ಅನಕೃ ಮತ್ತು ಕನ್ನಡ ಸಂಸ್ಕೃತಿ
- vidyaram2
- May 17, 2024
- 3 min read
Updated: May 18, 2024

ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಆಧುನಿಕ ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಸಂಕೀರ್ಣ ಸಂಗತಿಗಳನ್ನೂ ಸರಳವಾಗಿ, ಸ್ವಾರಸ್ಯಕರವಾಗಿ ವಿಶ್ಲೇಷಿಸುವ ಅವರು, ಒಬ್ಬ ಲೇಖಕನನ್ನು ಇಡಿಯಾಗಿ ಅಧ್ಯಯನ ಮಾಡಿದಾಗ ಹೊಸಬಗೆಯ ಗ್ರಹಿಕೆ ಸಾಧ್ಯ ಎಂದು ನಂಬಿದವರು. ಈ ನಿಟ್ಟಿನಲ್ಲಿ ಅವರು ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಕೆ.ಎಸ್.ನರಸಿಂಹಸ್ವಾಮಿ, ಅನಕೃ ಮುಂತಾದ ಕವಿ, ಸಾಹಿತಿಗಳ ‘ಸಮಗ್ರ ಓದು’ ನಡೆಸಿ, ಅವರ ಸಾಹಿತ್ಯದ ಒಳನೋಟಗಳನ್ನು ದರ್ಶನ ಮಾಡಿಸುವ ಅಮೂಲ್ಯವಾದ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ೨೦೦೬ರಲ್ಲಿ ಅಂಕಿತಾ ಪುಸ್ತಕದಿಂದ ಪ್ರಕಾಶನಗೊಂಡ ‘ಅನಕೃ ಮತ್ತು ಕನ್ನಡ ಸಂಸ್ಕೃತಿ’ ಎಂಬುದು ಅವರು ರಚಿಸಿದ ಒಂದು ಮಹತ್ತ್ವದ ಕೃತಿ. ಇದು ಅನಕೃ ಅವರ ಸಮಗ್ರ ಸಾಹಿತ್ಯದ ಅತ್ಯತ್ತಮವಾದ ಸಂಸ್ಕೃತಿನಿಷ್ಠ ವಿಮರ್ಶೆಯಾಗಿದೆ. ಜೊತೆಗೆ ಅನಕೃ ಅವರ ಬದುಕು ಮತ್ತು ಸಾಧನೆಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿರುವ ವ್ಯಕ್ತಿ ಚಿತ್ರಣವೂ ಆಗಿದೆ.
ಕನ್ನಡ ಸಾಹಿತ್ಯ ಲೋಕದ ಪ್ರಮುಖ ಕಾದಂಬರಿಕಾರ, ಲೇಖಕರಾದ ಅ.ನ.ಕೃಷ್ಣರಾಯರ ವ್ಯಕ್ತಿತ್ವಕ್ಕೆ ಅನೇಕ ಮುಖಗಳಿವೆ. ಸಾಹಿತ್ಯ, ಸಂಗೀತ, ಚಿತ್ರ, ಶಿಲ್ಪಕಲೆ, ರಂಗಭೂಮಿ, ಸಿನಿಮಾ, ಪತ್ರಿಕೋದ್ಯಮ, ಚಳುವಳಿ ಮುಂತಾದ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರು ನರಹಳ್ಳಿಯವರು ಹೇಳುವಂತೆ ‘ಕನ್ನಡ ಸಂಸ್ಕೃತಿ ಚರಿತ್ರೆಯನ್ನು ರೂಪಿಸಿದ ಪ್ರಮುಖ ಶಿಲ್ಪಿಗಳಲ್ಲಿ ಒಬ್ಬರು’. ಕನ್ನಡವೆಂದರೆ ಅನಕೃ ಅವರಿಗೆ ಕೇವಲ ಸಾಹಿತ್ಯ ಮಾತ್ರವಾಗಿರಲಿಲ್ಲ; ಬದುಕಿನ ಎಲ್ಲ ರಂಗಗಳಲ್ಲೂ 'ಕನ್ನಡತನ' ಕಾಣಿಸಬೇಕೆಂದು ಅವರು ಆಶಿಸಿದ್ದರು. ‘ಭಾರತೀಯ ಸಮಾಜ ಆಧುನಿಕತೆಗೆ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ತನ್ನ ರಚನೆಯ ಮೂಲವಿನ್ಯಾಸಗಳನ್ನೇ ಕಳೆದುಕೊಳ್ಳುತ್ತಿದ್ದ ಸಂಧಿಕಾಲದಲ್ಲಿ ರೂಪುಗೊಂಡ ಅನಕೃ ಅವರ ಬರವಣಿಗೆ ಸಹಜವಾಗಿಯೇ, ಆ ಕಾಲದಲ್ಲಿದ್ದ ಗೊಂದಲ, ತಲ್ಲಣ, ಸಂದಿಗ್ಧಗಳನ್ನೊಳಗೊಂಡ ಸಾಮಾಜಿಕ ಚರಿತ್ರೆಯನ್ನು ಕಟ್ಟಿಕೊಡುತ್ತದೆ’ ಎಂದು ವಿವೇಚಿಸುವ ನರಹಳ್ಳಿ ಅವರು ತಮ್ಮ ಜನಪ್ರಿಯ ಕಾದಂಬರಿಗಳ ಮೂಲಕ ಅಂದಿನ ಸಾಮಾನ್ಯ ಜನರ ಆರಾಧ್ಯದೈವವಾಗಿದ್ದ ಅನಕೃ ಅವರ ಸಾಧನೆಯನ್ನು ಒಟ್ಟಂದದಲ್ಲಿ ಹಿಡಿಯುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ.
