ಕುತೂಹಲ ಕೆರಳಿಸುವ ಒಂದು ಪುರಾತನ ನೆಲದ ಚರಿತ್ರೆ
- vidyaram2
- Nov 9, 2024
- 3 min read
Updated: Jan 28, 2025

ಕನ್ನಡದ ಪ್ರಸಿದ್ಧ ಕತೆಗಾರರ ಸಾಲಿನಲ್ಲಿ ನಿಲ್ಲುವ ಮಿತ್ರಾ ವೆಂಕಟ್ರಾಜ ಅವರು ಮುಂಬೈಯ ಹೆಮ್ಮೆಯ ಲೇಖಕರು. ಸೂಕ್ಷ್ಮ ಸಂವೇದನೆಯ ಕತೆಗಾರ್ತಿಯಾಗಿರುವ ಅವರ ಅನೇಕ ಕತೆಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ, ಪ್ರಕಟಗೊಳ್ಳುತ್ತಲಿವೆ. ಅವು ಓದುಗರ ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿ ಅವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ತಂದುಕೊಟ್ಟಿವೆ. ಇದುವರೆಗೆ ಮಿತ್ರಾ ಅವರ ಮೂರು ಕಥಾ ಸಂಕಲನಗಳು ಮತ್ತು ಒಂದು ಕಾದಂಬರಿ ಪ್ರಕಟಗೊಂಡಿವೆ. ಇದೀಗ 2024ರ ಆಗಸ್ಟ್ ತಿಂಗಳಿನಲ್ಲಿ ಪ್ರಕಟಗೊಂಡಿರುವ ‘ಒಂದು ಪುರಾತನ ನೆಲದಲ್ಲಿ’ ಎಂಬ ಕೃತಿಯು ಅವರು ಅನುವಾದಿಸಿರುವ ಮೊದಲ ಕೃತಿಯಾಗಿದೆ. ಅಮಿತಾವ್ ಘೋಷ್ ಅವರು 1992ರಲ್ಲಿ ಪ್ರಕಟಿಸಿದ ‘ಇನ್ ಎನ್ ಆಂಟಿಕ್ ಲ್ಯಾಂಡ್’ ಎಂಬ ಇಂಗ್ಲಿಷ್ ಕೃತಿಯ ಅನುವಾದವಾಗಿರುವ ಈ ಕಾದಂಬರಿಯನ್ನು ಧಾರವಾಡದ ಮನೋಹರ ಗ್ರಂಥ ಮಾಲೆಯು ಪ್ರಕಾಶಿಸಿದೆ. ಸುಮಾರು 340 ಪುಟಗಳಿರುವ ಈ ಕೃತಿಯ ಮುಖಪುಟವು ಈಜಿಪ್ಟ್ ಮತ್ತು ಅರಬ್ ದೇಶಗಳನ್ನು ಪ್ರತಿನಿಧಿಸುವಂತೆ ಪಿರಮಿಡ್, ಮರುಭೂಮಿ ಮತ್ತು ಒಂಟೆಯ ಚಿತ್ರಗಳಿಂದ ಆಕರ್ಷಕವಾಗಿ ವಿನ್ಯಾಸಗೊಂಡಿದೆ.
