top of page

ಯೋಗದಾ

  • vidyaram2
  • Dec 8, 2023
  • 2 min read

Updated: Apr 19, 2024

ವಿದ್ಯಾ ದತ್ತಾತ್ರಿ ಅವರ ಎರಡನೆಯ ಕಾದಂಬರಿಯ ವಸ್ತುವಿನ ಕುರಿತು ಹಿಂದೊಮ್ಮೆ ಅವರು ಹೇಳಿದಾಗಿನಿಂದ ಆ ಕುರಿತು ಒಂದು ಕುತೂಹಲ ಮೂಡಿತ್ತು. ವಿಶಿಷ್ಟವಾದ ಕಥಾವಸ್ತುವನ್ನು ಹೊಂದಿದ ಕಾದಂಬರಿ ಹೇಗಿರಬಹುದು ಎಂದು ಊಹಿಸಿಕೊಳ್ಳುವಾಗ, ದೈವೀಶಕ್ತಿಯನ್ನು ಸಮರ್ಥಿಸುವ ಸಲುವಾಗಿ ಪವಾಡಗಳಂತಹ ನಂಬಲಸಾಧ್ಯವಾದ ಉದಾಹರಣೆ, ವೈಭವೀಕರಣ

ಇರಬಹುದೇನೋ ಅನ್ನಿಸುತ್ತಿತ್ತು. ಆದರೆ ಕಾದಂಬರಿ ಓದಿದಾಗ ಅದ್ಯಾವುದೂ ಇಲ್ಲದೆ ಕೇವಲ ಭಗವತಿಯ ಪ್ರೀತಿಗಾಗಿ, ಆ ಜಗನ್ನಿಯಾಮಕ ಆದಿಶಕ್ತಿ-ಪರಾಶಕ್ತಿಯಲ್ಲಿರುವ ನಂಬಿಕೆ, ಕೃತಜ್ಞತೆಗಾಗಿ, ಅಧ್ಯಾತ್ಮ ಪಥದಲ್ಲಿ ಮೇಲೇರುವ, ಆತ್ಮೋನ್ನತಿಗಾಗಿ ಅನುಸಂಧಾನ ನಡೆಸುವ ಸಲುವಾಗಿ ನಡೆಯುವ ಉಪಾಸನೆಯ ಕುರಿತು ಇಷ್ಟು ಸಹಜವಾಗಿ, ಸರಳವಾಗಿ ರಚಿಸಿದ ವಿದ್ಯಾ ಅವರ ಮೇಲೆ ಅಭಿಮಾನ ಹೆಚ್ಚಾಯಿತು.

ತಾಯಿ ಜಗನ್ಮಾತೆಯ ಉಪಾಸನಾ ಮಾರ್ಗವಾದ ಶ್ರೀವಿದ್ಯೆಯ ಕುರಿತು ವಿದ್ಯಾ ಅವರು ಬಹಳ ಅಧ್ಯಯನ ನಡೆಸಿ ಇದನ್ನು ರಚಿಸಿದ್ದಾರೆ. ಅವರು ಸೇರಿದ ಕುಟುಂಬದವರು ಶ್ರೀ ವಿದ್ಯಾ ಉಪಾಸಕರಾಗಿರುವುದರಿಂದ ಇನ್ನೂ ಹೆಚ್ಚು ಅಧಿಕೃತವಾಗಿ ಅವರು ಆ ವಿಷಯದ ಕುರಿತು ಹೇಳಬಲ್ಲವರಾಗಿದ್ದಾರೆ.