ಕೃತಿಯ ಒಟ್ಟು ಹತ್ತು ಅಧ್ಯಾಯಗಳಲ್ಲಿ ಅನಕೃ ಅವರ ಜೀವನ, ವಿವಿಧ ಆಸಕ್ತಿ ಮತ್ತು ಸಾಧನೆಗಳನ್ನು ತೆರೆದಿಡಲಾಗಿದೆ. ಅನುಬಂಧದಲ್ಲಿ ಅನಕೃ ಅವರ ಬದುಕಿನ ಕೆಲವು ವಿವರಗಳು, ಅವರ ಕೃತಿಗಳ ವಿವರಗಳನ್ನೂ ನೀಡಲಾಗಿದೆ.
ಅನಕೃ ಅವರ ತಾತ ಕೃಷ್ಣಪ್ಪನವರ ಜೀವನ ವಿವರಗಳಿಂದ ಆರಂಭಿಸಿ, ನಂತರ ಅವರ ತಂದೆ ನರಸಿಂಗರಾಯರ ಬದುಕು, ಜೀವನ ಶೈಲಿ, ವೃತ್ತಿ, ನಿಲುವುಗಳನ್ನು ವಿವರಿಸಿ, ಅನಕೃ ಅವರು ಬೆಳೆದು ಬಂದ ವಾತಾವರಣದ ಪರಿಚಯವನ್ನು ನರಹಳ್ಳಿ ಅವರು ‘ಪ್ರವೇಶ’ ಎಂಬ ಮೊದಲನೆಯ ಅಧ್ಯಾಯದಲ್ಲಿ ಮಾಡಿಕೊಟ್ಟಿದ್ದಾರೆ. ಎರಡನೆಯ ಅಧ್ಯಾಯ ‘ಪರಿಸರ’ದಲ್ಲಿ ಅನಕೃ ಅವರ ಬಾಲ್ಯ, ಶಿಕ್ಷಣ, ಹವ್ಯಾಸಗಳು, ಅವರ ಮದುವೆ ಮುಂತಾದ ವಿಷಯಗಳ ವಿವರ ನೀಡಿದ್ದಾರೆ. ಈ ಮೊದಲ ಎರಡು ಅಧ್ಯಾಯಗಳ ರಚನೆಗೆ ಅವರು ಅನಕೃ ಅವರ ಆತ್ಮಕಥೆಯಾದ ‘ಬರಹಗಾರನ ಬದುಕು’ ಕೃತಿಯನ್ನು ಮುಖ್ಯ ಆಧಾರವಾಗಿ ಬಳಸಿದ್ದಾರೆ.