ಮೂಲ ಕೃತಿಯ ಲೇಖಕರಾದ ಅಮಿತಾವ್ ಘೋಷ್ ಅವರು ಜಾಗತಿಕ ಮನ್ನಣೆ ಗಳಿಸಿರುವ ಭಾರತದ ಪ್ರಮುಖ ಲೇಖಕರಲ್ಲಿ ಒಬ್ಬರು. ತಮ್ಮ ಅನೇಕ ಇಂಗ್ಲಿಷ್ ಕಾದಂಬರಿಗಳಿಂದ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಇವರಿಗೆ ಜ್ಞಾನಪೀಠವೂ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರೆತಿವೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಸಾಮಾಜಿಕ ಮಾನವಶಾಸ್ತ್ರದಲ್ಲಿ ಪಿಎಚ್.ಡಿ. ಪಡೆದ ಘೋಷ್ ಅವರ ಅನೇಕ ಕಾದಂಬರಿಗಳು ಉದಾರ ಮಾನವತಾವಾದದ ನಿಲುವಿನಿಂದ ಕೂಡಿದ್ದು, ಸಂಕೀರ್ಣ ತಂತ್ರಗಳಿಂದ ನಿರೂಪಿತವಾಗಿವೆ. ಅದೇ ನಿಲುವನ್ನು ಹೊಂದಿರುವ ‘ಇನ್ ಎನ್ ಆಂಟಿಕ್ ಲ್ಯಾಂಡ್’ ಕೃತಿಯು ಸಂಶೋಧನ ಕೃತಿ, ಐತಿಹಾಸಿಕ ಕಾದಂಬರಿ (ಹಿಸ್ಟಾರಿಕಲ್ ಫಿಕ್ಷನ್), ನಾನ್ ಫಿಕ್ಷನ್, ಪ್ರವಾಸ ಕಥನ, ಅನುಭವ ಕಥನ - ಇವೆಲ್ಲದರ ಮಿಶ್ರಣವಾಗಿ ತೋರುವ ವಿಶಿಷ್ಟವಾದ ಅಪರೂಪದ ಕೃತಿಯಾಗಿದೆ. ಅದು ಪ್ರಕಟಗೊಂಡಾಗ, ಅದು ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರುತ್ತದೆ ಎಂಬ ಚರ್ಚೆಗೆ ಗ್ರಾಸವಾಗಿ ಓದುಗರಲ್ಲಿ ಕುತೂಹಲ ಮೂಡಿಸಿದ್ದಲ್ಲದೆ, ಅದು ನೀಡುವ ಅದ್ಭುತ ಒಳನೋಟಗಳಿಗಾಗಿ ಯಶಸ್ಸು ಪಡೆಯಿತು. ಇದು ಅವರ ಅತ್ಯಂತ ಪ್ರಮುಖ ಕೃತಿಯೆಂದು ಹಲವು ವಿಮರ್ಶಕರು ಪರಿಗಣಿಸಿದ್ದಾರೆ.
ಅಮಿತಾವ್ ಘೋಷ್ ಅವರು ಬಳಸಿದ ಕಾವ್ಯದ ಛಾಯೆಯಿರುವ ಆಕರ್ಷಕ ಭಾಷೆ ಹಾಗೂ ಮಂಗಳೂರಿನ ಬೊಮ್ಮನ ಪಾತ್ರಗಳು ತಮ್ಮಲ್ಲಿ ಇದನ್ನು ಅನುವಾದಿಸುವ ಆಸಕ್ತಿ ಮೂಡಿಸಿದವೆಂದು ಮಿತ್ರಾ ಅವರು ಮುನ್ನುಡಿಯಲ್ಲಿ ಅರುಹಿದ್ದಾರೆ. ಆದರೆ ಸ್ವತಃ ಒಬ್ಬ ಉತ್ತಮ ಸೃಜನಶೀಲ ಲೇಖಕರಾದ ಮಿತ್ರಾ ಅವರ ಕತೆಗಳಲ್ಲಿ ಸಾಮಾನ್ಯವಾಗಿ ಗೋಚರಿಸುವ ಅಂಶಗಳಾದ ಪ್ರಬುದ್ಧ ಚಿಂತನೆ, ತೀಕ್ಷ್ಣ ವೈಚಾರಿಕತೆ, ಮನುಷ್ಯ ಸ್ವಭಾವವನ್ನು ಆಳವಾಗಿ ಅವಲೋಕಿಸಿ ವಿಶ್ಲೇಷಿಸುವ ಜಾಣ್ಮೆ, ಭಿನ್ನ ಧರ್ಮಗಳ ಹಿನ್ನೆಲೆಯಲ್ಲಿ ಮನುಷ್ಯರ ಸಂವೇದನೆ, ಸಂಬಂಧಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಎಳೆಎಳೆಯಾಗಿ ತೆರೆದಿಡುವಲ್ಲಿ ಆಸಕ್ತಿ - ಇವೆಲ್ಲವೂ ಘೋಷ್ ಅವರ ಈ ಕೃತಿಯಲ್ಲೂ ಇರುವುದರಿಂದಲೇ ಅದು ಮಿತ್ರಾ ಅವರನ್ನು ಆಯಸ್ಕಾಂತದಂತೆ ಸೆಳೆದಿದೆ ಎಂದು ಅವರ ಓದುಗವೃಂದಕ್ಕೆ ಸುಲಭವಾಗಿ ಗ್ರಾಹ್ಯವಾಗುತ್ತದೆ.
