗೆ ಪಾತ್ರವಾಗಬೇಕು ಎಂಬುದು ಮನುಷ್ಯ ಕುಲದ ಸಾಮಾನ್ಯೇಚ್ಛೆ .

“ಅವನ ಕಣ್ಣು ಮೊಟ್ಟೆಯ ಮೇಲೆ ಕಾವು ಕೂಹಕ್ಕಿಯ ಕಣ್ಣಿನಂತೆ ಅಂತರ್ಮುಖವಾಗಿತ್ತು.“

“ತಾಯಿಯ ಪ್ರೀತಿಭಾವ ತನ್ನ ಬುದ್ಧಿ ವಿಚಾರಕ್ಕಿಂತಲೂ ಪವಿತ್ರವಾದುದೆಂದು ಅದನ್ನು ಆಸ್ವಾದಿಸಿದನು. ತಾಯಿಯ ಸ್ಪರ್ಶ ಶಾಂತಿಯಾನಂದಗಳ ಸುಧಾಮುದ್ರೆಯಾಗಿತ್ತು.”

“ಹಸುಳೆಯ ಹೊಟ್ಟೆಕಿಚ್ಚಿನಲ್ಲಿ ಬೆಳಗುವ ಗುಣವಿರುತ್ತದೆ; ಸುಡುವ ಗುಣವಿರುವುದಿಲ್ಲ.”

“ಅವರ ಹೃದಯದಲ್ಲಿ ಮೂಡಿದ ಕೃತಜ್ಞತೆಯ ಭಕ್ತಿಯ ಮಂಗಳಾರತಿಯ ಮಹಾಜ್ವಾಲೆ ಅಂತರಿಕ್ಷವನ್ನು ದಾಟಿ ಅತೀತಕ್ಕೆ ಅರ್ಪಿತವಾಯಿತು.”

ಇಂತಹ ಇನ್ನೂ ಅನೇಕಾನೇಕ ಸುಂದರ ಸಾಲುಗಳು ಓದುಗರ ಮನಸ್ಸನ್ನು ಹಿಡಿದು ನಿಲ್ಲಿಸಿ ಓದುವ ಭರ ತಗ್ಗಿಸಿ ಆಸ್ವಾದಿಸಲು ಪ್ರಚೋದಿಸುತ್ತವೆ. "ಈ ಕಾದಂಬರಿಯನ್ನು ರಚಿಸುವಾಗಲೂ, ತರುವಾಯ ಮತ್ತೆ ಮತ್ತೆ ಓದುವಾಗಲೂ ನನಗೆ ಬಹುವಾಗಿ ಬಂದಿರುವ ರಸಸುಖದಲ್ಲಿ ಒಂದಿನಿತನ್ನಾದರೂ ಇದನ್ನು ಓದುವವರು ಸವಿಯುತ್ತಾರೆಂದು ಗೊತ್ತಾದರೆ ಕೃತಿ ಸಾರ್ಥಕವಾಯಿತೆಂದು ಭಾವಿಸುತ್ತೇನೆ” ಎಂದು ಪ್ರಾರಂಭದಲ್ಲಿ ಕುವೆಂಪು ಅರಿಕೆ ಮಾಡಿಕೊಂಡಿದ್ದಾರೆ. ನನ್ನಂತಹ ವಾಸ್ತವ ಜೀವಿಗೇ (ಅತೀ ಭಾವನಾ ಜೀವಿ ಅಲ್ಲದವರಿಗೆ) ಇಷ್ಟು ರಸಸುಖ ಕೊಟ್ಟ ಕಾದಂಬರಿ, ಓದುಗರೆಲ್ಲರಿಗೂ ಅದ್ಭುತವಾದ ರಸದೌತಣ ನೀಡುವುದರಲ್ಲಿ ಯಾವುದೇ ಅನುಮಾನ ನನಗಿಲ್ಲ. ಕುವೆಂಪು ಅವರನ್ನು ಹೆಚ್ಚು ಓದಿ ಅರಿಯದ ನನಗೆ ಅವರೇಕೆ ಮಹಾಕವಿ, ರಸಋಷಿ ಎಂಬ ಸ್ಪಷ್ಟ ಅರಿವನ್ನು ಈ ಕಾದಂಬರಿ ಮಾಡಿಕೊಟ್ಟಿತು.

Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page