ಮೂರನೆಯ ಅಧ್ಯಾಯವು ರಂಗಭೂಮಿಯ ಕುರಿತಂತೆ ಅನಕೃ ಅವರ ಆಸಕ್ತಿ ಮತ್ತು ಸಾಧನೆಗಳ ವಿವರಗಳಿಗೆ ಮೀಸಲಾಗಿದೆ. ಆ ಕಾಲದ ಅನೇಕ ತರುಣ ಪ್ರತಿಭಾವಂತರಂತೆ ಅನಕೃ ಸಹ ನಾಟಕ ರಚನೆಯ ಮೂಲಕ ಸಾಹಿತ್ಯ ಬದುಕನ್ನು ಆರಂಭಿಸಿದವರು. ಅವರ ಅನೇಕ ನಾಟಕಗಳನ್ನು ಇಲ್ಲಿ ವಿಶದವಾಗಿ ವಿಮರ್ಶೆ ಮಾಡಿರುವ ನರಹಳ್ಳಿ ಅವರು ರಂಗಭೂಮಿಯ ಇತರ ಚಟುವಟಿಕೆಗಳಲ್ಲಿ ಅವರ ಸಾಧನೆಗಳನ್ನೂ ಗುರುತಿಸಿದ್ದಾರೆ. ‘ಅನಕೃ ಅವರೊಬ್ಬ ಶ್ರೇಷ್ಠದರ್ಜೆಯ ನಾಟಕಕಾರರೆಂದು ಹೇಳಲಾಗುವುದಿಲ್ಲ’ ಎನ್ನುವ ಆಮೂರರ ವಿಮರ್ಶೆಯನ್ನು ಇಲ್ಲಿ ಉಲ್ಲೇಖಿಸಿ, ‘ಅನಕೃ ಅವರ ನಾಟಕಗಳ ಮರು ಅಧ್ಯಯನ ಕನ್ನಡ ರಂಗಭೂಮಿಗೆ ಅವರು ನೀಡಿದ ಕೊಡುಗೆಯನ್ನು ಚಾರಿತ್ರಿಕವಾಗಿ ನಾವು ಗುರುತಿಸಲು ಒತ್ತಾಯಿಸುತ್ತದೆ’ ಎಂಬ ನಿರ್ಣಯವನ್ನು ನರಹಳ್ಳಿ ಅವರು ಇಲ್ಲಿ ನೀಡಿದ್ದಾರೆ.
ನಾಲ್ಕನೆಯ ಅಧ್ಯಾಯದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅನಕೃ ಅವರ ಸಾಧನೆಗಳನ್ನು ಆತ್ಮಕಥೆಯ ಆಧಾರದ ಮೇಲೆ ವಿವರಿಸಲಾಗಿದೆ.
ಮುಂದಿನ ಮೂರು ಅಧ್ಯಾಯಗಳಲ್ಲಿ ಅನಕೃ ಅವರ ಸಮಗ್ರ ಸಾಹಿತ್ಯದ ಸಾಂಸ್ಕೃತಿಕ ವಿಮರ್ಶೆ ಇದೆ. ಅನಕೃ ಅವರ ಸಣ್ಣಕತೆ, ಕಾದಂಬರಿ ಮತ್ತು ಗದ್ಯ ಬರಹಗಳ ಮೇಲೆ ಬಂದಿರುವ ಎಲ್ಲ ಬಗೆಯ ಟೀಕೆ, ವಿಮರ್ಶೆಗಳನ್ನೂ, ಇತರ ಪ್ರಮುಖ ವಿಮರ್ಶಕರ ಅಭಿಪ್ರಾಯಗಳನ್ನೂ ಉಲ್ಲೇಖಿಸುತ್ತಾ ನರಹಳ್ಳಿಯವರು ತಮ್ಮ ಒಳನೋಟ, ನಿಲುವುಗಳನ್ನು ಇಲ್ಲಿ ಅತ್ಯುತ್ತಮವಾಗಿ ಮಂಡಿಸಿದ್ದಾರೆ.
ಅನಕೃ ಅವರ ಕಾದಂಬರಿ ಸಾಹಿತ್ಯವನ್ನು - ಕಲಾವಿದರ ಕುರಿತ ಕಾದಂಬರಿಗಳು, ಸಾಮಾಜಿಕ ಕಾದಂಬರಿಗಳು ಮತ್ತು ಐತಿಹಾಸಿಕ ಕಾದಂಬರಿಗಳೆಂದು ಮೂರು ವಿಭಾಗಗಳಲ್ಲಿ ವಿಂಗಡಿಸುವ ನರಹಳ್ಳಿಯವರು ಕಲಾವಿದ, ಸಮಾಜಸುಧಾರಕ, ಭಾರತೀಯ ಸಂಸ್ಕೃತಿಯ ಪ್ರತಿಪಾದಕ, ಕನ್ನಡ ಸಂಸ್ಕೃತಿಯ ಚಿಂತಕ - ಈ ಎಲ್ಲ ವ್ಯಕ್ತಿತ್ವಗಳೂ ಅವರ ಕಾದಂಬರಿ ರಚನೆಯ ಹಿನ್ನೆಲೆಗಿವೆ ಎಂದು ಗುರುತಿಸಿದ್ದಾರೆ. ‘ಸಾಹಿತ್ಯವನ್ನು ಸಮೂಹ ಶಿಕ್ಷಣದ ಮಾಧ್ಯಮವೆಂದು ಭಾವಿಸಿದ್ದ ಅನಕೃ ಅವರು ಕಾದಂಬರಿ ರಚಿಸಲು ಹೊರಟು ಭಾಷ್ಯ ಬರೆಯಲು ಪ್ರಯತ್ನಿಸಿದರು’ ಎಂದಿರುವ ನರಹಳ್ಳಿಯವರು ಕಲೆಯ ಸ್ವಾಯತ್ತತೆಯನ್ನು ಮಾನ್ಯ ಮಾಡದೆ ಹೋದುದರಿಂದ ಅನಕೃ ಅವರಿಗೆ ಅದ್ಭುತ ಕಥನ ಕೌಶಲವಿದ್ದೂ ಕಲಾತ್ಮಕ ಯಶಸ್ಸು ಸಿಗಲಿಲ್ಲ ಎಂದು ವಿವೇಚಿಸಿದ್ದಾರೆ.