ಐದು ಅಧ್ಯಾಯಗಳಲ್ಲಿ ವಿಂಗಡಿತವಾದ ಈ ಕೃತಿಯಲ್ಲಿ ಲೇಖಕರು ಎಂಟುನೂರು ವರ್ಷಗಳ ಅಂತರವಿರುವ ಎರಡು ಕಾಲಮಾನಗಳಲ್ಲಿನ ಮಧ್ಯ ಪೂರ್ವ ಮತ್ತು ಭಾರತ ದೇಶಗಳ ಎರಡು ಕಾಲಮಾನಗಳ ಜನಸಾಮಾನ್ಯರ ಬದುಕಿನ ಎರಡು ಕಥಾನಕಗಳನ್ನು ಸಮಾನಾಂತರವಾಗಿ ನಿರೂಪಿಸುತ್ತಾ, ಓದುಗರನ್ನು ದೇಶಕಾಲಗಳಾಚೆಗೆ ಕೊಂಡೊಯ್ಯುತ್ತಾರೆ. ಇಲ್ಲಿ ಅವರು ವಸಾಹತುಪೂರ್ವ ಮತ್ತು ವಸಾಹತೋತ್ತರ ಕಾಲಘಟ್ಟಗಳಲ್ಲಿ ಈ ದೇಶಗಳ ಜನರ ಮನಸ್ಥಿತಿಯಲ್ಲಾದ ಬದಲಾವಣೆಗಳ ಮೇಲೆ ತೌಲನಿಕವಾಗಿ ತಮ್ಮ ಮಾನವಶಾಸ್ತ್ರಜ್ಞನ ಸೂಕ್ಷ್ಮದೃಷ್ಟಿ ಬೀರಿದ್ದಾರೆ.
ಮೊದಲನೆಯ ಕಥಾನಕ ಹನ್ನೆರಡನೆಯ ಶತಮಾನದಲ್ಲಿ, ಅಂದರೆ ವಸಾಹತುಪೂರ್ವಕಾಲದಲ್ಲಿ ಜರುಗಿರುವಂತದ್ದು. ಆಗ ಈ ದೇಶಗಳ ನಡುವೆ ಪ್ರಚಲಿತವಾಗಿದ್ದ ಹಿಂದೂಮಹಾಸಾಗರದ ವ್ಯಾಪಾರ ವಹಿವಾಟು ಮತ್ತು ಅದಕ್ಕಿಂತ ಹೆಚ್ಚಾಗಿ ಜನರ ನಡುವಿನ ಮಾನವೀಯ ಸಂಬಂಧ, ಸಂಪರ್ಕಗಳನ್ನು ಲೇಖಕರು ತಮಗೆ ಆಕಸ್ಮಿಕವಾಗಿ ದೊರೆತ ಒಂದು ಸಣ್ಣ ಚರಿತ್ರೆಯ ಎಳೆಯ ಆಧಾರದ ಮೇಲೆ ಸಾಧ್ಯವಾದಷ್ಟು ಸಂಶೋಧಿಸಿ, ಆಧಾರ ಸಿಗದಿದ್ದನ್ನು ಸಮಂಜಸವಾಗಿ ಊಹಿಸಿ ರಚಿಸಿದ ಕಥನವಿದು. ಅವರಿಗೆ ದೊರೆತ ಚರಿತ್ರೆಯ ಎಳೆ ಯಾವುದೆಂದರೆ - 12ನೆಯ ಶತಮಾನದಲ್ಲಿ ಅರಬ್ಬಿ ಮುಸಲ್ಮಾನ ವ್ಯಾಪಾರಿಯೊಬ್ಬನು ಮಂಗಳೂರಿನಲ್ಲಿ ನೆಲೆಸಿದ ಅವನ ಸ್ನೇಹಿತ ಯಹೂದಿ ವರ್ತಕನಿಗೆ ಬರೆದ ಒಂದು ಪತ್ರ. ಘೋಷ್ ಅವರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದ ಸಮಯದಲ್ಲಿ ಅವರಿಗೆ ದೊರೆತ ‘ಮಧ್ಯಕಾಲೀನ ಯಹೂದಿ ವರ್ತಕರ ಪತ್ರಗಳು’ ಎಂಬ ಇಂಗ್ಲಿಷ್ ಅನುವಾದಿತ ಕೃತಿಯಲ್ಲಿ ಈ ಪತ್ರವಿತ್ತು. ಆ ಕಾಲದಲ್ಲಿ ಯಹೂದಿ ಜನಸಾಮಾನ್ಯರು ಬರೆದ ವೈಯಕ್ತಿಕ ಪತ್ರಗಳು ಯಾಕೆ, ಹೇಗೆ, ಎಲ್ಲಿ ಸಂರಕ್ಷಿತವಾಗಿವೆ ಎಂಬ ವಿಷಯ ಕುತೂಹಲಕಾರಿಯಾಗಿದುದ್ದು, ಅದರ ಸ್ವಾರಸ್ಯಕರ ವಿವರವನ್ನು ಅರಿಯಲು ಓದುಗರು ಈ ಕೃತಿಯನ್ನು ಓದಲೇಬೇಕು. ಆ ಪತ್ರದಲ್ಲಿ ಮಂಗಳೂರಿನ ಒಬ್ಬ ಗುಲಾಮನ ಉಲ್ಲೇಖ ಇತ್ತು. ಅದು ಅವರ ಮನಸೆಳೆದು, ಈ ಗುಲಾಮನ ಜಾಡನ್ನು ಹಿಡಿದು ಹೋಗಲು ಅವರನ್ನು ಪ್ರಚೋದಿಸಿತು. ಅದಕ್ಕಾಗಿ ಅವರು ಟುನೀಶಿಯಕ್ಕೆ ಹೋಗಿ ಅರಬ್ಬೀ ಭಾಷೆ ಕಲಿತು, ಮುಂದೆ ಈಜಿಪ್ಟ್ ದೇಶದ ಹಳ್ಳಿಗಳಲ್ಲಿ ಕೆಲ ಸಮಯ ವಾಸ್ತವ್ಯ ಹೂಡಿ ಸಂಶೋಧಿಸಿದರು. ಅದೇ ಈ ಕೃತಿಯ ರಚನೆಗೂ ಕಾರಣವಾಯಿತು.
ಎರಡನೆಯದು ಇಪ್ಪತ್ತನೆಯ ಶತಮಾನದಲ್ಲಿ, ಅಂದರೆ ವಸಾಹತೋತ್ತರಕಾಲದಲ್ಲಿ ಜರುಗಿದ ಲೇಖಕರ ಅನುಭವ ಕಥನ. ಇದು ಅವರು ಮೇಲೆ ಹೇಳಿದ ತಮ್ಮ ಶೋಧ ಕಾರ್ಯಕ್ಕಾಗಿ ಪ್ರವಾಸ ಕೈಗೊಂಡು ಈಜಿಪ್ಟ್ ಮತ್ತು ಭಾರತದ ಮಲಬಾರಿನ ಕರಾವಳಿಯುದ್ದಕ್ಕೂ ಸಂಚರಿಸಿ ವಿವಿಧ ಜನರೊಂದಿಗೆ ಬೆರೆತು ಅನುಭವಿಸಿ ರಚಿಸಿದ ವಾಸ್ತವ ಕಥಾನಕ. ಗುಲಾಮನ ಚಲನವಲನಗಳ ಜಾಡನ್ನು ಹಿಡಿದು ಮಂಗಳೂರಿಗೆ ಹೋದ ಲೇಖಕರು ಮಂಗಳೂರು ವಿಶ್ವವಿದ್ಯಾಲಯದ ಅಂದಿನ ಉಪಕುಲಪತಿಗಳಾಗಿದ್ದ ಡಾ. ಬಿ. ಎ. ವಿವೇಕ ರೈ ಅವರೊಂದಿಗೆ ಒಡನಾಡಿದ ಪ್ರಸಂಗ, ತುಳುನಾಡಿನ ಭೂತಾರಾಧನೆ, ಮೊಗವೀರರ ಜನಜೀವನ ಮೊದಲಾದ ಸಾಂಸ್ಕೃತಿಕ ಸಂಗತಿಗಳು ಈ ಕೃತಿಯಲ್ಲಿ ಬರುವುದು ಒಂದು ವಿಶೇಷ.