ಬದಲಾವಣೆ ಜಗದ ನಿಯಮ. ಕಾಲಕ್ಕೆ ತಕ್ಕ ಬದಲಾವಣೆಗಳು, ಮಾರ್ಪಾಡುಗಳನ್ನು ಮಾಡಿಕೊಂಡೂ ನಮ್ಮ ಪರಂಪರೆಯಿಂದ ಬಂದ ಆಚರಣೆಗಳನ್ನು ನಡೆಸಿಕೊಂಡು ಹೋಗಬಹುದು; ತಾಯಿಯನ್ನು ಉಪಾಸಿಸಲು ಪ್ರೀತಿ, ಶ್ರದ್ಧೆ ಮುಖ್ಯವೇ ಹೊರತು ಭಯ, ನಕಾರಾತ್ಮಕ ಚಿಂತನೆಗಳಿಗೆ ಕಾರಣವಿಲ್ಲ ಎಂಬುದನ್ನು ವಿದ್ಯಾ ಈ ಕಾದಂಬರಿಯಲ್ಲಿ ಬರುವ ದೀಕ್ಷಿತರು ಮತ್ತು ದೀಕ್ಷಿತರ್ ಕುಟುಂಬದ ಮೂಲಕ ತೋರಿಸಿದ್ದಾರೆ. ಇಂದಿನ ಜಂಜಾಟದ ಯುಗದಲ್ಲಿ ಎಲ್ಲರಿಗೂ ದೇವರು ಭಾರ ಆಗಿರುವುದು ಸಹಜ; ಆದರೆ ಎಲ್ಲಾ ನನ್ನಿಂದಲೇ, ನನ್ನ ಯಶಸ್ಸು ನನ್ನ ಕೈಯಲ್ಲಿ ಎಂಬ ಧೋರಣೆಯಿಂದಲೇ, ಈ ಯಶಸ್ಸಿಗಾಗಿ ನಾಗಾಲೋಟ ಮಾಡುವ ಧಾವಂತದ ದಾರಿಯಲ್ಲಿ ದೇವರು, ಉಪಾಸನೆ ಎಲ್ಲ ಅಡ್ಡ, ಭಾರ ಎಂಬ ಭಾವದಿಂದಲೇ ಜಗದಲ್ಲಿ ಜಂಜಾಟಗಳು ಹೆಚ್ಚಾಗಿರುವುದು, ನೆಮ್ಮದಿ ಕಡಿಮೆಯಾಗಿರುವುದು - ಎನ್ನುವುದೇ ವಿಪರ್ಯಾಸ. ಶಾಂತಿ ನೆಮ್ಮದಿಯಿಂದ ಆಧ್ಯಾತ್ಮಕ ಉನ್ನತಿ ಸಾಧಿಸಲು ಮಾರ್ಗವಾದ ಪೂಜೆ, ಉಪಾಸನೆಗಳ ಸುತ್ತ ಇಲ್ಲದ ವದಂತಿಗಳನ್ನು ಹಬ್ಬಿಸಿ ಜನರಲ್ಲಿ ಭಯ ಮೂಡಿಸುವ, ತಮಗಾಗುವ ಕಷ್ಟ ಕೋಟಲೆಗಳಿಗೆ ದೇವರನ್ನು, ಉಪಾಸನೆಯನ್ನು ಕಾರಣ ಮಾಡುವ ಕೆಟ್ಟ ಚಾಳಿ ಸಮಾಜದಲ್ಲಿ ಬೇರೂರಿದೆ. ಇಂತಹ ತಪ್ಪು ಕಲ್ಪನೆಗಳನ್ನ ನಿವಾರಿಸಿ ಉಪಾಸನೆಯ ಕುರಿತು ಧನಾತ್ಮಕ ಅನುಭೂತಿಯನ್ನು ನೀಡುವಲ್ಲಿ ವಿದ್ಯಾ ಅವರು ಸಫಲರಾಗಿದ್ದಾರೆ. ಇಂತಹ ಉಪಾಸನೆಗಳು ಕೇವಲ ವಾಮಾಚಾರಕ್ಕಾಗಿ ಅಲ್ಲ, ಲೌಕಿಕದಲ್ಲಿ ತೊಡಗಿರುವ ಅತ್ಯಂತ ಸರಳ ಸಹಜವಾದ ಕೌಟುಂಬಿಕರಿಗೂ ಆತ್ಮೋನ್ನತಿಗಾಗಿ ಇರುವ, ಹಿಂದಿನಿಂದ ನಡೆಸಿಕೊಂಡು ಬಂದ ಟ್ರೈಡ್ ಅಂಡ್ ಟೆಸ್ಟೆಡ್ ತಂತ್ರಗಳಿವು ಎಂಬುದನ್ನು ವಿದ್ಯಾ ಬಹಳ ಸೂಕ್ತವಾದ ವಿವರಣೆ, ವಿಶ್ಲೇಷಣೆಗಳ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರೆ.


ಆಧ್ಯಾತ್ಮಿಕ, ಕೌಟುಂಬಿಕ, ಸಾಮಾಜಿಕ ನೆಲೆಗಳಲ್ಲಿ ಕಥಾವಸ್ತುವನ್ನು ಬಹಳ ಸಮಂಜಸವಾಗಿ ಸರಿದೂಗಿಸಿ, ಯಾವುದೇ ಆವೇಶ, ಧೋರಣೆ ಇಲ್ಲದೆ ವಿದ್ಯಾ ಅವರು ಪ್ರಬುದ್ಧವಾಗಿ, ನೈಜವಾಗಿ ಹೆಣೆದ ಕಾದಂಬರಿ ಓದುವಾಗಲೇ ಮನಸ್ಸಿಗೆ ಒಂದು ಅವ್ಯಕ್ತ ಶಾಂತಿ, ಆನಂದವನ್ನು ನೀಡುತ್ತದೆ. ಪರಂಪರಾಗತವಾಗಿ ಬಂದ ನಮ್ಮ ಸಂಪ್ರದಾಯ, ಆಚರಣೆಗಳು ನಮಗೆ ಕಲಿಸುವ ಮೌಲ್ಯ, ಸಂಸ್ಕಾರಗಳ ಕುರಿತು ಮನ ತುಂಬಿ ಬರುತ್ತದೆ. ದೀಕ್ಷಿತರ ಕುಟುಂಬದವರು ಮನೆಯಲ್ಲಿ ಆಡುವ ಹವ್ಯಕ ಭಾಷೆಯ ಸಂಭಾಷಣೆಗಳು ಕಾದಂಬರಿಗೆ ಆಪ್ತತೆ, ನೈಜತೆ ತಂದು ಕೊಟ್ಟಿವೆ. ಕಾದಂಬರಿಯ ಪಾತ್ರಗಳನ್ನೂ ಬಹಳ ಸಮಂಜಸ ಎನಿಸುವ ಹಾಗೆ ರಚಿಸಿದ್ದಾರೆ. ಸುವರ್ಣ, ಭಾನುಮತಿ ಅವರ ವ್ಯಕ್ತಿತ್ವ, ಆಲೋಚನೆಗಳು, ಅವರ ಮಕ್ಕಳ ಆಲೋಚನೆಗಳು ಎಲ್ಲವೂ ಇಂದಿನ ಕಾಲದಲ್ಲಿ ಸಹಜವಾಗಿ ನಾವು ಕಾಣುವಂತೆಯೇ ಇವೆ.


ನಮ್ಮ ಪರಂಪರೆಯಲ್ಲಿರುವ ಅತ್ಯಂತ ಉನ್ನತ ಆಶಯವಿರುವ ಆಚರಣೆಯೊಂದನ್ನು ಕಾದಂಬರಿಯಲ್ಲಿ ಓದುಗರಿಗೆ ಪರಿಚಯಿಸಿದ ವಿದ್ಯಾ ಅವರಿಗೆ ಅಭಿನಂದನೆಗಳು.


Comments

Rated 0 out of 5 stars.
No ratings yet

Add a rating
  • alt.text.label.Facebook
  • alt.text.label.LinkedIn
bottom of page