ಮುಂದೆ ಇನ್ನೆರಡು ಅಧ್ಯಾಯಗಳಲ್ಲಿ ಪ್ರಗತಿಶೀಲ ಸಾಹಿತ್ಯ ಮತ್ತು ಚಳುವಳಿಗಳಲ್ಲಿ ಅನಕೃ ಅವರ ತೊಡಗಿಕೊಳ್ಳುವಿಕೆಯನ್ನು ವಿವೇಚಿಸಲಾಗಿದೆ. ಪ್ರಗತಿಶೀಲ ಚಳುವಳಿ ಭಾರತದಲ್ಲಿ ಆರಂಭವಾದಾಗ ಅನಕೃ ಅವರ ಚಿಂತನೆಗಳಿಗೆ ಸಿದ್ಧಾಂತದ ಬೆಂಬಲ ಸಿಕ್ಕಿದಂತಾಗಿ ಅವರು ಅದರಲ್ಲಿ ತೊಡಗಿಕೊಂಡರು. ಕೆಲ ಕಾಲದಲ್ಲಿಯೇ ಪ್ರಗತಿಶೀಲ ಚಳುವಳಿಯಲ್ಲಿ ಬಿರುಕು ಮೂಡಿದಾಗ, ಎಡಪಂಥೀಯ ನಿಲುವಿನ ಭಾರತೀಯ ಕಮ್ಯುನಿಸ್ಟರನ್ನು ಉಗ್ರವಾಗಿ ಖಂಡಿಸಿದ ಅನಕೃ ಅವರು ಹಿಂದೂ ಪುನರುಜ್ಜೀವನ ಮತ್ತು ಭಾರತೀಯತ್ವಗಳನ್ನು ಪ್ರತಿಪಾದಿಸಿದರು. ಕಾರ್ಲ್ ಮಾರ್ಕ್ಸ್ ನ ತತ್ತ್ವದಿಂದ ‘ಸಾಮ್ಯವಾದ’ ಭಾರತಕ್ಕೆ ಬಂದಿದ್ದೆಂಬುದು ತಪ್ಪು, ಭಾರತ ತನ್ನ ಸಮಾಜವನ್ನು ಕಟ್ಟಿದ್ದೇ ಸಾಮ್ಯವಾದದ ತಳಹದಿಯ ಮೇಲೆ ಎಂಬುದು ಅರಣ್ಯಕಗಳನ್ನು ಓದಿದರೆ ತಿಳಿಯುತ್ತದೆ ಎಂದು ಹೇಳಿದ ಅವರು ಭಾರತೀಯ ಪರಂಪರೆಯ ಪ್ರವರ್ತಕನಾಗಿ ಕಂಡುಬಂದದ್ದು ನಿರಂಜನ ಅವರಂತಹ ಎಡಪಂಥೀಯರನ್ನು ಕೆರಳಿಸಿತು. ಈ ಎಲ್ಲ ವಿವರಗಳನ್ನು ಚರ್ಚಿಸಿ, ಪ್ರಗತಿಶೀಲ ಚಳುವಳಿಯ ಅಧ್ವರ್ಯುಗಳಲ್ಲಿ ಅನಕೃ ಅವರು ಒಬ್ಬರು ಎಂದು ಪರಿಗಣಿಸಿದರೂ ಅವರ ಸಾಹಿತ್ಯ ಕುರಿತ ಚರ್ಚೆ ಬಂದಾಗ ಅದರಲ್ಲಿ ಪ್ರಗತಿಪರ ಅಂಶಗಳಿಲ್ಲ ಎನ್ನುವ ವಿಮರ್ಶೆಯನ್ನು ಉಲ್ಲೇಖಿಸುತ್ತಾ ‘ಅನಕೃ ಅವರ ಸಾಮಾಜಿಕ ಕಳಕಳಿ ಪ್ರಶ್ನಾತೀತ; ಶ್ರಮಿಕವರ್ಗದ ಬಗೆಗಿನ ಅವರ ಒಲವಿನಲ್ಲೂ ಸಂದಿಗ್ಧತೆಗೆ ಅವಕಾಶವಿಲ್ಲ...