ಈ ಎರಡು ಕಥನಗಳು ಪರಸ್ಪರ ಯಾವುದೇ ಕೊಂಡಿ ಇಲ್ಲದೆ ಸ್ವತಂತ್ರವಾಗಿ ನಿಂತಿರುವ, ಎಂಟುನೂರು ವರ್ಷಗಳ ಅಂತರದಲ್ಲಿ ಜರುಗಿರುವ ಘಟನಾವಳಿಗಳು. ಆದರೆ ಎರಡನ್ನೂ ಒಟ್ಟಿಗೆ ಸ್ವಲ್ಪ ಸ್ವಲ್ಪವೇ ಅರುಹುವಂತೆ ಜೋಡಿಸಿ ಹೆಣೆದ ಲೇಖಕರ ಕಥಾತಂತ್ರವು ಈ ಎರಡು ಕಾಲಘಟ್ಟಗಳಲ್ಲಿ ಆಗಿರುವ ರಾಷ್ಟ್ರ ಮಟ್ಟದ ಮತ್ತು ಜನರ ವೈಯಕ್ತಿಕ ಮನೋವೃತ್ತಿಯ ಬದಲಾವಣೆಗಳ ತುಲನಾತ್ಮಕ ನೋಟವನ್ನು ಅದ್ಭುತವಾಗಿ ತೆರೆದಿಡುತ್ತದೆ. ವಸಾಹತುಶಾಹಿ ಆಡಳಿತಕ್ಕೆ ತುತ್ತಾದ ಈಜಿಪ್ಟ್ ಮತ್ತು ಭಾರತ ದೇಶಗಳ ಜನರ ದಾಸ್ಯ ಮನೋಭಾವವು ಅವರನ್ನು ಮೊದಲಿಗಿಂತ ಹೆಚ್ಚು ಸಂಕುಚಿತಗೊಳಿಸಿದ ರೀತಿಯನ್ನು ಸೂಚಿಸುತ್ತಾ, ಆಧುನಿಕತೆಯ ಸೋಗಿನೊಳಗೆ ಹಿಮ್ಮೆಟ್ಟುತ್ತಿರುವ ನಾಗರಿಕತೆಯ ಸೂಕ್ಷ್ಮದರ್ಶನವನ್ನು ಮಾಡಿಸುತ್ತದೆ. ಅಂತಹ ಬದಲಾವಣೆಗಳನ್ನು ಓದುಗರು ಸೂಕ್ಷ್ಮವಾಗಿ ಅವಲೋಕಿಸಿದರೆ, ಆಯಾ ದೇಶದ ಮೇಲೆ ಜರುಗಿದ ಆಕ್ರಮಣ, ಮುತ್ತಿಗೆಗಳು, ಅವುಗಳ ಹಿಂದಿನ ಉದ್ದೇಶ ಮತ್ತು ಆ ಉದ್ದೇಶದ ಈಡೇರುವಿಕೆಯಿಂದ ಆಕ್ರಮಣಕ್ಕೊಳಗಾದ ದೇಶ ಮತ್ತು ಅದರ ಜನರ ಮೇಲಾಗುವ ದೀರ್ಘ ಕಾಲದ ಪರಿಣಾಮಗಳು ಹೇಗೆ ಇಂತಹ ಬದಲಾವಣೆಯನ್ನು ತರುತ್ತವೆ ಎಂಬ ಲೇಖಕರ ಸ್ಪಷ್ಟವಾದ ಒಳನೋಟ ಇಲ್ಲಿ ದೊರೆಯುತ್ತದೆ.