ಅವರ ಪ್ರಗತಿಪರ ಆಶಯಗಳನ್ನೇ ಪ್ರಶ್ನಿಸುವುದು ಮರು ಪರಿಶೀಲಿಸಬೇಕಾದ ಸಂಗತಿ’ ಎಂದು ನರಹಳ್ಳಿಯವರು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ಹೀಗೆ ಅನಕೃ ಅವರ ಸಮಗ್ರ ಸಾಹಿತ್ಯ ಮತ್ತು ಸಾಧನೆಗಳನ್ನು ಸೂಕ್ತವಾಗಿ ವಿಮರ್ಶಿಸಿರುವ ನರಹಳ್ಳಿ ಅವರು ನಿರ್ಲಕ್ಷಕ್ಕೆ ಒಳಗಾದ ಕನ್ನಡದ ಪ್ರತಿಭೆಗಳಲ್ಲಿ ಅನಕೃ ಅವರೂ ಒಬ್ಬರೆಂದು ಗುರುತಿಸಿದ್ದಾರೆ. ಕಾದಂಬರಿಕಾರರಾಗಿ ಅವರಿಗೆ ಮಿತಿಗಳಿರುವುದು ನಿಜವಾದರೂ ಅವರನ್ನು ಕೇವಲ ಕಾದಂಬರಿಕಾರರಾಗಿ ಪರಿಗಣಿಸಿ, ಮಿತಿಗಳನ್ನು ಗುರುತಿಸಿ ಒಟ್ಟಾರೆ ಕನ್ನಡ ಸಂಸ್ಕೃತಿಗೆ ಅವರು ನೀಡಿರುವ ಕೊಡುಗೆಯನ್ನು ನಿರ್ಲಕ್ಷಿರುವುದು ತರವಲ್ಲ; ಕನ್ನಡ ಸಂಸ್ಕೃತಿಯನ್ನು ಕಟ್ಟುವಲ್ಲಿ ಅನೇಕ ಸ್ತರಗಳಲ್ಲಿ ಬಹುಮುಖಿಯಾಗಿ ಶ್ರಮಿಸಿದ ಅನಕೃ ಅವರ ಸಮಗ್ರ ಸಾಧನೆಯನ್ನು ಗ್ರಹಿಸಿದಾಗ ಮಾತ್ರ ಸಾಂಸ್ಕೃತಿಕವಾಗಿ ಅವರಿಗೆ ಇರುವ ಮಹತ್ವದ ಅರಿವಾಗುತ್ತದೆ ಎನ್ನುವುದನ್ನು ಈ ಕೃತಿಯಲ್ಲಿ ನರಹಳ್ಳಿ ಅವರು ಸಮರ್ಥವಾಗಿ, ಸೋದಾಹರಣವಾಗಿ ನಿರೂಪಿಸಿದ್ದಾರೆ.
ಒಟ್ಟಿನಲ್ಲಿ ಅನಕೃ ಅವರು ಸಾಮಾನ್ಯ ಜನತೆಗಾಗಿ ಬರೆಯುವ (literature for the masses) ಕಾದಂಬರಿಕಾರರು, ಗಂಭೀರ ಅಧ್ಯಯನಕ್ಕೆ ಅರ್ಹರಲ್ಲ ಎಂಬಂತಹ ಹಗುರವಾದ ಅಭಿಪ್ರಾಯವನ್ನು ಸುಳ್ಳಾಗಿಸಿ, ಅವರ ಕಾಯಕವನ್ನು ಒಟ್ಟಾರೆಯಾಗಿ ಪರಿಶೀಲಿಸಿ, ‘ತನ್ನತನದ ಅರಿವನ್ನು ಕನ್ನಡ ಜನಪದದಲ್ಲಿ ಮೂಡಿಸಿದ ಅನಕೃ ಕನ್ನಡ ಸಂಸ್ಕೃತಿ ಕಂಡ ಮಹತ್ತ್ವದ ಚೇತನ’ ಎಂಬುದನ್ನು ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಈ ಮೌಲಿಕ ಕೃತಿಯ ಮೂಲಕ ಸಾಬೀತುಪಡಿಸಿದ್ದಾರೆ.





Comments