ಮುನ್ನುಡಿಯಲ್ಲಿ ಮಿತ್ರಾ ಅವರು ಈ ಕೃತಿಯ ತಿರುಳನ್ನು ಒಪ್ಪವಾಗಿ ಹಿಡಿದಿಟ್ಟಿದ್ದಾರೆ. “ಇದೊಂದು ಪ್ರವಾಸೀ ಕಥನದ ಸೋಗಿನಲ್ಲಿರುವ ಬುಡಮೇಲು ಮಾಡುವ ಚರಿತ್ರೆ. ವಿಪುಲವಾದ ವಿವರಣೆ, ಉಪಕತೆಗಳಿಂದ ತುಂಬಿದ ಈ ಪುಸ್ತಕವು ಮಧ್ಯಪೂರ್ವದ ಧರ್ಮಯುದ್ಧದಿಂದ ಹಿಡಿದು ಆಪರೇಶನ್ ಡೆಸರ್ಟ್ ಸ್ಟಾರ್ಮ್ ವರೆಗೆ, ಮಲಬಾರಿನ ವ್ಯಾಪಾರೀ ಜಗತ್ತು, ಜಾತಿ ವ್ಯವಸ್ಥೆಯಿಂದ ಹಿಡಿದು ಕಲ್ಯಾಣದ ವಚನಸಾಹಿತ್ಯದವರೆಗಿನ ಆತ್ಮೀಯವಾದ ಮಾಂತ್ರಿಕ ಒಳನೋಟವನ್ನು ಕೊಡುತ್ತದೆ. ಕೆಲವು ಶತಮಾನಗಳ ಹಿಂದಿನವರೆಗೂ ಪ್ರಚಲಿತವಿದ್ದು ಈಗ ಹಲವು ಸ್ಥಳಗಳಲ್ಲಿ ವಿಭಜನೆಗೊಳಗಾಗಿರುವ, ಭಾರತೀಯರು ಮತ್ತು ಈಜಿಪ್ಟಿನವರು, ಮುಸ್ಲಿಂ ಮತ್ತು ಯಹೂದಿ, ಹಿಂದೂ ಮತ್ತು ಮುಸ್ಲಿಂ ಎಂದು ಒಂದರೊಳಗೊಂದು ಹೆಣೆದುಕೊಂಡ ಹಲವು ಸಣ್ಣ, ಅಸ್ಪಷ್ಟ ಚರಿತ್ರೆಗಳ ವಿಶದವಾದ ದರ್ಶನವನ್ನು ನೀಡುತ್ತದೆ” ಎಂದು ಅವರು ಕ್ರೋಡೀಕರಿಸಿದ್ದಾರೆ.
ಒಟ್ಟಿನಲ್ಲಿ ಚರಿತ್ರೆಯ ಸತ್ಯಾಸತ್ಯತೆಯು ಅದನ್ನು ಯಾರು ಹೇಳುತ್ತಿದ್ದಾರೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಈ ನಿಟ್ಟಿನಲ್ಲಿ ಇಂದಿನ ಸಂಸ್ಕೃತಿ, ಧರ್ಮಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಇಂತಹ ಪೂರ್ವಗ್ರಹಮುಕ್ತವಾದ ಚರಿತ್ರೆಯ ಪುಟಗಳಿಂದ ನಮ್ಮ ಅಸ್ಮಿತೆಯ ಹುಡುಕಾಟ ನಡೆಸಲು ಪ್ರಚೋದನೆ ನೀಡುವ ಈ ಕೃತಿ ಇಂದಿನ ಕಾಲಕ್ಕೆ ಅತ್ಯಂತ ಪ್ರಸ್ತುತವಾಗುತ್ತದೆ.
ಸರಳವಾಗಿ ಓದಿಸಿಕೊಂಡು ಹೋಗದ, ಸಂಕೀರ್ಣವಾದ ಈ ಐತಿಹಾಸಿಕ ಮಹತ್ವದ ಶೋಧ ಕಾದಂಬರಿ ಕೃತಿಯನ್ನು ಅರ್ಥಪೂರ್ಣವಾಗಿ ಅನುವಾದಿಸುವುದು ಸುಲಭದ ಕೆಲಸವಲ್ಲ. ಇಂತಹ ಸಾಹಸದ ಕಾರ್ಯಕ್ಕೆ ಕೈಹಾಕಿ ಅದರಲ್ಲಿ ಪೂರ್ಣ ಯಶಸ್ಸು ಸಾಧಿಸಿ ಕನ್ನಡ ಸಾರಸ್ವತ ಲೋಕಕ್ಕೆ ಒಂದು ಮೌಲಿಕ ಕೊಡುಗೆ ನೀಡಿದ ಮಿತ್ರಾ ಅವರಿಗೆ ಎಲ್ಲ ಕನ್ನಡ ಸಾಹಿತ್ಯಪ್ರೇಮಿಗಳ ಪರವಾಗಿ ಅನಂತ ಧನ್ಯವಾದಗಳು ಹಾಗೂ ಹೃತ್ಪೂರ್ವಕ ಅಭಿನಂದನೆಗಳು.





Comments